ವಿಮರ್ಶೆ ೪೮
ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು .
ಆತ್ಮೀಯರು ಪ್ರಕಾಶಕರು ಹಾಗೂ ಲೇಖಕರಾದ ಎಂ ವಿ ಶಂಕರಾನಂದ ರವರು ಬರೆದ ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು ಎಂಬ ಪುಸ್ತಕವನ್ನು ನಾನು ಓದಲು ಕಾರಣ ನಾನೂ ಒಬ್ಬ ಹವ್ಯಾಸಿ ಕಲಾವಿದ .ಈ ಪುಸ್ತಕದಲ್ಲಿ ಲೇಖಕರು ಕರ್ನಾಟಕದ ರಂಗಭೂಮಿಯ ಸಾಧಕರಲ್ಲಿ ಪ್ರಮುಖವಾದ 64 ನಕ್ಷತ್ರಗಳ ಬಗ್ಗೆ ಪರಿಚಯಿಸಿದ್ದಾರೆ.
ಜೊತೆಯಲ್ಲಿ ಕರ್ನಾಟಕದ ರಂಗಭೂಮಿಯ ಬಗ್ಗೆ ವಿವರಣೆಯನ್ನು ಸಹ ನೀಡಿರುವುದು ಪ್ರಶಂಸನಾರ್ಹ.
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೋಡ್ಲಾಪುರದಲ್ಲಿನ ಒಂದು ಪುರೋಹಿತ ಕುಟುಂಬದಲ್ಲಿ,ಜನಿಸಿದ ಶಂಕರಾನಂದ ರವರು ಹುಟ್ಟೂರಿನಲ್ಲೇ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ವಿದ್ಯಾಭ್ಯಾಸ ಮುಗಿಸಿ ,ಮುಂದೆ ಮಧುಗಿರಿಯಲ್ಲಿ ಪಿಯುಸಿ, ಪದವಿ ವ್ಯಾಸಂಗ ಮಾಡಿ ಮೈಸೂರಿನಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆ ಸಪ್ನ ಬುಕ್ಹೌಸಿನಲ್ಲಿ ಸಂಪಾದಕರಾಗಿ, ಚೆನ್ನೈನ ಪ್ರಕಾಶನ ಸಂಸ್ಥೆ ಸುರಾ ಬುಕ್ಸ್ (ಪ್ರೈ) ಲಿ.ನಲ್ಲಿ ವ್ಯವಸ್ಥಾಪಕ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡದಲ್ಲಿ ಐವತ್ತಕ್ಕೂ ಹೆಚ್ಚಿನ ಸ್ವತಂತ್ರ, ಅನುವಾದ, ಸಂಪಾದನಾ ಕೃತಿಗಳ ರಚನೆ ಮಾಡಿರುವ ಇವರಿಗೆ
ಮಧುಗಿರಿ, ಗೌರಿಬಿದನೂರು ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ, ಚಿಕ್ಕಬಳ್ಳಾಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಓಂಶಕ್ತಿ ಸಾಹಿತ್ಯ ಪ್ರಶಸ್ತಿ ಮತ್ತು ಹೇಮಂತ ಸಾಹಿತ್ಯ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ . ಇವರು ಹಲವು ರಾಜ್ಯಮಟ್ಟದ, ಪ್ರಾದೇಶಿಕ, ಜಿಲ್ಲಾ ಪತ್ರಿಕೆಗಳ ಉಪ ಸಂಪಾದಕರೂ, ಅಂಕಣಕಾರರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಆನಂದ್ ಪಬ್ಲಿಕೇಷನ್ಸ್ ಸಂಸ್ಥೆ ಆರಂಭಿಸಿ ಹಲವಾರು ಉದಯೋನ್ಮುಖ ಕವಿ, ಲೇಖಕರ ಕೃತಿಗಳನ್ನು ಹೊರತರುವ ಜೊತೆ ಜೊತೆಯಲ್ಲಿ ಅವರೂ ಸಹ ಹಲವಾರು ಕೃತಿಗಳನ್ನು ರಚನೆ ಮಾಡುತ್ತಾ ಕನ್ನಡ ತಾಯಿಗೆ ಸೇವೆ ಸಲ್ಲಿಸುತ್ತಿದ್ದಾರೆ .
ರಂಗಭೂಮಿ ಎಂದರೆ, ಒಂದು ಪ್ರದೇಶದ, ಜನಸಮುದಾಯದ ಬದುಕಿನ ಸಾಂಸ್ಕೃತಿಕ, ರಾಜಕೀಯ, ಇತಿಹಾಸದೊಂದಿಗೆ, ಸಾಹಿತ್ಯ ಕೃತಿಯಾಗಿ, ರಂಗ ಮಂಚದಲ್ಲಿ ನಾಟಕವಾಗಿ, ರೂಪಕವಾಗಿ ಜನಮನಕ್ಕೆ ಹತ್ತಿರವಾದ ಕಲಾಕ್ಷೇತ್ರ. ಜಗತ್ತಿನಾದ್ಯಂತ ಆಯಾ ಜನಾಂಗ, ದೇಶ, ಪ್ರದೇಶಗಳ ರಂಗಭೂಮಿ ರೂಪು ಗೊಂಡುದುದನ್ನು ನಾವು ಕಾಣುತ್ತೇವೆ.
ಕನ್ನಡದಲ್ಲಿ ಜನಪದ ರಂಗಭೂಮಿ, ವೃತ್ತಿ ರಂಗಭೂಮಿ ಮತ್ತು ಹವ್ಯಾಸಿ ರಂಗಭೂಮಿಗಳಾಗಿ ವಿಂಗಡಿಸಬಹುದು. ಕನ್ನಡ ಜನಪದ ರಂಗಭೂಮಿಯಿಂದ ಪ್ರೇರಣೆ ಪಡೆದ ಮರಾಠಿಯ ಸೀತಾಸ್ವಯಂವರ ನಾಟಕ ಮಹಾರಾಷ್ಟ್ರದ ಉದ್ದಗಲಕ್ಕೂ ಪ್ರದರ್ಶನ ಕಂಡು ಮುಂಬಯಿ ಪ್ರಾಂತ್ಯಕ್ಕೊಳಪಟ್ಟ ಉತ್ತರ ಕರ್ನಾಟಕದ ಪಟ್ಟಣಗಳಿಗೂ ಲಗ್ಗೆ ಇಟ್ಟು, ಕನ್ನಡ ನೆಲದಲ್ಲಿ ಮರಾಠಿ ಮತ್ತು ಪಾರ್ಸಿ ಕಂಪನಿಗಳದ್ದೆ ನಾಟಕದಾಟ, ನಾಟಕದೂಟ, ಕಾರುಬಾರುಗಳಾದಾಗ ಕನ್ನಡಿಗರ ಸ್ವಾಭಿಮಾನ ಕೆಣಕುವಂತಾಯಿತು. ಈ ವೇಳೆಗೆ ಶಾಂತ ಕವಿಗಳೆಂದು ಹೆಸರಾದ ಸಕ್ಕರಿ ಬಾಳಾಚಾರ್ಯರು ಮರಾಠಿ ನಾಟಕಕ್ಕೆ ಪ್ರತಿಯಾಗಿ ಕನ್ನಡ ನಾಟಕಗಳನ್ನು ರಚಿಸುವಲ್ಲಿ ಕಾರಣರಾದರು. ಹೀಗೆ ಸಮಗ್ರ ಕರ್ನಾಟಕ ವೃತ್ತಿ ರಂಗ ಭೂಮಿ ಇತಿಹಾಸದಲ್ಲಿ ಗದಗಿಗೆ ಪ್ರಥಮ ಕೀರ್ತಿ ಸಲ್ಲುವಂತಾಯಿತು.
1856ನೇ ಜನವರಿ 15ರಂದು ಜನಿಸಿದ ಸಕ್ಕರಿ ಬಾಳಾಚಾರ್ಯರು ಗದಗಿನ ಶ್ರೀಮಂತ ಉಮಚಗಿ ಲಚಪ್ಪ ನಾಯಕ ಎಂಬುವರ ಪ್ರೋತ್ಸಾಹದಿಂದ ಹಲವಾರು ಯುವಕರ ನೆರವಿನಿಂದ 1872ರಲ್ಲಿ ವೀರನಾರಾಯಣ ಪ್ರಸಾದಿತ ನಾಟಕ ಮಂಡಳಿ' ಸ್ಥಾಪಿಸಿದರು. ಇದು ಉತ್ತರ ಕರ್ನಾಟಕದ ಪ್ರಥಮ ವೃತ್ತಿ ನಾಟಕ ಸಂಸ್ಥೆ.
ಮುಂದೆಯೂ ಪಾರಸಿ ಕಂಪನಿಗಳ ಪಾರಮ್ಯ ಮೈಸೂರು ಪ್ರಾಂತ್ಯದಲ್ಲಿ ಮುಂದುವರೆದಾಗ, ಮೈಸೂರಿನ ಕೆಲವು ಮಂದಿ ಕಲಾವಿಲಾಸಿಗಳು ಸುಮಾರು 1879-80ರಲ್ಲಿ ಸಿ.ಆರ್.ರಘುನಾಥರಾಯರ ನೇತೃತ್ವದಲ್ಲಿ ಒಂದು ಕನ್ನಡ ನಾಟಕ ಸಂಘವನ್ನು ಆರಂಭಿಸಿ 'ಶ್ರೀ ಶಾಕುಂತಲ ಕರ್ನಾಟಕ ನಾಟಕಸಭಾ' ಎಂದು ಹೆಸರಿಟ್ಟು ಕಾರ್ಯನಿರತರಾದರು. ಮುಂದೆ ಮೈಸೂರು ಒಡೆಯರಾದ ಚಾಮರಾಜೇಂದ್ರರ ನೆರವಿನೊಂದಿಗೆ 1880ರಲ್ಲಿ 'ಶ್ರೀ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ' ಎಂಬ ಹೆಸರಿನಿಂದ ನಾಟಕ ಮಂಡಳಿಯೊಂದನ್ನು ಸ್ಥಾಪಿಸಿ ಕನ್ನಡ ರಂಗಭೂಮಿಗೆ ಭದ್ರ ಬುನಾದಿ ಹಾಕಿ ಸತ್ ಸಂಪ್ರದಾಯವೊಂದನ್ನು ನಿರ್ದಿಷ್ಟವಾಗಿ ರೂಪಿಸಿದರು.
1882ರಲ್ಲಿ ಅರಮನೆಗೆ ಸೇರಿದ ವಿದ್ಯಾರ್ಥಿಗಳಿಂದ 'ಮೈಸೂರ್ ರಾಯಲ್ ಸ್ಕೂಲ್ ಡ್ರಾಮ್ಯಟಿಕ್ ಕಂಪನಿ' ಸ್ಥಾಪನೆಯಾಯಿತು. ಮುಂದೆ ಪೆರಿಸ್ವಾಮಿ ಅಯ್ಯಂಗಾರ್ -ಚಿನ್ನಸ್ವಾಮೀ ಅಯ್ಯಂಗಾರ್ ಸಹೋದರರ 'ರಸಿಕ ಮನೋಲ್ಲಾಸಿನಿ ನಾಟಕ ಕಂಪನಿ' ಜನ್ಮ ತಾಳಿತು. ನಂತರ ಚಾಮರಾಜೇಂದ್ರ ಕರ್ನಾಟಕ ನಾಟಕ ಸಭಾ ನಿಂತ ಮೇಲೆ ಅದರಲ್ಲಿನ ಕೆಲವರು ಸೇರಿ 1919ರಲ್ಲಿ 'ಶ್ರೀಚಾಮುಂಡೇಶ್ವರಿ ಕರ್ನಾಟಕ ನಾಟಕ ಸಭಾ' ಎಂದು ಎನ್. ಸುಬ್ಬಣ್ಣನವರ ನೇತೃತ್ವದಲ್ಲಿ ಹೊಸ ತಂಡ ರಚನೆಯಾಗಿ ಮುನ್ನಡೆಯಿತು. ಇದರಲ್ಲಿ ಮುಂದೆ ಆರ್. ನಾಗೇಂದ್ರರಾವ್, ಮಳವಳ್ಳಿ ಸುಂದರಮ್ಮನವರು ಬೇರೆ ಬೇರೆ ಕಾಲದಲ್ಲಿ ಆಡಳಿತ ಹೊಣೆ ಹೊತ್ತರು.
ನಾಟ್ಯ ಶಿರೋಮಣಿ ವರದಾಚಾರ್ಯರು 'ರತ್ನಾವಳಿ ನಾಟಕ ಸಭಾ'ವನ್ನು 1902ರಲ್ಲಿ ಸ್ಥಾಪಿಸಿದರು. ಮೈಸೂರು ರಂಗಭೂಮಿಯಲ್ಲಿ ಮೊಟ್ಟಮೊದಲು ವಿದ್ಯುತ್ ಶಕ್ತಿಯ ಸಹಾಯದಿಂದ ದೀಪಾಲಂಕಾರ, ಬಣ್ಣಗಳ ವಿಧವನ್ನು ಅಳವಡಿಸಿದರು.
ಮೈಸೂರು ಪ್ರಾಂತ್ಯದಲ್ಲಿ ಇನ್ನೊಂದು ಹೆಸರಾಂತ ಸಂಸ್ಥೆ 'ಶ್ರೀ ಗುಬ್ಬಿ ಚೆನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿ' 1884ರಲ್ಲಿ ಗುಬ್ಬಿ ಚಂದಣ್ಣನವರ ನೇತೃತ್ವದಲ್ಲಿ ಹುಟ್ಟಿತು. ಹೀಗೆ ಜನನವಾದ ಕನ್ನಡ ರಂಗಭೂಮಿ ಇಂದು ವಿಶ್ವದ ಗಮನವನ್ನು ಸೆಳೆಯುವ ಮಟ್ಟಿಗೆ ಬೆಳೆದು ನಿಂತಿದೆ.
ಹೀಗೆ ಲೇಖಕರು ಕನ್ನಡ ರಂಗಭೂಮಿ ಬೆಳೆದುಬಂದ ಹಾದಿಯ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಕನ್ನಡದ ಅರವತ್ತನಾಲ್ಕು ಕಲಾ ಪ್ರತಿಭೆಗಳ ಸಾಧನೆಗಳ ಬಗ್ಗೆ ಈ ಕೃತಿಯಲ್ಲಿ ಪರಿಚಯಿಸಿಕೊಡುವ ಪ್ರಯತ್ನ ಮಾಡಿರುವ ಲೇಖಕರು ಈ ಕೆಳಗಿನ ನಕ್ಷತ್ರಗಳ ಪರಿಚಯ ಮಾಡಿಕೊಟ್ಟಿದ್ದಾರೆ.
ಟಿ.ಎಸ್.ಲೋಹಿತಾಶ್ವ,ಅವಿನಾಶ್ ಕಾಮತ್, ಮುಖ್ಯಮಂತ್ರಿ ಚಂದ್ರು, ಮಂಡ್ಯ ರಮೇಶ್, ಕೆ.ಮಂಜುನಾಥಯ್ಯ,ಉಮಾಶ್ರೀ ,ಲೋಕನಾಥ್, ಲಕ್ಷ್ಮೀ ಚಂದ್ರಶೇಖರ್
,ಪ್ರಕಾಶ್ ಬೆಳವಾಡಿ,ಅಹಲ್ಯಾ ಬಲ್ಲಾಳ್ ,ಡಿ.ಆರ್. ಕಾಮತ್
, ಬಿ.ಆರ್. ಮಂಜುನಾಥ್ ,ಚಂದ್ರಶೇಖರ ಕಂಬಾರ , ವಾಸುದೇವ ಗಿರಿಮಾಜಿ
, ಧೀರೇಂದ್ರ ಗೋಪಾಲ್, ಜಿ.ವಿ.ಶಿವಾನಂದ್ ,ಶಾಂತಾ ಹುಬೈಕ
, ಯಶವಂತ ಸರದೇಶಪಾಂಡೆ,
ವಸಂತ ನಾಕೋಡ , ಕಾಳಪ್ಪ ಪತ್ತಾರ, ಕೆ.ಎಸ್.ಪೂರ್ಣಿಮಾ , ರೋಹಿಣಿ ಹಟ್ಟಂಗಡಿ,ಡಾ. ವಿಜಯಾ,ಆದವಾನಿ ಲಕ್ಷ್ಮೀದೇವಿ,ಎಂ.ವಿ.ರಾಜಮ್ಮ,ಕಲ್ಪನಾ
ಬಿ.ಆರ್. ಪಂತಲು,ಕಣಗಲ್ ಪ್ರಭಾಕರ ಶಾಸ್ತ್ರಿ , ಉದಯಕುಮಾರ್
ಸಿ.ಜಿ.ವೆಂಕಟೇಶ್ವರ,ಸುಪ್ರಿಯಾ ಎಸ್. ರಾವ್,ಬಾಲಕೃಷ್ಣ ನಿಲ್ದಾಣ್ಣಾಯ, ಸರೋಜಾ ಹೆಗಡೆ , ಸದಾನಂದ ಸುವರ್ಣ, ವಾಸುಕಿ ವೈಭವ್ , ಭರತ್ ಕುಮಾರ್,ಮರಿಯಪ್ಪ, ನಾಟೇಕರ್ ಮೋಹನ್,ಕಿಕ್ಕೇರಿ ಕೃಷ್ಣಮೂರ್ತಿ,ಕಿಶೋರಿ ಬಲ್ಲಾಳ್,ಆಶಾಲತಾ,ಗಿರಿಜಾ ಲೋಕೇಶ್, ಲೋಕೇಶ್,
ವೈಶಾಲಿ ಕಾಸರವಳ್ಳಿ,ಕಲ್ಪನಾ ನಾಗನಾಥ್, ದಾಕ್ಷಾಯಿಣಿ ಭಟ್,
ಪ್ರೇಮಾ ಕಾರಂತ,ಯಮುನಾ ಮೂರ್ತಿ,ದೀಪಾ ರವಿಶಂಕರ್,ಪ್ರಸನ್ನ,
ಚಿಟ್ಟಾಣಿ ರಾಮಕೃಷ್ಣ ಹೆಗಡೆ,
ಕಾಳಿಂಗ ನಾವಡ, ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ
ಹೊ. ಮಂಜುನಾಥ ಭಾಗವತ, ಕ. ಮಂಜುನಾಥ ಭಾಗವತ. ಲೀಲಾವತಿ ಬೈಪಡಿತ್ತಾಯ,ಬಲಿಪ ನಾರಾಯಣ ಭಾಗವತ,ಶೇಣಿ ಗೋಪಾಲಕೃಷ್ಣ ಭಟ್
ನೆಟ್ಟೂರು ನಾರಾಯಣ ಭಾಗವತ .
ಈ ಕಲಾವಿದರ ಬಗ್ಗೆ ತಿಳಿದು ಬಹಳ ಸಂತೋಷವಾಯಿತು.
ಈ ಪುಸ್ತಕದ ಮುಖಪುಟ ಗಮನ ಸೆಳೆಯುತ್ತದೆ ಅದಕ್ಕೆ ವಿ ಎಲ್ ಪ್ರಕಾಶ್ ರವರು ಅಭಿನಂದನಾರ್ಹರು .ಪುಸ್ತಕ ಅಚ್ಚುಕಟ್ಟಾಗಿ ಬರಲು ಅದರ ಒಳ ವಿನ್ಯಾಸ ಸಹ ಚೆನ್ನಾಗಿ ಮೂಡಿಬಂದಿರುವುದು ಗಮನಾರ್ಹ. ಕಲಾ ನಕ್ಷತ್ರಗಳಿಗೆ ಪೂರಕವಾದ ಚಿತ್ರಗಳು ಬಹಳ ಚೆನ್ನಾಗಿವೆ .ಒಟ್ಟಾರೆ ಈ ಪುಸ್ತಕ ಚೆನ್ನಾಗಿದೆ ರಂಗಭೂಮಿಯ ಬಗ್ಗೆ ಆಸಕ್ತಿ ಇರುವ ಮತ್ತು ಕಲಾರಾಧಕರು ಈ ಪುಸ್ತಕ ಓದಲೇಬೇಕು
ಪುಸ್ತಕದ ಹೆಸರು:ಕನ್ನಡ ರಂಗಭೂಮಿಯ ಕಲಾಪ್ರತಿಭೆಗಳು
ಲೇಖಕರು: ಎಂ ವಿ ಶಂಕರಾನಂದ
ಪ್ರಕಾಶನ: ಆನಂದ್ ಪಬ್ಲಿಕೇಶನ್ .ತುಮಕೂರು
ಬೆಲೆ:450₹
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment