05 July 2021

ಸಿಹಿಜೀವಿಯ ಸ್ಪೂರ್ತಿ ನುಡಿಗಳು.


 

ಸಿಹಿಜೀವಿಯ ಸ್ಪೂರ್ತಿ ನುಡಿಗಳು

ಬರೀ ಬಿರು ಬಿಸಿಲು, ಭುವಿಗೆ ಯಾರೋ ಬೆಂಕಿ ಹಚ್ಚಿರುವರು, ಮಳೆ ಮರೀಚಿಕೆಯಾಗಿದೆ ನಾವು ಬದುಕುವುದೇಗೆ? ಎಂದು ಸರ್ವರೂ
ಕಂಗಾಲಾಗಿರುವಾಗ ಬಾಲಕಿಯೋರ್ವಳು ಕೊಡೆ ಹಿಡಿದು ಇಂದು ಮಳೆ ಬರುವುದು ಎಂದು ಹೇಳಿ ಮನೆಯಿಂದ ಹೊರಬಂದಳು .

ಬಂಜೆಯೆಂದು ಮೂದಲಿಸಿಕೊಂಡು ಸಮಾಜದ ಅವಗಣನೆಗೆ ಪಾತ್ರವಾದವಳು , ದಿನವೂ ತಾನು ನೆಟ್ಟ  ಗಿಡಗಳಿಗೆ ನೀರುಳಿಸಿ ,ಗೊಬ್ಬರ ಹಾಕಿ ,ಇವು ನೆರಳು ,ಫಲ ನೀಡೇ ನೀಡುವವು ಎಂದು ವಿಶ್ವಾಸದಿಂದ ಹೇಳುತ್ತಿದ್ದಳು.

ಅವಳು ತೊರೆದು ವರುಷಗಳಾದರೂ ,ಬರುವಳೆಂಬ ಭರವಸೆಯಿಂದ ಮನದಲ್ಲೇ ಅವಳಿಗೊಂದು ಮಹಲ್ ಕಟ್ಟಿರುವನು, ದೀಪ ಮಾತ್ರ ಹಚ್ಚಬೇಕಿದೆ.

ಬೆಲೆ ಕುಸಿತ  , ಬರ, ಅತಿವೃಷ್ಟಿ ಅನಾವೃಷ್ಟಿ, ಸಾಲ , ಮುಂತಾದ ಸಮಸ್ಯೆಗಳನ್ನು ಹಾಸಿ ಹೊದ್ದರೂ, ನಮ್ಮ ರೈತ ತನ್ನ ಎತ್ತುಗಳ ಜೊತೆಗೆ ಉಳುಮೆ ಮಾಡಲು ಮುಂಜಾನೆಯೇ  ಹೊಲಕ್ಕೆ ಹೊರಟ .


ಬೆಂಕಿ ಅವಘಡವೊಂದರಲ್ಲಿ   ಮನೆ, ಮಠ,  ತನ್ನವರೆಲ್ಲರನ್ನು ಕಳೆದುಕೊಂಡ ಸಿರಿವಂತ ವ್ಯಾಪಾರಿಯ ಕಥೆ ಮುಗಿಯಿತು ಎಂದು ಹಲವರು ಅಂದುಕೊಂಡರು .ಮರುದಿನ ಮನೆಯ ಸುಟ್ಟ ಬೂದಿಯ ಮೇಲೆ ಅವನೊಂದು ಚಿಕ್ಕ ಬೋರ್ಡ್ ಬರೆದು ,ಆ ಬೋರ್ಡ್ ಮೇಲೆ ಹೀಗೆ ಬರೆದಿತ್ತು " ನಾನು ಹಣ, ಆಸ್ತಿ , ನನ್ನವರ ಕಳೆದುಕೊಂಡು ದುಃಖದಲ್ಲಿರುವೆ ನಿಜ, ಆದರೆ ನನ್ನ
ಆತ್ಮವಿಶ್ವಾಸವನ್ನಲ್ಲ, ಇಂದಿನಿಂದ ಇದೇ ಜಾಗದಲ್ಲಿ ಎಂದಿನಂತೆ ವ್ಯಾಪಾರ ಶುರುವಾಗುವುದು "

*ಸಿಹಿಜೀವಿ*
ಸಿ ಜಿ ವೆಂಕಟೇಶ್ವರ
ತುಮಕೂರು


No comments: