ಮಕ್ಕಳು ದೇವರಾಗಲಿ
ಒಂಭತ್ತನೆಯ ತರಗತಿಯಲ್ಲಿ ಸಮಾಜ ವಿಜ್ಞಾನ ಪಾಠ ಮಾಡುತ್ತಿದ್ದೆ ಧಾರ್ಮಿಕ ಸುಧಾರಣಾ ಚಳುವಳಿ ಗೆ ಸಂಬಂಧಿಸಿದಂತೆ ಬೋಧನೆ ಮಾಡುವಾಗ ನಮ್ಮೆಲ್ಲರಲ್ಲೂ ಆತ್ಮವಿದೆ ಈ ಆತ್ಮ "ಪರಮ" ಆತ್ಮನಲ್ಲಿ ಲೀನವಾದರೆ ನಾವು ಮುಕ್ತಿ ಪಡೆದಂತೆ, ಹಾಗಾಗಿ ಪ್ರತಿಯೊಂದು ಜೀವಿಯಲ್ಲಿ ಆತ್ಮವಿದೆ, ಹಾಗಾಗಿ ಅವೆಲ್ಲವೂ ದೇವರ ಸಮಾನ ,ನೀವೂ ಸಹ ಎಂದೆ ,ತಟ್ಟನೆ ಒಬ್ಬ ವಿದ್ಯಾರ್ಥಿ ನಿಂತು ಸಾರ್ ಮತ್ತೆ ನೀವು ತಪ್ಪು ಮಾಡಿದಾಗ ನನ್ನ ಹೊಡೆಯುತ್ತೀರಲ್ಲ, ಅದು ದೇವರನ್ನು ಹೊಡೆದಂತೆ ಅಲ್ಲವೇ? " ಎಂದನು. "ಹೌದು, ನನ್ನಲ್ಲೂ ಆತ್ಮ ಇದೆ ಹಾಗಾಗಿ ನಾನೂ ದೇವರೇ ಅಲ್ಲವೆ? ದೇವರು ತಪ್ಪು ಮಾಡಿದಾಗ ದಂಡಿಸುವ ಹಕ್ಕು ದೇವರಿಗೆ ಇರುವುದು ಅಲ್ಲವೇ ? ಎಂದು ನಗುತ್ತಾ ಕೇಳಿದಾಗ ನಗುತ್ತಲೆ ಆ ವಿದ್ಯಾರ್ಥಿ ಕುಳಿತ.
ದೇವರು ಸರ್ವಾಂತರ್ಯಾಮಿ, ಅವನು ಎಲ್ಲಾ ಕಡೆ ವಿವಿದ ರೂಪದಲ್ಲಿ ಇರುವನು ಅದರ ಮುಂದುವರೆದ ಭಾಗವಾಗಿ ಸಕಲ ಚರಾಚರಗಳಲ್ಲಿ ದೇವರ ಇರುವನ್ನು ಗುರ್ತಿಸಬಹುದು.
ಅದೇ ಅರ್ಥದಲ್ಲಿ ಮಕ್ಕಳು ದೈವಸ್ವರೂಪ ಎಂದು ಕರೆಯುವರು. ಮಕ್ಕಳ ಕಂಡರೆ ಎಲ್ಲರಿಗೂ ಅಚ್ಚುಮೆಚ್ಚು ಮಕ್ಕಳ ಅಗಲವಾದ ಬಟ್ಟಲುಗಣ್ಣುಗಳು, ಬೊಚ್ಚುಬಾಯಿ, ದುಂಡಾದ ಕೆನ್ನೆಗಳು, ನಿಶ್ಕಲ್ಮಶ ನಗು, ಸುಂದರ ನೋಟ ಎಂತವರನ್ನೂ ಮಂತ್ರ ಮುಗ್ದಗೊಳಿಸಿ ಒಮ್ಮೆ ಆ ಮಗುವನ್ನು ಎತ್ತಿ ಮುದ್ದಾಡಬೇಕು ಎನಿಸುತ್ತದೆ, ಪ್ರೀತಿಯಿಂದ ಕೈಚಾಚಿ ಕರೆದರೆ ಮಕ್ಕಳು ನಮ್ಮ ಕಡೆ ಬಂದೇ ಬರುತ್ತವೆ, ಭಕ್ತಿಯಿಂದ ಪೂಜಿಸಿದ ಭಕ್ತರ ಇಷ್ಟಾರ್ಥ ಸಿದ್ದಿಸುವ ದೇವರಂತೆ.
ಕೆಲವು ಕಡೆ ಮಕ್ಕಳನ್ನು ಅಕ್ಷರಶಃ ದೇವರಂತೆ ಅಲಂಕಾರ ಮಾಡಿ ಪೂಜಿಸುವ ಸಂಪ್ರದಾಯವಿದೆ, ನೇಪಾಳ ,ಪಿಲಿಪೈನ್ಸ್ ಮುಂತಾದ ದೇಶಗಳಲ್ಲಿ ಋತುಮತಿಯಾಗದ ಕನ್ಯೆಯನ್ನು ದೇವರೆಂದು ಪೂಜಿಸುವರು,ನಮ್ಮ ದೇಶದಲ್ಲೂ ಕೆಲವೆಡೆ ಮಕ್ಕಳಿಗೆ ಬ್ರಹ್ಮಚಾರಿ ಪೂಜೆ ಎಂಬ ಆಚರಣೆಯ ಮೂಲಕ ಮಕ್ಕಳಲ್ಲಿ ದೇವರ ಕಾಣುವರು.
ಇತ್ತೀಚಿನ ದಿನಗಳಲ್ಲಿ ಮಾದ್ಯಮಗಳ ಪ್ರಭಾವ ಮತ್ತು ಆಧುನಿಕತೆಯ ಭರಾಟೆಯಲ್ಲಿ ಮಕ್ಕಳು ಮಕ್ಕಳಾಗಿಲ್ಲ ಇನ್ನೂ ದೇವರಾಗುವುದು ಕನಸಿನ ಮಾತು, ಪೋಷಕರ ಕಣ್ ತಪ್ಪಿಸಿ ಮೊಬೈಲ್ ನಲ್ಲಿ ನೋಡಬಾರದ್ದನ್ನು ನೋಡುವುದರಿಂದ ಹಿಡಿದು ,ದೇಶದ್ರೋಹಿಗಳ ಜೊತೆಗೂಡಿ ಸಮಾಜ ವಿದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಂಡು, ದೇಶಕ್ಕೆ ಕಂಟಕವಾದ ಉದಾಹರಣೆಗಳೂ ಇವೆ .
ಸಜ್ಜನ,ಸುಸಂಸ್ಕೃತ
ಮಕ್ಕಳ ಕುರಿತು ಅವರ
ಪೋಷಕರು
ಹೇಳಿಕೊಳ್ಳುವರು
ಇವರು ನನ್ನ ಮಕ್ಕಳು|
ದಾರಿ ತಪ್ಪಿದ ಮಕ್ಕಳ
ನೆನೆದು ಬೇಸರದಿ ಕೆಲವರು
ಬೈದು ಕೊಳ್ಳುವರು
ಕಳ್ ನನ್ ಮಕ್ಕಳು||
ಹೀಗೆ ಮಕ್ಕಳು ಬೆಳೆಯುವ ಪರಿಸರ ಸಮಾಜದ ಸ್ಥಿತಿಗಳು ಮುಂತಾದ ಅಂಶಗಳು ಹುಟ್ಟಿನಿಂದ ದೇವರಾಗಿರುವ ಮಕ್ಕಳು ದಾನವರಾಗಬಹುದು ,ಕೆಲವೊಮ್ಮೆ ದೈವಿಕ ಗುಣವಿರುವ ವಿಶಾಲ ಮನೋಭಾವದ ಅನಿಕೇತನ ಪರಿಕಲ್ಪನೆಯು ಮಕ್ಕಳನ್ನು ಜಾತಿ, ಮತ ,ಪಂತಗಳ ಹೆಸರಲ್ಲಿ ಸಂಕುಚಿತರನ್ನಾಗಿಸುತ್ತದೆ.
ಮಕ್ಕಳು ದೇವರಾಗಲಿ, ದೇವರು ನಮ್ಮ ದೇಶ,ಸಂಸ್ಕೃತಿ ಮತ್ತು ಮಾನವ ಜನಾಂಗವನ್ನು ಕಾಪಾಡಲಿ ಎಂಬುದೇ ಸಿಹಿಜೀವಿಗಳ ಆಶಯ.
ಸಿಹಿಜೀವಿ
ಸಿ ಜಿ ವೆಂಕಟೇಶ್ವರ
No comments:
Post a Comment