16 August 2022

ಎಲೆ ಮರೆಯ ಅಲರು ...


 


ವಿಮರ್ಶೆ ೫೧

ಎಲೆ ಮರೆಯ ಅಲರು.


ಬೆಳಗೆರೆ ಕೃಷ್ಣಶಾಸ್ತ್ರಿಗಳ ಯೇಗ್ದಾಗೆಲ್ಲಾ ಐತೆ ಪುಸ್ತಕ ಓದಿದ ಮೇಲೆ ಅವರ ಇತರ ಕೃತಿಗಳನ್ನು ಓದುವ ಹಂಬಲವಾಯಿತು.ಅದರಂತೆ ಮೊನ್ನೆ ಎಲೆ ಮರೆಯ ಅಲರು ಎಂಬ ಅವರ ಕೃತಿಯನ್ನು ಓದಿದೆ.

ಓದುತ್ತಾ ಬೆಂಗಳೂರು, ತಳಕು, ಆಂದ್ರ ಹೆಗ್ಗೆರೆ ,ಕಾಪರಹಳ್ಳಿ ,ಬೆಳಗೆರೆ ಹೀಗೆ ನಾನಾ ಊರುಗಳ ಸುತ್ತಿದ ಹಾಗೂ ನಾನಾ ವ್ಯಕ್ತಿಗಳ ವ್ಯಕ್ತಿತ್ವದ ಪರಿಚಯವಾಯಿತು.ಕೃಷ್ಣ ಶಾಸ್ತ್ರಿಗಳ ನಿರೂಪಣೆ ಮತ್ತು ಬರವಣಿಗೆಯ ಶೈಲಿ ಓದುಗರನ್ನು ಸೆಳೆಯುತ್ತದೆ. ಒಂದೇ ಸಿಟ್ಟಿಂಗ್ ನಲ್ಲಿ ಕೂತು ಓದುವಂತೆ ಮಾಡುತ್ತದೆ.

ಸ್ವಿಮ್ಮಿಂಗ್ ನಾರಾಯಣ ರವರು ಅವರಿಗೆ ಬೆಂಗಳೂರಿನಲ್ಲಿ ಆಶ್ರಯದಾತರಾಗಿ ಅನ್ನದಾತರಾಗಿ ಸಹಕಾರ ನೀಡಿದ್ದನ್ನು ತಮ್ಮ ಅಗ್ರ ಲೇಖನದಲ್ಲಿ ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತಾ ನಾರಾಯಣ ರವರ ವ್ಯಕ್ತಿತ್ವದ ಪರಿಚಯ ಮಾಡಿದ್ದಾರೆ.

ನಾವೂ ನಾಟಕವಾಡಿದ್ದು ಎಂಬ ಅಧ್ಯಾಯದಲ್ಲಿ ಹುಡುಗಾಟಿಕೆಗೆಂದು ಆಡಿದ ಮಾತು ನಿಜವಾಗಿ ಶಾಲೆಯ ಶಿಕ್ಷಕರ ಮತ್ತು ಹಿರಿಯರ ಬೆಂಬಲದಿಂದ ಯಶಸ್ವಿಯಾಗಿ ಅದರಿಂದ ಬಂದ ಹಣವನ್ನು ವಿದ್ಯಾರ್ಥಿಗಳ ಮಧ್ಯಾಹ್ನದ ಉಪಾಹಾರಕ್ಕೆ ಬಳಸುವ ಅವರ ಮುಂದಾಲೋಚನೆ ಮತ್ತು ಸಹಾಯ ಮಾಡುವ ಗುಣಕ್ಕೆ ಹಿಡಿದ ಕನ್ನಡಿ ಎನ್ನಬಹುದು ಇದು ಮುಂದೆ ಬೆಳಗೆರೆಯಲ್ಲಿ ಶಾರದಾ ಶಾಲೆ ಆರಂಭದಿಂದ ಹಿಡಿದು  ಇತರ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರಕಟವಾಗಿದ್ದನ್ನು ಕಾಣಬಹುದು.

ಈ ಪುಸ್ತಕದಲ್ಲಿ ಹೆಗ್ಗರೆಯಲ್ಲಿ ಅವರು ಶಿಕ್ಷಕರಾಗಿ ಕಾರ್ಯನಿರ್ವಹಿಸುವ ಸಂಧರ್ಭದಲ್ಲಿ ದಾನಿಗಳಿಂದ ಹಣ ಸಂಗ್ರಹಿಸಿ ಶಾಲಾ ಕೊಠಡಿಗಳು ಮತ್ತು ರಂಗಮಂದಿರ ನಿರ್ಮಾಣ ಮಾಡಿದ ವಿವರಗಳು ಮತ್ತು ಕಬ್ಬಿಣದ ಅಂಗಡಿಯ ಮುಸ್ಲಿಂ ಮಾಲಿಕನ ನಡುವಿನ ಸಂಭಾಷಣೆ ಮತ್ತು ಸಂಬಂಧ ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಸರ್ಕಾರದ ಹಣದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್  ಹೊಡೆಯೋಣ ಎಂದು ಯೋಚಿಸುವ ಕಂಟ್ರಾಕ್ಟರ್ ಮತ್ತು ಅಧಿಕಾರಿಗಳು ನಮ್ಮ ಕೃಷ್ಣ ಶಾಸ್ತ್ರಿಗಳ ಆದರ್ಶ ರೂಢಿಸಿಕೊಂಡು ಸೇವಾ ಮನೋಭಾವ ಹೊಂದಬೇಕಿದೆ.ಅದು ಅಸಾಧ್ಯ ಕನಸು ಎಂಬುದು ಸಹ ನನಗೆ ಮನವರಿಕೆ ಆಗಿದೆ.ಹೆಗ್ಗೆರೆಯ ನಮ್ಮ ಬಂಧುಗಳ ಮನೆಗೆ ಹೋದಾಗ ಈಗಲೂ ಗಟ್ಟಿಮುಟ್ಟಾಗಿ ನಿಂತ ಶಾಲಾಕೊಠಡಿಗಳು ಮತ್ತು ರಂಗಮಂದಿರ ನೋಡಿ ಮನದಲ್ಲೇ ಕೃಷ್ಣ ಶಾಸ್ತ್ರಿಗಳಿಗೆ ಒಂದು ನಮನ ಸಲ್ಲಿಸುವೆ.   

  ಟಿ ಎಸ್  ವೆಂಕಣ್ಣಯ್ಯನವರ ಆದರ್ಶ ಮತ್ತು ನಮ್ಮ ಒಡೆಯರ ಉನ್ನತವಾದ ಆಡಳಿತ ಚಿಂತನೆ ನಮಗೆ ಈ ಪುಸ್ತಕದಲ್ಲಿ ಶಾಸ್ತ್ರಿರವರು ಕಟ್ಟಿಕೊಟ್ಟಿದ್ದಾರೆ.   ವೆಂಕಣ್ಣಯ್ಯನವರು ಮಹಾರಾಜರ ಮಗನ ಕಲಿಕೆ ಗಣನೀಯವಾಗಿ ಇಲ್ಲದ ಕಾರಣ  ಅನುತ್ತೀರ್ಣ ಮಾಡಿರುತ್ತಾರೆ.   ಆಗ ಅರಮನೆಗೆ ವೆಂಕಣ್ಣಯ್ಯನವರ  ಕರೆಸಿದ ಮಹಾರಾಜರು ಮನಸ್ಸು ಮಾಡಿದ್ದರೆ ಮಗನನ್ನು ಪಾಸು ಮಾಡಲು ಹೇಳಬಹುದಾಗಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಮನೆ ಪಾಠ ಮಾಡಲು ವೆಂಕಣ್ಣಯ್ಯನವರ ಕೇಳಿದರು ಅದಕ್ಕೆ ಒಪ್ಪದೇ ಮನೆ ಪಾಠ ಮಾಡಲು ಅವರ ಶಿಷ್ಯರಾದ ಕುವೆಂಪುರವರ ಗೊತ್ತು ಮಾಡುವ ಭರವಸೆ ನೀಡಿದರು.ಕೊನೆಗೆ ಬಿ ಎಂ ಶ್ರೀ ರವರು ಮನೆ ಪಾಠ ಮಾಡುವ ಮೂಲಕ ಯುವರಾಜರು ಪಾಸಾದರು . ಈ ಘಟನೆಯನ್ನು ಓದಿದ   ಶಿಕ್ಷಕನಾದ ನನಗೆ  ಶಿಕ್ಷಣದ ವ್ಯಾಪರೀಕರಣದ ಈ  ದಿನಗಳಲ್ಲಿ ವೆಂಕಣ್ಣಯ್ಯನವರಂತಹ ಅಧ್ಯಾಪಕರು ಮತ್ತು ಮಹಾರಾಜರಂತಹ ಆಡಳಿತಗಾರರ ಅವಶ್ಯಕತೆ ತೀರಾ ಇದೆ ಎಂದೆನಿಸಿತು.

ಮದ್ದನಕುಂಟೆಯಲ್ಲಿ ಜೈಮಿನಿ ಭಾರತ ಓದಿದ ಘಟನೆಯನ್ನು ನೆನೆಯುತ್ತಾ ಇವರು ಜೈಮಿನಿ ಭಾರತವನ್ನು ತಪ್ಪಾಗಿ ಓದಿದಾಗ  ,ಇವರಿಗೆ  ಮುಜಗರವಾಗದಂತೆ ಆ ಹಳ್ಳಿಯ ಅನಕ್ಷರಸ್ಥರು ತಿದ್ದಿದ ಪರಿಯನ್ನು ಶಾಸ್ತ್ರೀಯವರು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ.


ಹೀಗೆ ಇಡೀ ಪುಸ್ತಕದಲ್ಲಿ ಎಲೆ ಮರೆಯ ಅಲರುಗಳನ್ನು ನಮಗೆ ತೋರಿಸುವ ಕಾರ್ಯವನ್ನು ಬೆಳಗೆರೆ ಕೃಷ್ಣಶಾಸ್ತ್ರಿಗಳು ಮಾಡಿದ್ದಾರೆ.ಈ ಎಲ್ಲಾ ಅಲರುಗಳು ನಮ್ಮಲ್ಲಿ ಸುಪ್ತವಾಗಿರುವ ಒಳ್ಳೆಯ ಗುಣಗಳನ್ನು ಜಾಗೃತಗೊಳಿಸುವುದರಲ್ಲಿ ಸಂದೇಹವಿಲ್ಲ. ನೀವೂ ಒಮ್ಮೆ ಎಲೆ ಮರೆಯ ಅಲರಿನ ದರ್ಶನ ಮಾಡಲು ಮನವಿ ಮಾಡುವೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: