28 August 2021

ಸಂತನೊಂದಿಗೆ ಸಿಹಿಜೀವಿಯ ನಾಲ್ಕು ಮಾತು .ವಿಮರ್ಶೆ

 


"ಸಂತನೊಂದಿಗೆ  ಸಿಹಿಜೀವಿಯ ನಾಲ್ಕು ಮಾತುಗಳು"

  ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ  ಧನಸಹಾಯ ಪಡೆದ
ಶ್ರೀಮತಿ ವಾಣಿ ಭಂಡಾರಿ ಮೇಡಂರವರ ಮೊದಲ ಗಜಲ್ ಸಂಕಲನದ ಬಗ್ಗೆ ಸಿಹಿಜೀವಿಯ ನಾಲ್ಕು ಮಾತುಗಳು . ಕನ್ನಡ ಉಪನ್ಯಾಸಕರು, ಕವಿಗಳು ,ಅಂಕಣಕಾರರು, ಗಜಲ್ ಕಾರರು , ಗಾಯಕರು ಈಗೆ ಬಹುಮುಖ ಪ್ರತಿಭೆಯಾದ ವಾಣಿ ಭಂಡಾರಿ ರವರು   ಏಳನೇ ತರಗತಿಯಿಂದಲೇ ಸಾಹಿತ್ಯ ಆಸಕ್ತಿಯನ್ನು ಹೊಂದಿ   ಸಾಹಿತ್ಯ ಚಟುವಟಿಕೆಗಳಲ್ಲಿ ಮತ್ತು ಸಂಗೀತ ಕಲಿಕೆಯನ್ನು ಮಾಡಿರುವ ಬಗ್ಗೆ ಗಜಲ್ ಸಂಕಲನದಲ್ಲಿ ಅವರ ನುಡಿಗಳಲ್ಲಿ ವ್ಯಕ್ತವಾಗುತ್ತದೆ. ಅವರ ಗಜಲ್ ಗಳು ಅವರ ದೀರ್ಘ  ಸಾಹಿತ್ಯದ ಕೃಷಿಯನ್ನು  ಸಶಕ್ತವಾಗಿ ಬಿಂಬಿಸುತ್ತವೆ.

     
ಮೂರು ವರ್ಷಗಳ ಹಿಂದೆ  ಹನಿ ಹನಿ ಇಬ್ಬನಿ ಸಾಹಿತ್ಯ ಬಳಗದಲ್ಲಿ ಪರಿಚಿತರಾದ ವಾಣಿ ಭಂಡಾರಿ ರವರು ಸದಾ ಹಸನ್ಮುಖಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಾ ನನ್ನಂತಹ ಕಲಿಕಾರ್ತಿಗಳಿಗೆ ಸಕಾಲಿಕ ಪ್ರೋತ್ಸಾಹ ಮತ್ತು ಸಲಹೆ ನೀಡುತ್ತಾ ಬಂದಿದ್ದಾರೆ.

   "ಸಂತೆನೊಳಗಿನ ಧ್ಯಾನ" ಎಂಬ ಶೀರ್ಷಿಕೆಯೇ  ಆಕರ್ಷಕ ಮತ್ತು ಕುತೂಹಲ ಪುಸ್ತಕ ಓದಿ ಮುಗಿಸಿದ ಮೇಲೆ ಈ ಶೀರ್ಷಿಕೆಯ ಔಚಿತ್ಯ ನನಗೆ ಮನವರಿಕೆಯಾಯಿತು.

ಈ  ಗಜಲ್ ಸಂಕಲನದಲ್ಲಿ  ಹೆಣ್ಣಿನಲ್ಲಿರುವ ನೋವುಗಳು, ಸಮಾಜದ ಅಂಕು ಡೊಂಕುಗಳು, ಸಮಯಸಾಧಕ ಜನರ ಡೋಂಗಿತನ, ನಮ್ಮ ಏಳಿಗೆಯನ್ನು ಕಂಡು  ಕಾಲೆಳೆಯುವ ಹಿತಶತೃಗಳ ಪ್ರಲಾಪ ,ಈಗೆ ವಿವಿಧ ವಿಷಯ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಬರೆದ ಬಹುತೇಕ ಗಜಲ್ ಗಳು ಸಮಾಜ ಮುಖಿಯಾಗಿರುವುದು ಗಮನಾರ್ಹ.

 
ಮೂರನೇ ಗಜಲ್ ನಲ್ಲಿ ಬರುವ
"ಕಣ್ಣಿದ್ದೂ ಕುರುಡಾಗಿ ನಿಂತಿದ್ದಾರೆ ಕೆಸರಿನ ಕಮಲದ ಏಳಿಗೆ ಸಹಿಸಲ್ಲ " ಎಂದು ಬದುಕ ಆಲಯದಲ್ಲಿ ಒಂಟಿ ಪಯಣ ಮಾಡುವಾಗ ಹೊಟ್ಟೆ ಕಿಚ್ಚಿನ ಜನರು ನೀಡುವ ಉಪದ್ರವಗಳ ಬಗ್ಗೆ ಸಂಕುಚಿತ ಭಾವದ ಮಾನವರಿಗೆ ಸೂಕ್ಷ್ಮವಾಗಿ ತಿವಿದಿದ್ದಾರೆ.

ಇತಿಹಾಸದ ಪುಟಗಳಲ್ಲಿ ,ಪುರಾಣಗಳ ಬೆಳಕಲ್ಲಿ ನೋಡಿದಾಗ ಹಿಂಸೆಯ ವಿರುದ್ದವಾಗಿ ಅಹಿಂಸೆ ,ದ್ವೇಷದ ವಿರುದ್ದವಾಗಿ ಪ್ರೀತಿಯು ಜಯ ಗಳಿಸಿರುವುದು ಸರ್ವ ವೇದ್ಯ.ಈ ಹಿನ್ನೆಲೆಯಲ್ಲಿ ಗಜಲ್ ಕಾರ್ತಿ ಯವರು
ಎಂಟನೆಯ ಗಜಲ್ ನಲ್ಲಿರುವಂತೆ
"ಗುದ್ದಲಿ ಹಾರೆ ಪಿಕಾಸಿ ಎಲ್ಲಾ ಚುಚ್ಚಿ ರಕ್ತ ಬರಿಸಿ ನಕ್ಕು ನಲಿದಿದ್ದವು|
ಕಾಲ ಕಾಯುವುದಿಲ್ಲ ಬಿಡಿ ಬೊಗಸೆ ಕಂಗಳ ಪ್ರೀತಿಗೂ ಒಮ್ಮೆ ಬಲ ಬರುತ್ತದೆ||"
ಎಂದು ಹೇಳುವ ಮೂಲಕ ಪ್ರೀತಿ ಮತ್ತು ಅಹಿಂಸೆಯನ್ನು ಜಗತ್ತಿನಲ್ಲಿ ಪಸರಿಸೋಣ ಎಂಬ ಸಂದೇಶ ನೀಡಿದ್ದಾರೆ.

ಗಜಲ್ ಸಂಕಲನದ ಹದಿನೈದನೇ ಗಜಲ್ ನಲ್ಲಿ ಕವಯಿತ್ರಿಯವರು

" ಕವಿಯ ಕೊಲ್ಲುವ ಭರದಲ್ಲಿ ಕವಿತೆಯ ಆಶಯ ಮರೆಯದಿರಿ|
ಕವಿಗೆ ಚುಚ್ಚುವ ಆವೇಶದಲ್ಲಿ ಕವಿಭಾವ ಏನೆಂದು ತಿಳಿಯದೇ ಮುನ್ನುಗ್ಗದಿರಿ||"
ಎಂದು ಮೊಸರಲ್ಲಿ ಕಲ್ಲು ಹುಡುಕುವ ಧೀರರಿಗೆ ಕಿವಿಮಾತು ಹೇಳಿರುವರು .
ಇದೇ ಭಾವದ ಇಪ್ಪತ್ತನೆಯ ಗಜಲ್ ನಲ್ಲಿ
"ಕವಿಯನ್ನು ಕೊಂದವರ ಕಂಡಿದ್ದೇನೆ ಆದರೆ ಕಾವ್ಯ ಸಾಯಲಿಲ್ಲ|
ಕವಿ ಭಾವವನ್ನು ಅರ್ಥೈಸದವರ ಕಂಡಿದ್ದೇನೆ ಆದರೆ ಭಾವ ಬತ್ತಲಿಲ್ಲ||"
ಎಂದು ಕವಿಭಾವ ಅರ್ಥೈಸದೆ ಬರೀ ಒಣ ಟೀಕೆ ಮಾಡುವ ಮೂಢರ ಬಗ್ಗೆ ಕನಿಕರ ತೋರುತ್ತಲೇ ಅಂತವರಿಗೆ ಚಾಟಿ ಬೀಸಿದ್ದಾರೆ.

ಪ್ರೀತಿಯಲ್ಲಿ ಮೋಸ ಮಾಡಿ ಕೈಕೊಟ್ಟು ಓಡಿ ಹೋದ ಪ್ರೇಯಸಿಯ ನೆನದು ತನ್ನ ತಾನೆ ಸಮಾಧಾನ ಮಾಡಿಕೊಳ್ಳುವ ಪರಿಯನ್ನು ನಲವತ್ತೈದನೇ ಗಜಲ್ ಬಹಳ ಚೆನ್ನಾಗಿ ಬಿಂಬಿಸುತ್ತದೆ.
"ಹೃದಯ ಹಿಂಡಿದ ಕಿರಾತಕಿಯ ನೆನೆಪುಗಳು ಏತಕೆ ಸುಮ್ಮನಿದ್ದು ಬಿಡು|
ನಿನ್ನಂತರಂಗದ ಒಲವು ದಿಕ್ಕರಿಸಿದ ಜಾರಿಣಿಯ ಪ್ರೀತಿ ಏಕೆ ಬೇಕು ಕೊರಗದೇ ಇದ್ದು ಬಿಡು||"
ಎಂದು ಖಾರವಾದ ಪದಗಳಲ್ಲಿ ಹೇಳಿದ್ದಾರೆ .

ಪ್ರೀತಿ ಇಲ್ಲದ ಮೇಲೆ ಹೂವು ಅರಳುವುದು ಹೇಗೆ ? ಎಂಬ ಣವಿ ಯವರ ಕಾವ್ಯ ದಂತೆ
"ಒಲವಿರದ ಮನದ ಬಾವಿಯೊಳಗೆ ವಾಣಿ ಬದುಕಲಾರಳು |
ಗೋರಿಯೊಳಗೆ ಚುರನಿದ್ರಿಸಲು ಓಗೊಟ್ಟು ಬಂದಾಗಿದೆ ಗಾಲಿಬ್|| ಎಂಬ ಶೇರ್ ನಲ್ಲಿ ಪ್ರೀತಿಯಿರುವೊಡೆ ಮಾತ್ರ ನಾನಿರುವೆ ಪ್ರೀತಿಯಿಲ್ಲದೆಡೆ ಇರುವುದಕ್ಕಿಂತ ಇಹವ ತ್ಯಜಿಸುವುದೇ ಮೇಲು ಎಂದು ಅಭಿವ್ಯಕ್ತಿ ಪಡಿಸಿದ್ದಾರೆ.

ಹೀಗೆ ಒಂದಕ್ಕಿಂತ ಒಂದು ಚೆಂದದ ೬೦  ಗಜಲ್ ಒಳಗೊಂಡ ಈ ಸಂಕಲನ ಓದುಗರ ಮನ ಕಲಕದೆ ಇರದು.
ಇನ್ನೂ ಸ್ವಲ್ಪ  ಗಜಲ್ ಸಾಹಿತ್ಯ ಅಧ್ಯಯನ ಮಾಡಿದರೆ ಮತ್ತು ವಿವಿಧ ಪ್ರಕಾರಗಳ ಗಜಲ್ ಬರೆಯಲು ಪ್ರಯತ್ನ ಪಟ್ಟರೆ ಇನ್ನೂ ಸುಂದರ ರಚನೆ ವಾಣಿ ಭಂಡಾರಿ ಮೇಡಂ ರವರಿಗೆ ಬರೆಯಲು ಸಾದ್ಯವಿದೆ.ಅವರ ಲೇಖನಿಯಿಂದ ಮುಂದಿನ ದಿನಗಳಲ್ಲಿ ಗಜಲ್ ಸಂಕಲನ ಸೇರಿ ಕವನ, ವಿಮರ್ಶೆ, ಅಂಕಣರಹ ,ಕಥೆ, ಕಾದಂಬರಿ ಹೀಗೆ ವಿವಿದ ಪ್ರಕಾರಗಳಲ್ಲಿ ಪುಸ್ತಕಗಳು ಪ್ರಕಟವಾಗಲಿ ಎಂದು ಹಾರೈಸುವೆ.

        ಗಜಲ್ ಸಂಕಲನ:-ಸಂತನೊಳಗಿನ ಧ್ಯಾನ
ಕವಯಿತ್ರಿ:- ವಾಣಿ ಭಂಡಾರಿ
ಬೆಲೆ:-೧೦೦/-
ಪ್ರಕಾಶನ : ಭಂಡಾರಿ ಪ್ರಕಾಶನ
ಶಿವಮೊಗ್ಗ
ವರ್ಷ : ೨೦೨೦

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ


No comments: