*ಕಪ್ಪು ಬಿಳುಪಿನ ಪಟದ ಬಣ್ಣದ ನೆನೆಪುಗಳು*
ಅದು 1984 ರ ವರ್ಷ ನಾನಾಗ ನನ್ನೂರು ಚೌಡಗೊಂಡನಹಳ್ಳಿಯಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ.ಏಕೋಪಾದ್ಯಾಯ ಶಾಲೆಗೆ ತಿಪ್ಪೇಶಪ್ಪ ಎಂಬ ಶಿಕ್ಷಕರು ನಮಗೆ ಬೋಧಿಸುತ್ತಿದ್ದರು. ಒಂದರಿಂದ ನಾಲ್ಕು ತರಗತಿಗಳನ್ನು ಅವರು ನಿಭಾಯಿಸುತ್ತಾ ನಮಗೆ ಪಾಠ ಮಾಡುತ್ತಿದ್ದ ಕೌಶಲ್ಯ ನೆನದು ಈಗಲೂ ನನಗೆ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಕಾರಣ ಪ್ರಸ್ತುತ ಶಿಕ್ಷಕನಾದ ನಾನು ಕೇವಲ ಒಂದು ವಿಭಾಗಕ್ಕೆ ಸೀಮಿತವಾದ ಮಕ್ಕಳಿಗೆ ಬೋಧಿಸುವ ವೇಳೆ ಹಲವಾಯ ಸವಾಲುಗಳು ಎದುರಾಗುತ್ತವೆ, ಅಂತದ್ದರಲ್ಲಿ ಅಂದು ನಾಲ್ಕು ತರಗತಿಯ ಮಕ್ಕಳನ್ನು ಅವರು ನಿಭಾಯಿಸುತ್ತಿದ್ದರು ಜೊತೆಗೆ ಈಗಿನಂತೆ ಆಗ ವಿಷಯವಾರು ಶಿಕ್ಷಕರು ಇರಲಿಲ್ಲ ,ಕನ್ನಡ , ಗಣಿತ, ಸಮಾಜ ಪರಿಚಯ, ವಿಜ್ಞಾನ ಹೀಗೆ ಎಲ್ಲಾ ವಿಷಯಗಳನ್ನು ಅವರೇ ನಮಗೆ ಕಲಿಸುತ್ತಿದ್ದರು ಅವರ ಜ್ಞಾನ ಮತ್ತು ಚಾಕಚಕ್ಯತೆಯನ್ನು ಮೆಚ್ಚಲೇ ಬೇಕು.
ಪಾಠವನ್ನು ಬಹಳ ಸೊಗಸಾಗಿ ಮಾಡುತ್ತಿದ್ದ ಜೊತೆಗೆ ನಮಗೆ ಕ್ರೀಡೆ, ಹೊರಸಂಚಾರ, ಪ್ರವಾಸ ಹೀಗೆ ನಮ್ಮ ನ್ನು ಸದಾ ಸಂತೋಷಪಡಿಸುತ್ತಾ ನಮಗರಿವಿಲ್ಲದೇ ಜ್ಞಾನದ ಊಟ ಬಡಿಸುತ್ತಿದ್ದರು.
ವಾರಕ್ಕೊಮ್ಮೆ ಎಂಬಂತೆ, ಕೆರೆಯಾಗಲ ಹಳ್ಳಿಯ ಕೆರೆ, ಹೊರಕೆರೆದೇವರಪುರದ ಕಲ್ಯಾಣಿ, ದೇವಸ್ಥಾನ ಹೀಗೆ ಹೊರಸಂಚಾರ ಮಾಡಿಸಿ ನಮಗರಿವಿಲ್ಲದ ಹೊಸ ಜಗತ್ತಿನ ದರ್ಶನ ಮಾಡಿಸಿದ್ದರು ನಮ್ಮ ಮೇಷ್ಟ್ರು.
ಮುಂದಿನ ವಾರ ದುರ್ಗ ಕ್ಕೆ ಟೂರ್ ಕರೆದುಕೊಂಡು ಹೋಗುತ್ತೇನೆ ಬರುವವರು ಹತ್ತು ರೂಪಾಯಿಗಳನ್ನು ನಿಮ್ಮ ಮನೆಯಲ್ಲಿ ಕೇಳಿ ತಂದು ಕೊಡಿ ಎಂದಿದ್ದರು. ನಾನು ನನ್ನ ಅಮ್ಮನ ಬಳಿ ವಿಷಯ ಹೇಳಿದೆ ಅಮ್ಮ ಸೀರೆ ಸೆರಗಿನ ಕೊನೆಯ ಗಂಟು ಬಿಚ್ಚಿ ಹತ್ತು ರೂಗಳ ನೋಟು ಕೊಟ್ಟರು. ಅರ್ಧ ಗಂಟೆಯ ಹಿಂದೆ ಗೌಡರ ಮನೆಗೆ ಹೋಗಿ ಒಂದು ದಿನ ಕೂಲಿ ಮಾಡಿದ ದುಡ್ಡು ಇಸ್ಕಂಬರಬೇಕು ಎಂದು ಅಮ್ಮ ಅಂದದ್ದು ನಂತರ ನನಗೆ ನೆನಪಾಯಿತು.
ದುರ್ಗಕ್ಕೆ ಟೂರ್ ಹೋಗುವ ಹಿಂದಿನ ದಿನ ಬಹುಶಃ ನನ್ನಮ್ಮ ನಿದ್ದೆ ಮಾಡಿರಲಿಲ್ಲ ಎನಿಸುತ್ತದೆ. ಎರಡು ಗಂಟೆಗೇ ಎದ್ದು ಮೊಸರನ್ನದ ಬುತ್ತಿ ಕಟ್ಟಿದ್ದರು , ಅದನ್ನು ಸ್ಟೀಲ್ ಟಿಪನ್ ಕ್ಯಾರಿಯರ್ ಗೆ ಹಾಕಿ ರಡಿ ಮಾಡಿದ್ದರು. ನಾಲ್ಕು ಗಂಟೆಗೆ ನನ್ನ ಎಬ್ಬಿಸಿ ಬಿಸಿ ನೀರಿನ ಸ್ನಾನ ಮಾಡಿಸಿ ಬಟ್ಟೆಗಳನ್ನು ಹಾಕಿ ಕ್ರಾಪು ತೆಗೆದು , ಕಣ್ಣಾಸರ ತೆಗೆದು ನೆಟಿಗೆ ಮುರಿದು , "ಹುಸಾರು ಕಣಪ್ಪ ,ದುರ್ಗ ದೊಡ್ಡ ಪೇಟೆ ಮೇಷ್ಟ್ರು ನ ಬಿಟ್ಟು ಎಲ್ಲೂ ಹೋಗಬ್ಯಾಡಾ , ತಗಾ ಇದನ್ನ ಖರ್ಚಿಗೆ ಇಕ್ಯಾ"
ಎಂದು ಮನೆಯ ಜೀರಿಗೆ ಡಬ್ಬಿಯಿಂದ ತೆಗೆದು ಒಂದು ರೂಪಾಯಿ ಕೊಟ್ಟರು.
ನಮ್ಮೂರಿನಿಂದ ನೇರವಾಗಿ ದುರ್ಗ ಕ್ಕೆ ಹೋಗಲು ಬಸ್ ಸೌಲಭ್ಯವಿರಲಿಲ್ಲ ಈಗಲೂ ಇಲ್ಲ ಅದು ಬೇರೆ ಮಾತು.
ಬೆಳಗಿನ ಜಾವದ ಐದೂವರೆಗೆ ನಮ್ಮ ಸ್ನೇಹಿತರು ಅವರ ಪೋಷಕರು ಮೇಷ್ಟ್ರು ನಡೆದುಕೊಂಡು ಉಪ್ಪರಿಗೇನಹಳ್ಳಿಗೆ ಹೋದೆವು ಅಲ್ಲಿ ಖಂಡೇನಹಳ್ಳಿ ತಿಪ್ಪೇಸ್ವಾಮಿ ಬಸ್ ಹತ್ತಿ ಅಮ್ಮನಿಗೆ ಟಾಟಾ ಮಾಡಿದೆ. ಬಸ್ ಪಶ್ಚಿಮಾಭಿಮುಖವಾಗಿ ಚಲಿಸಿತು. ಗೆಳೆಯರ ಜೊತೆಯಲ್ಲಿ ಬಸ್ ಪಯಣದ ಅನಂದ ಅನುಭವಿಸುತ್ತಾ ನಂದನ ಹೊಸೂರು, ಹೊರಕೆರೆದೇವರಪುರ, ಮತಿಘಟ್ಟ, ಈಚಘಟ್ಟ, ಚಿತ್ರ ಹಳ್ಳಿ, ಹೀಗೆ ಪ್ರತಿ ಊರಿಗೆ ಬಸ್ ಬಂದಾಗ ಆ ಊರಿನ ಬೋರ್ಡ್ ಜೋರಾಗಿ ಎಲ್ಲಾ ಗೆಳೆಯರು ಸೇರಿ ಓದುತ್ತಿದ್ದೆವು ಅದನ್ನು ನೋಡುತ್ತಾ ನಮ್ಮ ಮೇಷ್ಟ್ರು ಒಳಗೊಳಗೆ ಖುಷಿ ಪಟ್ಟರು .ಯಾರೋ ಸಹಪ್ರಯಾಣಿಕರು "ಸೆನಾಗಿ ಬೋರ್ಡ್ ಒದ್ತೀರಾ ಕಣ್ರಾ ಹುಡುಗ್ರಾ,ಯಾರೋ ಮೇಷ್ಟ್ರು ಸೆನಾಗಿ ಹೇಳ್ಕೊಟ್ಟದಾರೆ" ಎಂದಾಗ ನಮಗೂ ಖುಷಿಯಾಯಿತು.
ದುರ್ಗ ಯಾರ್ ಇಳೀರಿ ಎಂದರು ಕಂಡಕ್ಟರ್ ,ಆಗಲೇ ನನಗೆ ಅರ್ಥವಾಗಿದ್ದು ನಾನು ಮೊದಲ ಬಾರಿಗೆ ದುರ್ಗ ತಲುಪಿದೆ ಎಂದು.
ಮೊದಲ ಬಾರಿಗೆ ಚಿತ್ರದುರ್ಗದ ದೊಡ್ಡ ಕಟ್ಟಡಗಳನ್ನು ನೋಡುತ್ತಾ ನಡೆದುಕೊಂಡು ರಂಗಯ್ಯನ ಬಾಗಿಲ ದಾಟಿ ದುರ್ಗದ ಕೋಟೆ ನೋಡಲು ಹೊರಟೆವು . ಮದ್ದು ಅರೆಯುವ ಕಲ್ಲುಗಳು, ಏಕನಾಥೇಶ್ವರಿ ದೇವಾಲಯ, ಮದ್ದಿನ ಮನೆ , ಅಕ್ಕತಂಗೇರ ಹೊಂಡ, ಓಬವ್ವನ ಕಿಂಡಿ ,ಹೀಗೆ ದುರ್ಗದ ಕೋಟೆಯ ಸ್ಥಳಗಳನ್ನು ಬೆರಗಿನಿಂದ ನೋಡಿದೆವು ಆ ಸ್ಥಳಗಳ ಬಗ್ಗೆ ಕೋಟೆಯ ಬಗ್ಗೆ ನಮ್ಮ ಮೇಷ್ಟ್ರು ನೀಡಿದ ವಿವರಣೆ ದುರ್ಗದ ಬಗ್ಗೆ ಹೆಮ್ಮೆ ಮೂಡಿಸಿತು.
"ಅಗೋ ನೋಡ್ರಿ ಅದು ಕುದುರೆ ಹೆಜ್ಜೆ ಅಲ್ಲಿಗೆ ನೀವು ಹತ್ತಾಕೆ ಆಗಲ್ಲ ದೊಡ್ಡಾರಾದ ಮೇಲೆ ಹತ್ತುವಿರಂತೆ ಬನ್ನಿ ಈಗ ಕೆಳಗೆ ಹೋಗೋಣ " ಅಂದ್ರು ನಮ್ಮ ಮೇಷ್ಟ್ರು.
ಏಳು ಸುತ್ತಿನ ಕೋಟೆ ಇಳಿದು
ಚಂದವಳ್ಳಿಯ ಕೆರೆಗೆ ಹೋದೆವು ಅಲ್ಲಿ ಗುಹೆಗಳನ್ನು ಹೊರಗಿನಿಂದಲೇ ನೋಡಿದೆವು ಆ ವೇಳೆಗಾಗಲೆ ನಮ್ಮ ಹೊಟ್ಟೆಗಳು ತಾಳ ಹಾಕುತ್ತಿದ್ದವು ಇದನ್ನು ಅರಿತ ನಮ್ಮ ಮೇಷ್ಟ್ರು "ಮಕ್ಕಳ .. ನಿಮ್ ಬುತ್ತಿ ಬಿಚ್ಚಿ ತಿನ್ರಿ, ಇಲ್ಲೇ ಕುಡಿಯಾಕೂ ನೀರಿದೆ" ಅಂದರು ಎಲ್ಲರ ಬುತ್ತಿ ಬಿಚ್ಚಿ, ಎಲ್ಲರ ತರ ತರದ ತಿಂಡಿಗಳನ್ನು ಹಂಚಿಕೊಂಡು ತಿಂದೆವು . ಅಲ್ಲೇ ಇರುವ ಪಾರ್ಕ್ ನಲ್ಲಿ ಸ್ವಲ್ಪ ಹೊತ್ತು ಆಟ ಆಡಿದೆವು.
ನಂತರ ನಡೆದುಕೊಂಡು ಗಾಯತ್ರಿ ಹೋಟೆಲ್, ದಾಟಿ ನೀಲಕಂಠೇಶ್ವರ ದೇವಾಲಯದಲ್ಲಿ ಕೈಮುಗಿದು ಮುಂದೆ ಸಾಗಿದೆವು .ನಮ್ಮ ಮೇಷ್ಟ್ರು ಒಂದು ದೊಡ್ಡ ಕಟ್ಟಡದ ಮುಂದೆ ನಿಲ್ಲಲು ಹೇಳಿದರು .ಆ ಕಟ್ಟಡದ ಮೇಲೆ ಪ್ರಭಾತ್ ಸ್ಟುಡಿಯೋ ಎಂಬ ಬೋರ್ಡ್ ಇತ್ತು , ಎಲ್ಲರೂ ಒಳಗೆ ನಡೆಯಿರಿ ಎಂದರು ,ಒಳಗೆ ಹೋದಾಗ ಪೋಟೊಗ್ರಾಪರ್ ನಮ್ಮನ್ನು ಸಾಲಾಗಿ ಕುಳ್ಳಿರಿಸಿ ಪೋಟೋ ತೆಗೆದರು.
ಪೋಟೋ ಸ್ಟುಡಿಯೋ ದಿಂದ ಹೊರಬಂದಾಗ ಸಂಜೆಯಾಗುತ್ತಿದ್ದದು ನಮ್ಮ ಗಮನಕ್ಕೆ ಬಂದಿತು , ಬಸ್ ಸ್ಟ್ಯಾಂಡ್ ಗೆ ಬಂದು ರಾಜ್ ನೀನ್ ಬಸ್ ಹತ್ತಿ ಕುಳಿತೆವು .ಓಡಾಡಿ ಸುಸ್ತಾದ ನಾವು ಬಸ್ ನಲ್ಲಿ ತೂಕಡಿಸಲು ಶುರುಮಾಡಿದೆವು ಕೆಲವರು ನಿದ್ರೆಯನ್ನು ಮಾಡಿದರು .ನಮ್ಮ ಬಸ್ ಉಪ್ಪರಿಗೇನಹಳ್ಳಿ ತಲುಪಿದಾಗ ಕತ್ತಲಾಗಿತ್ತು .ಅಮ್ಮ ಬಸ್ಟಾಂಡ್ ನಲ್ಲಿ ನನಗಾಗಿ ಕಾದಿದ್ದರು. ನನ್ನ ಮಗ ಟೂರ್ ಹೋಗಿ ಬಂದ ಎಂಬ ಸಂತಸ ಅಮ್ಮನ ಮೊಗದಲ್ಲಿ ಇತ್ತು ಅದೇ ಆನಂದ ನನ್ನಲ್ಲೂ ಇತ್ತು.
ಒಂದು ವಾರದ ಬಳಿಕ ನಮ್ಮ ಮೇಷ್ಟ್ರು ನಮಗೆ ಒಂದೊಂದು ರಟ್ಟಿನ ಗ್ರೂಪ್ ಪೋಟೋ ಕೊಟ್ಟರು. ಅದರಲ್ಲಿ ನಮ್ಮನ್ನು ನಾವು ನೋಡಿ ಹಿರಿಹಿರಿ ಹಿಗ್ಗಿದೆವು .ನಾನಂತೂ ಯಾವಾಗಲೂ ಅದೇ ಪೋಟೋ ನೋಡುತ್ತಾ ಕೂರುತ್ತಿದ್ದೆ , ಏಕೆಂದರೆ ಅದು ನನ್ನ ಜೀವನದ ಮೊದಲ ಪಟ!
ನಲವತ್ತಾರು ವರ್ಷಗಳಲ್ಲಿ ಹೊರದೇಶ ನೇಪಾಳ ಸೇರಿದಂತೆ ನೂರಾರು ಸ್ಥಳಗಳಲ್ಲಿ ಪ್ರವಾಸ ಮಾಡಿರುವೆ ಆದರೆ ನನ್ನ ಮೊದಲ ದುರ್ಗದ ಪ್ರವಾಸವೇ ನನಗೆ ವಿಶೇಷವಾದ ಮತ್ತು ಹೆಚ್ಚು ಖುಷಿ ನೀಡಿದ ಪಯಣ ಎಂಬುದಂತೂ ಸತ್ಯ.
ವಿವಿಧ ಲೆನ್ಸ್ ಕ್ಯಾಮೆರಾಗಳಲ್ಲಿ ,ಹೊಸ ಮಾದರಿಯ ಹೆಚ್ಚು ಮೆಗಾಪಿಕ್ಸಲ್ ಮೊಬೈಲ್ ಕ್ಯಾಮೆರಾಗಳಲ್ಲಿ ಸಾವಿರಾರು ಪೋಟೋ ತೆಗೆದುಕೊಂಡಿರುವೆ. ನಮ್ಮದೇ ಪೋಟೋಗಳು ಹೇಗಿದ್ದರೂ ನಮಗೆ ಚೆಂದ ಆದರೆ ಮೊದಲ ಬಾರಿಗೆ ಪ್ರಭಾತ್ ಸ್ಟುಡಿಯೋದಲ್ಲಿ ಅಂದು ತೆಗೆದ ಕಪ್ಪು ಬಿಳುಪಿನ ನನ್ನ ಜೀವನದ ಮೊದಲ ಪಟ ಅತ್ಯಂತ ಸುಂದರ ಪಟ. ಆ ಪಟದಲ್ಲಿ ನನ್ನ ಬಾಲ್ಯದ ನೂರಾರು ಬಣ್ಣದ ನೆನಪುಗಳಿವೆ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
990092529
2 comments:
ಅಂದಿನ ಫೋಟೋಗಳು ಇದ್ದರೆ ಹಾಕಿ ಸರ್.. ನಿಮ್ಮ ನೆನಪುಗಳು ಅತಿ ಮಧುರ.!!
ಧನ್ಯವಾದಗಳು🙏🙏
ಮೇಲಿನ ಲೇಖನದಲ್ಲಿ ಇದೆ ಅದೇ ನನ್ನ ಬಾಲ್ಯದ ಒಂದೇ ಪೋಟೋ
Post a Comment