ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಹೊಸದಾಗಲಿ
ಇತ್ತೀಚಿಗೆ ದಿನಪತ್ರಿಕೆಯೊಂದರಲ್ಲಿ ಚಿತ್ರದುರ್ಗ ಜಿಲ್ಲೆಯ ಗಡಿತಾಲೂಕುಗಳಲ್ಲಿ" ಶಿಕ್ಷಕರ ಕೊರತೆಯಿಂದ ಶಾಲೆ ಬಾಗಿಲು ತೆರೆದಿಲ್ಲ "ಎಂಬ ಸುದ್ದಿ ಓದಿ ಬೇಸರವಾಯಿತು .ಇದಕ್ಕೆ ಕಾರಣ ಆ ಶಾಲೆಗಳಲ್ಲಿ ಶಿಕ್ಷಕರ ಕೊರತೆ !ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ದೀರ್ಘ ಅವಧಿಯ ಬಳಿಕ ಭೌತಿಕ ತರಗತಿಗಳನ್ನು ತೆರೆದು ಕಲಿಕೆಯಲ್ಲಿ ಉಂಟಾದ ಹಿನ್ನೆಡೆಗೆ ಪರಿಹಾರ ಕಲ್ಪಿಸಲು ಸರ್ಕಾರಗಳು ನಿರ್ಧಾರ ಮಾಡಿ ಶಾಲೆಗಳ ಆರಂಭ ಮಾಡಿದರೆ, ಶಿಕ್ಷಕರ ಕೊರತೆಯಿಂದ ಶಾಲೆ ಆರಂಭವಾಗದಿರುವುದು ನಿಜಕ್ಕೂ ಬೇಸರದ ಸಂಗತಿ.
ಇದು ಒಂದು ಉದಾಹರಣೆ ಅಷ್ಟೇ ಇಂತಹ ಚಿತ್ರಣ ದೇಶದ ಇತರೆ ಕಡೆಗಳಲ್ಲಿ ಕಂಡರೂ ಅಚ್ಚರಿಯಿಲ್ಲ
ಏಕೆಂದರೆ ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳು ಇದಕ್ಕೆ ಪುಷ್ಟಿ ನೀಡುತ್ತವೆ .
ದೇಶದಲ್ಲಿ ಇನ್ನೂ 1.1 ಲಕ್ಷ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿಯೇ ಉಳಿದಿವೆ ಎಂದು ಯುನೆಸ್ಕೊದ '2021 ಸ್ಟೇಟ್ ಆಫ್ ದ ಎಜುಕೇಶನ್ ರಿಪೋರ್ಟ್ ಫಾರ್ ಇಂಡಿಯಾ: ನೋ ಟೀಚರ್ಸ್, ನೋ ಕ್ಲಾಸ್' ಎಂಬ ವರದಿ ಬಹಿರಂಗಪಡಿಸಿದೆ. ದೇಶದಲ್ಲಿ ಒಟ್ಟು ಶೇ.19ರಷ್ಟು ಅಥವಾ 11.16 ಲಕ್ಷ ಶಿಕ್ಷಕ ಹುದ್ದೆಗಳು ಶಾಲೆಗಳಲ್ಲಿ ಖಾಲಿ ಇದ್ದು, ಈ ಪೈಕಿ ಶೇ.69ರಷ್ಟು ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಇವೆ ಎಂದು ವರದಿ ವಿವರಿಸಿದೆ.
ಸರಕಾರದ ಅಂಕಿ-ಅಂಶಗಳ ಪ್ರಕಾರ 3, 5 ಮತ್ತು 7ನೇ ತರಗತಿಗಳಲ್ಲಿ ನಿಧಾನ ಕಲಿಕೆ ಫಲಿತಾಂಶ ಮತ್ತು ಶಿಕ್ಷಕರ ಹುದ್ದೆ ಖಾಲಿ ಇರುವುದಕ್ಕೆ ಸಂಬಂಧ ಕಲ್ಪಿಸಲಾಗಿ ದೆ. ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಸುಧಾರಣೆ, ಗ್ರಾಮಗಳಲ್ಲಿ ಶಿಕ್ಷಕರ ಕೆಲಸದ ಸ್ಥಿತಿ ಸುಧಾರಣೆ, ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ನಿಗದಿಪಡಿಸುವುದು ಮತ್ತು ಶಿಕ್ಷಕರನ್ನು ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ.
ಇದೇ ವರದಿಯಲ್ಲಿ ಶಿಕ್ಷಕರ ಗುಣಮಟ್ಟದ ಬಗ್ಗೆ ಕೂಡಾ ಪ್ರಸ್ತಾಪ ಮಾಡಲಾಗಿದೆ.
ಪ್ರಾಥಮಿಕ ಪೂರ್ವ ಶಿಕ್ಷಕರ ಪೈಕಿ ಶೇ.7.7, ಪ್ರಾಥಮಿಕ ಶಿಕ್ಷಕರಲ್ಲಿ ಶೇ.4.6 ಹಾಗೂ ಉನ್ನತ ಪ್ರಾಥಮಿಕ ಶಿಕ್ಷಕರಲ್ಲಿ ಶೇ.3.3 ಶಿಕ್ಷಕರು ಅನರ್ಹರು ಇದ್ದಾರೆ ಎಂದು ಯುನೆಸ್ಕೊ ವರದಿ ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆಆಕರ್ಷಕವಾಗಿ ಮತ್ತು ಅರ್ಥಪೂರ್ಣವಾಗಿ ಮುಂದುವರಿಯಬೇಕಾದರೆ ಗುಣಮಟ್ಟದ ಬೋಧನೆ ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಸಲಹೆ ಮಾಡಿದೆ. ಶಿಕ್ಷಕರಲ್ಲಿ ಶೇ.50ರಷ್ಟು ಮಹಿಳೆಯರು ಇದ್ದರೂ, ರಾಜ್ಯಗಳ ನಡುವೆ ಹಾಗೂ ನಗರ ಮತ್ತು ಗ್ರಾಮೀಣ ಭಾಗಗಳ ನಡುವೆ ದೊಡ್ಡ ವ್ಯತ್ಯಾಸ ಇದೆ ಎಂದು ತಿಳಿಸಿದೆ.
ಉತ್ತರ ಪ್ರದೇಶದಲ್ಲಿ 3.3 ಲಕ್ಷ, ಬಿಹಾರದಲ್ಲಿ 2.2 ಲಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ 1.1 ಲಕ್ಷ ಶಿಕ್ಷಕ ಹುದ್ದೆಗಳು ಖಾಲಿ ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿ ದೆ. ಮಧ್ಯಪ್ರದೇಶದಲ್ಲಿ ಅತ್ಯಧಿಕ ಅಂದರೆ 21,077 ಏಕೋಪಾಧ್ಯಾಯ ಶಾಲೆಗಳಿವೆ. ಬಹುತೇಕ ಖಾಲಿ ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿದ್ದು, ಬಿಹಾರದ 2.2 ಲಕ್ಷ ಹುದ್ದೆಗಳ ಪೈಕಿ ಶೇ.89 ಹುದ್ದೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಅಂತೆಯೇ ಉತ್ತರ ಪ್ರದೇಶದ 3.2 ಲಕ್ಷ ಖಾಲಿ ಹುದ್ದೆಗಳ ಪೈಕಿ ಶೇ.80ರಷ್ಟು ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ ಎಂದು ಅಂಕಿ-ಅಂಶ ನೀಡಲಾಗಿದೆ.
ಹೊಸ ಶಿಕ್ಷಣ ನೀತಿಯ ಹೊಸ್ತಿಲಲ್ಲಿ ಇರುವ ನಾವು ಈ ಮೇಲ್ಕಂಡ ಅಂಶಗಳ ಕಡೆಗೆ ಗಮನಹರಿಸದಿದ್ದರೆ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡಿದರೆ ಅದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಶಿಕ್ಷಣವನ್ನು ಅತೀ ಅಗತ್ಯ ವಲಯ ಎಂದು ಪರಿಗಣಿಸಿ ದೇಶದ ಜಿ ಡಿ ಪಿ ಯ ಶೇಕಡಾ ಆರಕ್ಕಿಂತ ಹೆಚ್ಚು ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟು ಗುಣಮಟ್ಟದ ಶಿಕ್ಷಕರ ನೇಮಕಾತಿ,ಕಾಲಕಾಲಕ್ಕೆ ಅವರಿಗೆ ತರಬೇತಿ ನೀಡಿ ಅಪ್ಡೇಟ್ ಮಾಡಬೇಕಿದೆ. ಶಿಕ್ಷಣಕ್ಕೆ ಅಗತ್ಯ ಮೂಲಭೂತವಾದ ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸಬೇಕಿದೆ.ಜೊತೆಗೆ ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಕೃತಕ ಬುದ್ಧಿಮತ್ತೆಯ ಕಾಲಕ್ಕೆ ನಮ್ಮ ಹೊಸ
ಪೀಳಿಗೆಯನ್ನು ಸಜ್ಜು ಮಾಡುವ ಮತ್ತು ಅವರ ವ್ಯಕ್ತಿತ್ವ ವಿಕಸನಗೊಳಿಸುವ ಶಿಕ್ಷಣ ನೀಡಲು ಎಲ್ಲರೂ ಮನಸ್ಸು ಮಾಡಬೇಕಿದೆ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment