05 November 2021

ಐ ಮಿಸ್ ಯೂ ಅಪ್ಪು. ಲೇಖನ


 


*ಐ ಮಿಸ್ ಯೂ ಅಪ್ಪು*

ನಾನು ಮೊದಲ ಬಾರಿ ಸಿನಿಮಾ ನೋಡಿದ್ದು ನಮ್ಮ ಶಿಕ್ಷಕರಾದ ತಿಪ್ಪೇಶಪ್ಪ ಮಾಸ್ಟರ್ ಜೊತೆ ಚಿತ್ರದುರ್ಗದ ರೂಪಾವಣಿ ಥಿಯೇಟರ್ ನಲ್ಲಿ. ಎರಡು ನಕ್ಷತ್ರಗಳು ಚಿತ್ರವನ್ನು ಥಿಯೇಟರ್ ನಲ್ಲಿ ನೋಡಿ ಬಂದು ನಮ್ಮ ಸ್ನೇಹಿತರಿಗೆ ಅದನ್ನು ರಸವತ್ತಾಗಿ ವರ್ಣನೆ ಮಾಡಿದ್ದೆ .ಜೊತೆಗೆ ಆ ಚಿತ್ರದ ಹಾಡುಗಳ ಪಲ್ಲವಿಯನ್ನು ಅದೇ ರಾಗದಲ್ಲಿ ಹಾಡುವುದನ್ನು ಕೇಳಿ ಕೆಲವರು ಖುಷಿಪಟ್ಟರೆ ಕೆಲವರು ಈ ಮೇಷ್ಟ್ರು ದುರ್ಗಕ್ಕೆ  ಬರೀ ಇವನನ್ನೇ ಕರ್ಕೊಂಡು ಹೋಗ್ತಾರೆ ಅಂತ ಉರ್ಕೊಳ್ಳೊರು ಹೆಚ್ಚಿದ್ದರು .ಆ ಚಿತ್ರದಲ್ಲಿ ಬರುವ" ನನ್ನ ಉಡುಪು ನಿನ್ನದು ನಿನ್ನ ಉಡುಪು ನನ್ನದು.....". ಹೌದು ಎಂದರೆ ಹೌದು...ಹೌದ....ಅಲ್ಲ ಎಂದರೆ ಅಲ್ಲ ...ಅಲ್ಲ..." ಎಂದು ಆಗಾಗ್ಗೆ ಗುನುಗುತ್ತಿದ್ದೆ.

ಮತ್ತೊಂದು ಭಾನುವಾರ ನಮ್ಮ ಶಿಕ್ಷಕರು ದುರ್ಗಕ್ಕೆ ಕರೆದುಕೊಂಡು ಹೋದಾಗ  "ಚಲಿಸುವ ಮೋಡಗಳು" ಚಿತ್ರ ತೋರಿಸಿದರು .ನನ್ನ ಗೆಳೆಯರು ನಾನು ಹಾಡುವ ರೀತಿಯನ್ನು ಮೆಚ್ಚಿದ್ದರಿಂದ ಈ ಬಾರಿ ಚಿತ್ರದ ಕಥೆ ಕಡೆಗೆ ಹೆಚ್ಚು ಗಮನ ಕೊಡದೇ ಬರಿ ಹಾಡುಗಳನ್ನು ಗಮನಿಸಿದ್ದೆ .
ಅದರ ಫಲವಾಗಿ  " ಚಂದಿರ ತಂದ ಹುಣ್ಣಿಮೆ ರಾತ್ರಿ.... ಗಾಳಿಯು ತಂದ ತಣ್ಣನೆ ರಾತ್ರಿ..... ಹಾಡನ್ನು ಥಿಯೇಟರ್ ನಿಂದ ಹೊರಬರುತ್ತಲೇ ಗುನುಗುತ್ತಿದ್ದೆ. ಬಸ್ ನಲ್ಲಿ ನಮ್ಮ ಊರಿಗೆ ಬರುವಾಗ " ಕಾಣದಂತೆ ಮಾಯವಾದನು...... ನಮ್ಮ ಶಿವ ಕೈಲಾಸ ಸೇರಿಕೊಂಡನು......" ಹಾಡನ್ನು ಸ್ವಲ್ಪ ಜೋರಾಗೆ ಹೇಳಿಕೊಂಡೆ  .ಬಸ್ ನ ಪ್ರಯಾಣಿಕರೊಬ್ಬರು ಹುಡುಗ ಚೆನ್ನಾಗಿ ಹಾಡ್ ಹೇಳ್ತಾನೆ ಇನ್ನೊಂದು ಸಲ ಹೇಳು ಎಂದರು .ನಾನು ನನ್ನ ಮಾಸ್ಟರ್ ಮುಖ ನೋಡಿದೆ ಅವರು ರಾಜ್ ಕುಮಾರ್ ಅಪ್ಪಟ ಅಭಿಮಾನಿ ಅದಕ್ಕೆ ಮತ್ತೊಮ್ಮೆ ಅಣ್ಣಾ ರವರ ಹಾಡು ಕೇಳಲು ಹಾಡು ಎಂಬಂತೆ ಸನ್ನೆ ಮಾಡಿದರು .ಬಸ್ ಚಿತ್ರಹಳ್ಳಿಗೆ ಬರುವವರೆಗೆ ನಾಲ್ಕು ಬಾರಿ ಅದೇ ಹಾಡನ್ನು ಕೇಳುಗರ ಒತ್ತಾಯದ ಮೇರೆಗೆ ಹಾಡಿದ್ದೆ ಅದರಲ್ಲಿ ಕೆಲವರು ಅಭಿಮಾನದಿಂದ ಐವತ್ತು ಪೈಸೆ ,ಮತ್ತು ಇಪ್ಪತ್ತೈದು ಪೈಸೆ ಕಾಯಿನ್  ನೀಡಿದರು!

ಬಸ್ ಇಳಿದು ನಮ್ಮ ಊರಿಗೆ ನಡೆದುಕೊಂಡು ಹೋಗುವಾಗ "ವೆಂಕಟೇಶ ಅಂತೂ ಹಾಡುಗಾರ ಆಗ್ ಬಿಟ್ಟೆಯಲ್ಲೊ.ವೆರಿ ಗುಡ್ ಇವತ್ತು ನಾವು ನೋಡಿದ್  ಪಿಚ್ಚರ್ ನಲ್ಲಿರೋ
ಇನ್ನೊಂದು ಹಾಡು ಹೇಳು ಅಂದರು.
ಜೇನಿನ ಹೊಳೆಯೊ....ಅಂದು ನಾನು ಹೇಳಿದೆ ಹಾಲಿನ ಹೊಳೆಯೊ...ಅಂತ ನಮ್ಮ ಮಾಸ್ಟರ್ ಧ್ವನಿ ಸೇರಿಸಿದರು. ಇಬ್ಬರೂ ಹಾಡುತ್ತಾ ನಡೆದಾಗ ನಮ್ಮ ಊರು ಬಂದದ್ದೇ ಗೊತ್ತಾಗಲಿಲ್ಲ ನಮ್ಮ ಹಾಡು ಕೇಳಿ ಗೊಲ್ಲರ ಚಿಕ್ಕಜ್ಜರ ನಾಯಿ ಬೊಗುಳಿದಾಗ ಹಾಡು ನಿಲ್ಲಿಸಿ ಮನೆ ಸೇರಿದೆವು.

ನಾನು ಹಾಡು ಹೇಳುವುದು ಬಹುತೇಕ ಹುಡುಗರಿಗೆ ಮತ್ತು ಸುಮಾರು ದೊಡ್ಡವರಿಗೆ ಪ್ರಚಾರ ಆಗಿತ್ತು .ನನಗರಿವಿಲ್ಲದೆ ನಾನಾಗ ನಮ್ಮ ಶಾಲೆಯ ಅನಧಿಕೃತವಾದ ಆಸ್ಥಾನ ಗಾಯಕನಾಗಿ ಹೊರಹೊಮ್ಮಿದ್ದೆ. ಶಾಲಾ ಸಮಾರಂಭದಲ್ಲಿ  , ಹೊರಸಂಚಾರ ಹೋದಾಗ ನನ್ನ ಹಾಡು ಮತ್ತು ಗಾಯನ ಖಾಯಂ ಅಗಿತ್ತು .ನನ್ನ ಜೊತೆಗೆ ನನ್ನ ಗೆಳೆಯ  ಆನಂದ ಸೇರಿಕೊಂಡು ಕೆಲವು ತೆಲುಗು ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸುತ್ತಿದ್ದೆವು .ಒಟ್ಟಿನಲ್ಲಿ ಆ ವಯಸಿನಲ್ಲಿ ನನ್ನದೇ ಪುಟ್ಟ ಆರ್ಕೆಸ್ಟ್ರಾ ತಂಡ ಸಿದ್ಧವಾಗಿತ್ತು. ಆದರೆ ವಾದ್ಯ ಪರಿಕರಗಳು ಇರಲಿಲ್ಲ!

ನನ್ನ ಗಾಯನ ಕೀರ್ತಿ ಹೇಗೋ ನಮ್ಮ ಮಾವನವರ ಊರಾದ ಯರಬಳ್ಳಿಗೂ ಹಬ್ಬಿತ್ತು . ಶಾಲೆಗೆ ನಮಗೆ  ಬೇಸಿಗೆ ರಜೆ ಇದ್ದಿದ್ದರಿಂದ  ಮಾರಮ್ಮನ ಜಾತ್ರೆಗೆ ಒಂದು ವಾರ ಮೊದಲೆ ಯರಬಳ್ಳಿ ಸೇರಿದ್ದೆ .ಅಲ್ಲಿ ನಮ್ಮ ಜಯರಾಂ ಮಾವನ ಮನೆ ಬಳಿ ಒಮ್ಮೆ ಕಾಣದಂತೆ ಮಾಯವಾದನು.....ಹಾಡು ಹಾಡಿದೆ. ಅಕ್ಕ ಪಕ್ಕದ ಮನೆಯವರು ಬಂದು ಕೇಳಿ ಖುಷಿ ಪಟ್ಟು ಕೆಲವರು ಐವತ್ತು ಪೈಸೆ ಕೆಲವರು ಒಂದು ರುಪಾಯಿ ಬಹುಮಾನ ನೀಡಿದರು. ಇದೇ ರೀತಿಯಲ್ಲಿ ಅಲ್ಲಲ್ಲಿ ಜನರ ಅಪೇಕ್ಷೆಯ ಮೇರೆಗೆ ಹಾಡಿ ಜಾತ್ರೆಯ ವೇಳೆಗೆ ನನ್ನ ಜೇಬಿನಲ್ಲಿ ಹತ್ತು ರೂಪಾಯಿ ಸಂಗ್ರಹವಾಗಿತ್ತು ಅಮ್ಮನಿಗೆ ಈ ವಿಷಯ ಹೇಳಿ ದುಡ್ಡು ತೋರಿಸಿದೆ. ಅಮ್ಮ ಒಳಗೊಳಗೇ ಖುಷಿ ಪಟ್ಟರೂ" "ಬರೇ ಪದಗಿದ ಹೇಳ್ಕೆಂಡು ತಿರಾಗದ್ ಬಿಟ್ಟು ಓದಾ ಕಡೆ ಮನಸ್ ಕೊಡು"  ಎಂದು ಗದರಿದರು.

ಇತ್ತೀಚಿಗೆ ಅಪ್ಪುರವರು ನಮ್ಮನ್ನು ಅಗಲಿದ ಸಮಯದಲ್ಲಿ ಅವರ ಕಾಣದಂತೆ ಮಾಯವಾದನು ಹಾಡು ಮತ್ತು ನಾನು ಹಾಡಿದ ಕಾಣದಂತೆ ಮಾಯವಾದನು ಹಾಡು ಯಾಕೋ ಬಹಳ ನೆನಪಾಯಿತು ಮತ್ತು ದೊಡ್ಮನೆ ಹುಡುಗನ ಅಕಾಲಿಕ ಅಗಲಿಕೆ ಬಹಳ ಕಾಡಿತು ಮತ್ತು ಕಾಡುತ್ತಿದೆ.ಐ ಮಿಸ್ ಯು ಅಪ್ಪು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
990925529

1 comment:

Anonymous said...

ತುಂಬ ಚೆನ್ನಾಗಿದೆ ಸರ್
, ಪ್ರತಿಯೊಬ್ಬರೂ ಇದೇ ರೀತಿಯಾಗಿ ಗಾಯಕ ಆಗಿ ಬೆಳೆಯುವದು