07 August 2021

ಸಣ್ಣ ಖುಷಿಗಳನ್ನು ಎಂಜಾಯ್ ಮಾಡೋಣ. ಲೇಖನ


 


ಜೀವನದ ಸಣ್ಣ ಸಣ್ಣ ಖುಷಿಗಳನ್ನು ಅನುಭವಿಸಿ ಎಂಜಾಯ್ ಮಾಡುವುದರಲ್ಲೇ ಇದೆ ಸಂತಸದ ಗುಟ್ಟು.

ಇದಕ್ಕೆ ಹಣ ಬೇಕಿಲ್ಲ, ಅಂತಸ್ತು ಬೇಕಿಲ್ಲ ಸ್ವಚ್ಛ ಮತ್ತು ಮುಕ್ತ ಮನಸ್ಸು, ವಿಶಾಲ ಮನೋಭಾವ ಮಗುವಿನ ಮುಗ್ದತೆ ಇದ್ದರೆ ಅಷ್ಟೇ ಸಾಕು.


 ಮೊದಲು ನಾವು ನಮ್ಮಲ್ಲಿ ಮತ್ತು ನಮ್ಮ ಸುತ್ತ ಮುತ್ತ ಇರುವ ಪ್ರತಿಯೊಂದು ವಸ್ತುಗಳು ಮತ್ತು ವ್ಯಕ್ತಿಗಳು ಪ್ರಾಣಿಗಳನ್ನು ಪರಿಸರವನ್ನು ಗಮನವಿಟ್ಟು ನೋಡುವ , ಪ್ರಕೃತಿ ಸೌಂದರ್ಯ ಸವಿಯುವ ಮನೋಭಾವವನ್ನು ಬೆಳಿಸಿಕೊಳ್ಳಬೇಕು.


ಮನೆಯಲ್ಲಿ ಮಡದಿ ರುಚಿಕರ ಅಡಿಗೆ ಮಾಡಿದರೆ ಬಾಯಿ ಚಪ್ಪರಿಸಿ ತಿಂದು ಆ ಸಮಯದಲ್ಲಿ ಸಂತಸದಿಂದ ಅನುಭವಿಸಿ ಮಡದಿಗೆ ಒಂದು ಮೆಚ್ಚುಗೆ ನುಡಿ ಆಡಿದರೆ ನಮಗೂ ಖುಷಿ ಅವರಿಗೂ ಖುಷಿ.


ಮಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮನೆಗೆ ಬಂದಾಗ ಅವಳ ಸಂಭ್ರಮ ವರ್ಣಿಸಲಸದಳ ಅವಳ ಆ ಕ್ಷಣದ ಸಂತಸದಲ್ಲಿ ನಾವೂ ಭಾಗಿಯಾಗೋಣ. ಯಾವುದೋ ಕ್ರೀಡಾಸ್ಪರ್ಧೆಯಲ್ಲಿ  ಬಹುಮಾನ ಬಂದಾಗ ಕೆಲವೊಮ್ಮೆ ಕೆಲವರು ಕುಣಿದು ಕುಪ್ಪಳಿಸುವುದನ್ನು ನೋಡಿದ್ದೇವೆ .ಹೌದು ಆ ಸಂಭ್ರಮ ಆ ಕ್ಷಣದಲ್ಲಿ ಅನುಭವಿಸಬೇಕು, ಅದು ಬಿಟ್ಟು ಮೂರು ದಿನ ಆದ ಮೇಲೆ ಸೆಲೆಬ್ರೇಟ್ ಮಾಡ್ತೀನಿ , ನಾನು ರಿಟೈರ್ಡ್ ಆದ ಮೇಲೆ ಖುಷಿ ಪಡ್ತೀನಿ, ಇನ್ನೂ ದೊಡ್ಡ ಸ್ಪರ್ಧೆಯಲ್ಲಿ ಗೆದ್ದ ಮೇಲೆ ಎಂಜಾಯ್ ಮಾಡ್ತೀನಿ ಅನ್ನೋ ಮನೋಭಾವ ಸರಿಯಲ್ಲ.


ಮಕ್ಕಳಿಗೆ ಒಂದು ಚಾಕೊಲೇಟ್ ನೀಡಿದರೆ ಅವರು ಅದನ್ನು ಆ ಕ್ಷಣದಲ್ಲಿ ಬಾಯಲ್ಲಿ ಚೀಪುತ್ತಾ ,ಕಣ್ಮುಚ್ಚಿ, ಎಂಜಾಯ್ ಮಾಡ್ತಾ , ಹು....ಎಮ್ಮಿ...... ಸೂಪರ್ ಎಂದು ಸಿಹಿಕಹಿ ಚಂದ್ರು ವರ್ಣಿಸುವ ರೀತಿಯಲ್ಲಿ ಖುಷಿ ಖುಷಿಯಾಗಿ ತಿನ್ನುತ್ತಾರೆ .ದೊಡ್ಡವರಾದ ನಮಗೆ ಚಾಕೊಲೇಟ್ ನೀಡಿದರೆ ಎರಡೇ ಬಾರಿಗೆ ಕಟುಂ ... ಎಂದು ಕಡಿದು ಉದರಕ್ಕೆ ಇಳಿಸಿ ಏನೂ ಆಗಿಲ್ಲವೆಂಬಂತೆ ಎದ್ದು ಹೋಗುತ್ತೇವೆ.


ಈ ಬದುಕು ಅನಿಶ್ಚಿತ ಎಂಬುದು ಎಷ್ಟು ಸತ್ಯವೊ ,ಈ ಬದುಕು ಸೌಂದರ್ಯಮಯ ಎಂಬುದು ಅಷ್ಟೇ ಸತ್ಯ. ದಿನನಿತ್ಯದ ಜೀವನದಲ್ಲಿ ನಮಗೆ ಹಲವಾರು ಸವಾಲುಗಳು ಎದುರಾಗುತ್ತವೆ ಅವುಗಳ ನಡುವೆ ಹಲವಾರು ಸಂತಸದ ಕ್ಷಣಗಳು ಸಹಾ ಇರುತ್ತವೆ ಅವು ಚಿಕ್ಕ ಪುಟ್ಟ ಸಂತೋಷಗಳಾದರೂ ಅನುಭವಿಸೋಣ.


ಕೆಲವರು ಯಾವಾಗಲೂ ಹರಳೆಣ್ಣೆ ಕುಡಿದವರಂತೆ ,ಇನ್ನೂ ಕೆಲವರು ದೂರ್ವಾಸ ಮುನಿಗಳ ಅಪರಾವತಾರದಂತೆ ಮುಖ ಗಂಟು ಹಾಕಿಕೊಂಡೇ ಇರುವರು ಇಂತವರಿಗೇ ಸಣ್ಣ ಪುಟ್ಟ ಸಂಭ್ರಮದ ಕ್ಷಣಗಳಲ್ಲಿ ನಂಬಿಕೆ ಇರುವುದಿಲ್ಲ.ಮತ್ತೂ ಕೆಲವರು ಅತಿಯಾಸೆಯ ಭೂಪರು ಇವರಿಗೆ ಕೋಟಿ ಲಾಟರಿ ಹೊಡೆದರೂ  ಸಂತಸ ಪಡೆದೆ  ನೂರು ಕೋಟಿ ಯಾಕೆ ಬರಲಿಲ್ಲ ಎಂದು ಕರುಬುವರು, ಇನ್ನೂ ಕೆಲವರು ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿಗಳು ಇವರು ಸ್ನೇಹಿತರು ಬಂಧಗಳು ವಿಶೇಷವಾದ ಸಾಧನೆ ಮಾಡಿದ ಸಂಧರ್ಭದಲ್ಲಿ ಸಂತಸ ಪಡದೆ ಕೊರಗುತ್ತಾ ಕಾಲ ಕಳೆಯುವವರು.ನಾವು ಸಂತಸದಿಂದ ಇರಬೇಕಾದರೆ ಇಂತವರಿಂದ ದೂರವಿರುವುದೇ ಒಳ್ಳೆಯದು.


ನಾವು ಎಷ್ಟು ದಿನ ಬದುಕಿರುತ್ತೇವೆಯೋ ತಿಳಿದಿಲ್ಲ ಆದರೆ ಇರುವಷ್ಟು ದಿನ ಜೀವನದ ಪ್ರತಿ ಕ್ಷಣ ಸಣ್ಣ ಸಣ್ಣ       ಖುಷಿಗಳನ್ನು ಎಂಜಾಯ್ ಮಾಡುತ್ತಾ, ಸಂತಸ ಪಡೆಯುತ್ತಾ ಸಂತಸ  ಹಂಚುತ್ತಾ ಸಂತಸದಿಂದ ಬಾಳೋಣ . 


ನೀವೇನಂತೀರಾ?


ಸಿಹಿಜೀವಿ

ಸಿ ಜಿ ವೆಂಕಟೇಶ್ವರ





https://kannada.pratilipi.com/story/%E0%B2%B8%E0%B2%A3%E0%B3%8D%E0%B2%A3-%E0%B2%96%E0%B3%81%E0%B2%B7%E0%B2%BF%E0%B2%97%E0%B2%B3%E0%B2%A8%E0%B3%8D%E0%B2%A8%E0%B3%82-%E0%B2%8E%E0%B2%82%E0%B2%9C%E0%B2%BE%E0%B2%AF%E0%B3%8D-%E0%B2%AE%E0%B2%BE%E0%B2%A1%E0%B3%8B%E0%B2%A3-voqrldgphplc?utm_source=android&utm_campaign=content_share
*ಸಣ್ಣ ಖುಷಿಗಳನ್ನೂ ಎಂಜಾಯ್ ಮಾಡೋಣ*

No comments: