ಕುಣಿಗಲ್ ಶೋಧ .ಕೃತಿ ವಿಮರ್ಶೆ
(ಸಂಶೋಧನಾ ಲೇಖನಗಳ ಸಂಗ್ರಹ)
ಡಾ. ಕೆ ರೇವಣ ಸಿದ್ದಯ್ಯ .
ಬಿ .ಎಡ್. ಗೆಳೆಯ ಯೋಗಾನಂದ ರವರ ಮೂಲಕ ಪರಿಚಿತವಾದ ಡಾ. ಕೆ. ರೇವಣ ಸಿದ್ದಯ್ಯ ರವರು ಬರೆದ ಸಂಶೋಧನಾ ಕೃತಿಯನ್ನು ಓದಿದಾಗ ಬಹಳಷ್ಟು ಐತಿಹಾಸಿಕ ಸತ್ಯಗಳನ್ನು ತಿಳಿದೆನು.
ಈ ಕೃತಿಗೆ ಆದಿಚುಂಚನಗಿರಿ ಮಹಾ ಸಂಸ್ಥಾನ ದ ಡಾ. ಶ್ರೀ. ನಿರ್ಮಲಾನಂದ ಸ್ವಾಮೀಜಿ ರವರ ಆಶೀರ್ವಚನ ಪುಸ್ತಕದ ಘನತೆಯನ್ನು ಹೆಚ್ಚಿಸಿದೆ. ಎಂ. ಪ್ರಕಾಶ ಮೂರ್ತಿ ರವರ ಮುನ್ನುಡಿ ಮತ್ತು ಜಾಣಗೆರೆ ವೆಂಕಟರಾಮಯ್ಯ ರವರ ಬೆನ್ನುಡಿ ಮೌಲಿಕವಾಗಿದೆ.
ಕುಣಿಗಲ್ ತಾಲ್ಲೂಕಿನ ಬೇಗೂರು ಪಂಚಾಯ್ತಿ ಕುರುಪಾಳ್ಯ ಗ್ರಾಮದ ರೈತಾಪಿ ಕುಟುಂಬದಿಂದ ಬಂದಿರುವ ಡಾ| ಕೆ. ರೇವಣಸಿದ್ದಯ್ಯ ರವರು ಪ್ರತಿಭಾವಂತ ಮತ್ತು ಭರವಸೆಯ ಸಂಶೋಧಕರು , ವ್ಯಾಸಂಗದ ಹಂತದಲ್ಲೇ ಚಿಂತನೆ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಸಂಶೋಧನೆಯತ್ತ ಆಸಕ್ತಿ ಬೆಳೆಸಿ ಕೊಂಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕುಣಿಗಲ್ ನಾಡು-ಇತಿಹಾಸ ಮತ್ತು ಪುರಾತತ್ವ ಅಧ್ಯಯನ' ಎಂಬ ವಿಷಯದ ಬಗ್ಗೆ ಪಿಹೆಚ್.ಡಿ ಪದವಿ ಪಡೆದುಕೊಂಡಿದ್ದಾರೆ.
ಯುವ ಸಂಶೋಧಕರು ತನ್ನ ತವರೂರು ಕುಣಿಗಲ್ ತಾಲ್ಲೂಕಿನ ಮೇಲಿನ ಅಭಿಮಾನ, ಆಸಕ್ತಿಯಿಂದ ಜನ್ಮ ನೀಡಿದ ಕರ್ಮಭೂಮಿಯನ್ನು ಪ್ರೀತಿಸುವುದು, ಅದರ ಇತಿಹಾಸದ ಬಗೆಗೆ ಆಸಕ್ತಿ ತಾಳುವುದು, ವಾಸ್ತವ ಇತಿಹಾಸವನ್ನು ಶೋಧಿಸುವುದು ಕರ್ತವ್ಯವೆಂದು ಭಾವಿಸಿ ಆ ದಿಸೆಯಲ್ಲಿ ಅವುಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಪ್ರಶಂಸನೀಯ.
ಕುಣಿಗಲ್ ಶೋಧ ಕೃತಿಯಲ್ಲಿ ೧೪ ಬಿಡಿ ಬರಹಗಳು ಬಹುತೇಕ ಸಂಶೋಧನಾತ್ಮಕ ಲೇಖನಗಳಾಗಿದ್ದು, ಕೃತಿಗೆ ಮಹತ್ವವನ್ನು ತಂದುಕೊಟ್ಟಿವೆ.
ಕುಣಿಗಲ್ ಪರಿಸರದ ನವಶೋಧಿತ ಕಬ್ಬಿಣದ ಕುಲುಮೆಗಳು ಎಂಬ ಲೇಖನವು ಲೇಖಕರಿಗೆ ಡಾ.ಎಂ. ಎಚ್. ಕೃಷ್ಣ ಮೆರಿಟ್ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಅಭಿನಂದನಾರ್ಹ.
ಹುತ್ರಿದುರ್ಗ ಪರಿಸರದ ನವಶೋಧಿತ ಶಿಲಾಯುಗ ಸಂಸ್ಕೃತಿಯ ಸಮಾಧಿ ನೆಲೆಗಳು ಎಂಬ ಲೇಖನ ಓದುತ್ತಿದ್ದರೆ ನಾವು ಹುತ್ರಿ ದುರ್ಗಕ್ಕೆ ಭೇಟಿ ನೀಡಿದ ಅನುಭವವಾಗುತ್ತದೆ.ಪೂರಕವಾಗಿ ನೀಡಿರುವ ಚಿತ್ರಗಳು ಓದುಗರಿಗೆ ಸಚಿತ್ರ ಮಾಹಿತಿ ನೀಡಲು ಸಹಕಾರಿಯಾಗಿವೆ.ಇದರಲ್ಲಿ ಉಲ್ಲೇಖಿತವಾದ ಕಲ್ಲುಸೇವಾ ಪದ್ದತಿಯು ಪಾರ್ಸಿ ಧರ್ಮದ ಶವಸಂಸ್ಕಾರ ಪದ್ಧತಿಯನ್ನು ನೆನಪಿಸುತ್ತದೆ.
ಕುಣಿಗಲ್ ನಾಡಿನ ಕಂಬದ ನರಸಿಂಹನ ಆರಾಧನಾ ನೆಲೆಗಳು ಎಂಬ ಲೇಖನವು ಕುಣಿಗಲ್ ತಾಲೂಕಿನಲ್ಲಿ ಇರುವ ಹತ್ತಕ್ಕೂ ಹೆಚ್ಚು ನರಸಿಂಹ ದೇವರ ದೇಗುಲಗಳ ಸಮಗ್ರ ಮಾಹಿತಿಯನ್ನು ನೀಡುತ್ತವೆ.
ಬೇಗೂರು ಗ್ರಾಮದ ಪ್ರಾಚ್ಯಾವಶೇಷಗಳು ಎಂಬ ಲೇಖನವು ಬೇಗೂರಿನ ಕೆರೆ , ವೀರಗಲ್ಲುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ನಮ್ಮ ಪ್ರತೀ ಗ್ರಾಮಗಳು ಸಾಂಸ್ಕೃತಿಕ ಪರಂಪರಾ ಕೇಂದ್ರಗಳು ಎಂಬ ಭಾವನಾತ್ಮಕ ಅಂಶವನ್ನು ತೆರೆದಿಡುತ್ತದೆ.
ಇನ್ನೂ ಈ ಪುಸ್ತಕದ ಇತರೆ ಲೇಖನಗಳಾದ
ಪ್ರಾಚೀನ ಜೈನಕೇಂದ್ರ ಸಂಕೀಘಟ್ಟ ,
ಸ್ಥಳನಾಮಗಳ ಹಿನ್ನೆಲೆಯಲ್ಲಿ ಕುಣಿಗಲ್ ನಾಡಿನ ಕೋಟೆಗಳ ಅಧ್ಯಯನ, ಕುಣಿಗಲ್ ನಾಡಿನ ಶಾಸನೋಕ್ತ ಸ್ಥಳನಾಮಗಳು,
ಕುಣಿಗಲ್ ಪಟ್ಟಣದ ಪ್ರಾಚೀನ ದೇವಾಲಯಗಳು, ಕುಣಿಗಲ್ ಪರಿಸರದ ನಂಬಿಕೆ ಆಚರಣೆಗಳು,
ಕುಣಿಗಲ್ ಪರಿಸರದ ಸಾಂಪ್ರದಾಯಿಕ ಆಹಾರ ಪದ್ಧತಿ, ಕುಣಿಗಲ್ ತಾಲ್ಲೂಕಿನ ಶಾಸನೋಕ್ತ ಆಗ್ರಹಾರಗಳು, ಹುತ್ರಿದುರ್ಗದ ಪ್ರಾಚ್ಯಾವಶೇಷಗಳು,ಕುಣಿಗಲ್ ಸೀಮೆಯ ಸ್ಥಳಪುರಾಣ ಮತ್ತು ಐತಿಹ್ಯಗಳು,ಮಾರ್ಕೋನಹಳ್ಳಿ ಮತ್ತು ಮಂಗಳಾ ಜಲಾಶಯ ಮುಂತಾದ ಲೇಖನಗಳು ಸಮಗ್ರ ಸಂಶೋಧನಾ ಪ್ರಬಂಧಗಳಾಗಿದ್ದು ಇತಿಹಾಸದ ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಸಕ್ತಿ ಇರುವವರ ಪಾಲಿನ ಆಕರ ಗ್ರಂಥವಾಗಿದೆ ಎಂದರೆ ತಪ್ಪಾಗಲಾರದು.
ಡಾ| ಕೆ. ರೇವಣಸಿದ್ಧಯ್ಯನವರು ತಮ್ಮ ಕೃತಿಯಲ್ಲಿ ಕುಣಿಗಲ್ ಬಗ್ಗೆ ಸರಿಯಾಗಿ ಪರಿಚಯವಿಲ್ಲದ ನನ್ನಂತಹ ಹೊರ ಜಿಲ್ಲೆಯಿಂದ ಬಂದವರಿಗೆ ತಿಳಿಯದಿದ್ದ ಹೊಸ ಹೊಸ ಸಂಗತಿಗಳನ್ನು ದಾಖಲೆ ಸಹಿತವಾಗಿ ವಿವರಿಸಿರುವುದು ಸಂತಸ ತಂದಿದೆ. ಅವರ ಸಂಶೋದನಾ ಕಾರ್ಯ ನಿರಂತರವಾದ ಕ್ಷೇತ್ರ ಅಧ್ಯಯನ ಈ ಪುಸ್ತಕದಲ್ಲಿ ಪ್ರತಿಬಿಂತವಾಗಿದೆ. ಶ್ರೀಯುತರು ಮುಂದಿನ ದಿನಗಳಲ್ಲಿ ಇಂತಹ ಮೌಲಿಕ ಕೃತಿಗಳನ್ನು ರಚಿಸುತ್ತಾ ಇತಿಹಾಸದ ಮೇಲೆ ಬೆಳಕು ಚೆಲ್ಲವ ಕಾರ್ಯ ಮಾಡಲಿ ಎಂದು ಆಶಿಸುತ್ತೇನೆ .
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
990925529
ಪುಸ್ತಕದ ಹೆಸರು: ಕುಣಿಗಲ್ ಶೋಧ
ಸಂಶೋಧನಾ ಲೇಖನಗಳ ಸಂಗ್ರಹ
ಲೇಖಕರು:ಡಾ. ಕೆ ರೇವಣ ಸಿದ್ದಯ್ಯ .
ಪ್ರಕಾಶನ: ಸುಹಾಸ್ ಗ್ರಾಫಿಕ್ಸ್, ಬೆಂಗಳೂರು
ಬೆಲೆ: 170 ₹
No comments:
Post a Comment