06 October 2021

ವಕೀಲರೊಬ್ಬರ ವಗೈರೆಗಳು .ಪುಸ್ತಕ ವಿಮರ್ಶೆ. Vakeelarobbara vagairegalu . book reveiw

 

ವಕೀಲರೊಬ್ವರ ವಗೈರೆಗಳು .
ವಿಮರ್ಶೆ

 
ಆತ್ಮೀಯರು, ಲೇಖಕರು, ಕವಿಗಳು ಪ್ರಕಾಶಕರು ಆದ ಎಂ ವಿ ಶಂಕರಾನಂದ ರವರು , ಸಿ ಹೆಚ್ ಹನುಮಂತರಾಯ ರವರು ಬರೆದ " ವಕೀಲರೊಬ್ಬರ ವಗೈರೆಗಳು"   ಪುಸ್ತಕ ನೀಡಿ ಇದನ್ನು ಓದಿ ಸರ್ ಚೆನ್ನಾಗಿದೆ ಎಂದರು
ಬರೋಬ್ಬರಿ 655 ಪುಟಗಳ ಪುಸ್ತಕ ನೋಡಿದಾಗ ಇದನ್ನು ಎಷ್ಟು ದಿನ ಓದಬೇಕು? ಶಿಕ್ಷಕನಾದ ನನಗೆ ವಕೀಲರ ವಗೈರೆಗಳು ಬೇಕೆ? ಎಂದು ಶಂಕರಾನಂದ ಅವರ ಕಡೆ ನೋಟ ಬೀರಿದಾಗ , ನನ್ನ ಮನದ ಪ್ರಶ್ನೆ ಅರ್ಥ ಮಾಡಿಕೊಂಡ ಅವರು" ಓದಿ ಸಾರ್, ಆಮೇಲೆ ಹೇಳಿ" ಅಂದರು .
ಅವರು ಹೇಳಿದಂತೆ ಓದಲು ಶುರು ಮಾಡಿದೆ. ಮುಗಿಯುವವರೆಗೆ ನಿಲ್ಲಿಸಲಿಲ್ಲ. ಮತ್ತೊಮ್ಮೆ ಓದುವ ಮನಸಾಗಿದೆ. ಜೊತೆಗೆ ನಾನೇ ಶಿಕ್ಷಕರೊಬ್ಬರ ಸುವಿಚಾರಗಳು ಎಂಬ ಪುಸ್ತಕ ಬರೆಯಲು ಯೋಚಿಸಿರುವೆ.

ನಾಡಿನ ಪ್ರಖ್ಯಾತ ನ್ಯಾಯವಾದಿಗಳಾದ ಸಿ ಹೆಚ್ ಹನುಮಂತರಾಯ ರವರು ಬರೆದ ಈ ಕೃತಿ ಮೂರು ಮುದ್ರಣ ಕಂಡಿರುವುದು ಆ ಪುಸ್ತಕದ ಗುಣಮಟ್ಟ ಮತ್ತು ಬೇಡಿಕೆಯನ್ನು ಸೂಚಿಸುತ್ತದೆ.

ನೂರು ಅಧ್ಯಾಯಗಳನ್ನು ಒಳಗೊಂಡ  ಈ ಪುಸ್ತಕದಲ್ಲಿ ಪ್ರತಿಯೊಂದು ಅಧ್ಯಾಯ ಒಂದಕ್ಕಿಂತ ಒಂದು  ವಿಭಿನ್ನ .ಬಾಲ್ಯದ ಹಳ್ಳಿಯ ಜೀವನ , ಶಿಕ್ಷಣ, ಗ್ರಾಮೀಣ ಬದುಕು, ವಕೀಲಿ ವೃತ್ತಿ ಮತ್ತು ಜೀವನದ ಅನುಭವಗಳನ್ನು ಬಹಳ ರಸವತ್ತಾದ ಭಾಷೆ ಬಳಸಿ ನಮಗೆ ಉಣಬಡಿಸಿದ್ದಾರೆ .

ಅವರ ಬಾಲ್ಯದಿಂದ ಇಂದಿನವರೆಗೆ ಕಂಡುಂಡ ಜೀವನದ ಚಿತ್ರಿಕೆಗಳನ್ನು
ಇಡೀ ಪುಸ್ತಕದಲ್ಲಿ ನೀವು ಓದಿಯೇ ಸವಿಯಬೇಕು .
ನನಗೆ ವೈಯಕ್ತಿಕವಾಗಿ ಬಹಳ ಇಷ್ಟ ಆದ ಕೆಲ ಸಂಗತಿಗಳ ಬಗ್ಗೆ ಪ್ರಸ್ತಾಪ ಮಾಡುವೆ .
ಒಂಭತ್ತನೆಯ ಅಧ್ಯಾಯ ದಲ್ಲಿ ದೊಡ್ಡಬಳ್ಳಾಪುರ ಸುತ್ತಲಿನ ಚಿತ್ರಣ ನೀಡಿರುವರು.
ರುದ್ರರಮಣೀಯ ಬೆಟ್ಟದಲ್ಲಿ ಹೆಜ್ಜೇನು ಹೊಳೆ ಎಂಬ ಶೀರ್ಷಿಕೆಯಲ್ಲಿ
ಅವರ ಊರಿನ ಬೆಟ್ಟದ ವರ್ಣನೆ ಮಾಡಿರುವರು .
ಅವರ ಮಾತುಗಳಲ್ಲಿ ಕೇಳುವುದಾದರೆ
"ನಮ್ಮೂರು ಚಿಕ್ಕ ಬೆಳವಂಗಲದಿಂದ ಉತ್ತರಕ್ಕೆ ನಾಲ್ಕು ಕಿ.ಮೀ.ಗಳಷ್ಟು ದೂರದಲ್ಲಿ ಹುಲ್ಲುಕಡಿ ಬೆಟ್ಟ ಸಿಗುತ್ತದೆ. ಬಹುಕಾಲದ ಹಿಂದೆ ಮುನಿಯೊಬ್ಬ ಹುಲ್ಲುತಿಂದು ಈ ಬೆಟ್ಟದಲ್ಲಿ ಜೀವಿಸುತ್ತಿದ್ದುದರಿಂದ ಅದಕ್ಕೆ ಆ ಹೆಸರು ಬಂತು ಎನ್ನುವ ಪ್ರತೀತಿ.

ರುದ್ರರಮ್ಯತೆಯಿಂದ ಕೂಡಿದ ಆ ಬೆಟ್ಟವನ್ನು ಹತ್ತಲು ಚಿಕ್ಕಮಕ್ಕಳಿಂದ ಸಾಧ್ಯವಾಗುತ್ತಿರಲಿಲ್ಲ. ಕಡಿದಾದ ಆ ಬೆಟ್ಟವು ನಮ್ಮ ಹಳ್ಳಿಯ ಚಲನವಲನಗಳ ಮೇಲೆ ಸಮ ಕಣ್ಣಿಟ್ಟು ಕಾಯುವ ಕಾವಲುಗಾರನಂತೆ ನಿಂತಿತ್ತು. ಮೇಲುಗಡೆ ವೀರಭದ್ರದೇವರ ಗುಡಿ, ಕಲ್ಲಿನ ಮಂಟಪಗಳು ಮತ್ತು ಪುಷ್ಕರಣಿ ಇದ್ದವು. ಊರಿನ ಜನಕ್ಕೆ ಪಿಕ್ನಿಕ್ ಸ್ಥಳವೂ ಆಗಿತ್ತು. ಪೇಟೆಯ ಜನರಂತೆ ಕೇವಲ ವನಭೋಜನಕ್ಕೆ ಹೋಗುವವರಲ್ಲ ಹಳ್ಳಿಗರು: ದೇವರ ದರ್ಶನ, ಪೂಜೆಗಳನ್ನೂ ಅದರಲ್ಲಿ ಬೆರೆಸಿಕೊಂಡಿರುತ್ತಾರೆ. ಅಂಥ ಪಿಕ್ನಿಕ್ಗಳನ್ನು ದೇವರು ಮಾಡಿ ಬರುವುದೆಂತಲೂ ಕರೆಯುವುದು ರೂಢಿ. ಊರಿನ ಜಂಜಾಟದಿಂದ ದೂರವಾದ ನಿಸರ್ಗಧಾಮದ ವಾತಾವರಣದಲ್ಲಿ ಊಟ, ತಿಂಡಿಗಳಿಗೆ ವಿಶೇಷ ರುಚಿಯುಂಟಾಗಿ ಬಿಡುತ್ತದೆ; ದೇವರ ದರ್ಶನ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ನಮ್ಮೂರಿನವರು ಮೈ ಮನಗಳೆರಡನ್ನೂ ಚೈತನ್ಯಗೊಳಿಸಿಕೊಳ್ಳಲು ಹುಲ್ಲುಕಡಿ ಬೆಟ್ಟಗೆ ನೆಂಟರಿಷ್ಟರು ಮತ್ತು ಸ್ನೇಹಿತರೊಡಗೂಡಿ ಹೋಗುತ್ತಿದ್ದರು."
ಇಂತಹ ವಿವರಣೆ ಓದಿದ ಮೇಲೆ ನಮಗೆ ವಕೀಲರಲ್ಲಿ ಒರ್ವ ಸಾಹಿತಿ ಅಡಗಿರುವುದು ಸ್ಪಷ್ಟವಾಗುತ್ತದೆ .ಏಕೆಂದರೆ ಅವರು ಕೇವಲ ಎಲ್ ಎಲ್ ಬಿ ಮಾಡಿದ ಲಾಯರ್ ಅಲ್ಲ ಆಂಗ್ಲ ಎಂ ಎ ಮಾಡಿದ ನೂರಾರು ಆಂಗ್ಲ ಪುಸ್ತಕ ಓದಿದ ಸಹೃದಯರು.

ಸ್ವಾತಂತ್ರ್ಯ ಬಂದ ನಂತರದ ಎಷ್ಟೋ ವರ್ಷಗಳ ಕಳೆದರೂ ಸತಿ ಸಹಗಮನ ರಾಜಸ್ಥಾನ ಸಹಿತ ಹಲವಾರು ರಾಜ್ಯದಲ್ಲಿ ಜೀವಂತವಿರುವುದು ದುರದೃಷ್ಟಕರ. ಮಹಿಳೆಯರ ಅಮಾನವೀಯ ಮಾರಣಹೋಮದ ಬಗ್ಗೆ ಬಿಹಾರದ ಸಂಪತಿರಾವ್ ಕೇಸ್,ಅಹುಜಾ ಕೊಲೆ ಕೇಸ್ ,ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತಾ ಮೂಢನಂಬಿಕೆಗಳು ಹೇಗೆ ಮಹಿಳೆಯರ ಜೀವನವನ್ನು ದುರ್ಭರಗೊಳಿಸಿವೆ ಎಂಬುದರ ವಿವರಣೆಯನ್ನು ಲೇಖಕರು ಚೆನ್ನಾಗಿ ನೀಡಿರುವರು.

"ರಾವಣನೊಂದಿಗೆ ಹನುಮಂತನ ಟಿಫನ್ "ಎಂಬ ಅಧ್ಯಾಯ ಕವಿಗಳು, ಪತ್ರಕರ್ತರು ಆದ   ದಿವಂಗತ  ಲಂಕೇಶ್ ಮತ್ತು ಲೇಖಕರ ಸಂಬಂಧವನ್ನು ಗಟ್ಟಿ ಗೊಳಿಸಿದ ಅನೇಕ ಪ್ರಸಂಗಗಳನ್ನು  ಹನುಮಂತರಾಯ ರವರು ಬಹಳ ರಸವತ್ತಾಗಿ ವಿವರಣೆ ನೀಡಿದ್ದಾರೆ.

ಕನ್ನಡ ಮಾದ್ಯಮದಿಂದ ಬಂದ ವಿದ್ಯಾರ್ಥಿಗಳು ಪದವಿಯಲ್ಲಿ ಇಂಗ್ಲಿಷ್ ಓದುವಾಗ ಅನುಭವಿಸುವ ಅವಮಾನ ,ಭಯ, ತಾಕಲಾಟ ,ಸಹಪಾಠಿಗಳ ಕೀಟಲೆಗಳ ಬಗ್ಗೆ ಲೇಖಕರು ತಮ್ಮ ಪುಸ್ತಕದಲ್ಲಿ ದಾಖಲಿಸಿರುವರು  ಇವುಗಳನ್ನು  ಎದುರಿಸಲು ಲಂಕೇಶ್ ರವರು ಪ್ರಾಧ್ಯಾಪಕರಾಗಿ, ಮಾರ್ಗದರ್ಶಕರಾಗಿ ಹೇಗೆ ಬೆಂಬಲ ನೀಡಿದರು ಎಂಬುದನ್ನು ಸ್ಮರಣೆ ಮಾಡಿದ್ದಾರೆ.

ಈ ಪುಸ್ತಕ ಕುರಿತು ಡಾ .ಸಿದ್ದಲಿಂಗಯ್ಯ ರವರ ಹೀಗೆ ಮೆಚ್ಚುಗೆ ವ್ಯಕ್ತ ಪಡಿಸಿರುವರು.
"ಕನ್ನಡ ಸಾಹಿತ್ಯ  ರಚನೆ ಕೇವಲ ಕನ್ನಡ, ಆಂಗ್ಲ ಅಧ್ಯಾಪಕರಿಗೆ ಸೀಮಿತ ಎಂಬುದನ್ನು ಸುಳ್ಳುಮಾಡುವಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ಮಹನೀಯರು ಇತ್ತೀಚಿನ ದಿನಗಳಲ್ಲಿ ಕನ್ನಡ - ಕ್ಷೇತ್ರವನ್ನು ಪ್ರವೇಶಿಸುತ್ತಿರುವುದು ಅಭಿನಂದನಾರ್ಹ. ಕಂದಾಯ, ಪೊಲೀಸ್, ವೈದ್ಯಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕೆಲವರಾದರೂ ತಮ್ಮ ಜೀವನದಲ್ಲಿ ಅನುಭವಿಸಿದ  ಅನುಭವಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಕಾನೂನಿನ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಕಾನೂನಿಗೆ ಸಂಬಂಧಪಟ್ಟ ಅನೇಕ ಲೇಖನಗಳು, ಕೃತಿಗಳನ್ನು ಹೊರತಂದಿದ್ದರೂ ಈ  ಕ್ಷೇತ್ರದಲ್ಲಿನ ಸ್ವಂತ ಅನುಭವಗಳು ವಿರಳವೆನ್ನಬಹುದು. ಈ ದಿಶೆಯಲ್ಲಿ ಸಿ.ಹಚ್. ಹನುಮಂತರಾಯ ರವರ  ಪ್ರಯತ್ನ ಗಮನಾರ್ಹವಾದದ್ದು. "

ವಕೀಲರೊಬ್ವರ ವಗೈರೆ ಓದಿದ ಮೇಲೆ
ಕನ್ನಡ ಸಾಹಿತ್ಯದ  ಒಂದು ಅಪರೂಪದ ಕೃತಿಯನ್ನು ಓದಿದ ಸಂತೊಷ ಉಂಟಾದದ್ದು ಸುಳ್ಳಲ್ಲ  . ತಮ್ಮ ವಿಸ್ತಾರವಾದ ವೃತ್ತಿ ಜೀವನದಲ್ಲಿ  ಲೇಖಕರು ನೋಡಿದ, ಅನುಭವಿಸಿದ ಅನೇಕ ಸಂಗತಿಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕೆಲ ಅಧ್ಯಾಯ ಓದುವಾಗ ಇದೇ ತರಹದ ಘಟನೆಗಳು ನಮ್ಮ ಜೀವನದಲ್ಲೂ ನಡೆದಿರುವುದು ನೆನಪಾಗುತ್ತದೆ.ಇಂತಹ ಪುಸ್ತಕ ಬರೆದ ಸಿ ಹೆಚ್ ಹನುಮಂತರಾಯ ರವರಿಗೂ .ಓದಲು ಪ್ರೇರೇಪಿಸಿದ  ಎಂ ವಿ ಶಂಕರಾನಂದ ರವರಿಗೂ ಧನ್ಯವಾದಗಳು. ನೀವು ಒಮ್ಮೆ ಈ ವಕೀಲರ ವಗೈರೆ ಓದಿ ಬಿಡಿ.

ಪುಸ್ತಕ ಹೆಸರು: ವಕೀಲರೊಬ್ವರ ವಗೈರೆಗಳು.
ಲೇಖಕರು: ಸಿ ಹೆಚ್ ಹನುಮಂತರಾಯ
ಬೆಲೆ: ೫೫೦
ಪುಟ :೬೫೫
ಪ್ರಕಾಶನ:ಸಪ್ನಾ ಬುಕ್ ಹೌಸ್

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


No comments: