11 October 2021

ಮಕ್ಕಳೇಕೆ ಮನೆ ಬಿಟ್ಟು ಹೋದರು?


 


ಮಕ್ಕಳೇಕೆ ಮನೆ ಬಿಟ್ಟು ಹೋದರು?


ಒಂದೇ ದಿನ ಮನೆ ಬಿಟ್ಟು ಹೋದ 7 ವಿಧ್ಯಾರ್ಥಿಗಳು,ಮೊಬೈಲ್ ನೋಡುವುದು ಬಿಟ್ಟು ಓದು ಎಂದಿದ್ದಕ್ಕಾಗಿ ಮಗನ ಆತ್ಮಹತ್ಯೆ , ಶಾಲೆಗಳಲ್ಲಿ ಮಕ್ಕಳ ಅತಿರೇಕದ ವರ್ತನೆಗಳ ಕಂಡು ಶಿಕ್ಷಕರು ಕಂಗಾಲು ,ಖಿನ್ನತೆಗೆ ಜಾರುತ್ತಿರುವ ಮಕ್ಕಳು. ಇಂತಹ  ಹಲವಾರು ಸುದ್ದಿಗಳನ್ನು ಮಾಧ್ಯಮದಲ್ಲಿ ನೋಡಿದಾಗ ಮನಸಿಗೆ ಬಹಳ ನೋವಾಗುತ್ತದೆ. ಈ ಸಮಸ್ಯೆಗಳಿಗೆ ಮೂಲ ಹುಡುಕುತ್ತಾ ಹೊರಟರೆ ಮೊದಲ ಬೆರಳು ಮಹಾಮಾರಿ ಕರೋನ ಕಡೆಗೆ ತೋರಿಸಿದರೆ ಉಳಿದ ಬೆರಳುಗಳು ಶಿಕ್ಷಣ ವ್ಯವಸ್ಥೆ, ಪೋಷಕರು, ಸಮುದಾಯದ ಕಡೆಗೆ ತೋರಿಸುತ್ತವೆ ಎಂಬ ಕಟು ಸತ್ಯ ಒಪ್ಪಿಕೊಳ್ಳಲೇಬೇಕಿದೆ.


ಇತ್ತೀಚಿಗೆ ವರದಿಯಾದ ಪ್ರಕರಣದಲ್ಲಿ  ಮಕ್ಕಳು ಪತ್ರ ಬರೆದಿಟ್ಟು 

"ಓದುವಂತೆ ಒತ್ತಡ ಹೇರುತ್ತಿದ್ದೀರಿ, ಆದರೆ ನಮಗೆ ಆಸಕ್ತಿ ಇಲ್ಲ ಆದ್ದರಿಂದ ಮನೆ ಬಿಟ್ಟು ಹೋಗುತ್ತಿದ್ದೇವೆ"  ಎಂದು ನಾಪತ್ತೆಯಾಗಿದ್ದಾರೆ.

ಪತ್ರದಲ್ಲಿ ಮುಂದುವರೆದು  ಆ ಬಾಲಕರು "ನೀವು ಓದುವಂತೆ ಒತ್ತಾಯ ಮಾಡಿದರೂ ನಮಗೆ ಓದಿನಲ್ಲಿ ಆಸಕ್ತಿ ಇಲ್ಲ. ಕ್ರೀಡೆಯಲ್ಲೇ ಹೊಸ ಜೀವನ ರೂಪಿಸಿಕೊಳ್ಳುತ್ತೇವೆ, ಕ್ರೀಡೆ ಎಂದರೆ ಕಬಡ್ಡಿ ತುಂಬ ಇಷ್ಟ, ಅದರಲ್ಲೇ ಉತ್ತಮ ಹೆಸರು, ವೃತ್ತಿ ಹಾಗೂ ಹಣ ಸಂಪಾದಿಸುತ್ತೇವೆ. ಕ್ರೀಡೆಯಲ್ಲೇ ಉತ್ತಮ ಸಾಧನೆ ಮಾಡಿ ಮತ್ತೆ ವಾಪಸ್ ಬರುತ್ತೇವೆ." ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .


ಈ ಘಟನೆ ಗಮನಿಸಿದಾಗ  ಮಕ್ಕಳು ಓದಲಿ ಎಂದು ಪೋಷಕರು ಅಪೇಕ್ಷೆ ಪಡಯವುದೇ ತಪ್ಪೇ? ಪೋಷಕರಿಗೆ ಅಷ್ಟೂ ಹಕ್ಕಿಲ್ಲವೇ? ಎಂದು ಸಾಮಾನ್ಯವಾಗಿ ಕೇಳುತ್ತೇವೆ .ಓದು ಎಂಬುದು ತಪ್ಪಲ್ಲ ಆದರೆ ಇದನ್ನೇ ಓದು, ಇಷ್ಟೇ ಓದು, ಇದೇ ಕೋರ್ಸ್ ಓದು, ಡಾಕ್ಟರ್ ಆಗಲೇಬೇಕು, 99% ಸ್ಕೋರ್ ಮಾಡಲೇ ಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಿದರೆ ಮಕ್ಕಳೇನು ಮೆಷಿನ್ನಾ? ಅಥವಾ ರೋಬಾಟಾ? ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಮಾದ್ಯಮಗಳು ಕ್ರೀಡಾಕ್ಷೇತ್ರದ ಸಾಧಕರ ಸಾಧನೆ ತೋರಿಸುವುದೇ ತಪ್ಪ? ತಪ್ಪಲ್ಲ ಆದರೆ ಕ್ರೀಡಾ ಕ್ಷೇತ್ರ, ಸಿನಿಮಾ ರಂಗದಲ್ಲಿ ಮಾತ್ರ ದುಡ್ಡು ಮಾಡಬಹುದು , ಅವರು ಮಾತ್ರ ಅತಿಮಾನುಷರು ಎಂದು 24/7 ಅವರ ಬಗ್ಗೆಯೇ ಅವರು ಕುಂತರೂ ,ನಿಂತರೂ ಸೀನಿದರೂ ಇನ್ನೊಂದು ಮಾಡಿದರೂ ತಿರುಗಿಸಿ ತಿರುಗಿಸಿ ತೋರಿಸಿದರೆ ಮಕ್ಕಳಿಗೆ ಆ ಕ್ಷೇತ್ರ ಮಾತ್ರ ಶ್ರೇಷ್ಠ ಎಂದು ಮಕ್ಕಳು ತೀರ್ಮಾನಕ್ಕೆ  ಬರುವುದು ಸಹಜ. ಮಾದ್ಯಮಗಳೂ ಕೇವಲ ಟಿ ಆರ್ ಪಿ ಅಥವಾ ಹಣಕ್ಕಾಗಿ ಕೆಲಸ ಮಾಡದೆ ಸ್ವಲ್ಪ ಮಟ್ಟಿನ ಸಾಮಾಜಿಕ ಬದ್ಧತೆಯನ್ನು ತೋರ್ಪಡಿಸಬೇಕಿದೆ.

ಯಾವುದೂ ಅತಿಯಾಗಬಾರದು . ಮಕ್ಕಳ ಇಷ್ಟ ಕಷ್ಟಗಳ ಕಡೆ ಪೋಷಕರು , ಶಿಕ್ಷಕರು ಸಮುದಾಯಗಳು ಸಹ ಸೂಕ್ಷ್ಮವಾಗಿ ಸ್ಪಂದಿಸಬೇಕಿದೆ.


 ಕೊರೋನಾಸಾಂಕ್ರಾಮಿಕದಿಂದ ಬರೋಬ್ಬರಿ19ತಿಂಗಳಿನಿಂದ ಜಗತ್ತಿನಾದ್ಯಂತ ಶಾಲಾ-ಕಾಲೇಜುಗಳು ಮುಚ್ಚಿದ್ದು ಸದ್ಯ ಈ ಪೈಕಿ ಅರ್ಧ ಶಾಲೆಗಳು ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಿವೆ. ಶೇ.34ರಷ್ಟು ಶಾಲೆಗಳು ಭೌತಿಕ ಮತ್ತು ಆನ್ಲೈನ್ ಎರಡೂ ತರಗತಿಗಳನ್ನು ಮುಂದುವರೆಸಿವೆಎಂದುಕೊವಿಡ್-19 ಗ್ಲೋಬಲ್ ಎಜುಕೇಶನ್ ರಿಕವರಿ ಟ್ರಾಕರ್ ತಿಳಿಸಿದೆ.


ಜಾನ್ಸ್ ಹಾಪ್ಟಿನ್ ವಿ.ವಿ, ವಿಶ್ವಬ್ಯಾಂಕ್ ಮತ್ತು ಯುನಿಸೆಫ್ ಜಂಟಿಯಾಗಿ 200ಕ್ಕೂ ಹೆಚ್ಚು ದೇಶಗಳಲ್ಲಿ ಶಾಲೆಗಳನ್ನು ತೆರೆ ಯಲು ರೂಪಿಸಿದ ಯೋಜನೆಯನ್ನು ಆಧರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಿವೆ. ವರದಿಯ ಪ್ರಕಾರ ಶೇ.80ರಷ್ಟು ಶಾಲೆಗಳು ನಿರಂತರ ತರಗತಿಗಳನ್ನು ಆರಂಭಿಸಿವೆ. ಈ ಪೈಕಿ ಶೇ.54ರಷ್ಟು ಶಾಲೆಗಳು ಭೌತಿಕ ತರಗತಿಗಳನ್ನು ಆರಂಭಿಸಿವೆ, ಶೇ.34ರಷ್ಟು ಶಾಲೆಗಳು ಭೌತಿಕ, ಆನ್ ಲೈನ್ ಎರಡೂ ರೀತಿಯ ತರಗತಿ ನಡೆಸುತ್ತಿವೆ. ಉಳಿದ ಶೇ.10ರಷ್ಟು ಶಾಲೆಗಳು  ಆನ್ಲೈನ್ ತರಗತಿಯನ್ನೇ ಮುಂದುವರೆಸಿವೆ. ಆನ್ಲೈನ್ ತರಗತಿಗಳು ಎಷ್ಟು ಪರಿಣಾಮಕಾರಿ? ಎಂಬುದು ಹಲವಾರು ಸಮೀಕ್ಷೆಗಳಿಂದ ಬಹಿರಂಗವಾಗಿದೆ.


ಮಕ್ಕಳ ಅನುಚಿತ ವರ್ತನೆ , ವ್ಯಸನಗಳಿಗೆ ಬಲಿಯಾಗುವುದು , ಪೋಷಕರು ಮತ್ತು ಶಿಕ್ಷಕರ ಜೊತೆಯಲ್ಲಿ ಸಂಘರ್ಷ ಏರ್ಪಡಲು,  ಶಾಲೆಗಳಿಂದ ಮಕ್ಕಳು ಬಹುಕಾಲ ದೂರು ಉಳಿಯುವಂತೆ ಮಾಡಿದ್ದು ಕರೋನಾ ಎಂದು ಒಪ್ಪಿದರೂ   ಇದರ ಜೊತೆಗೆ ಪೋಷಕರ ಅನವಶ್ಯಕ ಒತ್ತಡ  ಸಹ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ .


ಇಂತಹ ಸೂಕ್ಷ್ಮ ಕಾಲದಲ್ಲಿ ನಮ್ಮ ಮಕ್ಕಳನ್ನು ಸರಿದಾರಿಗೆ ತರಲು ಮನಶ್ಶಾಸ್ತ್ರಜ್ಞರು, ಶಿಕ್ಷಕರು, ಪೋಷಕರು ಸಮುದಾಯ ಶಿಕ್ಷಣ ಇಲಾಖೆ ಎಲ್ಲರೂ ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529