09 July 2021

ತುಂಬಿಸಿಕೊಳ್ಳದಿರಲಿ ತಮ್ಮ ಜೋಳಿಗೆ


 


ತುಂಬಿಸಿ ಕೊಳ್ಳದಿರಲಿ ತಮ್ಮ ಜೋಳಿಗೆ 


ಇತ್ತೀಚಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ 

ವಿದ್ಯಾವಂತ ಯುವಕರ ರಾಜಕೀಯ ಪ್ರವೇಶವಾಗುತ್ತಿರುವುದು ಆಶಾದಾಯಕ ಬದಲಾವಣೆ ಎನ್ನಬಹುದು .ಅಂದರೆ ಇವರು ಮಾತ್ರ ಕಡಿದು ಕಟ್ಟೇ ಹಾಕುವರು ಅವಿದ್ಯಾವಂತ ರಾಜಕಾರಣಿಗಳು ಏನೂ ಸಾಧನೆ ಮಾಡಿಲ್ಲ ಎಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ.

"ಓದು ಒಕ್ಕಾಲು ಬುದ್ದಿ ಮುಕ್ಕಾಲು " ಎಂಬ ವಾಣಿಯಂತೆ ಹಲವಾರು ರಾಜಕಾರಣಿಗಳು ಓದು ಕಡಿಮೆಯಾದರೂ ಚಾಕ ಚಾಕ್ಯತೆಯಿಂದ ಕೆಲಸ ಮಾಡಿ ಜನಮಾನಸದಲ್ಲಿ ಇಂದಿಗೂ ಸ್ಥಾನ ಪಡೆದಿರುವುದು ಸುಳ್ಳಲ್ಲ.

ಆದರೆ ಬದಲಾದ ಕಾಲಘಟ್ಟದಲ್ಲಿ ಇಂದಿನ ಕಂಪ್ಯೂಟರ್‌ ಯುಗದಲ್ಲಿ, ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆ ದಿನದಿಂದ ದಿನಕ್ಕೆ ನಾವೆಲ್ಲರೂ ಅಪ್ಡೇಟ್ ಆಗಲೇ ಬೇಕಿದೆ ಇದಕ್ಕೆ   ವಯಸ್ಸಾದವರು ಬೇಗನೆ ಹೊಂದಿಕೊಳ್ಳಲು ಕಷ್ಟ ಆಗಬಹುದು ,ಆ ನಿಟ್ಟಿನಲ್ಲಿ ಯೋಚಿಸಿದಾಗ ರಾಜಕೀಯ ರಂಗಕ್ಕೆ ಯುವ ವಿದ್ಯಾವಂತರ ಆಗಮನವನ್ನು ಸಕಾರಾತ್ಮಕವಾಗಿ ನೋಡಬೇಕಾಗುತ್ತದೆ.


ಜನರ ಸೇವೆಗೆ 

ರಾಜಕೀಯ ವ್ಯವಸ್ಥೆಗೆ

ಬೇಕಿದೆ ಹೊಸ ನೀರು|

ಬಂದ ಕೆಲವೇ

ದಿನಗಳಲ್ಲಿ ಜನರ

ಮರೆತು ಅವರು

ತೋರದಿರಲಿ ತಮ್ಮ

ಕುಟುಂಬದ ಕಾರುಬಾರು||



ಆದ್ದರಿಂದ ಜನಸೇವೆಯ ಉದ್ದೇಶ ಇಟ್ಟುಕೊಂಡು ಬರುವ ಎಲ್ಲಾ ಯುವಕರಿಗೆ ಕಿವಿಮಾತಾಗಿ ಈ ಮೇಲಿನ ಹನಿಗವನ ಹೇಳಬೇಕಾಯಿತು.


ಇಂದಿನ ದಿನಮಾನಗಳಲ್ಲಿ ರಾಜಕೀಯವನ್ನು ಒಂದು ಉದ್ಯಮವಾಗಿ ನೋಡುವವರ ಸಂಖ್ಯೆ ಹೆಚ್ಚಾಗಿದೆ ,ರಾಜಕೀಯ ಎಂದರೆ ಸ್ವ ಹಿತಾಸಕ್ತಿ, ತಮ್ಮ ಕುಟುಂಬದ ಅಭಿವೃದ್ಧಿ ಎಂಬ ಅಲಿಖಿತ ನಿಯಮ ಜಾರಿಯಲ್ಲಿದೆ ಇದು ತೊಲಗಲು ಯುವ ರಾಜಕಾರಣಿಗಳು ಪಣ ತೊಡಬೇಕಿದೆ.


ಬಹಳ ಆದರದ ಸ್ವಾಗತ

ಬಂದರೆ ರಾಜಕಾರಣಕ್ಕೆ

ವಿದ್ಯಾವಂತ ಯುವಪೀಳಿಗೆ|

ಕ್ರಮೇಣ ಜನಸಾಮಾನ್ಯರ

ಮರೆತು ತುಂಬಿಸಿಕೊಳ್ಳದಿರಲಿ

ತಮ್ಮ ಕುಟುಂಬದ ಜೋಳಿಗೆ||



ಆರಂಭಶೂರರಂತೆ ಕೆಲ ಯುವ ರಾಜಕಾರಣಿಗಳು ಪ್ರಾಮಾಣಿಕವಾಗಿ ಜನ ಸೇವೆ ಮಾಡಿ ಜನಮನ್ನಣೆ ಗಳಿಸಿ ನಂತರ ವ್ಯವಸ್ಥೆಯಲ್ಲಿ ಅವರೂ ಹತ್ತರಲ್ಲಿ ಹನ್ನೊಂದು ಎಂಬಂತಾಗಿ ಬಿಡುವರು.


ಹೊಸದಾಗಿ ಗೆದ್ದ 

ನಮ್ಮ ಜನಪ್ರತಿನಿಧಿ

ಸೇವೆ ಮಾಡಲು 

ಜನರ ಬಳಿ ತೆರಳುತ್ತಿದ್ದರು

ಮತ್ತೆ ಮತ್ತೆ|

ಈಗೀಗ ಪಾಪ ಅವರಿಗೆ

ಪುರುಸೊತ್ತಿಲ್ಲ 

ಬರು ಬರುತ್ತಾ

ಆಗುತ್ತಿದೆ ರಾಯರ

ಕುದುರೆ ಕತ್ತೆ||


ಎಂಬಂತಾಗಬಾರದು ಜನರಿಗೆ ಅಗತ್ಯವಿದ್ದಾಗ ಸ್ಪಂದಿಸುವ ಗುಣವನ್ನು ಎಲ್ಲಾ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕಿದೆ, ಪ್ರಪಂಚದಲ್ಲೇ ಅತೀ ದೊಡ್ಡದಾದ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ,ಪ್ರಪಂಚದಲ್ಲೇ ಅತೀ ಉತ್ತಮ ಸಂವಿಧಾನವನ್ನು ಹೊಂದಿರುವ ನಮ್ಮ ದೇಶದಲ್ಲಿ ಅದಕ್ಕೆ ತಕ್ಕಂತೆ ಉತ್ತಮ ಸಜ್ಜನ , ವಿದ್ಯಾವಂತ ರಾಜಕಾರಣಿಗಳು ಜನಸೇವೆಯಲ್ಲಿ ತೊಡಗಿದರೆ ನಮ್ಮ ಭಾರತವು ಇನ್ನೂ ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ.


ಸಿಹಿಜೀವಿ

ಸಿ ಜಿ ವೆಂಕಟೇಶ್ವರ

No comments: