29 November 2021

ಅವನು ಕರೆದಾಗ ಹೋಗಲು ಸಿದ್ದರಿರೋಣ .


 



ಅವನು ಕರೆದಾಗ ಹೋಗಲು ಸಿದ್ಸರಿರೋಣ .


"ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ 

ನಮ್ಗೂ ನಿಮ್ಗೂ ಯಾಕೆ ಟೆನ್ಸನ್ನು" ಎಂಬ ಯೋಗರಾಜ್ ಭಟ್ಟರ ಹಾಡಿನಂತೆ . ಜೀವನದಲ್ಲಿ ಬಹುತೇಕ ಬಾರಿ ನಾವು ಅಂದುಕೊಂಡತೆ ಇರುವುದಿಲ್ಲ .ಬದುಕು  ಬಂದಂತೆ ಸ್ವೀಕರಿಸುವ ಮೂಲಕ ಜೀವನದಲ್ಲಿ ಮುಂದಡಿ ಇಡಬೇಕಿದೆ. Man proposes God disposes ಎಂಬ ಉಕ್ತಿಯಂತೆ ನಾವೇನೇನೋ ಪ್ಲಾನ್ ಮಾಡಿದರೂ ಅವನು ನಮ್ಮೆಲ್ಲಾ ಯೋಜನೆಗಳನ್ನು ತಲೆಕೆಳಗುಮಾಡಿ ಹೇಗಿದೆ ಆಟ? ಎಂದು ಮರೆಯಲೇ ನಿಂತು ನಗುವನು. 


ಅಂದರೆ ನಾವು ಯೋಜನೆ ಮಾಡಬಾರದಾ ? ಹಿಂಗೇ ಇರಬೇಕು ಎಂದು ಗುರಿ ಇಟ್ಟುಕೊಳ್ಳಲೇ ಬಾರದಾ? ಎಂದರೆ ಖಂಡಿತವಾಗಿ ಗುರಿಯೂ ಇರಲಿ . ಯೋಜನೆಯು ಇರಲಿ . ಅದಕ್ಕೆ ಪೂರಕವಾಗಿ ಪ್ರಯತ್ನ ಸಹ ಜಾರಿಯಲ್ಲಿ ಇರಲಿ ನಮ್ಮೆಲ್ಲ ಪ್ರಾಮಾಣಿಕವಾದ ಪ್ರಯತ್ನದ ನಡುವೆಯೂ ನಾವಂದುಕೊಂಡದ್ದು ಆಗಲಿಲ್ಲ ಎಂದರೆ ಬೇರೇನೋ ಯೋಚಿಸುತ್ತಾ, ಬೇಸರ ಮಾಡಿಕೊಂಡು ಮಾನಸಿಕವಾಗಿ ಕುಗ್ಗಿ ಖಿನ್ನತೆಯೆಡೆಗೆ ಜಾರಿ ಬದುಕಿನಲ್ಲಿ ಅನರ್ಥದ ನಿರ್ಧಾರ ಕೈಗೊಳ್ಳುವ ಮೂಲಕ ನಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳವ ನಿರ್ಧಾರವನ್ನು ಕೈಗೊಳ್ಳಬಾರದು. ಸೂರ್ಯ ಮುಳುಗಿದ ಎಂದು ಕೊರಗಿ ಕೂರುವ ಬದಲಿಗೆ ನಕ್ಷತ್ರಗಳ ನೋಡುವ ಕಾತರತೆ ಮತ್ತು ಸಂತಸ ಹೊಂದಬೇಕಿದೆ.ಎಲ್ಲಾ ಬಾಗಿಲುಗಳು ಮುಚ್ಚಿವೆ ಬೆಳಕು ಬರುತ್ತಿಲ್ಲ ಎಂದು ಪರಿತಪಿಸುವ ಬದಲಿಗೆ ಕಿಟಕಿಯ ಮೂಲಕ ಬರುವ ಬೆಳಕಿನ ಕಡೆಗೆ ಗಮನ ಹರಿಸಬಹುದು. ಜೀವನದಲ್ಲಿ ನಮಗೆ ನಾವಂದುಕೊಂಡ ಯಾವುದೋ ಸಿಗಲಿಲ್ಲ ಎಂದರೆ   ದೇವರು ನಮಗಾಗಿ ಮತ್ತೇನೊ ಕೊಡಲು ಸಿದ್ದತೆ ಮಾಡಿಕೊಂಡಿರುವ ಎಂದು ಭಾವಿಸಿ ಮುನ್ನೆಡೆಯೋಣ. ವಿಪ್ರೊ ಕಂಪನಿಯಲ್ಲಿ ಕೆಲಸ ಸಿಗಲಿಲ್ಲ ಎಂದು ಬೇಸರ ಪಟ್ಟುಕೊಂಡು ಚಿಂತೆ ಮಾಡುತ್ತಾ ಕುಳಿತಿದ್ದರೆ ನಾರಾಯಣ ಮೂರ್ತಿ ರವರು ಇನ್ಫೋಸಿಸ್ ಎಂಬ ದೈತ್ಯ ಕಂಪನಿಯು ಕಟ್ಟಿ ಸಾವಿರಾರು ಕೋಟಿ ವಹಿವಾಟು ನಡೆಸಿ ಸಾವಿರಾರು ಜನರಿಗೆ ಉದ್ಯೋಗ ಕೊಡಲು ಆಗುತ್ತಿರಲಿಲ್ಲ. 


ಇದೇ ರೀತಿಯಲ್ಲಿ ಜೀವನದಲ್ಲಿ ಕೆಲವೊಮ್ಮೆ ನಾವಂದುಕೊಂಡಂತೆ ಆಗದಿದ್ದರೆ ಬೇಸರ ಪಟ್ಟುಕೊಳ್ಳದೆ ಜೀವನವನ್ನು ಬಂದಂತೆ ಸ್ವೀಕರಿಸಿ ಮುನ್ನಡೆಯಬೇಕು ಜೀವನದ ಪ್ರತಿ ಕ್ಷಣವನ್ನು ಅನುಭವಿಸುತ್ತಾ ಅವನು ಕರೆದಾಗ ಹೋಗಲು ಕೂಡಾ ನಾವು ಸಿದ್ದರಾಗಿರಬೇಕು.



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

No comments: