ಆತ್ಮ ಸಾಕ್ಷಾತ್ಕಾರ ಕ್ಕೆ ದುಡಿಯೋಣ
Don't sit like a rock
Work like a clock
ಎಂಬ ನುಡಿಯಂತೆ ನಾವು ಸದಾ ಚಟುವಟಿಕೆಯಿಂದಿರಬೇಕು.ಬಳಸದ ವಸ್ತು ಕೊಳೆಯುತ್ತದೆ ಎನ್ನುವ ಮಾತಿನ ಹಿನ್ನೆಲೆಯಲ್ಲಿ ನಮ್ಮ ಸಕಲ ಅಂಗಗಳು ಸದಾ ಕಾರ್ಯ ಪ್ರವೃತ್ತವಾಗಿರಬೇಕು. ನಾವು ಜೀವಿಸಲು ನಮಗೆ ಹಣ ಬೇಕು ಅದಕ್ಕೆ ನಾವು ಕೆಲಸ ಮಾಡಲೇಬೇಕು ಅದು ಯಾವುದಾದರೂ ಆಗಿರಬಹುದು ಕೆಲಸ ಮತ್ತು ಜೀವನ ಒಂದೇ ನಾಣ್ಯದ ಅವಿಭಾಜ್ಯ ಮುಖಗಳು. ಜೀವಿಸುತ್ತಾ ಕೆಲಸ ಮಾಡಬೇಕು ಕೆಲಸ ಮಾಡುತ್ತಾ ಜೀವಿಸಬೇಕು.
ಕೆಲವರು ಕೆಲಸ ಮಾಡದೇ ಜೀವಿಸಲು ಪಣ ತೊಟ್ಟಿರುವರು ಅಂತಹವರು ಮೊದಲಿಗೆ ಅತಿಯಾದ ಕೊಬ್ಬಿನ ಸಂಗ್ರಹ ಮತ್ತು ತೂಕದ ಸಮಸ್ಯೆಗಳನ್ನು ಆಹ್ವಾನ ಮಾಡಿಕೊಂಡು ಹಲವಾರು ದೈಹಿಕ ಖಾಯಿಲೆಗಳಿಗೆ ತುತ್ತಾಗುತ್ತಾರೆ.ಕೆಲಸ ಮಾಡದೇ ಸೋಮಾರಿಯಾಗುವವರು" ಸೋಮಾರಿಯ ತಲೆ ಸೈತಾನನ ನೆಲೆ " ಎಂಬಂತೆ ಅನಗತ್ಯ ಚಿಂತೆ ಮಾಡುತ್ತಾ ಇಲ್ಲ ಸಲ್ಲದ ಯೋಚನೆಗಳನ್ನು ಮಾಡುತ್ತಾ ಹಲವಾರು ಮಾನಸಿಕ ಕಾಯಿಲೆಗಳನ್ನು ಆಹ್ವಾನ ಮಾಡಿಕೊಳ್ಳುತ್ತಾರೆ.
ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವ ಪಾಲಿಸೋಣ .ಕೈಕೆಸರಾದರೆ ಬಾಯಿ ಮೊಸರು ಎಂಬ ಗಾದೆಯ ಸತ್ವವನ್ನು ಅರಿಯೋಣ. ನಮ್ಮ ಕಾಯ ಇರುವುದು ಕಾಯಕ ಮಾಡಲು ಎಂಬ ಅರಿವು ನಮ್ಮದಾಗಬೇಕು. ದುಡಿಮೆಯೇ ದುಡ್ಡಿನ ತಾಯಿ ಎಂದು ಸರ್ವರೂ ನಂಬಿದ್ದರೂ ದುಡ್ಡು ಮಾಡಲು ಮಾತ್ರ ದುಡಿಯಬಾರದು .ದುಡ್ಡೇ ಜೀವನವಲ್ಲ .ನಾವು ಮಡಿಯುವ ಮುನ್ನ ದುಡಿಯೋಣ ಕೇವಲ ಭೌತಿಕ ಸಂಪಾದನೆಗೆ ಮಾತ್ರವಲ್ಲದೆ ಆತ್ಮಸಾಕ್ಷಾತ್ಕಾರಕ್ಕೂ ಸಹ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
No comments:
Post a Comment