20 November 2021

ಮಕ್ಕಳ ಬಾಲ್ಯ ಅಮೂಲ್ಯ ,ಅನುಭವಿಸಲು ಬಿಡಿ.ಕಥೆ


 

ಮಕ್ಕಳ ಬಾಲ್ಯ ಅಮೂಲ್ಯ
ಅನುಭವಿಸಲು ಬಿಡಿ. ಕಥೆ

ನಾನೀಗ ಸಮಾಜದಲ್ಲಿ ಒಂದು ಉತ್ತಮ ಸ್ಥಾನದಲ್ಲಿ ಇರುವೆ .ಸರ್ಕಾರಿ ಕೆಲಸ .ಸ್ವಂತ ಮನೆ. ಕುಟುಂಬ ಎಲ್ಲಾ ಇದೆ.ಸುಖಿ ಜೀವನ ನಡೆಸುತ್ತಿರುವೆ .ಆದರೆ ಇಂದು ದಿನಸಿ ಖರೀದಿಗಾಗಿ ಒಂದು ಹೋಲ್ಸೇಲ್  ಅಂಗಡಿಯ ಬಳಿ  ಹೋದಾಗ ನಡೆದ ಘಟನೆ ಬಹಳ ಬೇಸರ ತಂದಿತು ಜೊತೆಗೆ ಅದು ನನ್ನ ಬಾಲ್ಯದ ನೆನಪುಗಳನ್ನು ತರಿಸಿ ಇನ್ನೂ ಮನಸ್ಸು ಘಾಸಿಯಾಯಿತು.

ಆ ಬಾಲಕ ಬಹುಶಃ ಹದಿನಾಲ್ಕು ಅಥವಾ ಹದಿನೈದು ವರ್ಷ ಇರಬಹುದು. ಬೇಗ ದಿನಸಿ ಸಾಮಾನುಗಳನ್ನು ಗ್ರಾಹಕರಿಗೆ ಕೊಡಲಿಲ್ಲ ಎಂದು ಅಂಗಡಿಯ ಮಾಲೀಕ ಮನಸೋ ಇಚ್ಚೆ ಹೊಡೆದರು .ಇದನ್ನು ನೋಡಿ ಆ ಮಗುವನ್ನು ಏಕೆ ಹಾಗೆ ಹೊಡೆಯುತ್ತೀರಿ? ಎಂದು ಕೇಳಿದ್ದಕ್ಕೆ
"ಸಾರ್ ಅವನಿಗೆ ನಾನು ಕೂಲಿ ಕೊಡ್ತೀನಿ ,ಹೊಡೆಯೋ ಹಕ್ಕು ನನಗಿದೆ ಸುಮ್ನೆ ನಿಮ್ ಸಾಮಾನ್ ತಗೊಂಡ್ ಹೋಗಿ ಬಿಟ್ಟಿ ಸಲಹೆ ಬೇಡ" ಎಂದು ಸಿಟ್ಟಿನಿಂದ ಮಾತನಾಡಿದರು .

ನನಗೆ ನನ್ನ ಪೊಲೀಸ್ ಭಾಷೆ ಬಾಯಿಗೆ ಬಂದು ಬೈಯ್ಯಬೇಕು ಎಂದು ಮನಸಾದರೂ ನಾ‌ನು ಪೋಲಿಸ್ ಇನ್ಸ್ಪೆಕ್ಟರ್ ಎಂದೂ ಅವನಿಗೆ ಹೇಳಲಿಲ್ಲ ದಿನಸಿಯ ಹಣ ಕೊಟ್ಟು ಹಿಂತಿರುಗಿದೆ.

ಟಿಪನ್ ಕೊಡುವಾಗ "ಯಾಕ್ರಿ ಇವತ್ತು ಒಂತರ  ಡಲ್ ಆಗಿ  ಇದಿರಾ ಹುಷಾರಿಲ್ಲ ಅಂದ್ರೆ ರಜಾ ಹಾಕಿ"  ಎಂದು ನನ್ನಾಕೆ ಕೇಳಿದಳು " ಏನೂ ಇಲ್ಲ ಕಣೆ ಯಾಕೋ ಎರಡು ದಿನದಿಂದ ಮಳೆ ಬೀಳ್ತಾ ಇದೆಯಲ್ಲ, ಥಂಡಿ ಗಾಳಿ ಅದಕ್ಕೆ ಅಷ್ಟೇ " ಎಂದು ಸ್ಟೇಷನ್ ಕಡೆ ಪ್ರಯಾಣ ಬೆಳೆಸಿದೆ.

"ಸರ್ ನಿನ್ನೆ ಮೊಬೈಲ್ ಅಂಗಡಿ ಕಳ್ಳತನ ಕೇಸ್ ನಲ್ಲಿ ಮೂವರ್ನ ಅರೆಸ್ಟ್ ಮಾಡಿದಿವಿ ಕರ್ಕೊಂಬರ್ಲಾ" ಎಂದು  ಜಬಿಉಲ್ಲಾ ಕೇಳಿದಾಗ
" ಬ್ಯಾಡ ಜಬಿ ಆಮೇಲೆ ಕರ್ಕೊಂಬಾ " ಎಂದು ಹೇಳಿ ತಿರುಗುವ ವೀಲ್ ಚೇರ್ ನಲ್ಲಿ ಒಮ್ಮೆ ತಿರುಗಿದೆ.ನನ್ನ ನೆನಪೂ ತಿರುಗುತ್ತಾ ನನ್ನ ಬಾಲ್ಯ ಕ್ಕೆ ಕರೆದುಕೊಂಡು ಹೋಯಿತು.

ಐದಾರು ಎಕರೆ ಹೊಲವಿದ್ದರೂ ದುಡಿಯುವ ಅಭ್ಯಾಸ ಮರೆತ ಅಪ್ಪ ಇರೋ ಬರೋ ಚಟಗಳನ್ನು ಹತ್ತಿಸಿಕೊಂಡು ಊರ ತುಂಬ ಸುತ್ತುವ ಖಾಯಂ ಕೆಲಸ ಮಾಡುತ್ತಿದ್ದರು. ಆರು ಮಕ್ಕಳಿಗೆ ತಂದೆಯಾಗಿದ್ದುದೇ ಅವರ ಮಹಾನ್ ಸಾಧನೆ .ಅಮ್ಮ  ಕೂಲಿನಾಲಿ ಮಾಡಿ ನಮ್ಮ ಸಾಕಿದರು ಕೊನೆಯ ಮಗನಾದ ನನ್ನ ಮೇಲೆ ಸ್ವಲ್ಪ ಜಾಸ್ತಿ ಪ್ರೀತಿ ಎಂದೇ ಹೇಳಬೇಕು .
" ಏಯ್ ರವಿ ನೀನು ಅರಕಲಗೂಡು ಗೆ ಹೋಗು ಅಲ್ಲೇ ಓದು ಅಲ್ಲಿ ಸ್ಕೂಲ್ ಚೆನ್ನಾಗೈತಂತೆ  , ನಿಮ್ ಮಾವ ಅಜ್ಜಿ ಅತ್ತೆ ಚೆನ್ನಾಗಿ ನೋಡ್ಕಂತಾರೆ .ನೀನು ಓದಿ ಬುದ್ದಿವಂತ ಆಗ್ತಿಯಾ ಕಣಪ್ಪ ಈ ಊರಾಗೆ ಸ್ಕೂಲ್ ಇಲ್ಲ , ಪಕ್ಕದ ಊರಿಗೆ ಹೋಗಬೇಕು   ನಿಮ್ ಅಣ್ಣಾರು ಅಕ್ಕಾರು  ಯಾಕೋ ಯಾರೂ ಸರಿಯಾಗಿ ಓದಾ ಲಕ್ಷಣ ಕಾಣ್ತಾ ಇಲ್ಲ. ನೀನು ಸುಮ್ನೆ ಅಜ್ಜಿ ಮನೆಗೆ ಹೋಗಿ ಓದಪ್ಪ" ಎಂದು ಅಮ್ಮ ಹೇಳಿದರು ಅಮ್ಮನ ಮಾತಿನಂತೆ ಅಜ್ಜಿಯ ಊರಿಗೆ ಬಂದೆ.

ಬಂದ ಹೊಸತರಲ್ಲಿ ಮಾವ ಮತ್ತು ಮಾವನ ಹೆಂಡತಿ ಚೆನ್ನಾಗಿ ನೋಡಿಕೊಂಡರು ಕ್ರಮೇಣವಾಗಿ ನಾನು ಓದುವುದಕ್ಕಿಂತ ಮನೆ ಕೆಲಸಗಳೆ ಹೆಚ್ಚಾದವು.
ಬೆಳಿಗ್ಗೆ ಐದು ಗಂಟೆಗೆ ಎದ್ದು ಸುಮಾರು ನಾಲ್ಕೈದು ಎಮ್ಮೆ ಒಂದು ಜೊತೆ ಎತ್ತುಗಳ ಸಗಣಿ ಬಾಸಿ ,  ಕಸ ಹೊಡೆದು ತಿಪ್ಪೆಗೆ ಹೊತ್ತು ಹಾಕಿ, ಕಾಫಿ ಕುಡಿದು ಹೊಲಕ್ಕೆ ಹೋಗಿ ಹಸಿ ಹುಲ್ಲು ಕಿತ್ತು ತಲೆಯ ಮೇಲೆ ಹೊತ್ತು ತಂದು ಮನೆಗೆ ಹಾಕಿ ಮುಖ ತೊಳೆದು ಊಟ ಮಾಡಿ ಸಮಯ ನೋಡಿದರೆ ಒಂಭತ್ತೂವರೆ ಆಗಿರುತ್ತಿತ್ತು. ಗಬ ಗಬ ಸ್ವಲ್ಪ ತಿಂದು ಓಡಿ ಶಾಲೆ ಸೇರಿದಾಗ ಬೆಲ್ ಬಾರಿಸಿ ಶಾಲಾ ಪ್ರಾರ್ಥನೆ ಶುರುವಾಗಿರುತ್ತಿತ್ತು ಪೀಟಿ ಮೇಷ್ಟ್ರು ಕಾಟಪ್ಪ ಕಣ್ಣಲ್ಲೇ ವಾರ್ನಿಂಗ್ ನೀಡುತ್ತಿದ್ದರು.

ಶಾಲೆಯಲ್ಲಿ ಪಾಠ ಪ್ರವಚನ ಕೇಳಿ ಸಂಜೆ ಮನೆ ತಲುಪಿದ ತಕ್ಷಣ ದನಗಳಿಗೆ ಹುಲ್ಲು ಹಾಕುವುದು ಸೇದೋಬಾವಿಯಿಂದ ನೀರು ತರುವುದು ಅದೂ ಇದು ಕೆಲಸ ಮುಗಿಯೋ ಹೊತ್ತಿಗೆ ರಾತ್ರಿ ಎಂಟು ಗಂಟೆ ಆಗ ಪುಸ್ತಕ ಹಿಡಿದು ಕುಳಿತುಕೊಂಡ ಸ್ವಲ್ಪ ಹೊತ್ತಿಗೆ ಊಟಕ್ಕೆ ಕರೆ ಬರುತ್ತಿತ್ತು .ಉಂಡ ಮೇಲೆ ನಿದ್ರಾ ದೇವಿಯ ಆಲಿಂಗನಕ್ಕೆ ಮರುಳಾಗುತ್ತಿದ್ದೆ.

ಇದು ದಿನನಿತ್ಯದ ದಿನಚರಿ ಅಮ್ಮ ಒಮ್ಮೆ ನನ್ನ ನೋಡಲು ಮಾವನ ಮನೆಗೆ ಬಂದಾಗ ನನ್ನ ಪರಿಸ್ಥಿತಿ ನೋಡಿ ಮನದಲ್ಲೇ ನೊಂದುಕೊಂಡಿದ್ದನ್ನು ಗಮನಿಸಿದೆ .ಇಬ್ಬರ ಕಣ್ಣಲ್ಲೂ ನೀರು ರೆಪ್ಪೆಯವರೆಗೂ ಬಂದರೂ ತಡೆಹಿಡಿದೆವು ಕಾರಣ ನಮ್ಮ ಊರಲ್ಲಿನ ನಮ್ಮ ಮನೆಯ ಪರಿಸ್ಥಿತಿ.

ಹೀಗೆ ಅರ್ಧವಾರ್ಷಿಕ ಪರೀಕ್ಷೆ ಮುಗಿದು ನಮ್ಮ ಊರಿಗೆ ಹೋಗಲು ಕಾತರನಾಗಿದ್ದೆ ಮಾವ ಬೇಡ ಇಲ್ಲೇ ಇರು ಅಂದರು ಒಲ್ಲದ ಮನಸ್ಸಿನಿಂದ ಅಲ್ಲೇ ಉಳಿದೆ .ಅರ್ಧವಾರ್ಷಿಕ ಪರೀಕ್ಷೆ ಫಲಿತಾಂಶ ನೋಡಿ  ನನಗೇನೂ ಶಾಕ್ ಆಗಲಿಲ್ಲ ಕಾರಣ ನಾನು ಇಲ್ಲಿ ಓದಿದ್ದಕ್ಕಿಂತ ಮನೆಯಲ್ಲಿ ಜೀತದಂತೆ ಕೆಲಸ ಮಾಡಿದ್ದೆ ಜಾಸ್ತಿ. ಅಲ್ಲಿ ಇಡೀ ತರಗತಿಗೆ ಮೊದಲು ಬರುತ್ತಿದ್ದವನು   ಇಲ್ಲಿ ಕನ್ನಡ ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ಪೇಲಾಗಿದ್ದೆ !
ಇದನ್ನು ಅಮ್ಮ ಮಾವನವರಿಗೆ ಹೇಳಲಿಲ್ಲ ಕೆಲಸ ಮಾಡುತ್ತಲೆ ಮುಂದಿನ ವಾರ್ಷಿಕ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ನಿಶ್ಚಯ ಮಾಡಿಕೊಂಡು ಓದಿದ ಫಲ ಒಂಭತ್ತನೆಯ ತರಗತಿಯನ್ನು ಪಾಸು ಮಾಡಿದ್ದೆ.

"ಅಮ್ಮ ನಾನು ಬೇರೆ ಊರಲ್ಲಿ ಓದುವೆ ಇಲ್ಲಿ ಬೇಡ " ಎಂದಾಗ ಮಾವನವರು ವಿರೋಧ ಮಾಡಿದರೂ ಅಮ್ಮ ನನ್ನ ಮಾತು ಮನ್ನಿಸಿ
ತಿಪ್ಪೇಸ್ವಾಮಣ್ಣನವರ ಸಲಹೆಯ ಮೇರೆಗೆ ಮೈಸೂರಿನ ರಾಮಕೃಷ್ಣ ಆಶ್ರಮದಲ್ಲಿ ಓದಲು ಸೇರಿಸಿದರು ಅಲ್ಲಿಂದ ನನ್ನ ಜೀವನದ ದಿಕ್ಕೇ ಬದಲಾಯಿತು.

"ಸಾರ್ ಯಾರೊ ಅಂಗಡಿ ಓನರ್ ಬಂದಿದಾರೆ ಒಳಕ್ಕೆ ಕಳಿಸ್ಲಾ?" ಜಬಿ ಕೇಳಿದ.
ಕಳಿಸು ಎಂದೆ
ನಮಸ್ಕಾರ ಮಾಡುತ್ತಾ ಒಳಗೆ ಬಂದ ಅಂಗಡಿ ಮಾಲೀಕ ನನ್ನ ನೋಡಿ  ಶಾಕ್ ಆದ
"ಸಾರ್ ನೀವೇ  ಸಾಹೇಬರು ಅಂತ ಗೊತ್ತಾಗ್ದೇ ಬೆಳಿಗ್ಗೆ ಏನೇನೊ ಅಂದ್ ಬಿಟ್ಟೆ ಕ್ಷಮಿಸಿ ಸಾರ್ ಕಾಲಿಗ್ ಬೀಳ್ತೀನಿ"

"ರೀ ಆ ಓದೋಕ್ ಹೋಗೋ ಹುಡ್ಗನ್ನ ಕೆಲಸಕ್ಕೆ ಇಟ್ಕೊಂಡಿರೋದೇ ತಪ್ ಅಂತಾದ್ರಲ್ಲಿ ಅಂಗ್ ಹೊಡಿತೀರಲ್ಲ ನಾಚ್ಕೆ ಆಗಲ್ವ ನಿಮಗೆ ? ಮಕ್ಕಳ ಬಾಲ್ಯ ಅಮೂಲ್ಯವಾದುದು ಕಣ್ರೀ , ಅದನ್ನು ಅನುಭವಿಸೋಕೆ ಬಿಡಿ. ಯಾಕೆ ಹಣದ ಆಸೆಗೆ ಮೃಗ ಆಗ್ತೀರಾ" ಎಂದು ಹೇಳುವಾಗ ಯಾಕೋ ಗದ್ಗದಿತನಾಗಿದ್ದು ನನ್ನ ಗಮನಕ್ಕೆ ಬಂತು ಅಂಗಡಿ ಮಾಲೀಕನೂ ಗಮನಿಸಿದ.
" ಕ್ಷಮಿಸಿ ಸಾರ್,  ತಪ್ಪಾತು ಸರ್ ನಾನು ಬ್ಯಾಡ ಅಂದ್ರು ಅವರ್ ಅಪ್ಪ ಕೆಲಸಕ್ ಬಿಟ್ ಹೋದ ಸರ್ "
" ಬಾಲಕಾರ್ಮಿಕ ಕಾಯ್ದೆ ಪ್ರಕಾರ ನಿನ್ನ ಮತ್ತು ಅವರಪ್ಪನ್ ಒಳಾಕ ಹಾಕ್ತೀನಿ ಆವಾಗ ಬುದ್ದಿ ಬರುತ್ತೆ"
" ಇಲ್ಲ ಸರ್ ನಾಳೆಯಿಂದ ನಾನು ಆ ಹುಡ್ಗನ್ನ ಅಲ್ಲ ಯಾರೇ ಮಕ್ಕಳನ್ನು ಅಂಗಡಿ‌ ಕೆಲಸಕ್ಕೆ ಇಟ್ಕೊಳಲ್ಲ " ಎಂದು ನಡುಗಿದರು ಆ ಅಂಗಡಿ ಮಾಲೀಕ.
ಅಷ್ಟ್ ಮಾಡ್ರಿ   ನಡೀರಿ ಮನೆಗೆ ಅಂತ ರೇಗಿದೆ. ಅವರು ಕಾಣೆಯಾದರು.

"ಸರ್ ಆ ಮೊಬೈಲ್ ಕಳ್ರು......."
ಎಂದು ಜಬಿ ಹೇಳಿದಾಗ ಆಮೇಲೆ  ನೋಡೋಣ ಎಂದು ಎದ್ದು ಮನೆಯ ಕಡೆ ಊಟಕ್ಕೆ ಹೊರಟೆ....

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.

No comments: