07 October 2021

ಕೊರೋನ ವೈರಸ್ .ಪ್ರಬಂಧ .Corona virus .essay.


 



  ಕೊರೊನಾವೈರಸ್ 

ಪ್ರಬಂಧ


ಪ್ಲೇಗ್ ನಂತಹ ರೋಗದಿಂದ ವಿಶ್ವದ ಕೆಲ ರಾಷ್ಟ್ರಗಳ ಲಕ್ಷಾಂತರ ಜನ ಮರಣ ಹೊಂದಿದ ಬಗ್ಗೆ ಕೇಳಿದ್ದೆವು .ಈಗ ಕರೋನ ಎಂಬ ರೋಗ ಇಡೀ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಹರಡಿ ಕೋಟ್ಯಂತರ ಜನರ ಜೀವ ತೆಗೆದು ಹಲವರ ಜೀವನವನ್ನು ಕಷ್ಟಗಳ ಕೂಪಕ್ಕೆ ತಳ್ಳಿರುವುದನ್ನು ನಾವು ಈಗಲೂ ನೋಡುತ್ತಿದ್ದೇವೆ.


ಸಾಮಾನ್ಯವಾಗಿ ಕೊರೋನಾ ವೈರಸ್ ಅಥವಾ  ಕೋವಿಡ್ -19 ಎಂದು ಕರೆಯಲ್ಪಡುವ ಕರೋನಾ ವೈರಸ್ ಮಾನವರಲ್ಲಿ ಉಸಿರಾಟದ ವ್ಯವಸ್ಥೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿ  ಅನಾರೋಗ್ಯವನ್ನು ಉಂಟುಮಾಡುವ ಸಾಂಕ್ರಾಮಿಕ ರೋಗವಾಗಿದೆ.  ಕೋವಿಡ್ 19 ಎಂಬ ಪದವು "ನಾವೆಲ್ ಕೊರೊನಾ ವೈರಸ್  2019" ದಿಂದ ಪಡೆದ ಒಂದು ಸಂಕ್ಷಿಪ್ತ ರೂಪವಾಗಿದೆ.  ಕೊರೊನಾ ವೈರಸ್ ನಮ್ಮ ದೈನಂದಿನ ಜೀವನದ ಮೇಲೆ ಬಹಳ ದುಷ್ಪರಿಣಾಮಗಳನ್ನು ಉಂಟುಮಾಡಿದೆ. ಈ ರೋಗದ ಪರಿಣಾಮವಾಗಿ ಪ್ರಪಂಚದಲ್ಲಿ ಆದ ಸಾವು ನೋವುಗಳು ಅಪಾರ  . ಇದರ ತೀವ್ರತೆ ಈಗ ಸ್ವಲ್ಪ ಕಡಿಮೆಯಾಗಿದೆ  ಬಹಳಷ್ಟು ಜನ ಈಗಲೂ ಈ ರೋಗದಿಂದ ಬಳಲುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮತ್ತು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.



 ಕೊರೊನಾ ವೈರಸ್  ಪ್ರಪಂಚದ ಎಲ್ಲ ದೇಶಗಳ  ಆರ್ಥಿಕ ಮತ್ತು ಸಾಮಾಜಿಕ ಜೀವನದ  ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ . ಇದು ಪ್ರಾಥಮಿಕವಾಗಿ ವ್ಯಕ್ತಿಯ ಸಂಪರ್ಕದ ಮೂಲಕ ಹರಡುತ್ತಿದೆ. ಮೊದಲಿಗೆ  ಇದು 6 ಅಡಿ ಒಳಗೆ ನಿಕಟ ಸಂಪರ್ಕದಲ್ಲಿರುವವರಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದು ದೃಢಪಟ್ಟಿತ್ತು ,ಕ್ರಮೇಣವಾಗಿ ಹತ್ತು ಅಡಿಗಳ ವರೆಗೆ ಹರಡಬಹುದು ಎಂದು ಹೇಳಲಾಗುತ್ತದೆ.  


ಕರೋನದ ಮೂಲ ಯಾವುದು?


ಕೊರೊನಾವೈರಸ್ ನ  ಮೂಲದ ಬಗ್ಗೆ ಈಗಲೂ ವಾದ ವಿವಾದಗಳು ಹಬ್ಬುತ್ತಿವೆ .

 ಕೊರೊನಾವೈರಸ್ ( COVID-19) ಅನ್ನು ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್ 2019 ರಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು. ಹಾಗಾಗಿ ಚೀನಾ ದೇಶದಲ್ಲಿ ಕೊರೊನ ಉಗಮವಾಗಿದೆ ಈ ವೈರಸ್ ಸೃಷ್ಟಿಕರ್ತ ಚೀನಾ  ಎಂದು ಜಗತ್ತಿನ ಬಹುತೇಕ ರಾಷ್ಟ್ರಗಳು ಆಪಾದನೆ ಮಾಡಿವೆ .ಆದರೆ ಚೀನಾ ಈ ಆಪಾದನೆಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿದೆ.

 ಮಾರ್ಚ್ 2020 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕರೋನಾ ವೈರಸ್ ನ್ನು  ವಿಶ್ವದ ಸಾಂಕ್ರಾಮಿಕ ಎಂದು ಘೋಷಿಸಿ ಸದಸ್ಯ ದೇಶಗಳು ಅಗತ್ಯ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡಿತು.



 ಕೊರೋನ ದ ಲಕ್ಷಣಗಳೇನು?


 ಕೊರೋನ ಕಾಣಿಸಿಕೊಂಡ ಆರಂಭದ ದಿನಗಳಲ್ಲಿ  

 ಈ ವೈರಲ್ ಸೋಂಕಿನ ಸಾಮಾನ್ಯ ಲಕ್ಷಣಗಳು ಜ್ವರ, ಶೀತ, ಕೆಮ್ಮು, ಮೂಳೆ ನೋವು ಮತ್ತು ಉಸಿರಾಟದ ಸಮಸ್ಯೆಗಳು.ಪ್ರಧಾನ ಲಕ್ಷಣಗಳಾಗಿದ್ದವು. ಇದರ ಜೊತೆಗೆ ಕೊರೊನಾ ವೈರಸ್ ರೋಗಿಗಳಲ್ಲಿ ಸುಸ್ತು, ಗಂಟಲು ನೋವು, ಸ್ನಾಯು ನೋವು, ವಾಸನೆ ಅಥವಾ ರುಚಿಯ ನಷ್ಟದಂತಹ ಲಕ್ಷಣಗಳನ್ನು ಕಾಣಬಹುದಾಗಿತ್ತು.

ಆದರೆ ಕ್ರಮೇಣವಾಗಿ ರೂಪಂತರ ಹೊಂದಿದ ಕರೋನೋ ವೈರಸ್ ,ಡೆಲ್ಟಾ ,ಆಲ್ಪಾ, ಬೀಟಾ ಮುಂತಾದ ರೂಪಾಂತರಿ ವೈರಸ್ ಸೋಂಕಿತರಿಗೆ ಬೇದಿಯಾಗುವುದು ತಲೆಸುತ್ತುವುದು ಮುಂತಾದ ಲಕ್ಷಣಗಳನ್ನು ಕಾಣಬಹುದು. ಕೆಲವೊಮ್ಮೆ ಯಾವುದೇ ಲಕ್ಷಣಗಳು ಇಲ್ಲದ ಕೊರೊನಾ ರೋಗಿಗಳನ್ನು ಸಹ ಕಾಣಬಹುದು.


 ಕೊರೋನ  ತಡೆಗಟ್ಟುವಿಕೆ


ಕೊರೊನಾವೈರಸ್ ವಿರುದ್ಧ ಹೋರಾಡಲು ಈ ಕೆಳಕಂಡ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಂಡು ಪಾಲಿಸಬೇಕು.

 1  ಎಲ್ಲಾ ಕಡೆ   ವ್ಯಾಪಕವಾಗಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು

 2 ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ನಿಯಮಿತವಾಗಿ ಕೈ ತೊಳೆಯುತ್ತಿರಬೇಕು.

3  ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 

4 ಕಡ್ಡಾಯವಾಗಿ ಎಲ್ಲರೂ  ಮಾಸ್ಕ್ ಧರಿಸಬೇಕು.

 5 ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ಗುಂಪುಗೂಡಬಾರದು.

6 ರೋಗ ನಿರೋಧಕ ಶಕ್ತಿಯ ವರ್ಧಿಸುವ ಆಹಾರ ಸೇವಿಸಬೇಕು. 

7 ಸಮಯಕ್ಕೆ ಸರಿಯಾಗಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬೇಕು

ಈ ನಿಟ್ಟಿನಲ್ಲಿ

 ಕೊರೊನಾ ವೈರಸ್ ನಿಂದಾಗಿ, ಪ್ರಧಾನ ಮಂತ್ರಿಗಳಾದ  ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು 23 ಮಾರ್ಚ್ 2020 ರಂದು 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದರು. ಇದರ ಜೊತೆಯಲ್ಲಿ ಕೊರೊನಾವೈರಸ್ ನ  ಎರಡನೇ ಅಲೆ ಬಂದಾಗ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಆಡಳಿತಗಳು ಲಾಕ್ಡೌನ್ ಅಥವಾ ಹಲವಾರು ನಿರ್ಬಂಧಗಳನ್ನು ಹೇರಿದವು    ಇದರ ಪರಿಣಾಮವಾಗಿ ವೈರಸ್ ನ ಅಬ್ಬರ ಸ್ವಲ್ಪ ಕಡಿಮೆಯಾಯಿತು.


 ಕೊರೋನ ದ ಪರಿಣಾಮಗಳು


ಕೊರೊನಾವೈರಸ್ ವ್ಯಕ್ತಿ, ರಾಜ್ಯ ,ರಾಷ್ಟ್ರ ,ಮತ್ತು ವಿಶ್ವದ ಮೇಲೆ ಅಲ್ಪಕಾಲೀನ ಮತ್ತು ದೀರ್ಘಕಾಲದ ದುಷ್ಪರಿಣಾಮಗಳನ್ನು ಬೀರಿದ್ದು ನಮಗೆಲ್ಲ ತಿಳಿದಿದೆ.


  ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ವಲಸೆ ಕಾರ್ಮಿಕರು ಬಹು ಕಷ್ಟಗಳನ್ನು ಎದುರಿಸಿದ್ದಾರೆ.  ಲಾಕ್ಡೌನ್ನಿಂದಾಗಿ ಕಾರ್ಖಾನೆಗಳು ಮತ್ತು ಕೆಲಸದ ಸ್ಥಳಗಳನ್ನು ಮುಚ್ಚುವುದರೊಂದಿಗೆ, ಲಕ್ಷಾಂತರ ವಲಸೆ ಕಾರ್ಮಿಕರು ಆದಾಯದ ನಷ್ಟ, ಆಹಾರದ ಕೊರತೆ ಮತ್ತು ಅನಿಶ್ಚಿತತೆಯನ್ನು ಎದುರಿಸಬೇಕಾಯಿತು.


 ಔಷಧ ಉದ್ಯಮ, ವಿದ್ಯುತ್ ವಲಯ, ಶಿಕ್ಷಣ ಸಂಸ್ಥೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಉದ್ಯಮಗಳು ಮತ್ತು ವಲಯಗಳು ಈ ರೋಗದ  ಕಾರಣದಿಂದ ಬಹಳ ನಷ್ಟ ಅನುಭವಿಸಿದವು. ಈ ಕೊರೊನಾವೈರಸ್ ನಾಗರಿಕರ ದೈನಂದಿನ ಜೀವನದ ಮೇಲೆ ಹಾಗೂ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡಿದೆ.


ಕೊರೊನಾ ಸಂಕಷ್ಟ ಕಾಲದಲ್ಲಿ 

 ಎಲ್ಲಾ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಮತ್ತು ಸಾಮಾನ್ಯ ಜನತೆ ಒಟ್ಟಿಗೆ ಸೇರಿ  ಕರೋನವೈರಸ್ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಇದರ ಜೊತೆಯಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೊನಾವೈರಸ್ ವಿರುದ್ಧದ ಲಸಿಕೆ ನೀಡುವ ಅಭಿಯಾನವನ್ನು ಕೈಗೊಂಡಿವೆ .ಈ ಎಲ್ಲಾ ಆಶಾದಾಯಕ ಬೆಳವಣಿಗೆಗಳನ್ನು ನೋಡಿದಾಗ ಶೀಘ್ರದಲ್ಲೇ ಜಗತ್ತು ಕೊರೊನಾ ಮುಕ್ತವಾಗಲಿದೆ ಎನಿಸುತ್ತದೆ. ಅಲ್ಲಿಯವರೆಗೆ ಎಚ್ಚರಿಕೆಯಿಂದ ಇರಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.




 

No comments: