18 October 2021

ಕೋದಂಡನ ಟೀಚಿಂಗ್ ಪ್ರಾಕ್ಟೀಸ್ . ನಗೆ ಬರಹ


 

ಕೋದಂಡನ ಟೀಚಿಂಗ್ ಪ್ರಾಕ್ಟೀಸ್
ನಗೆ ಬರಹ

ನಾನು ಆಗ ಟಿ.ಸಿ.ಎಚ್. ತರಬೇತಿ ಪಡೆಯುತ್ತಿದ್ದ ದಿನಗಳು.ಟಿ. ಸಿ .ಹೆಚ್ . ಎಂದ ಮೇಲೆ ಟೀಚಿಂಗ್ ಪ್ರಾಕ್ಟೀಸ್ ಇರಲೇಬೇಕು.ವಿದ್ಯಾರ್ಥಿ ಶಿಕ್ಷಕರಾದ ನಮ್ಮನ್ನೆಲ್ಲಾ ಹಲವಾರು ತಂಡಗಳಾಗಿ ವಿಂಗಡಿಸಿ ವಿವಿಧ ಶಾಲೆಗಳಿಗೆ ಕಳುಹಿಸುತ್ತಿದ್ದರು. ನಮ್ಮ ತಂಡ ದಲ್ಲಿದ್ದ ಕೋದಂಡ ಎಂಬುವವನು ಗಡಿಬಿಡಿಯಲ್ಲಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸುತ್ತಿದ್ದ. ಇದಕ್ಕೆ ಕಾರಣ ಸ್ಟೇಜ್ ಫಿಯರ್!

ಸಾಮಾನ್ಯವಾಗಿ ಪಾಠ ಮಾಡುವಾಗ ಪೀಠಿಕೆಯಿಂದಲೇ ಪಾಠ  ಮಾಡಬೇಕು. ಅದು ಹರ್ಬಾಟ್ ನ ಪಂಚಸೋಪಾನದ ಮೊದಲು ಮೆಟ್ಟಿಲು ಎಂದು ನಮ್ಮ ಶಿಕ್ಷಕರು ಹೇಳಿದ್ದರು. ಪೀಠಿಕೆಯು ಮಕ್ಕಳ ಬಾಯಲ್ಲೇ ಬರಬೇಕು .ಎಂದು ನಮ್ಮ ಶಿಕ್ಷಕರು ಹೇಳಿದ್ದನ್ನು ಕೋದಂಡ ಬಹಳ ಚೆನ್ನಾಗಿ ನೆನಪಿಟ್ಟುಕೊಂಡಿದ್ದ. ಒಮ್ಮೆ "ತಾಳಿಕೋಟಿ  ಯುದ್ಧ" ಎಂಬ ಇತಿಹಾಸ ಪಾಠ ಮಾಡಬೇಕಾದ  ಕೋದಂಡನು ಏನೆಲ್ಲಾ ಹರಸಾಹಸ ಮಾಡಿದರೂ ಮಕ್ಕಳು ತಾಳಿಕೋಟೆ ಎಂದು ಹೇಳಲೇ ಇಲ್ಲ. ಪಾಠ ವೀಕ್ಷಿಸಲು ಶಿಕ್ಷಕರು ಹಿಂದೆ ಕುಳಿತರೆ ನಮ್ಮ ಕೋದಂಡ ಇನ್ನೂ ಗಲಿಬಿಲಿಯಾಗುತ್ತಿದ್ದ.
ಪೀಠಿಕೆಯಲ್ಲಿ ಪಾಠದ ಹೆಸರು ಮಕ್ಕಳ ಬಾಯಲ್ಲಿ ಬರಲಿಲ್ಲ.

ಕೊನೆಗೆ ಈ ರೀತಿಯ ಪೀಠಿಕಾ ಪಶ್ನೆಗಳನ್ನು ಹಾಕಿದ - 'ಮದುವೆ ಆಗಬೇಕಾದರೆ ಹೆಣ್ಣಿಗೆ ಗಂಡು ಏನು ಕಟ್ತಾನೆ ?
ಮಕ್ಕಳು 'ತಾಳಿ' ಎಂದರು. ಕೋದಂಡನಿಗೆ ಖುಷಿಯಾಗಿ
ಎರಡನೆ ಪ್ರಶ್ನೆ ಕೇಳಿದ: "ರಾಜರು ಹಿಂದೆ ತಮ್ಮ ಪ್ರಜೆಗಳ ರಕ್ಷಣೆ ಮಾಡಿಕೊಳ್ಳಲು ನಗರದ ಸುತ್ತ ಏನು ಕಟ್ಟಿಸುತ್ತಿದ್ದರು?
ಮಕ್ಕಳು ಜೋರಾಗಿ "ಕೋಟೆ" ಸಾರ್' ಎಂದರು. ಆಗ ಕೋದಂಡ ವೆರೀ ಗುಡ್ , ಹಾಗಾದರೆ ನಾವು ಈ ದಿನ ತಾಳಿಕೋಟೆ ಯುದ್ಧದ ಬಗ್ಗೆ ತಿಳಿಯೋಣ' ಎಂದು ಹೇಳಿದಾಗ ಪಾಠ  ವೀಕ್ಷಣೆ ಮಾಡುತ್ತಿದ್ದ ಶಿಕ್ಷಕರು ಬೇಸ್ತು ಬಿದ್ದರು .

ಮುತ್ತೊಂದು ತರಗತಿಯಲ್ಲಿ ಕೋದಂಡ ಪೌರನೀತಿಯ ಪಾಠ ಮಾಡುತ್ತಿದ್ದ. ಈ ಮೊದಲೇ ಹೇಳಿದಂತೆ ಅವನಿಗೆ ಶಿಕ್ಷಕರು ಪಾಠ ವೀಕ್ಷಣೆ ಮಾಡಿದರೆ ಗಡಿಬಿಡಿಯಾಗಿ ಏನೇನೋ ಹೇಳುತ್ತಿದ್ದ. ಅವನ ಉದ್ದೇಶ ಮಕ್ಕಳಿಂದ 'ಪ್ರಧಾನಮಂತ್ರಿ' ಎಂದು - ಹೇಳಿಸಬೇಕಾಗಿತ್ತು. ಅದಕ್ಕೆ ಅವನು ಹಾಕಿದ ಪಶ್ನೆ  ಡೆಲ್ಲಿನಾಗೆ ಯಾರು ಇರ್ತಾರಲಾ?'
ಮಕ್ಕಳು "ಮನುಷ್ಯರು" ಎಂದು ತಟ್ಟನೆ ಉತ್ತರಿಸಿದಾಗ ಕೋದಂಡನಿಗೆ ಪಿತ್ತ ನೆತ್ತಿಗೇರಿತು , ಹಂಗಾದರೆ ನಮ್ಮ ಊರಾಗೆ ಬರೇ  ಕತ್ತೆ  ಇದ್ದಾವೇನಲೇ? ಡೆಲ್ಲಿನಾಗೆ ಯಾರು ಇರ್ತಾರೆ ಅನ್ನೋದೇ    ಗೊತ್ತಿಲ್ಲ ನಿಮಗೆ  ಅಂತ ಸಿಟ್ಟಾಗಿ 'ಹಾಂ..ಕೇಳಿ ಡೆಲ್ಲಿನಾಗೆ ಪ್ರಧಾನಮಂತ್ರಿಗಳು ಇರ್ತಾರೆ' ಎಂದು ಹೇಳಿದಾಗ ಪಾಠ ವೀಕ್ಷಣೆ ಮಾಡುವ ಶಿಕ್ಷಕರ  ಕಣ್ಣು ಕೆಂಪಗಾಗಿದ್ದರೂ ಸುಮ್ಮನೆ ಕುಳಿತು ಪಾಠ ವೀಕ್ಷಿಸಿ, ನಂತರ ಕ್ಲಾಸ್ ತೆಗೆದುಕೊಂಡರು. ಅದು ಬೇರೆ ಮಾತು.

ಮತ್ತೊಮ್ಮೆ ವಿಜ್ಞಾನ ಪಾಠ ಬೋಧಿಸುವಾಗ ಮಕ್ಕಳಿಂದ ನೀರು' ಎಂಬ ಉತ್ತರ ಪಡೆಯಬೇಕಾಗಿತ್ತು. ಅದಕ್ಕೆ ನಮ್ಮ ಕೋದಂಡ ಹಾಕಿದ ಪಶ್ನಾವಳಿ ಎಂದರೆ 'ಲೇ... ಮನುಷ್ಯರು ಸತ್ತಾಗ ಅವ್ರ ಬಾಯಲ್ಲಿ ಏನ್ ಬಿಡ್ತಾರೆ?' ಮಕ್ಕಳು ಯೋಚಿಸಿ " ಹಾಲು ಬಿಡ್ತಾರೆ ಸಾರ್" ಎಂದರು. ಆಗ ಕೋದಂಡ ಅವರಿಗೆ 'ವೆರಿ ಗುಡ್' ಅಂದು ಎರಡನೆ ಪ್ರಶ್ನೆಗೆ ಮುಂದುವರೆದ, 'ಹಾಲು  ಸಿಗದಿದ್ದರೆ ಸತ್ತಾಗ ಬಾಯಿಗೆ ಏನು ಬಿಡ್ತಾರೆ?' ಮಕ್ಕಳು  ಯೋಚಿಸಿ" ನೀರು ಬಿಡ್ತಾರೆ. ಸಾರ್"ಎಂದರು, ಆಗ ನಮ್ಮ  ಕೋದಂಡನಿಗಾದ ಸಂತೋಷ ಅಷ್ಟಿಷ್ಟಲ್ಲ, 'ವೆರಿ ವೆರಿ ಗುಡ್, ಹಾಗಾದರೆ ನಾವು ಈ ದಿನ ನೀರಿನ ಬಗ್ಗೆ ತಿಳಿಯೋಣ' ಎಂದು ಬಿಡಬೇಕೇ?!
ಇಂತಹ ಘಟನೆಗಳು ನಮ್ಮ ಟಿ. ಸಿ. ಹೆಚ್. ಮತ್ತು ಬಿ .ಎಡ್. ಓದುವಾಗ ಹಲವಾರು ಘಟಿಸಿವೆ .ಇಪ್ಪತ್ತೊಂದು  ವರ್ಷದ  ಬಳಿಕ ಮೊನ್ನೆ  ಊರಿಗೆ ಹೋದಾಗ ಕೋದಂಡ ಸಿಕ್ಕಿದ್ದ .
ಗಡಿಬಿಡಿ, ಗೊಂದಲಗಳಿಂದ ನಮ್ಮನ್ನೆಲ್ಲಾ ನಕ್ಕು ನಲಿಸುತ್ತಿದ್ದ ಕೋದಂಡನನ್ನು ನೋಡಿ ಮತ್ತೆ ನಗು ಬಂತು . ಗಂಟೆಗಟ್ಟಲೆ ನಮ್ಮ ಟ್ರೈನಿಂಗ್ ಕಾಲದ ನೆನಪುಗಳಲ್ಲಿ ತೇಲಿಹೋದೆವು ಎಷ್ಟೇ ಆದರೂ ನೆನಪುಗಳು ಮಧುರ ಅಲ್ಲವೇ?

ಸಿಹಿಜೀವಿ
ಸಿ.ಜಿ. ವೆಂಕಟೇಶ್ವರ

No comments: