31 October 2021

ಅಪ್ಪುಗೆ ನಾಲ್ಕು ಹನಿ ನಮನ


 



*ಅಪ್ಪು ಗೆ ನಾಲ್ಕು ಹನಿ ನಮನ*




ನಡೆನುಡಿಯಲಿ 

ಯಾವಾಗಲೂ 

ವಿನೀತ|

ಅವರೇ ಕನ್ನಡ

ನಾಡಿನ ಹೆಮ್ಮೆಯ

ಪುನೀತ||




ಇವರ ತಂದೆ 

ಮೇರು ನಟ 

ರಾಜಕುಮಾರ|

ಇವರೇನು 

ಕಡಿಮೆಯಲ್ಲ

ಗುಣದಲಿ ಬಂಗಾರ||



ಬೌತಿಕವಾಗಿ ನಮ್ಮನ್ನು

ಅಗಲಿದ್ದಾರೆ

ದೊಡ್ಮನೆ ಹುಡುಗ|

ಅವರ ಚಿತ್ರಗಳು 

ಅವರ ಸಮಾಜ ಸೇವೆಯ

ಸದಾ ಸ್ಮರಿಸುವುದು ಜಗ||



ಮೇಲು ಕೀಳು

ಬಡವ ಬಲ್ಲಿದ

ಭೇದವಿರಲಿಲ್ಲ

ನಮ್ಮ ಅಪ್ಪುಗೆ|

ಕಷ್ಟದಲ್ಲಿರುವವರಿಗೆ

ನೊಂದವರಿಗೆ ನೀಡುತ್ತಿದ್ದರು

ಸಾಂತ್ವನದ ಬಿಸಿ ಅಪ್ಪುಗೆ||



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

ನಾಡಿಗಾಗಿ ನಾಡಿ ಮಿಡಿಯಲಿ

 


    

*ನಾಡಿಗಾಗಿ ಒಟ್ಟಾಗೋಣ* 


ಕನ್ನಡದ ಕವಿಗಳು, ಮುತ್ಸದ್ದಿಗಳ ಅವಿರತ ಹೋರಾಟದ    ಫಲವಾಗಿ ನಮ್ಮ  ಕರುನಾಡು ಉದಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನ್ಯ ಭಾಷೆಗಳ ವ್ಯಾಮೋಹದ ಫಲವಾಗಿ ಕನ್ನಡ ಭಾಷೆ ಬಳಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ದುರದೃಷ್ಟಕರ. ನಮ್ಮ ನಾಡಿನ ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿ  ಉತ್ಕೃಷ್ಟವಾದ ಭಾಷೆ ಮತ್ತು ಸಾಹಿತ್ಯವನ್ನು  ಗಮನಿಸಿ ಇತ್ತೀಚೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲಾಗಿದೆ.ಕನ್ನಡಿಗರಾದ ನಾವು ಸ್ವಾಭಿಮಾನ ಬೆಳೆಸಿಕೊಳ್ಳಬೇಕಿದೆ.ಕೀಳರಿಮೆ ಬಿಟ್ಟು ನಮ್ಮ ಭಾಷೆಯ ಮಹತ್ವದ ಬಗ್ಗೆ ಇತರರಿಗೆ ಮನದಟ್ಟು ಮಾಡಿಕೊಡಬೇಕಿದೆ.ಗಡಿನಾಡಿನಲ್ಲಿ ಪ್ರಾಬಲ್ಯ ಮೆರೆಯಲು  ಕಾಲುಕೆರೆದುಕೊಂಡು ಜಗಳ ಕಾಯುವ ಪುಂಡರಿಗೆ ತಕ್ಕ ಶಾಸ್ತಿ ಮಾಡಬೇಕಿದೆ.ನೆಲ ಜಲದ ವಿಷಯಗಳಲ್ಲಿ ನಿರಭಿಮಾನ ತೊರೆದು ಒಗ್ಗಟ್ಟು ಪ್ರದರ್ಶನ ಮಾಡಿ ಕನ್ನಡಿಗರು ಎದ್ದರೆ ಯಾವುದೂ ಅಸಾಧ್ಯವಿಲ್ಲ ಎಂಬುದನ್ನು ತೋರಿಸಬೇಕಿದೆ.  ನಮ್ಮ ನಾಡಿನ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯುವ ಎಕೈಕ ಉದ್ದೇಶ ನಮ್ಮದಾಗಿ ಒಗ್ಗಟ್ಟನ್ನು ಪ್ರದರ್ಶಿಸಿದರೆ ಯಾವ ದುಷ್ಟ ಶಕ್ತಿಗಳು ಕನ್ನಡಮ್ಮನ ಕೂದಲು ಕೊಂಕಿಸಲು ಸಾದ್ಯವಿಲ್ಲ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

25 October 2021

ನನ್ನ ಬಾಲ್ಯದ ಆಟಗಳು ಮತ್ತು ತಿನಿಸುಗಳು.


 

ನನ್ನ ಬಾಲ್ಯದ ಆಟಗಳು ಮತ್ತು ತಿನಿಸುಗಳು

ನಾವು ಬಾಲ್ಯದಲ್ಲಿ ಆಡಿದ ಆಟಗಳು ಮತ್ತು ತಿಂದ ತಿಂಡಿಗಳು ಒಂದು ಎರಡಲ್ಲ .ಆ ಎಲ್ಲಾ ಆಟಗಳಿಂದ ನಮ್ಮ ದೇಹ ದೃಢವಾಗಿತ್ತು, ಆರೋಗ್ಯಕ್ಕೆ ಪೂರಕವಾಗಿತ್ತು ಎಂಬುದು ದೊಡ್ಡವರಾದ ಮೇಲೆ ಈಗ ನಮಗೆ ಅರಿವಾಗುತ್ತದೆ . ಸದಾ ಮೊಬೈಲ್ ,ಕಂಪ್ಯೂಟರ್ ಮುಂದೆ ಕುಳಿತು ಕೆಲಸಕ್ಕೆ ಬಾರದ ಗೇಮ್ ಆಡುವ ಮಕ್ಕಳ ಕಂಡರೆ ನಮ್ಮ ಬಾಲ್ಯದ ಆಟಗಳು ನೆನಪಾಗುತ್ತವೆ. ಗೋಲಿ, ಟಿಕ್ಕಿ, ಬುಗರಿ, ಜೂಟ್ ಮುಟ್ಟಾಟ, ಪಳ್ಳಂ ,ಅಳುಗುಣಿ ಮನೆಯಾಟ, ಗಾಳಿಪಟವ ಹಾರಿಸುವುದು, ಗಣೇಶನ ವಿಗ್ರಹ ಮಾಡಿ ಆಡುವುದು ಸೆಪ್ಪೇದಂಟಿನಲ್ಲಿ ಎತ್ತಿನ ಗಾಡಿಯ ಮಾದರಿ ಮಾಡಿಕೊಂಡು ಆಡುವುದು, ಚೌಕಾಬಾರ, ಬಸವನಕಟ್ಟೆ ,   ಹೀಗೆ ಆಟಗಳ ಪಟ್ಟಿ ಬೆಳೆಯುತ್ತಿತ್ತು .


ಆಟದಲ್ಲಿ ನನಗೆ ಬುಗುರಿ ಆಟ ಅಚ್ಚುಮೆಚ್ಚು ಬುಗುರಿ ಕೊಳ್ಳಲು ನನಗೆ ಹಣವಿರಲಿಲ್ಲ .ನಮ್ಮ ಮನೆಯ ಮುಂದೆ ಬೈರಜ್ಜ ಎಂಬುವವರು ಇಡೀ ಊರಿಗೆ ಪರಿಚಿತವಾದ ಉತ್ತಮ ಬಡಗಿ. ಬೇಟೆಗಾರ  ಮತ್ತು ನಮ್ಮೂರ ಚೌಡಮ್ಮನ ಪೂಜಾರಿ.ಅವರ ಹತ್ತಿರ ಹೋಗಿ ದುಂಬಾಲು ಬಿದ್ದು ಬೈಸಿಕೊಂಡು ಒಂದು ಬುಗುರಿ ಮಾಡಿಸಿಕೊಂಡು ಅದಕ್ಕೆ ಕತ್ತಾಳಿಯ ಚಾಟಿ ಮಾಡಿಕೊಂಡು ಆಡುವಾಗ ಸ್ವರ್ಗಕ್ಕೆ ಮೂರೇ ಗೇಣಿತ್ತು.
ಬುಗುರಿ ಆಟವಾಡುವಾಗ ನನಗಿಂತ ಎರಡು ವರ್ಷ ದೊಡ್ಡವನಾದ ಬಸವರಾಜ ಅವನ ಬುಗುರಿಯಿಂದ ನನ್ನ ಬುಗುರಿಗೆ ಹೊಡೆದು ಗುನ್ನ ಮಾಡಿದಾಗ ನನ್ನ ದೇಹಕ್ಕೇ ಗುನ್ನ ಬಿದ್ದಂತೆ ಬೇಸರ ಮಾಡಿಕೊಂಡಿದ್ದೆ. ಮಾರನೇ ದಿನ ಸಮಯಸಾಧಿಸಿ ಬಸವರಾಜನ ದೊಡ್ಡ ಬುಗುರಿಗೆ ನಾನು ಗುನ್ನ ಹೊಡೆದು ಬೀಗಿದ್ದೆ .ಇದೇ ಸಿಟ್ಟಿನಲ್ಲಿ ವಾರಗಳ ನಂತರ ಬಸವರಾಜ ಅವನ ಬುಗುರಿಯಿಂ ಹೊಡೆದು ನನ್ನ ಬುಗುರಿ ಎರಡು ಹೋಳಾಗುವಂತೆ ಹೊಡೆದು ಗಹಗಹಿಸಿ ನಕ್ಕಿದ್ದ. ಆಗ ನನ್ನ ಎದೆ ಚೂರಾಗಿತ್ತು.

ಆಟಗಳಂತೆ ತಿನ್ನುವ ಪದಾರ್ಥಗಳಲ್ಲಿ ನಾವು ಪರಿಸರದಲ್ಲಿ ಸಿಗುವ ಬಹುತೇಕ ಹಣ್ಣುಗಳನ್ನು ತಿಂದಿರುವೆವು.ಅದರಲ್ಲಿ ಕವಳಿ ಹಣ್ಣು, ದ್ಯಾದಾರೆ ಹಣ್ಣು  ,ಲಂಟನ್ ಹಣ್ಣು, ಸಣ್ಣ ಟೊಮೊಟೋ ಹಣ್ಣು, ಬುಡುಮೆ ಕಾಯಿ, ಕಾರೇ ಹಣ್ಣು , ತೊಂಡೆಹಣ್ಣು, ಗೇರ್ ಹಣ್ಣು, ಪಾಪಸ್ ಕಳ್ಳಿ ಹಣ್ಣು  ಹೀಗೆ ಆಯಾ ಕಾಲಕ್ಕೆ ಸಿಗುವ ಎಲ್ಲಾ ಹಣ್ಣುಗಳನ್ನು ತಿಂದಿರುವೆವು.

ಕಾರೆ ಹಣ್ಣುಗಳನ್ನು ತಿನ್ನಲು ಅವುಗಳನ್ನು ಬಿಡಿಸುವಾಗ ಅದರ ಮುಳ್ಳುಗಳು ನಮ್ಮ ಮುಂಗೈಗೆ ತರಚಿ ರಕ್ತ ಬಂದರೂ ಆ ಕಾರೆ ಹಣ್ಣಿನ ರುಚಿಯ ಮುಂದೆ ಆ ತರಚುಗಾಯಗಳು ನಗಣ್ಯವಾಗುತ್ತಿದ್ದವು .

ಪಾಪಸ್ ಕಳ್ಳಿಯ ಹಣ್ಣುಗಳನ್ನು ಕಿತ್ತು ಸವಿಯುವಿದೇ ಒಂದು ಮಜಾ ಎಂದು ಬಾವಿಸಿದ್ದೆವು. ಪಾಪಾಸ್ ಕಳ್ಳಿಯ ಹಣ್ಣು ಕಿತ್ತು, ಅದರಲ್ಲಿನ ಸಣ್ಣ ಮುಳ್ಳುಗಳನ್ನು ಉಜ್ಜಿ ತೆಗೆದು ,ಒಂದು ಜಾಲಿ ಮುಳ್ಳಿನಿಂದ ಅದರ ಮೇಲ್ಬಾಗದ ಚಕ್ರಕಾರದ ಮುಳ್ಳನ್ನು ತೆಗೆದು ಪಾಪಾಸ್ ಕಳ್ಳಿಯ ಹಣ್ಣು ಸವಿದ ಮೇಲೆ ಬಾಯಿಯ ತುಂಬಾ ಉಚಿತವಾದ ಕೆಂಪನೆಯ ಬಣ್ಣ ! ಮನೆಗೆ ಬಂದಾಗ ಅಮ್ಮನಿಂದ ಮಾಮೂಲಿ ಬೈಗುಳು" ಯಾವಾನ್ ಜೊತೆಗೋ ಬೇಲಿ ಸುತ್ತಾಕ್ ಹೋಗ್ತಿಯಾ ? ಇನ್ನೊಂದ್ ಸತಿ ಹೋಗು, ಕಾಲ್ ಮುರಿತಿನಿ ".  ಮುಂದಿನ ಭಾನುವಾರ ಅದೇ ಗೆಳೆಯರು ಅದೇ ತಿನ್ನುವ ಆಟ ಮತ್ತೆ ಅಮ್ಮನ ಪ್ರೀತಿಯ ಬೈಗುಳ.

ಈಗ ಮಾರುಕಟ್ಟೆಯಲ್ಲಿ ಬಹಳ ತರಹದ ಹಣ್ಣುಗಳು ಲಭ್ಯವಿವೆ ಅದಕ್ಕೆ ಉಚಿತವಾಗಿ ಕ್ರಿಮಿನಾಶಕ ಸಹ ಸೇರಿಸಿರುವರು ,ಕೊಳ್ಳಲು ಜೇಬಲ್ಲಿ ಹಣವೂ ಇದೆ ,ಕೊಂಡು ತಂದು ತಿಂದರೆ,  ಬಾಲ್ಯದಿ ಗೆಳೆಯರ ಜೊತೆಯಲ್ಲಿ ಬೇಲಿ ಸುತ್ತಿ ತಿಂದ ಆ ಹಣ್ಣಿನ ರುಚಿಯ ಮುಂದೆ ಈ ಹಣ್ಣುಗಳು ಯಾಕೋ ಅಷ್ಟು ರುಚಿ ಇಲ್ಲ ಅನಿಸುತ್ತಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು.


*ಈ ವಾರದ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮಕ್ಕಳ ಗೀತೆ "ಚಿನ್ನಮ್ಮನ ಸೈಕಲ್"*


 

*ಈ ವಾರದ ಸುಧಾ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮಕ್ಕಳ ಗೀತೆ "ಚಿನ್ನಮ್ಮನ ಸೈಕಲ್"*

24 October 2021

*ಇಂದಿನ ವೈಬ್ರಂಟ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೨೪/೧೦/೨೧


 *ಇಂದಿನ ವೈಬ್ರಂಟ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

ಹಾಸನವಾಣಿ ೨೪/೧೦/೨೧


 

ತಂದೆಯ ಕನಸು. ನ್ಯಾನೋ ಕಥೆ


 


*ತಂದೆಯ ಕನಸು*

ನ್ಯಾನೋ ಕಥೆ

"ನನ್ನ ಕನಸು ನನಸಾಯಿತು. ಇಂದು ನೀನು ಇಂಜಿನಿಯರಿಂಗ್ ಪದವಿ ಪಡೆದಿರುವೆ‌. ನಿನಗೆ ಒಳ್ಳೆಯ ಉದ್ಯೋಗ ಖಂಡಿತವಾಗಿ ಸಿಗುತ್ತದೆ. ಅದು ಖಾಸಗಿ ಅಥವಾ ಸರ್ಕಾರಿ ಕೆಲಸವಾಗಲಿ ನಾನು ಕಷ್ಟ ಪಟ್ಟು ನಿನ್ನ ಓದಿಸಿದ್ದು ಸಾರ್ಥಕವಾಯಿತು. ತಾಯಿ ಭಾರತಾಂಬೆಯ ಸೇವೆ ಗೆ ನಿನ್ನ ಜೀವ ಮುಡಿಪಾಗಿರಲಿ" ಶ್ಯಾಮರಾಯರು ಮಗನೆಡೆ ಸಂತೋಷದ ನೋಟ ಬೀರುತ್ತಾ ಹೆಮ್ಮೆಯಿಂದು ನುಡಿದರು.
ತಲೆಕೆರೆದು ಕೊಳ್ಳುತ್ತಾ" ಅಪ್ಪಾ ನಾನು ಈಗಾಗಲೇ ಜರ್ಮನಿಯ ಒಂದು ಕಂಪನಿಯ ಜಾಬ್ ಆಪರ್ ಒಪ್ಪಿ ಸಹಿ ಮಾಡಿರುವೆ . ಮುಂದಿನ ತಿಂಗಳು ವೀಸಾ ಪಾಸ್‌ಪೋರ್ಟ್ ರೆಡಿ ಆದಮೇಲೆ ,ಇವಳನ್ನು ಮದುವೆಯಾಗಿ  ಜರ್ಮನಿಗೆ ಕರೆದುಕೊಂಡು ಹೋಗುವೆ, ಪ್ರತಿ ತಿಂಗಳು ನಿಮ್ಮ ಅಕೌಂಟ್ ಗೆ ಹಣ ಹಾಕುವೆ " ಎಂದು ತಾನು ಮದುವೆ ಆಗಬೇಕಿರುವ ಹುಡುಗಿಯ ಪೋಟೋ ತೋರಿಸಿದ ಪುರುಶೋತ್ತಮ.
ಪೋಟೋ ನೋಡಿದ ಶ್ಯಾಮರಾಯರು ನಿಧಾನವಾಗಿ ತಮ್ಮ ಕೊಠಡಿಯ ಕಡೆ ಹೆಜ್ಜೆ ಹಾಕಿದರು. ಅವರ ಕಣ್ಣಲ್ಲಿದ್ದ ಎರಡು ಹನಿಗಳನ್ನು ಅವರ ಹೆಂಡತಿ ಸುನಂದಮ್ಮ ಮಾತ್ರ ಗುರುತಿಸಿದರು...

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

ಗೋಮಾತೆ.ಹನಿ


 

*ಗೋಮಾತೆ*

ನಾಟಿ ಹಸು,ಹಳ್ಳಿಕಾರ್
ಜೆರ್ಸಿ,ಸಿಂಧಿಇತ್ಯಾದಿ
ಗೋಮಾತೆಯಲಿ
ನಾನಾ ತಳಿ|
ಯಾವುದಾದರೇನು
ಗೋಮಾತೆ ಒಂದೇ,
ಮಾತೆಯಲಿ ಅಡಗಿವೆ
ಸಾವಿರ ದೇವತೆಗಳು
ನೀ ತಿಳಿ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು


23 October 2021

ಬದುಕು


 



*ಬದುಕು* ಹನಿಗವನ 

ಹೇಗಿದೆ ಎಂದು ಯಾರೂ

ಬಗ್ಗಿ ನೋಡಲು ಬರಲ್ಲ

ನಮ್ಮ ಬಾಗಿಲೊಳಗಿನ

ಬದುಕು|

ಬಾಗಿಲೊರಗೆ ನೂರು ಜನ

ನಮ್ಮ ಹೊಗಳಿದರೂ ಏನು

ಬಂತು ಆಗಿದ್ದರೆ ನಮ್ಮ ಮನಸು

ಕೊಳಕು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ಪ್ರತಿನಿಧಿ .೨೩.೧೦.೨೧


 

22 October 2021

ಸಂತಸವ ಪಡೆ. ಹನಿಗವನ


 


*ಸಂತಸವ ಪಡೆ*

ಹಸಿರಿನರಮನೆಯಲಿ
ಬಲಗೈಯಲ್ಲಿ ಹಿಡಿದಿರುವೆ
ಬಣ್ಣದ ಕೊಡೆ |
ಮನವು ಸಂತಸದಿ 
ಕುಣಿಯುತಲಿದೆ
ಇದೇ ಸಂತಸವ
ಪದೇ ಪದೇ ಪಡೆ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529

ಆನಂದಮಯ .ಹನಿಗವನ


 *ಆನಂದಮಯ*


ಪರಿಸರ ಮಾತೆಯ ಮುಂದೆ
ನಲ್ಲ ನಲ್ಲೆಯರ
ಕಣ್ಣೋಟದ ವಿನಿಮಯ|
ನೋಡಿದ ಕವಿಮನ ಹಾಡಿದೆ

ದುಗುಡಗಳೆಲ್ಲಾ ಮಾಯ 
ಈ ಸಮಯ ಆನಂದಮಯ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು
9900925529

20 October 2021

ಇಜಯಾ ಕಾದಂಬರಿ ವಿಮರ್ಶೆ

 



ಇಜಯಾ ಕಾದಂಬರಿ ವಿಮರ್ಶೆ 


ಪೂರ್ಣಿಮಾ ಮಾಳಗಿಮನಿ ರವರ ಇಜಯ ಕಾದಂಬರಿ ಓದಿದೆ ಈ ಕಾದಂಬರಿ ಓದಿ ಮುಗಿಸಿದಾಗ 

ಕಾದಂಬರಿ ನಮ್ಮನ್ನು ಚಿಂತನೆಗೆ ಹಚ್ಚುವ ಮೂಲಕ ನಮ್ಮ ಬದುಕಿನ ಆದ್ಯತೆಗಳು , ಸಾಮಾಜಿಕ ಚೌಕಟ್ಟುಗಳು  ,ಜವಾಬ್ದಾರಿ, ಕ್ರಿಯಾಶೀಲತೆ ,ಹೆಸರು, ಆತ್ಮತೃಪ್ತಿ, ಇವುಗಳಲ್ಲಿ ಯಾವುದು ಮೇಲು ಯಾವುದು  ಮೊದಲು, ನಮ್ಮ ಸಂಬಂಧಗಳ ಬೆಲೆ ಏನು? ಮುಂತಾದವುಳ ಬಗ್ಗೆ ಇರುವ ನಮ್ಮ ಮೂಲಭೂತ ನಂಬಿಕೆಗಳನ್ನು ಮತ್ತೊಮ್ಮೆ ಯೋಚಿಸುವಂತಿದೆ. 

ಈ ಕಾದಂಬರಿಯನ್ನು

ರಾತ್ರಿ ಏಳು ಗಂಟೆಗೆ ಓದಲು ಕುಳಿತ ನಾನು ಊಟ ಮಾಡಲು ಹತ್ತು ನಿಮಿಷಗಳ ಬ್ರೇಕ್ ನೀಡಿ ,ರಾತ್ರಿ ಹನ್ನೆರಡು ನಲವತ್ತೇಳಕ್ಕೆ ಮುಗಿಸಿದೆ.ಕಾದಂಬರಿ ಮುಗಿಸಿದಾಗ ನನ್ನವಳು ಪದೇ ಪದೇ ಏನ್ರೀ ಅದು ಇನ್ನೂ ಮುಗಿಲಿಲ್ವ ನಿಮ್ ಓದು ಎಂದು ಬೇಸರ ವ್ಯಕ್ತ ಪಡಿಸಿದರೂ ನಾನು ಮಂಜನಂತೆ ನನ್ನವಳನ್ನು ಕಾಣಿಕೆಯ ಹುಂಡಿಯ ಕಡೆ ಕಳಿಸಲು ಇಷ್ಟ ಪಡಲಿಲ್ಲ !


ಪೂರ್ಣಿಮಾ ಮಾಳಗಿಮನಿ ರವರು

2017 ರಲ್ಲಿ 'ಎನಿ ವನ್ ಬಟ್ ದಿ ಬ್ರೌಸ್' ಎನ್ನುವ ಇಂಗ್ಲೀಷ್ ಕಿರುಗತೆಗಳ ಸಂಕಲನ ಪ್ರಕಟಿಸಿದ್ದಾರೆ. ಇಂಗ್ಲೀಷಿನಲ್ಲಿ ಹೆಚ್ಚು ಓದುಗರನ್ನು ತಲುಪುವುದು ಸುಲಭವಾದರೂ, ಬರಹವನ್ನು ಆನಂದಿಸುವ ಸಲುವಾಗಿ ಅವರು ಇತ್ತೀಚೆಗೆ ಹೆಚ್ಚಾಗಿ ಕನ್ನಡದಲ್ಲಿ ಬರೆಯಲು ಆರಂಭಿಸಿದ್ದಾರೆ. 'ಸಂಗಾತ', 'ಸಮಾಜಮುಖಿ', 'ಸಂಗಾತಿ' ಮುಂತಾದ ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇವರ ಹಲವಾರು ಕಿರುಗತೆಗಳು, ಕವನಗಳು, ತಾಂತ್ರಿಕ ವಿಷಯಗಳ ಕುರಿತ ಲೇಖನಗಳು, ಸಾಹಿತ್ಯಕ ಲೇಖನಗಳು ಪ್ರಕಟವಾಗಿವೆ.

ಚಿಕ್ಕಂದಿನಿಂದಲೂ ಸಾಹಿತ್ಯದ ಕಡೆಗೆ ಅಪಾರ ಒಲವಿದ್ದರೂ ಪೂರ್ಣಿಮಾ ರವರು ಪದವಿ ಪಡೆದದ್ದು ಮಾತ್ರ ಚಿತ್ರದುರ್ಗದ ಎಸ್.ಜೆ.ಎಮ್.ಐ.ಟಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಷಯದಲ್ಲಿ, ಪ್ರತಿಷ್ಠಿತ ಭಾರತೀಯ ವಾಯುಸೇನೆಯಲ್ಲಿ ಏರೊನಾಟಿಕಲ್ ಇಂಜಿನೀಯರ್ ವಿಭಾಗದಲ್ಲಿ ಅಧಿಕಾರಿಯಾಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಇವರು ಪ್ರಸ್ತುತ ಕೇಂದ್ರ ಸರ್ಕಾರಿ ಸಂಸ್ಥೆಯಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾದಂಬರಿಯ ಮುಖ್ಯ ಪಾತ್ರ ವಿಜಯ ಬ್ಯಾಂಕ್ ಉದ್ಯೋಗಿ ಕೈತುಂಬ ಸಂಬಳ ಉತ್ತಮ ಸಹೋದ್ಯೋಗಿಗಳ ಒಡನಾಟ ಕ್ರಮೇಣವಾಗಿ ಇಬ್ಬರು ಸಹೋದ್ಯೋಗಿಗಳು ದೂರಾದ ಮೇಲೆ ಅದೇ ಯೋಚನೆಯಲ್ಲಿ ಪತಿಯ ಸಹಕಾರದಿಂದ ಮತ್ತು ಪ್ರೇರಣೆಯಿಂದ ಅವಳಲ್ಲಿರುವ ಕಥೆಗಾರ್ಥಿ ಹೊರಬರುವಳು. ಕೆಲಸ, ಮನೆಯ ಜವಾಬ್ದಾರಿ ನಡುವೆ  ಸಾಹಿತ್ಯದಲ್ಲಿ ಅವಳು ಸಾಧನೆ ಮಾಡಬೇಕೆಂದು ಕಂಡ ಕನಸು ನನಸಾಯಿತೇ ಅವಳು ಈ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳು ಯಶಸ್ವಿಯಾದವೇ ಎಂಬುದನ್ನು ನೀವೇ ಕಾದಂಬರಿ ಓದಿ ಅನುಭವಿಸಬೇಕು.


ನರೇಂದ್ರ ಪೈ ರವರು ಬೆನ್ನುಡಿಯಲ್ಲಿ ಅಭಿಪ್ರಾಯ ಪಟ್ಟಿರುವಂತೆ 

ಪತ್ತೇದಾರಿ ಕತೆಯೊ ಎಂಬಂತೆ ತೊಡಗುವ ಈ ಕಾದಂಬರಿ ಕ್ರಮೇಣ ಒಂದು ತ್ರಿಲ್ಲರ್ ಆಗುವ ಎಲ್ಲ ಲಕ್ಷಣಗಳನ್ನೂ ಮೈಗೂಡಿಸಿಕೊಂಡು ಓದುಗನನ್ನು ಕುತೂಹಲದ ಸೆಳೆತಕ್ಕೆ ಒಡ್ಡಿ, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸ್ವಲ್ಪ ಹದತಪ್ಪಿದರೂ ಕೇವಲ ಮೊನಲಾಗ್ ಆಗಿಬಡಬಹುದಾಗಿದ್ದ ಉತ್ತಮ ಪುರುಷ ನಿರೂಪಣೆಯ ಅಪಾಯಗಳಿಂದ ತಪ್ಪಿಸಿಕೊಂಡು, ದೈನಂದಿನ ಬದುಕಿಗೇ ಸಂಬಂಧಿಸಿದ ಸತ್ಯದ ಶೋಧಕ್ಕೀಳಿಯುವಲ್ಲಿ ಜನಪ್ರಿಯ ಮಾದರಿಯ ಕಥಾನಕ ಸಾಧಿಸಬಹುದಾದ ಒಂದು ವಿಧವನ್ನು ಇಲ್ಲಿ ಪೂರ್ಣಿಮಾ ಅವರು ನಮಗೆ ತೋರಿಸಿ ಕೊಡುತ್ತಾರೆ. ನಮ್ಮ ಅಸ್ತಿತ್ವ, ಅದನ್ನು ದೃಢೀಕರಿಸುವ ಮನುಷ್ಯ ಸಂಬಂಧಗಳು, ಅದರ ಅಸ್ಮಿತೆ, ಅದನ್ನು ದೃಢೀಕರಿಸುವ ನಮ್ಮ ಕ್ರಿಯಾಶೀಲ ಸಾಧನೆಗಳು, ಅಸ್ತಿತ್ವ ಮತ್ತು ಅಸ್ಮಿತೆಯ ಮೂರ್ತರೂಪವಾದ ದೇಹ ಹಾಗೂ ಅಮೂರ್ತರೂಪವಾದ ಮನಸ್ಸು ಎರಡರಲ್ಲಿ ಯಾವುದು ನಮ್ಮ ಒಡನಾಡಿಗಳ ಮಟ್ಟಿಗೆ ರಿಲವಂಟ್ ಆಗಿ ಉಳಿಯುತ್ತದೆ, ಎರಡೂ ಮುಖ್ಯ ಯಾರಿಗೆ ಎರಡೂ ಮುಖ್ಯವಲ್ಲ ಯಾರಿಗೆ, ಇವುಗಳಲ್ಲಿ ಒಂದರ ಹೊರತು ಇನ್ನೊಂದಕ್ಕೆ ಇರುವ ಪರಿಕಲ್ಪನೆ ಎಷ್ಟರಮಟ್ಟಿಗೆ ನಿಜ ಎನ್ನುವುದೆಲ್ಲ ಸೈಕಲಾಜಿಕಲ್/ಫಿಲಾಸಫಿಕಲ್ ಎನ್ನುವುದು ನಿಜ. ಆದರೆ ಒಂದು ಸುಂದರ ಕಥನದ ಓಘದಲ್ಲ ಪೂರ್ಣಿಮಾ ಅವರು ಇದನ್ನು ಓದುಗನ ಮನಸ್ಸಿನಲ್ಲಿ ಹುಳ ಬಿಟ್ಟಂತೆ  ಯಶಸ್ವಿಯಾಗಿರುವುದು ಮೆಚ್ಚುಗೆಗೂ ಅಚ್ಚರಿಗೂ ಕಾರಣವಾಗುತ್ತದೆ. 


ಜನಪ್ರಿಯ ಕಥೆಗಾರರು ಮತ್ತು ಅನುವಾದಕರೂ ಆದ ಕೇಶವ ಮಳಗಿರವರು ಈ ಕಾದಂಬರಿಗೆ ಸುದೀರ್ಘವಾದ ಮುನ್ನುಡಿ ಬರೆದಿರುವರು .ಕಾದಂಬರಿ ಓದಿದ ಮೇಲೆ ಮತ್ತೆ ಮುನ್ನುಡಿ ಓದಿದರೆ ಇನ್ನೊಂದು ಹೊಳವು ಹೊಳೆದು ಮತ್ತೊಮ್ಮೆ ಕಾದಂಬರಿ ಓದಬೇಕು ಎನಿಸುತ್ತದೆ.

ಕೇಶವ ಮಳಗಿರವರವ ಮಾತುಗಳನ್ನು ಉಲ್ಲೇಖಿಸುವುದಾದರೆ 

"ಈ ಕಾದಂಬರಿಯ ನಾಯಕಿಯ ಉಭಯ ಕುಟುಂಬಗಳು (ತಂದೆ-ತಾಯಿ, ಗಂಡನ ಮನೆಯ ಪರಿವಾರ) ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಸಂಸಾರಗಳು, ಆ ನಿಮಿತ್ತವಾಗಿಯೇ ಸಾಮಾಜಿಕ ಭದ್ರತೆಯ ರೂಪವಾದ ನೌಕರಿ, ಅದರ ಹಣ ನೀಡಬಹುದಾದ ಸುಖವನ್ನು ಕಂಡುಕೊಳ್ಳುವಲ್ಲಿ ಪ್ರಯತ್ನಿಸುವವರು. ಇಲ್ಲಿ ಹೆಣ್ಣಿನ ನಿರೀಕ್ಷಿತ ಪಾತ್ರವೆಂದರೆ, ಕುಟುಂಬ ನಿರ್ವಹಣೆ, ಸಂಪಾದನೆ, ಮಕ್ಕಳ ಪಾಲನೆ ಪೋಷಣೆ, ರುಚಿರುಚಿಗಳ ಆದ್ಯತೆ, ಪ್ರವಾಸ ಇತ್ಯಾದಿ. ನಿಜವಾದ ಸಂಘರ್ಷವಿರುವುದೇ ಇಲ್ಲಿ. ಇಲ್ಲಿನ ನಾಯಕಿ ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಆಕೆಯ ಪತಿಯೇ ಉತ್ತೇಜಕ ಶಕ್ತಿಯಾಗಿದ್ದಾನೆ. ಆತನೊಬ್ಬ ಪತ್ನಿಯ ಇಚ್ಛೆಯರಿತು ನಡೆವ ನಮ್ರನಂತೆ ಕಂಡರೂ ಕಥಾನಾಯಕಿಯ ನಿರ್ಧರಿತ ಕ್ಷಣದಲ್ಲಿ ಇಂಥ ದುಸ್ಸಾಹಸದ ಸಹವಾಸ ನನಗೆ ಬೇಡ ಎಂಬ  ಲಕ್ಷಣಗಳನ್ನು ತೋರುವವನು. ಸಮಸ್ಯೆಯಿರುವುದು ಹೊರಗಿನ ಸಹಜ ಬೆಂಬಲ ದೊರಕಿಸಿಕೊಳ್ಳುವುದರಲ್ಲಲ್ಲ. ತನ್ನ ರೋಚಕ ವಿಚಾರ, (ದು)ಸಾಹಸಗಳನ್ನು ಹಂಚಿಕೊಳ್ಳುವ, ಹಂಗಿರದ ಸ್ವಾತಂತ್ರ್ಯವನ್ನು ತನ್ನೊಡನೆ ಆಸ್ವಾದಿಸಬಲ್ಲ ಮತ್ತು ಆಂಟಿನ ಗುಣ ಹೊಂದಿರದ, ನೀರಿನಷ್ಟು ಪಾರದರ್ಶಕವಾಗಿರಬಲ್ಲ ಸಾಂಗತ್ಯ ಅದರ ಗೈರು ಹಾಜರಿಯ ವಿಷಾದ ಹೊರಗೆ ಪ್ರಕಟವಾಗದೆ, ಆಳದಲ್ಲಿ ಕೊರೆದು ಮರವನ್ನು ಬೀಳಿಸುವಷ್ಟು ಪ್ರಬಲವಾಗಿರುವಂಥದ್ದು, ಈ ವಿಷಾದ ಮಡುಗಟ್ಟಿ ಬದುಕು ಮೂರಾಬಟ್ಟೆಯಾಗಲು ಕಾರಣ ನಾವು ಕನಸುಗಳನ್ನು ಗ್ರಹಿಸುವ ರೀತಿಯಲ್ಲಿರುವ ಸಾಂಸ್ಕತಿಕ ದೋಷಗಳೇ ಆಗಿವೆ. ಇಲ್ಲಿ ಹೆಣ್ಣು ಸ್ವತಂತ್ರಳು ಎಂದರೂ ಆಕೆ ಸ್ವಾತಂತ್ರತೆಯ ಭ್ರಮೆಯಲ್ಲಿರುವ ಬಂಧಿ.ಕಥೆ ಬೆಳೆದಂತೆ ಈ ಅಂಶಗಳು ಬಹುಬೇಗ ಓದುಗರು ಅರಿಯುತ್ತ ರೋಚಕತೆ, ವಿಷಾದ, ಆಘಾತ ಇತ್ಯಾದಿಗಳನ್ನು ಅನುಭವಿಸುವರು ಪೂರ್ಣಿಮಾರ ಕಥನ ಶೈಲಿ, ತಂತ್ರ, ವಿನ್ಯಾಸ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕಥೆಯನ್ನು ತೀರ ಹೊಸತೊಂದು ಬಗೆಯಲ್ಲಿ ನಡೆಸಬೇಕೆಂಬ ಛಲದ ನಿರೂಪಣೆ ನನ್ನನ್ನು, ಬಹುವಾಗಿ ಆಕರ್ಷಿಸಿದ ಅಂಶವಾಗಿದೆ. ಘಟನೆಗಳನ್ನು ಹೆಣೆಯುವ ಕ್ರಮ ಮತ್ತು ಸಿಕ್ಕು ನಿರೂಪಣೆಯ ಮೂಲಕ ಕಥನದ ಮೇಲೆ ನಿಯಂತ್ರಣ ಸಾಧಿಸುವ ವಿಧಾನ ಕೂಡ ಮೇಲುಸ್ತರದ್ದಾಗಿದೆ. "


ಸ್ವತಃ ಹವ್ಯಾಸಿ  ಬರಹಗಾರನಾದ ನಾನು ಕೂಡಾ ನನ್ನ ಜೀವನದಲ್ಲಿ ಇಜಯ ರೀತಿಯಲ್ಲಿ ತುಮಲಗಳನ್ನು ಅನುಭವಿಸಿದ್ದೇನೆ .ಕೆಲವೊಮ್ಮೆ ಇದು ನನ್ನದೇ ಕಥೆಯೇನೊ ಅನಿಸಿದ್ದು ಸುಳ್ಳಲ್ಲ.


ಒಟ್ಟಾರೆ ಉತ್ತಮ ಕಾದಂಬರಿ ಓದಿಸಿದ, ಚಿಂತನೆಗೆ ಹಚ್ಚಿದ , ಲೇಖಕಿಯವರ  ಭಾಷೆಯಲ್ಲಿ ಹೇಳುವುದಾದರೆ  ತಲೆಯಲ್ಲಿ ಹುಳ ಬಿಟ್ಟ ಅವರಿಗೆ  ನಮನಗಳು.ಇನ್ನೂ ಇಂತಹ ಉತ್ತಮ ಕೃತಿಗಳು ಅವರ ಲೇಖನಿಯಿಂದ  ಬರಲಿ ಎಂದು ಆಶಿಸುವೆ.


ಕಾದಂಬರಿ ಹೆಸರು: ಇಜಯಾ

ಲೇಖಕಿ: ಪೂರ್ಣಿಮಾ ಮಾಳಗಿಮನಿ

ಪ್ರಕಾಶನ: ಗೋಮಿನಿ ಪ್ರಕಾಶನ 

ಪುಟಗಳು :184

ಬೆಲೆ: 160.



*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು.

9900925529


ಪಿ ಎಂ ಪೋಷಣ್ .ಕಾರ್ಯಕ್ರಮವನ್ನು ಯಶಸ್ವಿಗೊಳಿಸೀಣ.


 


ಪಿ ಎಂ ಪೋಷಣ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.


ಭಾರತವು  ಜಾಗತಿಕ ಆಹಾರ ಭದ್ರತೆ ಯಲ್ಲಿ ನೂರಾ ಹದಿಮೂರು ದೇಶಗಳ ಪೈಕಿ ಎಪ್ಪತ್ತೊಂದನೇ ಸ್ಥಾನ ಹೊಂದಿದೆ. ಇದು ಸಂತಸ ಪಡುವ ವಿಷಯವಲ್ಲ ಅಂದ ಮಾತ್ರಕ್ಕೆ ಕಳಪೆ ಸಾಧನೆಯೇನಲ್ಲ. 

ಕೋವಿಡ್ ನಂತಹ ದುರಿತ ಕಾಲದಲ್ಲಿ ಭಾರತದ ಪಡಿತರ ವಿತರಣಾ ವ್ಯವಸ್ಥೆಯ ಪಾತ್ರವನ್ನು ನಾವು ಮೆಚ್ಚಲೇ ಬೇಕು. ಇದರ ಜೊತೆಗೆ ಶಾಲಾ ಮಕ್ಕಳ ಮಧ್ಯಾಹ್ನ ಬಿಸಿಯೂಟ ಯೋಜನೆಯು ಎರಡು ವರ್ಷಗಳಿಂದ ಸ್ಥಗಿತಗೊಂಡಿತ್ತು. ಇದೂ ಕೂಡಾ ಮಕ್ಕಳ ಅಪೌಷ್ಟಿಕತೆ ಮತ್ತು ಆಹಾರ ಭದ್ರತೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಲು ಕಾರಣವಾಗಿತ್ತು ಎಂದು ನಂಬಲೇಬೇಕು.


ಈಗ ಕರ್ನಾಟಕ ರಾಜ್ಯ ಸರ್ಕಾರ ಇದೇ ತಿಂಗಳ 21 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪಿ.ಎಂ ಪೋಷಣ್ ಹೆಸರಿನಿಂದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲು ಯೋಜಿಸಿರುವುದು ಸ್ವಾಗತಾರ್ಹ.


ಕೋವಿಡ್ ಪೂರ್ಣವಾಗಿ ತೊಲಗಿರದ ಈ ಕಾಲದಲ್ಲಿ ಆರಂಭವಾಗುತ್ತಿರುವ ಈ ಕಾರ್ಯಕ್ರಮಕ್ಕೆ ಸರ್ವರೂ ಕೈಜೋಡಿಸಿ ಹಸಿದ ಮಕ್ಕಳ ಹೊಟ್ಟೆ ತುಂಬಿಸುವ ಕಾರ್ಯ ಮಾಡಬೇಕಿದೆ.


ಇದಕ್ಕೆ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಅಡುಗೆ ಕೋಣೆಯೊಳಗೆ ಮಕ್ಕಳ ಪ್ರವೇಶ ನಿಷಿದ್ಧ ಮಾಡಬೇಕಿದೆ.

ನಂದಕಗಳ ಅಳವಡಿಕೆ ಕಡ್ಡಾಯ ಮಾಡಬೇಕು 

ಅಡುಗೆ ಕೋಣೆಯಲ್ಲಿ ಆಹಾರ ತಯಾರಿಸುವ ಮುನ್ನ ಸ್ವಚ್ಛತೆಯ ಬಗ್ಗೆ (ಕ್ರಿಮಿ ಕೀಟಗಳು ಹಲ್ಲಿ, ಜಿರಲೆ ಇರದಂತೆ) ಎಚ್ಚರಿಕೆ ವಹಿಸಬೇಕು 

 ದಿನಸಿ ಪಾಕೆಟ್‌ಗಳ ಮೇಲೆ ಅವಧಿ ಮೀರುವ ದಿನಾಂಕ ಪರಾಮರ್ಶಿಸಿ ಕಡ್ಡಾಯವಾಗಿ ಖಾತ್ರಿಪಡಿಸಿಕೊಳ್ಳಬೇಕು. ಅಡುಗೆ ತಯಾರಿಸುವ ಮುನ್ನ ತರಕಾರಿಗಳನ್ನು ನೀರಿನಿಂದ ಸಚ್ಛಗೊಳಿಸತಕ್ಕದ್ದು.

ಊಟಕ್ಕೆ ಮುಂಚೆ ಶಿಕ್ಷಕರು ರುಚಿ ನೋಡಿ ರುಚಿ ಪುಸ್ತಕದಲ್ಲಿ ದಾಖಲಿಸಬೇಕು.

   ಆಕಸ್ಮಿಕ ಅವಘಡಗಳ ಬಗ್ಗೆ ತುರ್ತು ಕ್ರಮಕ್ಕೆ ಎಚ್ಚರಿಕೆ ವಹಿಸಲು “ಎಮರ್ಜೆನಿ ಮಡಿಕಲ್ ಪ್ಲಾನ್" ತಯಾರಿಸಿ ಶಾಲೆಯಲ್ಲಿಡಬೇಕು 


ಅಡುಗೆ ಸಾಮಗ್ರಿಗಳಾದ, ಎಣ್ಣೆ, ಉಪ್ಪು ಮತ್ತು ಹಾಲಿನ ಪುಡಿ ಇತ್ಯಾದಿಗಳನ್ನು ನಿಗದಿತ ತೂಕ / ಪರಿಮಾಣದಲ್ಲಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕು.


 ಊಟಕ್ಕೆ ಮುಂಚೆ ಮತ್ತು ನಂತರ ಮಕ್ಕಳು ಸೋಪು ಬಳಸಿ ಕೈತೊಳೆಯುವ  ವಿಧಾನವನ್ನು ರೂಢಿಸಿಕೊಳ್ಳಲು ಸಲಹೆ ನೀಡಬೇಕು .


  ಶಾಲೆ ನಡೆಯುವ ಎಲ್ಲಾ ದಿನಗಳಲ್ಲಿ ಕಡ್ಡಾಯವಾಗಿ ಬಿಸಿಯೂಟವನ್ನು ನೀಡಲು ಕ್ರಮ ಕೈಗೊಳ್ಳಬೇಕು.

 ಆಹಾರ ತಯಾರಿಸಿದ ನಂತರ ಕಡ್ಡಾಯವಾಗಿ ಸರಿಯಾಗಿ ಮುಚ್ಚಿಡಬೇಕು.

ಕುಡಿಯುವ ನೀರಿನ ಟ್ಯಾಂಕನ್ನು ಕ್ರಮಬದ್ಧವಾಗಿ ಸ್ವಚ್ಛಗೊಳಿಸಬೇಕು.ಮತ್ತು ಮಕ್ಕಳು ಕುಡಿಯಲು ಮನೆಯಿಂದ ಬಿಸಿನೀರು ತರಲು ಮಾರ್ಗದರ್ಶನ ನೀಡಬೇಕು.

  ನಿಗದಿತ ಪ್ರಮಾಣದ ತರಕಾರಿಯ ಬಳಸಿ ಊಟ ತಯಾರಿಸಬೇಕು.

 ಅಡುಗೆಯವರು ಏಪ್ರಾನ್ ಮತ್ತು ತಲೆಗೆ ಟೋಪಿ ಬಳಸಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು.

 ಊಟದ ವೇಳೆಯಲ್ಲಿ ಎಲ್ಲಾ ಶಿಕ್ಷಕರ ಹಾಗೂ ಅಡುಗೆಯವರು ಹಾಜರಿದ್ದು  ಸಾಮಾಜಿಕ ಅಂತರ ಕಾಪಾಡಿಕೊಂಡು  ಎಸ್. ಓ .ಪಿ. ಪ್ರಕಾರ ಊಟ ಬಡಿಸಬೇಕು.

 ಚಿಕ್ಕ ಚಿಕ್ಕ ಪಾತ್ರೆಗಳಲ್ಲಿ ಆಹಾರವನ್ನು ತುಂಬಿಕೊಂಡು ಬಡಿಸಬೇಕು 

 ಅಡುಗೆಗೆ ಬಳಸುವ ಪಾತ್ರೆಗಳು ಸ್ವಚ್ಚವಾಗಿರುವುದನ್ನು ಮತ್ತು ಕಿಲುಬು ಬಾರದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು .

  ಚಿಕ್ಕ ಮಕ್ಕಳನ್ನು ಅಡುಗೆಕೋಣೆಯಲ್ಲಿ ಕಡೆ ಬರದಂತೆ ಎಚ್ಚರ ವಹಿಸಬೇಕು.

ಕಳಪೆ ಅಥವಾ ಹಾಳಾದ ಆಹಾರಧಾನ್ಯಗಳ ಬಳಕೆ ಮಾಡಲೇಬಾರದು.

 ಅಡುಗೆ ಕೋಣೆಯಲ್ಲಿ ಅನುಪಯುಕ್ತ ವಸ್ತುಗಳ ಸಂಗ್ರಹ ಮಾಡದೇ ಸ್ವಚ್ಚತೆ ಕಾಪಾಡಿಕೊಳ್ಳಬೇಕು.

ಯಾವುದೇ ಕಾರಣಕ್ಕೂ ಮಕ್ಕಳು ಪಾತ್ರೆ ಮುಂದೆ ನಿಂತು ಆಹಾರವನ್ನು

ತಟ್ಟೆಗೆ ಹಾಕಿಸಿಕೊಳ್ಳದಂತೆ ಕ್ರಮ ವಹಿಸಬೇಕು.


ಈ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳಲ್ಲಿ ಮಕ್ಕಳು ,ಪೋಷಕರು, ಎಸ್ ಡಿ .ಎಂ‌.ಸಿ  .ಸಮುದಾಯ ಶಾಲಾ ಶಿಕ್ಷಕರು, ಅಧಿಕಾರಿಗಳು ಪಿ. ಎಂ. ಪೋಷಣ್ ಕಾರ್ಯಕ್ರಮದ ಯಶಸ್ಸಿಗೆ  ಪಣ ತೊಡಬೇಕಿದೆ.ತನ್ಮೂಲಕ ಮಕ್ಕಳಿಗೆ ಅನ್ನದ ಜೊತೆಗೆ ಜ್ಞಾನ ನೀಡುವ  ಸತ್ಕಾರ್ಯಕ್ಕೆ ಮುನ್ನುಡಿ ಬರೆಯಬೇಕಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


ಜೀವಿಗಳ ಪ್ರಶ್ನೆ. ಹನಿಗವನ


 *ಜೀವಿಗಳ ಪ್ರಶ್ನೆ*


ಗಿಡ ಮರ ಬಳ್ಳಿ ಗಾಳಿ

ನೀರು ಭೂಮಿ ಎಲ್ಲಾ

ಪರೋಪಕಾರ ಮಾಡುತಾ

ಪ್ರತಿದಿನ ನಮಗೆ ಸಂತಸವ

ನೀಡುತಿವೆ ಮರೆಸುತ ನೋವ|

ನಮ್ಮ ಸ್ವಾರ್ಥವ ನೋಡುತ್ತಾ

ಪ್ರಕೃತಿಯ ಸಕಲ ಜೀವಿಗಳು

ಪ್ರಶ್ನಿಸುತ್ತಿವೆ ನೀನಾರಿಗಾದೆಯೋ

ಎಲೆ ಮಾನವ ||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ.

18 October 2021

ಪ್ರತಿ ಧ್ವನಿ ೧೭/೯/೨೧

 


ಹಾಸನ ವಾಣಿ.೧೭/೧೦/೨೧


 

ಪ್ರಜಾಪ್ರಗತಿ . ೧೭/೧೦/೨೧


 

ಕೋದಂಡನ ಟೀಚಿಂಗ್ ಪ್ರಾಕ್ಟೀಸ್ . ನಗೆ ಬರಹ


 

ಕೋದಂಡನ ಟೀಚಿಂಗ್ ಪ್ರಾಕ್ಟೀಸ್
ನಗೆ ಬರಹ

ನಾನು ಆಗ ಟಿ.ಸಿ.ಎಚ್. ತರಬೇತಿ ಪಡೆಯುತ್ತಿದ್ದ ದಿನಗಳು.ಟಿ. ಸಿ .ಹೆಚ್ . ಎಂದ ಮೇಲೆ ಟೀಚಿಂಗ್ ಪ್ರಾಕ್ಟೀಸ್ ಇರಲೇಬೇಕು.ವಿದ್ಯಾರ್ಥಿ ಶಿಕ್ಷಕರಾದ ನಮ್ಮನ್ನೆಲ್ಲಾ ಹಲವಾರು ತಂಡಗಳಾಗಿ ವಿಂಗಡಿಸಿ ವಿವಿಧ ಶಾಲೆಗಳಿಗೆ ಕಳುಹಿಸುತ್ತಿದ್ದರು. ನಮ್ಮ ತಂಡ ದಲ್ಲಿದ್ದ ಕೋದಂಡ ಎಂಬುವವನು ಗಡಿಬಿಡಿಯಲ್ಲಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲಿಸುತ್ತಿದ್ದ. ಇದಕ್ಕೆ ಕಾರಣ ಸ್ಟೇಜ್ ಫಿಯರ್!

ಸಾಮಾನ್ಯವಾಗಿ ಪಾಠ ಮಾಡುವಾಗ ಪೀಠಿಕೆಯಿಂದಲೇ ಪಾಠ  ಮಾಡಬೇಕು. ಅದು ಹರ್ಬಾಟ್ ನ ಪಂಚಸೋಪಾನದ ಮೊದಲು ಮೆಟ್ಟಿಲು ಎಂದು ನಮ್ಮ ಶಿಕ್ಷಕರು ಹೇಳಿದ್ದರು. ಪೀಠಿಕೆಯು ಮಕ್ಕಳ ಬಾಯಲ್ಲೇ ಬರಬೇಕು .ಎಂದು ನಮ್ಮ ಶಿಕ್ಷಕರು ಹೇಳಿದ್ದನ್ನು ಕೋದಂಡ ಬಹಳ ಚೆನ್ನಾಗಿ ನೆನಪಿಟ್ಟುಕೊಂಡಿದ್ದ. ಒಮ್ಮೆ "ತಾಳಿಕೋಟಿ  ಯುದ್ಧ" ಎಂಬ ಇತಿಹಾಸ ಪಾಠ ಮಾಡಬೇಕಾದ  ಕೋದಂಡನು ಏನೆಲ್ಲಾ ಹರಸಾಹಸ ಮಾಡಿದರೂ ಮಕ್ಕಳು ತಾಳಿಕೋಟೆ ಎಂದು ಹೇಳಲೇ ಇಲ್ಲ. ಪಾಠ ವೀಕ್ಷಿಸಲು ಶಿಕ್ಷಕರು ಹಿಂದೆ ಕುಳಿತರೆ ನಮ್ಮ ಕೋದಂಡ ಇನ್ನೂ ಗಲಿಬಿಲಿಯಾಗುತ್ತಿದ್ದ.
ಪೀಠಿಕೆಯಲ್ಲಿ ಪಾಠದ ಹೆಸರು ಮಕ್ಕಳ ಬಾಯಲ್ಲಿ ಬರಲಿಲ್ಲ.

ಕೊನೆಗೆ ಈ ರೀತಿಯ ಪೀಠಿಕಾ ಪಶ್ನೆಗಳನ್ನು ಹಾಕಿದ - 'ಮದುವೆ ಆಗಬೇಕಾದರೆ ಹೆಣ್ಣಿಗೆ ಗಂಡು ಏನು ಕಟ್ತಾನೆ ?
ಮಕ್ಕಳು 'ತಾಳಿ' ಎಂದರು. ಕೋದಂಡನಿಗೆ ಖುಷಿಯಾಗಿ
ಎರಡನೆ ಪ್ರಶ್ನೆ ಕೇಳಿದ: "ರಾಜರು ಹಿಂದೆ ತಮ್ಮ ಪ್ರಜೆಗಳ ರಕ್ಷಣೆ ಮಾಡಿಕೊಳ್ಳಲು ನಗರದ ಸುತ್ತ ಏನು ಕಟ್ಟಿಸುತ್ತಿದ್ದರು?
ಮಕ್ಕಳು ಜೋರಾಗಿ "ಕೋಟೆ" ಸಾರ್' ಎಂದರು. ಆಗ ಕೋದಂಡ ವೆರೀ ಗುಡ್ , ಹಾಗಾದರೆ ನಾವು ಈ ದಿನ ತಾಳಿಕೋಟೆ ಯುದ್ಧದ ಬಗ್ಗೆ ತಿಳಿಯೋಣ' ಎಂದು ಹೇಳಿದಾಗ ಪಾಠ  ವೀಕ್ಷಣೆ ಮಾಡುತ್ತಿದ್ದ ಶಿಕ್ಷಕರು ಬೇಸ್ತು ಬಿದ್ದರು .

ಮುತ್ತೊಂದು ತರಗತಿಯಲ್ಲಿ ಕೋದಂಡ ಪೌರನೀತಿಯ ಪಾಠ ಮಾಡುತ್ತಿದ್ದ. ಈ ಮೊದಲೇ ಹೇಳಿದಂತೆ ಅವನಿಗೆ ಶಿಕ್ಷಕರು ಪಾಠ ವೀಕ್ಷಣೆ ಮಾಡಿದರೆ ಗಡಿಬಿಡಿಯಾಗಿ ಏನೇನೋ ಹೇಳುತ್ತಿದ್ದ. ಅವನ ಉದ್ದೇಶ ಮಕ್ಕಳಿಂದ 'ಪ್ರಧಾನಮಂತ್ರಿ' ಎಂದು - ಹೇಳಿಸಬೇಕಾಗಿತ್ತು. ಅದಕ್ಕೆ ಅವನು ಹಾಕಿದ ಪಶ್ನೆ  ಡೆಲ್ಲಿನಾಗೆ ಯಾರು ಇರ್ತಾರಲಾ?'
ಮಕ್ಕಳು "ಮನುಷ್ಯರು" ಎಂದು ತಟ್ಟನೆ ಉತ್ತರಿಸಿದಾಗ ಕೋದಂಡನಿಗೆ ಪಿತ್ತ ನೆತ್ತಿಗೇರಿತು , ಹಂಗಾದರೆ ನಮ್ಮ ಊರಾಗೆ ಬರೇ  ಕತ್ತೆ  ಇದ್ದಾವೇನಲೇ? ಡೆಲ್ಲಿನಾಗೆ ಯಾರು ಇರ್ತಾರೆ ಅನ್ನೋದೇ    ಗೊತ್ತಿಲ್ಲ ನಿಮಗೆ  ಅಂತ ಸಿಟ್ಟಾಗಿ 'ಹಾಂ..ಕೇಳಿ ಡೆಲ್ಲಿನಾಗೆ ಪ್ರಧಾನಮಂತ್ರಿಗಳು ಇರ್ತಾರೆ' ಎಂದು ಹೇಳಿದಾಗ ಪಾಠ ವೀಕ್ಷಣೆ ಮಾಡುವ ಶಿಕ್ಷಕರ  ಕಣ್ಣು ಕೆಂಪಗಾಗಿದ್ದರೂ ಸುಮ್ಮನೆ ಕುಳಿತು ಪಾಠ ವೀಕ್ಷಿಸಿ, ನಂತರ ಕ್ಲಾಸ್ ತೆಗೆದುಕೊಂಡರು. ಅದು ಬೇರೆ ಮಾತು.

ಮತ್ತೊಮ್ಮೆ ವಿಜ್ಞಾನ ಪಾಠ ಬೋಧಿಸುವಾಗ ಮಕ್ಕಳಿಂದ ನೀರು' ಎಂಬ ಉತ್ತರ ಪಡೆಯಬೇಕಾಗಿತ್ತು. ಅದಕ್ಕೆ ನಮ್ಮ ಕೋದಂಡ ಹಾಕಿದ ಪಶ್ನಾವಳಿ ಎಂದರೆ 'ಲೇ... ಮನುಷ್ಯರು ಸತ್ತಾಗ ಅವ್ರ ಬಾಯಲ್ಲಿ ಏನ್ ಬಿಡ್ತಾರೆ?' ಮಕ್ಕಳು ಯೋಚಿಸಿ " ಹಾಲು ಬಿಡ್ತಾರೆ ಸಾರ್" ಎಂದರು. ಆಗ ಕೋದಂಡ ಅವರಿಗೆ 'ವೆರಿ ಗುಡ್' ಅಂದು ಎರಡನೆ ಪ್ರಶ್ನೆಗೆ ಮುಂದುವರೆದ, 'ಹಾಲು  ಸಿಗದಿದ್ದರೆ ಸತ್ತಾಗ ಬಾಯಿಗೆ ಏನು ಬಿಡ್ತಾರೆ?' ಮಕ್ಕಳು  ಯೋಚಿಸಿ" ನೀರು ಬಿಡ್ತಾರೆ. ಸಾರ್"ಎಂದರು, ಆಗ ನಮ್ಮ  ಕೋದಂಡನಿಗಾದ ಸಂತೋಷ ಅಷ್ಟಿಷ್ಟಲ್ಲ, 'ವೆರಿ ವೆರಿ ಗುಡ್, ಹಾಗಾದರೆ ನಾವು ಈ ದಿನ ನೀರಿನ ಬಗ್ಗೆ ತಿಳಿಯೋಣ' ಎಂದು ಬಿಡಬೇಕೇ?!
ಇಂತಹ ಘಟನೆಗಳು ನಮ್ಮ ಟಿ. ಸಿ. ಹೆಚ್. ಮತ್ತು ಬಿ .ಎಡ್. ಓದುವಾಗ ಹಲವಾರು ಘಟಿಸಿವೆ .ಇಪ್ಪತ್ತೊಂದು  ವರ್ಷದ  ಬಳಿಕ ಮೊನ್ನೆ  ಊರಿಗೆ ಹೋದಾಗ ಕೋದಂಡ ಸಿಕ್ಕಿದ್ದ .
ಗಡಿಬಿಡಿ, ಗೊಂದಲಗಳಿಂದ ನಮ್ಮನ್ನೆಲ್ಲಾ ನಕ್ಕು ನಲಿಸುತ್ತಿದ್ದ ಕೋದಂಡನನ್ನು ನೋಡಿ ಮತ್ತೆ ನಗು ಬಂತು . ಗಂಟೆಗಟ್ಟಲೆ ನಮ್ಮ ಟ್ರೈನಿಂಗ್ ಕಾಲದ ನೆನಪುಗಳಲ್ಲಿ ತೇಲಿಹೋದೆವು ಎಷ್ಟೇ ಆದರೂ ನೆನಪುಗಳು ಮಧುರ ಅಲ್ಲವೇ?

ಸಿಹಿಜೀವಿ
ಸಿ.ಜಿ. ವೆಂಕಟೇಶ್ವರ

17 October 2021

ಬಡತನ ನಿರ್ಮೂಲನೆ. ಹನಿಗವನ


 


#ಬಡತನನಿರ್ಮೂಲನೆ 


ದಶಕಗಳಿಂದ ನಾವೆಲ್ಲರೂ 

ಪ್ರಯತ್ನ ಮಾಡುತ್ತಿದ್ದೇವೆ ನಿರ್ಮೂಲನೆ ಮಾಡಲು

ಬಡತನ| 

ಹೇಗೆ ನಿರ್ಮೂಲನೆ ಆದೀತು 

ಉಳ್ಳವರು ಬಡವರಿಗೆ 

ಅನ್ನ ಆಹಾರಾದಿಗಳ ನೀಡದೆ

ನೀಡುತ್ತಲೇ ಇದ್ದಾರೆ

ಬರೀ ಬಾಯಿ ಮಾತಿನ 

ಸಾಂತ್ವನ| |


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ



15 October 2021

ಆರೋಗ್ಯಕರ ಜೀವನ ಸುಖೀ ಜೀವನ .ಲೇಖನ .Health is wealth .


 


ರೋಗವೆನ್ನುವುದು ಬಹುತೇಕ ಸ್ವಯಾರ್ಜಿತ ಎನ್ನಬಹುದು . ದೈಹಿಕ ಮತ್ತು ಮಾನಸಿಕವಾದ ರೋಗಗಳು ನಮ್ಮ ಅಜಾಗರೂಕತೆಯಿಂದ, ಅಸಮರ್ಪಕ ಆಹಾರ ಸೇವನೆಯಿಂದ , ದೈಹಿಕ ಶ್ರಮವಿಲ್ಲದ ಜೀವನ ಶೈಲಿಯಿಂದ ನಮ್ಮನ್ನು ಬಾದಿಸುತ್ತವೆ . ಸೂಕ್ತ ಆಹಾರ ಪದ್ಧತಿ, ವ್ಯಾಯಾಮ, ಮಾಡಿದರೆ ಬಹುತೇಕ ರೋಗಗಳು ನಮ್ಮಿಂದ ದೂರ ಸರಿಯುತ್ತವೆ.


ನಿಯಂತ್ರಣವಿಲ್ಲದೇ 

ತಿನ್ನುತ್ತಾ ದೈಹಿಕ ಶ್ರಮ ಪಡದೇ

ಕುಳಿತುಕೊಂಡರೆ ಕುಂತಲ್ಲೇ|

ನಿನ್ನನ್ನೆ ಹುಡುಕಿಕೊಂಡು

ಬರುವುದು ಕಾಯಿಲೆ||


ಇದನ್ನು ಮನಗಂಡು

"ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ" ಎಂದರು ಅನುಭಾವಿಗಳು.

"ಒಂದೊತ್ತು ಉಂಡವ ಯೋಗಿ,ಎರಡೊತ್ತು ಉಂಡವ ಭೋಗಿ, ಮೂರೊತ್ತು ಉಂಡವ ರೋಗಿ ,ನಾಲ್ಕೊತ್ತು ಉಂಡವರ ಹೊತ್ತಕೊಂಡ್ ಹೋಗಿ " ಎಂದರು ಹಿರಿಯರು. 

ಹಾಗಾಗಿ ಉತ್ತಮ ಜೀವನ ಶೈಲಿ ಹಿತಮಿತ ಆಹಾರ ನಮ್ಮದಾಗಬೇಕು.ಇದು ದೈಹಿಕ ರೋಗಗಳಿಂದ ದೂರವಿರುವ ಸುಲಭ ಮಾರ್ಗ.


ದೈಹಿಕ ಆರೋಗ್ಯಕ್ಕಿಂತ ಇಂದಿನ ದಿನಗಳಲ್ಲಿ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಿದೆ . ಅತಿಯಾದ ಆಸೆ, ಸಣ್ಣ ವಿಷಯಗಳ ಕಡೆ ಅತಿಯಾದ ಚಿಂತೆ, ಸೋಲಿಗೆ ಅತಿಯಾದ ನಕಾರಾತ್ಮಕ ಪ್ರತಿಕ್ರಿಯೆ ಮತ್ತು ಚಿಂತೆ, ಮುಂತಾದ ಕಾರಣದಿಂದಾಗಿ ಪ್ರಪಂಚದ ಬಹುತೇಕ ಜನ ಇಂದು ಖಿನ್ನತೆಗೆ ಒಳಗಾಗಿ , ಒತ್ತಡದಿಂದ ಹಲವಾರು ಮಾನಸಿಕ ರೋಗಗಳಿಗೆ ತುತ್ತಾಗಿದ್ದಾರೆ .


ಅತಿಯಾಸೆ, ಒತ್ತಡದಿಂದ 

ಇಂದು ಹಲವರನ್ನು ಕಾಡುತ್ತಿದೆ

ಮನೋರೋಗ|

ಓಡಿಸೋಣ ಈ ರೋಗಗಳ

ಹಾಸಿಗೆ ಇದ್ದಷ್ಟು ಕಾಲುಚಾಚುತ

ಮನಸ್ಸನ್ನು ನಿಯಂತ್ರಣಗೊಳಿಸೋಣ

ಮಾಡುತಲಿ ಧ್ಯಾನ ,ಯೋಗ||


ಮನವೆಂಬ ಮರ್ಕಟವು ನಮ್ಮ ಹಿಡಿತದಲ್ಲಿ ಇರದೇ ಅತಿಯಾಸೆಯಿಂದ ಅಪ್ರಮಾಣಿಕ ಮಾರ್ಗದಲ್ಲಿ ನಮಗೆ ಬೇಕಾದ ವಸ್ತುಗಳನ್ನು ಪಡೆಯಲು ಹಾತೊರೆಯುತ್ತದೆ. ಆ ಆಸೆಗಳು ಈಡೇರದಿದ್ದಾಗ ಅನೈತಿಕ ಮಾರ್ಗ ಹಿಡಿಯುತ್ತೇವೆ ಅದರ ಪರಿಣಾಮವಾಗಿ ಒತ್ತಡ ,ಚಿಂತೆ, ಖಿನ್ನತೆಗಳು ಹಿಂಬಾಲಿಸುತ್ತವೆ .


ಬಹುತೇಕವಾಗಿ ಮಾನಸಿಕ ಅನಾರೋಗ್ಯದಿಂದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಮುಂತಾದ ಕಾಯಿಲೆಗಳು ಬರುತ್ತಿರುವುದು ನಮಗೆ ತಿಳಿದಿರುವ ಸಂಗತಿಯಾಗಿದೆ.


ಹಾಸಿಗೆ ಇದ್ದಷ್ಟು ಕಾಲು ಚಾಚುತ, ನಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಇಂದ್ರಿಯ ‌ನಿಗ್ರಹ ಮಾಡಿಕೊಂಡು, ಪರಿಸರದ ಜೊತೆಯಲ್ಲಿ ಸಂಘರ್ಷವೇರ್ಪಡಿಸಿಕೊಳ್ಳದೇ ಯೋಗ ಧ್ಯಾನ ಗಳ ಸಹಾಯದಿಂದ ನಾವು ಮಾನಸಿಕ ಆರೋಗ್ಯ ಹೊಂದಬೇಕಿದೆ.


ಇಂದಿನ ಆಧುನಿಕ ಕಾಲದಲ್ಲಿ ದಿನಕ್ಕೊಂದು ವೈರಸ್ , ನಿಂದ ಹಲವಾರು ಕಾಯಿಲೆಗಳು ನಮ್ಮನ್ನು ಬಾದಿಸಲು ಕಾದಿವೆ . ಅದಕ್ಕೆ ಸೂಕ್ತವಾದ ಆಹಾರ ಸೇವಿಸಿ, ಚಟುವಟಿಕೆಯ ಜೀವನ ಶೈಲಿಯನ್ನು ಅಳವಡಿಸಿಕೊಂಡು ನಮ್ಮ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಂಡರೆ , ಯೋಗ ಧ್ಯಾನಗಳ ಮೂಲಕ ನಮ್ಮ ಮನಸ್ಸನ್ನು ನಿಗ್ರಹ ಮಾಡಿಕೊಂಡು ಹಾಸಿಗೆ ಇದ್ದಷ್ಟು ಕಾಲು ಚಾಚಿದರೆ ರೋಗಗಳು ನಮ್ಮಿಂದ ದೂರಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ ನಮ್ಮದಾಗಿ ಸುಖಿ ಜೀವನ ಸಾಗಿಸಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529



ಸದ್ಗುಣ ಶೋಭಿತ .ಹುಟ್ಟು ಹಬ್ಬದ ಶುಭಾಶಯಗಳು ಮಗಳೆ.


 *ಸದ್ಗುಣ ಶೋಭಿತ*


(ಮಗಳ ಹುಟ್ಟು ಹಬ್ಬದ ಪ್ರಯುಕ್ತ ಕವಿತೆ ಹುಟ್ಟು ಹಬ್ಬದ ಶುಭಾಶಯಗಳು ಶೋಭಿತ )


ಸಕಲ ಸದ್ಗುಣ "ಶೋಭಿತ"ಳು

ಅವಳೇ  ನಮ್ಮನೆ ಮಗಳು.


ನೋವುಲೂ ನಕ್ಕು ನಲಿದವಳು

ನಮ್ಮ ಮನಕಾನಂದವ ತಂದಳು


ಬಂಗಾರದ ಗುಣದ ಚಿನ್ನಮ್ಮ

ಹೋಲಿಕೆಯಲ್ಲಿ ನಿಜ  ನನ್ನಮ್ಮ 


ನೀ ಜನಿಸಿದ್ದು ವಿಜಯದಶಮಿ

ಸರ್ವ ಗುಣಗಳಲೂ ನೀ ಭೂಮಿ


ಮತ್ತೆ ಮತ್ತೆ ಬರಲಿ ನಿನ್ನ ಹುಟ್ಟಿದಬ್ಬ

ಅಂದೇ ನಮಗೆಲ್ಲರಿಗೂ ಮಾಹಾ ಹಬ್ಬ


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529

14 October 2021

ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸುವಲ್ಲಿ ಪೋಷಕರ ಪಾತ್ರ.


 


ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸುವಲ್ಲಿ ಪೋಷಕರ ಪಾತ್ರ.

ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ಕೆಲ ಪ್ರಜೆಗಳೆನಿಸಿಕೊಂಡವರು ನಮ್ಮ  ಭಾರತದ ಧ್ವಜವನ್ನು ಕಾಲ್ಲಲಿ ಒಸಕಿ, ಬೆಂಕಿ ಹಂಚಿ ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡು ವಿಕೃತಿ ಮೆರೆದಿರುವರು. ಇನ್ನೂ ಕೆಲ ಕಿಡಿಗೇಡಿಗಳು ನಮ್ಮ ಭಾರತ ಮಾತೆಯ ಅವಮಾನಿಸುತಾ  ಪರದೇಶಗಳ ಹೊಗಳಿ ಬುದ್ದಿ ಜೀವಗಳೆನಿಸಿಕೊಂಡು ತಿರುಗುತ್ತಿದ್ದಾರೆ .ಇಂತಹ ನೀಚ ಕೃತ್ಯ ಕಂಡಾಗ ನಿಜವಾದ ದೇಶಭಕ್ತರ ಹೃದಯ ಕುದಿಯದೇ ಇರದು.

"ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ...."ಎಂಬಂತೆ ನಮ್ಮ ತಾಯ್ನಾಡು ನಮಗೆ ಸ್ವರ್ಗಕ್ಕೂ ಮಿಗಿಲು ಎಂಬುದನ್ನು ನಾವೆಲ್ಲರೂ ಒಪ್ಪಿಕೊಂಡರೂ ನಮ್ಮಲ್ಲಿ ದೇಶಭಕ್ತಿ ಕಡಿಮೆ ಎಂದರೆ ಕೆಲವರಿಗೆ ಬೇಸರವಾದರೂ ಅದೇ ಕಹಿ ಸತ್ಯ . ಇತ್ತೀಚಿನ ದಿನಗಳಲ್ಲಿ ಉಗ್ರರಿಗೆ ನಮ್ಮ ದೇಶದವರೇ ಆಶ್ರಯ ನೀಡಿ  ಸಹಕಾರ ನೀಡಿ ವರ್ಷಗಳ ಕಾಲ ಅವರಿಗೆ ಅನ್ನ ನೀಡಿದ ದೇಶದ್ರೋಹಿಗಳಿಗೆ ಏನು ಹೇಳೋಣ?.

ಮಾತೆತ್ತಿದರೆ ಸಂವಿಧಾನ, ಹಕ್ಕು ಮತ್ತು ಕರ್ತವ್ಯಗಳು ಸರ್ಕಾರದ ನೀತಿ ನಿಯಮಗಳ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವ ಬುದ್ದಿವಂತರು ದೇಶಭಕ್ತಿ ,ದೇಶದ ಬಗೆಗಿನ ವಿಚಾರಗಳಲ್ಲಿ ಜಾಣ ಮೌನ ವಹಿಸುತ್ತಾರೆ.

ನಮ್ಮ ರಾಷ್ಟ್ರ ಲಾಂಛನ , ರಾಷ್ಟ್ರಗೀತೆ, ರಾಷ್ಟ್ರೀಯ ಪರಂಪರೆಯ ಮತ್ತು ರಾಷ್ಟ್ರವನ್ನು ಗೌರವಿಸಬೇಕಾದ್ದು ನಮ್ಮ ಕರ್ತವ್ಯ ಎಂದು ಸಂವಿಧಾನದಲ್ಲಿ ಉಲ್ಲೇಖವಿದೆ .ಆದರೆ ಕೆಲವರಿಗೆ ಇದು ಕಾಣದು. ಬಲವಂತವಾಗಿ ಯಾರಲ್ಲೂ  ದೇಶಭಕ್ತಿ ಮೂಡಿಸಲು ಸಾಧ್ಯವಿಲ್ಲ. ಅದು ನಮ್ಮ ಅಂತರಗದಲ್ಲಿ ಬರಬೇಕು.ಇದಕ್ಕೆ ಸಮುದಾಯ, ಮನೆ ,ಪೋಷಕರ ಪಾತ್ರ ಮಹತ್ತರವಾದದ್ದು.

ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳಸಲು ಪೋಷಕರು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬಹುದು.ರಾಷ್ಟ್ರೀಯ ಹಬ್ಬಗಳಂದು ಮಕ್ಕಳ ಜೊತೆಗೆ ಪಾಲ್ಗೊಳ್ಳುವುದು. ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ದಿನಾಚರಣೆ ಎಂದರೆ ಶಾಲಾ ಮಕ್ಕಳು ಮತ್ತು ಶಿಕ್ಷಕರಿಗೆ ಮಾತ್ರ ಎಂಬ ಅಲಿಖಿತ ನಿಯಮ ಪಾಲಿಸುವರು. ಆ  ದಿನ ಒಂದು ದಿನ ರಜೆ ಸಿಕ್ಕಿತು ಎಂದು ಬಹುತೇಕ ಪೋಷಕರು ರಜೆಯ ಮಜಾ ಅನುಭವಿಸಲು ಯಾವುದೋ  ಪ್ರವಾಸ ಅಥವಾ ರೆಸಾರ್ಟ್ಸ್ ಗೆ ತೆರಳುವುದು ಸಾಮಾನ್ಯವಾಗಿದೆ.  ಅದರ ಬದಲಿಗೆ ಎಲ್ಲಾ ಪೋಷಕರು ಅಂದು ತಮ್ಮ ಮಕ್ಕಳ ಜೊತೆಯಲ್ಲಿ ಕನಿಷ್ಠ ಒಂದು ರಾಷ್ಟ್ರೀಯ ಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಆ   ಮೂಲಕ ಮಕ್ಕಳಿಗೆ ಅಪರೋಕ್ಷವಾಗಿ  ದೇಶಭಕ್ತಿಯ ಪಾಠ ಹೇಳಿದಂತಾಗುತ್ತದೆ.ಇದು ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಯಲು ಪೂರಕವಾಗುತ್ತದೆ.

ರಾಷ್ಟಗೀತೆ ಹಾಡುವಾಗ ಎದ್ದು ನಿಂತ ಗೌರವ ಸಲ್ಲಿಸುವುದು. ಸಾದ್ಯವಾದರೆ ಮಕ್ಕಳ ಜೊತೆ ಪೋಷಕರು ರಾಷ್ಟ್ರಗೀತೆ ಹಾಡಬೇಕು .ಕಡೆಯಲ್ಲಿ ಒಮ್ಮೆ ಭಾರತ ಮಾತೆಗೆ ಜೈಕಾರ ಹಾಕಬೇಕು ಈ ರೀತಿ ಯಲ್ಲಿ ನಾವು ಮಾಡಿದರೆ ಮಕ್ಕಳು ನಮ್ಮ ಅನುಕರಿಸುವರು ಈ ನಿಟ್ಟಿನಲ್ಲಿ ಚಲನಚಿತ್ರ ಮಂದಿರಗಳಲ್ಲಿ ರಾಷ್ಟ್ರಗೀತೆ ಮತ್ತು ಅದಕ್ಕೆ ಗೌರವ ಸೂಚಿಸುವ ಕಾರ್ಯಕ್ರಮ ಯಶಸ್ವಿಯಾದರೂ ಕೆಲ ಕಿಡಿಗೇಡಿಗಳ ವಿತಂಡವಾದದಿಂದ ಅರ್ಧಕ್ಕೆ ನಿಂತದ್ದು ಬೇಸರದ ಸಂಗತಿ.

ನಮ್ಮ ದೇಶದ ಸಾಂವಿಧಾನಿಕ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಬ್ರಾತೃತ್ವ, ಸಾಮಾಜಿಕ ನ್ಯಾಯ, ಮುಂತಾದ ಮೌಲ್ಯಗಳನ್ನು ಮಕ್ಕಳಿಗೆ ವಿವರಿಸಿ ನಮ್ಮ ದೇಶದ ಮಹತ್ವವನ್ನು ತಿಳಿಸಿ ನಮ್ಮ ದೇಶದ ಬಗ್ಗೆ ಹೆಮ್ಮೆ ಮೂಡಿಸಿ ರಾಷ್ಟ್ರೀಯತೆಯನ್ನು ಬೆಳೆಸಬಹುದು.

ನಮ್ಮ ಐತಿಹಾಸಿಕ, ಸಾಂಸ್ಕೃತಿಕ ,ಪ್ರಾಕೃತಿಕ  ಪರಂಪರೆಯನ್ನು ಮಕ್ಕಳಿಗೆ ವಿವರಿಸಿ ಪ್ರಪಂಚದ ಇತರೆ ದೇಶಗಳಲ್ಲಿ  ನಮ್ಮ ದೇಶದ ಬಗ್ಗೆ ಇರುವ ಸಕಾರಾತ್ಮಕ ಮತ್ತು ಗೌರವದ ಭಾವನೆಗಳನ್ನು ಉಲ್ಲೇಖಿಸಿ ನಮ್ಮ ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವ ಬೆಳೆಸಬೇಕು.

ಸುತ್ತಲೂ ಶತೃಗಳಿದ್ದರೂ ಮನೆಗೊಬ್ಬರು ಸೈನಿಕರಾಗಿ ದುಡಿದು ತಮ್ಮ ದೇಶದ ಬಗ್ಗೆ ಕೆಟ್ಟದಾಗಿ ಮಾತಾಡಿದರೂ ಅವರಿಗೆ ಪಾಠ ಕಲಿಸುವ ಇಸ್ರೇಲ್ ನ ಪ್ರಜೆಗಳಂತಹ  ದೇಶಭಕ್ತಿ ಮತ್ತು ರಾಷ್ಟ್ರೀಯತೆ ನಮ್ಮದಾಗಬೇಕು. ಯಾವುದೇ ಪಕ್ಷ ,ಸಿದ್ದಾಂತ, ಜಾತಿ, ಮತ, ಪಂಥಗಳು ನಮ್ಮ ರಾಷ್ಟ್ರೀಯತೆ ಮತ್ತು ದೇಶಾಭಿಮಾನಕ್ಕೆ ಅಡ್ಡಿಯಾಗಲೇಬಾರದು. ಇಲ್ಲವಾದರೆ ಮತ್ತೊಮ್ಮೆ ನಾವು  ದಾಸ್ಯದ ಸಂಕೋಲೆಗೆ ಸಿಲುಕಿ ನಮ್ಮ ರಾಷ್ಟ್ರೀಯತೆ ಮತ್ತು ಅಸ್ತಿತ್ವಕ್ಕೆ ಪರದಾಡಬೇಕಾದೀತು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529

13 October 2021

ನೀ ಬಂದು ಮುತ್ತನಿಡು. ಕವನ


 

ನೀ ಬಂದು ಮುತ್ತನಿಡು.

ಬೇಸರಿನ ಸಂಜೆಯಿದು
ಬೇಕೆನೆಗೆ ನಿನ್ನ ಜೊತೆ
ನೇಸರನು ನಡೆದನು
ಕೇಳೀಗ ನನ್ನ ಕಥೆ .

ತಂಗಾಳಿಯಿದ್ದರೂ ಕೂಡಾ
ಮೈಯಲ್ಲ ಏತಕೊ ಬಿಸಿ
ನೀ ಬಂದು ಮುತ್ತನಿಡು
ಖಾಯಿಲೆಯಾಗುವುದು ವಾಸಿ .

ದಿನಕರನು ತೆರೆಮರೆಗೆ ಸರಿದ
ಕತ್ತಲಾಗುತಿದೆ ಮನಕೆ
ಉಷೆಯಂತೆ ಬಂದು ಬಿಡು
ಬೆಳಕು ತೋರಲು  ಪ್ರೇಮಕೆ .

ಸಿಹಿಜೀವಿ
ಸಿ ಜಿ ವೆಂಕಟೇಶ್ವರ


ದುರ್ಗಾದೇವಿಗೆ ನಮನ.ದುರ್ಗಾಷ್ಠಮಿಯ ಶುಭಾಷಯಗಳು.DURGASHTAMI


 *ದುರ್ಗಾ ದೇವಿಗೆ ನಮನ*


ದುರ್ಗಾಷ್ಠಾಮಿಯ ಶುಭಾಶಯಗಳೊಂದಿಗೆ 



ದುರ್ಗಾ ದೇವಿಯೆ ನಿನಗೆ

ನನ್ನ ನಮನ

ದಯಮಾಡಿ ನೀಡು

ನಮ್ಮೆಡೆಗೆ ಗಮನ.


ಮನದಲೇನೋ ಬೇಗೆ

ನಿಂತಲ್ಲೆ ತಲ್ಲಣ

ದುಷ್ಷರ ಹಿಂಸೆ, ದುರ್ಗುಣಕೆ

ತಳಮಳಿಸಿದೆ ಜನಗಣ.


ರಕ್ಕಸರ ತರಿದವಳೆ 

ಶಿಷ್ಟರ ರಕ್ಷಿಪಳೆ

ತರಿದು ಬಿಡು ಖೂಳರ

ಸ್ವಚ್ಚವಾಗಲಿ ಇಳೆ .


ಅಜ್ಞಾನಿಗಳಲಿ ಜ್ಞಾನ 

ಬೀಜವ ಬಿತ್ತಿ ಬಿಡು

ಜಗವಾಗಲಿ ಸುಖ

ಶಾಂತಿಯ ಬೀಡು.


ಸಿಹಿಜೀವಿ 

ಸಿ ಜಿ ವೆಂಕಟೇಶ್ವರ 

ತುಮಕೂರು

9900925529


ಸಿಂಹ ಧ್ವನಿ ೧೩/೧೦/೨೧


 

12 October 2021

ಕಪ್ಪು ಬಿಳುಪಿನ ಪಟದ ಬಣ್ಣದ ನೆನಪುಗಳು . ಬಾಲ್ಯದ ನೆನಪಿನ ಮೆರವಣಿಗೆ.


 


*ಕಪ್ಪು ಬಿಳುಪಿನ ಪಟದ ಬಣ್ಣದ ೆನೆಪುಗಳು*

ಅದು 1984 ರ ವರ್ಷ ನಾನಾಗ ನನ್ನೂರು  ಚೌಡಗೊಂಡನಹಳ್ಳಿಯಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ.ಏಕೋಪಾದ್ಯಾಯ ಶಾಲೆಗೆ ತಿಪ್ಪೇಶಪ್ಪ ಎಂಬ ಶಿಕ್ಷಕರು ನಮಗೆ ಬೋಧಿಸುತ್ತಿದ್ದರು. ಒಂದರಿಂದ ನಾಲ್ಕು ತರಗತಿಗಳನ್ನು ಅವರು ನಿಭಾಯಿಸುತ್ತಾ ನಮಗೆ ಪಾಠ ಮಾಡುತ್ತಿದ್ದ ಕೌಶಲ್ಯ ನೆನದು ಈಗಲೂ ನನಗೆ ಅವರ ಬಗ್ಗೆ ಹೆಮ್ಮೆ ಅನಿಸುತ್ತದೆ. ಕಾರಣ ಪ್ರಸ್ತುತ ಶಿಕ್ಷಕನಾದ ನಾನು ಕೇವಲ ಒಂದು ವಿಭಾಗಕ್ಕೆ  ಸೀಮಿತವಾದ ಮಕ್ಕಳಿಗೆ ಬೋಧಿಸುವ ವೇಳೆ ಹಲವಾಯ ಸವಾಲುಗಳು ಎದುರಾಗುತ್ತವೆ, ಅಂತದ್ದರಲ್ಲಿ ಅಂದು ನಾಲ್ಕು ತರಗತಿಯ ಮಕ್ಕಳನ್ನು ಅವರು ನಿಭಾಯಿಸುತ್ತಿದ್ದರು ಜೊತೆಗೆ ಈಗಿನಂತೆ ಆಗ ವಿಷಯವಾರು ಶಿಕ್ಷಕರು ಇರಲಿಲ್ಲ ,ಕನ್ನಡ , ಗಣಿತ, ಸಮಾಜ ಪರಿಚಯ, ವಿಜ್ಞಾನ ಹೀಗೆ ಎಲ್ಲಾ ವಿಷಯಗಳನ್ನು ಅವರೇ ನಮಗೆ ಕಲಿಸುತ್ತಿದ್ದರು ಅವರ ಜ್ಞಾನ ಮತ್ತು ಚಾಕಚಕ್ಯತೆಯನ್ನು ಮೆಚ್ಚಲೇ ಬೇಕು.

ಪಾಠವನ್ನು ಬಹಳ ಸೊಗಸಾಗಿ ಮಾಡುತ್ತಿದ್ದ ಜೊತೆಗೆ ನಮಗೆ ಕ್ರೀಡೆ, ಹೊರಸಂಚಾರ, ಪ್ರವಾಸ ಹೀಗೆ ನಮ್ಮ ನ್ನು ಸದಾ ಸಂತೋಷಪಡಿಸುತ್ತಾ ನಮಗರಿವಿಲ್ಲದೇ ಜ್ಞಾನದ ಊಟ ಬಡಿಸುತ್ತಿದ್ದರು.
ವಾರಕ್ಕೊಮ್ಮೆ ಎಂಬಂತೆ, ಕೆರೆಯಾಗಲ ಹಳ್ಳಿಯ ಕೆರೆ, ಹೊರಕೆರೆದೇವರಪುರದ ಕಲ್ಯಾಣಿ, ದೇವಸ್ಥಾನ ಹೀಗೆ ಹೊರಸಂಚಾರ ಮಾಡಿಸಿ ನಮಗರಿವಿಲ್ಲದ ಹೊಸ ಜಗತ್ತಿನ ದರ್ಶನ ಮಾಡಿಸಿದ್ದರು ನಮ್ಮ ಮೇಷ್ಟ್ರು.
ಮುಂದಿನ ವಾರ ದುರ್ಗ ಕ್ಕೆ ಟೂರ್  ಕರೆದುಕೊಂಡು ಹೋಗುತ್ತೇನೆ ಬರುವವರು ಹತ್ತು ರೂಪಾಯಿಗಳನ್ನು ನಿಮ್ಮ ಮನೆಯಲ್ಲಿ ಕೇಳಿ ತಂದು ಕೊಡಿ ಎಂದಿದ್ದರು. ನಾನು ನನ್ನ ಅಮ್ಮನ ಬಳಿ ವಿಷಯ ಹೇಳಿದೆ ಅಮ್ಮ ಸೀರೆ ಸೆರಗಿನ ಕೊನೆಯ ಗಂಟು ಬಿಚ್ಚಿ ಹತ್ತು ರೂಗಳ ನೋಟು ಕೊಟ್ಟರು. ಅರ್ಧ ಗಂಟೆಯ ಹಿಂದೆ    ಗೌಡರ ಮನೆಗೆ ಹೋಗಿ ಒಂದು ದಿನ ಕೂಲಿ ಮಾಡಿದ ದುಡ್ಡು ಇಸ್ಕಂಬರಬೇಕು ಎಂದು ಅಮ್ಮ ಅಂದದ್ದು ನಂತರ ನನಗೆ ನೆನಪಾಯಿತು.

ದುರ್ಗಕ್ಕೆ ಟೂರ್ ಹೋಗುವ ಹಿಂದಿನ ದಿನ ಬಹುಶಃ ನನ್ನಮ್ಮ ನಿದ್ದೆ ಮಾಡಿರಲಿಲ್ಲ ಎನಿಸುತ್ತದೆ. ಎರಡು ಗಂಟೆಗೇ ಎದ್ದು ಮೊಸರನ್ನದ ಬುತ್ತಿ ಕಟ್ಟಿದ್ದರು , ಅದನ್ನು ಸ್ಟೀಲ್ ಟಿಪನ್ ಕ್ಯಾರಿಯರ್ ಗೆ ಹಾಕಿ ರಡಿ ಮಾಡಿದ್ದರು. ನಾಲ್ಕು ಗಂಟೆಗೆ ನನ್ನ ಎಬ್ಬಿಸಿ ಬಿಸಿ ನೀರಿನ ಸ್ನಾನ ಮಾಡಿಸಿ ಬಟ್ಟೆಗಳನ್ನು ಹಾಕಿ ಕ್ರಾಪು ತೆಗೆದು , ಕಣ್ಣಾಸರ ತೆಗೆದು ನೆಟಿಗೆ ಮುರಿದು , "ಹುಸಾರು ಕಣಪ್ಪ ,ದುರ್ಗ ದೊಡ್ಡ ಪೇಟೆ ಮೇಷ್ಟ್ರು ನ  ಬಿಟ್ಟು ಎಲ್ಲೂ ಹೋಗಬ್ಯಾಡಾ , ತಗಾ ಇದನ್ನ ಖರ್ಚಿಗೆ ಇಕ್ಯಾ"
ಎಂದು ಮನೆಯ ಜೀರಿಗೆ ಡಬ್ಬಿಯಿಂದ ತೆಗೆದು ಒಂದು ರೂಪಾಯಿ ಕೊಟ್ಟರು.

ನಮ್ಮೂರಿನಿಂದ ನೇರವಾಗಿ ದುರ್ಗ ಕ್ಕೆ ಹೋಗಲು ಬಸ್ ಸೌಲಭ್ಯವಿರಲಿಲ್ಲ ಈಗಲೂ ಇಲ್ಲ ಅದು ಬೇರೆ ಮಾತು.
ಬೆಳಗಿನ ಜಾವದ ಐದೂವರೆಗೆ ನಮ್ಮ ಸ್ನೇಹಿತರು ಅವರ ಪೋಷಕರು  ಮೇಷ್ಟ್ರು ನಡೆದುಕೊಂಡು ಉಪ್ಪರಿಗೇನಹಳ್ಳಿಗೆ ಹೋದೆವು ಅಲ್ಲಿ ಖಂಡೇನಹಳ್ಳಿ ತಿಪ್ಪೇಸ್ವಾಮಿ ಬಸ್ ಹತ್ತಿ ಅಮ್ಮನಿಗೆ ಟಾಟಾ ಮಾಡಿದೆ. ಬಸ್  ಪಶ್ಚಿಮಾಭಿಮುಖವಾಗಿ ಚಲಿಸಿತು. ಗೆಳೆಯರ ಜೊತೆಯಲ್ಲಿ ಬಸ್ ಪಯಣದ ಅನಂದ ಅನುಭವಿಸುತ್ತಾ ನಂದನ ಹೊಸೂರು, ಹೊರಕೆರೆದೇವರಪುರ, ಮತಿಘಟ್ಟ, ಈಚಘಟ್ಟ, ಚಿತ್ರ ಹಳ್ಳಿ, ಹೀಗೆ ಪ್ರತಿ ಊರಿಗೆ ಬಸ್ ಬಂದಾಗ ಆ ಊರಿನ ಬೋರ್ಡ್ ಜೋರಾಗಿ ಎಲ್ಲಾ ಗೆಳೆಯರು ಸೇರಿ ಓದುತ್ತಿದ್ದೆವು ಅದನ್ನು ನೋಡುತ್ತಾ ನಮ್ಮ ಮೇಷ್ಟ್ರು ಒಳಗೊಳಗೆ ಖುಷಿ ಪಟ್ಟರು .ಯಾರೋ ಸಹಪ್ರಯಾಣಿಕರು "ಸೆನಾಗಿ ಬೋರ್ಡ್ ಒದ್ತೀರಾ ಕಣ್ರಾ ಹುಡುಗ್ರಾ,ಯಾರೋ ಮೇಷ್ಟ್ರು ಸೆನಾಗಿ ಹೇಳ್ಕೊಟ್ಟದಾರೆ" ಎಂದಾಗ ನಮಗೂ ಖುಷಿಯಾಯಿತು.

ದುರ್ಗ ಯಾರ್ ಇಳೀರಿ ಎಂದರು ಕಂಡಕ್ಟರ್ ,ಆಗಲೇ ನನಗೆ ಅರ್ಥವಾಗಿದ್ದು ನಾನು ಮೊದಲ ಬಾರಿಗೆ ದುರ್ಗ ತಲುಪಿದೆ ಎಂದು.
ಮೊದಲ ಬಾರಿಗೆ ಚಿತ್ರದುರ್ಗದ ದೊಡ್ಡ ಕಟ್ಟಡಗಳನ್ನು ನೋಡುತ್ತಾ ನಡೆದುಕೊಂಡು ರಂಗಯ್ಯನ ಬಾಗಿಲ ದಾಟಿ ದುರ್ಗದ ಕೋಟೆ ನೋಡಲು ಹೊರಟೆವು . ಮದ್ದು ಅರೆಯುವ ಕಲ್ಲುಗಳು, ಏಕನಾಥೇಶ್ವರಿ ದೇವಾಲಯ, ಮದ್ದಿನ ಮನೆ , ಅಕ್ಕತಂಗೇರ ಹೊಂಡ, ಓಬವ್ವನ ಕಿಂಡಿ ,ಹೀಗೆ ದುರ್ಗದ ಕೋಟೆಯ ಸ್ಥಳಗಳನ್ನು ಬೆರಗಿನಿಂದ ನೋಡಿದೆವು ಆ ಸ್ಥಳಗಳ ಬಗ್ಗೆ ಕೋಟೆಯ ಬಗ್ಗೆ ನಮ್ಮ ಮೇಷ್ಟ್ರು ನೀಡಿದ ವಿವರಣೆ ದುರ್ಗದ ಬಗ್ಗೆ ಹೆಮ್ಮೆ ಮೂಡಿಸಿತು.
"ಅಗೋ ನೋಡ್ರಿ ಅದು ಕುದುರೆ ಹೆಜ್ಜೆ ಅಲ್ಲಿಗೆ ನೀವು ಹತ್ತಾಕೆ ಆಗಲ್ಲ ದೊಡ್ಡಾರಾದ ಮೇಲೆ ಹತ್ತುವಿರಂತೆ ಬನ್ನಿ ಈಗ ಕೆಳಗೆ ಹೋಗೋಣ " ಅಂದ್ರು ನಮ್ಮ ಮೇಷ್ಟ್ರು.

ಏಳು ಸುತ್ತಿನ ಕೋಟೆ ಇಳಿದು
ಚಂದವಳ್ಳಿಯ ಕೆರೆಗೆ ಹೋದೆವು ಅಲ್ಲಿ ಗುಹೆಗಳನ್ನು ಹೊರಗಿನಿಂದಲೇ ನೋಡಿದೆವು ಆ ವೇಳೆಗಾಗಲೆ ನಮ್ಮ ಹೊಟ್ಟೆಗಳು ತಾಳ ಹಾಕುತ್ತಿದ್ದವು ಇದನ್ನು ಅರಿತ ನಮ್ಮ ಮೇಷ್ಟ್ರು "ಮಕ್ಕಳ .. ನಿಮ್ ಬುತ್ತಿ ಬಿಚ್ಚಿ ತಿನ್ರಿ, ಇಲ್ಲೇ ಕುಡಿಯಾಕೂ ನೀರಿದೆ" ಅಂದರು ಎಲ್ಲರ ಬುತ್ತಿ ಬಿಚ್ಚಿ, ಎಲ್ಲರ ತರ ತರದ ತಿಂಡಿಗಳನ್ನು ಹಂಚಿಕೊಂಡು ತಿಂದೆವು . ಅಲ್ಲೇ ಇರುವ ಪಾರ್ಕ್ ನಲ್ಲಿ ಸ್ವಲ್ಪ ಹೊತ್ತು ಆಟ ಆಡಿದೆವು.

ನಂತರ ನಡೆದುಕೊಂಡು ಗಾಯತ್ರಿ ಹೋಟೆಲ್, ದಾಟಿ ನೀಲಕಂಠೇಶ್ವರ ದೇವಾಲಯದಲ್ಲಿ ಕೈಮುಗಿದು ಮುಂದೆ ಸಾಗಿದೆವು .ನಮ್ಮ ಮೇಷ್ಟ್ರು ಒಂದು ದೊಡ್ಡ ಕಟ್ಟಡದ ಮುಂದೆ ನಿಲ್ಲಲು ಹೇಳಿದರು .ಆ ಕಟ್ಟಡದ ಮೇಲೆ ಪ್ರಭಾತ್ ಸ್ಟುಡಿಯೋ ಎಂಬ ಬೋರ್ಡ್ ಇತ್ತು , ಎಲ್ಲರೂ ಒಳಗೆ ನಡೆಯಿರಿ ಎಂದರು ,ಒಳಗೆ ಹೋದಾಗ ಪೋಟೊಗ್ರಾಪರ್ ನಮ್ಮನ್ನು ಸಾಲಾಗಿ ಕುಳ್ಳಿರಿಸಿ ಪೋಟೋ ತೆಗೆದರು.
ಪೋಟೋ ಸ್ಟುಡಿಯೋ ದಿಂದ ಹೊರಬಂದಾಗ ಸಂಜೆಯಾಗುತ್ತಿದ್ದದು ನಮ್ಮ ಗಮನಕ್ಕೆ ಬಂದಿತು , ಬಸ್ ಸ್ಟ್ಯಾಂಡ್ ಗೆ ಬಂದು  ರಾಜ್ ನೀನ್ ಬಸ್ ಹತ್ತಿ ಕುಳಿತೆವು .ಓಡಾಡಿ ಸುಸ್ತಾದ ನಾವು ಬಸ್ ನಲ್ಲಿ ತೂಕಡಿಸಲು ಶುರುಮಾಡಿದೆವು ಕೆಲವರು ನಿದ್ರೆಯನ್ನು ಮಾಡಿದರು .ನಮ್ಮ ಬಸ್ ಉಪ್ಪರಿಗೇನಹಳ್ಳಿ ತಲುಪಿದಾಗ ಕತ್ತಲಾಗಿತ್ತು .ಅಮ್ಮ ಬಸ್ಟಾಂಡ್ ನಲ್ಲಿ ನನಗಾಗಿ ಕಾದಿದ್ದರು. ನನ್ನ ಮಗ ಟೂರ್ ಹೋಗಿ ಬಂದ ಎಂಬ ಸಂತಸ ಅಮ್ಮನ ಮೊಗದಲ್ಲಿ ಇತ್ತು ಅದೇ ಆನಂದ ನನ್ನಲ್ಲೂ ಇತ್ತು.

ಒಂದು ವಾರದ ಬಳಿಕ ನಮ್ಮ ಮೇಷ್ಟ್ರು ನಮಗೆ ಒಂದೊಂದು ರಟ್ಟಿನ ಗ್ರೂಪ್ ಪೋಟೋ ಕೊಟ್ಟರು. ಅದರಲ್ಲಿ ನಮ್ಮನ್ನು ನಾವು ನೋಡಿ ಹಿರಿಹಿರಿ ಹಿಗ್ಗಿದೆವು .ನಾನಂತೂ ಯಾವಾಗಲೂ ಅದೇ ಪೋಟೋ ನೋಡುತ್ತಾ ಕೂರುತ್ತಿದ್ದೆ , ಏಕೆಂದರೆ ಅದು ನನ್ನ ಜೀವನದ ಮೊದಲ ಪಟ!

ನಲವತ್ತಾರು ವರ್ಷಗಳಲ್ಲಿ ಹೊರದೇಶ ನೇಪಾಳ ಸೇರಿದಂತೆ ನೂರಾರು ಸ್ಥಳಗಳಲ್ಲಿ ಪ್ರವಾಸ ಮಾಡಿರುವೆ ಆದರೆ ನನ್ನ ಮೊದಲ ದುರ್ಗದ ಪ್ರವಾಸವೇ ನನಗೆ ವಿಶೇಷವಾದ ಮತ್ತು ಹೆಚ್ಚು ಖುಷಿ ನೀಡಿದ ಪಯಣ ಎಂಬುದಂತೂ ಸತ್ಯ.
ವಿವಿಧ ಲೆನ್ಸ್ ಕ್ಯಾಮೆರಾಗಳಲ್ಲಿ  ,ಹೊಸ ಮಾದರಿಯ ಹೆಚ್ಚು ಮೆಗಾಪಿಕ್ಸಲ್ ಮೊಬೈಲ್ ಕ್ಯಾಮೆರಾಗಳಲ್ಲಿ ಸಾವಿರಾರು ಪೋಟೋ ತೆಗೆದುಕೊಂಡಿರುವೆ. ನಮ್ಮದೇ ಪೋಟೋಗಳು ಹೇಗಿದ್ದರೂ ನಮಗೆ ಚೆಂದ ಆದರೆ  ಮೊದಲ ಬಾರಿಗೆ ಪ್ರಭಾತ್ ಸ್ಟುಡಿಯೋದಲ್ಲಿ ಅಂದು  ತೆಗೆದ ಕಪ್ಪು ಬಿಳುಪಿನ ನನ್ನ ಜೀವನದ ಮೊದಲ ಪಟ ಅತ್ಯಂತ ಸುಂದರ ಪಟ. ಆ ಪಟದಲ್ಲಿ ನನ್ನ ಬಾಲ್ಯದ ನೂರಾರು ಬಣ್ಣದ ನೆನಪುಗಳಿವೆ.

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
990092529

ಜನಮಿಡಿತ ೧೨/೧೦/೨೧


 

ಸಿಂಹ ಧ್ವನಿ ೧೨/೨೦/೨೧

 


11 October 2021

ಮಕ್ಕಳೇಕೆ ಮನೆ ಬಿಟ್ಟು ಹೋದರು?


 


ಮಕ್ಕಳೇಕೆ ಮನೆ ಬಿಟ್ಟು ಹೋದರು?


ಒಂದೇ ದಿನ ಮನೆ ಬಿಟ್ಟು ಹೋದ 7 ವಿಧ್ಯಾರ್ಥಿಗಳು,ಮೊಬೈಲ್ ನೋಡುವುದು ಬಿಟ್ಟು ಓದು ಎಂದಿದ್ದಕ್ಕಾಗಿ ಮಗನ ಆತ್ಮಹತ್ಯೆ , ಶಾಲೆಗಳಲ್ಲಿ ಮಕ್ಕಳ ಅತಿರೇಕದ ವರ್ತನೆಗಳ ಕಂಡು ಶಿಕ್ಷಕರು ಕಂಗಾಲು ,ಖಿನ್ನತೆಗೆ ಜಾರುತ್ತಿರುವ ಮಕ್ಕಳು. ಇಂತಹ  ಹಲವಾರು ಸುದ್ದಿಗಳನ್ನು ಮಾಧ್ಯಮದಲ್ಲಿ ನೋಡಿದಾಗ ಮನಸಿಗೆ ಬಹಳ ನೋವಾಗುತ್ತದೆ. ಈ ಸಮಸ್ಯೆಗಳಿಗೆ ಮೂಲ ಹುಡುಕುತ್ತಾ ಹೊರಟರೆ ಮೊದಲ ಬೆರಳು ಮಹಾಮಾರಿ ಕರೋನ ಕಡೆಗೆ ತೋರಿಸಿದರೆ ಉಳಿದ ಬೆರಳುಗಳು ಶಿಕ್ಷಣ ವ್ಯವಸ್ಥೆ, ಪೋಷಕರು, ಸಮುದಾಯದ ಕಡೆಗೆ ತೋರಿಸುತ್ತವೆ ಎಂಬ ಕಟು ಸತ್ಯ ಒಪ್ಪಿಕೊಳ್ಳಲೇಬೇಕಿದೆ.


ಇತ್ತೀಚಿಗೆ ವರದಿಯಾದ ಪ್ರಕರಣದಲ್ಲಿ  ಮಕ್ಕಳು ಪತ್ರ ಬರೆದಿಟ್ಟು 

"ಓದುವಂತೆ ಒತ್ತಡ ಹೇರುತ್ತಿದ್ದೀರಿ, ಆದರೆ ನಮಗೆ ಆಸಕ್ತಿ ಇಲ್ಲ ಆದ್ದರಿಂದ ಮನೆ ಬಿಟ್ಟು ಹೋಗುತ್ತಿದ್ದೇವೆ"  ಎಂದು ನಾಪತ್ತೆಯಾಗಿದ್ದಾರೆ.

ಪತ್ರದಲ್ಲಿ ಮುಂದುವರೆದು  ಆ ಬಾಲಕರು "ನೀವು ಓದುವಂತೆ ಒತ್ತಾಯ ಮಾಡಿದರೂ ನಮಗೆ ಓದಿನಲ್ಲಿ ಆಸಕ್ತಿ ಇಲ್ಲ. ಕ್ರೀಡೆಯಲ್ಲೇ ಹೊಸ ಜೀವನ ರೂಪಿಸಿಕೊಳ್ಳುತ್ತೇವೆ, ಕ್ರೀಡೆ ಎಂದರೆ ಕಬಡ್ಡಿ ತುಂಬ ಇಷ್ಟ, ಅದರಲ್ಲೇ ಉತ್ತಮ ಹೆಸರು, ವೃತ್ತಿ ಹಾಗೂ ಹಣ ಸಂಪಾದಿಸುತ್ತೇವೆ. ಕ್ರೀಡೆಯಲ್ಲೇ ಉತ್ತಮ ಸಾಧನೆ ಮಾಡಿ ಮತ್ತೆ ವಾಪಸ್ ಬರುತ್ತೇವೆ." ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .


ಈ ಘಟನೆ ಗಮನಿಸಿದಾಗ  ಮಕ್ಕಳು ಓದಲಿ ಎಂದು ಪೋಷಕರು ಅಪೇಕ್ಷೆ ಪಡಯವುದೇ ತಪ್ಪೇ? ಪೋಷಕರಿಗೆ ಅಷ್ಟೂ ಹಕ್ಕಿಲ್ಲವೇ? ಎಂದು ಸಾಮಾನ್ಯವಾಗಿ ಕೇಳುತ್ತೇವೆ .ಓದು ಎಂಬುದು ತಪ್ಪಲ್ಲ ಆದರೆ ಇದನ್ನೇ ಓದು, ಇಷ್ಟೇ ಓದು, ಇದೇ ಕೋರ್ಸ್ ಓದು, ಡಾಕ್ಟರ್ ಆಗಲೇಬೇಕು, 99% ಸ್ಕೋರ್ ಮಾಡಲೇ ಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಿದರೆ ಮಕ್ಕಳೇನು ಮೆಷಿನ್ನಾ? ಅಥವಾ ರೋಬಾಟಾ? ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂದು ಮಾದ್ಯಮಗಳು ಕ್ರೀಡಾಕ್ಷೇತ್ರದ ಸಾಧಕರ ಸಾಧನೆ ತೋರಿಸುವುದೇ ತಪ್ಪ? ತಪ್ಪಲ್ಲ ಆದರೆ ಕ್ರೀಡಾ ಕ್ಷೇತ್ರ, ಸಿನಿಮಾ ರಂಗದಲ್ಲಿ ಮಾತ್ರ ದುಡ್ಡು ಮಾಡಬಹುದು , ಅವರು ಮಾತ್ರ ಅತಿಮಾನುಷರು ಎಂದು 24/7 ಅವರ ಬಗ್ಗೆಯೇ ಅವರು ಕುಂತರೂ ,ನಿಂತರೂ ಸೀನಿದರೂ ಇನ್ನೊಂದು ಮಾಡಿದರೂ ತಿರುಗಿಸಿ ತಿರುಗಿಸಿ ತೋರಿಸಿದರೆ ಮಕ್ಕಳಿಗೆ ಆ ಕ್ಷೇತ್ರ ಮಾತ್ರ ಶ್ರೇಷ್ಠ ಎಂದು ಮಕ್ಕಳು ತೀರ್ಮಾನಕ್ಕೆ  ಬರುವುದು ಸಹಜ. ಮಾದ್ಯಮಗಳೂ ಕೇವಲ ಟಿ ಆರ್ ಪಿ ಅಥವಾ ಹಣಕ್ಕಾಗಿ ಕೆಲಸ ಮಾಡದೆ ಸ್ವಲ್ಪ ಮಟ್ಟಿನ ಸಾಮಾಜಿಕ ಬದ್ಧತೆಯನ್ನು ತೋರ್ಪಡಿಸಬೇಕಿದೆ.

ಯಾವುದೂ ಅತಿಯಾಗಬಾರದು . ಮಕ್ಕಳ ಇಷ್ಟ ಕಷ್ಟಗಳ ಕಡೆ ಪೋಷಕರು , ಶಿಕ್ಷಕರು ಸಮುದಾಯಗಳು ಸಹ ಸೂಕ್ಷ್ಮವಾಗಿ ಸ್ಪಂದಿಸಬೇಕಿದೆ.


 ಕೊರೋನಾಸಾಂಕ್ರಾಮಿಕದಿಂದ ಬರೋಬ್ಬರಿ19ತಿಂಗಳಿನಿಂದ ಜಗತ್ತಿನಾದ್ಯಂತ ಶಾಲಾ-ಕಾಲೇಜುಗಳು ಮುಚ್ಚಿದ್ದು ಸದ್ಯ ಈ ಪೈಕಿ ಅರ್ಧ ಶಾಲೆಗಳು ಮಾತ್ರ ಭೌತಿಕ ತರಗತಿಗಳನ್ನು ಆರಂಭಿಸಿವೆ. ಶೇ.34ರಷ್ಟು ಶಾಲೆಗಳು ಭೌತಿಕ ಮತ್ತು ಆನ್ಲೈನ್ ಎರಡೂ ತರಗತಿಗಳನ್ನು ಮುಂದುವರೆಸಿವೆಎಂದುಕೊವಿಡ್-19 ಗ್ಲೋಬಲ್ ಎಜುಕೇಶನ್ ರಿಕವರಿ ಟ್ರಾಕರ್ ತಿಳಿಸಿದೆ.


ಜಾನ್ಸ್ ಹಾಪ್ಟಿನ್ ವಿ.ವಿ, ವಿಶ್ವಬ್ಯಾಂಕ್ ಮತ್ತು ಯುನಿಸೆಫ್ ಜಂಟಿಯಾಗಿ 200ಕ್ಕೂ ಹೆಚ್ಚು ದೇಶಗಳಲ್ಲಿ ಶಾಲೆಗಳನ್ನು ತೆರೆ ಯಲು ರೂಪಿಸಿದ ಯೋಜನೆಯನ್ನು ಆಧರಿಸಿ ಈ ಅಧ್ಯಯನ ವರದಿ ಸಿದ್ಧಪಡಿಸಿವೆ. ವರದಿಯ ಪ್ರಕಾರ ಶೇ.80ರಷ್ಟು ಶಾಲೆಗಳು ನಿರಂತರ ತರಗತಿಗಳನ್ನು ಆರಂಭಿಸಿವೆ. ಈ ಪೈಕಿ ಶೇ.54ರಷ್ಟು ಶಾಲೆಗಳು ಭೌತಿಕ ತರಗತಿಗಳನ್ನು ಆರಂಭಿಸಿವೆ, ಶೇ.34ರಷ್ಟು ಶಾಲೆಗಳು ಭೌತಿಕ, ಆನ್ ಲೈನ್ ಎರಡೂ ರೀತಿಯ ತರಗತಿ ನಡೆಸುತ್ತಿವೆ. ಉಳಿದ ಶೇ.10ರಷ್ಟು ಶಾಲೆಗಳು  ಆನ್ಲೈನ್ ತರಗತಿಯನ್ನೇ ಮುಂದುವರೆಸಿವೆ. ಆನ್ಲೈನ್ ತರಗತಿಗಳು ಎಷ್ಟು ಪರಿಣಾಮಕಾರಿ? ಎಂಬುದು ಹಲವಾರು ಸಮೀಕ್ಷೆಗಳಿಂದ ಬಹಿರಂಗವಾಗಿದೆ.


ಮಕ್ಕಳ ಅನುಚಿತ ವರ್ತನೆ , ವ್ಯಸನಗಳಿಗೆ ಬಲಿಯಾಗುವುದು , ಪೋಷಕರು ಮತ್ತು ಶಿಕ್ಷಕರ ಜೊತೆಯಲ್ಲಿ ಸಂಘರ್ಷ ಏರ್ಪಡಲು,  ಶಾಲೆಗಳಿಂದ ಮಕ್ಕಳು ಬಹುಕಾಲ ದೂರು ಉಳಿಯುವಂತೆ ಮಾಡಿದ್ದು ಕರೋನಾ ಎಂದು ಒಪ್ಪಿದರೂ   ಇದರ ಜೊತೆಗೆ ಪೋಷಕರ ಅನವಶ್ಯಕ ಒತ್ತಡ  ಸಹ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ .


ಇಂತಹ ಸೂಕ್ಷ್ಮ ಕಾಲದಲ್ಲಿ ನಮ್ಮ ಮಕ್ಕಳನ್ನು ಸರಿದಾರಿಗೆ ತರಲು ಮನಶ್ಶಾಸ್ತ್ರಜ್ಞರು, ಶಿಕ್ಷಕರು, ಪೋಷಕರು ಸಮುದಾಯ ಶಿಕ್ಷಣ ಇಲಾಖೆ ಎಲ್ಲರೂ ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

10 October 2021

ಕೂಶ್ಮಾಂಡಾದೇವಿ.


 *ಕೂಶ್ಮಾಂಡಾ ದೇವಿಗೆ ನಮನ*


ನವರಾತ್ರಿಯ ನಾಲ್ಕನೇ ದಿನದಿ

ಕೂಶ್ಮಾಂಡಾ ದೇವಿಯ ಭಜಿಸೋಣ

ಆದಿ ಶಕ್ತಿಯ ಕರುಣೆಯ ಪಡೆದು

ನೆಮ್ಮದಿಯ ಜೀವನ ಪಡೆಯೋಣ.


ಸಕಲ ಸೃಷ್ಟಿಯ ಮೂಲರೂಪಿಣಿ

ಆದಿಮಾತೆಗೆ ನಮಿಸೋಣ

ಸಂತಾನ ದೇವತೆ, ಆರೋಗ್ಯದಾತೆಗೆ

ಕೈಮುಗಿದು ವರಗಳ ಬೇಡೋಣ.


ಅನಂತ ಗರ್ಭದ ಬ್ರಹ್ಮಾಂಡ ಸೃಷ್ಟಿಯ

ಅಮ್ಮನ ನಾಮವ ಸ್ಮರಿಸೋಣ 

ತಾರಕಾಸುರರ ಸಂಹಾರ ಮಾಡಿಸಿದ

ಶಾಂತಿದೂತಳಿಗೆ ಶಿರಬಾಗೋಣ.


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

ತುಮಕೂರು

9900925529

ಮಕ್ಕಳ ಮತ್ತು ಯುವಕರ ದುಶ್ಚಟಗಳಿಗೆ ಮದ್ದನ್ನು ಅರೆಯೋಣ.


 

ಮಕ್ಕಳು ಮತ್ತು ಯುವಕರನ್ನು ದುಶ್ಚಟಗಳಿಂದ ದೂರ ಮಾಡೋಣ

ನಾನು ಐದು ವರ್ಷಗಳ ಹಿಂದೆ ಗೌರಿಬಿದನೂರಿನಲ್ಲಿ  ಶಿಕ್ಷಕನಾಗಿ ಕಾರ್ಯ ನಿರ್ವಹಿಸುವಾಗ ಒಂದು ದಿನ ಮಧ್ಯಾಹ್ನ ವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು . ನಮ್ಮ ಸಹೋದ್ಯೋಗಿ ಶಿಕ್ಷಕಿಯೋರ್ವರು ನನ್ನನ್ನು ಕರೆದು " ಸರ್ ಆ ಹುಡುಗನ ಹತ್ತಿರ ಹೋದರೆ ಏನೋ ವಾಸನೆ ಬರುತ್ತದೆ ನೋಡಿ" ಎಂದರು  ಹೋಗಿ ಗಮನಿಸಿದಾಗ ಆ ಬಾಲಕ ಕುಡಿದಿರುವುದು ಗಮನಕ್ಕೆ ಬಂತು , ಮುಖ್ಯ ಶಿಕ್ಷಕರ ಗಮನಕ್ಕೆ ತಂದು ವಿಚಾರಿಸಲಾಗಿ ಮನೆಯಲ್ಲಿ ಪ್ರತಿದಿನ ಪೋಷಕರ ಜಗಳ ಮತ್ತು ಕೆಟ್ಟ   ಸ್ನೇಹಿತರ ಸಹವಾಸದಿಂದ ಅವನು ದುಶ್ಚಟಕ್ಕೆ ಬಲಿಯಾಗಿರುವುದನ್ನು ಒಪ್ಪಿಕೊಂಡನು. ಅವರ ಪೋಷಕರ ಕರೆಸಿ ಆಪ್ತ ಸಮಾಲೋಚನೆ ಮಾಡಿ ಕಳಿಸಿದೆವು.

ಹೀಗೆ ಇಂದಿನ ದಿನಗಳಲ್ಲಿ ಮಾದ್ಯಮಗಳ ಪ್ರಭಾವ ,ಪೋಷಕರ ನಿರ್ಲಕ್ಷ್ಯ, ಸಮಾಜದ ಪ್ರಭಾವ ,ಸುಲಭವಾಗಿ ಸಿಗುವ ಮೊಬೈಲ್, ನಿಯಂತ್ರಣವಿಲ್ಲದೇ ಅಂತರ್ಜಾಲದಲ್ಲಿ ಸಿಗುವ ಬೇಡವಾದ ವಿಷಯ ವಸ್ತುಗಳು ಮಕ್ಕಳು ಮತ್ತು ಯುವಕರನ್ನು ದುಶ್ಚಟಗಳ ದಾಸರನ್ನಾಗಿ ಮಾಡುತ್ತಿವೆ.
ವಿಪರ್ಯಾಸವೆಂದರೆ ಈ ದುಶ್ಚಟಗಳನ್ನು ಮಕ್ಕಳು ಬೇಗ ಕಲಿತುಬಿಡುವರು. ಆದರೆ ಬಿಡಿಸಲು ಸಮಾಜ, ಶಿಕ್ಷಕರು, ಪೋಲಿಸರು, ಪೋಷಕರು, ಎಲ್ಲಾ ಸೇರಿದರೂ ಆ ಚಟಗಳ ಬಿಡಿಸಲು ಹರ ಸಾಹಸ ಮಾಡಬೇಕಾಗುತ್ತದೆ.

ಹಳ್ಳಿಯ ಅನುಭಾವಿಕರ ಮಾತಲ್ಲಿ ಹೇಳುವುದಾದರೆ ಕಲ್ಲು ತಿಂದ ಕರಗಿಸುವ ವಯಸ್ಸು ಯುವಕರದು. ಇದನ್ನು ಸ್ವಾಮಿ ವಿವೇಕಾನಂದರು ಕಬ್ಬಿಣದ ಮಾಂಸಖಂಡಗಳ ಮತ್ತು ಉಕ್ಕಿನ ನರಗಳ ಹೊಂದಿರುವ ಯುವಕರು ಯಾವುದೇ ದೇಶದ ಆಸ್ತಿ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ದೇಶದ ಭವಿಷ್ಯದ ಪ್ರಜೆಗಳು, ಪೋಷಕರ ಕನಸುಗಳು ದುಶ್ಟಕ್ಕೆ ಬಲಿಯಾಗಿ ಸಮಾಜಕ್ಕೆ ಹೊರೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ಇದೊಂದು ಸಾಮಾಜಿಕ ಪಿಡುಗಾಗಿ ಪರಿವರ್ತನೆ ಹೊಂದಿರುವುದು ನಮಗೆ ತಿಳಿದೇ ಇದೆ ಈ ಸಮಸ್ಯೆಗೆ ಪರಿಹಾರವನ್ನು ನಾವೆಲ್ಲರೂ ಸೇರಿ ಕಂಡುಕೊಳ್ಳಬೇಕಿದೆ.
ಮಕ್ಕಳು ಮತ್ತು ಯುವಕರು ದಾರಿ ತಪ್ಪದಂತೆ ಪೋಷಕರು ಮೊದಲಿಗೆ  ಎಚ್ಚರಿಕೆ ವಹಿಸಬೇಕು.
ಸರ್ಕಾರಗಳು ಸಹ ಈ ನಿಟ್ಟಿನಲ್ಲಿ ಚಿಂತಿಸಿವೆ ಕರ್ನಾಟಕ ರಾಜ್ಯ ಸರ್ಕಾರ  2012ರಲ್ಲಿ ಯುವ ನೀತಿ ರೂಪಿಸಲಾಗಿತ್ತು.  ವಿವೇಕಾನಂದ ಯುವ ನಿಗಮ ಸ್ಥಾಪಿಸಿದೆ.ಮತ್ತು ಮಕ್ಕಳು ಯುವಕರಿಗೆ ದುಶ್ಟಟಗಳ ದುಷ್ಪರಿಣಾಮಗಳ ಬಗ್ಗೆ ತಿಳಿಸುವ ಮತ್ತು ಯುವಕರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಯೂಥ್ ಹೆಲ್ತ್ಲೈನ್, ಟ್ಯಾಲೆಂಟ್ ಬ್ಯಾಂಕ್, ಪೋರ್ಟಲ್, ಫೆಲೋಶಿಪ್ ನೀಡುವ ಕೆಲಸಗಳು ಆಗಬೇಕಿದೆ.
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಡಗ್ಸ್, ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅಪರಾಧ ಮನೋಭಾವ ಹೆಚ್ಚಾಗುತ್ತಿದೆ. ಯುವಕರು ದಾರಿ ತಪ್ಪದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಹಾಗೂ ಬೇರೆ ಬೇರೆ ಜವಾಬ್ದಾರಿಗಳಲ್ಲಿ ತೊಡಗಿಕೊಳ್ಳಲು ಅವರ ಕೌಶಲ್ಯಕ್ಕೆ ತಕ್ಕಂತೆ ಅವರಿಗೆ ಸೂಕ್ತವಾದ ತರಬೇತಿಯನ್ನು ಮತ್ತು ಮಾರ್ಗದರ್ಶನ ನೀಡಿ ಅವರಲ್ಲಿರುವ ರಚನಾತ್ಮಕ ಶಕ್ತಿಯನ್ನು ಹೊರಗೆಳೆಯುವ ಕೆಲಸ ಮಾಡಬೇಕಿದೆ.
ಪ್ರತಿಭಾವಂತ ಮಕ್ಕಳು ಮತ್ತು ಯುವಕರಿಗೆ ತಂತ್ರಜ್ಞಾನ ಹಾಗೂ ಆವಿಷ್ಕಾರಗಳ ಬಗ್ಗೆ ಆದ್ಯತೆ ನೀಡಿ ಅವಕಾಶ ಕಲ್ಪಿಸಬೇಕಿದೆ.
ಯುವ ಸಂಘಗಳ ಮೂಲಕ ಕ್ರೀಡೆಯಲ್ಲಿ ತೊಡಗುವಂತೆ ಮಾಡಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವಂತೆ ನೋಡಿಕೊಳ್ಳಬೇಕಿದೆ.

ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಅವಕಾಶಗಳ ಬಗ್ಗೆ ಮತ್ತು ಉನ್ನತವಾದ ಗುರಿಗಳನ್ನು ಹೊಂದಲು ಮನವರಿಕೆ ಮಾಡಿಕೊಡಬೇಕಿದೆ
ಸಾಮಾಜಿಕ ಮೌಲ್ಯಗಳನ್ನು ತಿಳಿಸುವ ಮೂಲಕ ರಾಷ್ಟ್ರೀಯ ಮನೋಭಾವ ಬೆಳೆಸುವುದು, ಅದರ ಮೂಲಕ ಭಾರತೀಯ ಸಂಸ್ಕೃತಿ ರಕ್ಷಣೆ ಮಾಡುವಂತೆ ಪ್ರೇರೇಪಿಸಬೇಕಿದೆ.
ಆರೋಗ್ಯ ಮತ್ತು ಆಹಾರದ ವಿಚಾರದಲ್ಲಿ ಎಚ್ಚರಿಕೆ ಮೂಡಿಸಿ ಕಾಲಕಾಲಕ್ಕೆ ಆಪ್ತ ಸಲಹೆ  ಮತ್ತು ಮಾರ್ಗದರ್ಶನ ನೀಡಬೇಕಿದೆ.

ಮಕ್ಕಳು ಮತ್ತು ಯುವಕರು ನಮ್ಮ ದೇಶದ ಆಸ್ತಿ  ವಿವಿಧ ಕಾರಣದಿಂದಾಗಿ ಅವರು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳುಮಾಡಿಕೊಳ್ಳುವುದನ್ನು ತಡೆಯಲು ಸಕಾಲದಲ್ಲಿ ಅವರ ಮನ ಪರಿವರ್ತಿಸುವ ಕೆಲಸ ಆಗಬೇಕಿದೆ. ಅವರು ಕೇವಲ ಜನಸಂಖ್ಯೆ ಎಂದು ಭಾವಿಸದೇ ಮಾನವ ಸಂಪನ್ಮೂಲವಾಗಿ ಮಾರ್ಪಡಿಸಬೇಕು ಎಲ್ಲಕ್ಕಿಂತ ಮಿಗಿಲಾಗಿ ಅವರು ಉತ್ತಮ ವ್ಯಕ್ತಿತ್ವ ಉಳ್ಳ ಪ್ರಜೆಗಳನ್ನಾಗಿ ಮಾಡುವಲ್ಲಿ ನಾವೂ ಸಹ ಕೈಜೋಡಿಸಬೇಕಿದೆ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ. ತುಮಕೂರು
9999925529

ಹಾಸನ ವಾಣಿ ೧೦/೧೦/೨೧


 

09 October 2021

ಪ್ರಜಾಪ್ರಗತಿ ೯/೧೦/೨೧


 

ಚಂದ್ರ ಘಂಟಾ ದೇವಿಯ ಮಹಿಮೆ .ಭಕ್ತಿಗೀತೆ .


 


ಚಂದ್ರಘಂಟಾ ದೇವಿಯ ಮಹಿಮೆ 


ನಾಡಿನ ಜನರೆ ಕೇಳಿರಿನೀವು

ಮಹಿಮೆಯ ಹೇಳುವೆನು

ಚಂದ್ರಘಂಟಾದೇವಿಯ ಚರಿತೆಯ

ಹೇಳುವೆನು.


ಹಿಮವಂತ ,ಮೈನಾ ದೇವಿಯ

ಮಗಳಾಗಿ ಹುಟ್ಟಿದ ತಾಯಿ

ತಪವನು ಆಚರಿಸಿದಳು ಕಟ್ಟುತಾ

ಕೈಯಿ ಬಾಯಿ.


ಕಠೋರ ತಪಸ್ಸಿಗೆ ಮೆಚ್ಚಿದ

ಹರನು ಪ್ರತ್ಯಕ್ಷನಾದನು 

ಚಂದ್ರಘಂಟಾ ದೇವಿಯ ಮದುವೆ

ಆಸೆಯ ಕಂಡು ಅಚ್ಚರಿಪಟ್ಟನು.


ಶಿವನು ಒಪ್ಪಿದ ನಂತರ ಹಿಮವಂತ ಮಗಳ ಮದುವೆಗೆ ಒಪ್ಪಿದನು

ಮದುವೆ ಮಂಟಪದಿ ಸ್ಮಶಾನವಾಸಿ ರೂಪದ ಶಿವನ ಕಂಡು ಮೂರ್ಛಿತನಾದನು.


ಚಂದ್ರವದನೆ ದೇವಿಯು ಶಿವನಂತೆ

ತಾನೂ ಉಗ್ರರೂಪ ತಾಳಿದಳು

ಕಲ್ಯಾಣ ಮಂಟಪದಿ ಬೋಲೇನಾಥನ

ತಾಳಿಗೆ ತನ್ನ ಕೊರಳನೊಡ್ಡಿದಳು.


ಮದುವೆಯ ನಂತರ ಮಾತೆಯ ಮನವಿಗೆ ಹರ ಒಪ್ಪಿದನು

ಉಗ್ರ ರೂಪವ ತ್ಯಜಿಸಿ ಸುಂದರ

ವದನದಿ ದರ್ಶನ ನೀಡಿದನು.


ನವರಾತ್ರಿಯ ಮೂರನೇ ದಿನ 

ಚಂದ್ರ ಘಂಟಾದೇವಿಯ ಭಜಿಸೋಣ

ದುಷ್ಟರನು ಶಿಕ್ಷಿಸುತಾ  ಶಿಷ್ಟರನು ರಕ್ಷಿಸಲು ಬೇಡಿಕೊಳ್ಳೋಣ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು 

9909925529



ಮರದಂತೆ ನಿಲ್ಲು.


 


*ಮರದಂತೆ ನಿಲ್ಲು*


ಒಂದು ಉದಾತ್ತವಾದ 

ಗುರಿಸಾಧಿಸಲು ಹೊರಟಾಗ

ಎಲ್ಲರೂ ನಿನ್ನ ಕೈಬಿಟ್ಟಾಗ

ಒಂಟಿ ಮರದಂತೆ ನಿಲ್ಲು|

ಕಾರ್ಯ ಸಾಧನೆಯಲ್ಲಿ

ಕೆಲವೊಮ್ಮೆ ಸೋಲಾಗಬಹುದು 

ಬಾಗಿದರೂ ಬಾಣ ಗುರಿಸೇರಿಸಲು

ಸಹಾಯಕವಾಗುವುದು ಬಿಲ್ಲು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ

*ಇಂದಿನ ಸಿಂಹಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*೯/೧೦/೨೧


 

07 October 2021

NEP ಸವಾಲುಗಳು. ಲೇಖನ ಹೊಸ ಶಿಕ್ಷಣ ನೀತಿಯ ಹೊಸ ಹಾದಿ


 


ಹೊಸ ಶಿಕ್ಷಣ ನೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಹೊಸದಾಗಲಿ 


ಇತ್ತೀಚಿಗೆ ದಿನಪತ್ರಿಕೆಯೊಂದರಲ್ಲಿ ಚಿತ್ರದುರ್ಗ ಜಿಲ್ಲೆಯ ಗಡಿತಾಲೂಕುಗಳಲ್ಲಿ" ಶಿಕ್ಷಕರ ಕೊರತೆಯಿಂದ ಶಾಲೆ ಬಾಗಿಲು ತೆರೆದಿಲ್ಲ "ಎಂಬ ಸುದ್ದಿ ಓದಿ ಬೇಸರವಾಯಿತು .ಇದಕ್ಕೆ ಕಾರಣ ಆ ಶಾಲೆಗಳಲ್ಲಿ ಶಿಕ್ಷಕರ ಕೊರತೆ !ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳ ದೀರ್ಘ ಅವಧಿಯ ಬಳಿಕ ಭೌತಿಕ ತರಗತಿಗಳನ್ನು ತೆರೆದು ಕಲಿಕೆಯಲ್ಲಿ ಉಂಟಾದ ಹಿನ್ನೆಡೆಗೆ ಪರಿಹಾರ ಕಲ್ಪಿಸಲು ಸರ್ಕಾರಗಳು ನಿರ್ಧಾರ ಮಾಡಿ ಶಾಲೆಗಳ ಆರಂಭ ಮಾಡಿದರೆ, ಶಿಕ್ಷಕರ ಕೊರತೆಯಿಂದ ಶಾಲೆ ಆರಂಭವಾಗದಿರುವುದು ನಿಜಕ್ಕೂ ಬೇಸರದ ಸಂಗತಿ.

ಇದು ಒಂದು ಉದಾಹರಣೆ ಅಷ್ಟೇ ಇಂತಹ ಚಿತ್ರಣ ದೇಶದ ಇತರೆ ಕಡೆಗಳಲ್ಲಿ ಕಂಡರೂ ಅಚ್ಚರಿಯಿಲ್ಲ 

ಏಕೆಂದರೆ ಇತ್ತೀಚೆಗೆ ಬಿಡುಗಡೆಯಾದ ಅಂಕಿ ಅಂಶಗಳು ಇದಕ್ಕೆ ಪುಷ್ಟಿ ನೀಡುತ್ತವೆ .


ದೇಶದಲ್ಲಿ ಇನ್ನೂ 1.1 ಲಕ್ಷ ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿಯೇ ಉಳಿದಿವೆ ಎಂದು ಯುನೆಸ್ಕೊದ '2021 ಸ್ಟೇಟ್ ಆಫ್ ದ ಎಜುಕೇಶನ್ ರಿಪೋರ್ಟ್ ಫಾರ್ ಇಂಡಿಯಾ: ನೋ ಟೀಚರ್ಸ್, ನೋ ಕ್ಲಾಸ್' ಎಂಬ ವರದಿ ಬಹಿರಂಗಪಡಿಸಿದೆ. ದೇಶದಲ್ಲಿ ಒಟ್ಟು ಶೇ.19ರಷ್ಟು ಅಥವಾ 11.16 ಲಕ್ಷ ಶಿಕ್ಷಕ ಹುದ್ದೆಗಳು ಶಾಲೆಗಳಲ್ಲಿ ಖಾಲಿ ಇದ್ದು, ಈ ಪೈಕಿ ಶೇ.69ರಷ್ಟು ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿ ಖಾಲಿ ಇವೆ ಎಂದು ವರದಿ ವಿವರಿಸಿದೆ.


ಸರಕಾರದ ಅಂಕಿ-ಅಂಶಗಳ ಪ್ರಕಾರ 3, 5 ಮತ್ತು 7ನೇ ತರಗತಿಗಳಲ್ಲಿ ನಿಧಾನ ಕಲಿಕೆ ಫಲಿತಾಂಶ ಮತ್ತು ಶಿಕ್ಷಕರ ಹುದ್ದೆ ಖಾಲಿ ಇರುವುದಕ್ಕೆ ಸಂಬಂಧ ಕಲ್ಪಿಸಲಾಗಿ ದೆ. ಶಿಕ್ಷಕರ ನೇಮಕಾತಿ ನಿಯಮಗಳಲ್ಲಿ ಸುಧಾರಣೆ, ಗ್ರಾಮಗಳಲ್ಲಿ ಶಿಕ್ಷಕರ ಕೆಲಸದ ಸ್ಥಿತಿ ಸುಧಾರಣೆ, ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ನಿಗದಿಪಡಿಸುವುದು ಮತ್ತು ಶಿಕ್ಷಕರನ್ನು ಮುಂಚೂಣಿ ಕಾರ್ಯಕರ್ತರು ಎಂದು ಗುರುತಿಸುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ.

ಇದೇ ವರದಿಯಲ್ಲಿ ಶಿಕ್ಷಕರ ಗುಣಮಟ್ಟದ ಬಗ್ಗೆ ಕೂಡಾ ಪ್ರಸ್ತಾಪ ಮಾಡಲಾಗಿದೆ.

ಪ್ರಾಥಮಿಕ ಪೂರ್ವ ಶಿಕ್ಷಕರ ಪೈಕಿ ಶೇ.7.7, ಪ್ರಾಥಮಿಕ ಶಿಕ್ಷಕರಲ್ಲಿ ಶೇ.4.6 ಹಾಗೂ ಉನ್ನತ ಪ್ರಾಥಮಿಕ ಶಿಕ್ಷಕರಲ್ಲಿ ಶೇ.3.3 ಶಿಕ್ಷಕರು ಅನರ್ಹರು ಇದ್ದಾರೆ ಎಂದು ಯುನೆಸ್ಕೊ ವರದಿ ತಿಳಿಸಿದೆ.


 ಕೋವಿಡ್ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಶಿಕ್ಷಣ ವ್ಯವಸ್ಥೆಆಕರ್ಷಕವಾಗಿ ಮತ್ತು ಅರ್ಥಪೂರ್ಣವಾಗಿ ಮುಂದುವರಿಯಬೇಕಾದರೆ ಗುಣಮಟ್ಟದ ಬೋಧನೆ ಅಗತ್ಯ. ಈ ನಿಟ್ಟಿನಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಸಲಹೆ ಮಾಡಿದೆ. ಶಿಕ್ಷಕರಲ್ಲಿ ಶೇ.50ರಷ್ಟು ಮಹಿಳೆಯರು ಇದ್ದರೂ, ರಾಜ್ಯಗಳ ನಡುವೆ ಹಾಗೂ ನಗರ ಮತ್ತು ಗ್ರಾಮೀಣ ಭಾಗಗಳ ನಡುವೆ ದೊಡ್ಡ ವ್ಯತ್ಯಾಸ ಇದೆ ಎಂದು ತಿಳಿಸಿದೆ.


ಉತ್ತರ ಪ್ರದೇಶದಲ್ಲಿ 3.3 ಲಕ್ಷ, ಬಿಹಾರದಲ್ಲಿ 2.2 ಲಕ್ಷ ಮತ್ತು ಪಶ್ಚಿಮ ಬಂಗಾಳದಲ್ಲಿ 1.1 ಲಕ್ಷ ಶಿಕ್ಷಕ ಹುದ್ದೆಗಳು ಖಾಲಿ ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿ ದೆ. ಮಧ್ಯಪ್ರದೇಶದಲ್ಲಿ ಅತ್ಯಧಿಕ ಅಂದರೆ 21,077 ಏಕೋಪಾಧ್ಯಾಯ ಶಾಲೆಗಳಿವೆ. ಬಹುತೇಕ ಖಾಲಿ ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿದ್ದು, ಬಿಹಾರದ 2.2 ಲಕ್ಷ ಹುದ್ದೆಗಳ ಪೈಕಿ ಶೇ.89 ಹುದ್ದೆಗಳು ಗ್ರಾಮೀಣ ಪ್ರದೇಶದಲ್ಲಿವೆ. ಅಂತೆಯೇ ಉತ್ತರ ಪ್ರದೇಶದ 3.2 ಲಕ್ಷ ಖಾಲಿ ಹುದ್ದೆಗಳ ಪೈಕಿ ಶೇ.80ರಷ್ಟು ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ ಎಂದು ಅಂಕಿ-ಅಂಶ ನೀಡಲಾಗಿದೆ.

ಹೊಸ ಶಿಕ್ಷಣ ನೀತಿಯ ಹೊಸ್ತಿಲಲ್ಲಿ ಇರುವ ನಾವು ಈ ಮೇಲ್ಕಂಡ ಅಂಶಗಳ ಕಡೆಗೆ ಗಮನಹರಿಸದಿದ್ದರೆ ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡಿದರೆ ಅದು ಹಾಸ್ಯಾಸ್ಪದವಾಗಿ ಕಾಣುತ್ತದೆ. ಶಿಕ್ಷಣವನ್ನು ಅತೀ ಅಗತ್ಯ ವಲಯ ಎಂದು ಪರಿಗಣಿಸಿ ದೇಶದ ಜಿ ಡಿ ಪಿ ಯ ಶೇಕಡಾ ಆರಕ್ಕಿಂತ ಹೆಚ್ಚು ಹಣವನ್ನು ಶಿಕ್ಷಣಕ್ಕೆ ಮೀಸಲಿಟ್ಟು ಗುಣಮಟ್ಟದ ಶಿಕ್ಷಕರ ನೇಮಕಾತಿ,ಕಾಲಕಾಲಕ್ಕೆ ಅವರಿಗೆ ತರಬೇತಿ ನೀಡಿ ಅಪ್ಡೇಟ್ ಮಾಡಬೇಕಿದೆ. ಶಿಕ್ಷಣಕ್ಕೆ ಅಗತ್ಯ ಮೂಲಭೂತವಾದ ಸೌಕರ್ಯಗಳನ್ನು ಸಕಾಲದಲ್ಲಿ ಒದಗಿಸಬೇಕಿದೆ.ಜೊತೆಗೆ ಶಿಕ್ಷಣದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಕೃತಕ ಬುದ್ಧಿಮತ್ತೆಯ ಕಾಲಕ್ಕೆ ನಮ್ಮ  ಹೊಸ 

ಪೀಳಿಗೆಯನ್ನು ಸಜ್ಜು ಮಾಡುವ ಮತ್ತು ಅವರ ವ್ಯಕ್ತಿತ್ವ ವಿಕಸನಗೊಳಿಸುವ ಶಿಕ್ಷಣ ನೀಡಲು ಎಲ್ಲರೂ ಮನಸ್ಸು ಮಾಡಬೇಕಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529

ಕೊರೋನ ವೈರಸ್ .ಪ್ರಬಂಧ .Corona virus .essay.


 



  ಕೊರೊನಾವೈರಸ್ 

ಪ್ರಬಂಧ


ಪ್ಲೇಗ್ ನಂತಹ ರೋಗದಿಂದ ವಿಶ್ವದ ಕೆಲ ರಾಷ್ಟ್ರಗಳ ಲಕ್ಷಾಂತರ ಜನ ಮರಣ ಹೊಂದಿದ ಬಗ್ಗೆ ಕೇಳಿದ್ದೆವು .ಈಗ ಕರೋನ ಎಂಬ ರೋಗ ಇಡೀ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಹರಡಿ ಕೋಟ್ಯಂತರ ಜನರ ಜೀವ ತೆಗೆದು ಹಲವರ ಜೀವನವನ್ನು ಕಷ್ಟಗಳ ಕೂಪಕ್ಕೆ ತಳ್ಳಿರುವುದನ್ನು ನಾವು ಈಗಲೂ ನೋಡುತ್ತಿದ್ದೇವೆ.


ಸಾಮಾನ್ಯವಾಗಿ ಕೊರೋನಾ ವೈರಸ್ ಅಥವಾ  ಕೋವಿಡ್ -19 ಎಂದು ಕರೆಯಲ್ಪಡುವ ಕರೋನಾ ವೈರಸ್ ಮಾನವರಲ್ಲಿ ಉಸಿರಾಟದ ವ್ಯವಸ್ಥೆಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿ  ಅನಾರೋಗ್ಯವನ್ನು ಉಂಟುಮಾಡುವ ಸಾಂಕ್ರಾಮಿಕ ರೋಗವಾಗಿದೆ.  ಕೋವಿಡ್ 19 ಎಂಬ ಪದವು "ನಾವೆಲ್ ಕೊರೊನಾ ವೈರಸ್  2019" ದಿಂದ ಪಡೆದ ಒಂದು ಸಂಕ್ಷಿಪ್ತ ರೂಪವಾಗಿದೆ.  ಕೊರೊನಾ ವೈರಸ್ ನಮ್ಮ ದೈನಂದಿನ ಜೀವನದ ಮೇಲೆ ಬಹಳ ದುಷ್ಪರಿಣಾಮಗಳನ್ನು ಉಂಟುಮಾಡಿದೆ. ಈ ರೋಗದ ಪರಿಣಾಮವಾಗಿ ಪ್ರಪಂಚದಲ್ಲಿ ಆದ ಸಾವು ನೋವುಗಳು ಅಪಾರ  . ಇದರ ತೀವ್ರತೆ ಈಗ ಸ್ವಲ್ಪ ಕಡಿಮೆಯಾಗಿದೆ  ಬಹಳಷ್ಟು ಜನ ಈಗಲೂ ಈ ರೋಗದಿಂದ ಬಳಲುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮತ್ತು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.



 ಕೊರೊನಾ ವೈರಸ್  ಪ್ರಪಂಚದ ಎಲ್ಲ ದೇಶಗಳ  ಆರ್ಥಿಕ ಮತ್ತು ಸಾಮಾಜಿಕ ಜೀವನದ  ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ . ಇದು ಪ್ರಾಥಮಿಕವಾಗಿ ವ್ಯಕ್ತಿಯ ಸಂಪರ್ಕದ ಮೂಲಕ ಹರಡುತ್ತಿದೆ. ಮೊದಲಿಗೆ  ಇದು 6 ಅಡಿ ಒಳಗೆ ನಿಕಟ ಸಂಪರ್ಕದಲ್ಲಿರುವವರಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ ಎಂದು ದೃಢಪಟ್ಟಿತ್ತು ,ಕ್ರಮೇಣವಾಗಿ ಹತ್ತು ಅಡಿಗಳ ವರೆಗೆ ಹರಡಬಹುದು ಎಂದು ಹೇಳಲಾಗುತ್ತದೆ.  


ಕರೋನದ ಮೂಲ ಯಾವುದು?


ಕೊರೊನಾವೈರಸ್ ನ  ಮೂಲದ ಬಗ್ಗೆ ಈಗಲೂ ವಾದ ವಿವಾದಗಳು ಹಬ್ಬುತ್ತಿವೆ .

 ಕೊರೊನಾವೈರಸ್ ( COVID-19) ಅನ್ನು ಚೀನಾದ ವುಹಾನ್ ನಗರದಲ್ಲಿ ಡಿಸೆಂಬರ್ 2019 ರಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು. ಹಾಗಾಗಿ ಚೀನಾ ದೇಶದಲ್ಲಿ ಕೊರೊನ ಉಗಮವಾಗಿದೆ ಈ ವೈರಸ್ ಸೃಷ್ಟಿಕರ್ತ ಚೀನಾ  ಎಂದು ಜಗತ್ತಿನ ಬಹುತೇಕ ರಾಷ್ಟ್ರಗಳು ಆಪಾದನೆ ಮಾಡಿವೆ .ಆದರೆ ಚೀನಾ ಈ ಆಪಾದನೆಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕಿದೆ.

 ಮಾರ್ಚ್ 2020 ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕರೋನಾ ವೈರಸ್ ನ್ನು  ವಿಶ್ವದ ಸಾಂಕ್ರಾಮಿಕ ಎಂದು ಘೋಷಿಸಿ ಸದಸ್ಯ ದೇಶಗಳು ಅಗತ್ಯ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡಿತು.



 ಕೊರೋನ ದ ಲಕ್ಷಣಗಳೇನು?


 ಕೊರೋನ ಕಾಣಿಸಿಕೊಂಡ ಆರಂಭದ ದಿನಗಳಲ್ಲಿ  

 ಈ ವೈರಲ್ ಸೋಂಕಿನ ಸಾಮಾನ್ಯ ಲಕ್ಷಣಗಳು ಜ್ವರ, ಶೀತ, ಕೆಮ್ಮು, ಮೂಳೆ ನೋವು ಮತ್ತು ಉಸಿರಾಟದ ಸಮಸ್ಯೆಗಳು.ಪ್ರಧಾನ ಲಕ್ಷಣಗಳಾಗಿದ್ದವು. ಇದರ ಜೊತೆಗೆ ಕೊರೊನಾ ವೈರಸ್ ರೋಗಿಗಳಲ್ಲಿ ಸುಸ್ತು, ಗಂಟಲು ನೋವು, ಸ್ನಾಯು ನೋವು, ವಾಸನೆ ಅಥವಾ ರುಚಿಯ ನಷ್ಟದಂತಹ ಲಕ್ಷಣಗಳನ್ನು ಕಾಣಬಹುದಾಗಿತ್ತು.

ಆದರೆ ಕ್ರಮೇಣವಾಗಿ ರೂಪಂತರ ಹೊಂದಿದ ಕರೋನೋ ವೈರಸ್ ,ಡೆಲ್ಟಾ ,ಆಲ್ಪಾ, ಬೀಟಾ ಮುಂತಾದ ರೂಪಾಂತರಿ ವೈರಸ್ ಸೋಂಕಿತರಿಗೆ ಬೇದಿಯಾಗುವುದು ತಲೆಸುತ್ತುವುದು ಮುಂತಾದ ಲಕ್ಷಣಗಳನ್ನು ಕಾಣಬಹುದು. ಕೆಲವೊಮ್ಮೆ ಯಾವುದೇ ಲಕ್ಷಣಗಳು ಇಲ್ಲದ ಕೊರೊನಾ ರೋಗಿಗಳನ್ನು ಸಹ ಕಾಣಬಹುದು.


 ಕೊರೋನ  ತಡೆಗಟ್ಟುವಿಕೆ


ಕೊರೊನಾವೈರಸ್ ವಿರುದ್ಧ ಹೋರಾಡಲು ಈ ಕೆಳಕಂಡ ಅಂಶಗಳನ್ನು ನಾವು ಗಮನದಲ್ಲಿಟ್ಟುಕೊಂಡು ಪಾಲಿಸಬೇಕು.

 1  ಎಲ್ಲಾ ಕಡೆ   ವ್ಯಾಪಕವಾಗಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು

 2 ಸ್ಯಾನಿಟೈಸರ್ ಅಥವಾ ಸಾಬೂನಿನಿಂದ ನಿಯಮಿತವಾಗಿ ಕೈ ತೊಳೆಯುತ್ತಿರಬೇಕು.

3  ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. 

4 ಕಡ್ಡಾಯವಾಗಿ ಎಲ್ಲರೂ  ಮಾಸ್ಕ್ ಧರಿಸಬೇಕು.

 5 ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ಗುಂಪುಗೂಡಬಾರದು.

6 ರೋಗ ನಿರೋಧಕ ಶಕ್ತಿಯ ವರ್ಧಿಸುವ ಆಹಾರ ಸೇವಿಸಬೇಕು. 

7 ಸಮಯಕ್ಕೆ ಸರಿಯಾಗಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬೇಕು

ಈ ನಿಟ್ಟಿನಲ್ಲಿ

 ಕೊರೊನಾ ವೈರಸ್ ನಿಂದಾಗಿ, ಪ್ರಧಾನ ಮಂತ್ರಿಗಳಾದ  ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು 23 ಮಾರ್ಚ್ 2020 ರಂದು 21 ದಿನಗಳ ಕಾಲ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಿದರು. ಇದರ ಜೊತೆಯಲ್ಲಿ ಕೊರೊನಾವೈರಸ್ ನ  ಎರಡನೇ ಅಲೆ ಬಂದಾಗ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಆಡಳಿತಗಳು ಲಾಕ್ಡೌನ್ ಅಥವಾ ಹಲವಾರು ನಿರ್ಬಂಧಗಳನ್ನು ಹೇರಿದವು    ಇದರ ಪರಿಣಾಮವಾಗಿ ವೈರಸ್ ನ ಅಬ್ಬರ ಸ್ವಲ್ಪ ಕಡಿಮೆಯಾಯಿತು.


 ಕೊರೋನ ದ ಪರಿಣಾಮಗಳು


ಕೊರೊನಾವೈರಸ್ ವ್ಯಕ್ತಿ, ರಾಜ್ಯ ,ರಾಷ್ಟ್ರ ,ಮತ್ತು ವಿಶ್ವದ ಮೇಲೆ ಅಲ್ಪಕಾಲೀನ ಮತ್ತು ದೀರ್ಘಕಾಲದ ದುಷ್ಪರಿಣಾಮಗಳನ್ನು ಬೀರಿದ್ದು ನಮಗೆಲ್ಲ ತಿಳಿದಿದೆ.


  ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಭಾರತೀಯ ವಲಸೆ ಕಾರ್ಮಿಕರು ಬಹು ಕಷ್ಟಗಳನ್ನು ಎದುರಿಸಿದ್ದಾರೆ.  ಲಾಕ್ಡೌನ್ನಿಂದಾಗಿ ಕಾರ್ಖಾನೆಗಳು ಮತ್ತು ಕೆಲಸದ ಸ್ಥಳಗಳನ್ನು ಮುಚ್ಚುವುದರೊಂದಿಗೆ, ಲಕ್ಷಾಂತರ ವಲಸೆ ಕಾರ್ಮಿಕರು ಆದಾಯದ ನಷ್ಟ, ಆಹಾರದ ಕೊರತೆ ಮತ್ತು ಅನಿಶ್ಚಿತತೆಯನ್ನು ಎದುರಿಸಬೇಕಾಯಿತು.


 ಔಷಧ ಉದ್ಯಮ, ವಿದ್ಯುತ್ ವಲಯ, ಶಿಕ್ಷಣ ಸಂಸ್ಥೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಉದ್ಯಮಗಳು ಮತ್ತು ವಲಯಗಳು ಈ ರೋಗದ  ಕಾರಣದಿಂದ ಬಹಳ ನಷ್ಟ ಅನುಭವಿಸಿದವು. ಈ ಕೊರೊನಾವೈರಸ್ ನಾಗರಿಕರ ದೈನಂದಿನ ಜೀವನದ ಮೇಲೆ ಹಾಗೂ ಜಾಗತಿಕ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡಿದೆ.


ಕೊರೊನಾ ಸಂಕಷ್ಟ ಕಾಲದಲ್ಲಿ 

 ಎಲ್ಲಾ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಮತ್ತು ಸಾಮಾನ್ಯ ಜನತೆ ಒಟ್ಟಿಗೆ ಸೇರಿ  ಕರೋನವೈರಸ್ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಇದರ ಜೊತೆಯಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೊನಾವೈರಸ್ ವಿರುದ್ಧದ ಲಸಿಕೆ ನೀಡುವ ಅಭಿಯಾನವನ್ನು ಕೈಗೊಂಡಿವೆ .ಈ ಎಲ್ಲಾ ಆಶಾದಾಯಕ ಬೆಳವಣಿಗೆಗಳನ್ನು ನೋಡಿದಾಗ ಶೀಘ್ರದಲ್ಲೇ ಜಗತ್ತು ಕೊರೊನಾ ಮುಕ್ತವಾಗಲಿದೆ ಎನಿಸುತ್ತದೆ. ಅಲ್ಲಿಯವರೆಗೆ ಎಚ್ಚರಿಕೆಯಿಂದ ಇರಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529.




 

06 October 2021

ಚಿತ್ರದುರ್ಗ ಜಿಲ್ಲೆಯಲ್ಲಿ ಬುಕನಾನ್ .ವಿಮರ್ಶೆ


 


ಚಿತ್ರದುರ್ಗ ಜಿಲ್ಲೆಯಲ್ಲಿ  ಬುಕಾನನ್
ವಿಮರ್ಶೆ.

ಮೂಲತಃ ಚಿತ್ರದುರ್ಗ ಜಿಲ್ಲೆಯವನಾದ ,ಮತ್ತು ಇತಿಹಾಸ ಬೋಧಿಸುವ ಶಿಕ್ಷಕನಾಗಿ " ಪ್ರೊ. ಎಂ ಜಿ ರಂಗಸ್ವಾಮಿ ರವರು ಬರೆದಿರುವ ಚಿತ್ರದುರ್ಗ ಜಿಲ್ಲೆಯಲ್ಲಿ  ಬುಕಾನನ್ " ಎಂಬ ಕೃತಿ ನನ್ನನ್ನು ಬಹಳ ಆಕರ್ಷಿಸಿತ್ತು .
ಈ ಪುಸ್ತಕವನ್ನು ಓದಿ ಮುಗಿಸಿದಾಗ ಒಂದು ಉತ್ತಮ ಐತಿಹಾಸಿಕ ಅಧಾರದ ಪುಸ್ತಕ ಓದಿದ ಸಂತೃಪ್ತಿ ಲಭಿಸಿತು.

ಫ್ರಾನ್ಸಿಸ್ ಬುಕ್ಯಾನನ್ ಈಸ್ಟ್ ಇಂಡಿಯಾ ಕಂಪನಿಯ ಬಂಗಾಳ ಪ್ರಾಂತ್ಯದಲ್ಲಿ ವೈದ್ಯಾಧಿಕಾರಿಯಾಗಿದ್ದವನು ಬ್ರಿಟಿಷರು ತಮ್ಮ ಅಧೀನದಲ್ಲಿದ್ದ ಮದ್ರಾಸ್, ಮೈಸೂರು, ಕೆನರಾ ಮತ್ತು ಮಲಬಾರ್ ರಾಜ್ಯಗಳಲ್ಲಿನ ಕೃಷಿ, ಕಲೆ, ವಾಣಿಜ್ಯ, ಆರ್ಥಿಕ-ಧಾರ್ಮಿಕ ಸ್ಥಿತಿ-ಗತಿಗಳು ಹಾಗೂ ಅಲ್ಲಿಯ ಜನ ಸಮುದಾಯಗಳು, ಬುಡಕಟ್ಟುಗಳು, ಅವರ ಜೀವನ ವಿಧಾನ ಮತ್ತು ಆಚರಣೆ-ಸಂಪ್ರದಾಯಗಳನ್ನಲ್ಲದೆ ಸ್ಥಳೀಯ ಇತಿಹಾಸ ಕುರಿತು ಅಧ್ಯಯನಾತ್ಮಕ ವರದಿ ಮಾಡಲು ಅವನನ್ನುಕ್ರಿ.ಶ.1800ರಲ್ಲಿ ನಿಯೋಜಿಸಿದರು.  ಒಂದೂಕಾಲು ವರ್ಷದ  ಅವನ ಈ ಮಹಾ ಪಯಣದಲ್ಲಿಕಂಡುಂಡ ಅನುಭವ ಕಥನವನ್ನು 2000ಕ್ಕೂ ಹೆಚ್ಚು ಪುಟಗಳಷ್ಟು
ವಿಸ್ತಾರವಾಗಿ ಬರೆದಿರುವನು, ಅದನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾನೆ.
ಇದೊಂದು ಸಾಂಸ್ಕೃತಿಕ ದಾಖಲೆ ಕೂಡಾ ಆಗಿದೆ. ಇನ್ನೂರು ವರ್ಷದ ಕೆಳಗಿನ ಈ ಪ್ರಾಂತ್ಯಗಳ ಬದುಕಿನೊಳಗೊಂದು ಇಣುಕು ನೋಟದಂತಿರುವ ಈ ಅಧ್ಯಯನ ಪ್ರವಾಸ ಕಥನ ಕಳ್ಳಕಾಕರ, ಹುಲಿಯಂಥ ಕಾಡು ಪ್ರಾಣಿಗಳ
ಪರಿಸರದಲ್ಲಿ ಸಂಚರಿಸಿ ವರದಿ ಮಾಡುವ ರೋಚಕ ಯಾತ್ರೆಯೂ ಆಗಿದೆ. ಇಂಥದೊಂದು ಅಮೂಲ್ಯ ಕೃತಿಯನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದಿಸುವ ಪ್ರಯತ್ನ ಮಾಡಿದವರು ಪ್ರೊ ಎಂ ಜಿ ರಂಗಸ್ವಾಮಿ ರವರು .  ಅಖಂಡ ಚಿತ್ರದುರ್ಗ ಜಿಲ್ಲೆಗೆ ಮಾತ್ರ ಸೀಮಿತ ಗೊಳಿಸಿಕೊಂಡು ಅನುವಾದ ಮಾಡಿರುವ ಈ ಪುಸ್ತಕ  ನಿರರ್ಗಳವಾದ ಕಥನ ಶೈಲಿ, ಸುಭಗತೆ  ಸರಾಗವಾಗಿ ಓದಿಸಿಕೊಳ್ಳುವ ಚೇತೋಹಾರಿ ಗುಣದಿಂದ ಗಮನ ಸಳೆಯುತ್ತದೆ.

ಸಿವಿಜಿ ಪಬ್ಲಿಕೇಶನ್ ರವರ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹೊರತಂದ ಈ ಪುಸ್ತಕ 152 ಪುಟಗಳಿದ್ದು ,150 ರೂಪಾಯಿ ಮುಖಬೆಲೆಯಾಗಿದೆ. ದಾ ಕೋ ಹಳ್ಳಿ ಚಂದ್ರಶೇಖರ ರವರ ಮುಖಪುಟ ಪುಸ್ತಕದ ಅಂದ ಹೆಚ್ಚಿಸಿದೆ.
ಡಾ. ಮೀರಾಸಾಬಿಹಳ್ಳಿ ಶಿವಣ್ಣ ರವರ ಸುದೀರ್ಘವಾದ ಮುನ್ನುಡಿ ಮತ್ತು ಬೆನ್ನುಡಿ ಪುಸ್ತಕ ಓದಲು ಭೂಮಿಕೆ ಸಿದ್ದಪಡಿಸುತ್ತವೆ. ಅವರ ಮುನ್ನುಡಿಯಲ್ಲಿ ಜನಸಾಮಾನ್ಯರ ಬದುಕಿಗೆ ಪೂರಕವಾದ ಸಾಹಿತ್ಯ ರಚನೆ ಮುನ್ನೆಲೆಗೆ ಬರಬೇಕು , ಹಾಗೂ ಮಾದ್ಯಮಗಳು ಮತ್ತು ಸಾಮಾನ್ಯ ಜನರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಕೈಜೋಡಿಸಬೇಕೆಂಬ ಕಳಕಳಿಯನ್ನು ತೋಡಿಕೊಂಡಿದ್ದಾರೆ.
ರಂಗಸ್ವಾಮಿ ರವರು ಈ
ಪುಸ್ತಕದಲ್ಲಿ ಜಿಲ್ಲಾ ಪ್ರವೇಶ ,
ಹಿರಿಯೂರಿನಲ್ಲಿ 14 ದಿನಗಳು ,ಮತ್ತು
ಗಣಿಗಾರಿಕೆ ಎಂಬ ಮೂರು ಭಾಗದಲ್ಲಿ ಚಿತ್ರದಲ್ಲಿನ ಬುಕಾನನ್ ಪ್ರವಾಸದ ಮಾಹಿತಿ ನೀಡಿರುವರು .
ಇದರ ಜೊತೆಯಲ್ಲಿ  ಮೀರಾಸಾಬಿಹಳ್ಳಿ ಶಿವಣ್ಣನವರ ಲೇಖನ ಗಳಾದ
ಬುಕ್ಯಾನನ್ ಕಂಡ ಚಿತ್ರದುರ್ಗ ಜಿಲ್ಲೆ ' ಹಾಗೂ ಹಿರಿಯೂರಿನಲ್ಲಿ ಬುಕ್ಯಾನನ್  ಎಂಬ ಎರಡು ಲೇಖನಗಳು ಬೋನಸ್ ರೂಪದಲ್ಲಿ ಓದುಗರಿಗೆ ಲಭ್ಯವಾಗಿವೆ.
ಪುಸ್ತಕದ ಒಳಪುಟಗಳಲ್ಲಿ ಕಂಡುಬರುವ ಪೂರಕವಾದ ಚಿತ್ರಗಳು ಮತ್ತು ನಕ್ಷೆಗಳು ಗತ ಕಾಲದ ಚಿತ್ರದುರ್ಗದ ಇತಿಹಾಸ ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತವೆ.

ಬುಕಾನನ್ ಪ್ರವಾಸ ಚಿತ್ರದುರ್ಗ ಜಿಲ್ಲೆಯ ಪ್ರವಾಸ ಅಧಿಕೃತವಾಗಿ ಆರಂಭವಾಗುವುದು ಮಲೆಬೆನ್ನೂರು ಕಡೆಯಿಂದ ,ಗರುಡನ ಗಿರಿ ದಾಟಿ ಯಗಟಿ ತಾಲ್ಲೂಕು ದಾಟಿದಾಗ ಬುಕಾನನ್ ದುರ್ಗದ ಪ್ರವಾಸ ಅಂತ್ಯವಾಗುತ್ತದೆ .ಈ ನಡುವೆ ಅವರು ನೀಡಿದ ಮಾಹಿತಿ ಅಮೂಲ್ಯವಾದದ್ದು.
ಬುಕಾನನ್ ಪ್ರವಾಸ ಕುರಿತಾದ ಪುಸ್ತಕ  ಓದುವಾಗ ಬುಕಾನನ್ ಆ ಪ್ರದೇಶದ ಐತಿಹಾಸಿಕ, ಆರ್ಥಿಕ , ಸಾಮಾಜಿಕ, ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಪರಿಯನ್ನು ನಾವು ಗಮನಿಸಬಹುದು.
ಆ ಭಾಗದ ಕೃಷಿ ಚಟುವಟಿಕೆಗಳ ಬಗ್ಗೆ ಉಲ್ಲೇಖಿಸಿ ಅಲ್ಲಿ ಅಂದು ರೈತರು ಬಳಸುತ್ತಿದ್ದ ಕೃಷಿ ಪರಿಕರಗಳಾದ ಎಡೆ ಕುಂಟೆ, ಕುಂಟೆ, ಗ್ವಾರೆ , ಹಂಡುಗುಂಟೆ, ಹೆಡೆ ಮರ ,ನೇಗಿಲ    ಬಗ್ಗೆ  ಚಿತ್ರ ಸಮೇತ ವಿವರಣೆ ನೀಡಿರುವನು ಅದೃಷ್ಟವಶಾತ್ ನಾನು ನನ್ನ ಬಾಲ್ಯದ ದಿನಗಳಲ್ಲಿ ಇವೆಲ್ಲವನ್ನೂ ನೋಡಿರುವೆ ಆದರೆ ಬಹುತೇಕ ಇಂದಿನ ಯುವಪೀಳಿಗೆ ಮತ್ತು ನಗರ ವಾಸಿಗಳು ಇವುಗಳ ನೋಡಿಲ್ಲ ಆ ನಿಟ್ಟಿನಲ್ಲಿ ಈ ಪುಸ್ತಕ ಮುಂದೊಂದು ದಿನ ನಿಜವಾದ ಆಧಾರ ಗ್ರಂಥ ಆಗುವುದರಲ್ಲಿ ಸಂದೇಹವಿಲ್ಲ.

ಬುಕಾನನ್ ಅಂದು ಚಿತ್ರದುರ್ಗ ಜಿಲ್ಲೆಯಲ್ಲಿ ಬೆಳೆಯುತ್ತಿದ್ದ ಬೆಳೆಗಳಾದ ಹತ್ತಿ, ನವಣೆ ಸಜ್ಜೆ  ,ಹುರುಳಿ ಔಡಲ ರಾಗಿ, ಕಬ್ಬು ಮುಂತಾದ ಬೆಳೆಗಳು ಮತ್ತು ವ್ಯವಸಾಯ ವಿಧಾನಗಳನ್ನು ಚೆನ್ನಾಗಿ ವಿವರಿಸಿದ್ದಾನೆ.

ಕಂಬ್ಳಿ ಕುರುಬರು ಮತ್ತು ಹಂಡೇ ಕುರುಬರು ಮತ್ತು ಗೊಲ್ಲರು ಕುರಿಸಾಕಣೆ ಮಾಡಿಕೊಂಡಿದ್ದ ಬಗ್ಗೆ ಉಲ್ಲೇಖಿಸಲಾಗಿದೆ.ಕುರುಬರು  ಬೀರಪ್ಪ ದೇವರು ಮತ್ತು ಮಾಯಮ್ಮ ದೇವತೆಯನ್ನು ಆರಾದಿಸುತ್ತಿದ್ದರು,ಐಮಂಗಲದ ಸುತ್ತಲಿನ ಪ್ರದೇಶದಲ್ಲಿ ಕಬ್ಬಿಣದ ನೇಗಿಲು ಹೊಡೆಯುತ್ತಿದ್ದರು, ಹಿರಿಯೂರಿನ ವೇದಾವತಿ ನದಿಯಲ್ಲಿ ಮೂರು ಜಾತಿಯ ಮೀನು ನೋಡಿದೆ, ರೈತರು ಗೊಬ್ಬರಕ್ಕೆ ಕುರಿ ಮಂದೆ ಆಶ್ರಯಿಸಿದ್ದರು. ಪಶುಪಾಲನೆ ಉಪಕಸುಬಾಗಿದ್ದು ಕುರಿ ಹಾಲು, ಮತ್ತು ತುಪ್ಪಕ್ಕೆ ಬೇಡಿಕೆ ಇತ್ತು.ಚಿಕ್ಕ ಬ್ಯಾಲದಕೆರೆ ಸುತ್ತ ಮುತ್ತ ಗಣಿಗಾರಿಕೆ ಇತ್ತು.ಮತ್ತೋಡಿನ ಸುತ್ತ ಮುತ್ತ ಗಾಜಿನ ಬಳೆ ತಯಾರಿಕೆ ಘಟಕಗಳು ಇದ್ದವು.ಎಂದು ತನ್ನ ದಿನಚರಿಯಲ್ಲಿ ಬುಕನಾನ್ ದಾಖಲು ಮಾಡಿದ್ದಾನೆ.

ಬುಕಾನನ್ ಚಿತ್ರಿಸುವ ಕೃಷಿ ಚಟುವಟಿಕೆ ಕುರಿತ ಅನೇಕ ಸಂಗತಿಗಳನ್ನು ಬಾಲ್ಯದಲ್ಲಿ ನಾನು ಸ್ವತಃ ಅನುಭವಿಸಿದ್ದೇನೆ  ಹೊಳಲ್ಕೆರೆ ತಾಲ್ಲೂಕು ಚೌಡಗೊಂಡನಹಳ್ಳಿ ಯಲ್ಲಿ  ರಾತ್ರಿ ವೇಳೆ ಚಂದ್ರನ ಬೆಳಕಲ್ಲಿ ಆರು ಇಲ್ಲವೆ ಎಂಟು ಎತ್ತುಗಳನ್ನು ಕಟ್ಟಿ ಕಬ್ಬಿಣದ ನೇಗಿಲು ಹೊಡೆಯುತ್ತಿದ್ದ ಚಿತ್ರಣ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ನೇಗಿಲು ಹೊಡೆಯುವವರಿಗೆ ನೀರು ಮತ್ತು ಬುತ್ತಿ(ಊಟ) ಸಾಗಿಸುತ್ತಿದ್ದವರ ಜೊತೆ ಹೋಗಿ ಬೆರಗುಗಣ್ಣಿನಿಂದ ನೋಡಿದ ಆ ದೃಶ್ಯಗಳು ಬುಕಾನನ್ ಚಿತ್ರಿಸಿರುವ ಕಬ್ಬಿಣದ ನೇಗಿಲು ಹೊಡೆಯುವ ದೃಶ್ಯಗಳು ನಾನು ಮತ್ತೆ ಆ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿದವು. ಸುಗ್ಗಿಯ ದಿನಗಳಲ್ಲಿ ಜೋಳ, ರಾಗಿ ತೆನೆಗಳಿಂದ ಕಾಳು ಬೇರ್ಪಡಿಸುವ ಸಲುವಾಗಿ ಸಗಣಿಯಿಂದ ಸಾರಿಸಿ ಕಣ ಸಿದ್ಧಗೊಳಿಸಿ ರೋಣಗಲ್ಲು  ಹೊಡೆಯುತ್ತಿದ್ದುದು, ಅಂತಹ ವೇಳೆ ಹೇಳುತ್ತಿದ್ದ ಜನಪದ ಹಾಡುಗಳು, ಆಳೆತ್ತರಕ್ಕೆ ಕಾಳಿನ ರಾಶಿ ಮಾಡುತ್ತಿದ್ದ  ಚಿತ್ರಣಗಳು ನನ್ನ ಕಣ್ಮುಂದೆ ಬಂದವು.

ಅಲ್ಲಲ್ಲಿ ಬುಕಾನನ್ ನೀಡಿರುವ ಕೆಲ ವಿವರಣೆ ಪೂರ್ವಾಗ್ರಹದಿಂದ ಕೂಡಿದೆ ಅನಿಸಿದರೂ ಈ ಕೃತಿಯು
ಚಿತ್ರದುರ್ಗದ ಐತಿಹಾಸಿಕ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆ.ದುರ್ಗದವರೇ ಅಲ್ಲದೇ ಎಲ್ಲಾ ಕನ್ನಡಿಗರು ಈ ಪುಸ್ತಕ ಓದಿ ನಮ್ಮ ಬಗ್ಗೆ ನಾವೇ ಹೆಮ್ಮೆ ಪಟ್ಟು ಕೊಳ್ಳಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ಚಿತ್ರದುರ್ಗ
9900925529

ಪುಸ್ತಕದ ಹೆಸರು: ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್
ಲೇಖಕರು: ಪ್ರೊ .ಎಂ ಜಿ ರಂಗಸ್ವಾಮಿ
ಪ್ರಕಾಶನ: ಸಿವಿಜಿ
ಪುಟಗಳು: 152
ಬೆಲೆ: 150 ರೂಪಾಯಿ

ವಕೀಲರೊಬ್ಬರ ವಗೈರೆಗಳು .ಪುಸ್ತಕ ವಿಮರ್ಶೆ. Vakeelarobbara vagairegalu . book reveiw

 

ವಕೀಲರೊಬ್ವರ ವಗೈರೆಗಳು .
ವಿಮರ್ಶೆ

 
ಆತ್ಮೀಯರು, ಲೇಖಕರು, ಕವಿಗಳು ಪ್ರಕಾಶಕರು ಆದ ಎಂ ವಿ ಶಂಕರಾನಂದ ರವರು , ಸಿ ಹೆಚ್ ಹನುಮಂತರಾಯ ರವರು ಬರೆದ " ವಕೀಲರೊಬ್ಬರ ವಗೈರೆಗಳು"   ಪುಸ್ತಕ ನೀಡಿ ಇದನ್ನು ಓದಿ ಸರ್ ಚೆನ್ನಾಗಿದೆ ಎಂದರು
ಬರೋಬ್ಬರಿ 655 ಪುಟಗಳ ಪುಸ್ತಕ ನೋಡಿದಾಗ ಇದನ್ನು ಎಷ್ಟು ದಿನ ಓದಬೇಕು? ಶಿಕ್ಷಕನಾದ ನನಗೆ ವಕೀಲರ ವಗೈರೆಗಳು ಬೇಕೆ? ಎಂದು ಶಂಕರಾನಂದ ಅವರ ಕಡೆ ನೋಟ ಬೀರಿದಾಗ , ನನ್ನ ಮನದ ಪ್ರಶ್ನೆ ಅರ್ಥ ಮಾಡಿಕೊಂಡ ಅವರು" ಓದಿ ಸಾರ್, ಆಮೇಲೆ ಹೇಳಿ" ಅಂದರು .
ಅವರು ಹೇಳಿದಂತೆ ಓದಲು ಶುರು ಮಾಡಿದೆ. ಮುಗಿಯುವವರೆಗೆ ನಿಲ್ಲಿಸಲಿಲ್ಲ. ಮತ್ತೊಮ್ಮೆ ಓದುವ ಮನಸಾಗಿದೆ. ಜೊತೆಗೆ ನಾನೇ ಶಿಕ್ಷಕರೊಬ್ಬರ ಸುವಿಚಾರಗಳು ಎಂಬ ಪುಸ್ತಕ ಬರೆಯಲು ಯೋಚಿಸಿರುವೆ.

ನಾಡಿನ ಪ್ರಖ್ಯಾತ ನ್ಯಾಯವಾದಿಗಳಾದ ಸಿ ಹೆಚ್ ಹನುಮಂತರಾಯ ರವರು ಬರೆದ ಈ ಕೃತಿ ಮೂರು ಮುದ್ರಣ ಕಂಡಿರುವುದು ಆ ಪುಸ್ತಕದ ಗುಣಮಟ್ಟ ಮತ್ತು ಬೇಡಿಕೆಯನ್ನು ಸೂಚಿಸುತ್ತದೆ.

ನೂರು ಅಧ್ಯಾಯಗಳನ್ನು ಒಳಗೊಂಡ  ಈ ಪುಸ್ತಕದಲ್ಲಿ ಪ್ರತಿಯೊಂದು ಅಧ್ಯಾಯ ಒಂದಕ್ಕಿಂತ ಒಂದು  ವಿಭಿನ್ನ .ಬಾಲ್ಯದ ಹಳ್ಳಿಯ ಜೀವನ , ಶಿಕ್ಷಣ, ಗ್ರಾಮೀಣ ಬದುಕು, ವಕೀಲಿ ವೃತ್ತಿ ಮತ್ತು ಜೀವನದ ಅನುಭವಗಳನ್ನು ಬಹಳ ರಸವತ್ತಾದ ಭಾಷೆ ಬಳಸಿ ನಮಗೆ ಉಣಬಡಿಸಿದ್ದಾರೆ .

ಅವರ ಬಾಲ್ಯದಿಂದ ಇಂದಿನವರೆಗೆ ಕಂಡುಂಡ ಜೀವನದ ಚಿತ್ರಿಕೆಗಳನ್ನು
ಇಡೀ ಪುಸ್ತಕದಲ್ಲಿ ನೀವು ಓದಿಯೇ ಸವಿಯಬೇಕು .
ನನಗೆ ವೈಯಕ್ತಿಕವಾಗಿ ಬಹಳ ಇಷ್ಟ ಆದ ಕೆಲ ಸಂಗತಿಗಳ ಬಗ್ಗೆ ಪ್ರಸ್ತಾಪ ಮಾಡುವೆ .
ಒಂಭತ್ತನೆಯ ಅಧ್ಯಾಯ ದಲ್ಲಿ ದೊಡ್ಡಬಳ್ಳಾಪುರ ಸುತ್ತಲಿನ ಚಿತ್ರಣ ನೀಡಿರುವರು.
ರುದ್ರರಮಣೀಯ ಬೆಟ್ಟದಲ್ಲಿ ಹೆಜ್ಜೇನು ಹೊಳೆ ಎಂಬ ಶೀರ್ಷಿಕೆಯಲ್ಲಿ
ಅವರ ಊರಿನ ಬೆಟ್ಟದ ವರ್ಣನೆ ಮಾಡಿರುವರು .
ಅವರ ಮಾತುಗಳಲ್ಲಿ ಕೇಳುವುದಾದರೆ
"ನಮ್ಮೂರು ಚಿಕ್ಕ ಬೆಳವಂಗಲದಿಂದ ಉತ್ತರಕ್ಕೆ ನಾಲ್ಕು ಕಿ.ಮೀ.ಗಳಷ್ಟು ದೂರದಲ್ಲಿ ಹುಲ್ಲುಕಡಿ ಬೆಟ್ಟ ಸಿಗುತ್ತದೆ. ಬಹುಕಾಲದ ಹಿಂದೆ ಮುನಿಯೊಬ್ಬ ಹುಲ್ಲುತಿಂದು ಈ ಬೆಟ್ಟದಲ್ಲಿ ಜೀವಿಸುತ್ತಿದ್ದುದರಿಂದ ಅದಕ್ಕೆ ಆ ಹೆಸರು ಬಂತು ಎನ್ನುವ ಪ್ರತೀತಿ.

ರುದ್ರರಮ್ಯತೆಯಿಂದ ಕೂಡಿದ ಆ ಬೆಟ್ಟವನ್ನು ಹತ್ತಲು ಚಿಕ್ಕಮಕ್ಕಳಿಂದ ಸಾಧ್ಯವಾಗುತ್ತಿರಲಿಲ್ಲ. ಕಡಿದಾದ ಆ ಬೆಟ್ಟವು ನಮ್ಮ ಹಳ್ಳಿಯ ಚಲನವಲನಗಳ ಮೇಲೆ ಸಮ ಕಣ್ಣಿಟ್ಟು ಕಾಯುವ ಕಾವಲುಗಾರನಂತೆ ನಿಂತಿತ್ತು. ಮೇಲುಗಡೆ ವೀರಭದ್ರದೇವರ ಗುಡಿ, ಕಲ್ಲಿನ ಮಂಟಪಗಳು ಮತ್ತು ಪುಷ್ಕರಣಿ ಇದ್ದವು. ಊರಿನ ಜನಕ್ಕೆ ಪಿಕ್ನಿಕ್ ಸ್ಥಳವೂ ಆಗಿತ್ತು. ಪೇಟೆಯ ಜನರಂತೆ ಕೇವಲ ವನಭೋಜನಕ್ಕೆ ಹೋಗುವವರಲ್ಲ ಹಳ್ಳಿಗರು: ದೇವರ ದರ್ಶನ, ಪೂಜೆಗಳನ್ನೂ ಅದರಲ್ಲಿ ಬೆರೆಸಿಕೊಂಡಿರುತ್ತಾರೆ. ಅಂಥ ಪಿಕ್ನಿಕ್ಗಳನ್ನು ದೇವರು ಮಾಡಿ ಬರುವುದೆಂತಲೂ ಕರೆಯುವುದು ರೂಢಿ. ಊರಿನ ಜಂಜಾಟದಿಂದ ದೂರವಾದ ನಿಸರ್ಗಧಾಮದ ವಾತಾವರಣದಲ್ಲಿ ಊಟ, ತಿಂಡಿಗಳಿಗೆ ವಿಶೇಷ ರುಚಿಯುಂಟಾಗಿ ಬಿಡುತ್ತದೆ; ದೇವರ ದರ್ಶನ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ನಮ್ಮೂರಿನವರು ಮೈ ಮನಗಳೆರಡನ್ನೂ ಚೈತನ್ಯಗೊಳಿಸಿಕೊಳ್ಳಲು ಹುಲ್ಲುಕಡಿ ಬೆಟ್ಟಗೆ ನೆಂಟರಿಷ್ಟರು ಮತ್ತು ಸ್ನೇಹಿತರೊಡಗೂಡಿ ಹೋಗುತ್ತಿದ್ದರು."
ಇಂತಹ ವಿವರಣೆ ಓದಿದ ಮೇಲೆ ನಮಗೆ ವಕೀಲರಲ್ಲಿ ಒರ್ವ ಸಾಹಿತಿ ಅಡಗಿರುವುದು ಸ್ಪಷ್ಟವಾಗುತ್ತದೆ .ಏಕೆಂದರೆ ಅವರು ಕೇವಲ ಎಲ್ ಎಲ್ ಬಿ ಮಾಡಿದ ಲಾಯರ್ ಅಲ್ಲ ಆಂಗ್ಲ ಎಂ ಎ ಮಾಡಿದ ನೂರಾರು ಆಂಗ್ಲ ಪುಸ್ತಕ ಓದಿದ ಸಹೃದಯರು.

ಸ್ವಾತಂತ್ರ್ಯ ಬಂದ ನಂತರದ ಎಷ್ಟೋ ವರ್ಷಗಳ ಕಳೆದರೂ ಸತಿ ಸಹಗಮನ ರಾಜಸ್ಥಾನ ಸಹಿತ ಹಲವಾರು ರಾಜ್ಯದಲ್ಲಿ ಜೀವಂತವಿರುವುದು ದುರದೃಷ್ಟಕರ. ಮಹಿಳೆಯರ ಅಮಾನವೀಯ ಮಾರಣಹೋಮದ ಬಗ್ಗೆ ಬಿಹಾರದ ಸಂಪತಿರಾವ್ ಕೇಸ್,ಅಹುಜಾ ಕೊಲೆ ಕೇಸ್ ,ಬಗ್ಗೆ ವಿವರವಾದ ಮಾಹಿತಿಯನ್ನು ನೀಡುತ್ತಾ ಮೂಢನಂಬಿಕೆಗಳು ಹೇಗೆ ಮಹಿಳೆಯರ ಜೀವನವನ್ನು ದುರ್ಭರಗೊಳಿಸಿವೆ ಎಂಬುದರ ವಿವರಣೆಯನ್ನು ಲೇಖಕರು ಚೆನ್ನಾಗಿ ನೀಡಿರುವರು.

"ರಾವಣನೊಂದಿಗೆ ಹನುಮಂತನ ಟಿಫನ್ "ಎಂಬ ಅಧ್ಯಾಯ ಕವಿಗಳು, ಪತ್ರಕರ್ತರು ಆದ   ದಿವಂಗತ  ಲಂಕೇಶ್ ಮತ್ತು ಲೇಖಕರ ಸಂಬಂಧವನ್ನು ಗಟ್ಟಿ ಗೊಳಿಸಿದ ಅನೇಕ ಪ್ರಸಂಗಗಳನ್ನು  ಹನುಮಂತರಾಯ ರವರು ಬಹಳ ರಸವತ್ತಾಗಿ ವಿವರಣೆ ನೀಡಿದ್ದಾರೆ.

ಕನ್ನಡ ಮಾದ್ಯಮದಿಂದ ಬಂದ ವಿದ್ಯಾರ್ಥಿಗಳು ಪದವಿಯಲ್ಲಿ ಇಂಗ್ಲಿಷ್ ಓದುವಾಗ ಅನುಭವಿಸುವ ಅವಮಾನ ,ಭಯ, ತಾಕಲಾಟ ,ಸಹಪಾಠಿಗಳ ಕೀಟಲೆಗಳ ಬಗ್ಗೆ ಲೇಖಕರು ತಮ್ಮ ಪುಸ್ತಕದಲ್ಲಿ ದಾಖಲಿಸಿರುವರು  ಇವುಗಳನ್ನು  ಎದುರಿಸಲು ಲಂಕೇಶ್ ರವರು ಪ್ರಾಧ್ಯಾಪಕರಾಗಿ, ಮಾರ್ಗದರ್ಶಕರಾಗಿ ಹೇಗೆ ಬೆಂಬಲ ನೀಡಿದರು ಎಂಬುದನ್ನು ಸ್ಮರಣೆ ಮಾಡಿದ್ದಾರೆ.

ಈ ಪುಸ್ತಕ ಕುರಿತು ಡಾ .ಸಿದ್ದಲಿಂಗಯ್ಯ ರವರ ಹೀಗೆ ಮೆಚ್ಚುಗೆ ವ್ಯಕ್ತ ಪಡಿಸಿರುವರು.
"ಕನ್ನಡ ಸಾಹಿತ್ಯ  ರಚನೆ ಕೇವಲ ಕನ್ನಡ, ಆಂಗ್ಲ ಅಧ್ಯಾಪಕರಿಗೆ ಸೀಮಿತ ಎಂಬುದನ್ನು ಸುಳ್ಳುಮಾಡುವಂತೆ ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ಮಹನೀಯರು ಇತ್ತೀಚಿನ ದಿನಗಳಲ್ಲಿ ಕನ್ನಡ - ಕ್ಷೇತ್ರವನ್ನು ಪ್ರವೇಶಿಸುತ್ತಿರುವುದು ಅಭಿನಂದನಾರ್ಹ. ಕಂದಾಯ, ಪೊಲೀಸ್, ವೈದ್ಯಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಕೆಲವರಾದರೂ ತಮ್ಮ ಜೀವನದಲ್ಲಿ ಅನುಭವಿಸಿದ  ಅನುಭವಗಳನ್ನು ದಾಖಲಿಸಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿ ಕಾನೂನಿನ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು ಕಾನೂನಿಗೆ ಸಂಬಂಧಪಟ್ಟ ಅನೇಕ ಲೇಖನಗಳು, ಕೃತಿಗಳನ್ನು ಹೊರತಂದಿದ್ದರೂ ಈ  ಕ್ಷೇತ್ರದಲ್ಲಿನ ಸ್ವಂತ ಅನುಭವಗಳು ವಿರಳವೆನ್ನಬಹುದು. ಈ ದಿಶೆಯಲ್ಲಿ ಸಿ.ಹಚ್. ಹನುಮಂತರಾಯ ರವರ  ಪ್ರಯತ್ನ ಗಮನಾರ್ಹವಾದದ್ದು. "

ವಕೀಲರೊಬ್ವರ ವಗೈರೆ ಓದಿದ ಮೇಲೆ
ಕನ್ನಡ ಸಾಹಿತ್ಯದ  ಒಂದು ಅಪರೂಪದ ಕೃತಿಯನ್ನು ಓದಿದ ಸಂತೊಷ ಉಂಟಾದದ್ದು ಸುಳ್ಳಲ್ಲ  . ತಮ್ಮ ವಿಸ್ತಾರವಾದ ವೃತ್ತಿ ಜೀವನದಲ್ಲಿ  ಲೇಖಕರು ನೋಡಿದ, ಅನುಭವಿಸಿದ ಅನೇಕ ಸಂಗತಿಗಳನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕೆಲ ಅಧ್ಯಾಯ ಓದುವಾಗ ಇದೇ ತರಹದ ಘಟನೆಗಳು ನಮ್ಮ ಜೀವನದಲ್ಲೂ ನಡೆದಿರುವುದು ನೆನಪಾಗುತ್ತದೆ.ಇಂತಹ ಪುಸ್ತಕ ಬರೆದ ಸಿ ಹೆಚ್ ಹನುಮಂತರಾಯ ರವರಿಗೂ .ಓದಲು ಪ್ರೇರೇಪಿಸಿದ  ಎಂ ವಿ ಶಂಕರಾನಂದ ರವರಿಗೂ ಧನ್ಯವಾದಗಳು. ನೀವು ಒಮ್ಮೆ ಈ ವಕೀಲರ ವಗೈರೆ ಓದಿ ಬಿಡಿ.

ಪುಸ್ತಕ ಹೆಸರು: ವಕೀಲರೊಬ್ವರ ವಗೈರೆಗಳು.
ಲೇಖಕರು: ಸಿ ಹೆಚ್ ಹನುಮಂತರಾಯ
ಬೆಲೆ: ೫೫೦
ಪುಟ :೬೫೫
ಪ್ರಕಾಶನ:ಸಪ್ನಾ ಬುಕ್ ಹೌಸ್

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು
9900925529


ಕಥೆಯಲ್ಲದ ಕಥೆ .ಪುಸ್ತಕ ವಿಮರ್ಶೆ.


 


ಕಥೆಯಲ್ಲದ ಕಥೆ .

ವಿಮರ್ಶೆ .


ಹಳ್ಳಿಯ ಜನಜೀವನ, ಗ್ರಾಮೀಣ ಸೊಗಡು, ಯುವ ಮನಸ್ಸುಗಳ ತಲ್ಲಣ ಹೀಗೆ ವಿವಿದ  ವೈವಿಧ್ಯಮಯ ಕಥಾ  ವಿಷಯಗಳನ್ನು ಒಳಗೊಂಡ "ಕಥೆಯಲ್ಲದ ಕಥೆ " ಸಂಕಲನದ  ಕಥೆಗಳನ್ನು ಓದುವಾಗ ವಿ ಎಲ್ ಪ್ರಕಾಶ್ ರವರ ಕಥನ ಕೌಶಲ್ಯ ನಮ್ಮ ಗಮನ ಸೆಳೆಯುತ್ತದೆ. 


ಕಥೆಯಲ್ಲದ ಕಥೆ ಯ ಕಥಾ ಸಂಕಲನದ ರುವಾರಿಯಾದ 

ವಿ .ಎಲ್.ಪ್ರಕಾಶ್ ರವರು  ಹಲವು ವರ್ಷಗಳ ಕಾಲ  ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿ ಪ್ರಸ್ತುತ ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆಗಳಲ್ಲದೆ ಅವರ ಬರಹದ ವ್ಯಾಪ್ತಿ ಹಣಕಾಸು, ವಿಜ್ಞಾನ, ಕಂಪ್ಯೂಟರ್ ತಂತ್ರಜ್ಞಾನ, ಚಲನಚಿತ್ರ , ಇ ಬುಕ್ , ಆಪ್ ಅಭಿವೃದ್ಧಿ ಹೀಗೆ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿದೆ.


ಒಂದೇ ಸಿಟ್ಟಿಂಗ್ ನಲ್ಲಿ ಕುಳಿತು ಓದಿದ ಈ ಪುಸ್ತಕದಲ್ಲಿ ಇರುವ ಕಥೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಹನ್ನೆರಡೂ  ಕಥೆಗಳು ಬಹಳ   ಸುಂದರವಾಗಿವೆ . 

ಪುಸ್ತಕಕ್ಕೆ ಮುನ್ನುಡಿಯನ್ನು ಬರೆದ ಪತ್ರಕರ್ತರು ಮತ್ತು ಲೇಖಕರಾದ ಕೆ ವೆಂಕಟೇಶ್ ರವರ ಮಾತಿನಲ್ಲೇ ಹೇಳುವುದಾದರೆ 

"ನೆನಪು ಮತ್ತು ವರ್ತಮಾನದ ಎರಡು ಪಾತಳಿಗಳಲ್ಲಿ ಇಲ್ಲಿನ ಕಥಾವಸ್ತುಗಳು ಮೈದಾಳುತ್ತವೆ. ನೆನಪನ್ನು ಕೆದಕುವ ಕತೆಗಳಾದ ಸಿದ್ದ ಹಾಗೂ ಹೊಳೆಯುವ ಜೀರ್ ಜಿಂಬೆ', 'ಬ್ಳೋಕರ್ ರಾಮಣ್ಣ' 'ಕತೆ ಬಿಟ್ಟು ಹೋದ ಕತೆಗಾರ ಕತೆಗಳು ತಮ್ಮ ಸಜೀವ ವಿವರಗಳಿಂದ ಮನಸ್ಸು ಮುಟ್ಟುತ್ತವೆ. ಬೆರಗು, ಮುಗ್ಧತೆಯಲ್ಲೇ ವಿರಮಿಸದೆ, ಬದುಕಿನ  ಸತ್ಯಗಳಿಗೂ ಮುಖಾಮುಖಿಯಾಗುತ್ತವೆ. ಎಲ್ಲರಿಗೂ ಬೇಕಾದ, ಊರಿಗೆ ಚೈತನ್ಯವನ್ನು ಹಂಚುವಷ್ಟು ಬಲವುಳ್ಳ 'ಬ್ರೋಕರ್ ರಾಮಣ್ಣ' ಗುಜರಿ ಮಗ್ಗದಂತೆ ಆಗಿಬಿಡುತ್ತಾನೆ. ಕೈಗಾರಿಕೀಕೃತ ಸಮಾಜದ ತಣ್ಣನೆಯ ಕ್ರೌರ್ಯ ಈ ಕತೆಯಲ್ಲಿ ಯಾವುದೋ ಘೋಷಣೆ, ತತ್ವಗಳ ಭಾರವಿಲ್ಲದೆ ಒಡಮೂಡಿದೆ. ಸಂಗದಲ್ಲಿದ್ದರೂ ನಿಸ್ಸಂಗ, ಊರೊಳಗಿದ್ದರೂ, ಒಂಟಿ ಪ್ರಾಥಮಿಕ ಸಂಬಂಧಗಳು ಕುಟ್ಟೆ ಹಿಡಿದಿರುವ ಸ್ಥಿತಿಯನ್ನು ಈ ಕತೆ ಮಾರ್ಮಿಕವಾಗಿ ಕಟ್ಟಿಕೊಡುತ್ತದೆ".


ಮೊದಲನೇ ಕಥೆಯನ್ನು ನಾನು ಓದುವಾಗ ನನ್ನ ಬಾಲ್ಯ ನೆನಪಾಗುತ್ತದೆ ನಾನೇ ಸಿದ್ದ ಎಂಬ ಭಾವನೆ ಮೂಡಿತು .ಆ ಕಾಲದಲ್ಲಿ ನಿಸರ್ಗದಲ್ಲಿ ಸಿಗುವ ಜೀವಿಗಳು ವಸ್ತುಗಳ ಜೊತೆಯಲ್ಲಿ ಆಟ ಮನರಂಜನೆ ಸಿಗುತ್ತಿತ್ತು ಆದರೆ ಈಗಿನ  ಮೊಬೈಲ್, ಗೇಮ್ ಇಂಟರ್ ನೆಟ್ ಮಕ್ಕಳು ಇಂತಹ ಪರಿಸರದ ಜೊತೆಗಿನ ಸಂಬಂಧ ಅವರಿಗೆ ಲಭ್ಯವಾಗಿಲ್ಲ ಎನ್ನಬಹುದು. ಬ್ಳೋಕರ್ ರಾಮಣ್ಣ ಕಥೆಯನ್ನು ಲೇಖಕರು  ಬಹಳ. ಚೆಂದವಾಗಿ ನಿರೂಪಿಸಿದ್ದಾರೆ. ಇಡೀ ಊರಿನ ಜನರಿಗೆ  ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುವ ಗುಣವುಳ್ಳ ಅವನು ಕೊನೆಯಲ್ಲಿ ಹೇಗೆ ಅಪ್ರಸ್ತುತನಾಗುತ್ತಾನೆ ಎಂಬುದು ಆಧುನಿಕ ಸಮಾಜಕ್ಕೆ ಹಿಡಿದ ಕನ್ನಡಿ ಎನ್ನಬಹುದು.


ಮಿನಿಮಮ್ ಬ್ಯಾಲೆನ್ಸ್ ಶುಲ್ಕ, ಏ.ಟಿ ಎಮ್ ಶುಲ್ಕ, ಪಾಸ್ಬುಕ್ ಶುಲ್ಕ, ಚೆಕ್ ಬುಕ್ ಶುಲ್ಕ ಹೀಗೆ ಅನವಶ್ಯಕವಾಗಿ ಶುಲ್ಕವನ್ನು ಹೇರುತ್ತಾ 

ಬ್ಯಾಂಕುಗಳು ಹೇಗೆ ಜಿಗಣಿಯಂತೆ ನಮ್ಮ ಮೇಲೆ ಅನವಶ್ಯಕವಾಗಿ ಶುಲ್ಕ ವಿಧಿಸಿ ಕ್ರಮೇಣವಾಗಿ ನಮ್ಮ ಹಣವನ್ನು  ಹೇಗೆ ಕೊಳ್ಳೆ ಹೊಡೆಯುತ್ತವೆ ಎಂಬುದನ್ನು ವೃದ್ದೆ ಗ್ಯಾಸ್ ಸಬ್ಸಿಡಿ ಪಡೆಯಲು ಆರಂಭಿಸಿದ ಅಕೌಂಟ್ ನ್ನು ಕೊನೆಗೆ ಬೇಸತದಿಂದ  ಕ್ಲೋಸ್ ಮಾಡಿಸಿದ ಪ್ರಸಂಗದ ಕಥೆ ಮನಕಲಕುತ್ತದೆ. ಇದು ಇಂದಿನ ಬ್ಯಾಂಕುಗಳ ಅರ್ಥಿಕ ಶೋಷಣೆ ಪ್ರತಿಬಿಂಬ ಎನ್ನಬಹುದು.


ಹೀಗೆ ಪ್ರಕಾಶ್ ರವರ ಈ ಕಥಾ ಸಂಕಲನದ ಪ್ರತಿಯೊಂದು ಕಥೆಗಳು ಸಮಾಜದ ಓರೆ ಕೋರೆಗಳ ಕುರಿತಾಗಿವೆ .ಈ ಕಥೆಗಳು ನಮ್ಮನ್ನು ಚಿಂತನೆಗೆ ಹಚ್ಚುತ್ತವೆ ಕೆಲವೊಮ್ಮೆ ಇದು ನನ್ನದೇ ಕಥೆ ಎಂಬ ಭಾವ ಮೂಡಿಸುತ್ತವೆ .ಇವರ ಲೇಖನಿಯಿಂದ ಇನ್ನೂ ಹೆಚ್ಚಿನ ಸಾಹಿತ್ಯ ಸೃಷ್ಟಿಯಾಗಲಿ ಓದುವ ಸೌಭಾಗ್ಯ ನಮ್ಮದಾಗಲಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು

9900925529


ಮಹಾಲಯದ ಮಳೆ


 


ಇಂದು  ತುಮಕೂರಿನಲ್ಲಿ
ಮುಂಜಾನೆಯೇ
ಸ್ವರ್ಗಸ್ತರಾದ ಹಿರಿಯರ

ರೂಪದಲ್ಲಿ ಮಳೆರಾಯನ


ಆಗಮನ|
ಮಹಾಲಯ ಅಮಾಸ್ಯೆಯಂದು
ಹಿರಿಯರ ಆಶೀರ್ವಾದ
ಪಡೆದು ಧನ್ಯವಾಗಿವೆ
ನಮ್ಮ ಮನ| |

#ಸಿಹಿಜೀವಿ .

ಸಾಮಾಜಿಕ ಜಾಲ ತಾಣಗಳು .ಪ್ರಬಂಧ samajika jaala taanagalu.prabhanda


 


ಸಮಾಜಿಕ ಜಾಲತಾಣಗಳು .

ಮಕ್ಕಳ ಪ್ರಬಂಧ


ಸಾಮಾಜಿಕ ಜಾಲತಾಣಗಳು 



ಒಂದು ಕಾಲದಲ್ಲಿ ಹೊಗೆಸೊಪ್ಪು ಇಲ್ಲದ ಮನೆಗಳಿರಲಿಲ್ಲ ಇಂದು ವಾಟ್ಸಪ್ ಇಲ್ಲದ ಪೋನ್ ಗಳು ಇಲ್ಲ ಎನ್ನುವಂತಾಗಿದೆ, ಮೊಬೈಲ್ ಪೋನ್ ಇಲ್ಲದ ಜೀವನ ಊಹಿಸಿಕೊಳ್ಳಲು ಸಾದ್ಯವಿಲ್ಲ ಅಷ್ಟರಮಟ್ಟಿಗೆ ನಾವು ಮೊಬೈಲ್ ಪೋನ್ ಮತ್ತು ಸಾಮಾಜಿಕ ಜಾಲತಾಣಗಳ ದಾಸರಾಗಿದ್ದೇವೆ ಎಂದರೆ ತಪ್ಪಾಗಲಾರದು.

ಫೇಸ್‌ಬುಕ್‌, ವಾಟ್ಸಪ್, ಟ್ವಿಟರ್, ಕೂ, ಯೂಟೂಬ್, ಶೇರ್ ಚಾಟ್, ಇನ್ಸ್ಟಾಗ್ರಾಮ್ ‌ಹೀಗೆ ಪಟ್ಟಿ ಮಾಡುತ್ತಾ ನಿಂತರೆ ಹನುಮಂತನ ಬಾಲದಂತೆ ಬೆಳೆಯುತ್ತದೆ. 


ಈ ಸಾಮಾಜಿಕ ಜಾಲತಾಣಗಳ ಸದುಪಯೋಗ ಮಾಡಿಕೊಂಡರೆ ನಮ್ಮ ‌ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತ  ವೇದಿಕೆಯು ಲಭ್ಯವಾಗುವುದು, ಅಂಗೈಯಲ್ಲಿ ನಮಗೆ ಉತ್ತಮ ಮನರಂಜನೆ ದೊರೆಯುತ್ತದೆ, ಬೇಕಾದ ವಿಷಯಗಳ ಸಂಗ್ರಹಿಸಿ ನಮ್ಮ ಜ್ಞಾನ ವೃದ್ಧಿ ಆಗಲು ಖಂಡಿತವಾಗಿಯೂ ಸಾಮಾಜಿಕ ಜಾಲತಾಣಗಳು ವರದಾನವಾಗಿವೆ, ಇನ್ನೂ ಮುಂದುವರೆದು ಎಷ್ಟೋ ಜನರು ಪೇಸ್ ಬುಕ್, ವಾಟ್ಸಪ್, ಯೂಟೂಬ್ ಜಾಲತಾಣಗಳ ಸಹಾಯದಿಂದ ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಂಡ ಉದಾಹರಣೆಗಳು ಇವೆ, ಕೋವಿಡ್ ನಂತಹ ಸಮಯದಲ್ಲಿ ಈ ಜಾಲತಾಣಗಳು ನಮಗೆ ಸಂಪರ್ಕ ಸೇತುವೆಯಾದವು.

ಪ್ರಪಂಚದ ಜನಸಂಖ್ಯೆಯ ಶೇಕಡಾ48 ಜನ ಈ ಜಾಲತಾಣಗಳನ್ನು ಬಳಸುತ್ತಾರೆ ಎಂದರೆ ಇವುಗಳ ಮಹತ್ವ ನಾವು ಅರಿಯಲೇ ಬೇಕು.



ತಂತ್ರಜ್ಞಾನದ ಕ್ರಾಂತಿಯ ಫಲವಾಗಿ ,

ಇಂಟರ್ನೆಟ್ ಎಲ್ಲೆಡೆಯೂ ಕಡಿಮೆ ಬೆಲೆಗೆ ಲಬ್ಯವಾದಾಗಿನಿಂದ  ಸಾಮಾಜಿಕ ಜಾಲಗಳ ಭರಾಟೆ ಆರಂಭವಾಯಿತು, ಇಂದು ಬಹುತೇಕ ಯುವಕ ಯುವತಿಯರಿಗೆ ಸಾಮಾಜಿಕ ಜಾಲತಾಣವೇ ಸರ್ವಸ್ವ ಎನ್ನುವಂತಾಗಿದೆ, ಪ್ರತಿನಿಮಷಕ್ಕೊಮ್ಮೆ ಜಾಲ ತಾಣ ವೀಕ್ಷಣೆ ಮಾಡುವುದು ಸ್ಟೇಟಸ್ ಅಪ್ಡೇಟ್ ಮಾಡುವುದು, ಎಷ್ಟು ಲೈಕ್ ಬಂದಿವೆ ಎಂದು ನೋಡುವುದು ಕಡಿಮೆ ಲೈಕ್ ಅಥವಾ ವೀಕ್ಷಣೆ  ಇದ್ದರೆ ಅದಕ್ಕೆ ಬೇಸರ ಪಟ್ಟುಕೊಂಡು ಖಿನ್ನತೆಯಿಂದ ಮಾನಸಿಕ ಆರೋಗ್ಯ ಹಾಳುಮಾಡಿಕೊಂಡು ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.


ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸರಾಸರಿ ಓರ್ವ ವ್ಯಕ್ತಿಯು ಪ್ರತಿದಿನ ಎರಡೂವರೆ ಗಂಟೆ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವನು,ಅಂದರೆ ತಿಂಗಳಲ್ಲಿ ಎಪ್ಪತ್ತೈದು ಗಂಟೆ ಅಥವಾ ಮೂರು ದಿನ  ಅದರಲ್ಲೇ ಕಾಲ ಕಳೆದರೆ ವರ್ಷದ ಲೆಕ್ಕವೇನು? ಅನವಶ್ಯಕ ಕಾಲ ಹರಣದ ಫಲವಾಗಿ ಅದು ದೇಶದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರದೇ ಇರಲಾರದು ಈ ವಿಷಯದ ಬಗ್ಗೆ ಗಮನಹರಿಸಲೇಬೇಕು.


ಇನ್ನೂ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಮಹಿಳೆಯರ ಮತ್ತು ಯುವತಿಯರಿಗೆ ಕಿರುಕುಳ ನೀಡುವ ಸಕ್ರಿಯ ಜಾಲದ ಬಗ್ಗೆ , ಪೋಟೋ ಗಳನ್ನು ತಿರುಚಿ, ಅಶ್ಲೀಲಗೊಳಿಸಿ ಬ್ಲಾಕ್ ಮೇಲ್  ಮಾಡುವ ಖದೀಮರಿಗೆ ಈ ಜಾಲತಾಣಗಳು ಹುಲಾಸಾದ ಹುಲ್ಲುಗಾವಲಾಗಿವೆ.


ಜಾಲತಾಣಗಳು ಆರ್ಥಿಕ ವ್ಯವಹಾರಗಳನ್ನು ಪ್ರೋತ್ಸಾಹ ಮಾಡುವುದರಿಂದ ಆರ್ಥಿಕ ಅಪರಾಧಗಳು ಹೆಚ್ಚಾಗಿ ಅಮಾಯಕರು ,ಯಾವುದೋ ಲಿಂಕ್ ಒತ್ತುವ ಮೂಲಕ, ಅಪರಿಚಿತ ವೆಬ್ಸೈಟ್ ಕ್ಲಿಕ್ ಮಾಡುವ ಮೂಲಕ ಮೋಸ ಹೋದ ಲಕ್ಷಾಂತರ ನಿದರ್ಶನಗಳು ನಮ್ಮ ಮುಂದಿವೆ.


ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಕೋಮುಸಾಮರಸ್ಯ ಹಾಳುಮಾಡುವಿಕೆಯಲ್ಲಿ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳು ಕುಖ್ಯಾತಿಯನ್ನು ಪಡೆದಿವೆ ಈ ದಿಸೆಯಲ್ಲಿ ಸರ್ಕಾರಗಳಿಂದ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮೇಲೆ ಕೆಲ ನಿರ್ಬಂಧಗಳು ಹೇರಿಕೆಯಾಗಿವೆ .


ಸಾಮಾಜಿಕ ಜಾಲತಾಣಗಳು ಈಗ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ ಆದ್ದರಿಂದ ಅವುಗಳ ಬಳಕೆಯನ್ನು ನಾವು ಸಂಪೂರ್ಣವಾಗಿ ತ್ಯಜಿಸಲು ಆಗುವುದೇ ಇಲ್ಲ ಎಂಬ ಸ್ಥಿತಿಗೆ ನಾವು ತಲುಪಿರುವೆವು, ಆದ್ದರಿಂದ ಕೆಲ ಮುಂಜಾಗ್ರತಾ ‌ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು  ಅವುಗಳ ದುಷ್ಪರಿಣಾಮ ಕಡಿಮೆ ಮಾಡಬಹುದು, ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಬಹುದು.


ಹಾಗಾದರೆ ನಾವೇನು ಮಾಡಬೇಕು?


ಸಮಯ ಅಮೂಲ್ಯವಾದದ್ದು ಯಾವಾಗಲೂ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರದೆ ಒಂದು ನಿಗದಿತ ಟೈಮ್ ಸೆಟ್ ಮಾಡಬಹುದು, ಅದಕ್ಕೆ ಕೆಲ ಆಪ್ ಗಳ ನೆರವನ್ನು ಪಡೆಯಬಹುದು.


ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಮುತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಪ್ರೆಂಡ್ ರಿಕ್ವೆಸ್ಟ್ ಗಳನ ಕಣ್ಣು ಮುಚ್ಚಿ ಅಕ್ಸೆಪ್ಟ್ ಮಾಡಬಾರದು.


ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಹಿರಿಯರು ಸಾಮಾಜಿಕ ಜಾಲತಾಣಗಳ ಸಂಪುರ್ಣವಾದ ಮಾಹಿತಿ ನೀಡಿ, ಮಾರ್ಗದರ್ಶನ ನೀಡಬೇಕು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಆಗದಂತೆ ಅವರ ಮೇಲೆ ಒಂದು ಕಣ್ಣಿಟ್ಟಿರಬೇಕು.



ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಬಲಿಯಾಗಿ ಕುಟುಂಬದ ಸಂಬಂಧಗಳನ್ನು ಬಲಿ ಕೊಡದೆ ಕುಟುಂಬದಲ್ಲಿ ಸಂತಸದಿಂದ ಬಾಳುವುದನ್ನು ಕಲಿಯಬೇಕು 


ನಮ್ಮ ಪಾಸ್ವರ್ಡ್ ಗಳು ಮತ್ತು ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.


ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗುವ ಹವ್ಯಾಸಗಳನ್ನು ಬೆಳೆಸಿಕೊಂಡು ನಮ್ಮ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು.


ಯೋಗ,ಧ್ಯಾನದ ಮೂಲಕ  ಮರ್ಕಟ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ,ಸ್ವಯಂ ಶಿಸ್ತು ಬೆಳೆಸಿಕೊಳ್ಳಬೇಕು.


ನಾವು  ಸಾಮಾಜಿಕ ಜಾಲತಾಣಗಳಿಗೆ ದಾಸರಾಗದೆ ಅವುಗಳನ್ನು ವಿವೇಚನೆಯಿಂದ ಬಳಸೋಣ  ,ನಾವುಗಳು  ಯಜಮಾನನ ರೀತಿಯಲ್ಲಿ ತಂತ್ರಜ್ಞಾನದ ಭಾಗಗಳಾದ ಮತ್ತು ಸಾಮಾಜಿಕ  ಮಾದ್ಯಮಗಳು ಮತ್ತು ಜಾಲತಾಣಗಳನ್ನು ಬಳಸಿಕೊಂಡರೆ ಅವುಗಳು ನಮ್ಮ ಮೇಲೆ ಸವಾರಿ ಮಾಡುವುದನ್ನು ನಾವು ತಡೆಯಬಹುದು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು