19 November 2021

ಚಿನ್ನದ ಮಾಂಗಲ್ಯ ಸರ. ರೈಲು ಪಯಣದ ಅನುಭವ ಕಥನ .


 



ಚಿನ್ನದ ಮಾಂಗಲ್ಯ ಸರ .


  ಹದಿನೈದು ದಿನಗಳ ಉತ್ತರ ಭಾರತದ ಪ್ರವಾಸ ಮುಗಿಸಿ ಸಂತಸದಿಂದ ದೆಹಲಿಯ ರೈಲ್ವೇ ನಿಲ್ದಾಣದಲ್ಲಿ  ರಾಜಧಾನಿ ಎಕ್ಸ್ಪ್ರೆಸ್  ರೈಲು ಹತ್ತಿ ಬೆಂಗಳೂರಿನ ಕಡೆ ಹೊರಡಲು  ಸಿದ್ದರಾದೆವು. 

ರಾತ್ರಿ ಒಂಭತ್ತೂ ಒಂಭತ್ತೂವರೆ ಗಂಟೆ ಆಗಿರಬಹುದು. ನಾವೆಲ್ಲರೂ ನಮ್ಮ ಲಗೇಜ್ ಗಳನ್ನು ಸರಿಯಾದ ಜಾಗಗಳಲ್ಲಿ ಜೋಡಿಸಿಟ್ಟು ಮಲಗಿಕೊಳ್ಳಲು ಯೋಚಿಸುತ್ತಿದ್ದೆವು ಇನ್ನೂ ಕೆಲವರು ಆಸನಗಳಲ್ಲಿ  ಕುಳಿತು ಮಾತನಾಡುತ್ತಿದ್ದರು.

ರೈಲು ನಿಧಾನವಾಗಿ ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ಪಕ್ಕದ ಭೋಗಿಯಲ್ಲಿ ಯಾರೊ ಕಿರುಚಿದ ಸದ್ದಾಯಿತು .ನಾವು ಹೋಗಿ ನೋಡಿದರೆ ಅವರು ನಮ್ಮ ಜೊತೆಯಲ್ಲಿ ಪ್ರವಾಸಕ್ಕೆ ಬಂದವರು. ಗಾಬರಿಯಿಂದ ಅವರು ಕೈಗಳನ್ನು ಎದೆಯಮೇಲೆ ಇಟ್ಟುಕೊಂಡು ನಡುಗುತ್ತಿದ್ದರು ಅವರ ಯಜಮಾನರು ಆ ಮಹಿಳೆಯನ್ನು ಸಂತೈಸುತ್ತಿದ್ದರು. ಏನಾಯಿತೆಂದು ಭಯಮಿಶ್ರಿತ ಕುತೂಹಲದಿಂದ ಕೇಳಿದೆವು." ರೈಲು ನಿಧಾನವಾಗಿ ಚಲಿಸುತ್ತಿದ್ದಂತೆ ಪ್ಲಾಟ್ ಫಾರ್ಮ್ ಮೇಲಿದ್ದ ಒಬ್ಬ ದಡಿಯ  ಕಿಟಕಿಯ ಮೂಲಕ  ಕೈಹಾಕಿ    ನಮ್ಮವರ ಬಂಗಾರದ ಮಾಂಗಲ್ಯ ಸರಕ್ಕೆ ಕೈಹಾಕಿ ಜಗ್ಗಿದ ನಮ್ಮವರು  ಮಾಂಗಲ್ಯ ಸರವನ್ನು ಎರಡೂ ಕೈಯಲ್ಲಿ ಬಿಗಿಯಾಗಿ ಹಿಡಿದುಕೊಂಡು ಕಿರುಚಿಕೊಂಡರು. ರೈಲಿನ ವೇಗ ಹೆಚ್ಚಾಯಿತು ಪ್ಲಾಟ್ ಪಾರ್ಮ್ ನಲ್ಲಿ ಓಡುತ್ತಾ ಆ ದಡಿಯ ಕತ್ತಲಲಿ ಮಾಯವಾದ .ನಮ್ಮವರು ಗಾಬರಿಯಿಂದ ಮಾಂಗಲ್ಯ ಸರ ನೋಡಿಕೊಂಡರು. ಮಾಂಗಲ್ಯ ಸರ ಹರಿದಿತ್ತು .ಆದರೆ ಸಣ್ಣ ತುಣುಕೊಂದು ಆ ಕಳ್ಳನ ಕೈ ಸೇರಿದ್ದು ಗಮನಕ್ಕೆ ಬಂತು .ಅಷ್ಟರಲ್ಲಿ ನೀವು ಬಂದಿರಿ" ಎಂದು ನಡೆದ ಘಟನೆಯನ್ನು ವಿವರಿಸಿದರು ಸೀನಪ್ಪನವರು.


ನಾವೆಲ್ಲರೂ ನಿಟ್ಟುಸಿರು ಬಿಟ್ಟು ಅವರಿಗೆ ಸಮಾಧಾನ ಮಾಡಿ ಧೈರ್ಯ ಹೇಳುವಾಗ ರೈಲ್ವೆ ಪೋಲೀಸ್ ಬಂದು" ಕಿಟಕಿಯ ಪಕ್ಕ ಕುಳಿತಾಗ ಜಾಗರೂಕತೆಯಿಂದ ಇರಬೇಕು. ರಾತ್ರಿ ವೇಳೆಯಲ್ಲಿ ಕಿಟಕಿಯ ಬಾಗಿಲು ಮುಚ್ಚಿ, ಅಪರಿಚಿತರೊಂದಿಗೆ ಹುಷಾರಾಗಿರಿ, ನಿಮ್ಮ ಲಗೇಜ್ ಗಳನ್ನು ಸರಪಣಿ ಮತ್ತು ಬೀಗದಿಂದ ಬಂದಿಸಿ. " ಎಂದು ಹಿಂದಿಯಲ್ಲಿ ಸಲಹೆ ಸೂಚನೆಗಳನ್ನು ನೀಡಿ ಹೊರಟರು. 


ನಾವು ನಮ್ಮ ಸೀಟುಗಳಿಗೆ ಹೋಗಿ ಮಲಗಿಕೊಂಡೆವು ಪದೇ ಪದೆ ರೈಲ್ವೆ ಪೋಲೀಸ್ ಹೇಳಿದ ಮಾತುಗಳು ನೆನಪಾಗಿ ನನ್ನ ಸೂಟ್ ಕೇಸ್ ಗೆ ಬೀಗ ಹಾಕಿ ಸರಪಳಿ ಬಿಗಿದಿದ್ದರೂ ಮತ್ತೆ ಮತ್ತೆ ಎದ್ದು ಅದನ್ನೇ ನೋಡುತ್ತಿದ್ದೆ. ರಾತ್ರಿ ಒಂದು ಗಂಟೆಯಾದರೂ ನಿದ್ದೆ ಬರಲಿಲ್ಲ .ರೈಲಿನಲ್ಲಿರುವವರೆಲ್ಲ ಮಲಗಿದ್ದರು ರೈಲು ಕತ್ತಲೆಯನ್ನು ಸೀಳಿಕೊಂಡು ಬೆಂಗಳೂರಿನ ಕಡೆ ಇನ್ನೂ ವೇಗವಾಗಿ ಓಡುತ್ತಿತ್ತು.



ಸಿಹಿಜೀವಿ 

ಸಿ ಜಿ ವೆಂಕಟೇಶ್ವರ.

No comments: