09 November 2021

ನನ್ನಜ್ಜಿ ಮತ್ತು ನನ್ನಮ್ಮನ ಕೈರುಚಿ


 ನಮ್ಮ ಅಜ್ಜಿ ರಂಗಜ್ಜಿ  .ನನ್ನ ಅಮ್ಮನ ಅಮ್ಮ ಕಪ್ಪಾದ ಕೃಶಕಾಯದ ಹಲ್ಲುಗಳೆಲ್ಲಾ ಉದುರಿ ಮುಂದಿನ ಎರಡು ಉಬ್ಬಲ್ಲು ಮಾತ್ರ. ನಾವು ಇದ್ದೇವೆ ಎಂದು ಕಾಣಿಸುತ್ತಿದ್ದವು ಗೂನುಬೆನ್ನು ಕೈಯಲ್ಲೊಂದು ಕೋಲು ಸದಾ ಇರುತ್ತಿತ್ತು ಸುಮಾರು ಎಂಭತ್ತಕ್ಕೂ ಹೆಚ್ಚು ವಯಸ್ಸಾಗಿದ್ದರೂ ಕಣ್ಣಿನ ದೃಷ್ಟಿ ಚೆನ್ನಾಗಿತ್ತು. ನಾನು ಅಥವಾ ನನ್ನ ಅಮ್ಮ ಸ್ವಲ್ಪ ಕಾಲ ಅಜ್ಜಿಯ ಕಣ್ಣಿಗೆ ಬೀಳದಿದ್ದರೆ  " ಏ ಎಂಕ್ಟೀ..... ಏ ಸೀದೇವಿ  ಎಲ್ಲಿ ಹಾಳೊಗ್ ಹೊದ್ರಿ " ಎಂದು ಕೂಗಿದರೆ ಪಕ್ಕದ ಬೀದಿಗೂ ಕೇಳುತ್ತಿತ್ತು ಅಂತಹ ಕಂಚಿನ ಕಂಠ.

ನಮ್ಮ ರಂಗಜ್ಜಿ ನಾನು ಚಿಕ್ಕವನಾಗಿದ್ದಾಗ ನನಗೆ ಸಜ್ಜೆ ರೊಟ್ಟಿ ಸುಟ್ಟು ಕೊಡುತ್ತಿದ್ದರು ಅದರ ಸ್ವಾದ ರುಚಿ ಇದುವರೆಗೂ ತಿಂದಿಲ್ಲ .


ಸಜ್ಜೆಯ ಹಿಟ್ಟಿಗೆ ಒಣಗಿಸಿದ ಮೆಣಸಿನ ಕಾಯಿಯ ಬೀಜಗಳು,  ಎಳ್ಳಿನ ಕಾಳುಗಳುನ್ನು ಸೇರಿಸಿ ಹದವಾಗಿ ಮಿದ್ದು ತೆಳ್ಳಗೆ ರೊಟ್ಟಿ ತೊಟ್ಟಿ ಎಡ್ಲಿ ಒಲೆ ( ಒಲೆಯ ಪಕ್ಕದಲ್ಲಿ ನೀರು ಕಾಯಲು ಇರುವ ಮಣ್ಣಿನ ದೊಡ್ಡ ಮಡಿಕೆ) ಮೇಲೆ ಹದವಾಗಿ ಬೇಯಿಸುತ್ತಿದ್ದರು .ಹಸಿರಾದ ಸಜ್ಜೆ ಹಿಟ್ಟಿನ ರೊಟ್ಟಿ ಕಂದು ಬಣ್ಣಕ್ಕೆ ತಿರುಗುವವರೆಗೆ ಹೆಂಚಿನ ಮೇಲೆ  ಸುಡುತ್ತಿದ್ದರು .ನಂತರ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ದೊಡ್ಡ ಗುಡಾಣದಲ್ಲಿ    ( ದೊಡ್ಡ ಮಣ್ಣಿನ ಮಡಿಕೆ)ಶೇಖರಣೆ ಮಾಡಿ ದಿನವೂ ಸಂಜೆ ನಾನು ಶಾಲೆಯಿಂದ  ಬಂದಾಗ ಅರ್ಧ ರೊಟ್ಟಿ ಕೊಡುತ್ತಿದ್ದರು .ಇನ್ನೂ ಅರ್ಧ ಕೊಡಿ  ಅಜ್ಜಿ ಅಂದರೆ"  ಜಾಸ್ತಿ ತಿಂದ್ರೆ ಹುಚ್ಚಕೆಂಡು ಬಿಡ್ತಿಯಾ , ಹೊಟ್ಟೆ ಗಣೇಶಪ್ಪನಂಗೆ ಗುಡಾಣ ಆಗುತ್ತೆ ನಡಿ ನಡಿ ,ಆಟ ಆಡು ಹೋಗು  " ಎಂದು ಬುದ್ದಿವಾದ ಹೇಳಿ ಸ್ವಲ್ಪ ಚಿನಕುರುಳಿ ತಿನ್ನಲು ಕೊಡುತ್ತಿದ್ದರು .ರಂಗಜ್ಜಿ ಇಂದು ಸ್ವರ್ಗಸ್ಥರಾಗಿದ್ದಾರೆ. ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಎಲ್ಲಾದರೂ ನಾನು  ಸಜ್ಜೆ ರೊಟ್ಟಿ, ಚಿನಕುರುಳಿ ಕಂಡರೆ ರಂಗಜ್ಜಿಯ ನೆನಪಾಗುವುದು.

ನನ್ನ ಅಮ್ಮ ಶ್ರೀದೇವಮ್ಮ ಸಹ ಅಡಿಗೆಯಲ್ಲಿ ಎಕ್ಸಪರ್ಟ್ .ಕಡಿಮೆ ಸಮಯದಲ್ಲಿ ಎಲ್ಲ ತರಹದ ಅಡಿಗೆ ಮಾಡುವರು. ಅದರಲ್ಲೂ ಅವರು ಮಾಡುವ ತಪ್ಲೆ ರೊಟ್ಟಿ ನನ್ನಪೇವರೇಟ್.
ರಾಗಿ ಹಿಟ್ಟಿಗೆ ಈರುಳ್ಳಿ, ಮೆಣಸಿಬಕಾಯಿ, ಒಂದೆರಡು ತರಹದ ಸೊಪ್ಪನ್ನು ಸೇರಿಸಿ ರೊಟ್ಟಿ ತಟ್ಟಿ ಸ್ವಲ್ಪ ಎಣ್ಣೆ ಹಾಕಿ ಹೆಂಚಿನ ಮೇಲೆ ಬೇಯಿಸಿದ ಬಿಸಿ ರೊಟ್ಟಿ ತಿನ್ನಲು ಬೇರೆ ಯಾವುದೇ ಪಲ್ಯ ಅಥವಾ ಚಟ್ನಿ ಬೇಕಾಗುತ್ತಿರಲಿಲ್ಲ.ರೊಟ್ಟಿಯ ಜೊತೆಗೆ ಕೆಲವೊಮ್ಮೆ ಬೆಣ್ಣೆ ಅಥವಾ ತುಪ್ಪ ಸೇರಿಸಿ ತಿನ್ನುತ್ತಿದ್ದರೆ ಅದರ ಮಜವೇ ಬೇರೆ.
ಅಮ್ಮನ ಮತ್ತೊಂದು ರುಚಿಯಾದ ನನಗಿಷ್ಷದ ಖಾದ್ಯ ಬದನೇಕಾಯಿ ಬಜ್ಜಿ. ಬದನೇ ಕಾಯಿಯನ್ನು ಕೆಂಡದಲ್ಲಿ ಸುಟ್ಟು ಹದವಾಗಿ ಉಪ್ಪು ಉಳಿ, ಖಾರ, ಈರುಳ್ಳಿ ಸೇರಿಸಿ ಕೈಯಿಂದ ಕಿವುಚಿದರೆ ದಿಡೀರ್ ಬದನೇಕಾಯಿ ಬಜ್ಜಿ ರೆಡಿ .ಅದಕ್ಕೆ ಮುದ್ದೆ ಒಳ್ಳೆಯ ಕಾಂಬಿನೇಷನ್ ಒಂದು ಉಣ್ಣುವವರು ಎರಡು ಮುದ್ದೆ ಉಣ್ಣಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ.

No comments: