31 July 2021

ಮೊಮ್ಮೊಗಳ ಬಂಧನ


 


ಮೊಮ್ಮಗಳ ಬಂಧನ 


ನಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರೇಮ ವಿವಾಹವಾದ ಮಗಳು ಹಲವಾರು ಬಾರಿ ತವರು ಮನೆಗೆ ಬಂದಾಗ " ನೀನು ನಮ್ಮ ಪಾಲಿಗೆ ಎಂದೋ ಸತ್ತಿರುವೆ ತೊಲಗು" ಎಂದು ಅವಮಾನ ಮಾಡಿದ್ದರು ಹೆತ್ತವರು.

ಕರುಳಿನ ಸಂಬಂಧ ಕಡಿಯಾಲಾಗದು ಎಂದುಕೊಂಡು ತಾಯಿಯು ಗಂಡನ ಕಣ್ತಪ್ಪಿಸಿ ಮಗಳ ಮನೆಗೆ ಬಂದರು , ಅಂಗಳದಲ್ಲಿ ಆಡುತ್ತಿದ್ದ ಮೊಮ್ಮಗಳ ಕಂಡು ಬರಸೆಳೆದಪ್ಪಿ ಮುದ್ದಾಡಿದರು, ಹೊಸಲಿನ ಬಳಿ ನಿಂತಿದ್ದ ತಾಯಿಯ ಕಣ್ಣಲ್ಲಿ ತನಗರಿವಿಲ್ಲದೇ ನಾಲ್ಕು ಹನಿ ಉದುರಿದವು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


*ಇಂದಿನ ಪ್ರತಿನಿಧಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*31/7/21


 

30 July 2021

ಕಡಲಾಗಬೇಕು .ಹನಿ


 


ಕಡಲಾಗಬೇಕು


ಸರ್ವ ಜೀವಿಗಳಿಗೆ ಆಶ್ರಯ ತಾಣವಾಗಬೇಕು|

ಜಗದೆಲ್ಲ ಕಣ್ಣೀರನ್ನು ಒರೆಸಿ

ತನ್ನಲ್ಲಿ ಇಂಗಿಸಿಕೊಂಡು

ತಾನು ಉಪ್ಪಾದರೂ 

ಸರಿ ನೋಡುವವರಿಗೆ

ಬರೀ ಸೌಂದರ್ಯ

ತೋರಬೇಕು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


27 July 2021

ಜಯಂತಿಯವರಿಗೆ ಹನಿ ನಮನ

ಜಯಂತಿಯವರಿಗೆ ಎರಡು ಹನಿ ನಮನ 



ಅಭಿನಯ ಶಾರದೆ 

ಇನ್ನಿಲ್ಲ ಎಂದು

ಏಕೆ ಚಿಂತಿಸುತಿ|

ಅವರ ಚಿತ್ರಗಳು

ಜೀವಂತ ,ಅವರ

ಹೆಸರಲ್ಲೇ ಇದೆ

ಜಯಂತಿ||



ಐನೂರು ಚಿತ್ರಗಳಲ್ಲಿ

ಜಯಂತಿಯವರು 

ಅಭಿನಯಿಸಿದ 

ಪಾತ್ರಗಳ ಪಟ್ಟಿ

ಬೆಳೆಯುತ್ತದೆ,ನಾಯಕಿ, 

ಅಜ್ಜಿ, ಅವ್ವ |

ಇವುಗಳಲ್ಲೆಲ್ಲಾ ನಾವು

ಮರೆಯೋದಿಲ್ಲ

ನಾಗರಹಾವು ಚಿತ್ರದ

ಓಬವ್ಚ||




ಸಿಹಿಜೀವಿ

ಸಿ ಜಿ ವೆಂಕಟೇಶ್ವರ


 

25 July 2021

ಮಳೆಯಲಿ ಹನಿ


 


ಮಳೆಯಲಿ...


ಮಳೆಗೆ ಮುಖವೊಡ್ಡಿ

ನಿಂತಿದ್ದೆ

ನನ್ನ ಕಣ್ಣಿಂದ

ಬೀಳುವ

ಕಣ್ಣೀರ ಹನಿಗಳು

ಯಾರಿಗೂ

ಗೊತ್ತಾಗದಿರಲೆಂದು!


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಹಣ ಪಾಶಾಣ .ನ್ಯಾನೋ ಕಥೆ


 



*ಹಣ ಪಾಶಾಣ* ನ್ಯಾನೋ ಕಥೆ 


ಹಣವೆಂದರೆ ಪಾಷಾಣ, ಬದುಕಲು ಹಣವೊಂದೇ ಬೇಕಿಲ್ಲ, ಹಣ ಸಂಬಂಧಗಳನ್ನು ಬೇರ್ಪಡಿಸುತ್ತದೆ .ಆದಷ್ಟೂ ಹಣದಿಂದ ದೂರವಿರಿ ಎಂದು ವೇದಿಕೆಯಲ್ಲಿ ಭಾಷಣ ಮಾಡಿದ ಸ್ವಾಮಿಜಿಗಳು ವೇದಿಕೆಯ ಕೆಳಭಾಗದಲ್ಲಿ ನಮಸ್ಕರಿಸಿದ ಭಕ್ತನಿಗೆ ತನ್ನ ಮಠಕ್ಕೆ ದೇಣಿಗೆ ಕೇಳಿದರು.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಓದುವುದನ್ನು ಕಲಿಯಬೇಕಿದೆ .ಕವನ


 


ಓದುವುದನ್ನು ಕಲಿಯಬೇಕಿದೆ


ಓದುವುದನ್ನು ಕಲಿಯಬೇಕಿದೆ
ನಾನು ಮನಸ್ಸು ಓದುವುದನ್ನು
ಕಲಿಯಬೇಕಿದೆ.

ನೀನೇ ಇಂದ್ರ ಚಂದ್ರನೆಂದು
ಅಟ್ಟಕ್ಕೆ ಹತ್ತಿಸಿ ದೀಢೀರ್ ಎಂದು
ಕೈಕೊಟ್ಟು ಮತ್ತೊಬ್ಬರ ಕೈಹಿಡಿವವರ
ಮನಸ್ಸು ಓದುವುದನ್ನು ಕಲಿಯಬೇಕಿದೆ.

ನೀನೇ ಆರತಿ, ಭಾರತಿ, ರತಿ
ಎಂದು ಊರೆಲ್ಲಾ ಅಲೆದಾಡಿ
ಎಲ್ಲವ ಮುಗಿಸಿ,ಮುದುವೆಯ
ಮಾತೆತ್ತಿದಾಗ ಪರಾರಿಯಾಗುವವರ
ಮನಸ್ಸು ಓದುವುದನ್ನು ಕಲಿಯಬೇಕಿದೆ.

ನೀವೇ ನಮ್ಮ ಸರ್ವಸ್ವ. ಪ್ರಭುಗಳು
ನಾವು ನಿಮ್ಮ ಸೇವಕರು
ನಮಗೇ ಮತ ನೀಡಿ ಎಂದವರು
ಗೆದ್ದ ಬಳಿಕ ಮತದಾರರ ನಂಬಿ
ಮತಗಳ ಮೇಲೆ ರಾಜಕೀಯ
ಮಾಡುವವರ ಮನಸ್ಸು ಓದುವುದನ್ನು ಕಲಿಯಬೇಕಿದೆ.

ವಿಶ್ವಶಾಂತಿ ನಮ್ಮ ಮೂಲತತ್ವ
ಎಂದು ಸಾರುತ್ತಲೇ ಒಬ್ಬರ
ಮೇಲೊಬ್ಬರು ಬಾಂಬ್, ಕ್ಷಿಪಣಿ
ಹಾಕಲು ಹಾತೊರೆಯುವ ವಿಶ್ವ
ನಾಯಕರ ಮನಸ್ಸು ಓದುವುದನ್ನು ಕಲಿಯಬೇಕಿದೆ.

ಓದುವುದು ಕಲಿಯುವುದು ಬಹಳವಿದೆ
ಯಾವುದರಿಂದ ಆರಂಭಿಸಲಿ ನೀವೇ ಹೇಳಿ?

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ಸಿಹಿಜೀವಿಯ ಹನಿಗಳು*


 

24 July 2021

ಮೀರಾಬಾಯಿ ಚಾನು. ಹನಿ


 mirabaichanu 

#ಸಿಹಿಜೀವಿಯ_ಹನಿ


ಮೊದಲ ರಜತ 

ಪದಕ ತಂದು 

ಭಾರತಾಂಭೆಯ

ಮುಡಿಗೇರಿಸಿದೆ

ಮೀರಾಬಾಯಿ

 ಚಾನು| 

ಇದೋ ನಿನಗೆ

ನೂರೊಂದು ನಮನ

ಸಲ್ಲಿಸುವೆ ಎಲ್ಲರ

 ಪರವಾಗಿ ನಾನು| |


#ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಸಿಹಿಜೀವಿಯ ಹನಿ


*ಮೊಟ್ಟೆ, ಕೊಟ್ಟೆ*


ಮೊದಲ ಘೋಷಣೆ 

ದಿನಕ್ಕೊಂದು ಮೊಟ್ಟೆ

ತುಂಬುವುದು ಹೊಟ್ಟೆ|

ಅಧಿಕಾರಿಗಳ ಘೋಷಣೆ

ಮಂತ್ರಿಗಳ ಬೊಕ್ಕಸ 

ತುಂಬಲು ಪ್ರತಿ ತಿಂಗಳು

ಕೋಟಿ ನಾನೇ ಕೊಟ್ಟೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

 

23 July 2021

ಅಪ್ಪನೇ ಆಸ್ತಿ. ಹನಿ


 


*ಅಪ್ಪನೇ ಆಸ್ತಿ*


ಎಲ್ಲೆಡೆ ಅಣ್ಣತಮ್ಮಂದಿರಲಿ

ಕಚ್ಚಾಟ ಪಡೆಯಲು

ಅಪ್ಪ ಮಾಡಿದ ಆಸ್ತಿ|

ಎಲ್ಲೋ ಕೆಲವರು

ಈಗಲೂ ನಂಬಿದ್ದಾರೆ

ಅಪ್ಪನೇ ಆಸ್ತಿ ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಅತಿಯಾಗದಿರಲಿ .ಹನಿ

 ಅತಿಯಾಗದಿರಲಿ 


ಸರಳ ಸುಂದರ ಕಾಳಜಿಯುಕ್ತ

ಪ್ರೀತಿಯು ಸಂಬಂಧಗಳನ್ನು

ಗಟ್ಟಿಗೊಳಿಸುತ್ತದೆ|

ಅತಿಯಾದ ಕಾಳಜಿ ,ಪ್ರೀತಿ

ಅತಿಯಾದ ವ್ಯಾಮೋಹ

ಉಸಿರುಗಟ್ಟಿಸುತ್ತದೆ|


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

22 July 2021

ಮೆರೆವೆ .ಹನಿಗವನ


 


*ಮೆರೆವೆ*


ನೀನೇ ಜೀವ ನನಗೆ ಈಗ

ನಿನ್ನ ತಬ್ಬಿ  ಜಗವ ಮರೆವೆ |

ಸರಿಸಾಟಿ ಯಾರು ನನಗೆ 

ಮೀಸೆ ತಿರುವಿ ನಾನು ಮೆರೆವೆ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ.


21 July 2021

ಸಿಹಿಜೀವಿಯ ಹನಿ


 



*ನೀವೇನಾಗಬೇಕು*


ದೇವರನು ಕಾಣುವರು

ನಮ್ಮಲ್ಲಿ ಜನರು

ನಾವು ಮಾಡಿದಾಗ 

ಪರರಿಗೆ ಒಳಿತು|

ದೂರ ಸರಿವರು 

ನಮ್ಮಿಂದ ಕ್ರಮೇಣ 

ಕೆಟ್ಟ ಚಿಂತನೆಗಳಿಂದ

ನಾವು ನಾರುವಾಗ

ಕೊಳೆತು ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಪ್ರತಿನಿಧಿ. ೨೧.೭.೨೧


 

ಸಿಂಹಧ್ವನಿ ೨೧/೭/೨೧


 

20 July 2021

*ಇಂದಿನ ಸತ್ಯದ ಹೊ‌ನಲು ಪತ್ರಿಕೆಯ ಪ್ರಕಟವಾದ ನನ್ನ ಹನಿಗವನಗಳು* ೨೦/೭/೨೧


 

ಸ್ವಪ್ನ .ಹನಿ


 *ಸ್ವಪ್ನ*


ಕನಸಲೂ  ಬಂದು

ಕಾಡುವಳು ನನ್ನ

ಗೆಳತಿ ಸ್ವಪ್ನ|

ಯಾಕಾದರೂ 

ಬೀಳುತ್ತವೋ 

ನನಗೆ ಸ್ವಪ್ನ||

ಸಿಹಿಜೀವಿಯ ಹನಿಗಳು


 


ಸಿಹಿಜೀವಿಯ ಹನಿಗಳು


*ಮನವಿ*


ಆ ನಿನ್ನೊಂದು ಸ್ಪರ್ಶಕೆ

ಜೀವ ಕಳೆ ಪಡೆಯುವುದು

ಇಳೆ|

ಕಾಲನಾಗಿ ಬಂದು

ಬಾದಿಸುತ ಕೊಚ್ಚಿ

ಹಾಕದಿರು ಅನ್ನದಾತನ 

ಬೆಳೆ||


*ಹಾತೊರೆದಿದ್ದೆ*



ನಲ್ಲೆ ಆ ನಿನ್ನ 

ಒಂದು ಸ್ಪರ್ಶಕ್ಕೆ

ಸದಾ ಕಾಲ

ಹಾತೊರೆದಿದ್ದೆ|

ನಿನ್ನ ನೆನಪಲಿ

ಅನ್ನ, ನೀರು, ನಿದಿರೆಯ

ತೊರೆದಿದ್ದೆ||




ಸಿಹಿಜೀವಿ

ಸಿ ಜಿ ವೆಂಕಟೇಶ್ವರ

19 July 2021

ಬದುಕು ನಿಂತ ನೀರಲ್ಲ .ಲೇಖನ


 



ಬದುಕು ನಿಂತ ನೀರಲ್ಲ 


ಬದುಕು ನಿಂತ ನೀರಲ್ಲ ಅದು ಸದಾ ಹರಿವ ತೊರೆ ,

ಬದುಕೆಂಬುದು ನಮಗೆ ಜೀವನದಲ್ಲಿ ಏನೆಲ್ಲಾ ಕಲಿಸುತ್ತದೆ, ಏನೆಲ್ಲಾ ಕೊಡುತ್ತದೆ ಹಲವಾರು ಅನುಭವಗಳನ್ನು ನೀಡುತ್ತದೆ ,ಕೆಲವೊಮ್ಮೆ ನೋವು, ಕೆಲವೊಮ್ಮೆ ನಲಿವು ಮತ್ತು ಕೆಲವೊಮ್ಮೆ ಎಲ್ಲಾ ಮುಗಿದಂತೆ ಮತ್ತೆ ಪುನಃ ಚಿಗುರೊಡೆದು ಬೆಳೆದಂತೆ ಇದು ಎಲ್ಲರ ಬದುಕಿನಲ್ಲಿ ನಡೆವ ಸಾಮಾನ್ಯ ಅಂಶಗಳು.


ಪುಟ್ಟ ಹಳ್ಳಿಯಲ್ಲಿ ಬೆಳೆದ ನನಗೆ ಮೊದಲಿಗೆ ಕನಸಿದ್ದದ್ದು ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರ ರೀತಿ ಶಿಕ್ಷಕರ ವೃತ್ತಿ ಮಾಡುವುದು ನನ್ನ ಗುರಿ ಮುಟ್ಟವಲ್ಲಿ ಸಫಲನಾಗಿ ೨೪ ನೇ ವಯಸ್ಸಿಗೆ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಕೆಲಸ ಆರಂಬಿಸಿದೆ, ಪದವಿಯನ್ನು ಪೂರೈಸಿದ ನಾನು ಸ್ನಾತಕೋತ್ತರ ಪದವಿ ಮತ್ತು ಬಿ .ಎಡ್ ಮತ್ತು ಎಂ ಎಡ್ ಪದವಿ ಪಡೆದೆ.ಈ ಮಧ್ಯೆ ಮದುವೆಯೂ ಅಗಿ ಎರಡು ಮುತ್ತಿನಂತಹ ಮುದ್ದು ಲಕ್ಷ್ಮಿ ಯರು ನನ್ನ ಆನಂದ ಹೆಚ್ಚಿಸಿದರು  .


ಮತ್ತೊಮ್ಮೆ ಬದುಕು ನಿಂತ ನೀರಲ್ಲ ಎಂದು ಅನಿಸಿತು ಅದಕ್ಕೆ ಪೂರಕವೆಂಬಂತೆ ಕ್ರಮೇಣವಾಗಿ 

 ನನಗೆ ಬೇರೆ ವೃತ್ತಿ ಬಗ್ಗೆ ತುಡಿತ ಉಂಟಾಯಿತು. ಅದರ ಪರಿಣಾಮವಾಗಿ ವಿವಿಧ ಪರೀಕ್ಷೆ ಬರೆಯಲು ಆರಂಭಿಸಿದ ಪರಿಣಾಮವಾಗಿ ,ನನಗೆ ಗೊತ್ತಿಲ್ಲದ ಹಾಗೆ ಅಲ್ಪ ಸ್ವಲ್ಪಮಟ್ಟಿಗೆ ಜ್ಞಾನದ ಸಂಚಯನ ಉಂಟಾಗಿ ಅದು ಪ್ರೌಢಶಾಲಾ ಶಿಕ್ಷಕನಾಗಲು ದಾರಿ ಮಾಡಿಕೊಟ್ಟಿತು. ಆದರೂ ತೃಪ್ತಿ ಇಲ್ಲದ ನಾನು ಕೆ .ಎ .ಎಸ್.  ಕೆ ‌.ಇ .ಎಸ್  ,ಐ .ಎ .ಎಸ್ ಮುಂತಾದ ಪರೀಕ್ಷೆ ಬರೆದು ಅಧಿಕಾರಿಯಾಗುವ ಕನಸು ಕಂಡು ಸಂದರ್ಶನದ ಹಂತಕ್ಕೆ ಹೋಗಿ ಆ ಹುದ್ದೆಯನ್ನು ಪಡೆಯಲಾಗಲಿಲ್ಲ. ಕಡೆಗೆ ಈಗಿರುವ ವೃತ್ತಿಯಲ್ಲಿ ಬದ್ದತೆಯಿಂದ ಕೆಲಸ ಮಾಡಲು ನಿರ್ಧಾರ ಮಾಡಿ ಕಾರ್ಯ ನಿರ್ವಹಿಸುತ್ತಿರುವೆ . ಇದರ ಪರಿಣಾಮವಾಗಿ ನಮ್ಮ ಇಲಾಖೆಯು ನನ್ನ ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪುರಸ್ಕಾರ ‌ನೀಡಿ ಗೌರವಿಸಿದೆ.ಆಗ ನನ್ನ ತಾಯಿ ಮತ್ತು ನಮ್ಮ ಬಂಧುಗಳು ನನಗಿಂತ ಸಂತಸಪಟ್ಟಿದ್ದನ್ನು ನಾನು ಕಂಡಿದ್ದೇನೆ.


ಇತ್ತೀಚಿನ ವರ್ಷಗಳಲ್ಲಿ ವೃತ್ತಿ ಜೊತೆಗೆ ಹವ್ಯಾಸವಾಗಿ ಬರವಣಿಗೆಯನ್ನು ಆರಂಬಿಸಿ ಸಾವಿರಕ್ಕೂ ಹೆಚ್ಚು ರಚನೆಗಳನ್ನು ಮಾಡಿರುವೆನು ಅವೆಲ್ಲವೂ "ಶ್ರೀದೇವಿತನಯ" ಎಂಬ ಬ್ಲಾಗ್ ನಲ್ಲಿ ಅಡಕವಾಗಿವೆ ,ಪ್ರಪಂಚದ  ವಿವಿಧ ದೇಶಗಳ ಒಂದೂವರೆ ಲಕ್ಷಕ್ಕೂ ಹೆಚ್ಚು ಓದುಗ ದೊರೆಗಳು ಬ್ಲಾಗ್ ನಲ್ಲಿ ನನ್ನ ಬರೆಹಗಳನ್ನು ಓದಿ ,ಹರಸಿ, ಹಾರೈಸಿದ್ದಾರೆ.  ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾದ ,ಕಥೆ, ಕವನ, ಹನಿಗವನ,ಗಜಲ್, ಲೇಖನ, ನ್ಯಾನೊಕಥೆ, ಹೀಗೆ ವಿವಿದ ಪ್ರಕಾರದ ಬರೆಹಗಳನ್ನು ಓದಿದ ಓದುಗ ಪ್ರಭುಗಳು ಬೆನ್ನು ತಟ್ಟಿದ್ದಾರೆ. "ಸಾಲು ದೀಪಾವಳಿ " ಎಂಬ ಕವನ ಸಂಕಲನ ಹಾಗೂ " ಸಿಹಿಜೀವಿಯ ಗಜಲ್ "  ಎಂಬ ಗಜಲ್ ಸಂಕಲನ ಪುಸ್ತಕದ ರೂಪದಲ್ಲಿ ಪ್ರಕಟವಾಗಿವೆ.


ಸಾಹಿತ್ಯದ ಈ ಸಾಧನೆಯನ್ನು ಗುರ್ತಿಸಿ " ಸಾಹಿತ್ಯ ಚಿಂತಾಮಣಿ, ಸಂಘಟನಾ ಚತುರ" ಎಂಬ  ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಪುರಸ್ಕಾರ ನೀಡಿರುವರು.

ನನ್ನ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ಇನ್ನೂ ಬಹು ದೂರ ಸಾಗಬೇಕಿದೆ ಬಹಳಷ್ಟು ಸಾಧಿಸುವ ಗುರಿ ಇದೆ.ಭಗವಂತನ ಕೃಪೆ ,ಸಹೃದಯರ ಹಾರೈಕೆಯ ನಿರೀಕ್ಷೆಯಲ್ಲಿ ಇರುವೆ.


ಇದರ ಮಧ್ಯ ಸಂಬಂಧಿಕರ, ಆತ್ಮೀಯರ ಸಾವು ನೋವುಗಳು , ಜೊತೆಗಿದ್ದೇ ಬೆನ್ನಿ ಗೆ ಚೂರಿ ಹಾಕಿದ ಹಿತಶತೃಗಳು,   ಕೆಲ ಅಹಿತಕರ ಘಟನೆಗಳು ನನ್ನನ್ನು ಕಾಡಿ ಮಾನಸಿಕವಾಗಿ ನೊಂದಿರುವುದು ಸಹಜವಾದರೂ , ಬದುಕಲ್ಲಿ ಸಿಕ್ಕ ಕೆಲ ಚಿಕ್ಕ ಪುಟ್ಟ  ಯಶಸ್ಸುಗಳು ಮತ್ತು ಜೀವನ ಪ್ರೀತಿ ಮುಂದೆ ಹೆಜ್ಜೆ ಇಡಲು ಪ್ರೇರಣೆ ನೀಡುತ್ತವೆ ,ಎಷ್ಟೇ ಅಡೆತಡೆಗಳು ಬಂದರೂ ಜೀವಿಸಬೇಕು ಸಾಧಿಸಬೇಕು ಎಂಬ ಛಲ ಹುಟ್ಟುತ್ತದೆ.

ಇಷ್ಟಕ್ಕೂ ಬದುಕು ನಿಂತ ನೀರಲ್ಲವಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


ಮದ್ದು ಬರುವುದು.ಕವನ


 



ಮದ್ದು ಬರುವುದು


ಜಗವನ್ನೇ ನಲುಗಿಸಿದ

ಜೀವಕೋಟಿಗಳ 

ಹೈರಾಣಾಗಿಸಿದ 

ವೈರಾಣುವಿನ ವಿರುದ್ಧ

ಮದ್ದು ಬಂದಿದೆ.


ಅತಿಯಾಸೆಯೆಂಬ

ಮಹಾವ್ಯಾಧಿಗೆ ಯತಿಗಳು

ಚಿಂತಕರು, ಸಂತರು, 

ಬುದ್ದಿವಂತರು ಮದ್ದು

ನೀಡಲು ಪ್ರಯತ್ನಿಸಿದರು

ವ್ಯಾದಿ  ಗುಣಮುಖವಾಗಿಲ್ಲ ಉಲ್ಬಣವಾಗುತ್ತಲೇ ಇದೆ.


ಆ ಮದ್ದನು ಕಂಡುಹಿಡಿಯಲು

ನನಗೆ ,ನಿನಗೆ ಸಾದ್ಯವಾಗಿಲ್ಲ

ಬ್ರಹ್ಮಾಂಡದಲ್ಲೆಲ್ಲೋ

ಅಡಗಿದೆ ಅವನು 

ಇಂದಲ್ಲ ನಾಳೆ ತರುವನು

ಎಂಬ ಸದಾಶಯವಿದೆ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


18 July 2021

ಮಾಡಿದ್ದುಣ್ಣೋ ಮಹರಾಯ .ನ್ಯಾನೋ ಕಥೆ


 


*ಮಾಡಿದ್ದುಣ್ಣೋ ಮಹರಾಯ*


ಕಂಬಿಗಳಿಲ್ಲದೇ ರೈಲು ಬಿಟ್ಟು ಲಕ್ಷಾಂತರ ಜನ ಅಮಾಯಕರಿಗೆ ,ಕೋಟ್ಯಾಂತರ ರೂಪಾಯಿಗಳನ್ನು ಮೋಸ ಮಾಡಿದವನು ಮಾಡಿದ್ದುಣ್ಣೋ ಮಹರಾಯ ಎಂಬಂತೆ  ಕೊನೆಗೂ ಈಗ ಕಂಬಿಗಳನ್ನು ಎಣಿಸುತ್ತಿದ್ದಾನೆ .


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

17 July 2021

ಪ್ರತಿನಿಧಿ ೧೭/೭/೨೧


 

ಎರಡು ಮುತ್ತು ಹನಿಗವನ


 


*ಎರಡು ಮುತ್ತು*


ನನ್ನವಳಿಗೆ

ನಾನು ನೀಡಿದೆನು

ಸವಿಯಾದ ಮುತ್ತು|

ಹಿಂತಿರುಗಿ ಅವಳು

ನೀಡಿದಳು ಎರಡು

ಹೆಣ್ಣು ಮಕ್ಕಳನ್ನು

ಅವೆರಡೂ ಕಪ್ಪೇ

ಚಿಪ್ಪಿನೊಳಗಿನ

ಎರಡು ಮತ್ತು||


*ಸಿಹಿಜೀವಿ*

ಸಿ ಜಿ ವೆಂಕಟೇಶ್ವರ



https://kannada.pratilipi.com/story/%E0%B2%8E%E0%B2%B0%E0%B2%A1%E0%B3%81-%E0%B2%AE%E0%B3%81%E0%B2%A4%E0%B3%8D%E0%B2%A4%E0%B3%81-%E0%B2%B9%E0%B2%A8%E0%B2%BF%E0%B2%97%E0%B2%B5%E0%B2%A8-08tzaisr1p5i?utm_source=android&utm_campaign=content_share
*ಎರಡು ಮತ್ತು* ಹನಿಗವನ

15 July 2021

ಚಿಂತೆ ಬಿಡಿ ,ನಕ್ಕುಬಿಡಿ .ಲೇಖನ


 


ಚಿಂತೆ ಬಿಡಿ ,ಒಮ್ಮೆ ನಕ್ಕು ಬಿಡಿ

ನವರಸಗಳಿರದ ಜೀವನ ಊಹಿಸಲೂ ಅಸಾಧ್ಯ, ನನಗೆ ಎಲ್ಲಾ ರಸಗಳೂ ಇಷ್ಟ ಮನರಂಜನೆಗಾಗಿ ಈ ರಸಗಳ ಹದವಾದ ಮಿಶ್ರಣ ನಮ್ಮನ್ನು  ಕೆಲವೊಮ್ಮೆ ಬೇರೆಯದೇ ಲೋಕಕ್ಕೆ ಕೊಂಡೊಯ್ದು ನಮ್ಮ ಒತ್ತಡದ , ಯಾಂತ್ರಿಕ ಜೀವನಕ್ಕೆ ಟಾನಿಕ್ ನಂತೆ ಕಾರ್ಯ ಮಾಡುತ್ತವೆ.

ಯಾವುದಾದರೂ ಒಂದು ರಸವನ್ನು ಆಯ್ಕೆ ಮಾಡಿಕೋ ಎಂದರೆ ಹಾಸ್ಯವೇ ನನಗಿರಲಿ ಎನ್ನುವೆ. ಕೆಲವರು ಯಾವಾಗಲೂ ಹಳ್ಳೆಣ್ಣೆ ಕುಡಿದವರಂತೆ ಮುಖ ಮಾಡಿಕೊಂಡಿರುವರು,ಮತ್ತೆ ಕೆಲವರು ಸಿಡುಕು ಮೂತಿ ಸಿದ್ದಪ್ಪಗಳು, ಏನೂ ಬರೀ ಗಂಡಸರ ಹೆಸರೇ ಬಂದವೆಂದು ಬೇಸರ ಪಡಬೇಕಿಲ್ಲ, ಕೆಲ ಮಹಿಳಾ ಮಣಿಗಳು ಸುಂದರ ವದನವಿದ್ದರೂ ನಗಲು ಚೌಕಾಸಿ ಮಾಡುವರು. ಇಂಥವರನ್ನು ನೋಡಿಯೇ ನಮ್ಮ ಡುಂಡಿರಾಜರು

ಕ್ಯಾಷ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದ ಸಿಗದು|
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡ್
"ನಗದು"!!

ಎಂದು ಹನಿಗವನ ಬರೆದಿರುವರು

ನಗಲು ಕಡಿಮೆ ಶಕ್ತಿ ಬೇಕು ಸಿಟ್ಟಾಗಲು ಬಹಳ ಶಕ್ತಿ ಬೇಕು ನಗುತ್ತಿರಿ ಎಂದರೆ " ಅದೆಲ್ಲಾ ನಿನಗೇಕೆ ನಿನ್ದೇನೋ ಅದನ್ನು ನೋಡ್ಕೊ "  ಎಂದು ಉರಿದು ಬೀಳುವರಿಗೇನೂ ಕಡಿಮೆಯಿಲ್ಲ.

ಕೆಲವು ಹೆಣ್ಣು ಮಕ್ಕಳಿಗೆ ಗಂಡ ಕೇಳಿದ್ದು ಕೊಡಿಸಿದರೆ ಮಾತ್ರ ನಗು ಇಲ್ಲದಿರೆ ನಗು ಮಾಯ

ಅಂತಹವರ ಕಂಡು ಹೀಗೆ ಹೇಳಬಹುದು

ನನ್ನವಳು ಕೇಳಿದ್ದು
ಕೊಡಿಸಿದರೆ
ಮನೆಯೆಲ್ಲಾ
ನಗುಮಯ|
ಕೊಡಿಸದಿದ್ದರೆ
ನಗು ಮಾಯ||

ಇನ್ನೂ ಕೆಲವು ಮಹಿಳೆಯರಿಗೆ ಬಂಗಾರವೆಂದರೆ ಎಲ್ಲಿಲ್ಲದ  ಪ್ರಾಣ ಅದಕ್ಕೆ ಹೀಗೆ ಹೇಳಬಹುದು

ಅವಳ ವದನದಲಿ
ಮೂರು ದಿನದಿಂದ
ನಗುವಿಲ್ಲ|
ಕಾರಣವಿಷ್ಟೇ
ಅವಳ ಗಂಡನ
ಕಾಡಿ ಬೇಡಿದರೂ
ನಗವ ಕೊಡಿಸಿಲ್ಲ||

ಇತ್ತಿಚಿನ ದಿನಗಳಲ್ಲಿ ನಗುವ ಮಹತ್ವ ತಿಳಿದು ನಗರಗಳಲ್ಲಿ ಅಲ್ಲಲ್ಲಿ ನಗೆ ಕ್ಲಬ್ ಗಳು ,ನಗೆ ಕೂಟಗಳು ತಲೆ ಎತ್ತಿವೆ.

ಅವನು ಮನಸಾರೆ
ನಗಲು ಕಾರಣ
ನಗೆ ಕೂಟ|
ಯಾಕೋ ನಗೆ
ಮಾಯವಾಗುತ್ತದೆ
ನೋಡಿದ ತಕ್ಷಣ
ತಾಳಿ ಕಟ್ಟಿದ ಪೋಟ||

ಹೀಗೆ ದುಃಖ ಪಡಲು ಬೇಕಾದಷ್ಟು ಕಾರಣಗಳು ಸಿಗುತ್ತವೆ ನಗಬೇಕೆಂದು ನಾವು ತೀರ್ಮಾನವನ್ನು ಮಾಡಿದರೆ ನಮ್ಮ ಮನಸ್ಥಿತಿಯನ್ನು ಸಕಾರಾತ್ಮಕವಾಗಿ  ಬದಲಾಯಿಸಿಕೊಂಡರೆ ನಗುವುದು ಕಷ್ಟವೇನಲ್ಲ.

ಚಾರ್ಲಿ ಚಾಪ್ಲಿನ್ ರವರು ಹೇಳಿದಂತೆ "ನಾವು ಇಡೀ ದಿನದಲ್ಲಿ ಒಮ್ಮೆಯೂ ನಗದಿದ್ದರೆ  ಆ ದಿನ ವ್ಯರ್ಥ " ಹಾಗಾಗಿ ದಿನಗಳನ್ನು ಅನಗತ್ಯವಾಗಿ ವ್ಯರ್ಥ ಮಾಡದಿರೋಣ , ನಗು ನಗುತ್ತಾ, ನಗಿಸತ್ತಾ ಜೀವಿಸೋಣ ,ಈ ಲೇಖನ ಓದಿದ ಮೇಲೆ ಸಿಟ್ಟು ಬಿಡಿ, ಚಿಂತೆ ಬಿಡಿ,ಒಮ್ಮೆ ನಕ್ಕುಬಿಡಿ

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

14 July 2021

ಕನಸು .ಹನಿಗವನ


 



*ಕನಸು*


ಅವಳ ಸೌಂದರ್ಯ 

ನೆಟ್ಟ ಕಂಗಳ ಕೀಳದಂತಹ

ಸೊಗಸು|

ಆದರೆ ನನ್ನ ಗಮನ ಮಾತ್ರ

ಅವಳ ಕಂಗಳಲಿರುವ

ಕೋಟಿ ಕನಸು||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ಭಗವಂತನ ಸೇರೋಣ. ಲೇಖನ


 


ಭಗವಂತನ ಸೇರೋಣ ಕಿರುಲೇಖನ


ಭಗವಂತ ಸರ್ವಾಂತರ್ಯಾಮಿ, ನಿರಾಕಾರ,‌ನಿರ್ಗುಣ, ಸರ್ವಶಕ್ತ ಎಂಬುದು ನಮಗೆ ತಿಳಿದ ವಿಚಾರವೇ ಆಗಿದೆ.

 ಭಗವಂತನ ಇರುವಿಕೆ ,ಒಲಿಸಿಕೊಳ್ಳುವಿಕೆ , ಪೂಜಿಸುವಿಕೆಯ ವಿಚಾರದಲ್ಲಿ ಅನಾದಿ ಕಾಲದಿಂದಲೂ ಹಲವಾರು ಚರ್ಚೆಗಳು ನಡೆದಿದ್ದರೂ ಇದಮಿತ್ತಂ ಎಂಬ ತೀರ್ಮಾನಕ್ಕೆ ಬರಲಾಗಿಲ್ಲ,  ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಟಾದ್ವೈತ ಹೀಗೆ ವಿವಿಧ ಸಿದ್ದಾಂತಗಳು ಮಂಡನೆಯಾದರೂ ಯಾವುದೂ ಸರ್ವ ಸಮ್ಮತವಾದ ಸಿದ್ದಾಂತಗಳಲ್ಲ 


ಭಗವಂತನ ಆರಾಧನೆಗೆ ಮೊದಲು ಮೂರ್ತ ಸ್ವರೂಪದ ಆರಾಧನೆ ಮಾಡುವುದು ಒಳಿತು ,ಕ್ರಮೇಣ ನಮ್ಮ ಸಾಧನೆ , ಧ್ಯಾನ ,ಪ್ರಾರ್ಥನೆ, ಅನುಸಂಧಾನ , ಮುಂತಾದವುಗಳ ಆಧಾರದ ಮೇಲೆ ಅಮೂರ್ತವಾದ ಆರಾಧನೆ ಗೆ ಮುಂದಾಗಬಹುದು ಕೊನೆಗೆ ಅಹಂ ಬ್ರಹ್ಮಾಸ್ಮಿ ಎಂಬ ಸ್ತಿತಿಗೆ ತಲುಪಿ ಆತ್ಮ ಸಾಕ್ಷಾತ್ಕಾರ ಪಡೆಯಬಹುದು.


ಮೂರ್ತ ಅಮೂರ್ತಗಳ

ಗೊಡವೆಯಿಲ್ಲದೆ 

ಆರಾಧಿಸುವ ನಾವು

ಸರ್ವ ಶಕ್ತನ|

ಭಕ್ತಿಯ ಏಣಿಯ 

ಒಂದೊಂದೇ ಕಾಲನ್ನು

ಹತ್ತಿ ಸೇರೋಣ

ಭಗವಂತನ||



ಸಿಹಿಜೀವಿ

ಸಿ ಜಿ ವೆಂಕಟೇಶ್ವರ

13 July 2021

ಮಕ್ಕಳು ದೇವರಾಗಲಿ .ಲೇಖನ


 


ಮಕ್ಕಳು ದೇವರಾಗಲಿ

ಒಂಭತ್ತನೆಯ ತರಗತಿಯಲ್ಲಿ ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದೆ ಧಾರ್ಮಿಕ ಸುಧಾರಣಾ ಚಳುವಳಿ ಗೆ ಸಂಬಂಧಿಸಿದಂತೆ ಬೋಧನೆ ಮಾಡುವಾಗ   ನಮ್ಮೆಲ್ಲರಲ್ಲೂ ಆತ್ಮವಿದೆ ಈ ಆತ್ಮ "ಪರಮ" ಆತ್ಮನಲ್ಲಿ ಲೀನವಾದರೆ ನಾವು ಮುಕ್ತಿ ಪಡೆದಂತೆ, ಹಾಗಾಗಿ ಪ್ರತಿಯೊಂದು ಜೀವಿಯಲ್ಲಿ ಆತ್ಮವಿದೆ, ಹಾಗಾಗಿ  ಅವೆಲ್ಲವೂ ದೇವರ ಸಮಾನ ,ನೀವೂ ಸಹ ಎಂದೆ ,ತಟ್ಟನೆ ಒಬ್ಬ ವಿದ್ಯಾರ್ಥಿ ನಿಂತು ಸಾರ್ ಮತ್ತೆ‌ ನೀವು ತಪ್ಪು ಮಾಡಿದಾಗ ನನ್ನ ಹೊಡೆಯುತ್ತೀರಲ್ಲ, ಅದು ದೇವರನ್ನು ಹೊಡೆದಂತೆ ಅಲ್ಲವೇ? " ಎಂದನು. "ಹೌದು, ನನ್ನಲ್ಲೂ ಆತ್ಮ ಇದೆ ಹಾಗಾಗಿ ನಾನೂ ದೇವರೇ ಅಲ್ಲವೆ?  ದೇವರು ತಪ್ಪು ಮಾಡಿದಾಗ ದಂಡಿಸುವ ಹಕ್ಕು  ದೇವರಿಗೆ ಇರುವುದು ಅಲ್ಲವೇ ? ಎಂದು ನಗುತ್ತಾ ಕೇಳಿದಾಗ ನಗುತ್ತಲೆ ಆ ವಿದ್ಯಾರ್ಥಿ ಕುಳಿತ.

ದೇವರು ಸರ್ವಾಂತರ್ಯಾಮಿ, ಅವನು ಎಲ್ಲಾ ಕಡೆ ವಿವಿದ ರೂಪದಲ್ಲಿ ಇರುವನು ಅದರ ಮುಂದುವರೆದ ಭಾಗವಾಗಿ ಸಕಲ ಚರಾಚರಗಳಲ್ಲಿ ದೇವರ ಇರುವನ್ನು ಗುರ್ತಿಸಬಹುದು.

ಅದೇ ಅರ್ಥದಲ್ಲಿ ಮಕ್ಕಳು ದೈವಸ್ವರೂಪ ಎಂದು ಕರೆಯುವರು. ಮಕ್ಕಳ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು ಮಕ್ಕಳ ಅಗಲವಾದ ಬಟ್ಟಲುಗಣ್ಣುಗಳು, ಬೊಚ್ಚುಬಾಯಿ, ದುಂಡಾದ ಕೆನ್ನೆಗಳು, ನಿಶ್ಕಲ್ಮಶ ನಗು, ಸುಂದರ ನೋಟ ಎಂತವರನ್ನೂ ಮಂತ್ರ ಮುಗ್ದಗೊಳಿಸಿ ಒಮ್ಮೆ ಆ ಮಗುವನ್ನು ಎತ್ತಿ ಮುದ್ದಾಡಬೇಕು ಎನಿಸುತ್ತದೆ, ಪ್ರೀತಿಯಿಂದ ಕೈಚಾಚಿ ಕರೆದರೆ ಮಕ್ಕಳು ನಮ್ಮ ಕಡೆ ಬಂದೇ ಬರುತ್ತವೆ, ಭಕ್ತಿಯಿಂದ ಪೂಜಿಸಿದ ಭಕ್ತರ ಇಷ್ಟಾರ್ಥ ಸಿದ್ದಿಸುವ ದೇವರಂತೆ.

ಕೆಲವು ಕಡೆ ಮಕ್ಕಳನ್ನು ಅಕ್ಷರಶಃ ದೇವರಂತೆ ಅಲಂಕಾರ ಮಾಡಿ ಪೂಜಿಸುವ ಸಂಪ್ರದಾಯವಿದೆ, ನೇಪಾಳ ,ಪಿಲಿಪೈನ್ಸ್ ಮುಂತಾದ ದೇಶಗಳಲ್ಲಿ ಋತುಮತಿಯಾಗದ ಕನ್ಯೆಯನ್ನು ದೇವರೆಂದು ಪೂಜಿಸುವರು,ನಮ್ಮ ದೇಶದಲ್ಲೂ ಕೆಲವೆಡೆ ಮಕ್ಕಳಿಗೆ ಬ್ರಹ್ಮಚಾರಿ ಪೂಜೆ ಎಂಬ ಆಚರಣೆಯ ಮೂಲಕ ಮಕ್ಕಳಲ್ಲಿ ದೇವರ ಕಾಣುವರು.

ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳ ಪ್ರಭಾವ ಮತ್ತು ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಮಕ್ಕಳಾಗಿಲ್ಲ ಇನ್ನೂ ದೇವರಾಗುವುದು ಕನಸಿನ ಮಾತು, ಪೋಷಕರ ಕಣ್ ತಪ್ಪಿಸಿ ಮೊಬೈಲ್ ನಲ್ಲಿ ನೋಡಬಾರದ್ದನ್ನು ನೋಡುವುದರಿಂದ ಹಿಡಿದು ,ದೇಶದ್ರೋಹಿಗಳ ಜೊತೆಗೂಡಿ  ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಂಡು, ದೇಶಕ್ಕೆ ಕಂಟಕವಾದ ಉದಾಹರಣೆಗಳೂ ಇವೆ .

ಸಜ್ಜನ,ಸುಸಂಸ್ಕೃತ
ಮಕ್ಕಳ ಕುರಿತು ಅವರ
ಪೋಷಕರು
ಹೇಳಿಕೊಳ್ಳುವರು
ಇವರು ನನ್ನ ಮಕ್ಕಳು|
ದಾರಿ ತಪ್ಪಿದ ಮಕ್ಕಳ
ನೆನೆದು ಬೇಸರದಿ ಕೆಲವರು
ಬೈದು ಕೊಳ್ಳುವರು
ಕಳ್ ನನ್ ಮಕ್ಕಳು||

ಹೀಗೆ ಮಕ್ಕಳು ಬೆಳೆಯುವ ಪರಿಸರ ಸಮಾಜದ ಸ್ಥಿತಿಗಳು ಮುಂತಾದ ಅಂಶಗಳು ಹುಟ್ಟಿನಿಂದ ದೇವರಾಗಿರುವ ಮಕ್ಕಳು ದಾನವರಾಗಬಹುದು ,ಕೆಲವೊಮ್ಮೆ ದೈವಿಕ ಗುಣವಿರುವ ವಿಶಾಲ ಮನೋಭಾವದ ಅನಿಕೇತನ ಪರಿಕಲ್ಪನೆಯು ಮಕ್ಕಳನ್ನು ಜಾತಿ, ಮತ ,ಪಂತಗಳ ಹೆಸರಲ್ಲಿ ಸಂಕುಚಿತರನ್ನಾಗಿಸುತ್ತದೆ.

ಮಕ್ಕಳು ದೇವರಾಗಲಿ, ದೇವರು ನಮ್ಮ ದೇಶ,ಸಂಸ್ಕೃತಿ ಮತ್ತು ಮಾನವ ಜನಾಂಗವನ್ನು ಕಾಪಾಡಲಿ ಎಂಬುದೇ ಸಿಹಿಜೀವಿಗಳ ಆಶಯ.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

ಮಿಕ .ಹನಿಗವನ


 


ಮಿಕ


ಮುಖಪುಟದಲ್ಲಿ

ಪರಿಚಿತರಾಗಿದ್ದವರಿಗೆ

ಮೋಸ ಮಾಡಿದ ರಾಣಿ

ಮನದಲೆ ಅಂದುಕೊಂಡಳು

"ರಾತ್ರಿಯೇ ಇವನ ಆಭರಣ 

ಹಣ,ದೋಚಬೇಕು ಇವನು

ಹತ್ತರಲ್ಲಿ ಹನ್ನೊಂದನೇ ಮಿಕ|

ಬೆಳಿಗ್ಗೆ ಎಚ್ಚರವಾದಾಗ

ಹಾಸಿಗೆಯಲ್ಲಿ ಅವನಿರಲಿಲ್ಲ

ಅವಳ ಬಂಗಾರದ ಸರ 

ಮತ್ತು ಬಳೆಗಳೂ 

ಅಲ್ಲೇ ಇದ್ದ ಪತ್ರ 

ಓದಿದಳು ನಿನ್ನ

"ಬಂಗಾರವ ನೀಡಿದ

ಬಂಗಾರಿಗೆ ಧನ್ಯವಾದಗಳು"

ಇಂತಿ ಅನಾಮಿಕ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


12 July 2021

ಸರಳತೆಯೇ ಸೌಂದರ್ಯ .ಹನಿ

 




*ಸರಳತೆಯೇ ಸೌಂದರ್ಯ*

(ಇಂದು ರಾಷ್ಟ್ರೀಯ ಸರಳತೆಯ ದಿನ)

ಆಡಂಬರದಲಿಲ್ಲ
ಸೌಂದರ್ಯ ಮತ್ತು ಘನತೆ
ಅಳವಡಿಸಿಕೊಳ್ಳೋಣ
ಸರಳತೆ |
ಅಗೋ ನೋಡು
ಸೌಂದರ್ಯದಿ ಬೀಗುತಿದೆ
ಮರವ ತಬ್ಬಿದ ಲತೆ ||

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ

11 July 2021

ಹಾಯ್ಕುಗಳು. ಜನಸಂಖ್ಯಾದಿನ


 


ಸಿಹಿಜೀವಿಯ ಹಾಯ್ಕುಗಳು


ವಿಶ್ವ ಜನಸಂಖ್ಯಾ ದಿನ 


ನಿಯಂತ್ರಿಸಿ 

ಸಮಸ್ಯೆಗಳ ಕಾಟ

ಜನರ ಸ್ಪೋಟ.

 



ಜನಬಲವು

ಮಾನವ ಸಂಪನ್ಮೂಲ

ಇರಲಿ ಬಿಡಿ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

ತುಮಕೂರು


ವೈಬ್ರಂಟ್ ಮೈಸೂರು ೧೧/೭/೨೧


 

ಜನಮಿಡಿತ ೧೧/೭/೨೧


 

10 July 2021

ಸಿಂಹಧ್ವನಿ . ೧೦/೭/೨೧


 

ಜನಮಿಡಿತ . ೧೦/೭/೨೧


 

ನನ್ನ ವೃತ್ತಿ ನನ್ನ ಹೆಮ್ಮೆ .ಲೇಖನ .


 



ನನ್ನ ವೃತ್ತಿ ನನ್ನ ಹೆಮ್ಮೆ


ಬಾಲ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದ ತಿಪ್ಪೇಸ್ವಾಮಿ ರವರ ಪಾಠ ಕೇಳಿದಾಗಿನಿಂದ ನಾನೂ ಅವರಂತೆ ಶಿಕ್ಷಕನಾಗಬೇಕು ಎಂದು ಆಸೆ ಪಟ್ಟಿದ್ದೆ ,ಬೆಳೆದಂತೆ ಯಾಕೋ ನನ್ನ ಗುರಿ ಆಫೀಸರ್ ಆಗಬೇಕು ಎಂದು ಬದಲಾಯಿತು, ಯಾಕೋ ದೇವರು ಮೊದಲ ಬೇಡಿಕೆಗೆ  ಅಸ್ತು ಅಂದಿರಬೇಕು ,ನಾನು ಈಗ ಶಿಕ್ಷಕ  .!


ಇಪ್ಪತ್ತೊಂದು ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ನಾನು ನನ್ನ ವೃತ್ತಿ ಜೀವನದಲ್ಲಿ ,ಕನ್ನಡ ಇಂಗ್ಲಿಷ್‌, ಹಿಂದಿ, ಗಣಿತ ,ವಿಜ್ಞಾನ, ಸಮಾಜ ವಿಜ್ಞಾನ, ಹೀಗೆ ಎಲ್ಲಾ ವಿಷಯಗಳನ್ನೂ ಬೋಧಿಸುವ ಅವಕಾಶ ಲಭಿಸಿತು.


2004 ನೇ ಇಸವಿಯಿಂದ ಸಮಾಜ ವಿಜ್ಞಾನ ವಿಷಯ ಬೋಧನೆ ಮಾಡುತ್ತಿರುವೆ , ಬೋಧಿಸುವ  ಎಲ್ಲಾ ವಿಷಯಗಳಲ್ಲಿ ಯಾವುದೂ ಮೇಲು, ಕೀಳೆಂಬುದಿಲ್ಲ ಆದರೂ ಅವರವರು ಬೋಧಿಸುವ ವಿಷಯದಲ್ಲಿ ಅವರಿಗೆ ಸ್ವಲ್ಪ ಅಭಿಮಾನ, ಮತ್ತು ಪ್ರೀತಿ, ಅದು ಇರಲೇ ಬೇಕು ಏಕೆಂದರೆ ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ಲವೆ?


ಸಮಾಜ ವಿಜ್ಞಾನ ಶಿಕ್ಷಕನಾಗಿ ನನಗೆ ಹೆಮ್ಮೆ ಎನಿಸುವುದು ಏಕೆಂದರೆ ನಾನು ಒಂದೇ ವಿಷಯದಲ್ಲಿ ಆರು ವಿಷಯಗಳನ್ನು ಕಲಿಸುವೆನು, ನಾವು ಬಾಲ್ಯದಲ್ಲಿ ಓದುವಾಗ "ಸಮಾಜ ಪರಿಚಯ," ಎಂಬ  ಪಠ್ಯ ಪುಸ್ತಕ ಇತ್ತು, ಇದರಲ್ಲಿ ಇತಿಹಾಸ ಪೌರನೀತಿಯ ಒಂದು ಭಾಗ ಮತ್ತು ಭೋಗೋಳದ ಒಂದು ಚಿಕ್ಕ ಪುಸ್ತಕ ಇರುತ್ತಿತ್ತು, ಅದರೆ ಈಗ ನಾನು ಬೋಧಿಸುವ ವಿಷಯ ಸಮಾಜ ಪರಿಚಯ ದಿಂದ ಸಮಾಜ ವಿಜ್ಞಾನ ಆಗಿ ಭಡ್ತಿ ಪಡೆದು ತನ್ನ ಒಡಲಲ್ಲಿ ಆರು ವಿಷಯಗಳನ್ನು ಅಡಗಿಸಿಕೊಂಡಿದೆ. 


ಮೊದಲು ಕನ್ನಡ ಮತ್ತು ಸಮಾಜ ಬಾಳ ಸುಲಭ ಎಂದು ನಂಬಿದ್ದರು ,ಆದರೆ ಸಮಾಜ ವಿಜ್ಞಾನ ವಿಷಯ ಈಗ ಬಹಳ ಸುಲಭ ಎಂದು ಯಾರೂ ಧೈರ್ಯವಾಗಿ ಹೇಳಲಾಗುತ್ತಿಲ್ಲ , ಹೇಗೆ ಹೇಳುತ್ತಾರೆ? ಒಂದು ವಿಷಯದಲ್ಲಿ ಆರು ವಿಷಯಗಳಾದ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಭೋಗೋಳ ವಿಜ್ಞಾನ, ಅರ್ಥಶಾಸ್ತ್ರ, ಮತ್ತು ವ್ಯವಹಾರ ಅಧ್ಯಯನ, ಸೇರಿಕೊಂಡಿವೆ , ವಿದ್ಯಾರ್ಥಿಗಳಿಗೆ ಈ ಮೇಲಿನ ವಿಷಯಗಳಲ್ಲಿ ಒಂದು ಇಷ್ಟ ಆದರೆ ಮತ್ತೊಂದು ಕಷ್ಟ ಆಗುವ ಸಾದ್ಯತರ ಇದ್ದೇ ಇರುತ್ತದೆ.


ಆದರೂ ನಾನು ಎಂದಿಗೂ ನನ್ನ  ಸಂಪರ್ಕ ಕ್ಕೆ ಬಂದ ವಿದ್ಯಾರ್ಥಿಗಳಿಗೆ ನನ್ನ ವಿಷಯ ಕಠಿಣ ಎಂದು ಹೇಳಲು ಅವಕಾಶ ಮಾಡಿಕೊಡುವುದಿಲ್ಲ . ಸಮಾಜ ವಿಜ್ಞಾನ ವಿಷಯವು ಬಹಳ ಸುಲಭ ವಿಷಯ ಎಂದು ಧೈರ್ಯ ತುಂಬುತ್ತಲೇ ನನ್ನ ಬೋಧನಾ ವಿಧಾನದಲ್ಲಿ ಸಾಂಪ್ರದಾಯಿಕ ವಿಧಾನದ ಬದಲಿಗೆ ಆಧುನಿಕ ಆಕರ್ಷಿಸುವ ನೂತನ ಪದ್ದತಿಯಲ್ಲಿ ಬೋಧನೆ ಕೈಗೊಳ್ಳುವೆ , ಇದಕ್ಕೆ ಇಲಾಖೆಯ ಟಾಲ್ಪ್ ತರಬೇತಿಯು ನಮಗೆ ತಾಂತ್ರಿಕ ಸಹಾಯ ನೀಡಿದರೆ, ಶಿಕ್ಷಣ ಇಲಾಖೆ ಮತ್ತು ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ನೀಡಿವೆ . ರಾಜ್ಯದ ನಮ್ಮ ವಿಷಯ ಸಹಶಿಕ್ಷಕರ ಬೆಂಬಲವನ್ನು ನಾನು ಮರೆಯಲು ಸಾಧ್ಯವಿಲ್ಲ,

ಇದರ ಪರಿಣಾಮವಾಗಿ ಸ್ಮಾರ್ಟ್ ಕ್ಲಾಸ್ ಮೂಲಕ ಮಕ್ಕಳಿಗೆ ಇತಿಹಾಸ,  ಭೂಗೋಳ, ಅರ್ಥಶಾಸ್ತ್ರ, ವ್ಯವಹಾರ ಅದ್ಯಯನ ಮುಂತಾದ ವಿಷಯಗಳ ಕ್ಲಿಷ್ಟಕರವಾದ ಪರಿಕಲ್ಪನೆಗಳನ್ನು ದೃಕ್ ಶ್ರವಣ ಮಾದ್ಯಮ ಮೂಲಕ ಪ್ರಸ್ತುತ ಪಡಿಸಿ ಮಕ್ಕಳಲ್ಲಿ ಸಂತಸದಾಯಕ ಕಲಿಕೆ ಉಂಟುಮಾಡುತ್ತಿರುವೆ ,ಇದರ ಪರಿಣಾಮವಾಗಿ ಆರು ವಿಷಯಗಳಿದ್ದರೂ ಎಂದೂ ಸಮಾಜ ವಿಜ್ಞಾನ ಕಠಿಣ ಎಂದು ನನ್ನ ವಿದ್ಯಾರ್ಥಿಗಳು ಭಾವನೆ ವ್ಯಕ್ತ ಪಡಿಸಿಲ್ಲ.


ಶಿಕ್ಷಕನಾದವನು ಸದಾ ವಿದ್ಯಾರ್ಥಿ ಎಂಬ ಭಾವನೆಯಲ್ಲಿ ನಂಬಿಕೆ ಇಟ್ಟುಕೊಂಡ ನಾನು ಮಕ್ಕಳಿಗೆ ಕಲಿಸುವ ಮೊದಲು ಈ ಆರು ವಿಷಯಗಳ ಓದಿ,ಮನನ ಮಾಡಿಕೊಂಡು,ಪ್ರಸಕ್ತ ವಿದ್ಯಮಾನಗಳಿಗೆ ಸಹಸಂಬಂಧ ಕಲ್ಪಿಸಿ ಬೊಧನೆ  ಮಾಡುವುದರಿಂದ , ಪರೋಕ್ಷವಾಗಿ ನನಗೂ ಜ್ಞಾನವನ್ನು ಪಡೆಯಲು ನನ್ನ ಈ ವೃತ್ತಿ ಸಹಕಾರಿಯಾಗಿದೆ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ.


ನಮ್ಮ ವಿಷಯಗಳಲ್ಲಿ ಕೇವಲ ತರಗತಿಯ ಬೋಧನೆಗೆ ಅವಕಾಶವಿಲ್ಲ ಬದಲಾಗಿ, ಶಾಲಾ ಸಂಸತ್ತು, ಯುವ ಸಂಸತ್ ಮುಂತಾದವುಗಳ ಆಯೋಜನೆ ,ಸಮಾಜ ವಿಜ್ಞಾನ ಕ್ಲಬ್, ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಲವಾರು ಸಹ ಪಠ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಭಾವಿ ಜವಾಬ್ದಾರಿಯುತ ನಾಗರಿಕರು, ಮುಂದಿನ ಪೀಳಿಗೆಯ ನಾಯಕರ ಜವಾಬ್ದಾರಿಗಳನ್ನು ಅರಿಯುವಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವೆನು.


ಇದರ ಜೊತೆಯಲ್ಲಿ ಮಕ್ಕಳಿಗೆ ನಮ್ಮ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರಾಚ್ಯ ಪ್ರಜ್ಞೆ ಎಂಬ ಕಾರ್ಯ ಕ್ರಮಗಳನ್ನು ಆಯೋಜನೆ ಮಾಡುವೆನು , 


ನಮ್ಮ ಕೆಲ ಸ್ನೇಹಿತರು ಸಮಾಜ ವಿಜ್ಞಾನ ವಿಷಯ ಶಿಕ್ಷಕರ ಕಂಡು ತಮಾಷೆಯಾಗಿ, ಬ್ರಹ್ಮ ನಿಗೆ ನಾಲ್ಕು ತಲೆಗಳಾದರೆ ಸಮಾಜ ವಿಜ್ಞಾನ ವಿಷಯದಲ್ಲಿ ಆರು  ಉಪ ವಿಷಯಗಳ ಬೋಧಿಸುವ ‌ನಿಮಗೆ ಆರು ತಲೆಗಳಿರುವವು ಎಂಬ ಮಾತಿನಲ್ಲಿ ಅತಿಶಯವಿದ್ದರೂ ಪೂರ್ಣ ಸುಳ್ಳಲ್ಲ ಎನಿಸದಿರದು.


ಸರ್ಕಾರಿ ಶಾಲಾ ಶಿಕ್ಷಕನಾಗಿ ನನಗೆ ಸರ್ಕಾರ ನೀಡುವ ಸಂಬಳಕ್ಕೆ ನ್ಯಾಯ ಒದಗಿಸಲು     ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರುವೆ ,ಸಮಾಜ ವಿಜ್ಞಾನ ಶಿಕ್ಷಕನಾಗಿ ಇನ್ನೂ ಹೆಚ್ಚಿನ ಭಾವಿ ಉತ್ತಮ ಪ್ರಜೆಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವೆ .ಸಮಾಜ ವಿಜ್ಞಾನ ಶಿಕ್ಷಕನಾಗಿ ಇದುವರೆಗೂ ಬೋಧಿಸಿರುವ ಇಪ್ಪತ್ತೊಂದು ವರ್ಷಗಳ ಬೋಧನಾ ಅನುಭವ ಆತ್ಮತೃಪ್ತಿ ನೀಡಿದೆ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳಿಗೆ ಮಾರ್ಗದರ್ಶನ ನೀಡಲು ಉತ್ಸುಕನಾಗಿರುವೆ, ನಿರ್ಜೀವ ಯಂತ್ರಗಳ ಬದಲಿಗೆ ಜೀವವಿರುವ ವಿದ್ಯಾರ್ಥಿಗಳ ಜೊತೆ ಒಡನಾಡುವ ನನ್ನ  ಶಿಕ್ಷಕ ವೃತ್ತಿಯ ಬಗ್ಗೆ ನನಗೆ ಎಲ್ಲಿಲ್ಲದ ಗೌರವ .ಅದಕ್ಕೆ ಹೆಮ್ಮೆಯಿಂದ ಹೇಳುವೆ " ನನ್ನ ವೃತ್ತಿ ನನ್ನ ಹೆಮ್ಮೆ "


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


09 July 2021

ತುಂಬಿಸಿಕೊಳ್ಳದಿರಲಿ ತಮ್ಮ ಜೋಳಿಗೆ


 


ತುಂಬಿಸಿ ಕೊಳ್ಳದಿರಲಿ ತಮ್ಮ ಜೋಳಿಗೆ 


ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ 

ವಿದ್ಯಾವಂತ ಯುವಕರ ರಾಜಕೀಯ ಪ್ರವೇಶವಾಗುತ್ತಿರುವುದು ಆಶಾದಾಯಕ ಬದಲಾವಣೆ ಎನ್ನಬಹುದು .ಅಂದರೆ ಇವರು ಮಾತ್ರ ಕಡಿದು ಕಟ್ಟೇ ಹಾಕುವರು ಅವಿದ್ಯಾವಂತ ರಾಜಕಾರಣಿಗಳು ಏನೂ ಸಾಧನೆ ಮಾಡಿಲ್ಲ ಎಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ.

"ಓದು ಒಕ್ಕಾಲು ಬುದ್ದಿ ಮುಕ್ಕಾಲು " ಎಂಬ ವಾಣಿಯಂತೆ ಹಲವಾರು ರಾಜಕಾರಣಿಗಳು ಓದು ಕಡಿಮೆಯಾದರೂ ಚಾಕ ಚಾಕ್ಯತೆಯಿಂದ ಕೆಲಸ ಮಾಡಿ ಜನಮಾನಸದಲ್ಲಿ ಇಂದಿಗೂ ಸ್ಥಾನ ಪಡೆದಿರುವುದು ಸುಳ್ಳಲ್ಲ.

ಆದರೆ ಬದಲಾದ ಕಾಲಘಟ್ಟದಲ್ಲಿ ಇಂದಿನ ಕಂಪ್ಯೂಟರ್‌ ಯುಗದಲ್ಲಿ, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ದಿನದಿಂದ ದಿನಕ್ಕೆ ನಾವೆಲ್ಲರೂ ಅಪ್ಡೇಟ್ ಆಗಲೇ ಬೇಕಿದೆ ಇದಕ್ಕೆ   ವಯಸ್ಸಾದವರು ಬೇಗನೆ ಹೊಂದಿಕೊಳ್ಳಲು ಕಷ್ಟ ಆಗಬಹುದು ,ಆ ನಿಟ್ಟಿನಲ್ಲಿ ಯೋಚಿಸಿದಾಗ ರಾಜಕೀಯ ರಂಗಕ್ಕೆ ಯುವ ವಿದ್ಯಾವಂತರ ಆಗಮನವನ್ನು ಸಕಾರಾತ್ಮಕವಾಗಿ ನೋಡಬೇಕಾಗುತ್ತದೆ.


ಜನರ ಸೇವೆಗೆ 

ರಾಜಕೀಯ ವ್ಯವಸ್ಥೆಗೆ

ಬೇಕಿದೆ ಹೊಸ ನೀರು|

ಬಂದ ಕೆಲವೇ

ದಿನಗಳಲ್ಲಿ ಜನರ

ಮರೆತು ಅವರು

ತೋರದಿರಲಿ ತಮ್ಮ

ಕುಟುಂಬದ ಕಾರುಬಾರು||



ಆದ್ದರಿಂದ ಜನಸೇವೆಯ ಉದ್ದೇಶ ಇಟ್ಟುಕೊಂಡು ಬರುವ ಎಲ್ಲಾ ಯುವಕರಿಗೆ ಕಿವಿಮಾತಾಗಿ ಈ ಮೇಲಿನ ಹನಿಗವನ ಹೇಳಬೇಕಾಯಿತು.


ಇಂದಿನ ದಿನಮಾನಗಳಲ್ಲಿ ರಾಜಕೀಯವನ್ನು ಒಂದು ಉದ್ಯಮವಾಗಿ ನೋಡುವವರ ಸಂಖ್ಯೆ ಹೆಚ್ಚಾಗಿದೆ ,ರಾಜಕೀಯ ಎಂದರೆ ಸ್ವ ಹಿತಾಸಕ್ತಿ, ತಮ್ಮ ಕುಟುಂಬದ ಅಭಿವೃದ್ಧಿ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ ಇದು ತೊಲಗಲು ಯುವ ರಾಜಕಾರಣಿಗಳು ಪಣ ತೊಡಬೇಕಿದೆ.


ಬಹಳ ಆದರದ ಸ್ವಾಗತ

ಬಂದರೆ ರಾಜಕಾರಣಕ್ಕೆ

ವಿದ್ಯಾವಂತ ಯುವಪೀಳಿಗೆ|

ಕ್ರಮೇಣ ಜನಸಾಮಾನ್ಯರ

ಮರೆತು ತುಂಬಿಸಿಕೊಳ್ಳದಿರಲಿ

ತಮ್ಮ ಕುಟುಂಬದ ಜೋಳಿಗೆ||



ಆರಂಭಶೂರರಂತೆ ಕೆಲ ಯುವ ರಾಜಕಾರಣಿಗಳು ಪ್ರಾಮಾಣಿಕವಾಗಿ ಜನ ಸೇವೆ ಮಾಡಿ ಜನಮನ್ನಣೆ ಗಳಿಸಿ ನಂತರ ವ್ಯವಸ್ಥೆಯಲ್ಲಿ ಅವರೂ ಹತ್ತರಲ್ಲಿ ಹನ್ನೊಂದು ಎಂಬಂತಾಗಿ ಬಿಡುವರು.


ಹೊಸದಾಗಿ ಗೆದ್ದ 

ನಮ್ಮ ಜನಪ್ರತಿನಿಧಿ

ಸೇವೆ ಮಾಡಲು 

ಜನರ ಬಳಿ ತೆರಳುತ್ತಿದ್ದರು

ಮತ್ತೆ ಮತ್ತೆ|

ಈಗೀಗ ಪಾಪ ಅವರಿಗೆ

ಪುರುಸೊತ್ತಿಲ್ಲ 

ಬರು ಬರುತ್ತಾ

ಆಗುತ್ತಿದೆ ರಾಯರ

ಕುದುರೆ ಕತ್ತೆ||


ಎಂಬಂತಾಗಬಾರದು ಜನರಿಗೆ ಅಗತ್ಯವಿದ್ದಾಗ ಸ್ಪಂದಿಸುವ ಗುಣವನ್ನು ಎಲ್ಲಾ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕಿದೆ, ಪ್ರಪಂಚದಲ್ಲೇ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ,ಪ್ರಪಂಚದಲ್ಲೇ ಅತೀ ಉತ್ತಮ ಸಂವಿಧಾನವನ್ನು ಹೊಂದಿರುವ ನಮ್ಮ ದೇಶದಲ್ಲಿ ಅದಕ್ಕೆ ತಕ್ಕಂತೆ ಉತ್ತಮ ಸಜ್ಜನ , ವಿದ್ಯಾವಂತ ರಾಜಕಾರಣಿಗಳು ಜನಸೇವೆಯಲ್ಲಿ ತೊಡಗಿದರೆ ನಮ್ಮ ಭಾರತವು ಇನ್ನೂ ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

08 July 2021

ಗುಂಡಿಗೆ ಹನಿಗವನ .


 


*ಗುಂಡಿಗೆ*


ಗಡಿಯಲ್ಲಿ ಶತೃಗಳ

ಒಳಸಂಚನ್ನು ಅರಿತು

ಒಬ್ಬನೇ ನುಗ್ಗಿ 

ದೇಶ ರಕ್ಷಣೆಗಾಗಿ

ಹೋರಾಡಿದ ಸೈನಿಕ

ಹತ್ತಾರು ಉಗ್ರರು

ಹತರಾದರು ಅವನ

ಗುಂಡಿಗೆ|

ಮರೆಮಾಚಿ ಬಂದ

ಶತೃ ಕೊಂದೇ ಬಿಟ್ಟ

ವೀರಸೈನಿಕನ ,

ಅವನ ಜೇಬಲಿ

ಸಿಕ್ಕ ಪತ್ರ ಓದಿದ

ಶತೃ ಸೈನಿಕನ‌ 

ಕಣ್ಣಾಲಿಗಳು ತುಂಬಿದವು,

ಪತ್ರದಲ್ಲಿ ಬರೆದಿತ್ತು

"ಬೇಗ ಬಂದು ಬಿಡು

ನಿಂತಿದೆ ನಿನ್ನ ಮಗನ

ಗುಂಡಿಗೆ"||


"ಸಿಹಿಜೀವಿ*

ಸಿ ಜಿ ವೆಂಕಟೇಶ್ವರ


07 July 2021

ಇಂದಿನ ಸಿಂಹ ದ್ವನಿ ಪತ್ರಿಕೆ ೭/೭/೨೧


 

ನನ್ನ ನೇತಾಜಿ ‌ಲೇಖನ

 




ನನ್ನ ನೆಚ್ಚಿನ ಸ್ವತಂತ್ರ ಹೋರಾಟಗಾರ ನೇತಾಜಿ!


ಹೆಸರಲ್ಲೇ ನೇತಾರನ ಗುಣ ಹೊಂದಿರುವ ಸುಭಾಷ್ ಚಂದ್ರ ಬೋಸ್ ಬ್ರಿಟೀಷರಿಗೆ ಸಿಂಹಸ್ವಪ್ನವಾಗಿದ್ದರು. ದೇಶದ ಸ್ವತಂತ್ರ ಪಡೆಯಲು ಸಣ್ಣ ಮಟ್ಟದ ತ್ಯಾಗ ಮತ್ತು ಬದ್ದತೆ ಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಸಲು ಗೀವ್ ಮಿ ಬ್ಲಡ್ ಐ ವಿಲ್ ಗೀವ್ ಯು  ಇಂಡಿಪೆಂಡನ್ಸ್ ಎಂದು ಗರ್ಜಿಸಿದ ಧೀರ ನೇತಾಜಿ ನಮ್ಮ ಸುಭಾಷ್.


ನೇತಾರನಿಗಿರಬೇಕಾದ ಗುಣಗಳನ್ನು ಹುಟ್ಟಿನಿಂದಲೇ ಪಡೆದುಕೊಂಡು ಬಂದ ಸುಭಾಷ್ ರವರ ಸಂಘಟನಾ ಚಾತುರ್ಯ ಕಂಡು ಇಂಗ್ಲೀಷರು ಕೂಡಾ ಬೆಚ್ಚುತ್ತಿದ್ದರು.

ಪಾರ್ವಡ್ ಬ್ಲಾಕ್ ಸಂಘಟನೆಯ ಮೂಲಕ ದೇಶಾದ್ಯಂತ ಸ್ವಾಭಿಮಾನ  ಸ್ವತಂತ್ರ ಮತ್ತು ಸ್ವಾವಲಂಬನೆಯ ಕಿಚ್ಚು ಹತ್ತಿಸಿದರು .


"ದಿಲ್ಲಿ ಚಲೋ "ಎಂಬ  ಘೋಷಣೆಯೊಂದಿಗೆ  ಸಾಮಾನ್ಯರಲ್ಲಿ ಸ್ವಾತಂತ್ರ್ಯ ಜ್ಯೋತಿಯನ್ನು ಹಚ್ಚಿದರು, ಅದು ದೇಶಾದ್ಯಂತ ಬಹಳ ಯಶಸ್ವಿಯಾದ ಚಳುವಳಿಗಳಲ್ಲಿ ಒಂದಾಯಿತು.


ದೇಶಾದ್ಯಂತ ಸ್ವತಂತ್ರ ಹೋರಾಟದ ಪ್ರೇರಣೆ ನೀಡಿದ ನೇತಾಜಿರವರು ವಿದೇಶದಲ್ಲೂ ಸಂಘಟನೆಗೆ ತೊಡಗಿದರು, ಶತೃವಿನ ಶತೃ ನಮ್ಮ ಮಿತ್ರ ಎಂಬಂತೆ ನಮ್ಮ ಶತೃಗಳಾದ ಆಂಗ್ಲರ ವಿರೋಧಿಗಳಾದ ಜಪಾನ್ ಮತ್ತು ಜರ್ಮನಿಯ ದೇಶಗಳ ಸಹಾಯ ಪಡೆದು "ಆಜಾದ್ ಹಿಂದ್ ಪೌಜ್" ಎಂಬ  ಸೇನೆ ಕಟ್ಟಿದರು , ಮಹಿಳಾ ಸಬಲೀಕರಣದ ತತ್ವಗಳನ್ನು ಅಂದೇ ಬೆಂಬಲಿಸಿದ್ದ ನೇತಾಜಿರವರು ಆಜಾದ್ ಹಿಂದ್ ಪೌಜ್ ನಲ್ಲಿ ಮಹಿಳಾ ವಿಭಾಗ ಪ್ರಾರಂಭಿಸಿ ,ಕ್ಯಾಪ್ಟನ್ ಲಕ್ಷ್ಮೀ ಸೆಹೆಗಲ್ ರವರಿಗೆ ಅದರ ನೇತೃತ್ವ. ವಹಿಸಿದ್ದರು, 


ಅಂಡಮಾನ್ ನಿಕೋಬಾರ್ ದ್ವೀಪಗಳು ಮತ್ತು ನಾಗಾಲ್ಯಾಂಡ್ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಸುಭಾಷ್ ರವರು 1945ರಲ್ಲೇ ಭಾರತಕ್ಕೆ ಸ್ವತಂತ್ರ  ತಂದುಕೊಡುವ ಭರವಸೆ ನೀಡಿದರು, ಆದರೆ ನಿಗೂಢ ರೀತಿಯಲ್ಲಿ ಅವರು ಕಣ್ಮರೆಯಾದ ರೀತಿ ಕೋಟ್ಯಾಂತರ ಭಾರತೀಯ ಮನಗಳಿಗೆ ಆಘಾತ ನೀಡಿತು.


ಇಂದಿನ ಪೀಳಿಗೆಯು ಸುಭಾಷ್ ರಂತಹ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಳ್ಳಬೇಕಿದೆ ಅವರ ತತ್ವ ಆದರ್ಶ ಗಳನ್ನು ಅಳವಡಿಸಿಕೊಳ್ಳ ಬೇಕಿದೆ ,ಇದೇ ನಾವು ಆ ಹಿರಿಯ ಚೇತನಕ್ಕೆ ನೀಡುವ ಗೌರವವಾಗಿದೆ .



ಸಿಹಿಜೀವಿ

ಸಿ ಜಿ ವೆಂಕಟೇಶ್ವರ


06 July 2021

ಧನಾತ್ಮಕ ಚಿಂತನೆ

 


ಚಿಂತಿಸಬೇಕಿಲ್ಲ


ಧನವಿರದಿದ್ದರೂ 

ಚಿಂತಿಸಬೇಕಿಲ್ಲ

ಧನವೊಂದೇ 

ಜೀವನವಲ್ಲ 

ಧನಾತ್ಮಕವಾಗಿ

ಯೋಚಿಸೋಣ |

ಸುಖ ನೆಮ್ಮದಿ

ಜೀವನವನ್ನು

ಪಡೆಯೋಣ||


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

05 July 2021

ಸಿಹಿಜೀವಿಯ ಸ್ಪೂರ್ತಿ ನುಡಿಗಳು.


 

ಸಿಹಿಜೀವಿಯ ಸ್ಪೂರ್ತಿ ನುಡಿಗಳು

ಬರೀ ಬಿರು ಬಿಸಿಲು, ಭುವಿಗೆ ಯಾರೋ ಬೆಂಕಿ ಹಚ್ಚಿರುವರು, ಮಳೆ ಮರೀಚಿಕೆಯಾಗಿದೆ ನಾವು ಬದುಕುವುದೇಗೆ? ಎಂದು ಸರ್ವರೂ
ಕಂಗಾಲಾಗಿರುವಾಗ ಬಾಲಕಿಯೋರ್ವಳು ಕೊಡೆ ಹಿಡಿದು ಇಂದು ಮಳೆ ಬರುವುದು ಎಂದು ಹೇಳಿ ಮನೆಯಿಂದ ಹೊರಬಂದಳು .

ಬಂಜೆಯೆಂದು ಮೂದಲಿಸಿಕೊಂಡು ಸಮಾಜದ ಅವಗಣನೆಗೆ ಪಾತ್ರವಾದವಳು , ದಿನವೂ ತಾನು ನೆಟ್ಟ  ಗಿಡಗಳಿಗೆ ನೀರುಳಿಸಿ ,ಗೊಬ್ಬರ ಹಾಕಿ ,ಇವು ನೆರಳು ,ಫಲ ನೀಡೇ ನೀಡುವವು ಎಂದು ವಿಶ್ವಾಸದಿಂದ ಹೇಳುತ್ತಿದ್ದಳು.

ಅವಳು ತೊರೆದು ವರುಷಗಳಾದರೂ ,ಬರುವಳೆಂಬ ಭರವಸೆಯಿಂದ ಮನದಲ್ಲೇ ಅವಳಿಗೊಂದು ಮಹಲ್ ಕಟ್ಟಿರುವನು, ದೀಪ ಮಾತ್ರ ಹಚ್ಚಬೇಕಿದೆ.

ಬೆಲೆ ಕುಸಿತ  , ಬರ, ಅತಿವೃಷ್ಟಿ ಅನಾವೃಷ್ಟಿ, ಸಾಲ , ಮುಂತಾದ ಸಮಸ್ಯೆಗಳನ್ನು ಹಾಸಿ ಹೊದ್ದರೂ, ನಮ್ಮ ರೈತ ತನ್ನ ಎತ್ತುಗಳ ಜೊತೆಗೆ ಉಳುಮೆ ಮಾಡಲು ಮುಂಜಾನೆಯೇ  ಹೊಲಕ್ಕೆ ಹೊರಟ .


ಬೆಂಕಿ ಅವಘಡವೊಂದರಲ್ಲಿ   ಮನೆ, ಮಠ,  ತನ್ನವರೆಲ್ಲರನ್ನು ಕಳೆದುಕೊಂಡ ಸಿರಿವಂತ ವ್ಯಾಪಾರಿಯ ಕಥೆ ಮುಗಿಯಿತು ಎಂದು ಹಲವರು ಅಂದುಕೊಂಡರು .ಮರುದಿನ ಮನೆಯ ಸುಟ್ಟ ಬೂದಿಯ ಮೇಲೆ ಅವನೊಂದು ಚಿಕ್ಕ ಬೋರ್ಡ್ ಬರೆದು ,ಆ ಬೋರ್ಡ್ ಮೇಲೆ ಹೀಗೆ ಬರೆದಿತ್ತು " ನಾನು ಹಣ, ಆಸ್ತಿ , ನನ್ನವರ ಕಳೆದುಕೊಂಡು ದುಃಖದಲ್ಲಿರುವೆ ನಿಜ, ಆದರೆ ನನ್ನ
ಆತ್ಮವಿಶ್ವಾಸವನ್ನಲ್ಲ, ಇಂದಿನಿಂದ ಇದೇ ಜಾಗದಲ್ಲಿ ಎಂದಿನಂತೆ ವ್ಯಾಪಾರ ಶುರುವಾಗುವುದು "

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು


04 July 2021

ತರಲೆ

 *ತರಲೆ*


ಕಛೇರಿಯಿಂದ

ಮನೆಗೆ ಬರುವಾಗ

ನನ್ನವಳ ಕೇಳಿದೆ

ತರಲೆ ಬದನೆ

ಟೊಮ್ಯಾಟೊ

ತರಲೆ ಮಾಡುತ

ಅವಳಂದಳು

ಬೇಡ ಬನ್ನಿ 

ಇವೆಯಲ್ಲ ಸ್ವಿಗ್ಗಿ

ಜೊಮ್ಯಾಟೊ||



#ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

ತುಮಕೂರು

 

ಹೊಗೆಸೊಪ್ಪು .ಹನಿ


 ನನ್ನಜ್ಜಿಗೆ ಕಲಿಸಲು

ಹೋದೆ ಪೇಸ್ ಬುಕ್

ವಾಟ್ಸಪ್|

ಪೋನ್ ಎಸೆದು

ಅಂದುಬಿಟ್ಟರು

ಇದೇನೂ ಬೇಡ

ಮೊದಲು ಕೊಡು

ಹೊಗೆಸೊಪ್ಪು||



#ಸಿಹಿಜೀವಿ

 ಸಿ ಜಿ ವೆಂಕಟೇಶ್ವರ

ತುಮಕೂರು

 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ* 4/7/21

 

*ಇಂದಿನ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ*

03 July 2021

ಐದು ಹಾಯ್ಕುಗಳು .


 


ಹಾಯ್ಕುಗಳು

*೧*

ಶಾಲೆಯೇ ಗುಡಿ
ಮರಳಿ ಬಾ ಕಂದನೆ
ಜ್ಞಾನವ ಪಡೆ.

*೨*

ಬದುಕಬೇಕೆ?
ಮರಳಬೇಕಾಗಿದೆ
ನಿಸರ್ಗದತ್ತ

*೩*

ಅಯ್ಯೋ ಮರುಳೆ
ಪ್ರಕೃತಿಯತ್ತ ನೋಡು
ಎಲ್ಲವೂ ಇದೆ.

*೪*

ನೋವೇಕೆ ಬೇಕು
ನೀಡಿದ ಹೃದಯವ
ಮರಳಿ ನೀಡು

*೫*

ನೆಮ್ಮದಿಗಾಗಿ
ಮರಳೋಣ ಬಾಲ್ಯಕೆ
ಸವಿಕಾಲಕೆ.

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು

ಅರಿವಾಗದು .ಹನಿ

 



ಖಂಡಿತವಾಗಿಯೂ 

ನಮಗೆ ತಿಳಿಯುವುದು

 ಯಾವಾಗ 

ಮುಗಿಯುವುದು

ನಮ್ಮ ಹಣ| 

ನಮಗಾರಿಗೂ 

ಅರಿವಾಗದು

ಎಂದಿಗೆ ನಾವು

ಆಗುವುವೆವು ಹೆಣ| |


#ಸಿಹಿಜೀವಿ 

ಸಿ ಜಿ ವೆಂಕಟೇಶ್ವರ

 ತುಮಕೂರು


02 July 2021

ಸಾಮಾಜಿಕ ಜಾಲತಾಣಗಳ ದಾಸರಾಗದಿರೋಣ. ಲೇಖನ



ಸಾಮಾಜಿಕ ಜಾಲತಾಣಗಳ ದಾಸರಾಗದಿರೋಣ

ಒಂದು ಕಾಲದಲ್ಲಿ ಹೊಗೆಸೊಪ್ಪು ಇಲ್ಲದ ಮನೆಗಳಿರಲಿಲ್ಲ ಇಂದು ವಾಟ್ಸಪ್ ಇಲ್ಲದ ಪೋನ್ ಗಳು ಇಲ್ಲ ಎನ್ನುವಂತಾಗಿದೆ, ಮೊಬೈಲ್ ಪೋನ್ ಇಲ್ಲದ ಜೀವನ ಊಹಿಸಿಕೊಳ್ಳಲು ಸಾದ್ಯವಿಲ್ಲ ಅಷ್ಟರಮಟ್ಟಿಗೆ ನಾವು ಮೊಬೈಲ್ ಪೋನ್ ಮತ್ತು ಸಾಮಾಜಿಕ ಜಾಲತಾಣಗಳ ದಾಸರಾಗಿದ್ದೇವೆ ಎಂದರೆ ತಪ್ಪಾಗಲಾರದು.
ಫೇಸ್‌ಬುಕ್‌, ವಾಟ್ಸಪ್, ಟ್ವಿಟರ್, ಕೂ, ಯೂಟೂಬ್, ಶೇರ್ ಚಾಟ್, ಇನ್ಸ್ಟಾಗ್ರಾಮ್ ‌ಹೀಗೆ ಪಟ್ಟಿ ಮಾಡುತ್ತಾ ನಿಂತರೆ ಹನುಮಂತನ ಬಾಲದಂತೆ ಬೆಳೆಯುತ್ತದೆ.

ಈ ಸಾಮಾಜಿಕ ಜಾಲತಾಣಗಳ ಸದುಪಯೋಗ ಮಾಡಿಕೊಂಡರೆ ನಮ್ಮ ‌ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸೂಕ್ತ  ವೇದಿಕೆಯು ಲಭ್ಯವಾಗುವುದು, ಅಂಗೈಯಲ್ಲಿ ನಮಗೆ ಉತ್ತಮ ಮನರಂಜನೆ ದೊರೆಯುತ್ತದೆ, ಬೇಕಾದ ವಿಷಯಗಳ ಸಂಗ್ರಹಿಸಿ ನಮ್ಮ ಜ್ಞಾನ ವೃದ್ಧಿ ಆಗಲು ಖಂಡಿತವಾಗಿಯೂ ಸಾಮಾಜಿಕ ಜಾಲತಾಣಗಳು ವರದಾನವಾಗಿವೆ, ಇನ್ನೂ ಮುಂದುವರೆದು ಎಷ್ಟೋ ಜನರು ಪೇಸ್ ಬುಕ್, ವಾಟ್ಸಪ್, ಯೂಟೂಬ್ ಜಾಲತಾಣಗಳ ಸಹಾಯದಿಂದ ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸಿಕೊಂಡ ಉದಾಹರಣೆಗಳು ಇವೆ, ಕೋವಿಡ್ ನಂತಹ ಸಮಯದಲ್ಲಿ ಈ ಜಾಲತಾಣಗಳು ನಮಗೆ ಸಂಪರ್ಕ ಸೇತುವೆಯಾದವು.
ಪ್ರಪಂಚದ ಜನಸಂಖ್ಯೆಯ ಶೇಕಡಾ48 ಜನ ಈ ಜಾಲತಾಣಗಳನ್ನು ಬಳಸುತ್ತಾರೆ ಎಂದರೆ ಇವುಗಳ ಮಹತ್ವ ನಾವು ಅರಿಯಲೇ ಬೇಕು.

ಅರಿತು ವಿವೇಚನೆಯಿಂದ
ಬಳಸಿದರೆ
ಸಾಮಾಜಿಕ ಜಾಲತಾಣ|
ಮೈ ಮರೆತರೆ
ಆಗುವುದು
ತಿರುಗುಬಾಣ| |

ತಂತ್ರಜ್ಞಾನದ ಕ್ರಾಂತಿಯ ಫಲವಾಗಿ ,
ಇಂಟರ್ನೆಟ್ ಎಲ್ಲೆಡೆಯೂ ಕಡಿಮೆ ಬೆಲೆಗೆ ಲಬ್ಯವಾದಾಗಿನಿಂದ  ಸಾಮಾಜಿಕ ಜಾಲಗಳ ಭರಾಟೆ ಆರಂಭವಾಯಿತು, ಇಂದು ಬಹುತೇಕ ಯುವಕ ಯುವತಿಯರಿಗೆ ಸಾಮಾಜಿಕ ಜಾಲತಾಣವೇ ಸರ್ವಸ್ವ ಎನ್ನುವಂತಾಗಿದೆ, ಪ್ರತಿನಿಮಷಕ್ಕೊಮ್ಮೆ ಜಾಲ ತಾಣ ವೀಕ್ಷಣೆ ಮಾಡುವುದು ಸ್ಟೇಟಸ್ ಅಪ್ಡೇಟ್ ಮಾಡುವುದು, ಎಷ್ಟು ಲೈಕ್ ಬಂದಿವೆ ಎಂದು ನೋಡುವುದು ಕಡಿಮೆ ಲೈಕ್ ಅಥವಾ ವೀಕ್ಷಣೆ  ಇದ್ದರೆ ಅದಕ್ಕೆ ಬೇಸರ ಪಟ್ಟುಕೊಂಡು ಖಿನ್ನತೆಯಿಂದ ಮಾನಸಿಕ ಆರೋಗ್ಯ ಹಾಳುಮಾಡಿಕೊಂಡು ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ ಸರಾಸರಿ ಓರ್ವ ವ್ಯಕ್ತಿಯು ಪ್ರತಿದಿನ ಎರಡೂವರೆ ಗಂಟೆ ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವನು,ಅಂದರೆ ತಿಂಗಳಲ್ಲಿ ಎಪ್ಪತ್ತೈದು ಗಂಟೆ ಅಥವಾ ಮೂರು ದಿನ  ಅದರಲ್ಲೇ ಕಾಲ ಕಳೆದರೆ ವರ್ಷದ ಲೆಕ್ಕವೇನು? ಅನವಶ್ಯಕ ಕಾಲ ಹರಣದ ಫಲವಾಗಿ ಅದು ದೇಶದ ಅರ್ಥವ್ಯವಸ್ಥೆಯ ಮೇಲೆ ಪರಿಣಾಮ ಬೀರದೇ ಇರಲಾರದು ಈ ವಿಷಯದ ಬಗ್ಗೆ ಗಮನಹರಿಸಲೇಬೇಕು.

ಇನ್ನೂ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಮಹಿಳೆಯರ ಮತ್ತು ಯುವತಿಯರಿಗೆ ಕಿರುಕುಳ ನೀಡುವ ಸಕ್ರಿಯ ಜಾಲದ ಬಗ್ಗೆ , ಪೋಟೋ ಗಳನ್ನು ತಿರುಚಿ, ಅಶ್ಲೀಲಗೊಳಿಸಿ ಬ್ಲಾಕ್ ಮೇಲ್  ಮಾಡುವ ಖದೀಮರಿಗೆ ಈ ಜಾಲತಾಣಗಳು ಹುಲಾಸಾದ ಹುಲ್ಲುಗಾವಲಾಗಿವೆ.

ಜಾಲತಾಣಗಳು ಆರ್ಥಿಕ ವ್ಯವಹಾರಗಳನ್ನು ಪ್ರೋತ್ಸಾಹ ಮಾಡುವುದರಿಂದ ಆರ್ಥಿಕ ಅಪರಾಧಗಳು ಹೆಚ್ಚಾಗಿ ಅಮಾಯಕರು ,ಯಾವುದೋ ಲಿಂಕ್ ಒತ್ತುವ ಮೂಲಕ, ಅಪರಿಚಿತ ವೆಬ್ಸೈಟ್ ಕ್ಲಿಕ್ ಮಾಡುವ ಮೂಲಕ ಮೋಸ ಹೋದ ಲಕ್ಷಾಂತರ ನಿದರ್ಶನಗಳು ನಮ್ಮ ಮುಂದಿವೆ.

ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಕೋಮುಸಾಮರಸ್ಯ ಹಾಳುಮಾಡುವಿಕೆಯಲ್ಲಿ ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳು ಕುಖ್ಯಾತಿಯನ್ನು ಪಡೆದಿವೆ ಈ ದಿಸೆಯಲ್ಲಿ ಸರ್ಕಾರಗಳಿಂದ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ಮೇಲೆ ಕೆಲ ನಿರ್ಬಂಧಗಳು ಹೇರಿಕೆಯಾಗಿವೆ .

ಸಾಮಾಜಿಕ ಜಾಲತಾಣಗಳು ಈಗ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿವೆ ಆದ್ದರಿಂದ ಅವುಗಳ ಬಳಕೆಯನ್ನು ನಾವು ಸಂಪೂರ್ಣವಾಗಿ ತ್ಯಜಿಸಲು ಆಗುವುದೇ ಇಲ್ಲ ಎಂಬ ಸ್ಥಿತಿಗೆ ನಾವು ತಲುಪಿರುವೆವು, ಆದ್ದರಿಂದ ಕೆಲ ಮುಂಜಾಗ್ರತಾ ‌ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು  ಅವುಗಳ ದುಷ್ಪರಿಣಾಮ ಕಡಿಮೆ ಮಾಡಬಹುದು, ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಬಹುದು.

ಹಾಗಾದರೆ ನಾವೇನು ಮಾಡಬೇಕು?

ಸಮಯ ಅಮೂಲ್ಯವಾದದ್ದು ಯಾವಾಗಲೂ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರದೆ ಒಂದು ನಿಗದಿತ ಟೈಮ್ ಸೆಟ್ ಮಾಡಬಹುದು, ಅದಕ್ಕೆ ಕೆಲ ಆಪ್ ಗಳ ನೆರವನ್ನು ಪಡೆಯೋಣ.

ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಮುತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಪ್ರೆಂಡ್ ರಿಕ್ವೆಸ್ಟ್ ಗಳನ ಕಣ್ಣು ಮುಚ್ಚಿ ಅಕ್ಸೆಪ್ಟ್ ಮಾಡದಿರೋಣ.

ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಹಿರಿಯರಾದ ನಾವು ಸಮಾಜಿಕ ಜಾಲತಾಣಗಳ ಸಂಪುರ್ಣವಾದ ಮಾಹಿತಿ ನೀಡಿ, ಮಾರ್ಗದರ್ಶನ ನೀಡೋಣ, ಸಾಮಾಜಿಕ ಜಾಲತಾಣಗಳ ದುರ್ಬಳಕೆ ಆಗದಂತೆ ಅವರ ಮೇಲೆ ಒಂದು ಕಣ್ಣಿಟ್ಟಿರೋಣ .

ಸಾಮಾಜಿಕ ಜಾಲತಾಣಗಳ ವ್ಯಸನಕ್ಕೆ ಬಲಿಯಾಗಿ ಕುಟುಂಬದ ಸಂಬಂಧಗಳನ್ನು ಬಲಿ ಕೊಡದೆ ಕುಟುಂಬದಲ್ಲಿ ಸಂತಸದಿಂದ ಬಾಳೋಣ.

ನಮ್ಮ ಪಾಸ್ವರ್ಡ್ ಗಳು ಮತ್ತು ವೈಯಕ್ತಿಕ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರೋಣ.

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗುವ ಹವ್ಯಾಸಗಳನ್ನು ಬೆಳೆಸಿಕೊಂಡು ನಮ್ಮ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳೋಣ.

ಯೋಗ,ಧ್ಯಾನದ ಮೂಲಕ  ಮರ್ಕಟ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ,ಸ್ವಯಂ ಶಿಸ್ತು ಬೆಳೆಸಿಕೊಳ್ಳೋಣ.

ಸಾಮಾಜಿಕ ಜಾಲತಾಣ
ಒಂದು ಆಯುಧ|
ಒಳಿತಿಗೆ ಬಳಸಿದರೆ
ನೀನಾಗುವೆ
ವೀರ ಯೋಧ|

ಆದ್ದರಿಂದ ನಾವುಗಳು ಸಾಮಾಜಿಕ ಜಾಲತಾಣಗಳಿಗೆ ದಾಸರಾಗದೆ ಅವುಗಳನ್ನು ವಿವೇಚನೆಯಿಂದ ಬಳಸೋಣ  ,ನಾವುಗಳು  ಯಜಮಾನನ ರೀತಿಯಲ್ಲಿ ತಂತ್ರಜ್ಞಾನದ ಭಾಗಗಳಾದ ಮತ್ತು ಸಾಮಾಜಿಕ  ಮಾದ್ಯಮಗಳು ಮತ್ತು ಜಾಲತಾಣಗಳನ್ನು ಬಳಸಿಕೊಂಡರೆ ಅವುಗಳು ನಮ್ಮ ಮೇಲೆ ಸವಾರಿ ಮಾಡುವುದನ್ನು ನಾವು ತಡೆಯಬಹುದು.

ಸಿಹಿಜೀವಿ
ಸಿ ಜಿ ವೆಂಕಟೇಶ್ವರ
ತುಮಕೂರು



 https://kannada.pratilipi.com/story/%E0%B2%B8%E0%B2%BE%E0%B2%AE%E0%B2%BE%E0%B2%9C%E0%B2%BF%E0%B2%95-%E0%B2%9C%E0%B2%BE%E0%B2%B2%E0%B2%A4%E0%B2%BE%E0%B2%A3%E0%B2%97%E0%B2%B3-%E0%B2%A6%E0%B2%BE%E0%B2%B8%E0%B2%B0%E0%B2%BE%E0%B2%97%E0%B2%A6%E0%B2%BF%E0%B2%B0%E0%B3%8B%E0%B2%A3-lklcy2oaok3t?utm_source=android&utm_campaign=content_share 

*ಸಾಮಾಜಿಕ ಜಾಲತಾಣಗಳ ದಾಸರಾಗದಿರೋಣ(ಲೇಖನ)*


ಸಿಹಿಜೀವಿ

ಸಿ ಜಿ ವೆಂಕಟೇಶ್ವರ