జలದೀವಿಗೆ
ಇಂದ್ರಕುಮಾರ್ ರವರು ಜಲದೀವಿಗೆ ಪುಸ್ತಕದಲ್ಲಿ ಮತ್ತೆಮತ್ತೆ ಪ್ರತಿಪಾದಿಸುವುದು ಶ್ರಮ ಸಹಿತವಾದ ಬದುಕಿನ ಸಮೃದ್ಧತೆಯನ್ನು, ಸುಖವನ್ನು, ದೇಹಶ್ರಮವಿಲ್ಲದ ಕೇವಲ ಬೌದ್ಧಿಕ ಶ್ರಮವನ್ನು ಮಾತ್ರ ಮಾಡುತ್ತ ನಗರದಲ್ಲಿ ಬದುಕುತ್ತಿರುವ ಒಂದು ಬಹುದೊಡ್ಡ ಸಮುದಾಯ ನಿಜವಾದ ಅರ್ಥದಲ್ಲಿ ವಿಶೇಷ ಚೇತನ ಸಮಾಜ, ತನ್ನ ವಿಕಲತೆಯನ್ನು ಮರೆಮಾಚುವುದಕ್ಕಾಗಿ ಅದು ಜಿಮ್ಗಳನ್ನೋ, ವ್ಯಾಯಾಮಕೇಂದ್ರಗಳನ್ನೋ, ಸ್ಪಾಗಳನ್ನೋ ತೆರೆದುಕೂತಿದೆ. ಮೈಮುರಿದು ದುಡಿಯುವ ಸಂಸ್ಕೃತಿಯಿಂದ ದೂರವಾದ ಜನರು ತಾವಾಗಿಯೇ ರೋಗಗಳ ಅವಾಸಸ್ಥಾನವಾಗುತ್ತಾರೆ. ಹಾಗಾಗಿ ಶ್ರಮದ ಬದುಕಿಗೆ ಮರಳೋಣ ಬನ್ನಿ ಎಂಬ ಕರೆಯನ್ನು ಅನೇಕ ಶ್ರಮಜೀವಿಗಳ ಕಥನಗಳ ಮೂಲಕ ಇಂದ್ರಕುಮಾರ್ ಅವರು ನಮಗೆ ಕೊಡುತ್ತಾರೆ. ಇಲ್ಲೇ ಸ್ವಾಮಿ ಏವೇಕಾನಂದರ ಒಂದು ಮಾತನ್ನು ನೆನಪಿಸುವುದು ಸೂಕ್ತ. "ಮೂರು ಹೊತ್ತು ಧ್ಯಾನ ಮಾಡುವುದು, ನಮಾಜ್ ಮಾಡುವುದು ಆಧ್ಯಾತ್ಮಿಕತೆಯಲ್ಲ, ಶ್ರಮಪಡುವುದು, ಶ್ರಮವನ್ನು ಸುಖ ಎಂದು ಭಾವಿಸುವುದು, ಶ್ರಮದ ಮೂಲಕವೇ ಧ್ಯಾನ ನಡೆಸುವುದು ನಿಜವಾದ ಆಧ್ಯಾತ್ಮಿಕತೆ". ಈ ಮಾತಿನ ಅರ್ಥವನ್ನು ಅರಿತಂತೆ ಇಂದ್ರಕುಮಾರ್ ಅವರು 'ಜಲ ದೀವಿಗೆ' ಪುಸ್ತಕದ ಮೂಲಕ ನಮಗೆ ದರ್ಶನ ಮಾಡಿಸುವವರೆಲ್ಲರೂ ನಿಜವಾದ ಅರ್ಥದಲ್ಲಿ ಶ್ರಮಯೋಗಿಗಳೇ ಆಗಿದ್ದಾರೆ. ಸತ್ಯಮೇವ ಜಯತೇ ಎಷ್ಟು ಮುಖ್ಯವೋ ಶ್ರಮಮೇವ ಜಯತೇ ಕೂಡ ಅಷ್ಟೇ ಮುಖ್ಯ ಎಂಬುದನ್ನು ಒಂದು ತತ್ತ್ವದಂತೆ ತಮ್ಮ ಈ ಪುಸ್ತಕದ ಮೂಲಕ ಪ್ರತಿಪಾದಿಸಿದ್ದಾರೆ.
ಪರಿಸರ, ನೀರು, ವನ್ಯಜೀವಿಗಳ ಸಂರಕ್ಷಣೆ, ನೈಸರ್ಗಿಕ ಮತ್ತು ಸಹಜ ಸಮೃದ್ಧ ಕೃಷಿ ಬಗ್ಗೆ ಹೆಚ್ಚು ಅರಿತಿದ್ದ ಜಿ ಇಂದ್ರಕುಮಾರ್ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಲವಾರು ಬರಹಗಳನ್ನು ಆಗಾಗ್ಗೆ ಬರೆಯುತ್ತಿದ್ದರು ಸಂಯುಕ್ತ ಕರ್ನಾಟಕದ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು, ಆ ಪತ್ರಿಕೆಯಲ್ಲಿ ಪ್ರತಿವಾದ ಅರಣ್ಯ, ನೀರು, ಪರಸರ ಸಂರಕ್ಷಣೆ ಕುರಿತು ಲೇಖನಗಳು ಪ್ರಕಟವಾಗಿವೆ. ಶುಮಕೂರು ನಗರದ ವಾರ್ಡ್ ನಂ.೧ಕ್ಕೆ ಸೇರುವ ಐತಿಹಾಸಿಕ ಮಹತ್ವ ಪಡೆದಿರುವ ಡಿ.ಎಂ.ಪಾಳ್ಯದವರು. ಕೃಷಿಕ ಮೂಲದ ಮನೆತನದವರು, ಎಂ.ಎ. ಓದಿದ್ದು, ಬರವಣಿಗೆಯಲ್ಲಿ ತಮ್ಮದೆ ಆದ ಛಾಪು ಮೂಡಿಸಿಕೊಂಡಿದ್ದರು.ಕನ್ನಡ ಪುಸ್ತಕ ಪ್ರಾಧಿಕಾರ ಅವರ ಪ್ರಥಮ ನಾಟಕ 'ಸಾಲವತಿ'ಯನ್ನು ಪ್ರಕಟಿಸಿತ್ತು . ಈ ನಾಟಕಕ್ಕೆ ಅಖಿಲ ಭಾರತ ಕನ್ನಡ ನಾಟಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಬಂದಿದೆ. ನಾಟಕ, ಕಾವ್ಯ, ಕಥೆಗಳ ರಚನೆ, ಇತಿಹಾಸ ಸಂಶೋಧನೆ ಜೊತೆಗೆ ಬಹುಮುಖ ಪ್ರತಿಭೆಯಾಗಿದ್ದರು.
ಜಲದೀವಿಗೆ ಪುಸ್ತಕದಲ್ಲಿ 35 ಲೇಖನಗಳಿದ್ದು ಈ ಪುಸ್ತಕ ವಿಶೇಷವಾಗಿ ತುಮಕೂರಿನ ಜಲಸಾಕ್ಷರತೆಯ ಬಗ್ಗೆ ಅತೀವ ಕಾಳಜಿಯನ್ನು ಇಟ್ಟುಕೊಂಡಿದೆ. ತುಮಕೂರು ತಾಲ್ಲೂಕಿನ ದೇವರಾಯನದುರ್ಗದ ಬೆಟ್ಟಗಳ ತಪ್ಪಲಿನಲ್ಲಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ ದುರ್ಗದನಾಗೇನಹಳ್ಳಿಯ ಮಹೇಶ ಎಂಬ ಯುವಕನಿಂದ ತೊಡಗಿ ಮಾನ್ಯ ಶ್ರೀ ಸಿದ್ದರಾಮಯ್ಯನವರ ಸರಕಾರದಲ್ಲಿ ದಕ್ಷ ಮಂತ್ರಿಯಾಗಿ ಕೆಲಸ ಮಾಡಿದ್ದ ಟಿ ಬಿ ಜಯಚಂದ್ರ ಅವರ ಜಲಸಾಹಸಗಳವರೆಗೆ ಈ ಪುಸ್ತಕ ಬೆಳಕು ಚೆಲ್ಲುತ್ತದೆ.
ಬರಗಾಲವನ್ನು ಮೆಟ್ಟಿ ನಿಲ್ಲುವುದು ಹೇಗೆ ಎಂದು ತೋರಿಸಿದ ರೈತರ ಸಾಹಸದ ಕಥನಗಳು, ತಲಪರಿಗೆಗಳ ಮಹತ್ವ ಮತ್ತು ಅವುಗಳನ್ನು ಕಾಪಿಟ್ಟುಕೊಂಡಿರುವ ಜಲಯೋಧರ ದಿಟ್ಟತನದ ಕಥನಗಳು ಈ ಪುಸ್ತಕದ ಶಕ್ತಿಯನ್ನು ಹೆಚ್ಚಿಸಿವೆ. ಅತಿಕಡಿಮೆ ನೀರಿನಲ್ಲಿ ತನ್ನ ತೋಟಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂಬುದರ ಕುರಿತು ಯೋಚನೆ ಮಾಡಿ ಯಶಸ್ಸುಗಳಿಸಿದ ಕಾಮಣ್ಣನಂಥವರನ್ನು ಇಂದ್ರಕುಮಾರ್ ಅವರು ಕೃಷಿ ವಿಜ್ಞಾನಿ ಎಂದು ಕರೆದಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಇಂತಹ ಹತ್ತು-ಹಲವು ಸಜೀವ ನಿದರ್ಶನಗಳನ್ನು ಇಂದ್ರಕುಮಾರ್ ಅವರು ಕೊಡುತ್ತ ಪೇಟೆ-ಪಟ್ಟಣಗಳ ಕಿಷ್ಕಿಂಧೆಯಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ತಮ್ಮ ಬದುಕನ್ನು ಸವೆಸುತ್ತ, ಬಂದಿರುವ ಹಳ್ಳಿಯ ಯುವಕರನ್ನು ಕೃಷಿಯ ಸಮೃದ್ಧ ಬದುಕಿನ ಕಡೆಗೆ ಕೈಬೀಸಿ ಕರೆಯುವ ಪ್ರಯತ್ನವನ್ನು ಈ ಪುಸ್ತಕದಲ್ಲಿ ಮಾಡಿರುವುದು ಸ್ತುತ್ಯಾರ್ಹ ಕೆಲಸವಾಗಿದೆ.
ಇಂದ್ರಕುಮಾರ್ ಅವರ ಈ ಪುಸ್ತಕದಲ್ಲಿನ ಒಂದು ಸ್ಥಾಯಿ ಗುಣವೆಂದರೆ ಪರಿಸರ ಕುರಿತ ಆಳವಾದ ಕಾಳಜಿಯನ್ನು ಧರಿಸಿರುವುದು ಈ ಕಾಳಜಿ ಇಲ್ಲಿನ
ಪ್ರತಿಯೊಂದು ಲೇಖನಗಳಲ್ಲೂ ಸತತವಾಗಿ ಹರಿಯುತ್ತಿದೆ. ಆಧುನಿಕ ಕಾಲದಲ್ಲಿ ಒಂಚೂರು ಬೆವರು ಸುರಿಸದ ಜನರು ಸುಲಭ ಜೀವಿಗಳಾಗಿ ರೂಪಾಂತರ ಗೊಂಡಿದ್ದಾರೆ. ಇಡೀ ಜಗತ್ತಿಗೆ ಕೊಳ್ಳುಬಾಕತೆಯ ರೋಗ ತಗುಲಿದ ಕಾರಣದಿಂದ, ಭೂಮಿ ತನ್ನ ಮರು ಉತ್ಪಾದನಾ ಶಕ್ತಿಯನ್ನು ಕಳೆದುಕೊಂಡಿದೆ. ಇಂತಹ ಬಂಜೆತನವನ್ನು ನಿವಾರಿಸುವುದು ಹೇಗೆ ಎಂಬುದರ ಬಗೆಗೂ ಇಂದ್ರಕುಮಾರ್ ಚಿಂತನೆ ನಡೆಸಿದ್ದಾರೆ.
ಒಟ್ಟಾರೆ ಹೇಳುವುದಾದರೆ ಈ ಜಲದೀವಿಗೆ ಪುಸ್ತಕ ಪರಿಸರದ ಬಗ್ಗೆ ಕಾಳಜಿ ಇರುವ ಸಮಾಜಮುಖಿ ಚಿಂತನೆಯ ಪುಸ್ತಕ ಎಲ್ಲರೂ ಓದಲೇಬೇಕಾದ ಪುಸ್ತಕ ಎಂದು ಹೇಳಬಹುದು.
ಪುಸ್ತಕದ ಹೆಸರು: ಜಲದೀವಿಗೆ
ಪ್ರಕಾಶನ: ಗೋಮಿನಿ ಪ್ರಕಾಶನ ತುಮಕೂರು
ಬೆಲೆ: 110
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment