13 August 2022

ಮನೆ ಮನೆಯಲ್ಲಿ ತಿರಂಗಾ ...


 



ಮನೆ ಮನೆಯಲ್ಲಿ ತಿರಂಗಾ 


ನಮ್ಮ ರಾಷ್ಟ್ರ ಧ್ವಜ , ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಲಾಂಛನಗಳನ್ನು ಗೌರವಿಸುವುದು ಪ್ರತಿಯೊಂದು ನಾಗರೀಕನ  ಮೂಲಭೂತ ಕರ್ತವ್ಯವಾಗಿದೆ.ಇತ್ತೀಚಿನ ದಿನಗಳಲ್ಲಿ ಭಾರತೀಯರಲ್ಲಿ ರಾಷ್ಟ್ರಭಕ್ತಿ ಹೆಚ್ಚು ಜಾಗೃತಗೊಂಡಿರುವದು ಕಂಡುಬರುತ್ತಿದೆ. 


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಪರ್ವಕಾಲದಲ್ಲಿ ಭಾರತ ಸರ್ಕಾರವು ಧ್ವಜ ಸಂಹಿತೆಗೆ ಕೆಲ ತಿದ್ದುಪಡಿ ಮಾಡಿ ಮನೆ  ಮನೆಯಲ್ಲೂ  ಧ್ವಜಾರೋಹಣ ಮಾಡುವ ಅವಕಾಶವನ್ನು ನೀಡಿದೆ.ಸ್ವಾತಂತ್ರ್ಯ ಪಡೆದ ಎಪ್ಪತ್ತೈದು ವರ್ಷಗಳ ಸವಿನೆನಪಿಗಾಗಿ ಮಾಡುವ ಈ ಉಪಕ್ರಮವು ಸರ್ವ ನಾಗರೀಕರಿಂದ ಸ್ವಾಗತಿಸಲ್ಪಟ್ಟು  ದಿನಾಂಕ13 ರ ಆಗಸ್ಟ್ ನ  ಮನೆ ಮನೆಯಲ್ಲೂ  ನಮ್ಮ ತಿರಂಗ ಹಾರಾಡುತ್ತಿದೆ  ಈ ಹಿನ್ನೆಲೆಯಲ್ಲಿ ತಿರಂಗಾ ಹಾರಿಸುವ ಕೆಲ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಚಿಸುವೆ.


ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವದಂದು ತ್ರಿವರ್ಣ ಧ್ವಜ ಹಾರಿಸಲಾಗುತ್ತದೆಯಾದರೂ ಈ ಎರಡೂ ದಿನಗಳ ಧ್ವಜಾರೋಹಣದ ಮಧ್ಯೆ ವ್ಯತ್ಯಾಸವಿದೆ.

ಭಾರತಕ್ಕೆ 1947ರ ಆ.15ರಂದು ಸ್ವಾತಂತ್ರ್ಯ ಸಿಕ್ಕ ನೆನಪಿಗಾಗಿ ಪ್ರತಿ ಆ.15ಕ್ಕೆ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಸಂವಿಧಾನ ರಚನೆಯಾಗಿರಲಿಲ್ಲ ಹಾಗೂ ರಾಷ್ಟ್ರಪತಿ ಚುನಾಯಿತರಾಗಿರಲಿಲ್ಲ. ಆ ಹಿನ್ನೆಲೆ ಸ್ವಾತಂತ್ರ್ಯ ದಿನಕ್ಕೆ ಪ್ರಧಾನಿ ಅವರೇ ಧ್ವಜಾರೋಹಣ ಮಾಡುತ್ತಾರೆ. ಹಾಗೆಯೇ 1950ರ ಜ.26ರಂದು ಸಂವಿಧಾನ ರಚನೆಯಾದ ನೆನಪಿಗಾಗಿ ನಡೆಸಲಾಗುವ ಗಣರಾಜ್ಯೋತ್ಸವಕ್ಕೆ ರಾಷ್ಟ್ರಪತಿಗಳೇ ಧ್ವಜಾರೋಹಣ ನಡೆಸುತ್ತಾರೆ.

ಸ್ವಾತಂತ್ರೋತ್ಸವದಂದು ಧ್ವಜವನ್ನು ಕೆಳಗೇ ಕಟ್ಟಿರಲಾಗುತ್ತದೆ. ಹಾಗೆಯೇ ಪ್ರಧಾನಿ ಅವರು ಅದನ್ನು ನಿಧಾನವಾಗಿ ಮೇಲಕ್ಕೇರಿಸಿ, ಧ್ವಜ ಬಿಚ್ಚುತ್ತಾರೆ. ಆದರೆ ಗಣರಾಜ್ಯೋತ್ಸವದಂದು ಧ್ವಜವನ್ನು ಮೊದಲಿಗೇ ಮೇಲೆಯೇ ಕಟ್ಟಲಾಗಿರುತ್ತದೆ. ಅದನ್ನು ರಾಷ್ಟ್ರಪತಿ ಬಿಚ್ಚುತ್ತಾರಷ್ಟೇ. ಇಲ್ಲಿ ಧ್ವಜವನ್ನು ಮೇಲೇರಿಸುವ ಪ್ರಶ್ನೆ ಇರುವುದಿಲ್ಲ. ಇಂಗ್ಲಿಷ್ನಲ್ಲಿ ಸ್ವಾತಂತ್ರೋತ್ಸವದ ಧ್ವಜಾರೋಹಣವು 'Flag Hoisting' ಎಂದು ಗುರುತಿಸಿಕೊಂಡರೆ, ಗಣರಾಜ್ಯೋತ್ಸವದ ಧ್ವಜಾರೋಹಣವು 'Flag Unfurling' ಎಂದು ಗುರುತಿಸಿಕೊಳ್ಳುತ್ತದೆ.

ಸ್ವಾತಂತ್ರೋತ್ಸವದಂದು ಧ್ವಜವನ್ನು ನವದೆಹಲಿಯ ಕೆಂಪು ಕೋಟೆಯಲ್ಲಿ ಹಾರಿಸಲಾಗುತ್ತದೆ. ಗಣರಾಜ್ಯೋತ್ಸವದಂದು ರಾಜಪಥದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಜರುಗುತ್ತದೆ.

ಈಗ ಧ್ವಜವನ್ನು ನಾವೇ ನಮ್ಮ ಮನೆಗಳಲ್ಲಿ ಹಾರಿಸುವ ಅವಕಾಶವನ್ನು ನೀಡಿದ್ದಾರೆ .


"ಹರ್ ಘರ್ ತಿರಂಗಾ" ಎಂಬ ಅಭಿಯಾನದಲ್ಲಿ

2022ಅಗಷ್ಟ 13ರಿಂದ 15ವರೆಗೆ

ಪ್ರತಿಯೊಬ್ಬರೂ ತಮ್ಮ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ  ಭಾರತದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸೋಣ

ತ್ರಿವರ್ಣದ ಕಂಪನ್ನು ಹಂಚೋಣ.

ತ್ರಿವರ್ಣ ಧ್ವಜಾರೋಹಣ ಮಾಡಲು ಪಾಲಿಸಬೇಕಾದ ನಿಯಮಗಳನ್ನು ಅನುಸರಿಸಿ ದೇಶಪ್ರೇಮ ಮೆರೆಯೋಣ ಮತ್ತು ತಾಯಿ ಭಾರತಿಗೆ ನಮಿಸೋಣ.


ನಮ್ಮ ಮನೆಯ ಮೇಲೆ  ಅಗಷ್ಟ್  13 ರ  ಶನಿವಾರ ಮುಂಜಾನೆ 7.00 ಘಂಟೆಗೆ ಧ್ವಜಾರೋಹಣ ಮಾಡಿ ಅಗಷ್ಟ 15 ಸೋಮವಾರ ಸಂಜೆ 5.00 ಘಂಟೆಗೆ ಧ್ವಜವನ್ನು ಇಳಸೋಣ.

ನಮ್ಮ ಮನೆಯ ಮೇಲಿನ ಅತೀ ಎತ್ತರದ ಜಾಗದಲ್ಲಿ ಧ್ವಜರೋಹಣ  ಮಾಡೋಣ.

ಧ್ವಜ ಸ್ಥಂಭ & ಧ್ವಜ ನೇರವಾಗಿರುವಂತೆ ನೋಡಿಕೊಳ್ಳೋಣ. ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ವಾಲಿರದಂತೆ ನೋಡಿಕೊಳ್ಳೋಣ.

ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಾಗೂ ಸಮಾನವಾಗಿ ಹಾಗೂ ಧ್ವಜದ ಬಲಗಡೆ ಯಾವುದೇ ಧ್ವಜ ಇರದಂತೆ ನೋಡಿಕೊಳ್ಳೋಣ.

ಗ‍ಲೀಜಾದ ಮತ್ತು ಹರಿದ ಧ್ವಜವನ್ನು ಹಾರಿಸದಿರೋಣ .

ಧ್ವಜವನ್ನು ಆಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೆ ಬಳಸದಿರೋಣ.

ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರದಂತೆ ನೋಡಿಕೊಳ್ಳೋಣ  .ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸದಿರೋಣ .  ಧ್ವಜವನ್ನು ನೆಲಕ್ಕೆ ತಾಕಿಸದಿರೋಣ .ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜವನ್ನು ಬಂಡಲ್ ರೀತಿ ಬಳಸದಿರೋಣ   . ಶ್ವೇತ ವರ್ಣದ ಮಧ್ಯ 24 ಗೆರೆಗಳ ನೀಲಿ ಬಣ್ಣದ ಅಶೋಕ ಚಕ್ರವಿರುವ ಧ್ವಜವನ್ನೇ ಹಾರಿಸೋಣ .

ಧ್ವಜದ ಮೇಲೆ   ಯಾವುದೇ   ಬರಹ ಇರದಂತೆ ನೋಡಿಕೊಳ್ಳೋಣ . ಹಾಗೂ ಧ್ವಜವನ್ನು ಜಾಹೀರಾತಿಗೆ ಬಳಸದಿರೋಣ.

ಧ್ವಜವನ್ನು ಹಾರಿಸುವ ಕಂಬ/ಸ್ತಂಭದ ಮೇಲೆ ಜಾಹಿರಾತು ಇರದಂತೆ ನೋಡಿಕೊಳ್ಳೋಣ.

ಅಸುರಕ್ಷಿತ ಅಥವಾ ಧ್ವಜಕ್ಕೆ ಹಾನಿಯುಂಟಾಗಬಹುದಾದ ಸ್ಥಳದಲ್ಲಿ ಧ್ವಜಾರೋಹಣ ಮಾಡದಿರೋಣ. 

ತ್ರಿವರ್ಣ ಧ್ವಜಕ್ಕೆ ತನ್ನದೇ ಆದ ಗೌರವ ಘನತೆ ಇರುತ್ತದೆ. ಅಗಷ್ಟ್ 15ರಂದು ಸಂಜೆ 5.00 ಘಂಟೆಗೆ ಧ್ವಜ ಇಳಿಸಿದ ನಂತರ ಅಶೋಕ ಚಕ್ರ ಮೇಲೆ ಬರುವಂತೆ ಧ್ವಜವನ್ನು ಮಡಿಕೆ ಮಾಡಿ ಸುರಕ್ಷಿತ ಜಾಗದಲ್ಲ ಇಡೋಣ.


ನಮ್ಮ ಧ್ವಜ ನಮ್ಮ ಹೆಮ್ಮೆ. ಮನೆ ಮನೆಯಲ್ಲಿ ನಮ್ಮ ದ್ವಜ 



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು



No comments: