22 November 2021

ಅನಾಥವಾಗಿರುವ ಕುರ್ಚಿ.ಲೇಖನ


 


ಅನಾತವಾಗಿರುವ ಕುರ್ಚಿ







ನಾನು ಮೊದಲ ಬಾರಿಗೆ ಕುರ್ಚಿ ನೋಡಿದ್ದು ನಮ್ಮ ಶಾಲೆಯಲ್ಲಿ  ಮರದ ಅಗಲವಾದ ಕುರ್ಚಿಯ ಮೇಲೆ ನಮ್ಮ ಶಿಕ್ಷಕರು ಕುಳಿತುಕೊಂಡು ಪಾಠ ಮಾಡುವುದನ್ನು ನೋಡಿ ನಾನೂ ಒಂದು ದಿನ ಅಂತಹ ಕುರ್ಚಿಯ ಮೇಲೆ ಕುಳಿತುಕೊಳ್ಳುವ ಕನಸು ಕಂಡೆ ಅಲ್ಲಿಯ ವರೆಗೆ ಕಾಯದೇ ಕೆಲವೊಮ್ಮೆ ನಮ್ಮ ಶಿಕ್ಷಕರು ಇಲ್ಲದೇ ಇದ್ದಾಗ ಕುರ್ಚಿಯ ಮೇಲೆ ಕುಳಿತು ಸಂಭ್ರಮ ಪಟ್ಟಿದ್ದೆ .
ಮುಂದೊಂದು ದಿನ ಶಿಕ್ಷಕನಾದೆ ಈಗ ತರಗತಿ ಕೋಣೆಯಲ್ಲಿ ನಾನೇ ರಾಜನಾದರೂ ಬಹುತೇಕ ಬಾರಿ ಸಿಂಹಾಸನ ಇದ್ದರೂ ಕೂರುವುದು ಕಡಿಮೆ. ನಿಂತು ಕೊಂಡು, ತರಗತಿಯ ಮಧ್ಯೆ ಓಡಾಡಿಕೊಂಡು, ಮಕ್ಕಳಿಗೆ ಹೇಳಿಕೊಡುವುದು ನನ್ನ ಅಭ್ಯಾಸ.

ಕೆಲವರಿಗೆ ಕುರ್ಚಿಯೆಂದರೆ ಎಲ್ಲಿಲ್ಲದ ವ್ಯಾಮೋಹ  ಗ್ರಾಮ ಪಂಚಾಯತ್ ಅಧ್ಯಕ್ಷನ ಕುರ್ಚಿಯಿಂದ ಹಿಡಿದು ಮುಖ್ಯಮಂತ್ರಿ, ಪ್ರಧಾನಮಂತ್ರಿ, ರಾಷ್ಟ್ರಪತಿ ಕುರ್ಚಿಯೇರಲು ಏನೇನು ತಂತ್ರ ಕುತಂತ್ರ  ಆಟ ದೊಂಬರಾಟ ನಾಟಕವಾಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ .

ಕುರ್ಚಿಗೆ ಚೇರ್ , ಗಾದಿ, ಸೀಟು, ಪೀಠ  ಮುಂತಾದ ಸಮಾನಾರ್ಥಕ ಪದಗಳಿವೆ

ಏನೇನೋ ಕಸರತ್ತು
ಮಾಡುವರು ಏರಲು
ಗಾದಿ|
ಏರಿದ ಮೇಲೆ
ಮರೆಯದೇ
ತುಳಿವರು ಭ್ರಷ್ಟಾಚಾರದ
ಹಾದಿ |

ಮೊದಲು ಬರೀ ಮರದಿಂದ ಮಾಡಿದ ಕುರ್ಚಿಗಳು ಇದ್ದವು ಈಗ ‌ಕಬ್ಬಿಣ ಸ್ಟೀಲ್ ,ಪೈಬರ್, ಪ್ಲಾಸ್ಟಿಕ್ ಹೀಗೆ ತರಹೇವಾರಿ ವಸ್ತುಗಳಿಂದ ಮಾಡಿದ ವಿವಿಧ ವಿನ್ಯಾಸಗಳ ಕುರ್ಚಿಗಳು ಲಭ್ಯ ,ಬೆಲೆಗಳು ಸಹಾ ಕೆಲವು ಕೈಗೆಟುಕುವಂತಿದ್ದರೆ ಕೆಲವು ಗಗನ ಮುಖಿ.
ಹಿಂದಿನ ಕಾಲದಲ್ಲಿ ಅತಿಥಿಗಳು ಬಂದಾಗ ಈಚಲು ಅಥವಾ ಹಾಫಿನ ಚಾಪೆ ಹಾಕುತ್ತಿದ್ದರು ಚೌಡಗೊಂಡನಹಳ್ಳಿಯ ನಮ್ಮ ಮನೆಯಲ್ಲಿ ಕುರ್ಚಿ ಇರಲಿಲ್ಲ. ಯರಬಳ್ಳಿಯ ನಮ್ಮ ಮಾವನವರ ಮನೆಯಲ್ಲಿ ಆರಾಮ್ ಕುರ್ಚಿ ಇತ್ತು . ಕಟ್ಟಿಗೆಯಿಂದ ಮಾಡಿದ ನಾಜೂಕಿನ ಕೆಲಸದ ಆ ಕುರ್ಚಿ ಗೆ  ನಾವು ಕುಳಿತುಕೊಳ್ಳಲು  ಬಟ್ಟೆಯೇ ಮೂಲ ಮೇಲೆ ಮತ್ತು ಕೆಳಗೆ ದುಂಡನೆಯ ‌ಕೋಲಿಗೆ ಬಟ್ಟೆಯನ್ನು ಸಿಕ್ಕಿಸಿ ಆರಾಮವಾಗಿ ಅದರ ಮೇಲೆ ಪಡಿಸುವುದು ಅಂದಿನ ಐಶಾರಾಮಿ ಸ್ಥಿತಿಯನ್ನು ಸಹ ಸೂಚಿಸುತ್ತಿತ್ತು.
ನಮ್ಮ ಮಾವನವರಾದ ಬಿ  ಕೃಷ್ಣಮುರ್ತಿ  ರವರು ಆ ಆರಾಮ್ ಕುರ್ಚಿಯ ಮೇಲೆ ಆರಾಮಾಗಿ ಕುಳಿತ ಗತ್ತು ನೋಡಿ ನಾನೂ ಒಂದು ದಿನ ದೊಡ್ಡವನಾದ ಮೇಲೆ ಹೀಗೆ ಆರಾಮ್ ಕುರ್ಚಿಯಲ್ಲಿ ಕೂರಬೇಕು ಎಂದು ಅಂದುಕೊಂಡಿದ್ದೆ.

ಆರು ತಿಂಗಳ ಹಿಂದೆ ನಮ್ಮ ಮಾವನವರು ದೈವಾದೀನರಾದರು ಅವರು ಬಳಸಿದ ಆರಾಮ್ ಕುರ್ಚಿ ಈಗಲೂ ಅಟ್ಟದ ಮೇಲೆ ಅನಾಥವಾಗಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು









No comments: