10 July 2021

ನನ್ನ ವೃತ್ತಿ ನನ್ನ ಹೆಮ್ಮೆ .ಲೇಖನ .


 



ನನ್ನ ವೃತ್ತಿ ನನ್ನ ಹೆಮ್ಮೆ


ಬಾಲ್ಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದ ತಿಪ್ಪೇಸ್ವಾಮಿ ರವರ ಪಾಠ ಕೇಳಿದಾಗಿನಿಂದ ನಾನೂ ಅವರಂತೆ ಶಿಕ್ಷಕನಾಗಬೇಕು ಎಂದು ಆಸೆ ಪಟ್ಟಿದ್ದೆ ,ಬೆಳೆದಂತೆ ಯಾಕೋ ನನ್ನ ಗುರಿ ಆಫೀಸರ್ ಆಗಬೇಕು ಎಂದು ಬದಲಾಯಿತು, ಯಾಕೋ ದೇವರು ಮೊದಲ ಬೇಡಿಕೆಗೆ  ಅಸ್ತು ಅಂದಿರಬೇಕು ,ನಾನು ಈಗ ಶಿಕ್ಷಕ  .!


ಇಪ್ಪತ್ತೊಂದು ವರ್ಷಗಳ ಕಾಲ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ನಾನು ನನ್ನ ವೃತ್ತಿ ಜೀವನದಲ್ಲಿ ,ಕನ್ನಡ ಇಂಗ್ಲಿಷ್‌, ಹಿಂದಿ, ಗಣಿತ ,ವಿಜ್ಞಾನ, ಸಮಾಜ ವಿಜ್ಞಾನ, ಹೀಗೆ ಎಲ್ಲಾ ವಿಷಯಗಳನ್ನೂ ಬೋಧಿಸುವ ಅವಕಾಶ ಲಭಿಸಿತು.


2004 ನೇ ಇಸವಿಯಿಂದ ಸಮಾಜ ವಿಜ್ಞಾನ ವಿಷಯ ಬೋಧನೆ ಮಾಡುತ್ತಿರುವೆ , ಬೋಧಿಸುವ  ಎಲ್ಲಾ ವಿಷಯಗಳಲ್ಲಿ ಯಾವುದೂ ಮೇಲು, ಕೀಳೆಂಬುದಿಲ್ಲ ಆದರೂ ಅವರವರು ಬೋಧಿಸುವ ವಿಷಯದಲ್ಲಿ ಅವರಿಗೆ ಸ್ವಲ್ಪ ಅಭಿಮಾನ, ಮತ್ತು ಪ್ರೀತಿ, ಅದು ಇರಲೇ ಬೇಕು ಏಕೆಂದರೆ ಹೆತ್ತವರಿಗೆ ಹೆಗ್ಗಣ ಮುದ್ದು ಅಲ್ಲವೆ?


ಸಮಾಜ ವಿಜ್ಞಾನ ಶಿಕ್ಷಕನಾಗಿ ನನಗೆ ಹೆಮ್ಮೆ ಎನಿಸುವುದು ಏಕೆಂದರೆ ನಾನು ಒಂದೇ ವಿಷಯದಲ್ಲಿ ಆರು ವಿಷಯಗಳನ್ನು ಕಲಿಸುವೆನು, ನಾವು ಬಾಲ್ಯದಲ್ಲಿ ಓದುವಾಗ "ಸಮಾಜ ಪರಿಚಯ," ಎಂಬ  ಪಠ್ಯ ಪುಸ್ತಕ ಇತ್ತು, ಇದರಲ್ಲಿ ಇತಿಹಾಸ ಪೌರನೀತಿಯ ಒಂದು ಭಾಗ ಮತ್ತು ಭೋಗೋಳದ ಒಂದು ಚಿಕ್ಕ ಪುಸ್ತಕ ಇರುತ್ತಿತ್ತು, ಅದರೆ ಈಗ ನಾನು ಬೋಧಿಸುವ ವಿಷಯ ಸಮಾಜ ಪರಿಚಯ ದಿಂದ ಸಮಾಜ ವಿಜ್ಞಾನ ಆಗಿ ಭಡ್ತಿ ಪಡೆದು ತನ್ನ ಒಡಲಲ್ಲಿ ಆರು ವಿಷಯಗಳನ್ನು ಅಡಗಿಸಿಕೊಂಡಿದೆ. 


ಮೊದಲು ಕನ್ನಡ ಮತ್ತು ಸಮಾಜ ಬಾಳ ಸುಲಭ ಎಂದು ನಂಬಿದ್ದರು ,ಆದರೆ ಸಮಾಜ ವಿಜ್ಞಾನ ವಿಷಯ ಈಗ ಬಹಳ ಸುಲಭ ಎಂದು ಯಾರೂ ಧೈರ್ಯವಾಗಿ ಹೇಳಲಾಗುತ್ತಿಲ್ಲ , ಹೇಗೆ ಹೇಳುತ್ತಾರೆ? ಒಂದು ವಿಷಯದಲ್ಲಿ ಆರು ವಿಷಯಗಳಾದ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಭೋಗೋಳ ವಿಜ್ಞಾನ, ಅರ್ಥಶಾಸ್ತ್ರ, ಮತ್ತು ವ್ಯವಹಾರ ಅಧ್ಯಯನ, ಸೇರಿಕೊಂಡಿವೆ , ವಿದ್ಯಾರ್ಥಿಗಳಿಗೆ ಈ ಮೇಲಿನ ವಿಷಯಗಳಲ್ಲಿ ಒಂದು ಇಷ್ಟ ಆದರೆ ಮತ್ತೊಂದು ಕಷ್ಟ ಆಗುವ ಸಾದ್ಯತರ ಇದ್ದೇ ಇರುತ್ತದೆ.


ಆದರೂ ನಾನು ಎಂದಿಗೂ ನನ್ನ  ಸಂಪರ್ಕ ಕ್ಕೆ ಬಂದ ವಿದ್ಯಾರ್ಥಿಗಳಿಗೆ ನನ್ನ ವಿಷಯ ಕಠಿಣ ಎಂದು ಹೇಳಲು ಅವಕಾಶ ಮಾಡಿಕೊಡುವುದಿಲ್ಲ . ಸಮಾಜ ವಿಜ್ಞಾನ ವಿಷಯವು ಬಹಳ ಸುಲಭ ವಿಷಯ ಎಂದು ಧೈರ್ಯ ತುಂಬುತ್ತಲೇ ನನ್ನ ಬೋಧನಾ ವಿಧಾನದಲ್ಲಿ ಸಾಂಪ್ರದಾಯಿಕ ವಿಧಾನದ ಬದಲಿಗೆ ಆಧುನಿಕ ಆಕರ್ಷಿಸುವ ನೂತನ ಪದ್ದತಿಯಲ್ಲಿ ಬೋಧನೆ ಕೈಗೊಳ್ಳುವೆ , ಇದಕ್ಕೆ ಇಲಾಖೆಯ ಟಾಲ್ಪ್ ತರಬೇತಿಯು ನಮಗೆ ತಾಂತ್ರಿಕ ಸಹಾಯ ನೀಡಿದರೆ, ಶಿಕ್ಷಣ ಇಲಾಖೆ ಮತ್ತು ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ನೀಡಿವೆ . ರಾಜ್ಯದ ನಮ್ಮ ವಿಷಯ ಸಹಶಿಕ್ಷಕರ ಬೆಂಬಲವನ್ನು ನಾನು ಮರೆಯಲು ಸಾಧ್ಯವಿಲ್ಲ,

ಇದರ ಪರಿಣಾಮವಾಗಿ ಸ್ಮಾರ್ಟ್ ಕ್ಲಾಸ್ ಮೂಲಕ ಮಕ್ಕಳಿಗೆ ಇತಿಹಾಸ,  ಭೂಗೋಳ, ಅರ್ಥಶಾಸ್ತ್ರ, ವ್ಯವಹಾರ ಅದ್ಯಯನ ಮುಂತಾದ ವಿಷಯಗಳ ಕ್ಲಿಷ್ಟಕರವಾದ ಪರಿಕಲ್ಪನೆಗಳನ್ನು ದೃಕ್ ಶ್ರವಣ ಮಾದ್ಯಮ ಮೂಲಕ ಪ್ರಸ್ತುತ ಪಡಿಸಿ ಮಕ್ಕಳಲ್ಲಿ ಸಂತಸದಾಯಕ ಕಲಿಕೆ ಉಂಟುಮಾಡುತ್ತಿರುವೆ ,ಇದರ ಪರಿಣಾಮವಾಗಿ ಆರು ವಿಷಯಗಳಿದ್ದರೂ ಎಂದೂ ಸಮಾಜ ವಿಜ್ಞಾನ ಕಠಿಣ ಎಂದು ನನ್ನ ವಿದ್ಯಾರ್ಥಿಗಳು ಭಾವನೆ ವ್ಯಕ್ತ ಪಡಿಸಿಲ್ಲ.


ಶಿಕ್ಷಕನಾದವನು ಸದಾ ವಿದ್ಯಾರ್ಥಿ ಎಂಬ ಭಾವನೆಯಲ್ಲಿ ನಂಬಿಕೆ ಇಟ್ಟುಕೊಂಡ ನಾನು ಮಕ್ಕಳಿಗೆ ಕಲಿಸುವ ಮೊದಲು ಈ ಆರು ವಿಷಯಗಳ ಓದಿ,ಮನನ ಮಾಡಿಕೊಂಡು,ಪ್ರಸಕ್ತ ವಿದ್ಯಮಾನಗಳಿಗೆ ಸಹಸಂಬಂಧ ಕಲ್ಪಿಸಿ ಬೊಧನೆ  ಮಾಡುವುದರಿಂದ , ಪರೋಕ್ಷವಾಗಿ ನನಗೂ ಜ್ಞಾನವನ್ನು ಪಡೆಯಲು ನನ್ನ ಈ ವೃತ್ತಿ ಸಹಕಾರಿಯಾಗಿದೆ ಎಂಬುದನ್ನು ಹೆಮ್ಮೆಯಿಂದ ಹೇಳಬಲ್ಲೆ.


ನಮ್ಮ ವಿಷಯಗಳಲ್ಲಿ ಕೇವಲ ತರಗತಿಯ ಬೋಧನೆಗೆ ಅವಕಾಶವಿಲ್ಲ ಬದಲಾಗಿ, ಶಾಲಾ ಸಂಸತ್ತು, ಯುವ ಸಂಸತ್ ಮುಂತಾದವುಗಳ ಆಯೋಜನೆ ,ಸಮಾಜ ವಿಜ್ಞಾನ ಕ್ಲಬ್, ಚುನಾವಣಾ ಸಾಕ್ಷರತಾ ಕ್ಲಬ್ ವತಿಯಿಂದ ಹಲವಾರು ಸಹ ಪಠ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಭಾವಿ ಜವಾಬ್ದಾರಿಯುತ ನಾಗರಿಕರು, ಮುಂದಿನ ಪೀಳಿಗೆಯ ನಾಯಕರ ಜವಾಬ್ದಾರಿಗಳನ್ನು ಅರಿಯುವಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವೆನು.


ಇದರ ಜೊತೆಯಲ್ಲಿ ಮಕ್ಕಳಿಗೆ ನಮ್ಮ ಸಾಂಸ್ಕೃತಿಕ ಮತ್ತು ಪ್ರಾಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರಾಚ್ಯ ಪ್ರಜ್ಞೆ ಎಂಬ ಕಾರ್ಯ ಕ್ರಮಗಳನ್ನು ಆಯೋಜನೆ ಮಾಡುವೆನು , 


ನಮ್ಮ ಕೆಲ ಸ್ನೇಹಿತರು ಸಮಾಜ ವಿಜ್ಞಾನ ವಿಷಯ ಶಿಕ್ಷಕರ ಕಂಡು ತಮಾಷೆಯಾಗಿ, ಬ್ರಹ್ಮ ನಿಗೆ ನಾಲ್ಕು ತಲೆಗಳಾದರೆ ಸಮಾಜ ವಿಜ್ಞಾನ ವಿಷಯದಲ್ಲಿ ಆರು  ಉಪ ವಿಷಯಗಳ ಬೋಧಿಸುವ ‌ನಿಮಗೆ ಆರು ತಲೆಗಳಿರುವವು ಎಂಬ ಮಾತಿನಲ್ಲಿ ಅತಿಶಯವಿದ್ದರೂ ಪೂರ್ಣ ಸುಳ್ಳಲ್ಲ ಎನಿಸದಿರದು.


ಸರ್ಕಾರಿ ಶಾಲಾ ಶಿಕ್ಷಕನಾಗಿ ನನಗೆ ಸರ್ಕಾರ ನೀಡುವ ಸಂಬಳಕ್ಕೆ ನ್ಯಾಯ ಒದಗಿಸಲು     ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತಿರುವೆ ,ಸಮಾಜ ವಿಜ್ಞಾನ ಶಿಕ್ಷಕನಾಗಿ ಇನ್ನೂ ಹೆಚ್ಚಿನ ಭಾವಿ ಉತ್ತಮ ಪ್ರಜೆಗಳ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವೆ .ಸಮಾಜ ವಿಜ್ಞಾನ ಶಿಕ್ಷಕನಾಗಿ ಇದುವರೆಗೂ ಬೋಧಿಸಿರುವ ಇಪ್ಪತ್ತೊಂದು ವರ್ಷಗಳ ಬೋಧನಾ ಅನುಭವ ಆತ್ಮತೃಪ್ತಿ ನೀಡಿದೆ, ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಮಕ್ಕಳಿಗೆ ಮಾರ್ಗದರ್ಶನ ನೀಡಲು ಉತ್ಸುಕನಾಗಿರುವೆ, ನಿರ್ಜೀವ ಯಂತ್ರಗಳ ಬದಲಿಗೆ ಜೀವವಿರುವ ವಿದ್ಯಾರ್ಥಿಗಳ ಜೊತೆ ಒಡನಾಡುವ ನನ್ನ  ಶಿಕ್ಷಕ ವೃತ್ತಿಯ ಬಗ್ಗೆ ನನಗೆ ಎಲ್ಲಿಲ್ಲದ ಗೌರವ .ಅದಕ್ಕೆ ಹೆಮ್ಮೆಯಿಂದ ಹೇಳುವೆ " ನನ್ನ ವೃತ್ತಿ ನನ್ನ ಹೆಮ್ಮೆ "


ಸಿಹಿಜೀವಿ

ಸಿ ಜಿ ವೆಂಕಟೇಶ್ವರ


1 comment:

Unknown said...

ನಿಮ್ಮ ಈ ಲೇಖನ ಓದಿ ತುಂಬಾ ಖುಷಿಯಾಯಿತು brother.ಯಾಕೆಂದ್ರೆ ನಾನು ಒಬ್ಬ ಶಿಕ್ಷಕನಾಗಿ ನಿಮ್ಮ ಈ ಲೇಖನದಲ್ಲೀ ವೃತ್ತಿ ಬಗ್ಗೆ ಅಭಿಮಾನ ಮತ್ತು ಗೌರವ ಮತ್ತು ಸಮರ್ಪಣಾ ಭಾವವಿದೆ..