06 October 2021

ಕಥೆಯಲ್ಲದ ಕಥೆ .ಪುಸ್ತಕ ವಿಮರ್ಶೆ.


 


ಕಥೆಯಲ್ಲದ ಕಥೆ .

ವಿಮರ್ಶೆ .


ಹಳ್ಳಿಯ ಜನಜೀವನ, ಗ್ರಾಮೀಣ ಸೊಗಡು, ಯುವ ಮನಸ್ಸುಗಳ ತಲ್ಲಣ ಹೀಗೆ ವಿವಿದ  ವೈವಿಧ್ಯಮಯ ಕಥಾ  ವಿಷಯಗಳನ್ನು ಒಳಗೊಂಡ "ಕಥೆಯಲ್ಲದ ಕಥೆ " ಸಂಕಲನದ  ಕಥೆಗಳನ್ನು ಓದುವಾಗ ವಿ ಎಲ್ ಪ್ರಕಾಶ್ ರವರ ಕಥನ ಕೌಶಲ್ಯ ನಮ್ಮ ಗಮನ ಸೆಳೆಯುತ್ತದೆ. 


ಕಥೆಯಲ್ಲದ ಕಥೆ ಯ ಕಥಾ ಸಂಕಲನದ ರುವಾರಿಯಾದ 

ವಿ .ಎಲ್.ಪ್ರಕಾಶ್ ರವರು  ಹಲವು ವರ್ಷಗಳ ಕಾಲ  ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆಗಳಲ್ಲದೆ ಅವರ ಬರಹದ ವ್ಯಾಪ್ತಿ ಹಣಕಾಸು, ವಿಜ್ಞಾನ, ಕಂಪ್ಯೂಟರ್ ತಂತ್ರಜ್ಞಾನ, ಚಲನಚಿತ್ರ , ಇ ಬುಕ್ , ಆಪ್ ಅಭಿವೃದ್ಧಿ ಹೀಗೆ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿದೆ.


ಒಂದೇ ಸಿಟ್ಟಿಂಗ್ ನಲ್ಲಿ ಕುಳಿತು ಓದಿದ ಈ ಪುಸ್ತಕದಲ್ಲಿ ಇರುವ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಹನ್ನೆರಡೂ  ಕಥೆಗಳು ಬಹಳ   ಸುಂದರವಾಗಿವೆ . 

ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಪತ್ರಕರ್ತರು ಮತ್ತು ಲೇಖಕರಾದ ಕೆ ವೆಂಕಟೇಶ್ ರವರ ಮಾತಿನಲ್ಲೇ ಹೇಳುವುದಾದರೆ 

"ನೆನಪು ಮತ್ತು ವರ್ತಮಾನದ ಎರಡು ಪಾತಳಿಗಳಲ್ಲಿ ಇಲ್ಲಿನ ಕಥಾವಸ್ತುಗಳು ಮೈದಾಳುತ್ತವೆ. ನೆನಪನ್ನು ಕೆದಕುವ ಕತೆಗಳಾದ ಸಿದ್ದ ಹಾಗೂ ಹೊಳೆಯುವ ಜೀರ್ ಜಿಂಬೆ', 'ಬ್ಳೋಕರ್ ರಾಮಣ್ಣ' 'ಕತೆ ಬಿಟ್ಟು ಹೋದ ಕತೆಗಾರ ಕತೆಗಳು ತಮ್ಮ ಸಜೀವ ವಿವರಗಳಿಂದ ಮನಸ್ಸು ಮುಟ್ಟುತ್ತವೆ. ಬೆರಗು, ಮುಗ್ಧತೆಯಲ್ಲೇ ವಿರಮಿಸದೆ, ಬದುಕಿನ  ಸತ್ಯಗಳಿಗೂ ಮುಖಾಮುಖಿಯಾಗುತ್ತವೆ. ಎಲ್ಲರಿಗೂ ಬೇಕಾದ, ಊರಿಗೆ ಚೈತನ್ಯವನ್ನು ಹಂಚುವಷ್ಟು ಬಲವುಳ್ಳ 'ಬ್ರೋಕರ್ ರಾಮಣ್ಣ' ಗುಜರಿ ಮಗ್ಗದಂತೆ ಆಗಿಬಿಡುತ್ತಾನೆ. ಕೈಗಾರಿಕೀಕೃತ ಸಮಾಜದ ತಣ್ಣನೆಯ ಕ್ರೌರ್ಯ ಈ ಕತೆಯಲ್ಲಿ ಯಾವುದೋ ಘೋಷಣೆ, ತತ್ವಗಳ ಭಾರವಿಲ್ಲದೆ ಒಡಮೂಡಿದೆ. ಸಂಗದಲ್ಲಿದ್ದರೂ ನಿಸ್ಸಂಗ, ಊರೊಳಗಿದ್ದರೂ, ಒಂಟಿ ಪ್ರಾಥಮಿಕ ಸಂಬಂಧಗಳು ಕುಟ್ಟೆ ಹಿಡಿದಿರುವ ಸ್ಥಿತಿಯನ್ನು ಈ ಕತೆ ಮಾರ್ಮಿಕವಾಗಿ ಕಟ್ಟಿಕೊಡುತ್ತದೆ".


ಮೊದಲನೇ ಕಥೆಯನ್ನು ನಾನು ಓದುವಾಗ ನನ್ನ ಬಾಲ್ಯ ನೆನಪಾಗುತ್ತದೆ ನಾನೇ ಸಿದ್ದ ಎಂಬ ಭಾವನೆ ಮೂಡಿತು .ಆ ಕಾಲದಲ್ಲಿ ನಿಸರ್ಗದಲ್ಲಿ ಸಿಗುವ ಜೀವಿಗಳು ವಸ್ತುಗಳ ಜೊತೆಯಲ್ಲಿ ಆಟ ಮನರಂಜನೆ ಸಿಗುತ್ತಿತ್ತು ಆದರೆ ಈಗಿನ  ಮೊಬೈಲ್, ಗೇಮ್ ಇಂಟರ್ ನೆಟ್ ಮಕ್ಕಳು ಇಂತಹ ಪರಿಸರದ ಜೊತೆಗಿನ ಸಂಬಂಧ ಅವರಿಗೆ ಲಭ್ಯವಾಗಿಲ್ಲ ಎನ್ನಬಹುದು. ಬ್ಳೋಕರ್ ರಾಮಣ್ಣ ಕಥೆಯನ್ನು ಲೇಖಕರು  ಬಹಳ. ಚೆಂದವಾಗಿ ನಿರೂಪಿಸಿದ್ದಾರೆ. ಇಡೀ ಊರಿನ ಜನರಿಗೆ  ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವ ಗುಣವುಳ್ಳ ಅವನು ಕೊನೆಯಲ್ಲಿ ಹೇಗೆ ಅಪ್ರಸ್ತುತನಾಗುತ್ತಾನೆ ಎಂಬುದು ಆಧುನಿಕ ಸಮಾಜಕ್ಕೆ ಹಿಡಿದ ಕನ್ನಡಿ ಎನ್ನಬಹುದು.


ಮಿನಿಮಮ್ ಬ್ಯಾಲೆನ್ಸ್ ಶುಲ್ಕ, ಏ.ಟಿ ಎಮ್ ಶುಲ್ಕ, ಪಾಸ್ಬುಕ್ ಶುಲ್ಕ, ಚೆಕ್ ಬುಕ್ ಶುಲ್ಕ ಹೀಗೆ ಅನವಶ್ಯಕವಾಗಿ ಶುಲ್ಕವನ್ನು ಹೇರುತ್ತಾ 

ಬ್ಯಾಂಕುಗಳು ಹೇಗೆ ಜಿಗಣಿಯಂತೆ ನಮ್ಮ ಮೇಲೆ ಅನವಶ್ಯಕವಾಗಿ ಶುಲ್ಕ ವಿಧಿಸಿ ಕ್ರಮೇಣವಾಗಿ ನಮ್ಮ ಹಣವನ್ನು  ಹೇಗೆ ಕೊಳ್ಳೆ ಹೊಡೆಯುತ್ತವೆ ಎಂಬುದನ್ನು ವೃದ್ದೆ ಗ್ಯಾಸ್ ಸಬ್ಸಿಡಿ ಪಡೆಯಲು ಆರಂಭಿಸಿದ ಅಕೌಂಟ್ ನ್ನು ಕೊನೆಗೆ ಬೇಸತದಿಂದ  ಕ್ಲೋಸ್ ಮಾಡಿಸಿದ ಪ್ರಸಂಗದ ಕಥೆ ಮನಕಲಕುತ್ತದೆ. ಇದು ಇಂದಿನ ಬ್ಯಾಂಕುಗಳ ಅರ್ಥಿಕ ಶೋಷಣೆ ಪ್ರತಿಬಿಂಬ ಎನ್ನಬಹುದು.


ಹೀಗೆ ಪ್ರಕಾಶ್ ರವರ ಈ ಕಥಾ ಸಂಕಲನದ ಪ್ರತಿಯೊಂದು ಕಥೆಗಳು ಸಮಾಜದ ಓರೆ ಕೋರೆಗಳ ಕುರಿತಾಗಿವೆ .ಈ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ ಕೆಲವೊಮ್ಮೆ ಇದು ನನ್ನದೇ ಕಥೆ ಎಂಬ ಭಾವ ಮೂಡಿಸುತ್ತವೆ .ಇವರ ಲೇಖನಿಯಿಂದ ಇನ್ನೂ ಹೆಚ್ಚಿನ ಸಾಹಿತ್ಯ ಸೃಷ್ಟಿಯಾಗಲಿ ಓದುವ ಸೌಭಾಗ್ಯ ನಮ್ಮದಾಗಲಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


No comments: