ಕಸದಲ್ಲರಳಿದ ಕಲೆ
"ಅಪ್ಪಾ ನನಗೆ ಒಂದು ಪ್ಲಾಸ್ಟಿಕ್ ಗಾಳಿಪಟ ಕೊಡಿಸು. ನನ್ನ ಫ್ರೆಂಡ್ಸ್ ಎಲ್ಲಾ ತೊಗೊಂಡಿದಾರೆ ಇಲ್ಲೇ ಅಂಗ್ಡೀಲಿ ಸಿಗುತ್ತೆ ಬರೀ ಐವತ್ತು ರುಪಾಯಿ ಅಷ್ಟೇ " ಎಂದು ಮಗಳು ದುಂಬಾಲು ಬಿದ್ದಳು .
"ಬೇಡ ಸುಮ್ಮನಿರಮ್ಮ ಆ ಗಾಳಿಪಟಗಳು ಪಾಲಿಥಿನ್ ಕವರ್ ನಿಂದ ಮಾಡಿವೆ, ಅವು ಪರಿಸರಕ್ಕೆ ಹಾನಿ, ಅದರ ದಾರವೂ ನೈಲಾನ್ ಮುಂತಾದ ರಾಸಾಯನಿಕಗಳಿಂದ ಮಾಡಿರುತ್ತಾರೆ , ಇವೆಲ್ಲಕ್ಕೂ ಮಿಗಿಲಾಗಿ ಈ ವಸ್ತುಗಳು ಚೀನಾದಿಂದ ಆಮದು ಮಾಡಿದ ವಸ್ತುಗಳು ಅವುಗಳನ್ನು ನಾವು ಕೊಂಡರೆ ನಮ್ಮ ಹಣ ಬೇರೆ ದೇಶಕ್ಕೆ ಹೋಗುತ್ತದೆ. ಬೇಡ ಸುಮ್ಮನಿರು" ಎಂದು ಜೀವಶಾಸ್ತ್ರ, ಪರಿಸರ ಶಾಸ್ತ್ರ ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದ ಉಪನ್ಯಾಸಕನಂತೆ ಒಂದೇ ಸಮನೆ ಉಪನ್ಯಾಸ ಕೊಟ್ಟೆ. ಆರನೇ ತರಗತಿಯ ನನ್ನ ಮಗಳಿಗೆ ಎಷ್ಟು ಅರ್ಥವಾಯಿತೋ "ಹೋಗಪ್ಪ..."ಎಂದು ಎದ್ದು ಹೋಗಿ ಟೀವಿ ಆನ್ ಮಾಡಿ ರಿಮೋಟ್ ಗುಂಡಿ ಒತ್ತಿದಳು .ಅದರಲ್ಲಿ ಒಂದು ಜಾಹಿರಾತಿನಲ್ಲಿ ಒಂದು ಮಗು ಏರ್ ಬಬಲ್ ಊದಿ ಸಂತಸ ಪಡುವ ದೃಶ್ಯ ಬಂತು .
"ಅಪ್ಪಾ ಹೋಗಲಿ ಈ ಏರ್ ಬಬಲ್ ಆದ್ರೂ ಕೊಡ್ಸು , ಪಕ್ಕದ್ ರೋಡ್ ನಲ್ಲಿ ಇರೋ ಅಂಗಡೀಲಿ ಇದೆ .ಬರೇ ಮೂವತ್ತು ರುಪಾಯಿ. " ಅಂದಳು
"ಅಲ್ಲಾಮ್ಮಾ..ಈ ಟೀವಿಯವರು....."
ಅಂದು ನಾನು ಇನ್ನೂ ಮಾತು ಮುಗಿಸಿರಲಿಲ್ಲ ನನ್ನ ಮಗಳು
"ಪರಿಸರ ಮಾಲಿನ್ಯ, ಬೇರೆ ದೇಶಕ್ಕೆ ದುಡ್ಡು ಟೀವಿ ಸರಿ ಇಲ್ಲ. ಅಲ್ವ ಅಪ್ಪಾ ? ಎಂದು ಎದ್ದು ಟೀವಿ ಆಪ್ ಮಾಡಿ ಅಡುಗೆ ಮನೆಗೆ ಹೋಗಿ
" ಇನ್ನೂ ತಿಂಡಿ ಆಗಲಿಲ್ವೇನಮ್ಮ " ಎಂದು ಜೋರಾಗಿ ಕೂಗಿದಳು.
ನನ್ನ ದೊಡ್ಡ ಮಗಳು ಪಿ ಯೂ ಸಿ ಓದುತ್ತಿದ್ದರಿಂದ ಅವಳ ಕಡೆ ತಿರುಗಿ ನನ್ನ ಭಾಷಣ ಮುಂದುವರೆಸಿದೆ.
"ಈ ಟೀವಿ ಚಾನೆಲ್ ಗಳು, ಸೋಶಿಯಲ್ ಮೀಡಿಯಾಗಳು ಬಂದು ನಮಗೆ ಬೇಕಾದ, ಬೇಕಿಲ್ಲದ ವಸ್ತುಗಳನ್ನು ಮಾರ್ಕೆಟಿಂಗ್ ಮಾಡಲು ವಿಧ ವಿಧದ ಜಾಹಿರಾತುಗಳನ್ನು ನೀಡುತ್ತಾರೆ .ಅದರಲ್ಲೂ ಮಹಿಳೆಯರು ಮತ್ತು ಮಕ್ಕಳೇ ಅವರ ಟಾರ್ಗೆಟ್ ಇದೂ ಒಂದು ರೀತಿಯ ಶೋಷಣೆ ಎಂದರೆ ತಪ್ಪಾಗಲಾರದು.
ನಾನು ಬಾಲ್ಯದಲ್ಲಿ ಇದ್ದಾಗ ನಾನೂ ಗಾಳಿಪಟ ಮಾಡಿ ಹಾರಿಸಿರುವೆ. ಏರ್ ಬಬಲ್ ಮಾಡಿ ಆನಂದ ಪಟ್ಟಿರುವೆ.
ಆಗ ನಾವೇ ಗಾಳಿಪಟ ಮಾಡಿಕೊಳ್ಳುತ್ತಿದ್ದೆವು. ಸ್ನೇಹಿತರೆಲ್ಲಾ ಸೇರಿಕೊಂಡು ಯಾರದೋ ಮನೆಯ ಮುಂದಿನ ಹಳೆಯ ಬಿದಿರು ಕಡ್ಡಿ ಹುಡುಕಿಕೊಂಡು ಅದನ್ನು ಸೀಳಿಕೊಂಡು , ಚೌಕಾಕಾರ ಕಟ್ಟಿ ಹಳೆಯ ನ್ಯೂಸ್ ಪೇಪರ್ ಅಂಟಿಸಿ , ಎಲ್ಲಿಯೋ ತಿಪ್ಪೆಯಲ್ಲಿ ಬಿದ್ದ ಹಳೆಯ ಆಪಿನ ಚಾಪೆಯ ದಾರವನ್ನು ತಂದು ನಮ್ಮ ಗಾಳಿಪಟಕ್ಕೆ ಕಟ್ಟಿ ಮನೆಯ ಹಿಂದಿನ ಕಲ್ಲಿನ ಹೊಲದಲ್ಲಿ ಗಾಳಿಪಟವ ಹಾರಿಸುತ್ತಿದ್ದರೆ ನಮ್ಮ ಗಾಳಿಪಟ ಕ್ಕೂ ನಮಗೂ ಸ್ವರ್ಗ ಮೂರೇ ಗೇಣು."
ಮಗಳು ಕುತೂಹಲದಿಂದ ಹೌದಾ ಅಪ್ಪ? ಎಂದಳು
ನಾನು ಮತ್ತೆ ಶುರುಮಾಡಿದೆ " ಏರ್ ಬಬಲ್ ಅಂತ ನಿನ್ನ ತಂಗಿ ಕೇಳಿದ್ದಳಲ್ಲಾ ಅದನ್ನೂ ನಾವೇ ಮಾಡಿ ಆಡಿ ನಲಿತಾ ಇದ್ವಿ"
ಎಂಗಪ್ಪಾ?
"ನಮ್ಮ ಊರಲ್ಲಿ ಅಮಟೆಕಾಯಿ ಗಿಡ ಅಂತ ಇದೆ .ಅದರ ಎಲೆ ಒಂತರ ಔಡಲ ಗಿಡದ ಎಲೆ ತರ ಅಗಲ ಇರುತ್ತೆ. ಅದನ್ನು ಕಿತ್ತು ದೊನ್ನೆ ( ಬೌಲ್ ತರ) ಮಾಡಿಕೊಂಡು ಅದೇ ಗಿಡದ ಕಾಂಡದಿಂದ ಬರುವ ಬಿಳಿ ನೀರಿನಂತಹ ದ್ರವ ಸಂಗ್ರಹ ಮಾಡಿ ,ಒಂದು ಗರಿಕೆ ಕಡ್ಡಿಯನ್ನು ತೆಗೆದುಕೊಂಡು ಅದರ ಮುಂಬಾಗದಲ್ಲಿ ವೃತ್ತಾಕಾರದ ಗಂಟು ಹಾಕಿ, ಅದನ್ನು ಅಮಟೆಕಾಯಿ ಗಿಡದಿಂದ ಸಂಗ್ರಹಿಸಿದ ಬಿಳಿ ದ್ರಾವಣದಲ್ಲಿ ಅದ್ದಿ ಊದಿದರೆ ದೊಡ್ಡ ದೊಡ್ಡ ಬಬಲ್ ಗಳು ಮೇಲೆ ಹಾರುತ್ತಿದ್ದವು ವಾರದಲ್ಲಿ ಒಮ್ಮೆಯಾದರೂ ಹೀಗೆ ಆಡಿ ನಲಿಯುತ್ತಿದ್ದೆವು.
ಇನ್ನೂ ಹಸಿ ತೆಂಗಿನ ಗರಿಯನ್ನು ಸೀಳಿ ಅದರಲ್ಲಿ ವಾಚು ,ಉಂಗುರ, ಪೀಪಿ ಮಾಡಿ ಆಟ ಆಡಿ ನಲಿಯುತ್ತಿದ್ದೆವು.ಗಣೇಶನ ಹಬ್ಬ ಬಂತೆಂದರೆ ಜೇಡಿ ಮಣ್ಣು ತಂದು ನಾವೇ ಗಣೇಶನ ವಿಗ್ರಹ ಮಾಡಿ ಪೂಜೆ ಮಾಡುತ್ತಿದ್ದೆವು .ಹೀಗೆ ನಾವು ಕಸದಿಂದ ರಸ ಮಾಡಿಕೊಂಡು ಆಟ ಆಡುತ್ತಿದ್ದೆವು ನೀವು ಪ್ರತಿಯೊಂದಕ್ಕೂ ಹಣ ಕೊಟ್ಟು ದುಂದುವೆಚ್ಚ ಮಾಡುತ್ತೀರಿ ಅದರಲ್ಲೂ ನೀವು ಕೊಳ್ಳುವ ಕೆಲ ವಸ್ತುಗಳು ಪರಿಸರಕ್ಕೆ ಮಾರಕ ಅಂತಹ ವಸ್ತುಗಳ ಬಳಕೆ ಕಡಿಮೆ ಮಾಡಬೇಕು " ಎಂದು ದೀರ್ಘವಾಗಿ ಹೇಳಿದೆ.
ಟಿಪನ್ ರೆಡಿಯಾಗಿದೆ ಬನ್ನಿ ಎಂದು ನಮ್ಮ ಮನೆಯವರು ಕರೆದಾಗ ಎದ್ದು ಕೈ ತೊಳೆದುಕೊಂಡು ತಟ್ಟೆಯ ಮುಂದೆ ಕುಳಿತೆವು.
ಬೇಸಿಗೆ ರಜದಲ್ಲಿ ನಮ್ಮ ಊರಿಗೆ ಹೋದಾಗ ಮಗಳು ನನ್ನ ಪರೀಕ್ಷೆ ಮಾಡಲು ಅಪ್ಪ ಗಾಳಿಪಟ ,ಏರ್ ಬಬಲ್ ,ವಾಚು ಎಂದು ಕೇಳಿದಳು. ನಾನು ಮಾಡಿಕೊಟ್ಟ ಗಾಳಿಪಟ ಹಾರಿಸಿ ನಲಿದರು ಸ್ವಾಭಾವಿಕ ಜೈವಿಕ ಏರ್ ಬಬಲ್ ಕಂಡು ಆನಂದ ಪಟ್ಟರು. ತೆಂಗಿನಗರಿಯ ವಾಚು ಉಂಗುರ ಕಟ್ಟಿ ಕೊಂಡು ಖುಷಿಪಟ್ಟರು .
"ಅಪ್ಪಾ ಇದು ಪರಿಸರಕ್ಕೆ ಪೂರಕ ಕಸದಿಂದ ರಸ..... " ಎಂದು ನನ್ನ ಎರಡನೇ ಮಗಳು ಅನುಕರಣೆ ಮಾಡಿದಾಗ ಮನೆಯವರೆಲ್ಲ ಬಿದ್ದು ಬಿದ್ದು ನಕ್ಕೆವು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment