ಬಾಲ್ಯದ. ತಿಂಡಿ ತಿನಿಸುಗಳು..
ಬಾಲ್ಯಕ್ಕೂ ತಿಂಡಿ ತಿನಿಸುಗಳಿಗೂ ಅವಿನಾಭಾವ ಸಂಬಂಧವಿದೆ. ನಾನು ಬಾಲ್ಯದಲ್ಲಿ ಅಂಗಡಿಗಳಲ್ಲಿ ತಿಂಡಿ ತಿನಿಸುಗಳನ್ನು ತಿಂದಿದ್ದು ಕಡಿಮೆ. ಪರಿಸರದಲ್ಲಿ ಹೊಲದಲ್ಲಿ ,ತೋಟದಲ್ಲಿ ಬೆಳೆಯುವ ತಿನಿಸುಗಳನ್ನು ತಿಂದದ್ದೇ ಹೆಚ್ಚು.
ನಮ್ಮೂರಿನ ಅಂದಿನ ಎರಡು ಅಂಗಡಿಗಳಾದ ಐಯ್ಯನೋರ ಅಂಗಡಿ ಮತ್ತು ಗುಂಡಜ್ಜನವರ ಅಂಗಡಿಗಳಲ್ಲಿ ಆಗಾಗ್ಗೆ ಕೆಲವು ತಿನಿಸುಗಳನ್ನು ಪಡೆದು ತಿನ್ನುತ್ತಿದ್ದೆ ಅಮ್ಮನಿಂದ ಕಾಡಿ ಬೇಡಿ ಹಣ ಪಡೆದು ಹತ್ತು ಪೈಸೆ ಗಳನ್ನು ಪಡೆದು ಹತ್ತು ಸೊಂಡಿಗೆ (ಬೋಟಿ) ಪಡೆದು ಕೈಯ ಹತ್ತು ಬೆರಳುಗಳಿಗೆ ಸಿಕ್ಕಿಸಿಕೊಂಡು ಒಂದೊಂದೇ ಬೆರಳ ಕಚ್ಚಿ ತಿನ್ನುತ್ತಾ ಆನಂದಿಸುತ್ತಿದ್ದೆ. ಕೆಲವೊಮ್ಮೆ ನಿಂಬೇ ಹುಳಿ ಪೆಪ್ಪರ್ ಮೆಂಟ್ ಚಿಕ್ಕ ಪೆಪ್ಪರ್ ಮೆಂಟ್ ಗಳನ್ನು ಕೊಂಡು ಜೇಬಿನಲ್ಲಿ ಹಾಕಿಕೊಂಡು ಒಂದೊಂದೇ ತಿನ್ನುತ್ತಿದ್ದೆ. ಇನ್ನೂ ಕೆಲವೊಮ್ಮೆ ಗಿರಗಿಟ್ಲೇ ಕೊಂಡು ಅದರೊಂದಿಗೆ ಇರುವ ದಾರವನ್ನು ನನ್ನ ಎರಡೂ ಕೈಗಳ ಬೆರಳಿಗೆ ಸಿಕ್ಕಿಸಿಕೊಂಡು ಗಿರಗಿಟ್ಲೇ ಆಡಿಸಿ ದಾರ ಕಿತ್ತು ಬಂದಾಗ ಗಿರಗಿಟ್ಲೇ ನೇರವಾಗಿ ಬಾಯಿಗೆ ಸೇರುತ್ತಿತ್ತು. ಶುಂಠಿ ಪೇಪರ್ ನಂತಹ ರುಚಿ ಇರುವ ಗಿರಗಿಟ್ಲೇ ಒಂಥರಾ ರುಚಿ ಈಗಲೂ ನೆನಪಲ್ಲಿದೆ.
ನಾನು ನನ್ನ ಬಾಲ್ಯದಲ್ಲಿ ಅಂಗಡಿಯ ತಿನಿಸುಗಳಿಗಿಂತ ಪರಿಸರದಲ್ಲಿ ಬೆಳೆದ ತಿನಿಸು ತಿಂದದ್ದೇ ಹೆಚ್ಚು. ಮಳೆಗಾಲದಲ್ಲಿ ನಮ್ಮೂರ ಸುತ್ತಲೂ ಹಸಿರೋ ಹಸಿರು ರಾಗಿ,ಜೋಳ, ನವಣೆ ಸಜ್ಜೆ ಹೊಲಗಳು ನಮ್ಮ ಮನೆಯಿಂದ ನೂರಾರು ಹೆಜ್ಜೆಗಳನ್ನು ದಾಟಿದರೆ ಸಿಗುತ್ತಿದ್ದವು .ಈ ಹೊಲಗಳಲ್ಲಿ ಹೆಗಲಿಗೊಂದು ಚೀಲ ತಗುಲಾಕಿಕೊಂಡು ನಾನು ಮತ್ತು ನಮ್ಮ ಪಕ್ಕದ ಮನೆಯ ಸಣ್ಣಪ್ಪನವರ ಮಗ ಸೀನ ಗೊರ್ಜಿ ಸೊಪ್ಪ, ಕಿರ್ಕ್ಸಾಲೆ ಸೊಪ್ಪು, ಕೋಲನ್ನೇ ಸೊಪ್ಪು, ಪುಂಡಿ ಸೊಪ್ಪು, ಇನ್ನೂ ಯಾವಾವುದೋ ಬೆರಕೆ ಸೊಪ್ಪು ತಂದು ನನ್ನ ಅಮ್ಮನಿಗೆ ಕೊಟ್ಟರೆ ಅಮ್ಮ ಸಂಜೆಗೆ ಕುಕ್ಸೆಪ್ಪು ಎಂಬ ಸಾರು ಮಾಡುತ್ತಿದ್ದರು ಅದರ ಜೊತೆಗೆ ಒಂದು ಬಿಸಿಮುದ್ದೆ ಊಟ ಮಾಡುವ ಸ್ವಾದವನ್ನು ಸವಿದೇ ಅನುಭವಿಸುತ್ತಿದ್ದೆ.
ರಾಗಿಯು ಬೆಳೆಯ ತೆನೆ ಸ್ವಲ್ಪ ಬೆಳಸೆ ಆದ ತಕ್ಷಣ ಯಾರ ಹೊಲವಾದರೂ ಸರಿ ನುಗ್ಗಿ ಎಂಟರಿಂದ ಹತ್ತು ರಾಗಿ ತೆನೆ ಕಿತ್ತು ತಂದು ಅದರಿಂದ ಕಾಳು ಬೇರ್ಪಡಿಸಿ, ಅದಕ್ಕೆ ಸ್ವಲ್ಪ ಉಪ್ಪು, ಹಸಿಮೆಣಸಿನಕಾಯಿ, ಬೆಳ್ಳುಳ್ಳಿ ಸೇರಿಸಿ, ಟವಲ್ ನಲ್ಲಿ ಹಾಕಿ ಗಂಟುಕಟ್ಟಿ ಮಡಿಚಿ ಕೈ ಮುಷ್ಟಿಯಲ್ಲಿ ಚೆನ್ನಾಗಿ ಗುದ್ದಿ ಬಿಚ್ಚಿ ನೋಡಿದರೆ " ಗುದ್ ಬೆಳಸೆ" ರೆಡಿ .ಗೆಳೆಯರೆಲ್ಲ ಸೇರಿ ತಿನ್ನುತ್ತಾ ಕುಳಿತರೆ ಅದರ ಮಜಾನೆ ಬೇರೆ.
ರಜಾ ದಿನಗಳಲ್ಲಿ ದನ ಕಾಯಲು ಹೋಗುತ್ತಿದ್ದ ನಾವು ದನ ಮೇಯಲು ಬಿಟ್ಟು ಬಿಳಿಜೋಳದ ತೆನೆಗಳನ್ನು ಮುರಿದು ತೆನೆಯಿಂದ ಜೋಳದ ಕಾಳು ಬೇರ್ಪಡಿಸಿ ಅಲ್ಲೆ ಮೂರು ಕಲ್ಲಿನ ಗುಂಡುಗಳಿಂದ ಒಲೆ ಮಾಡಿ ಒಡೆದ ಮಡಿಕೆಯಲ್ಲಿ ಸ್ವಲ್ಪ ನೀರು ಹಾಕಿ ಅದರಲ್ಲಿ ಬಿಡಿಸಿದ ಹಸಿ ಜೋಳದ ಕಾಳು ಹಾಕಿ ಅಲ್ಲೇ ಸಿಗುವ ಸೌದೆಗಳಿಂದ ಬೇಯಿಸಿದಾಗ " ಜೋಳದ ಗುಗ್ಗುರಿ " ಸಿದ್ದವಾಗುತ್ತಿತ್ತು. ನಮ್ಮ ದನಗಳು ಹುಲ್ಲನ್ನು ಮೇಯುತ್ತಿದ್ದರೆ ನಾವು ಗುಗ್ಗರಿ ತಿನ್ನುತ್ತಾ ಅವುಗಳಿಗೆ ಕಂಪನಿ ನೀಡುತ್ತಿದ್ದೆವು.
ಇದೇ ತರಹ ಅವರೇ ಕಾಯಿ ಸೀಸನ್ ನಲ್ಲಿ ಹೊಲದಲ್ಲೇ ಹಸಿ ಅವರೆ ಕಾಯಿ ಬೇಸಿ ತಿಂದು ,ರಾತ್ರಿ ಮಲಗಿದಾಗ ಅಪಾನ ವಾಯು ಹೆಚ್ಚಾದಾಗ ಅಮ್ಮ " ಯಾರ್ ಹೊಲದ್ದು ಅವರೇ ಕಾಯಿನೋ ಇದು ಗಬ್ಬು ನಾತ" ಅಂದರೂ ಕೇಳಿದರೂ ಕೇಳದಂತೆ ದುಪ್ಪಡಿ ಗುಬಾರಾಕಿಕೊಂಡು ಮಲಗುತ್ತಿದ್ದೆ.
ಕೊಟಗೇಣಿಯಿಂದ ಉಪ್ಪೇರಿಗೇನಹಳ್ಳಿಗೆ ಕಾಲು ದಾರಿಯಲ್ಲಿ ನಡೆದು ಶಾಲೆಗೆ ಹೋಗುವಾಗ ನಾನು ನನ್ನ ಗೆಳೆಯರು ದಿನವೂ ಗೊಲ್ಲರ ಹಳ್ಳಿಯ ಅಣ್ಣಪ್ಪನವರ ಹೊಲದ ಸಜ್ಜೆ ತೆನೆ ಗಳನ್ನು ತಿಂದು ಅರ್ಧ ಹೊಲದ ತೆನೆ ತಿಂದು ಮುಗಿಸಿದ್ದೆವು .ಹೊಲದ ಮಾಲಿಕ ಸಿಟ್ಟಿನಿಂದ ನಮ್ಮ ರಾಜಪ್ಪ ಮಾಸ್ಟರ್ ಗೆ ಹೇಳಿ ಬೆತ್ತದ ರುಚಿ ತೋರಿಸಿದ್ದ.
ಇನ್ನೂ ನನಗೆ ಪ್ರಿಯವಾದ ಮತ್ತೊಂದು ವಸ್ತು ಕಡ್ಲೆಕಾಯಿ.ನಮ್ಮೂರಲ್ಲಿ ಕಡ್ಲೇ ಕಾಯಿ ಬೆಳೆಯುತ್ತಿರಲಿಲ್ಲ.ನಮ್ಮ ಮಾವನವರ ಊರಾದ ಯರಬಳ್ಳಿಗೆ ಹೋದಾಗ ನನಗೆ ಕಡ್ಲೇಕಾಯಿ ಸುಗ್ಗಿ .ನಮಗೆ ಬೇಸಿಗೆ ರಜಾ ಬಿಡುವುದು ಮತ್ತು ಕಡಲೇಕಾಯಿ ಸೀಸನ್ ಒಂದೇ ಬಾರಿಗೆ ಬರುತ್ತಿದ್ದುದು ನನಗೆ ಎಲ್ಲಿಲ್ಲದ ಸಂತಸ.
ಯರಬಳ್ಳಿಗೆ ಹೋದ ತಕ್ಷಣ ನಮ್ಮ ಕರಿಯಪ್ಪ ಮಾವನ ಜೊತೆ ಕಡ್ಲೇಕಾಯಿ ಹೊಲ ಕಾಯಲು ರಾತ್ರಿ ಹೊರಡುತ್ತಿದ್ದೆ. ಹೊಲ ತಲುಪಿದ ಮೇಲೆ ನಮಗೆ ಎಷ್ಟು ಬೇಕೋ ಅಷ್ಟು ಕಡ್ಲೇಗಿಡ ಕಿತ್ತು ಅಲ್ಲೇ ಇರುವ ಸೌದೆ ಒಟ್ಟುಗೂಡಿಸಿ ಬೆಂಕಿ ಹಚ್ಚಿ ಸುಟ್ಟು ತಿನ್ನಲು ಶುರು ಮಾಡುತ್ತಿದ್ದೆವು
ಕೆಲವೊಮ್ಮೆ ಕಡ್ಲೇಕಾಯಿ ಜೊತೆಗೆ ಉಪ್ಪು ,ಹಸಿಮೆಣಸಿನ ಕಾಯಿ ಸೇರಿಸಿ , ಮತ್ತೆ ಕೆಲವು ಸಲ ಬೆಲ್ಲ ಸೇರಿಸಿ ಸುಟ್ಟ ಕಡ್ಲೇಕಾಯಿ ಸ್ವಾದ ಸವಿದ ನೆನಪು ಈಗಲೂ ಮರುಕಳಿಸುತ್ತಿದೆ.
ಈ ವರ್ಷ
ದಸರಾ ಹಬ್ಬಕ್ಕೆ ಯರಬಳ್ಳಿಗೆ ಹೋದಾಗ ಕೆಲವೇ ಕೆಲವು ಕಡ್ಲೇಗಿಡದ ಹೊಲ ನೋಡಿದಾಗ ಅಂದು ನಾವು ಕಡ್ಲೇಗಿಡದ ಕಾಯಿ ಸುಟ್ಟು ತಿಂದ ನೆನಪಾಯಿತು.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment