05 October 2021

ಮೇಕ್ ಇನ್ ಇಂಡಿಯಾ .ಪ್ರಬಂಧ .make in india .essay.

 




 ಮೇಕ್ ಇನ್ ಇಂಡಿಯಾ  ಪ್ರಬಂಧ


 ದಶಕಗಳಿಂದ ಭಾರತದ ಸಂದಾಯಬಾಕಿಯಲ್ಲಿನ ಅಸಮತೋಲನವನ್ನು ಸರಿಪಡಿಸಲು, ಚಾಲ್ತಿ ಖಾತೆಯ ಕೊರತೆ ಕಡಿಮೆ ಮಾಡಲು ,ಭಾರತದ ಆಮದನ್ನು ಕಡಿಮೆ ಮಾಡಿ ರಫ್ತನ್ನು ಹೆಚ್ಚಿಸಲು ಮತ್ತು ಭಾರತವನ್ನು ಒಂದು ಸ್ವಾವಲಂಬಿ ದೇಶವನ್ನಾಗಿ ಮಾಡಲು ಕೈಗೊಂಡ ಹೊಸ ಯೋಜನೆಗಳಲ್ಲಿ "ಮೇಕ್ ಇನ್ ಇಂಡಿಯಾ" ಸಹ ಒಂದು.


 "ಮೇಕ್ ಇನ್ ಇಂಡಿಯಾ" ಎಂದರೆ ವಿದೇಶಿ ಹೂಡಿಕೆಯನ್ನು ಉತ್ತೇಜಿಸುವುದು,ಹೊಸ  ತಂತ್ರಜ್ಞಾನವನ್ನು ಅನುಸರಿಸಿ  ಜ್ಞಾನದ ಕ್ಷೇತ್ರವನ್ನು ವಿಸ್ತರಿಸಿ   ದೇಶದೊಳಗೆ ಸಂಶೋಧನೆ ,ಉತ್ಪಾದನೆ ಮತ್ತು ಅಭಿವೃದ್ಧಿಯನ್ನು ಮಾಡುವುದು ಎಂದು ಹೇಳಬಹುದು.


 2013 ರಲ್ಲಿ, ಭಾರತೀಯರು ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿದ್ದಾಗ ಉದಯೋನ್ಮುಖ ಮಾರುಕಟ್ಟೆ ಕುಸಿತ ಮತ್ತು ಬೆಳವಣಿಗೆ ದರ ತೀವ್ರವಾಗಿ ಕುಸಿಯುತ್ತಿದ್ದ ಸಮಯದಲ್ಲಿ  ಜಾಗತಿಕ ಹೂಡಿಕೆದಾರರು ಭಾರತದಲ್ಲಿ ತಮ್ಮ ಹೂಡಿಕೆಯ ಬಗ್ಗೆ ಯೋಚಿಸುವ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ

25 ಸೆಪ್ಟೆಂಬರ್ 2014 ರಂದು ನಮ್ಮ  ಪ್ರಧಾನಿ ನರೇಂದ್ರ ಮೋದಿ ಅವರು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಆರಂಭಿಸಿದರು, ಇದು ಭಾರತದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಲು ಮತ್ತು ದೇಶದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡಲು ವಿದೇಶಿ ಕಂಪನಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.


 ‘ಮೇಕ್ ಇನ್ ಇಂಡಿಯಾ’ ಅಭಿಯಾನವು ಭಾರತವನ್ನು ವಿದೇಶಿ ಹೂಡಿಕೆಯ ತಾಣವಾಗಿ ಮತ್ತು ಜಾಗತಿಕವಾಗಿ ಉತ್ಪಾದನೆ, ವಿನ್ಯಾಸ ಮತ್ತು ನಾವೀನ್ಯತೆಗಳ ಪ್ರಮುಖ ತಾಣವಾಗಿ ಪ್ರಚಾರ ಮಾಡುವ ಗುರಿಯನ್ನು ಹೊಂದಿದೆ.  ಇದರ ಜೊತೆಗೆ ದೇಶದಲ್ಲಿ ಉದ್ಯಮಶೀಲತೆಯನ್ನು ಸಹ  ಉತ್ತೇಜಿಸುತ್ತದೆ. ಹಾಗೂ ನಮ್ಮ ದೇಶದಲ್ಲಿ ಹೂಡಿಕೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಆಧುನಿಕ ಮೂಲಸೌಕರ್ಯ, ವಿದೇಶಿ ಹೂಡಿಕೆಗೆ ಹೊಸ ವಲಯಗಳನ್ನು ಸ್ಥಾಪಿಸಿ  ವಿಶಾಲ ದೃಷ್ಟಿಕೋನದ ಮೂಲಕ ಸರ್ಕಾರ ಮತ್ತು ಕೈಗಾರಿಕೋದ್ಯಮಿಗಳ ನಡುವೆ  ಪಾಲುದಾರಿಕೆಯನ್ನು ಉತ್ತೇಜಿಸುತ್ತದೆ.


 ಉತ್ಪಾದನಾ ವಲಯವು ಕಳೆದ ದಶಕದಲ್ಲಿ ದೇಶದ ಜಿ.ಡಿ.ಪಿ ಗೆ  15% ಗೆ ಕೊಡುಗೆ ನೀಡುತ್ತಿತ್ತು .  ಮೇಕ್ ಇನ್ ಇಂಡಿಯಾ  ಯೋಜನೆ ಪ್ರಕಾರ 2020 ರ ವೇಳೆಗೆ ಈ   ಕೊಡುಗೆಯನ್ನು ಜಿಡಿಪಿಯ 25% ಕ್ಕೆ ಏರಿಸಲು ಗುರಿ ಹೊಂದಲಾಗಿತ್ತು .ಕೋವಿಡ್ ನ ಹಿಂಜರಿತದ ನಡುವೆಯೂ 26% ಗುರಿಮೀರಿದ ಸಾಧನೆ ಮಾಡಿರುವುದು ಭಾರತೀಯರಾದ ನಾವು ಹೆಮ್ಮೆ ಪಡುವ ಸಂಗತಿ.ಮತ್ತು ಮೇಕ್ ಇನ್ ಇಂಡಿಯಾ ಯಶಸ್ಸಿಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು. 


ಮೇಕ್ ಇನ್ ಇಂಡಿಯಾ ಲಾಂಛನವು ಇಂದು ಪ್ರಪಂಚದಾದ್ಯಂತ ಸದ್ದು ಮಾಡುತ್ತಿರುವುದು ಸುಳ್ಳಲ್ಲ. ಇದು

 ಅಶೋಕ ಚಕ್ರದಿಂದ ಸ್ಫೂರ್ತಿ ಪಡೆದ ದೇಹವನ್ನು ಹೊಂದಿರುವ ಸಿಂಹವು ಅಭಿವೃದ್ಧಿಯ  ಸಂಕೇತವಾಗಿದೆ.ಈ  ಲಾಂಛನದಲ್ಲಿ ಚಲಿಸುವ ಸಿಂಹವು  ಶಕ್ತಿಯನ್ನು ಸೂಚಿಸುತ್ತದೆ ಮತ್ತು ಸಿಂಹದ ದೇಹದ ಮೇಲೆ ಚಕ್ರಗಳು ಅಭಿವೃದ್ಧಿ ಮತ್ತು ಪ್ರಗತಿಯನ್ನು ಸೂಚಿಸುತ್ತವೆ.  ಈ ಮಿಷನ್ ಮೂಲಕ, ದೇಶದ ಯುವಕರು ಎದುರಿಸುತ್ತಿರುವ ನಿರುದ್ಯೋಗದ ಮಟ್ಟವನ್ನು ಕಡಿಮೆ ಮಾಡಲು ಸರ್ಕಾರವು ಒಂದು ದೊಡ್ಡ ಹೆಜ್ಜೆಯನ್ನು ಇಟ್ಟಿದೆ ಎಂದು ಹೇಳಬಹುದು.


 ಮೇಕ್ ಇನ್ ಇಂಡಿಯಾ ಪರಿಣಾಮಕಾರಿ ಆಗಲು ಸರ್ಕಾರಗಳು ಹಲವಾರು ಮಾರ್ಗಸೂಚಿಗಳನ್ನು ಹಾಕಿಕೊಂಡಿವೆ.

ಅವುಗಳೆಂದರೆ


 1 ಕಂಪನಿಗಳನ್ನು ಸ್ಥಾಪಿಸಲು ಅನಗತ್ಯ ಅಡತಡೆ ನಿವಾರಿಸಿ  ಅಗತ್ಯವಿರುವ ಕಾಗದಪತ್ರಗಳನ್ನು ಕಡಿಮೆ ಮಾಡಿ ತ್ವರಿತಗತಿಯಲ್ಲಿ ಅನುಮತಿ ನೀಡಲಾಗುತ್ತಿದೆ.


 2 ಸರ್ಕಾರಗಳು ಕೈಗಾರಿಕೆಗಳಿಗೆ  ಅನುಮೋದನೆ ನೀಡುವಾಗ ಅನಗತ್ಯ ವಿಳಂಬವನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿವೆ. 


3 ದೇಶದಲ್ಲಿ ಎಲ್ಲಿಯಾದರೂ ಉದ್ಯೋಗಗಳನ್ನು ಬದಲಾಯಿಸುವಾಗ ಅನುಕೂಲಕರವಾದ ಹಣ ವರ್ಗಾವಣೆಗೆ ನೀತಿಗಳನ್ನು ಮಾಡಲಾಗಿದೆ.  

4 ವೆಬ್ ಪೋರ್ಟಲ್ ಮೂಲಕ ವ್ಯಾಪಾರ ಘಟಕಗಳು, ಉದ್ಯಮಿಗಳ  ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮತ್ತು ಸಮಸ್ಯೆಗಳನ್ನು ಬಗೆಹರಿಸಲು ವಿಶೇಷವಾದ ಆನ್ಲೈನ್ ವ್ಯವಸ್ಥೆ ಮಾಡಿವೆ . 


 ಮೇಕ್ ಇನ್ ಇಂಡಿಯಾ ಮಿಷನ್ ಅಡಿಯಲ್ಲಿ  ಹಲವಾರು ವಲಯಗಳನ್ನು  ಗುರುತಿಸಲಾಗಿದೆ. 

 ಈ ಮಿಷನ್ ಅಡಿಯಲ್ಲಿ ಗುರುತಿಸಲಾಗಿರುವ ಇಪ್ಪತ್ತೈದು ವಲಯಗಳಿವೆ.  ಅವುಗಳಲ್ಲಿ ಆಟೋಮೊಬೈಲ್, ಆಟೋಮೊಬೈಲ್ ಭಾಗಗಳು, ವಾಯುಯಾನ, ಜೈವಿಕ ತಂತ್ರಜ್ಞಾನ, ರಾಸಾಯನಿಕಗಳು, ನಿರ್ಮಾಣ, ರಕ್ಷಣಾ ಉತ್ಪಾದನೆ, ವಿದ್ಯುತ್ ಯಂತ್ರಗಳು, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ಸಂಸ್ಕರಣೆ, ಐಟಿ ಮತ್ತು ಬಿಪಿಎಂ, ಚರ್ಮ, ಮನರಂಜನೆ ಮತ್ತು ಮಾಧ್ಯಮ, ಗಣಿಗಾರಿಕೆ, ತೈಲ ಮತ್ತು ಅನಿಲ, ಔಷಧೀಯ ಉದ್ಯಮ  , ಹಡಗು, ರೈಲ್ವೇ, ನವೀಕರಿಸಬಹುದಾದ ಶಕ್ತಿ, ರಸ್ತೆಗಳು ಮತ್ತು ಹೆದ್ದಾರಿಗಳು,  ಬಟ್ಟೆ ಮತ್ತು ಉಡುಪುಗಳು, ಉಷ್ಣ ವಿದ್ಯುತ್, ಪ್ರವಾಸೋದ್ಯಮ ಮತ್ತು ಆತಿಥ್ಯ, ಮುಂತಾದವು ಪ್ರಮುಖವಾಗಿವೆ.



  ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ  ಪ್ರಯೋಜನಗಳು 


 1 ಭಾರತದಲ್ಲಿ ಕಾರ್ಮಿಕ ಮತ್ತು ನೈಸರ್ಗಿಕ ಸಂಪನ್ಮೂಲಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ ಮತ್ತು ಇದು ಪ್ರಪಂಚದಲ್ಲಿ ಹೆಚ್ಚು ಉತ್ಪಾದನೆ ಮಾಡುವ ಕೆಲವೇ  ದೇಶಗಳಲ್ಲಿ ಒಂದಾಗಿದೆ.ಈ ಅಭಿಯಾನದ ಮೂಲಕ ಬೃಹತ್ ಜನಸಂಖ್ಯೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಲು ಮೇಕ್ ಇನ್ ಇಂಡಿಯಾ ಸಹಕಾರಿಯಾಗಿದೆ.


 2 ಪ್ರಥಮ ವಲಯ ಮತ್ತು  ಉತ್ಪಾದನಾ ವಲಯಗಳು ವ್ಯಾಪಾರ ವಲಯವನ್ನು ಹೆಚ್ಚಿಸುವುದಲ್ಲದೆ ಭಾರತೀಯ ಆರ್ಥಿಕತೆಯ ಜಿ.ಡಿ.ಪಿಯನ್ನು ಹೆಚ್ಚಿಸುವಲ್ಲಿ ಈ ಅಭಿಯಾನ ಪ್ರಮುಖ ಪಾತ್ರ ವಹಿಸುತ್ತದೆ.

3  ದೇಶದಲ್ಲಿ  ಹೆಚ್ಚಿನ  ಕಾರ್ಖಾನೆಗಳನ್ನು ತೆರೆಯುವುದರ ಮೂಲಕ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.


ಇಂತಹ ಮಹೋನ್ನತ ಉದ್ದೇಶ ಇಟ್ಟುಕೊಂಡ ಮೇಕ್ ಇನ್ ಇಂಡಿಯಾ  ಗಮನಾರ್ಹ ಸಾಧನೆ ಮಾಡಿದ್ದರೂ 

 ಕಠಿಣ ಕಾರ್ಮಿಕ ಕಾನೂನುಗಳು, ದೊಡ್ಡ ಯೋಜನೆಗಳಿಗೆ ಪರಿಸರ ಅನುಮತಿ ನೀಡುವಲ್ಲಿ ವಿಳಂಬ, ಕಳಪೆ ತಂತ್ರಜ್ಞಾನ ಮತ್ತು ಸಾರಿಗೆ ವ್ಯವಸ್ಥೆಯಂತಹ ಹಲವಾರು ಸವಾಲುಗಳನ್ನು ಮೇಕ್ ಇನ್ ಇಂಡಿಯಾ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಗಳಿಸಲು ಅಡತಡೆಯಾಗಿವೆ .



 ಉತ್ಪಾದನೆಯ ಹೆಚ್ಚಳವು ಯಾವುದೇ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಗೆ ಕಾರಣವಾಗುತ್ತದೆ. ಎಂದು ಮನಗಂಡು ಆರಂಭಿಸಿದ  ಮೇಕ್ ಇನ್ ಇಂಡಿಯಾ ಅಭಿಯಾನವು ವಿಶ್ವದ ಗಮನ ಸೆಳೆದಿದೆ.ಈ ಅಭಿಯಾನವು ಅನೇಕ ಸಣ್ಣ ಉದ್ಯಮಿಗಳಿಗೆ ಬೆಳೆಯಲು ಮತ್ತು ದೊಡ್ಡ ಜನಸಂಖ್ಯೆಗೆ ಉದ್ಯೋಗವನ್ನು ಒದಗಿಸುತ್ತಿದೆ. ವಿದೇಶಿ ಕಂಪನಿಗಳಿಂದ ಬರುವ ಹೂಡಿಕೆಯೊಂದಿಗೆ ಮತ್ತು ಉತ್ಪಾದನಾ ವಲಯದ ಬೆಳವಣಿಗೆಯ ಮೂಲಕ ನಮ್ಮ ದೇಶವು ಆರ್ಥಿಕವಾಗಿ ಸಬಲವಾಗಿ ವಿಶ್ವದ ಸದೃಢ ಆರ್ಥಿಕತೆ ಹೊಂದಿದ ದೇಶಗಳ ಸಾಲಿನಲ್ಲಿ ನಮ್ಮ ದೇಶ ನಿಲ್ಲುವುದರಲ್ಲಿ ಸಂದೇಹವಿಲ್ಲ.


 ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

No comments: