06 October 2021

ಚಿತ್ರದುರ್ಗ ಜಿಲ್ಲೆಯಲ್ಲಿ ಬುಕನಾನ್ .ವಿಮರ್ಶೆ


 


ಚಿತ್ರದುರ್ಗ ಜಿಲ್ಲೆಯಲ್ಲಿ  ಬುಕಾನನ್
ವಿಮರ್ಶೆ.

ಮೂಲತಃ ಚಿತ್ರದುರ್ಗ ಜಿಲ್ಲೆಯವನಾದ ,ಮತ್ತು ಇತಿಹಾಸ ಬೋಧಿಸುವ ಶಿಕ್ಷಕನಾಗಿ " ಪ್ರೊ. ಎಂ ಜಿ ರಂಗಸ್ವಾಮಿ ರವರು ಬರೆದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ  ಬುಕಾನನ್ " ಎಂಬ ಕೃತಿ ನನ್ನನ್ನು ಬಹಳ ಆಕರ್ಷಿಸಿತ್ತು .
ಈ ಪುಸ್ತಕವನ್ನು ಓದಿ ಮುಗಿಸಿದಾಗ ಒಂದು ಉತ್ತಮ ಐತಿಹಾಸಿಕ ಅಧಾರದ ಪುಸ್ತಕ ಓದಿದ ಸಂತೃಪ್ತಿ ಲಭಿಸಿತು.

ಫ್ರಾನ್ಸಿಸ್ ಬುಕ್ಯಾನನ್ ಈಸ್ಟ್ ಇಂಡಿಯಾ ಕಂಪನಿಯ ಬಂಗಾಳ ಪ್ರಾಂತ್ಯದಲ್ಲಿ ವೈದ್ಯಾಧಿಕಾರಿಯಾಗಿದ್ದವನು ಬ್ರಿಟಿಷರು ತಮ್ಮ ಅಧೀನದಲ್ಲಿದ್ದ ಮದ್ರಾಸ್, ಮೈಸೂರು, ಕೆನರಾ ಮತ್ತು ಮಲಬಾರ್ ರಾಜ್ಯಗಳಲ್ಲಿನ ಕೃಷಿ, ಕಲೆ, ವಾಣಿಜ್ಯ, ಆರ್ಥಿಕ-ಧಾರ್ಮಿಕ ಸ್ಥಿತಿ-ಗತಿಗಳು ಹಾಗೂ ಅಲ್ಲಿಯ ಜನ ಸಮುದಾಯಗಳು, ಬುಡಕಟ್ಟುಗಳು, ಅವರ ಜೀವನ ವಿಧಾನ ಮತ್ತು ಆಚರಣೆ-ಸಂಪ್ರದಾಯಗಳನ್ನಲ್ಲದೆ ಸ್ಥಳೀಯ ಇತಿಹಾಸ ಕುರಿತು ಅಧ್ಯಯನಾತ್ಮಕ ವರದಿ ಮಾಡಲು ಅವನನ್ನುಕ್ರಿ.ಶ.1800ರಲ್ಲಿ ನಿಯೋಜಿಸಿದರು.  ಒಂದೂಕಾಲು ವರ್ಷದ  ಅವನ ಈ ಮಹಾ ಪಯಣದಲ್ಲಿಕಂಡುಂಡ ಅನುಭವ ಕಥನವನ್ನು 2000ಕ್ಕೂ ಹೆಚ್ಚು ಪುಟಗಳಷ್ಟು
ವಿಸ್ತಾರವಾಗಿ ಬರೆದಿರುವನು, ಅದನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾನೆ.
ಇದೊಂದು ಸಾಂಸ್ಕೃತಿಕ ದಾಖಲೆ ಕೂಡಾ ಆಗಿದೆ. ಇನ್ನೂರು ವರ್ಷದ ಕೆಳಗಿನ ಈ ಪ್ರಾಂತ್ಯಗಳ ಬದುಕಿನೊಳಗೊಂದು ಇಣುಕು ನೋಟದಂತಿರುವ ಈ ಅಧ್ಯಯನ ಪ್ರವಾಸ ಕಥನ ಕಳ್ಳಕಾಕರ, ಹುಲಿಯಂಥ ಕಾಡು ಪ್ರಾಣಿಗಳ
ಪರಿಸರದಲ್ಲಿ ಸಂಚರಿಸಿ ವರದಿ ಮಾಡುವ ರೋಚಕ ಯಾತ್ರೆಯೂ ಆಗಿದೆ. ಇಂಥದೊಂದು ಅಮೂಲ್ಯ ಕೃತಿಯನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸುವ ಪ್ರಯತ್ನ ಮಾಡಿದವರು ಪ್ರೊ ಎಂ ಜಿ ರಂಗಸ್ವಾಮಿ ರವರು .  ಅಖಂಡ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತ ಗೊಳಿಸಿಕೊಂಡು ಅನುವಾದ ಮಾಡಿರುವ ಈ ಪುಸ್ತಕ  ನಿರರ್ಗಳವಾದ ಕಥನ ಶೈಲಿ, ಸುಭಗತೆ  ಸರಾಗವಾಗಿ ಓದಿಸಿಕೊಳ್ಳುವ ಚೇತೋಹಾರಿ ಗುಣದಿಂದ ಗಮನ ಸಳೆಯುತ್ತದೆ.

ಸಿವಿಜಿ ಪಬ್ಲಿಕೇಶನ್ ರವರ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹೊರತಂದ ಈ ಪುಸ್ತಕ 152 ಪುಟಗಳಿದ್ದು ,150 ರೂಪಾಯಿ ಮುಖಬೆಲೆಯಾಗಿದೆ. ದಾ ಕೋ ಹಳ್ಳಿ ಚಂದ್ರಶೇಖರ ರವರ ಮುಖಪುಟ ಪುಸ್ತಕದ ಅಂದ ಹೆಚ್ಚಿಸಿದೆ.
ಡಾ. ಮೀರಾಸಾಬಿಹಳ್ಳಿ ಶಿವಣ್ಣ ರವರ ಸುದೀರ್ಘವಾದ ಮುನ್ನುಡಿ ಮತ್ತು ಬೆನ್ನುಡಿ ಪುಸ್ತಕ ಓದಲು ಭೂಮಿಕೆ ಸಿದ್ದಪಡಿಸುತ್ತವೆ. ಅವರ ಮುನ್ನುಡಿಯಲ್ಲಿ ಜನಸಾಮಾನ್ಯರ ಬದುಕಿಗೆ ಪೂರಕವಾದ ಸಾಹಿತ್ಯ ರಚನೆ ಮುನ್ನೆಲೆಗೆ ಬರಬೇಕು , ಹಾಗೂ ಮಾದ್ಯಮಗಳು ಮತ್ತು ಸಾಮಾನ್ಯ ಜನರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೈಜೋಡಿಸಬೇಕೆಂಬ ಕಳಕಳಿಯನ್ನು ತೋಡಿಕೊಂಡಿದ್ದಾರೆ.
ರಂಗಸ್ವಾಮಿ ರವರು ಈ
ಪುಸ್ತಕದಲ್ಲಿ ಜಿಲ್ಲಾ ಪ್ರವೇಶ ,
ಹಿರಿಯೂರಿನಲ್ಲಿ 14 ದಿನಗಳು ,ಮತ್ತು
ಗಣಿಗಾರಿಕೆ ಎಂಬ ಮೂರು ಭಾಗದಲ್ಲಿ ಚಿತ್ರದಲ್ಲಿನ ಬುಕಾನನ್ ಪ್ರವಾಸದ ಮಾಹಿತಿ ನೀಡಿರುವರು .
ಇದರ ಜೊತೆಯಲ್ಲಿ  ಮೀರಾಸಾಬಿಹಳ್ಳಿ ಶಿವಣ್ಣನವರ ಲೇಖನ ಗಳಾದ
ಬುಕ್ಯಾನನ್ ಕಂಡ ಚಿತ್ರದುರ್ಗ ಜಿಲ್ಲೆ ' ಹಾಗೂ ಹಿರಿಯೂರಿನಲ್ಲಿ ಬುಕ್ಯಾನನ್  ಎಂಬ ಎರಡು ಲೇಖನಗಳು ಬೋನಸ್ ರೂಪದಲ್ಲಿ ಓದುಗರಿಗೆ ಲಭ್ಯವಾಗಿವೆ.
ಪುಸ್ತಕದ ಒಳಪುಟಗಳಲ್ಲಿ ಕಂಡುಬರುವ ಪೂರಕವಾದ ಚಿತ್ರಗಳು ಮತ್ತು ನಕ್ಷೆಗಳು ಗತ ಕಾಲದ ಚಿತ್ರದುರ್ಗದ ಇತಿಹಾಸ ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತವೆ.

ಬುಕಾನನ್ ಪ್ರವಾಸ ಚಿತ್ರದುರ್ಗ ಜಿಲ್ಲೆಯ ಪ್ರವಾಸ ಅಧಿಕೃತವಾಗಿ ಆರಂಭವಾಗುವುದು ಮಲೆಬೆನ್ನೂರು ಕಡೆಯಿಂದ ,ಗರುಡನ ಗಿರಿ ದಾಟಿ ಯಗಟಿ ತಾಲ್ಲೂಕು ದಾಟಿದಾಗ ಬುಕಾನನ್ ದುರ್ಗದ ಪ್ರವಾಸ ಅಂತ್ಯವಾಗುತ್ತದೆ .ಈ ನಡುವೆ ಅವರು ನೀಡಿದ ಮಾಹಿತಿ ಅಮೂಲ್ಯವಾದದ್ದು.
ಬುಕಾನನ್ ಪ್ರವಾಸ ಕುರಿತಾದ ಪುಸ್ತಕ  ಓದುವಾಗ ಬುಕಾನನ್ ಆ ಪ್ರದೇಶದ ಐತಿಹಾಸಿಕ, ಆರ್ಥಿಕ , ಸಾಮಾಜಿಕ, ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪರಿಯನ್ನು ನಾವು ಗಮನಿಸಬಹುದು.
ಆ ಭಾಗದ ಕೃಷಿ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಿ ಅಲ್ಲಿ ಅಂದು ರೈತರು ಬಳಸುತ್ತಿದ್ದ ಕೃಷಿ ಪರಿಕರಗಳಾದ ಎಡೆ ಕುಂಟೆ, ಕುಂಟೆ, ಗ್ವಾರೆ , ಹಂಡುಗುಂಟೆ, ಹೆಡೆ ಮರ ,ನೇಗಿಲ    ಬಗ್ಗೆ  ಚಿತ್ರ ಸಮೇತ ವಿವರಣೆ ನೀಡಿರುವನು ಅದೃಷ್ಟವಶಾತ್ ನಾನು ನನ್ನ ಬಾಲ್ಯದ ದಿನಗಳಲ್ಲಿ ಇವೆಲ್ಲವನ್ನೂ ನೋಡಿರುವೆ ಆದರೆ ಬಹುತೇಕ ಇಂದಿನ ಯುವಪೀಳಿಗೆ ಮತ್ತು ನಗರ ವಾಸಿಗಳು ಇವುಗಳ ನೋಡಿಲ್ಲ ಆ ನಿಟ್ಟಿನಲ್ಲಿ ಈ ಪುಸ್ತಕ ಮುಂದೊಂದು ದಿನ ನಿಜವಾದ ಆಧಾರ ಗ್ರಂಥ ಆಗುವುದರಲ್ಲಿ ಸಂದೇಹವಿಲ್ಲ.

ಬುಕಾನನ್ ಅಂದು ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಬೆಳೆಗಳಾದ ಹತ್ತಿ, ನವಣೆ ಸಜ್ಜೆ  ,ಹುರುಳಿ ಔಡಲ ರಾಗಿ, ಕಬ್ಬು ಮುಂತಾದ ಬೆಳೆಗಳು ಮತ್ತು ವ್ಯವಸಾಯ ವಿಧಾನಗಳನ್ನು ಚೆನ್ನಾಗಿ ವಿವರಿಸಿದ್ದಾನೆ.

ಕಂಬ್ಳಿ ಕುರುಬರು ಮತ್ತು ಹಂಡೇ ಕುರುಬರು ಮತ್ತು ಗೊಲ್ಲರು ಕುರಿಸಾಕಣೆ ಮಾಡಿಕೊಂಡಿದ್ದ ಬಗ್ಗೆ ಉಲ್ಲೇಖಿಸಲಾಗಿದೆ.ಕುರುಬರು  ಬೀರಪ್ಪ ದೇವರು ಮತ್ತು ಮಾಯಮ್ಮ ದೇವತೆಯನ್ನು ಆರಾದಿಸುತ್ತಿದ್ದರು,ಐಮಂಗಲದ ಸುತ್ತಲಿನ ಪ್ರದೇಶದಲ್ಲಿ ಕಬ್ಬಿಣದ ನೇಗಿಲು ಹೊಡೆಯುತ್ತಿದ್ದರು, ಹಿರಿಯೂರಿನ ವೇದಾವತಿ ನದಿಯಲ್ಲಿ ಮೂರು ಜಾತಿಯ ಮೀನು ನೋಡಿದೆ, ರೈತರು ಗೊಬ್ಬರಕ್ಕೆ ಕುರಿ ಮಂದೆ ಆಶ್ರಯಿಸಿದ್ದರು. ಪಶುಪಾಲನೆ ಉಪಕಸುಬಾಗಿದ್ದು ಕುರಿ ಹಾಲು, ಮತ್ತು ತುಪ್ಪಕ್ಕೆ ಬೇಡಿಕೆ ಇತ್ತು.ಚಿಕ್ಕ ಬ್ಯಾಲದಕೆರೆ ಸುತ್ತ ಮುತ್ತ ಗಣಿಗಾರಿಕೆ ಇತ್ತು.ಮತ್ತೋಡಿನ ಸುತ್ತ ಮುತ್ತ ಗಾಜಿನ ಬಳೆ ತಯಾರಿಕೆ ಘಟಕಗಳು ಇದ್ದವು.ಎಂದು ತನ್ನ ದಿನಚರಿಯಲ್ಲಿ ಬುಕನಾನ್ ದಾಖಲು ಮಾಡಿದ್ದಾನೆ.

ಬುಕಾನನ್ ಚಿತ್ರಿಸುವ ಕೃಷಿ ಚಟುವಟಿಕೆ ಕುರಿತ ಅನೇಕ ಸಂಗತಿಗಳನ್ನು ಬಾಲ್ಯದಲ್ಲಿ ನಾನು ಸ್ವತಃ ಅನುಭವಿಸಿದ್ದೇನೆ  ಹೊಳಲ್ಕೆರೆ ತಾಲ್ಲೂಕು ಚೌಡಗೊಂಡನಹಳ್ಳಿ ಯಲ್ಲಿ  ರಾತ್ರಿ ವೇಳೆ ಚಂದ್ರನ ಬೆಳಕಲ್ಲಿ ಆರು ಇಲ್ಲವೆ ಎಂಟು ಎತ್ತುಗಳನ್ನು ಕಟ್ಟಿ ಕಬ್ಬಿಣದ ನೇಗಿಲು ಹೊಡೆಯುತ್ತಿದ್ದ ಚಿತ್ರಣ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನೇಗಿಲು ಹೊಡೆಯುವವರಿಗೆ ನೀರು ಮತ್ತು ಬುತ್ತಿ(ಊಟ) ಸಾಗಿಸುತ್ತಿದ್ದವರ ಜೊತೆ ಹೋಗಿ ಬೆರಗುಗಣ್ಣಿನಿಂದ ನೋಡಿದ ಆ ದೃಶ್ಯಗಳು ಬುಕಾನನ್ ಚಿತ್ರಿಸಿರುವ ಕಬ್ಬಿಣದ ನೇಗಿಲು ಹೊಡೆಯುವ ದೃಶ್ಯಗಳು ನಾನು ಮತ್ತೆ ಆ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದವು. ಸುಗ್ಗಿಯ ದಿನಗಳಲ್ಲಿ ಜೋಳ, ರಾಗಿ ತೆನೆಗಳಿಂದ ಕಾಳು ಬೇರ್ಪಡಿಸುವ ಸಲುವಾಗಿ ಸಗಣಿಯಿಂದ ಸಾರಿಸಿ ಕಣ ಸಿದ್ಧಗೊಳಿಸಿ ರೋಣಗಲ್ಲು  ಹೊಡೆಯುತ್ತಿದ್ದುದು, ಅಂತಹ ವೇಳೆ ಹೇಳುತ್ತಿದ್ದ ಜನಪದ ಹಾಡುಗಳು, ಆಳೆತ್ತರಕ್ಕೆ ಕಾಳಿನ ರಾಶಿ ಮಾಡುತ್ತಿದ್ದ  ಚಿತ್ರಣಗಳು ನನ್ನ ಕಣ್ಮುಂದೆ ಬಂದವು.

ಅಲ್ಲಲ್ಲಿ ಬುಕಾನನ್ ನೀಡಿರುವ ಕೆಲ ವಿವರಣೆ ಪೂರ್ವಾಗ್ರಹದಿಂದ ಕೂಡಿದೆ ಅನಿಸಿದರೂ ಈ ಕೃತಿಯು
ಚಿತ್ರದುರ್ಗದ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.ದುರ್ಗದವರೇ ಅಲ್ಲದೇ ಎಲ್ಲಾ ಕನ್ನಡಿಗರು ಈ ಪುಸ್ತಕ ಓದಿ ನಮ್ಮ ಬಗ್ಗೆ ನಾವೇ ಹೆಮ್ಮೆ ಪಟ್ಟು ಕೊಳ್ಳಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಚಿತ್ರದುರ್ಗ
9900925529

ಪುಸ್ತಕದ ಹೆಸರು: ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್
ಲೇಖಕರು: ಪ್ರೊ .ಎಂ ಜಿ ರಂಗಸ್ವಾಮಿ
ಪ್ರಕಾಶನ: ಸಿವಿಜಿ
ಪುಟಗಳು: 152
ಬೆಲೆ: 150 ರೂಪಾಯಿ

No comments: