ಭಾರತದ ಸಾಧನೆಗೆ ಹೆಮ್ಮೆ ಪಡೋಣ
ಸ್ವಾತಂತ್ರ್ಯದ ೭೫ ನೇ ಸಂಭ್ರಮಾಚರಣೆ ಆಚರಿಸುವ ಈ ದಿನದಂದು ನಾವು ಸಾಧಿಸಿರುವುದು ಬಹಳಷ್ಟು ಸಾಧಿಸಬೇಕಿರುವುದು ಮತ್ತಷ್ಟು.
ಈ ವರ್ಷದ ಸ್ವಾತಂತ್ರ್ಯ ಸಂಭ್ರಮದ ಧ್ಯೇಯ ವಾಕ್ಯ "ದೇಶ ಮೊದಲು ,ಯಾವಾಗಲೂ ಮೊದಲು" ಹೌದು ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬಂತೆ ಭಾರತೀಯರಾದ ನಾವು ಮಾತೆಯ ಪಾದಗಳಲ್ಲಿ ವೀನೀತರಾಗಿ ವಂದಿಸಿ ಗೌರವಿಸಬೇಕು, ಅದನ್ನು ನಾವು ಮಾಡುತ್ತಲೇ ಬಂದಿದ್ದೇವೆ .ಅದರ ಫಲವಾಗಿ ನಾವೆಲ್ಲರೂ ಸೇರಿ ಅಭಿವೃದ್ಧಿಯ ತೇರನ್ನು ಎಳೆದಿದ್ದೇವೆ . ಈ ಎಪ್ಪತ್ನಾಲ್ಕು ವರ್ಷಗಳ ಸಾಧನೆಯನ್ನು ಒಮ್ಮೆ ಸಿಂಹಾವಲೋಕನ ಮಾಡಿದಾಗ ನಮ್ಮ ಬಗ್ಗೆ ನಮಗೇ ಹೆಮ್ಮೆ ಎನಿಸದಿರದು.
ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ದೂರದೃಷ್ಟಿಯ ಫಲವಾಗಿ ನೂರಾರು ಸ್ಥಳಿಯ ಸಂಸ್ಥಾನಗಳಲ್ಲಿ ಹರಿದು ಹಂಚಿಹೋಗಿದ್ದ ಭಾರತೀಯರು ಏಕೀಕರಣಗೊಂಡು ಐಕ್ಯತೆಯ ಮಂತ್ರ ಸಾರಿದೆವು ಇದು ನಮ್ಮ ಹೆಮ್ಮೆಯ ಸಾಧನೆ.
ಬರಿದಾಗಿದ್ದ ಬೊಕ್ಕಸ ಬಿಟ್ಟು ಹೋದ ಬ್ರಿಟೀಷರನ್ನು ಬೈಯುತ್ತಾ ಕುಳಿತುಕೊಳ್ಳದೇ ನಾವುಗಳು ಹೆಮ್ಮೆಯ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ .ನಮ್ಮ ಜಿ .ಡಿ. ಪಿ ಸ್ವಾತಂತ್ರ್ಯ ಬಂದಾಗ 2.7 ಲಕ್ಷ ಕೋಟಿ ಇದ್ದದ್ದು ಈಗ 135 ಲಕ್ಷ ಕೋಟಿಗೆ ಏರಿಕೆ ಕಂಡಿದೆ. ಅದರ ಪರಿಣಾಮವಾಗಿ ಇಂದು ಪ್ರಪಂಚದ ಆರನೆಯ ಅತಿದೊಡ್ಡ ಬಲಿಷ್ಠವಾದ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂಬುದಕ್ಕೆ ನಾವು ಹೆಮ್ಮೆ ಪಡಬೇಕಿದೆ.
ನಮ್ಮ ದೇಶಕ್ಕೆ ಸ್ವತಂತ್ರ ಲಭಿಸಿದ ಸಮಯದಲ್ಲಿ ದೇಶವು
ಆಹಾರದ ಕೊರತೆಯಿಂದ ಬಳಲುತ್ತಿತ್ತು ಆಗ ದೇಶದ ಆಹಾರ ಉತ್ಪಾದನೆ 50 ದಶಲಕ್ಷ ಟನ್ ಈಗ ಅದು 250 ದಶಲಕ್ಷ ಟನ್ ದಾಟಿದೆ. ವಿಜ್ಞಾನ ತಂತ್ರಜ್ಞಾನ ದ ಸಹಾಯದಿಂದ ಹಸಿರು ಕ್ರಾಂತಿ, ನೀಲಿ ಕ್ರಾಂತಿ ಮುಂತಾದ ಕ್ರಾಂತಿಗಳ ಸಹಾಯದಿಂದ ಇಂದು ಆಹಾರದಲ್ಲಿ ನಾವು ಸ್ವಾವಲಂಬನೆ ಹೊಂದಿರುವೆವು ಇದು ಬಹುದೊಡ್ಡ ಸಾಧನೆ.
ಭಾರತವೆಂದರೆ ಬರೀ ಆಮದು ಮಾಡಿಕೊಳ್ಳುವ ದೇಶವೆಂಬ ಹಣೆಪಟ್ಟಿ ಕಳಚಿ ಕೈಗಾರಿಕೀಕರಣ ದಲ್ಲಿ ಇಂದು ನಾವು ಸಾಧಿಸಿರುವ ಪ್ರಗತಿ ನಮ್ಮ ರಪ್ತನ್ನು ಹೆಚ್ಚಿಸಿ ವಿದೇಶಿ ವಿನಿಮಯ ತಂದುಕೊಟ್ಟಿದೆ ಜೊತೆಗೆ ದೇಶದ ಆರ್ಥಿಕತೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ 1975ರಲ್ಲಿ ಆರ್ಯಭಟ ಉಪಗ್ರಹ ಉಡಾವಣೆ ಮಾಡಿದ ಮೇಲೆ ಹಿಂತಿರುಗಿ ನೋಡಲೇ ಇಲ್ಲ ಏಕಕಾಲದಲ್ಲಿ ನೂರಾರು ಉಪಗ್ರಹಗಳ ಉಡಾವಣೆ ಸಾಧನೆ ,ಮಂಗಳಯಾನ, ಉದ್ದೇಶಿತ ಚಂದ್ರ ಯಾನ, ಆದಿತ್ಯ ಯಾನ ಇವುಗಳು ನಮ್ಮ ದೇಶದ ಇಸ್ರೋ ಸಾಧನೆಗಳು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತೆ ಮಾಡಿದೆ.
ಸಾರಿಗೆ ಸಂಪರ್ಕ ಕ್ಷೇತ್ರದಲ್ಲಿ ಕಳೆದೆರಡು ದಶಕದಲ್ಲಿ ಭಾರತವು ಅಭೂತಪೂರ್ವ ಸಾಧನೆ ದಾಖಲಿಸಿದೆ. 1950 ದಶಕದಲ್ಲಿ ಒಟ್ಟು 4 ಲಕ್ಷ ಕಿಲೋಮೀಟರ್ ರಸ್ತೆ ನಿರ್ಮಾಣ ಆಗಿದ್ದರೆ ಪ್ರಸ್ತುತ 6 ಲಕ್ಷ ಕಿಲೋಮೀಟರ್ ಗೂ ಹೆಚ್ಚು ರಸ್ತೆ ನಿರ್ಮಾಣ ಮಾಡಲಾಗಿದೆ. 1995 ರಲ್ಲಿ ಆರಂಭವಾದ ಮೊಬೈಲ್ ಬಳಕೆ ಇಂದು 120 ಕೋಟಿ ಜನ ಮೊಬೈಲ್ ಬಳಸುತ್ತಿದ್ದಾರೆ . ಸರಾಸರಿ ದಿನಕ್ಕೆ ಹದಿನೆಂಟು ರಿಂದ ಇಪ್ಪತ್ತು ಕಿಲೋಮೀಟರ್ ರಸ್ತೆ ನಿರ್ಮಾಣ, ಪ್ರಪಂಚದಲ್ಲೇ ಅಗ್ಗದ ಇಂಟರ್ ನೆಟ್ ಲಭ್ಯತೆಯ ಪರಿಣಾಮವಾಗಿ ಇದು ಪ್ರಾಥಮಿಕ ಮತ್ತು ದ್ವೀತಿಯ ವಲಯದ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿಗೆ ನಾಂದಿಯಾಯಿತು.
ಸಾಕ್ಷರತೆ ಮತ್ತು ಉನ್ನತ ಶಿಕ್ಷಣದಲ್ಲಿ ನಮ್ಮ ಸಾಧನೆ ಗಮನಾರ್ಹ ಸ್ವಾತಂತ್ರ್ಯ ಬಂದಾಗ ಕೇವಲ ಶೇಕಡಾ12℅ ರಷ್ಟು ಇದ್ದ ಸಾಕ್ಷರತೆ ಪ್ರಮಾಣ ಇಂದು 77% ಗೆ ಏರಿದೆ. 1950 ರಲ್ಲಿ27 ವಿಶ್ವ ವಿದ್ಯಾಲಯ ಇದ್ದವು ಪ್ರಸ್ತುತ 984 ವಿಶ್ವವಿದ್ಯಾಲಯಗಳು ಇಂದು ಭಾರತದಲ್ಲಿ ವಿದ್ಯಾದಾನ ನೀಡಿರುತ್ತಿರುವುದು ವಿದೇಶಿಯರ ಗಮನ ಸೆಳೆದಿದೆ.2020 ರ ಹೊಸ ಶಿಕ್ಷಣ ನೀತಿಯ ಮೂಲಕ ಭಾರತದ ಶಿಕ್ಷಣವನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಕೊಂಡೊಯ್ಯಲು ಯೋಜನೆ ಸಿದ್ದವಾಗಿದೆ.
ಆರೋಗ್ಯ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ನಮ್ಮದಾಗಿದೆ ವೈದ್ಯಕೀಯ ಮೂಲಸೌಕರ್ಯಗಳು ಹೆಚ್ಚಾಗಿವೆ ಅಂದು ಸರಾಸರಿ ಜೀವಿತಾವಧಿ 32 ವರ್ಷಗಳು ಈಗ ಅದು 75 ವರ್ಷಗಳಿಗೆ ಏರಿದೆ.ಕೊರೊನಾದಂತಹ ಕಾಲದಲ್ಲಿ ಲಸಿಕೆ ಕಂಡುಹಿಡಿಯುವಲ್ಲಿ ಭಾರತದ ವೈದ್ಯರು ಮತ್ತು ವಿಜ್ಞಾನಿಗಳ ಕೊಡುಗೆ ಅಪಾರ.
ಕ್ರೀಡಾಕ್ಷೇತ್ರದಲ್ಲಿ ಭಾರತವು ಎಲ್ಲಾ ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ. ಅದಕ್ಕೆ ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ ಕ್ರೀಡೆಗಳಲ್ಲಿ ನಮ್ಮ ದೇಶದ ಸಾಧನೆ ಉತ್ತಮವಾಗಿರುವುದು ನಮಗೆ ಸಂತಸ ತಂದಿದೆ.
ಇನ್ನೂ ಅನೇಕ ಕ್ಷೇತ್ರದಲ್ಲಿ ಭಾರತದ ಸಾಧನೆ ನಮಗೆ ಹೆಮ್ಮೆ ತಂದಿದೆ.
ಇದರ ಜೊತೆಗೆ ನಾವು ಹಲವು ಕ್ಷೇತ್ರದಲ್ಲಿ ಹಿನ್ನೆಡೆ ಅನುಭವಿಸುತ್ತಿರುವುದನ್ನು ಅಲ್ಲಗಳೆಯಲಾಗುವುದಿಲ್ಲ . ಆರ್ಥಿಕ ಅಸಮಾನತೆ, ನಿರುದ್ಯೋಗ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಜಾತಿ ಪದ್ದತಿ, ಕೋಮುವಾದ, ಆಂತರಿಕ ಕಚ್ಚಾಟ, ಇವುಗಳು ಶೀಘ್ರವಾಗಿ ತೊಲಗಬೇಕಿದೆ .ಈ ಅನಿಷ್ಟಗಳಿಂದ ಮುಕ್ತರಾಗಿ ಈಗ ಆಗಿರುವ ಪ್ರಗತಿಯ ಜೊತೆಗೆ ಇನ್ನೂ ಮುಂದೆ ಸಾಗಿ ಭಾರತಾಂಬೆಯ ಮೊಗದಲ್ಲಿ ಮಂದಹಾಸ ಮೂಡಿಸಬೇಕಿದೆ. ಸ್ವಾತಂತ್ರ್ಯ ಗಳಿಸಿದ ಎಪ್ಪತ್ತೈದು ವರ್ಷಗಳ ಅಮೃತ ಮಹೋತ್ಸವ ಆಚರಣೆಯ ಈ ಪರ್ವ ಕಾಲದಲ್ಲಿ ಏಕತೆ, ದೇಶಭಕ್ತಿ, ಮೌಲ್ಯಗಳು, ಮುಂತಾದ ಸುವಿಚಾರಗಳು ಅಮೃತವಾಹಿನಿಯಂತೆ ಭಾರತೀಯ ಎದೆಯಿಂದ ಎದೆಗೆ ಹರಿಯುತಿರಲಿ ಸತತ.
*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
No comments:
Post a Comment