15 July 2021

ಚಿಂತೆ ಬಿಡಿ ,ನಕ್ಕುಬಿಡಿ .ಲೇಖನ


 


ಚಿಂತೆ ಬಿಡಿ ,ಒಮ್ಮೆ ನಕ್ಕು ಬಿಡಿ

ನವರಸಗಳಿರದ ಜೀವನ ಊಹಿಸಲೂ ಅಸಾಧ್ಯ, ನನಗೆ ಎಲ್ಲಾ ರಸಗಳೂ ಇಷ್ಟ ಮನರಂಜನೆಗಾಗಿ ಈ ರಸಗಳ ಹದವಾದ ಮಿಶ್ರಣ ನಮ್ಮನ್ನು  ಕೆಲವೊಮ್ಮೆ ಬೇರೆಯದೇ ಲೋಕಕ್ಕೆ ಕೊಂಡೊಯ್ದು ನಮ್ಮ ಒತ್ತಡದ , ಯಾಂತ್ರಿಕ ಜೀವನಕ್ಕೆ ಟಾನಿಕ್ ನಂತೆ ಕಾರ್ಯ ಮಾಡುತ್ತವೆ.

ಯಾವುದಾದರೂ ಒಂದು ರಸವನ್ನು ಆಯ್ಕೆ ಮಾಡಿಕೋ ಎಂದರೆ ಹಾಸ್ಯವೇ ನನಗಿರಲಿ ಎನ್ನುವೆ. ಕೆಲವರು ಯಾವಾಗಲೂ ಹಳ್ಳೆಣ್ಣೆ ಕುಡಿದವರಂತೆ ಮುಖ ಮಾಡಿಕೊಂಡಿರುವರು,ಮತ್ತೆ ಕೆಲವರು ಸಿಡುಕು ಮೂತಿ ಸಿದ್ದಪ್ಪಗಳು, ಏನೂ ಬರೀ ಗಂಡಸರ ಹೆಸರೇ ಬಂದವೆಂದು ಬೇಸರ ಪಡಬೇಕಿಲ್ಲ, ಕೆಲ ಮಹಿಳಾ ಮಣಿಗಳು ಸುಂದರ ವದನವಿದ್ದರೂ ನಗಲು ಚೌಕಾಸಿ ಮಾಡುವರು. ಇಂಥವರನ್ನು ನೋಡಿಯೇ ನಮ್ಮ ಡುಂಡಿರಾಜರು

ಕ್ಯಾಷ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದ ಸಿಗದು|
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡ್
"ನಗದು"!!

ಎಂದು ಹನಿಗವನ ಬರೆದಿರುವರು

ನಗಲು ಕಡಿಮೆ ಶಕ್ತಿ ಬೇಕು ಸಿಟ್ಟಾಗಲು ಬಹಳ ಶಕ್ತಿ ಬೇಕು ನಗುತ್ತಿರಿ ಎಂದರೆ " ಅದೆಲ್ಲಾ ನಿನಗೇಕೆ ನಿನ್ದೇನೋ ಅದನ್ನು ನೋಡ್ಕೊ "  ಎಂದು ಉರಿದು ಬೀಳುವರಿಗೇನೂ ಕಡಿಮೆಯಿಲ್ಲ.

ಕೆಲವು ಹೆಣ್ಣು ಮಕ್ಕಳಿಗೆ ಗಂಡ ಕೇಳಿದ್ದು ಕೊಡಿಸಿದರೆ ಮಾತ್ರ ನಗು ಇಲ್ಲದಿರೆ ನಗು ಮಾಯ

ಅಂತಹವರ ಕಂಡು ಹೀಗೆ ಹೇಳಬಹುದು

ನನ್ನವಳು ಕೇಳಿದ್ದು
ಕೊಡಿಸಿದರೆ
ಮನೆಯೆಲ್ಲಾ
ನಗುಮಯ|
ಕೊಡಿಸದಿದ್ದರೆ
ನಗು ಮಾಯ||

ಇನ್ನೂ ಕೆಲವು ಮಹಿಳೆಯರಿಗೆ ಬಂಗಾರವೆಂದರೆ ಎಲ್ಲಿಲ್ಲದ  ಪ್ರಾಣ ಅದಕ್ಕೆ ಹೀಗೆ ಹೇಳಬಹುದು

ಅವಳ ವದನದಲಿ
ಮೂರು ದಿನದಿಂದ
ನಗುವಿಲ್ಲ|
ಕಾರಣವಿಷ್ಟೇ
ಅವಳ ಗಂಡನ
ಕಾಡಿ ಬೇಡಿದರೂ
ನಗವ ಕೊಡಿಸಿಲ್ಲ||

ಇತ್ತಿಚಿನ ದಿನಗಳಲ್ಲಿ ನಗುವ ಮಹತ್ವ ತಿಳಿದು ನಗರಗಳಲ್ಲಿ ಅಲ್ಲಲ್ಲಿ ನಗೆ ಕ್ಲಬ್ ಗಳು ,ನಗೆ ಕೂಟಗಳು ತಲೆ ಎತ್ತಿವೆ.

ಅವನು ಮನಸಾರೆ
ನಗಲು ಕಾರಣ
ನಗೆ ಕೂಟ|
ಯಾಕೋ ನಗೆ
ಮಾಯವಾಗುತ್ತದೆ
ನೋಡಿದ ತಕ್ಷಣ
ತಾಳಿ ಕಟ್ಟಿದ ಪೋಟ||

ಹೀಗೆ ದುಃಖ ಪಡಲು ಬೇಕಾದಷ್ಟು ಕಾರಣಗಳು ಸಿಗುತ್ತವೆ ನಗಬೇಕೆಂದು ನಾವು ತೀರ್ಮಾನವನ್ನು ಮಾಡಿದರೆ ನಮ್ಮ ಮನಸ್ಥಿತಿಯನ್ನು ಸಕಾರಾತ್ಮಕವಾಗಿ  ಬದಲಾಯಿಸಿಕೊಂಡರೆ ನಗುವುದು ಕಷ್ಟವೇನಲ್ಲ.

ಚಾರ್ಲಿ ಚಾಪ್ಲಿನ್ ರವರು ಹೇಳಿದಂತೆ "ನಾವು ಇಡೀ ದಿನದಲ್ಲಿ ಒಮ್ಮೆಯೂ ನಗದಿದ್ದರೆ  ಆ ದಿನ ವ್ಯರ್ಥ " ಹಾಗಾಗಿ ದಿನಗಳನ್ನು ಅನಗತ್ಯವಾಗಿ ವ್ಯರ್ಥ ಮಾಡದಿರೋಣ , ನಗು ನಗುತ್ತಾ, ನಗಿಸತ್ತಾ ಜೀವಿಸೋಣ ,ಈ ಲೇಖನ ಓದಿದ ಮೇಲೆ ಸಿಟ್ಟು ಬಿಡಿ, ಚಿಂತೆ ಬಿಡಿ,ಒಮ್ಮೆ ನಕ್ಕುಬಿಡಿ

ಸಿಹಿಜೀವಿ
ಸಿ ಜಿ ವೆಂಕಟೇಶ್ವರ

No comments: