ಮಕ್ಕಳು ಮತ್ತು ಯುವಕರನ್ನು ದುಶ್ಚಟಗಳಿಂದ ದೂರ ಮಾಡೋಣ
ನಾನು ಐದು ವರ್ಷಗಳ ಹಿಂದೆ ಗೌರಿಬಿದನೂರಿನಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ ಒಂದು ದಿನ ಮಧ್ಯಾಹ್ನ ವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು . ನಮ್ಮ ಸಹೋದ್ಯೋಗಿ ಶಿಕ್ಷಕಿಯೋರ್ವರು ನನ್ನನ್ನು ಕರೆದು " ಸರ್ ಆ ಹುಡುಗನ ಹತ್ತಿರ ಹೋದರೆ ಏನೋ ವಾಸನೆ ಬರುತ್ತದೆ ನೋಡಿ" ಎಂದರು ಹೋಗಿ ಗಮನಿಸಿದಾಗ ಆ ಬಾಲಕ ಕುಡಿದಿರುವುದು ಗಮನಕ್ಕೆ ಬಂತು , ಮುಖ್ಯ ಶಿಕ್ಷಕರ ಗಮನಕ್ಕೆ ತಂದು ವಿಚಾರಿಸಲಾಗಿ ಮನೆಯಲ್ಲಿ ಪ್ರತಿದಿನ ಪೋಷಕರ ಜಗಳ ಮತ್ತು ಕೆಟ್ಟ ಸ್ನೇಹಿತರ ಸಹವಾಸದಿಂದ ಅವನು ದುಶ್ಚಟಕ್ಕೆ ಬಲಿಯಾಗಿರುವುದನ್ನು ಒಪ್ಪಿಕೊಂಡನು. ಅವರ ಪೋಷಕರ ಕರೆಸಿ ಆಪ್ತ ಸಮಾಲೋಚನೆ ಮಾಡಿ ಕಳಿಸಿದೆವು.
ಹೀಗೆ ಇಂದಿನ ದಿನಗಳಲ್ಲಿ ಮಾದ್ಯಮಗಳ ಪ್ರಭಾವ ,ಪೋಷಕರ ನಿರ್ಲಕ್ಷ್ಯ, ಸಮಾಜದ ಪ್ರಭಾವ ,ಸುಲಭವಾಗಿ ಸಿಗುವ ಮೊಬೈಲ್, ನಿಯಂತ್ರಣವಿಲ್ಲದೇ ಅಂತರ್ಜಾಲದಲ್ಲಿ ಸಿಗುವ ಬೇಡವಾದ ವಿಷಯ ವಸ್ತುಗಳು ಮಕ್ಕಳು ಮತ್ತು ಯುವಕರನ್ನು ದುಶ್ಚಟಗಳ ದಾಸರನ್ನಾಗಿ ಮಾಡುತ್ತಿವೆ.
ವಿಪರ್ಯಾಸವೆಂದರೆ ಈ ದುಶ್ಚಟಗಳನ್ನು ಮಕ್ಕಳು ಬೇಗ ಕಲಿತುಬಿಡುವರು. ಆದರೆ ಬಿಡಿಸಲು ಸಮಾಜ, ಶಿಕ್ಷಕರು, ಪೋಲಿಸರು, ಪೋಷಕರು, ಎಲ್ಲಾ ಸೇರಿದರೂ ಆ ಚಟಗಳ ಬಿಡಿಸಲು ಹರ ಸಾಹಸ ಮಾಡಬೇಕಾಗುತ್ತದೆ.
ಹಳ್ಳಿಯ ಅನುಭಾವಿಕರ ಮಾತಲ್ಲಿ ಹೇಳುವುದಾದರೆ ಕಲ್ಲು ತಿಂದ ಕರಗಿಸುವ ವಯಸ್ಸು ಯುವಕರದು. ಇದನ್ನು ಸ್ವಾಮಿ ವಿವೇಕಾನಂದರು ಕಬ್ಬಿಣದ ಮಾಂಸಖಂಡಗಳ ಮತ್ತು ಉಕ್ಕಿನ ನರಗಳ ಹೊಂದಿರುವ ಯುವಕರು ಯಾವುದೇ ದೇಶದ ಆಸ್ತಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ದೇಶದ ಭವಿಷ್ಯದ ಪ್ರಜೆಗಳು, ಪೋಷಕರ ಕನಸುಗಳು ದುಶ್ಟಕ್ಕೆ ಬಲಿಯಾಗಿ ಸಮಾಜಕ್ಕೆ ಹೊರೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಇದೊಂದು ಸಾಮಾಜಿಕ ಪಿಡುಗಾಗಿ ಪರಿವರ್ತನೆ ಹೊಂದಿರುವುದು ನಮಗೆ ತಿಳಿದೇ ಇದೆ ಈ ಸಮಸ್ಯೆಗೆ ಪರಿಹಾರವನ್ನು ನಾವೆಲ್ಲರೂ ಸೇರಿ ಕಂಡುಕೊಳ್ಳಬೇಕಿದೆ.
ಮಕ್ಕಳು ಮತ್ತು ಯುವಕರು ದಾರಿ ತಪ್ಪದಂತೆ ಪೋಷಕರು ಮೊದಲಿಗೆ ಎಚ್ಚರಿಕೆ ವಹಿಸಬೇಕು.
ಸರ್ಕಾರಗಳು ಸಹ ಈ ನಿಟ್ಟಿನಲ್ಲಿ ಚಿಂತಿಸಿವೆ ಕರ್ನಾಟಕ ರಾಜ್ಯ ಸರ್ಕಾರ 2012ರಲ್ಲಿ ಯುವ ನೀತಿ ರೂಪಿಸಲಾಗಿತ್ತು. ವಿವೇಕಾನಂದ ಯುವ ನಿಗಮ ಸ್ಥಾಪಿಸಿದೆ.ಮತ್ತು ಮಕ್ಕಳು ಯುವಕರಿಗೆ ದುಶ್ಟಟಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಮತ್ತು ಯುವಕರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಯೂಥ್ ಹೆಲ್ತ್ಲೈನ್, ಟ್ಯಾಲೆಂಟ್ ಬ್ಯಾಂಕ್, ಪೋರ್ಟಲ್, ಫೆಲೋಶಿಪ್ ನೀಡುವ ಕೆಲಸಗಳು ಆಗಬೇಕಿದೆ.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಡಗ್ಸ್, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅಪರಾಧ ಮನೋಭಾವ ಹೆಚ್ಚಾಗುತ್ತಿದೆ. ಯುವಕರು ದಾರಿ ತಪ್ಪದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹಾಗೂ ಬೇರೆ ಬೇರೆ ಜವಾಬ್ದಾರಿಗಳಲ್ಲಿ ತೊಡಗಿಕೊಳ್ಳಲು ಅವರ ಕೌಶಲ್ಯಕ್ಕೆ ತಕ್ಕಂತೆ ಅವರಿಗೆ ಸೂಕ್ತವಾದ ತರಬೇತಿಯನ್ನು ಮತ್ತು ಮಾರ್ಗದರ್ಶನ ನೀಡಿ ಅವರಲ್ಲಿರುವ ರಚನಾತ್ಮಕ ಶಕ್ತಿಯನ್ನು ಹೊರಗೆಳೆಯುವ ಕೆಲಸ ಮಾಡಬೇಕಿದೆ.
ಪ್ರತಿಭಾವಂತ ಮಕ್ಕಳು ಮತ್ತು ಯುವಕರಿಗೆ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಬಗ್ಗೆ ಆದ್ಯತೆ ನೀಡಿ ಅವಕಾಶ ಕಲ್ಪಿಸಬೇಕಿದೆ.
ಯುವ ಸಂಘಗಳ ಮೂಲಕ ಕ್ರೀಡೆಯಲ್ಲಿ ತೊಡಗುವಂತೆ ಮಾಡಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಂತೆ ನೋಡಿಕೊಳ್ಳಬೇಕಿದೆ.
ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಅವಕಾಶಗಳ ಬಗ್ಗೆ ಮತ್ತು ಉನ್ನತವಾದ ಗುರಿಗಳನ್ನು ಹೊಂದಲು ಮನವರಿಕೆ ಮಾಡಿಕೊಡಬೇಕಿದೆ
ಸಾಮಾಜಿಕ ಮೌಲ್ಯಗಳನ್ನು ತಿಳಿಸುವ ಮೂಲಕ ರಾಷ್ಟ್ರೀಯ ಮನೋಭಾವ ಬೆಳೆಸುವುದು, ಅದರ ಮೂಲಕ ಭಾರತೀಯ ಸಂಸ್ಕೃತಿ ರಕ್ಷಣೆ ಮಾಡುವಂತೆ ಪ್ರೇರೇಪಿಸಬೇಕಿದೆ.
ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಎಚ್ಚರಿಕೆ ಮೂಡಿಸಿ ಕಾಲಕಾಲಕ್ಕೆ ಆಪ್ತ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕಿದೆ.
ಮಕ್ಕಳು ಮತ್ತು ಯುವಕರು ನಮ್ಮ ದೇಶದ ಆಸ್ತಿ ವಿವಿಧ ಕಾರಣದಿಂದಾಗಿ ಅವರು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುವುದನ್ನು ತಡೆಯಲು ಸಕಾಲದಲ್ಲಿ ಅವರ ಮನ ಪರಿವರ್ತಿಸುವ ಕೆಲಸ ಆಗಬೇಕಿದೆ. ಅವರು ಕೇವಲ ಜನಸಂಖ್ಯೆ ಎಂದು ಭಾವಿಸದೇ ಮಾನವ ಸಂಪನ್ಮೂಲವಾಗಿ ಮಾರ್ಪಡಿಸಬೇಕು ಎಲ್ಲಕ್ಕಿಂತ ಮಿಗಿಲಾಗಿ ಅವರು ಉತ್ತಮ ವ್ಯಕ್ತಿತ್ವ ಉಳ್ಳ ಪ್ರಜೆಗಳನ್ನಾಗಿ ಮಾಡುವಲ್ಲಿ ನಾವೂ ಸಹ ಕೈಜೋಡಿಸಬೇಕಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ. ತುಮಕೂರು
9999925529
No comments:
Post a Comment