15 October 2021

ಆರೋಗ್ಯಕರ ಜೀವನ ಸುಖೀ ಜೀವನ .ಲೇಖನ .Health is wealth .


 


ರೋಗವೆನ್ನುವುದು ಬಹುತೇಕ ಸ್ವಯಾರ್ಜಿತ ಎನ್ನಬಹುದು . ದೈಹಿಕ ಮತ್ತು ಮಾನಸಿಕವಾದ ರೋಗಗಳು ನಮ್ಮ ಅಜಾಗರೂಕತೆಯಿಂದ, ಅಸಮರ್ಪಕ ಆಹಾರ ಸೇವನೆಯಿಂದ , ದೈಹಿಕ ಶ್ರಮವಿಲ್ಲದ ಜೀವನ ಶೈಲಿಯಿಂದ ನಮ್ಮನ್ನು ಬಾದಿಸುತ್ತವೆ . ಸೂಕ್ತ ಆಹಾರ ಪದ್ಧತಿ, ವ್ಯಾಯಾಮ, ಮಾಡಿದರೆ ಬಹುತೇಕ ರೋಗಗಳು ನಮ್ಮಿಂದ ದೂರ ಸರಿಯುತ್ತವೆ.


ನಿಯಂತ್ರಣವಿಲ್ಲದೇ 

ತಿನ್ನುತ್ತಾ ದೈಹಿಕ ಶ್ರಮ ಪಡದೇ

ಕುಳಿತುಕೊಂಡರೆ ಕುಂತಲ್ಲೇ|

ನಿನ್ನನ್ನೆ ಹುಡುಕಿಕೊಂಡು

ಬರುವುದು ಕಾಯಿಲೆ||


ಇದನ್ನು ಮನಗಂಡು

"ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ" ಎಂದರು ಅನುಭಾವಿಗಳು.

"ಒಂದೊತ್ತು ಉಂಡವ ಯೋಗಿ,ಎರಡೊತ್ತು ಉಂಡವ ಭೋಗಿ, ಮೂರೊತ್ತು ಉಂಡವ ರೋಗಿ ,ನಾಲ್ಕೊತ್ತು ಉಂಡವರ ಹೊತ್ತಕೊಂಡ್ ಹೋಗಿ " ಎಂದರು ಹಿರಿಯರು. 

ಹಾಗಾಗಿ ಉತ್ತಮ ಜೀವನ ಶೈಲಿ ಹಿತಮಿತ ಆಹಾರ ನಮ್ಮದಾಗಬೇಕು.ಇದು ದೈಹಿಕ ರೋಗಗಳಿಂದ ದೂರವಿರುವ ಸುಲಭ ಮಾರ್ಗ.


ದೈಹಿಕ ಆರೋಗ್ಯಕ್ಕಿಂತ ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ . ಅತಿಯಾದ ಆಸೆ, ಸಣ್ಣ ವಿಷಯಗಳ ಕಡೆ ಅತಿಯಾದ ಚಿಂತೆ, ಸೋಲಿಗೆ ಅತಿಯಾದ ನಕಾರಾತ್ಮಕ ಪ್ರತಿಕ್ರಿಯೆ ಮತ್ತು ಚಿಂತೆ, ಮುಂತಾದ ಕಾರಣದಿಂದಾಗಿ ಪ್ರಪಂಚದ ಬಹುತೇಕ ಜನ ಇಂದು ಖಿನ್ನತೆಗೆ ಒಳಗಾಗಿ , ಒತ್ತಡದಿಂದ ಹಲವಾರು ಮಾನಸಿಕ ರೋಗಗಳಿಗೆ ತುತ್ತಾಗಿದ್ದಾರೆ .


ಅತಿಯಾಸೆ, ಒತ್ತಡದಿಂದ 

ಇಂದು ಹಲವರನ್ನು ಕಾಡುತ್ತಿದೆ

ಮನೋರೋಗ|

ಓಡಿಸೋಣ ಈ ರೋಗಗಳ

ಹಾಸಿಗೆ ಇದ್ದಷ್ಟು ಕಾಲುಚಾಚುತ

ಮನಸ್ಸನ್ನು ನಿಯಂತ್ರಣಗೊಳಿಸೋಣ

ಮಾಡುತಲಿ ಧ್ಯಾನ ,ಯೋಗ||


ಮನವೆಂಬ ಮರ್ಕಟವು ನಮ್ಮ ಹಿಡಿತದಲ್ಲಿ ಇರದೇ ಅತಿಯಾಸೆಯಿಂದ ಅಪ್ರಮಾಣಿಕ ಮಾರ್ಗದಲ್ಲಿ ನಮಗೆ ಬೇಕಾದ ವಸ್ತುಗಳನ್ನು ಪಡೆಯಲು ಹಾತೊರೆಯುತ್ತದೆ. ಆ ಆಸೆಗಳು ಈಡೇರದಿದ್ದಾಗ ಅನೈತಿಕ ಮಾರ್ಗ ಹಿಡಿಯುತ್ತೇವೆ ಅದರ ಪರಿಣಾಮವಾಗಿ ಒತ್ತಡ ,ಚಿಂತೆ, ಖಿನ್ನತೆಗಳು ಹಿಂಬಾಲಿಸುತ್ತವೆ .


ಬಹುತೇಕವಾಗಿ ಮಾನಸಿಕ ಅನಾರೋಗ್ಯದಿಂದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದ ಕಾಯಿಲೆಗಳು ಬರುತ್ತಿರುವುದು ನಮಗೆ ತಿಳಿದಿರುವ ಸಂಗತಿಯಾಗಿದೆ.


ಹಾಸಿಗೆ ಇದ್ದಷ್ಟು ಕಾಲು ಚಾಚುತ, ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಇಂದ್ರಿಯ ‌ನಿಗ್ರಹ ಮಾಡಿಕೊಂಡು, ಪರಿಸರದ ಜೊತೆಯಲ್ಲಿ ಸಂಘರ್ಷವೇರ್ಪಡಿಸಿಕೊಳ್ಳದೇ ಯೋಗ ಧ್ಯಾನ ಗಳ ಸಹಾಯದಿಂದ ನಾವು ಮಾನಸಿಕ ಆರೋಗ್ಯ ಹೊಂದಬೇಕಿದೆ.


ಇಂದಿನ ಆಧುನಿಕ ಕಾಲದಲ್ಲಿ ದಿನಕ್ಕೊಂದು ವೈರಸ್ , ನಿಂದ ಹಲವಾರು ಕಾಯಿಲೆಗಳು ನಮ್ಮನ್ನು ಬಾದಿಸಲು ಕಾದಿವೆ . ಅದಕ್ಕೆ ಸೂಕ್ತವಾದ ಆಹಾರ ಸೇವಿಸಿ, ಚಟುವಟಿಕೆಯ ಜೀವನ ಶೈಲಿಯನ್ನು ಅಳವಡಿಸಿಕೊಂಡು ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡರೆ , ಯೋಗ ಧ್ಯಾನಗಳ ಮೂಲಕ ನಮ್ಮ ಮನಸ್ಸನ್ನು ನಿಗ್ರಹ ಮಾಡಿಕೊಂಡು ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ರೋಗಗಳು ನಮ್ಮಿಂದ ದೂರಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ನಮ್ಮದಾಗಿ ಸುಖಿ ಜೀವನ ಸಾಗಿಸಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529



No comments: