ರೈತರ ಆತ್ಮಹತ್ಯೆಗೆ ಕಾರಣಗಳು ಮತ್ತು ಪರಿಹಾರೋಪಾಯುಗಳು. ಪ್ರಬಂಧ
ಪೀಠಿಕೆ
ಪ್ರತಿ ವರ್ಷ, ಭಾರತದಲ್ಲಿ 12000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿ ಅನ್ನದಾತನ ಆತ್ಮಹತ್ಯೆ ಮಾಮೂಲಿ ಎಂಬಂತೆ ಕಾಣುತ್ತಿದೆ.
ಭಾರತವು ಕೃಷಿ ಪ್ರಧಾನವಾದ ಆರ್ಥಿಕತೆಯಾಗಿದ್ದು, ಜನಸಂಖ್ಯೆಯ 70% ರಷ್ಟು ಜನರು ನೇರವಾಗಿ ಅಥವಾ ಪರೋಕ್ಷವಾಗಿ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ದ್ವಿತೀಯ ಮತ್ತು ತೃತೀಯ ವಲಯಗಳ ವೇಗದ ಬೆಳವಣಿಗೆಯ ಹೊರತಾಗಿಯೂ, ಬಹುಪಾಲು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಹಸಿರು ಕ್ರಾಂತಿಯು ದಿನನಿತ್ಯದ ಬಳಕೆಗಾಗಿ ಆಹಾರ ಧಾನ್ಯ ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಿದೆ. ಇಂದು, ಹೆಚ್ಚು ಹೆಚ್ಚು ರೈತರು ಕೃಷಿಗಾಗಿ ಆಧುನಿಕ ವಿಧಾನಗಳು ಮತ್ತು ಸಾಧನಗಳನ್ನು ಬಳಸಿ ಕೃಷಿ ಮಾಡುತ್ತಿದ್ದಾರೆ. ಆದರೂ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ವಿಷಯ ವಿವರಣೆ.
ದೇಶದ ಏಳು ರಾಜ್ಯಗಳು ಕೃಷಿ ವಲಯದ ಆತ್ಮಹತ್ಯೆಗಳಲ್ಲಿ 87.5% ಪಾಲನ್ನು ಹೊಂದಿವೆ. ಅವುಗಳೆಂದರೆ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ಛತ್ತೀಸ್ಗಢ, ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶ. ಈ ರಾಜ್ಯಗಳಲ್ಲಿ ಮಹಾರಾಷ್ಟ್ರವು ಅತಿ ಹೆಚ್ಚು ಆತ್ಮಹತ್ಯೆಯ ಪ್ರಕರಣಗಳು ದಾಖಲಾಗಿವೆ.
ಹಸಿರು ಕ್ರಾಂತಿಯಿಂದ ಗರಿಷ್ಠ ಲಾಭ ಪಡೆದ ಪಂಜಾಬ್ ರಾಜ್ಯವೂ ರೈತರ ಆತ್ಮಹತ್ಯೆಯ ಪಾಲು ಹೊಂದಿದೆ ಎಂಬುದು ದುರದೃಷ್ಟಕರ ಸಂಗತಿಯಾಗಿದೆ. 1995 ರಿಂದ 2015 ರವರೆಗೆ, ಪಂಜಾಬ್ನಲ್ಲಿ 4687 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಾನ್ಸಾ ಜಿಲ್ಲೆ ಒಂದರಲ್ಲೇ 1334 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು.
ಭಾರತದಲ್ಲಿ ರೈತರ ಆತ್ಮಹತ್ಯೆಗೆ ಕಾರಣಗಳು.
೧ ಕೃಷಿಯ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿದೆ.
ಬೀಜಗಳು ಮತ್ತು ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ರಾಸಾಯನಿಕಗಳ ಬೆಲೆಗಳು ಹೆಚ್ಚಾಗಿವೆ ಕೃಷಿ ಉಪಕರಣಗಳ ವೆಚ್ಚ - ಟ್ರಾಕ್ಟರ್ಗಳು, ಪಂಪ್ಗಳು ಮುಂತಾದ ಕೃಷಿ ಉಪಕರಣಗಳ ಬೆಲೆಗಳು ಏರಿವೆ.ಕಾರ್ಮಿಕ ವೆಚ್ಚಗಳು ಪ್ರಾಣಿಗಳು ಮತ್ತು ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಸಹ ಹೆಚ್ಚು ದುಬಾರಿಯಾಗುತ್ತಿದೆ. ಇದರ ಜೊತೆಯಲ್ಲಿ ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆ ಗಗನಮುಖಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
೨ ಸಾಲದ ತೊಂದರೆ .
"ಭಾರತದ ರೈತ ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬೆಳೆದು ಸಾಲದಲ್ಲೇ ಸಾಯುತ್ತಾನೆ " ಎಂಬ ಒ.ಹೆಚ್ ಕೆ ಸ್ಟೇಟ್ಸ್ ರವರ ಮಾತು ಇಂದಿಗೂ ನಿಜವಾಗಿದೆಯೇನು ಎನಿಸದಿರದು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, 2015 ರಲ್ಲಿ 3000 ರೈತರ ಆತ್ಮಹತ್ಯೆಗಳಲ್ಲಿ 2474 ಸಾಲವನ್ನು ತೀರಸಲಾರದೆ ಮಾಡಿಕೊಂಡ ಪ್ರಕರಣಗಳು ಎಂದು ತಿಳಿದು ಬಂದಿದೆ. ಬ್ಯೂರೋದ ದತ್ತಾಂಶವು ರೈತರ ಆತ್ಮಹತ್ಯೆ ಮತ್ತು ಸಾಲದ ನಡುವಿನ ಬಲವಾದ ಸಂಬಂಧವನ್ನು ತೋರಿಸುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈ ಎರಡು ರಾಜ್ಯಗಳು ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣವೂ ಹೆಚ್ಚು.
೩ ನೇರ ಮಾರುಕಟ್ಟೆ ಏಕೀಕರಣದ ಕೊರತೆ .
ಇ-ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್ (eNAM) ನಂತಹ ನವೀನ ಸರ್ಕಾರಿ ಯೋಜನೆಗಳ ಹೊರತಾಗಿಯೂ, ಈ ವಲಯದಲ್ಲಿ ಮಧ್ಯವರ್ತಿಗಳನ್ನು ತೆಗೆದುಹಾಕುವುದು ಹೆಚ್ಚು ಕಷ್ಟಕರವಾಗಿದೆ. ಇದು ರೈತರ ಶೋಷಣೆ ಮುಂದುವರೆಯುವಂತೆ ಮಾಡಿದೆ.
೪ ಅರಿವಿನ ಕೊರತೆ
ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಯೋಜನೆಗಳು ಮತ್ತು ನೀತಿಗಳಿದ್ದರೂ, ಭಾರತದಲ್ಲಿ ಅನಕ್ಷರತೆ ಮತ್ತು ಡಿಜಿಟಲ್ ಸಾಕ್ಷರತೆಯ ಕೊರತೆಯಿಂದ ಬಹಳಷ್ಟು ರೈತರನ್ನು, ಈ ಯೋಜನೆಗಳು ತಲುಪುವುದಿಲ್ಲ ಅವರು ಸರ್ಕಾರದಿಂದ ನೀಡಲಾಗುವ ಸವಲತ್ತುಗಳನ್ನು ಹೇಗೆ ಪಡೆಯುವುದು ಎಂದು ತಿಳಿಯದೆ ಬಳಲುತ್ತಿದ್ದಾರೆ.
೫ ನೀರಿನ ಬಿಕ್ಕಟ್ಟು
ಆತ್ಮಹತ್ಯೆಗಳ ಅಂಕಿಅಂಶಗಳನ್ನು ಗಮನಿಸಿದರೆ ಮಹಾರಾಷ್ಟ್ರ ಮತ್ತು ಕರ್ನಾಟಕದಂತಹ ನೀರಿನ ಕೊರತೆಯ ಪ್ರದೇಶಗಳಲ್ಲಿ ಆತ್ಮಹತ್ಯೆಗಳ ಕೇಂದ್ರೀಕರಣವಿದೆ ಎಂದು ತೋರಿಸುತ್ತದೆ. ಮುಂಗಾರು ವಿಫಲವಾಗುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮರೆಯಾಗಿಸಿದೆ. ಅಂತಾರಾಜ್ಯ ಜಲವಿವಾದಗಳು ರೈತರನ್ನು ಅನಗತ್ಯ ಸಂಕಷ್ಟಕ್ಕೆ ದೂಡುತ್ತಿವೆ. ನೀರಿನ ಕೊರತೆಯು ಉತ್ಪಾದನೆಯನ್ನು ಬೇಡಿಕೆಗೆ ತಕ್ಕಂತೆ ಪೂರೈಸುವಲ್ಲಿ ವಿಫಲವಾಗಿದೆ.
೬ ಹವಾಮಾನ ಬದಲಾವಣೆ. ಹವಾಮಾನ ಬದಲಾವಣೆಯು ರೈತರು ಮತ್ತು ಕೃಷಿಯ ಮೇಲೂ ಪರಿಣಾಮ ಬೀರುತ್ತಿದೆ. ಅನಿಶ್ಚಿತ ಮಾನ್ಸೂನ್ ವ್ಯವಸ್ಥೆಗಳು, ಹಠಾತ್ ಪ್ರವಾಹ ಇತ್ಯಾದಿಗಳು ಬೆಳೆ ನಷ್ಟಕ್ಕೆ ಕಾರಣವಾಗಿವೆ. ಅಕಾಲಿಕ ಮಾನ್ಸೂನ್ ನಿಯಮಿತವಾಗಿ ಉತ್ಪಾದನೆಯ ಕೊರತೆಯನ್ನು ಉಂಟುಮಾಡುತ್ತದೆ.
ರೈತರ ಆತ್ಮಹತ್ಯೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು .
ಸರ್ಕಾರಗಳ ಆರ್ಥಿಕ ನೀತಿಗಳು ಗ್ರಾಹಕರ ಪರವಾಗಿದ್ದು, ಬೆಲೆ ಏರಿಕೆಯ ಸಂದರ್ಭದಲ್ಲಿ ರೈತರ ಉತ್ಪನ್ನವನ್ನು ಅಗತ್ಯ ವಸ್ತುಗಳ ಪಟ್ಟಿಯ ಅಡಿಯಲ್ಲಿ ತರುವುದು ಮತ್ತು ಬೆಲೆ ನಿಯಂತ್ರಣಕ್ಕೆ ತರಲು ರೈತರ ಉತ್ಪನ್ನಗಳ ಬೆಲೆ ಕಡಿತ ಮಾಡುವರು ಇದರ ಬದಲಾಗಿ ರೈತರಿಗೆ ನಷ್ಟ ಆಗದ ಹಾಗೆ ಬೆಲೆ ನೀತಿ ರೂಪಿಸಬೇಕಿದೆ.
ಕೆಲವೊಮ್ಮೆ ಸರ್ಕಾರಗಳು ಸಾಲ ಮನ್ನಾ ಮಾಡಿವೆ.ಸಾಲ ಮನ್ನಾಕ್ಕಿಂತ ಹೆಚ್ಚಾಗಿ, ಪ್ರಾಥಮಿಕ ವಲಯವನ್ನು ಸುಧಾರಿಸಲು ಮರುಹೂಡಿಕೆ ಮತ್ತು ಪುನರ್ರಚನಾ ಕ್ರಮಗಳತ್ತ ಸರ್ಕಾರ ಗಮನಹರಿಸಬೇಕು.
ಪರಿಣಾಮಕಾರಿ ನೀರು ನಿರ್ವಹಣಾ ತಂತ್ರಗಳನ್ನು ಬಳಸುವುದು. ಬೆಳೆಹಾನಿ ತಡೆಗಟ್ಟಲು ಸರಕಾರ ಗಮನಹರಿಸಬೇಕು.ಪ್ರತಿ ರೈತರಿಗೆ, ವಿಶೇಷವಾಗಿ ಬಡ ರೈತರಿಗೆ ಸಾಂಸ್ಥಿಕ ಹಣಕಾಸು ಲಭ್ಯವಾಗುವಂತೆ ಮಾಡುವುದು. ಈ ನಿಟ್ಟಿನಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಬೇಕು.
ಕೃಷಿಯ ಆರ್ಥಿಕ ವಿಧಾನಗಳ ಬಗ್ಗೆ ರೈತರಿಗೆ ಪರಿಣಾಮಕಾರಿ ಮತ್ತು ಸಮಯೋಚಿತ ಸಮಾಲೋಚನೆ ನೀಡಬೇಕು.ಕೃಷಿಯಲ್ಲಿನ ತಾಂತ್ರಿಕ ಪ್ರಗತಿ ಬಡ ರೈತರಿಗೂ ದೊರೆಯಬೇಕು.ಸರ್ಕಾರವು ಸಣ್ಣ ರೈತರ ಜಮೀನುಗಳನ್ನು ಒಟ್ಟುಗೂಡಿಸಿ ಆರ್ಥಿಕವಾಗಿ ಕೃಷಿಯೋಗ್ಯ ಭೂಮಿಯಾಗಿ ಪರಿವರ್ತಿಸಲು ಪ್ರಯತ್ನಿಸಬೇಕು. ಸಣ್ಣ ರೈತರಿಗೆ ಪರ್ಯಾಯ ಆದಾಯದ ಮೂಲಗಳ ಬಗ್ಗೆ ಸಲಹೆ ನೀಡಬೇಕು ಮತ್ತು ಅದಕ್ಕಾಗಿ ತರಬೇತಿ ನೀಡಬೇಕು.
ಸರ್ಕಾರವು ರೈತರೊಂದಿಗೆ ಪಾಲುದಾರರೊಂದಿಗೆ ಸಮಾಲೋಚಿಸಿ, ರೈತರ ಸಾಲವನ್ನು ಕಡಿಮೆ ಮಾಡಲು, ಬೆಳೆ ಇಳುವರಿಯನ್ನು ಸುಧಾರಿಸಲು, ನೀರಿನ ಸಂಪನ್ಮೂಲಗಳನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ರೈತರಿಗೆ ಪರ್ಯಾಯ ಆದಾಯದ ಮೂಲಗಳನ್ನು ಮಾಡಲು ಪರಿಣಾಮಕಾರಿ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಉಪಸಂಹಾರ.
ನಮ್ಮ ದೇಶದ ನೇಗಿಲಯೋಗಿಯು ಇಂದು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಸರ್ಕಾರಗಳು ಪ್ರಾಮಾಣಿಕ ಪ್ರಯತ್ನ ಮಾಡಿದರೆ, ಸಮುದಾಯದ ಸಕಾಲಿಕ ಬೆಂಬಲ ದೊರತರೆ, ಅನ್ನದಾತ ಎದುರಿಸುವ ಬಹುತೇಕ ಸಮಸ್ಯೆಗಳು ದೂರಾಗಿ ಅವರು ಎಲ್ಲರಂತೆ ಗೌರವಯುತವಾದ ಜೀವನ ನಡೆಸುವುದರಲ್ಲಿ ಸಂದೇಹವಿಲ್ಲ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ. ತುಮಕೂರು
9900925529
1 comment:
ಸತ್ಯ .....ಅರ್ಥಪೂರ್ಣ ಬರವಣಿಗೆ
Post a Comment