25 August 2021

ಸಿಹಿಜೀವಿಗಳು ಮತ್ತು ಭಾವಗೀತೆ


 


ಸಿಹಿಜೀವಿ ಮತ್ತು ಭಾವಗೀತೆ 


ಭಾವಗೀತೆಗಳು ನಮ್ಮ ಭಾವನೆಗಳನ್ನು ಕೆದಕಿ ಕವಿಯ ಭಾವಗಳನ್ನು ಸವಿಯಲು ಸೃಷ್ಟಿಸಿರುವ ಸೃಜನಶೀಲ ರಚನೆಗಳು .


ಕುವೆಂಪು ಆದಿಯಾಗಿ ದ ರಾ ಬೇಂದ್ರೆ, ಜಿ ಎಸ್ ಶಿವರುದ್ರಪ್ಪ, ಎಚ್ ಎಸ್ ವೆಂಕಟೇಶ ಮೂರ್ತಿ , ಬಿ ಆರ್ ಲಕ್ಷ್ಮಣ ರಾವ್ ಮುಂತಾದವರ ಭಾವಗೀತೆಗಳು ನಮ್ಮ ಭಾವನೆಗಳನ್ನು ಬಡಿದೆಬ್ಬಿಸಿವೆ .ನಾವು ಅವುಗಳನ್ನು ಇಂದಿಗೂ ಆಸ್ವಾದಿಸುತ್ತಿರುವೆವು.

ಭಾವಗೀತೆಗಳು ಧ್ವನಿಮುದ್ರಣ ರೂಪದಲ್ಲಿ ಎಲ್ಲರ ತಲುಪುವಲ್ಲಿ ಸಂಗೀತ ಸಂಯೋಜಕರ ಮತ್ತು ಗಾಯಕರ ಪಾತ್ರ ಹಿರಿದು. ಪಿ ಕಾಳಿಂಗರಾಯರಿಂದ ಹಿಡಿದು ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ, ಜಿ ವಿ ಅತ್ರಿ, ಸಿ ಅಶ್ವಥ್, ಶಿವಮೊಗ್ಗ ಸುಬ್ಬಣ್ಣ, ಬಿ ಆರ್ ಛಾಯ, ಇತ್ಯಾದಿ ಗಾಯಕ ಗಾಯಕಿಯರು ನಮಗೆ ಭಾವಗೀತೆಗಳನ್ನು ನಮ್ಮ ಕರ್ಣಗಳಿಗೆ ತಲುಪಿಸುರುವರು.

ಮನವು ಬೇಸರದಲ್ಲಿದ್ದಾಗ ಔಷಧದಂತೆ, ಸಂತೈಸುವ ಗೆಳೆಯ ಅಥವಾ ಗೆಳತಿಯಂತೆ, ತಲೆ ನೇವರಿಸಿ ಸಾಂತ್ವನ ಹೇಳುವ ತಂದೆ ತಾಯಿಯಂತೆ ಭಾವಗೀತೆಗಳು ಮನಕ್ಕೆ ಮುದ ನೀಡುತ್ತವೆ.


ನಿಸಾರ್ ಅಹಮದ್ ರವರ "ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ...." ಗೀತೆ ಕೇಳುತ್ತಿದ್ದರೆ ನಮ್ಮ ನಾಡಿನ ಸೊಭಗು ಕಣ್ಮುಂದೆ ಬಂದು ನಮ್ಮ ನಾಡಗುಡಿಯ ಬಗ್ಗೆ ಅಭಿಮಾನ ಮೂಡದಿರದು.


ಬೇಂದ್ರೆ ಅಜ್ಜನವರ 

"ನೀ ಹೀಂಗ ನೋಡಬ್ಯಾಡ...ನನ್ನ .." ಗೀತೆ ಕೇಳುತ್ತಿದ್ದರೆ ಎಂತಹ ಕಟುಕರ  ಕಣ್ಣಲ್ಲೂ ನಾಲ್ಕು ಹನಿ ಉದುರದೇ ಇರದು.


ಪ್ರೇಮಕವಿ ಜಿ ಎಸ್ ಎಸ್ ರವರ. ಎಲ್ಲಾ ಹಾಡುಗಳು ಕೇಳುಗರ ಕಿವಿಗೆ ಹಬ್ಬ ." ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ "...ಯಿಂದ ಹಿಡಿದು... "ಬಳೆಗಾರ ಚೆನ್ನಯ ಬಾಗಿಲಿಗೆ ಬಂದಿಹನು...." ರಾಯರು ಬಂದರು ಮಾವನ ಮನೆಗೆ ರಾತ್ರಿ ಆಗಿತ್ತು.... "   "ಕಾಣದ ಕಡಲಿಗೆ ಹಂಬಲಿಸಿದೇ ಮನ ...." ಇತ್ಯಾದಿ ಗೀತೆಗಳು ಶ್ರೋತೃಗಳನ್ನು ಯಾವುದೋ ಲೋಕಕ್ಕೆ ಕರೆದೊಯ್ಯುತ್ತವೆ .


ಸುಬ್ರಾಯ ಚೊಕ್ಕಾಡಿ ರವರ "ಮುನಿಸು ತರವೇ ಮುಗುದೇ ... ಹಾಡು ಮುನಿದ ನಲ್ಲೆಯ ಸಮಾಧಾನ ಮಾಡುವ ಪರಿ ಯಾರಿಗೆ ಇಷ್ಟ ಆಗಲ್ಲ ಹೇಳಿ? 

 ರಾಷ್ಟ್ರ ಕವಿ ಕುವೆಂಪು ರವರ 

"ಬಾರಿಸು ಕನ್ನಡ ಡಿಂಡಿಮ.. " ಕೇಳುತ್ತಿದ್ದರೆ ನಮ್ಮ  ನಾಡಿನ ಬಗ್ಗೆ ಅಭಿಮಾನ ಮೂಡದೆ ಇರದು.


ಚೆನ್ನವೀರ ಕಣವಿಯವರ "ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ" ಹಾಡು ಕೇಳುತ್ತಾ ಹಾಗೆ ಯಾರೋ ತಟ್ಟಿ ಮಲಗಿಸಿದರೇನೊ ಎಂಬ ಭಾವ ಮೂಡುವುದು.


ಸತ್ಯಾನಂದ ಪತ್ರೋಟ ರವರ "ಬಡವನಾದರೆ ಏನು ಪ್ರಿಯೆ.. ಕೈತುತ್ತು ಉಣಿಸುವೆ" ಗೀತೆಯು ಯುವ ಪ್ರೇಮಿಗಳ ಮನದಲ್ಲಿ ಇಂದಿಗೂ ರಿಂಗಣಿಸುತ್ತಿರುವುದು ಸುಳ್ಳಲ್ಲ.


ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಲೇ ಹೋಗುತ್ತದೆ.ಭಾವಗೀತೆಗಳೇ ಹಾಗೆ ಭಾವನೆಗಳಿಗೆ ಬೆಲೆ ಕೊಡುವ ಜೀವಿಗಳು ಪದೇ ಪದೇ ಕೇಳುವಂತೆ, ಕಾಡುತ್ತವೆ ಮೋಡಿಮಾಡುತ್ತವೆ  .


ಬನ್ನಿ ಭಾವಗೀತೆಗಳ ಭಾವನೆಗಳು ನಮ್ಮ ಭಾವನೆಗಳೊಂದಿಗೆ ಸೇರಿಸಿ ಕೇಳುತ್ತಾ ಇಂತಹ ಅದ್ಬುತ ಗೀತೆಗಳನ್ನು ರಚಿಸಿದ ಕವಿಮನಗಳಿಗೆ, ಸಂಗೀತ ಸಂಯೋಜಕರಿಗೆ ಗಾಯಕರಿಗೆ ಧನ್ಯವಾದಗಳ ಸಮರ್ಪಿಸಿ, ಸಂತಸಗೊಂಡು ಸಂತಸವ ಹಂಚಿ ಸಂತಸದಿಂದ ಬಾಳೋಣ 


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


No comments: