26 August 2021

ಸಿಹಿಜೀವಿಯ ಬಾಳಿನ ಏಳು ಬೀಳುಗಳು .


 


ಸಿಹಿಜೀವಿಯ ಜೀವನದ  ಏಳು ಬೀಳುಗಳು
ಸಾಮಾನ್ಯ ಬಡ ಕುಟುಂಬದಿಂದ ಬಂದ ನಾನು ಹುಟ್ಟಿದ ಐದು ವರ್ಷಕ್ಕೆ ಅಪ್ಪ ಹಾವು ಕಡಿದು ತೀರಿಕೊಂಡರು . ಅಮ್ಮನ ನೆರಳಲ್ಲಿ ಬೆಳೆದ ನಾನು ಶಾಲೆಗೆ ಹೋಗುತ್ತಾ ರಜಾದಿನಗಳಲ್ಲಿ  ಅಮ್ಮನ ಜೊತೆಯಲ್ಲಿ  ಈರುಳ್ಳಿ ಕೊಯ್ಯುವ,  ಹತ್ತಿ ಬಿಡಿಸುವ , ರಾಗಿ ಹೊಲ ಕೊಯ್ಯುವ, ರಸ್ತೆ ಕಾಮಗಾರಿ,  ಬಾವಿ ಮಣ್ಣು ಹೊರುವ ಕೂಲಿ ಕೆಲಸ  ಕೆಲಸ ಮಾಡುತ್ತಾ ಬೆಳೆವನು

್ರಾಥಮಿಕ ಶಾಲಾ ಹಂತದಲ್ಲೇ ಓದಿನಲ್ಲಿ ಮುಂದಿದ್ದ ನನ್ನನ್ನು ನಮ್ಮ ತಿಪ್ಪೇಸ್ವಾಮಿ ಶಿಕ್ಷಕರು ಶಾಲಾ ಮಾನಿಟರ್ ಮಾಡಿದ್ದರು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು .ಎಷ್ಟೋ ಬಾರಿ ನಮ್ಮ ಶಿಕ್ಷಕರು ರಜೆ ಮೇಲೆ ತರಳಿದಾಗ ನಾನೇ ಇಡೀ ನಾಲ್ಕು ತರಗತಿಗಳನ್ನು ಆ ಚಿಕ್ಕ ವಯಸ್ಸಿನಲ್ಲಿಯೇ ನಿಭಾಯಿಸಿದ್ದನ್ನು ನೆನದು ಈಗಲೂ ನನ್ನ ಬಗ್ಗೆ ನನಗೇ ಹೆಮ್ಮೆ ಆಗುತ್ತದೆ.

ಐದನೆಯ ತರಗತಿಗೆ ನಮ್ಮ ಚೌಡಗೊಂಡನಹಳ್ಳಿ ಗ್ರಾಮದಿಂದ  ಎರಡು ಕಿಲೋಮೀಟರ್ ದೂರದ ಉಪ್ಪರಿಗೇನಹಳ್ಳಿ ಗ್ರಾಮಕ್ಕೆ ಹೋಗಬೇಕಾಯಿತು .ಪ್ರತಿದಿನ ನಮ್ಮ ಪುಸ್ತಕಗಳನ್ನು ಹೊತ್ತುಕೊಂಡು ಕೈಚೀಲಗಳಿಲ್ಲದೇ ಒಂದು ಎಲೆಸ್ಟಿಕ್ ಕಟ್ಟಿಕೊಂಡು ಹೆಗಲಮೇಲೆ ಹೊತ್ತು ಮತ್ತೊಂದು ಕೈಯಲ್ಲಿ ಅಮ್ಮ ನೀಡಿದ ಮುದ್ದೆ ಸಾರು ಇರುವ ಟಿಪನ್ ಕ್ಯಾರಿಯರ್ ಹಿಡಿದು ದಿನವೂ  ನಾಲ್ಕು ಕಿಲೋಮೀಟರ್ ದೂರವನ್ನು ಕಾಲಲ್ಲಿ ಚಪ್ಪಲಿಯೂ ಇಲ್ಲದೆ ನಡೆದುಕೊಂಡು ಹೋಗಿ ವಿದ್ಯಾಭ್ಯಾಸ ಮುಂದುವರೆಸಿದೆನು.

ನಾನು ಒಂಭತ್ತನೆಯ ತರಗತಿ ಪಾಸಾಗಿ ಬೇಸಿಗೆ ರಜೆಯಲ್ಲಿ ಅಮ್ಮನ ಜೊತೆಗೆ ನಮ್ಮೂರಿಂದ ನೂರೈವತ್ತು ಕಿಲೋಮೀಟರ್ ದೂರದಲ್ಲಿರುವ ಶಿವಮೊಗ್ಗ ಕ್ಕೆ ಭತ್ತ ಕೊಯ್ಯುವ ಮತ್ತು ಬಡಿಯಲು ಕೂಲಿ ಹೋಗಿದ್ದೆ. ಅಲ್ಲಿ ನಾಯಿಗೂಡಿಗೂ ಕಡೆಯಾದ ಮನೆಗಳಲ್ಲಿ ಸೊಳ್ಳೆಗಳ ಕಾಟ ಸಹಿಸಿಕೊಂಡು ಕಷ್ಟ ಪಟ್ಟು ದುಡಿದರೂ ಮೆಸ್ತ್ರಿಯ ಮೋಸದಿಂದ ಮಾಡಿದ ಶ್ರಮಕ್ಕೆ ಸರಿಯಾದ ಕೂಲಿ ಸಿಗದೇ ಹುಟ್ಟೂರಿಗೆ ಬೇಸರದಿಂದ ಹಿಂತಿರುಗಿದ್ದೆ.

ಕಷ್ಟಗಳು ಒಟ್ಟಿಗೆ ಬರುತ್ತವಂತೆ , ಒಮ್ಮೆ ಜ್ವರ ಎಂದು ಅಮ್ಮ ನನ್ನ ಹೊರ ಕೆರೆ ದೇವ ಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಯಾವುದೋ ಪರೀಕ್ಷೆ ಮಾಡಿ ನಿಮ್ಮ ಮಗನಿಗೆ ಟಿ ಬಿ ಇದೆ ಎಂದರು . ಹಾಗಂದರೆ ಏನು ಎಂದು ನನಗೂ ನನ್ನ ಅಮ್ಮನಿಗೆ ತಿಳಿಯಲಿಲ್ಲ ,ಡಾಕ್ಟರ್ ಆ ಖಾಯಿಲೆಯ ಬಗ್ಗೆ ವಿವರಿಸಿದಾಗ ಅಮ್ಮನ ಕಣ್ಣಲ್ಲಿ ಧಾರಾಕಾರವಾಗಿ ನೀರು ಹರಿಯಿತು. ಡಾಕ್ಟರ್ ಅಮ್ಮನ ಸಮಾಧಾನ ಮಾಡಿ ಪ್ರತಿ ದಿನ ಇವನಿಗೆ ಮೂರು ತಿಂಗಳ ಕಾಲ ದಿನಕ್ಕೆ ಒಂದು  ಇಂಜೆಕ್ಷನ್ ಮತ್ತು ಮಾತ್ರೆ ಕೊಡುವೆ ಎಂದರು.
ದಿನವೂ ಉಪ್ಪೇರಿಗೇನಹಳ್ಳಿಗೆ ಶಾಲೆ ಗೆ ತರಳಿ ಎರಡು ಪಿರೀಯಡ್ ಪಾಠ  ಮುಗಿಸಿಕೊಂಡು ಶಿಕ್ಷಕರ ಅನುಮತಿ ಪಡೆದು ಬಸ್ ಏರಿ ಹೊರ ಕರೆ ದೇವ ಪುರದ ಆಸ್ಪತ್ರೆಗೆ ತೆರಳಿ ಇಂಜೆಕ್ಷನ್ ಪಡೆದು ಮತ್ತೆ ಶಾಲೆಗೆ ಬಂದು ಸಂಜೆ ನಡೆದುಕೊಂಡು ನಮ್ಮ ಊರು ತಲುಪುತ್ತಿದ್ದೆ.

ಹೀಗೆ ಮೂರು ತಿಂಗಳ ನಂತರ ಪುನಃ ಪರೀಕ್ಷೆ ಮಾಡಿದ ಡಾಕ್ಟರ್ ನಾನು ಟಿ ಬಿ ರೋಗದಿಂದ ಸಂಪೂರ್ಣವಾಗಿ ಗುಣಮುಖ ಆಗಿರುವುದನ್ನು ಅಮ್ಮನಿಗೆ ಹೇಳಿದರು ಅಮ್ಮ ಮತ್ತೆ ಅತ್ತರು ಈ ಬಾರಿ ಸಂತೋಷದಿಂದ .ಅಲ್ಲೇ ಎಲ್ಲರಿಗೂ ಕೇಳುವಂತೆ ಚೌಡವ್ವ, ತಿಮ್ಮಪ್ಪ ನೀವು ದೊಡ್ಡೋರು ಕಣಪ್ಪ ಎಂದು ಆಕಾಶ ನೋಡಿ ಕೈಮುಗಿದರು.

ಎಸ್ಸೆಸ್ಸೆಲ್ಲಿ ಓದಲು ಅಮ್ಮ ಯರಬಳ್ಳಿಯ ಮಾವನವರ ಮನೆಗೆ ಕಳಿಸಿದರು. ಬೆಳಿಗ್ಗೆ ಎದ್ದು ಎತ್ತು ಎಮ್ಮೆಗಳ ಸಗಣಿ ಬಾಚಿ . ಕೈಕಾಲು ಮುಖತೊಳೆದುಕೊಂಡು ಎಂಟು ಗಂಟೆಗೆ ಕಾಲೇಜಿಗೆ ಹೋಗಿ ,ಹನ್ನೊಂದು ಗಂಟೆಗೆ ಮನೆಗೆ ಬಂದು ಊಟ ಮಾಡಿ  ಎಮ್ಮೆ ಮೇಯಿಸಲು ಹೊಲ ಕ್ಕೆ ಹೋಗಿ ಅಲ್ಲೇ ಹೋಮ್ ವರ್ಕ್ ಮಾಡುತ್ತಾ ಓದುತ್ತಿದ್ದೆ  .ಹೀಗೇ ಎಮ್ಮೆ ಮೇಯಿಸುತ್ತಾ ಪರೀಕ್ಷೆ ಬರೆದ ನಾನು ಇಡೀ ಕಾಲೇಜಿಗೆ ಅತೀ ಹೆಚ್ಚು ಅಂಕ ಪಡೆದು ಫಸ್ಟ್ ಕ್ಲಾಸ್ ನಲ್ಲಿ ಪಿ ಯು ಸಿ ಪಾಸದ ನಾನು ಅಕ್ಕ ಪಕ್ಕದ ಹಳ್ಳಿಯವರ ಬಾಯಲ್ಲಿ ಹೊಗಳಿಸಿಕೊಂಡು ಒಳಗೊಳಗೇ ಖುಷಿ ಪಟ್ಟೆ .

ಶಿಕ್ಷಕನಾಗಬೇಕೆಂದು ಟಿ ಸಿ ಎಚ್ ಕಾಲೇಜು ಸೇರಿದೆ ಆರು ತಿಂಗಳಾದ ಮೇಲೆ ತಿಳಿಯಿತು ಅದು ಅನಧಿಕೃತವಾದ ಕಾಲೇಜ್ ಎಂದು .ಪರೀಕ್ಷೆ ಬರೆಯಲು ಸರ್ಕಾರ ಒಪ್ಪದಾದಾಗ ನನ್ನ ಗೆಳೆಯರ ಜೊತೆಯಲ್ಲಿ ವಿಧಾನಸೌಧದ ಮುಂಬಾಗ ಸತ್ಯಾಗ್ರಹ ಮಾಡಿದೆವು ಸರ್ಕಾರದವರ ಮನ ಕರಗಲಿಲ್ಲ. ಅಷ್ಟೂ ಜನ ಸ್ನೇಹಿತರು ಅಲ್ಲೇ ಕಣ್ಣಿನಲ್ಲಿ ನೀರು ಇಂಗುವವರೆಗೆ ಅತ್ತು, ನಮ್ಮ ಊರಿಗೆ ಹಿಂತಿರುಗಿದೆವು.

ಸುದೀರ್ಘ ಕಾನೂನು ಹೋರಾಟದ ಮೂಲಕ ಹೈಕೋರ್ಟ್ ನಮ್ಮ ಟಿ ಸಿ ಹೆಚ್ ಪರೀಕ್ಷೆ ಬರೆಯಲು ಅನುಮತಿ ನೀಡಿತು.
ಟಿ ಸಿ ಹೆಚ್ ಮುಗಿಸಿ 1999 ರಲ್ಲಿ ಸರ್ಕಾರಿ  ಪ್ರಾಥಮಿಕ ಶಿಕ್ಷಕನಾಗಿ ಹುಚ್ಚವ್ವನಹಳ್ಳಿಯಲ್ಲಿ ಕೆಲಸಕ್ಕೆ ಸೇರಿದೆ.
ಮೊದಲ ತಿಂಗಳ ಸಂಬಳದಲ್ಲಿ ಅಮ್ಮನಿಗೆ ಸೀರೆ ಕೊಡಿಸಿದೆ ಅಮ್ಮ ಅಂದೂ ಅತ್ತರು.

ಪ್ರಸ್ತುತ ಪ್ರೌಢಶಾಲಾ ಶಿಕ್ಷಕನಾಗಿ ಕೆಲಸ ಮಾಡುತ್ತಿರುವೆ. ಈ ೨೧ ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಸಂತೃಪ್ತಿ ಇದೆ. ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ಲಭಿಸಿದೆ . ಹಲವು ಸಂಘಸಂಸ್ಥೆಗಳು ನನ್ನ ಕಿರು ಸಾಧನೆಯ ಗುರ್ತಿಸಿ  ರಾಜ್ಯ ಮಟ್ಟದ ಸಾಹಿತ್ಯ ಪುರಸ್ಕಾರ ನೀಡಿವೆ.
ಸಾಹಿತ್ಯದ ಆಸಕ್ತಿ ಕ್ರಮೇಣವಾಗಿ ಬೆಳೆದು , ಕಥೆ, ಕವನ ,ಗಜಲ್ ಹನಿಗವನ ,ಕಾದಂಬರಿ , ಹೀಗೆ ವಿವಿಧ ಪ್ರಕಾರಗಳಲ್ಲಿ  ಬರೆಯುತ್ತಿರುವೆ.
ಈಗಾಗಲೆ ಮೂರು ಪುಸ್ತಕ ಪ್ರಕಟಮಾಡಿರುವೆ .ಇನ್ನೂ ಬರೆಯುತ್ತಾ ಇರುವೆ.
ಮಡದಿ ,ಇಬ್ಬರು ಹೆಣ್ಣು ಮಕ್ಕಳು ತಾಯಿಯೊಂದಿಗೆ  ಸಂತಸದಿಂದ ಜೀವನ ಸಾಗಿಸುತ್ತಿರುವೆ. ಇದಕ್ಕೆ ನನ್ನ ಅಣ್ಣ ಮತ್ತು ಕುಟುಂಬದ ಬೆಂಬಲ ಸಹಕಾರ ಮರೆಯಲಾರೆ .
ನಲವತ್ತಾರು ವಸಂತಗಳನ್ನು ಪೂರೈಸಿರುವ ನಾನು ಜೀವನದಲ್ಲಿ ಹಲವಾರುಏಳು ೀಳುಗಳಿಗೆ ಸಾಕ್ಷಿಯಾಗಿರುವೆ.  ಕಷ್ಟಗಳು ಬಂದಾಗ ಕುಗ್ಗದೇ ಸುಖಬಂದಾಗ ಹಿಗ್ಗದೆ ಸ್ಥಿತಪ್ರಜ್ಞ ನಾಗಲು ಪ್ರಯತ್ನ ಮಾಡುತ್ತಿರುವೆ.ಮುಂದಿನ ಜೀವನ ಬಂದಂತೆ ಸ್ವೀಕರಿಸಲು ಮಾಗುತ್ತಿದ್ದೇನೆ ..

*ಸಿಹಿಜೀವಿ
ಸಿ ಜಿ ವೆಂಕಟೇಶ್ವರ

2 comments:

Anonymous said...

ಜೀವನದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಏರಿಳಿತ ಸಾಮಾನ್ಯವಾಗಿದ್ದು ಪುರಂದರದಾಸರು ಕೀರ್ತನೆಯಲ್ಲಿ ಪ್ರಸ್ತಾಪಿಸಿದ್ದಾರೆ ಈಜಬೇಕು ಇದ್ದು ಜೈಸಬೇಕು ನೆನೆದು ಹಿಂದಿನ ನೆನಪು ಮುಂದಿನ ಕನಸು ಕಾಣುತ್ತಾ ಈಗಿನ ಬದುಕು ಸವಿಯಿರಿ ಎಂಬ ಆಶಯ ನೀ ಮ್ಮದಾಗಲಿ

C g VENKATESHWARA said...

ನಿಮ್ಮ ಪ್ರತಿಕ್ರಿಯೆಯಾಗಿ ಧನ್ಯವಾದಗಳು🙏🙏