30 August 2021

ಮಾಲ್ಗುಡಿ ಡೇಸ್


 


ಮಾಲ್ಗುಡಿ ಡೇಸ್ ಅಂದ ತಕ್ಷಣ ಆರ್. ಕೆ  .ನಾರಾಯಣ್, ಶಂಕರ್ ನಾಗ್ ನಮ್ಮ ಕಣ್ಮುಂದೆ ಬಂದು ನಿಲ್ಲುವರು , ದೇಶಾದ್ಯಂತ ಆ ಧಾರಾವಾಹಿ ಮಾಡಿದ ಮೋಡಿ ಎಲ್ಲರಿಗೂ ತಿಳಿದದ್ದೆ.ಅದೇ ಹೆಸರಿನ ಚಿತ್ರವನ್ನು ಮೊನ್ನೆ ಒಂದು ವಾಹಿನಿಯಲ್ಲಿ ನೋಡಿದೆ .ಬಹು ದಿನಗಳ ನಂತರ ಕುಟುಂಬ ಸಮೇತ ಒಂದು ಉತ್ತಮ ಸದಭಿರುಚಿಯ ಚಿತ್ರ ನೋಡಿದ ಸಂತಸ ಮನೆ ಮಾಡಿತು.


ಕಿಶೋರ್ ಮೂಡುಬಿದಿರೆ ಅವರು ಉತ್ತಮ ಕಥೆಯ ಜೊತೆಯಲ್ಲಿ ,ಟೈಟ್ ಆದ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ.ಈ ಮೂಲಕ ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಿರ್ದೇಶಕ ಲಭಿಸಿದಂತಾಗಿದೆ.


ಲಕ್ಷ್ಮಿ ನಾರಾಯಣ ಎಂಬ  ಪ್ರಖ್ಯಾತ ಕವಿಯ ಪಾತ್ರದಲ್ಲಿ ವಿಜಯರಾಘವೆಂದ್ರ ತನ್ನ ಇಳಿವಯಸ್ಸಿನಲ್ಲಿ ಬರವಣಿಗೆ ವಿದಾಯ ಹೇಳಿ , ಮಗಳ ಜೊತೆ ಅಮೆರಿಕ ಗೆ ಹೋಗಲು ಇಷ್ಟ ಪಡದೇ ಮನೆಬಿಟ್ಟು ಹೊರಡುತ್ತಾರೆ ಅದೇ ಸಮಯದಲ್ಲಿ ,  ಪ್ರಕೃತಿ ಪಾತ್ರಧಾರಿ ಗ್ರೀಷ್ಮ  ತನ್ನ ಬಾಸ್ ನ ಹೆಣ್ಣುಬಾಕತನಕ್ಕೆ ಮಂಗಳಾರತಿ ಎತ್ತಿ ಅವನ ಮುಖದ ಮೇಲೆ ರಾಜೀನಾಮೆ ಚೀಟಿ ಎಸೆದು ಕಾರಿನಲ್ಲಿ ಒಂದು ಲಾಂಗ್ ಜರ್ನಿ ಹೋಗಲು ಒಬ್ಬಂಟಿಯಾಗಿ ಹೊರಟಾಗ ಆಕಸ್ಮಿಕ ಅಪಘಾತದಲ್ಲಿ  ಲಕ್ಷ್ಮಿ ನಾರಾಯಣ ರವರ ಭೇಟಿಯಾಗಿ ಇವರಿಬ್ಬರೂ ಸೇರಿ ಹೊರಟ ಲಾಂಗ್ ಡ್ರೈವ್ ಇಡೀ ಚಿತ್ರ ಆವರಿಸಿಕೊಂಡಿದೆ.


ಲಕ್ಷ್ಮಿ ನಾರಾಯಣ ರವರು ತನ್ನ ಬಾಲ್ಯದ ಗೆಳತಿಯನ್ನು ನೋಡಲು ಮಾಲ್ಗುಡಿಗೆ ಹೊರಡುವರು ಈ ಪಯಣದಲ್ಲಿ ಪ್ರಕೃತಿ ಮತ್ತು ಲಕ್ಷ್ಮಿ ನಾರಾಯಣ ರವರ ಪ್ರೇಮ ಕಥೆಗಳ ಪ್ಲಾಶ್ ಬ್ಯಾಕ್ ನೋಡಲು ನಮಗೆ ಲಭ್ಯ. ಪ್ರಕೃತಿಗೆ ಅವಳ ಗೆಳೆಯ ವಿಜಯ್ ಸಿಕ್ಕನೇ? ನಮ್ಮ ಕವಿಗೆ  ಅವರ ಬಾಲ್ಯದ ಗೆಳತಿ  ಲಿನೆಟ್ಟಾ   ಸಿಕ್ಕಳೇ? ಇಲ್ಲವೆ ಎಂಬುದನ್ನು ನೀವು ಚಿತ್ರ ನೋಡಿಯೇ ತಿಳಿಯಬೇಕು.

ಬೆಂಗಳೂರಿನಿಂದ ಮಾಲ್ಗುಡಿಗೆ ಸಾಗುವ ಓಪನ್ ಎಲ್ಲೊ ಕಲರ್  ಗಾಡಿಯಲ್ಲಿ ಪ್ರೇಕ್ಷಕರೇ ಒಂದು ಟ್ರಿಪ್ ಹೋದಂತಿರುತ್ತದೆ, ಉತ್ತಮ ಛಾಯಾಗ್ರಹಣ ಕಣ್ಣಿಗೆ ಹಬ್ಬ .ಶೃಂಗೇರಿ, ಆಗುಂಬೆ ,ಪಶ್ಚಿಮ ಘಟ್ಟ , ಪಾಂಡಿಚೆರಿ ಯ ದೃಶ್ಯಗಳನ್ನು ಚಿತ್ರದಲ್ಲಿ ನೋಡಿಯೇ ಸವಿಯಬೇಕು.

ಗಗನ್ ಬಡೇರಿಯಾ ಅವರ ಸಂಗೀತ ಗಮನ ಸೆಳೆಯುತ್ತದೆ . ಸಂಚಿತ್ ಹೆಗಡೆ ಹಾಡಿರುವ 

ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.


ಪ್ರತಿಯೊಬ್ಬರಿಗೆ ಬಾಲ್ಯದ ತಮ್ಮದೇ ಆದ ಸಿಹಿಕಹಿ ನೆನಪುಗಳು ಸಾಮಾನ್ಯ. ಅಂತಹ ನೆನಪುಗಳನ್ನು ಅಗಾಗ್ಗೆ ನೆನಪುಮಾಡಿಕೊಳ್ಳುವೆವು . ಈ ಚಿತ್ರ ನೋಡುವಾಗ 

ಮತ್ತೆ ನಮ್ಮ ಬಾಲ್ಯಕ್ಕೆ ನಮಗರಿವಿಲ್ಲದೆ  ಹೋಗಿ ಬಂದ ಅನುಭವವಾಗುತ್ತದೆ. 

ಚಿನ್ನಾರಿ ಮುತ್ತನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ವಿಜಯ ರಾಘವೇಂದ್ರ ರವರು ಮತ್ತೊಮ್ಮೆ ಪ್ರಶಸ್ತಿ ಪಡೆದರೂ ಅಚ್ಚರಿಯಿಲ್ಲ. ಅರವತ್ತಕ್ಕೂ ಹೆಚ್ಚು ವಯಸ್ಸಿನ ಕವಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ.


ಇತರೆ ಪಾತ್ರಗಳು ಸಹ ಮುಖ್ಯ ಪಾತ್ರಕ್ಕೆ ಪೂರಕವಾಗಿವೆ ಆರ್ಯನ್ ಗೌಡ,ಬ್ಯಾಂಕ್ ಜನಾರ್ದನ್, ಶೈಲಶ್ರೀ, ರಿಚರ್ಡ್ ಲೂಯಿಸ್,ವಿದ್ಯಾ ಮೂರ್ತಿ, ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ..


ಕರೋನಾ ಮೊದಲ ಅಲೆ ಶುರಾವಾದಾಗ ಬಿಡುಗಡೆಯಾದ ಈ ಚಿತ್ರ ಎಲ್ಲಾ ಸಹೃದಯ ಕನ್ನಡಿಗರಿಗೆ ಚಿತ್ರ ಮಂದಿರದಲ್ಲಿ ನೋಡಲು ಸಾದ್ಯವಾಗಲಿಲ್ಲ  ಈಗ ಓಟಿಟಿ ಮತ್ತು ಕಿರುತೆರಯಲ್ಲಿ ಲಭ್ಯ. ಒಂದು ಸದಭಿರುಚಿಯ ಚಿತ್ರವನ್ನು ಕನ್ನಡದ ಮನಗಳು ನೋಡಿ ಉತ್ತಮ ಚಿತ್ರಗಳನ್ನು ಪ್ರೋತ್ಸಾಹ ಮಾಡುವಿರೆಂದು ನನ್ನ ಭಾವನೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: