ತುಮಕೂರು
30 October 2023
ಸಿಕ್ಸರ್...
ವಿಶ್ವ ಮಿತವ್ಯಯ ದಿನ
ವಿಶ್ವ ಮಿತ ವ್ಯಯ ದಿನ.
ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು, ಉಳಿತಾಯಕ್ಕೆ ಪ್ರೋತ್ಸಾಹ ನೀಡಲು ಜಗತ್ತಿನಾದ್ಯಂತ
ಪ್ರತಿವರ್ಷ ಅಕ್ಟೋಬರ್ 31 ರಂದು ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಒಂದು ದಿನ ಮೊದಲು ಅಂದರೆ, ಅಕ್ಟೋಬರ್ 30ರಂದು ಮಿತವ್ಯಯ ದಿನ ಆಚರಿಸಲಾಗುತ್ತದೆ. ಹೀಗಾಗಿ ಭಾರತದ ಇಂದು ಮತ್ತು ನಾಳೆ ಮಿತವ್ಯಯ ದಿನ ಎನ್ನಬಹುದು. ತಿಂಗಳ ಕೊನೆ ದಿನವಾಗಿರುವುದರಿಂದ ಸ್ಯಾಲರಿ ಆಗದೆ ಅನಿವಾರ್ಯವಾಗಿ ಈ ಎರಡು ದಿನ ಬಹುತೇಕರು ಮಿತವ್ಯಯ ಮಾಡಬಹುದು. ಆದರೆ, ಜೀವನಪೂರ್ತಿ ಮಿತವ್ಯಯ ರೀತಿ ಅನುಸರಿಸಿದರೆ ಸುಖವುಂಟು ಎನ್ನಬಹುದು.
ಅದಕ್ಕೆ ಕವಿವಾಣಿ
"ತಿಂಗಳ ಮೊದಲ ದಿನ ಸ್ಯಾಲರಿ
ತಿಂಗಳ ಕೊನೆಯಲ್ಲಿ ಸಾಲಾ ರಿ "
ಎಂದಿರುವುದು.
ಹಣ ಉಳಿತಾಯ ಮಾಡುವುದು ಮತ್ತು ಹಣಕಾಸು ಭದ್ರತೆ ಹೆಚ್ಚಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಇದು ಕೇವಲ ವೈಯಕ್ತಿಕ ಹಂತದಲ್ಲಿ ಮಾತ್ರವಲ್ಲ ದೇಶಗಳೂ ಹಣ ಮಿತವ್ಯಯ ಮಾಡಬೇಕು ಎನ್ನುವುದನ್ನು ಈ ದಿನ ತಿಳಿಸುತ್ತದೆ. ವಿಶ್ವ ಯುದ್ಧದ ಬಳಿಕ ಇಂತಹ ಮಿತವ್ಯಯಗಳನ್ನು ಸೂಚಿಸಲಾಗಿದೆ. ರಷ್ಯಾ-ಉಕ್ರೇನ್ ಯುದ್ದ, ಇಸ್ರೇಲ್ ಹಮಾಸ್ ಸಂಘರ್ಷದ ಈ ಸಂದರ್ಭದಲ್ಲಿಯೂ ಹಣದ ತೊಂದರೆಗಳನ್ನು ಜಗತ್ತು ಗಮನಿಸುತ್ತಿದೆ. ಅದಕ್ಕೆ ತಕ್ಕಂತೆ ನಾವೂ ಜಾಗರೂಕತೆಯಿಂದ ಹಣವನ್ನು ಖರ್ಚು ಮಾಡಿ ಉಳಿತಾಯ ಮಾಡಬೇಕಿದೆ.
1924ರಲ್ಲಿ ಇಂಟರ್ನ್ಯಾಷನಲ್ ಥ್ರಿಫ್ಟ್ ಕಾಂಗ್ರೆಸ್ ಮೊದಲ ಬಾರಿಗೆ ವಿಶ್ವ ಮಿತವ್ಯಯ ದಿನ ಘೋಷಿಸಿತ್ತು. ಇಟಲಿಯ ಮಿಲನ್ನಲ್ಲಿ ಈ ದಿನವನ್ನು ಮೊದಲ ಬಾರಿಗೆ ಘೋಷಿಸಲಾಯಿತು. ಇಟಲಿಯ ಪ್ರೊಫೆಸರ್ ಫಿಲಿಪ್ಪೊ ರವಿಝಾ ಅವರು ಅಕ್ಟೋಬರ್ 31 ಅನ್ನು ವಿಶ್ವ ಮಿತವ್ಯಯ ದಿನವೆಂದು ಘೋಷಿಸಿದರು. ಜನರು ಹಣ ಉಳಿತಾಯ ಮಾಡುವಂತೆ ಮತ್ತು ಬ್ಯಾಂಕ್ಗಳ ಕುರಿತು ತಮ್ಮ ಭರವಸೆ ಹೆಚ್ಚಿಸಿಕೊಳ್ಳುವಂತೆ ಮಾಡುವ ಉದ್ದೇಶ ಈ ದಿನದ್ದಾಗಿದೆ. ವಿಶ್ವ ಯುದ್ಧದ ಬಳಿಕ ಜನರಲ್ಲಿ ಹಣ ಉಳಿತಾಯದ ಅರಿವು ಹೆಚ್ಚಿಸುವ ಸಲುವಾಗಿ ಈ ದಿನಾಚರಣೆ ಆರಂಭಿಲಾಯಿತು. ಶಾಲೆಗಳಲ್ಲಿ, ಆಫೀಸ್ಗಳಲ್ಲಿ, ಅಸೋಸಿಯೇಷನ್ಗಳಲ್ಲಿ ಜನರು ಹಣ ಉಳಿತಾಯದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
1984ರಲ್ಲಿ ಭಾರತದಲ್ಲಿ ಇಂದಿರಾ ಗಾಂಧಿಯವರ ಹತ್ಯೆ ಬಳಿಕ ವಿಶ್ವ ಮಿತವ್ಯಯ ದಿನವನ್ನು ಅಕ್ಟೋಬರ್ 31ರ ಬದಲು ಅಕ್ಟೋಬರ್ 30ಕ್ಕೆ ಆಚರಿಸಲಾಗುತ್ತಿದೆ.
ವಿಶ್ವ ಮಿತವ್ಯಯ ದಿನದ ಪ್ರಮುಖ ಉದ್ದೇಶ ಬ್ಯಾಂಕ್ನಲ್ಲಿ ಹಣ ಉಳಿತಾಯ ಮಾಡುವುದು. ಈ ಮೂಲಕ ದೇಶದಲ್ಲಿ ಹಣಕಾಸು ವ್ಯವಸ್ಥೆ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು. ಹಣವನ್ನು ಮನೆಯಲ್ಲಿ ಉಳಿತಾಯ ಮಾಡಿದರೆ ಅದು ಚಲಾವಣೆಗೊಳ್ಳುವುದಿಲ್ಲ. ಬ್ಯಾಂಕ್ನಲ್ಲಿ ಉಳಿತಾಯ ಮಾಡಿದರೆ ಆ ಹಣದ ಸರಿಯಾದ ಬಳಕೆಯಾಗುತ್ತದೆ.ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ ನಿರಂತರವಾಗಿ ಬಡ್ಡಿಯ ಪ್ರಮಾಣ ಕಡಿಮೆಯಾಗುತ್ತಿರುವುದು ಹಾಗೂ ಬ್ಯಾಂಕುಗಳು ಅನವಶ್ಯಕ ಮತ್ತು ಹೆಚ್ಚು ಶುಲ್ಕಗಳನ್ನು ವಿಧಿಸುವ ಕ್ರಮಗಳಿಂದ ಬೇಸತ್ತು ಜನರು ಉಳಿತಾಯದ ಕಡೆಗೆ ಮುಖ ಮಾಡದಿರುವುದು ಕಂಡು ಬಂದಿದೆ. ಇದಕ್ಕೊಂದು ಪರಿಹಾರವನ್ನು ತುರ್ತಾಗಿ ಕೈಗೊಳ್ಳಬೇಕಿದೆ.
2023ರ ಮಿತ ವ್ಯಯ ದಿನದ ಘೋಷಣೆ
"ಉಳಿತಾಯದ ಮೂಲಕ ನಿಮ್ಮ ನಾಳೆಗಳನ್ನು ಜಯಿಸಿ "
(conquer your tomorrow by savings) ಭವಿಷ್ಯದಲ್ಲಿ ಏನೇ ಕಷ್ಟ ಬಂದರೂ ನಮ್ಮಲ್ಲಿ ಹಣಕಾಸು ಉಳಿತಾಯವಿದ್ದರೆ ಭಯ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಕಾಯಿಲೆಗಳು, ಆರ್ಥಿಕ ಸಂಕಷ್ಟಗಳು ಉಂಟಾದರೆ ಬ್ಯಾಂಕ್ನಲ್ಲಿರುವ ನಮ್ಮ ಉಳಿತಾಯದ ಹಣವು ನೆರವಿಗೆ ಬರುತ್ತದೆ. ಹೀಗಾಗಿ, ಉಳಿತಾಯದ ಅಭ್ಯಾಸ ಇಲ್ಲದವರು ಇಂದಿನಿಂದಲೇ ಹಣ ಉಳಿತಾಯ ಆರಂಭಿಸಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
29 October 2023
ಆತ್ಮ ವಿಶ್ವಾಸ ಮೂಡಿಸೋಣ...
ಆತ್ಮವಿಶ್ವಾಸ ಮೂಡಿಸೋಣ
ಒಬ್ಬ ವಿದ್ಯಾರ್ಥಿ ಒಂದು ಟೆಸ್ಟ್ ನಲ್ಲಿ ಕಡಿಮೆ ಅಂಕ ಪಡೆದರೆ, ಒಬ್ಬ ನೌಕರ ಒಂದು ಟಾಸ್ಕ್ ನಲ್ಲಿ ಕಡಿಮೆ ದಕ್ಷತೆ ತೋರಿದರೆ ಸಾಮಾನ್ಯವಾಗಿ ಅವನು ಅಷ್ಟೇ ಎಂದು ಷರಾ ಬರೆದು ಅವನ ಕೆಳಮಟ್ಟದ ಪರ್ಪಾರ್ಮೆನ್ಸ್ ಮಾಡುವವನೆಂದು ಷರಾ ಬರೆದು ಅವನ ಹಣೆಗೆ ಕಟ್ಟಿಬಿಡುತ್ತೇವೆ.
ಎಲ್ಲಾ ವ್ಯಕ್ತಿಗಳು ಎಲ್ಲಾ ಕಾಲದಲ್ಲೂ ಒಂದೇ ರೀತಿಯ ಕೆಲಸ ಮಾಡುತ್ತಾರೆ ಎಂದರೆ ಮೂರ್ಖತನವಾದೀತು.
ಸಮಯ, ಸಂದರ್ಭ, ಒತ್ತಡ, ಪರಿಸರ, ಪ್ರೇರಣೆ ಹೀಗೆ ನಾನಾ ಅಂಶಗಳು ನಮ್ಮ ಕಾರ್ಯ ವೈಖರಿಯನ್ನು ನಿರ್ಧಾರ ಮಾಡುತ್ತವೆ.
ವರ್ಷಗಟ್ಟಲೆ ಶ್ರಮಿಸಿ ಬಲ್ಬ್ ಕಂಡುಹಿಡಿದಿದ್ದ ಥಾಮಸ್ ಅಲ್ವಾ ಎಡಿಸನ್. ಅದನ್ನು ಹೋಲ್ಡರ್ ಗೆ ಸಿಕ್ಕಿಸಬೇಕಿತ್ತು. ಹೋಲ್ಡರ್ ಇದ್ದುದು ಮಹಡಿಯ ಮೇಲೆ. "ಹೋಗಿ ಅದಕ್ಕೆ ಸಿಕ್ಕಿಸಿ ಬಾ" ಎಂದು ತನ್ನ ಸಹಾಯಕನೊಬ್ಬನಿಗೆ ಹೇಳಿದ ಎಡಿಸನ್. ಹುಡುಗ ಎಷ್ಟು ನರ್ವಸ್ ಆಗಿದ್ದನೆಂದರೆ ಮೆಟ್ಟಿಲು ಹತ್ತುವುದರೊಳಗಾಗಿ ಅವನ ಕೈ ನಡುಗಿ ಆಗಷ್ಟೇ ಕಷ್ಟಪಟ್ಟು ತಯಾರಿಸಿದ ಬಲ್ಬ್ ಬಿದ್ದು ಒಡೆದುಹೋಯಿತು.
ಎಡಿಸನ್ ಸಿಟ್ಟಾಗಲಿಲ್ಲ. ಮತ್ತೊಂದು ಬಲ್ಬ್ ತಯಾರಿಸಿದ. ಅದಕ್ಕೆ ಪೂರ್ತಿ ಇಪ್ಪತ್ನಾಲ್ಕು ತಾಸು ಹಿಡಿದವು. ಅವನ ಟೀಮಿನ ಅಷ್ಟೂ ಸಹಾಯಕರು ಅದಕ್ಕಾಗಿ ದುಡಿದಿದ್ದರು. ಎಲ್ಲಾ ಆದ ಮೇಲೆ ಮತ್ತೆ ಅದೇ ಹುಡುಗನನ್ನು ಕರೆದು "ಈ ಸಲವೂ ನೀನೇ ಸಿಕ್ಕಿಸಿ ಬಾ" ಎಂದ. ಉಳಿದ ಸಹಾಯಕರು ಇರಸು ಮುರಿಸಿಗೆ ಒಳಗಾದರು. ಈ ಹುಡುಗ ಮತ್ತೆ ಬಲ್ಬ್ ಒಡೆದರೆ, ಅದನ್ನು ತಯಾರಿಸಲು ಮತ್ತೆ ಇಪ್ಪತ್ನಾಲ್ಕು ಗಂಟೆ ಬೇಕು. ಎಡಿಸನ್ ಯಾಕಿಂತ ರಿಸ್ಕು ತೆಗೆದುಕೊಳ್ಳುತ್ತಿದ್ದಾನೆ?
ಅದಕ್ಕೆ ಎಡಿಸನ್ ಹೇಳಿದ " ನೋಡ್ರೋ, ಅಂಥ ಸಾವಿರ ಬಲ್ಬ್ ಗಳನ್ನು ಸಾವಿರ ದಿನ ಕೆಲಸ ಮಾಡಿ ತಯಾರಿಸಿ ಬಿಡಬಹುದು. ಆದರೆ ಆ ಹುಡುಗನ ಆತ್ಮವಿಶ್ವಾಸ ನಾಶವಾಗಿ ಬಿಟ್ಟರೆ ಅದನ್ನು ಮತ್ತೆ ತುಂಬಿ ಕೊಡುವುದು ಸುಲಭವಲ್ಲ!"
ನಾವೂ ಕೂಡಾ ದಿನನಿತ್ಯದ ಜೀವನದಲ್ಲಿ ಎಡಿಸನ್ ಶಿಷ್ಯ ನಂತಹ ಸಾವಿರಾರು ಜನರನ್ನು ನೋಡುತ್ತೇವೆ.ತಪ್ಪೆಸಗಿದರೆ ಮುಗಿಯಿತು ಆಳಿಗೊಂದು ಕಲ್ಲು ಬೀಸಿ ಸಹಸ್ರ ನಾಮಾರ್ಚನೆ ಮಾಡಿ ಮುಂದೆ ಆ ವ್ಯಕ್ತಿ ಆ ಕೆಲಸಕ್ಕೆ ಕೈ ಹಾಕದಂತೆ ಮಾಡಿಬಿಡುತ್ತೇವೆ. ಯಾರಿಗೆ ಆಗಲಿ ಯಶಸ್ಸಿನಲ್ಲಿ ಅವರ ಜೊತೆಗಿರದಿದ್ದರೂ ತಪ್ಪು ಮಾಡಿದಾಗ ಮತ್ತು ಜೀವನದಲ್ಲಿ ಸೋತಾಗ ಅವರ ಬೆನ್ನಿಗೆ ನಿಲ್ಲೋಣ ನಾಲ್ಕು ಆತ್ಮವಿಶ್ವಾಸವನ್ನು ವೃದ್ಧಿಸುವ ಮಾತುಗಳನ್ನಾಡೋಣ ಯಾರಿಗೆ ಗೊತ್ತು ಆ ವ್ಯಕ್ತಿ ಮುಂದೆ ಅದ್ಭುತವಾದ ಸಾಧನೆ ಮಾಡಬಹುದು!
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925429
28 October 2023
ರಾಷ್ಟ್ರೀಯ ಏಕತಾ ದಿನ
#ರಾಷ್ಟ್ರೀಯ ಏಕತಾ ದಿನ ..
ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಕ್ಕಿನ ಮನುಷ್ಯ ಸರಪಟೇಲರು
ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು2014 ರಿಂದ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಏಕತೆ, ಸಮಗ್ರತೆ ಮತ್ತು ನೈಜ ಮತ್ತು ಸಂಭಾವ್ಯ ಬೆದರಿಕೆಗಳನ್ನು ತಡೆದುಕೊಳ್ಳಲು ನಮ್ಮ ರಾಷ್ಟ್ರದ ಅಂತರ್ಗತ ಶಕ್ತಿಯನ್ನು ಮರುದೃಢೀಕರಿಸಲು ಇಂತಹ ದಿನಾಚರಣೆಗಳ ಅಗತ್ಯವಿದೆ.
ಭಾರತದ ಏಕೀಕರಣದ ಕಥೆಯೇ ಒಂದು ರೋಚಕ ಬಹುತೇಕ ಅಸಾಧ್ಯ ಎನ್ನಬಹುದಾದ ಕೆಲಸವನ್ನು ಇದು ಸಾಧ್ಯ ಎಂದು ಮಾಡಿ ತೋರಿಸಿದವರು ನಮ್ಮ ಪಟೇಲ್ ರವರು.
ಭಾರತ ಸ್ವಾತಂತ್ರ್ಯ ನಂತರ
ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು.
ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ , ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದರು. ರಾಜ ಮಹಾರಾಜ ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯವನ್ನು ನೈಜ ಭಾರತವನ್ನಾಗಿಸಲು ಸಾಮ ಭೇದ ದಾನ ದಂಡ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು.
ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಗೌರವದಿಂದ ವರ್ತಿಸಿದರು. ಸೂಕ್ಷ್ಮ ವಾದ ಜಾಗಗಳಾದ ತಿರುವಾಂಕೂರು ಮತ್ತಿತರೆಡೆಗೆ ವಿ. ಪಿ. ಮೆನನ್ ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರ ಮನ ಒಲಿಸಿದರು.
ಯುದ್ಧ ಮಾಡಲು ಹಿಂಜರಿಯದ, ಆದರೆ ನೇರಯುದ್ಧಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಜನರಲ್ ಸ್ಯಾಮ್ ಮಾಣಿಕ್ ಶಾರನ್ನು ಜೊತೆಯಾಗಿಟ್ಟುಕೊಂಡು ಹೋಗುತ್ತಿದ್ದರು. ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆಗೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.
565 ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ ,ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು.
ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೊಂಡಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲೇ ಈ ಕಾರ್ಯಕ್ಕೆ ಕೈ ಹಾಕಿದ್ದ ಪಟೇಲರು
1947ರ ಮೇ 6 ರಂದು ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಆರಂಭದಲ್ಲಿಯೇ ಚಿವುಟಿಹಾಕುವುದಾಗಿತ್ತು.
ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಭೋಜನ ಅಥವಾ ಚಹಾ ಸತ್ಕಾರ ಏರ್ಪಡಿಸಿದ ಪಟೇಲರು ಈ ಸಾಮಾಜಿಕ ಹಾಗೂ ಅನಧಿಕೃತ ಭೇಟಿಗಳ ಮೂಲಕ ಅವರನ್ನು ವಿಲೀನದ ಪ್ರಕ್ರಿಯೆಯಲ್ಲಿ ತೊಡಗಿಸಿದರು.ಹಾಗೂ 1947 ಆಗಸ್ಟ್ 15ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು.
ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಬಗ್ಗೆ ಎಲ್ಲಾ 565 ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು. ಕಾಶ್ಮೀರ, ಹೈದರಾಬಾದು ಹಾಗೂ ಜುನಾಘಢ, ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು.
ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ ಪಾಕಿಸ್ತಾನದಿಂದ ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ 80 ಹಿಂದೂಗಳಾಗಿದ್ದರು. ಪಟೇಲರು ಮುತ್ಸದ್ದಿತನದೊಡನೆ ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು.
ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ 99.5 ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ಭಾಗಗಳನ್ನೊಳಗೊಂಡ ಹೈದರಾಬಾದ್ ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ ನಿಜಾಮ ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ 80 ಹಿಂದೂಗಳಾಗಿದ್ದರು.
ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.ಕಾಸೀಂ ರಜ್ವಿಯಂಬ ಮತಾಂಧ ಮತ್ತು ಉಗ್ರವಾದಿಯ ಮುಂದಾಳತ್ವದಲ್ಲಿ ಸಾವಿರಾರು ಜನ ರಜಾಕಾರರು ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು.
ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ ನೆಡೆಯಿತು. ಕರ್ನಾಟಕದ ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.
ಯುದ್ಧ ಭೀತಿಯಿಂದ ಹತಾಶರಾಗಿದ್ದ ಮೌಂಟ್ ಬ್ಯಾಟನ್ನರ ಪ್ರಯತ್ನದಿಂದ ತಟಸ್ಥ ಒಪ್ಪಂದವಾದರೂ, ನಿಜಾಮ ತನ್ನ ನಿಲುವನ್ನು ಬದಲಾಯಿಸಿ ಈ ಒಪ್ಪಂದವನ್ನು ತಿರಸ್ಕರಿಸಿದ. ವಿಶ್ವಸಂಸ್ಥೆಗೆ ಈ ವಿವಾದವನ್ನು ಒಪ್ಪಿಸುವ ಕುತಂತ್ರ ಅವನದಾಗಿತ್ತು. 1948ರ ಸೆಪ್ಟೆಂಬರಿನಲ್ಲಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ, ಹೈದರಾಬಾದನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು.
ಆಪರೇಷನ್ ಪೋಲೋ ಎಂಬ ಈ ಕಾರ್ಯಾಚರಣೆಯಲ್ಲಿ ಸಾವಿರಾರು ರಜಾಕಾರರು ಕೊಲ್ಲಲ್ಪಟ್ಟರು. 1948 ಸೆಪ್ಟೆ೦ಬರ್ 17 ರಂದು ಈಗಿನ ಬೀದರ್ ಜಿಲ್ಲೆಯ ಹುಮುನಾಬಾದಿನಲ್ಲಿ ನಿಜಾಮರ ಸೈನ್ಯ ಶರಣಾಯಿತು. ಹೈದರಾಬಾದು ಪ್ರಾ೦ತ್ಯ ಸುರಕ್ಷಿತವಾಗಿ ಭಾರತದ ಭಾಗವಾಯಿತು. ಕೇವಲ ಎರಡುದಿನವಷ್ಟೇ ನಡೆದ ಕಾರ್ಯಚರಣೆಯನ್ನು ಭಾರತ ಸರಕಾರದ ದಾಖಲೆಗಳಲ್ಲಿ ಪೋಲೀಸ್ ಕಾರ್ಯಚರಣೆಯೆ೦ದು ಕರೆಯಲಾಗಿದೆ.
ನಿಜಾಮರ ಸೈನ್ಯದ ಸೈನ್ಯಾಧಿಕಾರಿ ಒಬ್ಬ ಬ್ರಿಟಿಷ್ ಆಗಿದ್ದನೆ೦ಬುವುದು ಇಲ್ಲಿ ಗಮನಾರ್ಹ. ಬಲಪ್ರಯೋಗದಿಂದ ಹೈದರಾಬಾದನ್ನು ವಶಪಡಿಸಿಕೊಂಡಲ್ಲಿ ಅದು ಹಿಂದೂ-ಮುಸ್ಲಿಮ್ ದಂಗೆಗಳಿಗೆ ಅವಕಾಶ ಕೊಡಬಹುದು ಎಂದು ಮೌಂಟ್ ಬ್ಯಾಟನ್ ಮತ್ತು ನೆಹರೂ ಶಂಕಿಸಿ ಹಿಂಜರಿದರೂ ಪಟೇಲರು ಹೈದರಾಬಾದನ್ನು ಹಾಗೆಯೇ ಬಿಟ್ಟಲ್ಲಿ ಅದು ಭಾರತದ ಪ್ರತಿಷ್ಟೆಗೇ ಸವಾಲಾಗುವುದಷ್ಟೇ ಅಲ್ಲ, ಅದರಿಂದಾಗಿ ಹಿಂದೂಗಳಾಗಲೀ, ಮಸಲ್ಮಾನರಾಗಲೀ ಆ ರಾಜ್ಯದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಯಾವುದೇ ನಾಗರೀಕ ಪ್ರತಿಭಟನೆಯಿಲ್ಲದೇ ಯಶಸ್ವಿಯಾದ ಹೈದರಾಬಾದಿನ ವಿಲೀನವನ್ನು ಅನೇಕ ಭಾರತೀಯ ಮುಸ್ಲಿಮರು ಕೊಂಡಾಡಿದರು. ನಿಜಾಮರ ಮೇಲೆ ಸಂತಾಪವಿದ್ದರೂ, ಪಟೇಲರು ಅವರನ್ನು ರಾಜ್ಯದ ಅಲಂಕಾರಿಕ ಮುಖ್ಯಸ್ಥನನ್ನಾಗಿ ನೇಮಿಸಿದರು. ಮುಂದೆ ನಡೆದ ಮಾತುಕತೆಯಲ್ಲಿ ನಿಜಾಮರು ಪಟೇಲರನ್ನು ಕ್ಷಮಾಪಣೆ ಕೇಳಿದ್ದರಿಂದ ಪಟೇಲರು ದೊಡ್ಡ ಮನಸ್ಸಿನಿಂದ ವೈರವನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಿದರು.
ಕಾಶ್ಮೀರ ದ ಏಕೀಕರಣವೂ ಪಟೇಲರ ಚಾಣಾಕ್ಷತನದಿಂದ ಆದ ಕಾರ್ಯವಾಗಿದೆ.
ಭಾರತವನ್ನು ಒಟ್ಟುಗೂಡಿಸುವುದು ಸುಲಭದ ಕೆಲಸವೇನಾಗಿರಲಿಲ್ಲ. ಪಟೇಲರ ಗಣನೀಯ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ. ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು.
ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು. ಇಂತಹ ಮಹಾನ್ ಸಾಧನೆ ಮಾಡಿದ ಪಟೇಲರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದು ಅರ್ಥಪೂರ್ಣ. ನಮ್ಮ ದೇಶದ ಸಮಗ್ರತೆ ಮತ್ತು ಏಕತೆಗೆ ಈ ದಿನ ನಾವೆಲ್ಲರೂ ಪ್ರತಿಜ್ಞೆ ಸ್ವೀಕರಿಸಿ ಕಾರ್ಯ ಪ್ರವೃತ್ತರಾದರೆ ಈ ದಿನಕ್ಕೆ ಇನ್ನೂ ಅರ್ಥ ಬರುವುದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.
25 October 2023
ಕಾರ್ಬಿನ್ ಕೋವ್ ಬೀಚ್.ನನ್ನ ಬ್ಲಾಗ್ ನ .2000 ಪೋಸ್ಟ್ ನ ಸಂಭ್ರಮ
ನಯನ ಮನೋಹರ ಕೋರ್ಬಿನ್ ಕೋವ್ ಬೀಚ್..
ನಯನ ಮನೋಹರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಮತ್ತು ಜಲ ಸಾಹಸ ಕ್ರೀಡೆಗಳಿಗೆ ಹೆಸರಾದ ಅಂಡಮಾನ್ ನ ಬೀಚ್ ಗಳಲ್ಲಿ ಕಾರ್ಬಿನ್ ಕೋವ್ ಪ್ರಮುಖ ಬೀಚ್.
ಇದು ಪೋರ್ಟ್ ಬ್ಲೇರ್ನ ಅತಿ ಹೆಚ್ಚು ಭೇಟಿ ನೀಡುವ ಬೀಚ್ ಸಹ ಆಗಿದೆ. ಎಟರ್ನಲ್ ಅಂಡಮಾನ್ನ 2017 ರ ಸಮೀಕ್ಷೆಯ ಪ್ರಕಾರ 10 ರಲ್ಲಿ 7 ಜನರು ಅಂಡಮಾನ್ ದ್ವೀಪಗಳಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಪ್ರವಾಸದಲ್ಲಿ ಈ ಬೀಚ್ಗೆ ಭೇಟಿ ನೀಡುತ್ತಾರೆ.
ಕಾರ್ಬಿನ್ಸ್ ಕೋವ್ ಕಡಲತೀರವು ಪೋರ್ಟ್ ಬ್ಲೇರ್ನಲ್ಲಿ 1.5 ಕಿಮೀ ಉದ್ದದವರೆಗೆ ಅರ್ಧಚಂದ್ರಾಕಾರದ ಆಕಾರದಲ್ಲಿ ನಿರ್ಮಿಸಲಾದ ಅತ್ಯಂತ ಉದ್ದವಾದ ತೀರವನ್ನು ಹೊಂದಿದೆ.
ಆ ತೀರದಗುಂಟ ಸಮಾನ ಮನಸ್ಕರ ಜೊತೆಯಲ್ಲಿ ನಡೆಯುವುದೇ ಒಂದು ಸುಂದರ ಅನುಭವ. ಪ್ರೇಮಿಗಳು ದಂಪತಿಗಳು ,ಕುಟುಂಬ ಸಮೇತವಾಗಿ ಸಂಜೆಗೆ ಈ ಬೀಚ್ ಗೆ ಭೇಟಿ ನೀಡುವ ಜನ ಹೆಚ್ಚಾಗಿರುವರು.
ಬಲಭಾಗದಲ್ಲಿ ಸಾಲಾಗಿ ನಿಂತ ತೆಂಗಿನ ಮರಗಳು ಎಡಭಾಗದಲ್ಲಿ ಬಿಳಿ ಮರಳು ಹಸಿರು ಮತ್ತು ನೀಲಿ ಬಣ್ಣದ ನೀರು ನಮ್ಮ ಮನಸ್ಸನ್ನು ಪ್ರಫುಲ್ಲವಾಗಿಸುತ್ತದೆ. ನಾವು ಬೀಚ್ ನಲ್ಲಿ ನಡೆಯುವಾಗ ಐಸ್ ಕ್ಯಾಂಡಿ ,ಚುರುಮುರಿ ಮಾರುವವರು ಅಡ್ಡಲಾಗಿ ತಮ್ಮ ಪದಾರ್ಥಗಳನ್ನು ಮಾರಲು ಪ್ರಯತ್ನಿಸುವರು.
ನಾವು ಒಂದು ಚುರುಮುರಿ ಕೊಂಡು ತಿಂದೆವು. ರುಚಿ ಕರ್ನಾಟಕದ ರುಚಿಗೆ ಹತ್ತಿರವಿತ್ತು ಆದರೆ ಪ್ರಮಾಣ ಕಡಿಮೆ ಹಣ ಜಾಸ್ತಿ!
ತೀರದಲ್ಲಿ ಒಂದು ಕಿಲೋಮೀಟರ್ ವಾಕ್ ಮಾಡಿದ ಮೇಲೆ ನಮಗೆ ಕೆಲವು ಶಿಥಿಲವಾದ ಬಂಕರ್ ಗಳು ಕಾಣುತ್ತವೆ. ಅವು ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ನವರು ನಿರ್ಮಿಸಿದ ಬಂಕರ್ ಗಳು ಎಂದು ನಮ್ಮ ಟ್ರಾವೆಲ್ ಗೈಡ್ ಮಾಹಿತಿ ನೀಡಿದನು.
ನಾವು ಬೀಚ್ ನಲ್ಲಿ ವಾಕ್ ಮಾಡುತ್ತಾ ಸೌಂದರ್ಯವನ್ನು ಸವಿಯುವಾಗ ಜೆಟ್ ಸ್ಕಿ, ಬೋಟ್ ರೈಡಿಂಗ್ , ಮುಂತಾದ ವಾಟರ್ ಗೇಮ್ಸ್ ನಲ್ಲಿ ನಿರತ ಯುವಕರು ನೀರಾಟದಲ್ಲಿ ಮೈಮರೆತಿರುವುದನ್ನು ಗಮನಿಸಿದೆ.
ಸ್ವಲ್ಪ ದೂರ ಸಾಗಿದ ನಮಗೆ ಮತ್ತೊಂದು ಬಂಕರ್ ಎದುರಾಯಿತು.
ಅಲ್ಲಿ ನಿಂತು ನೋಡಿದರೆ ಹಾವು ದ್ವೀಪವನ್ನು ಕಾಣಬಹುದು.
ಕಡಲತೀರದ ಕೆಳಗೆ ಮತ್ತಷ್ಟು ಬಲಕ್ಕೆ ನಡೆದರೆ, ನೀವು ದೊಡ್ಡ ಮೀನುಗಾರಿಕೆ ದೋಣಿಗಳನ್ನು ಕಾಣಬಹುದು ಮತ್ತು ಹೇರಳವಾಗಿ ದಟ್ಟವಾದ ಮ್ಯಾಂಗ್ರೋವ್ ಕಾಡುಗಳ ಕಾಣಬಹುದು.
ಹೀಗೆ ಕಾರ್ಬಿನ್ ಕೋವ್ ಬೀಚ್ ನ ಸೌಂದರ್ಯ ಸವಿಯುವ ನಮ್ಮ ಮನಗಳಿಗೆ ಸೂರ್ಯ ದೇವ ಸಂಜೆ 4 .45 ಕ್ಕೆ ಅಸ್ತಂಗತವಾಗಿ ತಣ್ಣೀರೆರಚಿಬಿಟ್ಟ! ಅಂಡಮಾನ್ ನಲ್ಲಿಯೇ ಹಾಗೆ ಬೆಳಿಗ್ಗೆ ನಾಲ್ಕುವರೆಗೆ ಸೂರ್ಯೋದಯ ಸಂಜೆ ನಾಲ್ಕುಮಕ್ಕಾಲಿಗೆ ಸೂರ್ಯಾಸ್ತ!
ಒಟ್ಟಾರೆಯಾಗಿ ನೀವು ಅಂಡಮಾನ್ ಪ್ರವಾಸ ಕೈಗೊಂಡರೆ ಪೋರ್ಟ್ ಬ್ಲೇರ್ನಲ್ಲಿ ನೀವು ಭೇಟಿ ನೀಡಬಹುದಾದ ಅತ್ಯುತ್ತಮ ಕಡಲತೀರಗಳಲ್ಲಿ ಕಾರ್ಬಿನ್ ಕೋವ್ ಬೀಚ್ ಸಹ ಒಂದಾಗಿದೆ. ಎಂದು ಹೇಳಬಹುದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
24 October 2023
ಚಾರಣ ಪ್ರಿಯರ ಸ್ವರ್ಗ ಸಾವನದುರ್ಗ...
ಚಾರಣ ಪ್ರಿಯರ ಸ್ವರ್ಗ ಸಾವನದುರ್ಗ
ಪರಿಸರ ಪ್ರಿಯರನ್ನು ಮತ್ತು ಚಾರಣ ಪ್ರಿಯರನ್ನು ಕೈ ಬೀಸಿ ಕರೆವ ತಾಣವಾದ ಸಾವನದುರ್ಗಕ್ಕೆ ಸಹೋದ್ಯೋಗಿಗಳ ಜೊತೆಗೂಡಿ ಕಳೆದ ತಿಂಗಳು ಭೇಟಿ ನೀಡಿದ್ದೆವು. ಮಾಗಡಿ ದಾಟಿದ ಕೂಡಲೇ ಕಾಡಿನ ಮರಗಳು ನಮ್ಮನ್ನು ಸ್ವಾಗತಿಸಿ ತಂಪಾದ ಗಾಳಿಯನ್ನು ಸೂಸುತ್ತವೆ. ಮರಗಿಡಗಳ ಸೌಂದರ್ಯವನ್ನು ಸವಿಯುತ್ತಾ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ. "ಅಗೋ ನೋಡಿ ಅದೇ ಸಾವನ ದುರ್ಗ" ಎಂಬ ಸಹೋದ್ಯೋಗಿಗಳ ಉದ್ಘಾರ ಕೇಳಿದಾಗ ಕಾರ್ ಸ್ಲೋ ಮಾಡುತ್ತಾ ಎಡಕ್ಕೆ ನೋಡಿದಾಗ ಕಂಡ ಅದ್ಭುತ ದೃಶ್ಯ ಕಾವ್ಯ! ಬೃಹತ್ ಬಂಡೆಯ ದುರ್ಗ ಅದೇ ಸಾವನ ದುರ್ಗ.
ಏಷ್ಯಾ ಖಂಡದಲ್ಲೇ ಸಾವನ ದುರ್ಗದ ಬೆಟ್ಟ ಅತೀ ದೊಡ್ಡ ನೈಸರ್ಗಿಕ ಏಕಶಿಲಾ ರಚನೆಯಾಗಿದ್ದರೆ, ಮಧುಗಿರಿಯ ಬೆಟ್ಟ ಏಷ್ಯಾದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟವೆಂದು ಖ್ಯಾತವಾಗಿದೆ. ಸಾವನ ದುರ್ಗ ಬೆಟ್ಟ 1226 ಮೀಟರ್ ಎತ್ತರವಿದೆ. ಇಷ್ಟೇ ಅಲ್ಲದೆ ವೈಜ್ಞಾನಿಕವಾಗಿ ದಖನ್ ಪ್ರಸ್ಥ ಭೂಮಿಯಲ್ಲಿ ಮುಖ್ಯ ಭಾಗವಾಗಿದೆ. ಬೆಟ್ಟದ ಮೇಲೆ ಸುರಿದ ಮಳೆಯೆಲ್ಲ ಅರ್ಕಾವತಿ ನದಿಗೆ ಸೇರಲಿದ್ದು ಅರ್ಕಾವತಿಗೆ ಕಟ್ಟಲಾಗಿರುವ ಮಂಚನಬೆಲೆ ಜಲಾಶಯ ಕೂಡ ಸಾವನದುರ್ಗಕ್ಕೆ ಸನಿಹದಲ್ಲಿದ್ದು ಬೆಟ್ಟ ಹತ್ತಿದರೆ ಕಾಣುತ್ತದೆ. ಸಾವನದುರ್ಗದ ಬೆಟ್ಟ ಸಾಹಸಿ ಚಾರಣಿಗರಿಗೆ ಹೇಳಿ ಮಾಡಿಸಿದಂತಿದ್ದು ಕೊಂಚ ಅಪಾಯಕಾರಿ ಸ್ಥಳವೂ ಕೂಡ. ಸಾವನ ದುರ್ಗದ ಬೆಟ್ಟದ ಪಾತ್ರದಲ್ಲಿ ಎರಡು ದೊಡ್ಡ ಬೆಟ್ಟಗಳಿದ್ದು ಒಂದನ್ನು ಕರಿ ಗುಡ್ಡ ಹಾಗು ಮತ್ತೊಂದನ್ನು ಬಿಳಿಗುಡ್ಡ ಎಂದು ಕರೆಯಲಾಗುತ್ತದೆ. ಕ್ರಿ.ಶ 1340ರ 3 ನೇ ಹೊಯ್ಸಳ ಬಲ್ಲಾಳನ ಮಾಡಬಾಳ್ ನಲ್ಲಿ ದೊರಕಿರುವ ದಾಖಲೆಯ ಪ್ರಕಾರ ಈ ಬೆಟ್ಟವನ್ನು ಸಾವಂದಿ ಎಂದು ಕರೆಯಲಾಗಿದೆ. ಸಾವನ ದುರ್ಗಾ ಎಂಬ ಹೆಸರು ಬರಲು ಇದನ್ನು ಮುಖ್ಯ ಕಾರಣವಾಗಿ ಪರಿಗಣಿಸಿದರೂ ಮತ್ತೊಂದು ವಾದವಾಗಿ ಸಮಂತರಾಯ ಎಂಬ ಹೆಸರಿನಿಂದ ಸಾವನದುರ್ಗ ಹೆಸರು ಬಂದಿದೆ ಎನ್ನಲಾಗುತ್ತಿದೆ. ಸಾಮಂತರಾಯನು ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯನಲ್ಲಿ ಸಾಮಂತ ರಾಜನಾಗಿದ್ದವನು. ಆತನಿದ್ದ ಸ್ಥಳ ಮಾಗಡಿ ಪ್ರದೇಶವೇ ಆಗಿದ್ದ ಕಾರಣ ಅವನ ಹೆಸರೇ ಬಂದಿದೆ ಎನ್ನುವ ಊಹೆಗಳಿವೆ. 1638 ರಿಂದ 1728 ರ ವರೆವಿಗೂ ಕೆಂಪೇಗೌಡರ ಎರಡನೇ ರಾಜಧಾನಿಯಾಗಿತ್ತು ಸಾವನದುರ್ಗ. ವಿಜಯನಗರ ಸಾಮ್ರಾಜ್ಯ ಪತನಾನಂತರ ಕೆಲ ಕಾಲದಲ್ಲೇ ಕೆಂಪೇಗೌಡರು ಮಡಿದಾಗ ಮೈಸೂರಿನ ದಳವಾಯಿ ಮಾಗಡಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಅಲ್ಲಿಂದ ಮುಂದೆ ಮೈಸೂರಿನ ಟಿಪ್ಪುಸುಲ್ತಾನ್ ಆಡಳಿತಕ್ಕೆ ಒಳಪಟ್ಟ ಸಾವನ ದುರ್ಗವನ್ನು ಟಿಪ್ಪು ಸುಲ್ತಾನ್ ಶಿಕ್ಷಿಸುವ ತಾಣವಾಗಿಸಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಪರಾಧ ಮಾಡಿದರೆ ಅವರನ್ನು ಬೆಟ್ಟದ ಮೇಲಿನಿಂದ ತಳ್ಳುವ ಶಿಕ್ಷೆಗೆ ಗುರಿಪಡಿಸುತ್ತಿದ್ದನಂತೆ. ಈ ಕಾರಣದಿಂದ ಈ ಸ್ಥಳಕ್ಕೆ ಸಾವಿನ ದುರ್ಗ ಎಂಬ ಹೆಸರು ಬಂದಿದ್ದು, ಮುಂದೆ ಸಾವನ ದುರ್ಗ ಎಂದಾಗಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ಮಂಡಿಸುತ್ತಾರೆ.ಮುಂದೆ ಟಿಪ್ಪು ಸುಲ್ತಾನನಿಂದ ಮೂರನೇ ಆಂಗ್ಲೋಮೈಸೂರು ಯುದ್ಧದಲ್ಲಿ ಮಾಗಡಿ ಪ್ರದೇಶವನ್ನು ಲಾರ್ಡ್ ಕಾರ್ನ್ ವಾಲಿಸ್ ವಶಪಡಿಸಿಕೊಂಡನು. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರ ದೇವರ ಗುಡಿ ಹಾಗು ಲಕ್ಷ್ಮಿ ನರಸಿಂಹ ದೇವರ ಗುಡಿಗಳಿವೆ. ಕರ್ನಾಟಕ ಸರ್ಕಾರ ನಿಭಾಯಿಸುತ್ತಿರುವ ಸಣ್ಣ ಅರಣ್ಯ ಪ್ರದೇಶವು ಇಲ್ಲಿದೆ. 'ಎ ಪ್ಯಾಸೇಜ್ ಟು ಇಂಡಿಯಾ' ಎನ್ನುವ ಹಾಲಿವುಡ್ ಚಿತ್ರವೂ ಸೇರಿದಂತೆ ಬಹಳಷ್ಟು ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣ ಸಾವನದುರ್ಗದ ಬೆಟ್ಟ ಪ್ರದೇಶಗಳ ಸುತ್ತ ಮುತ್ತ ಚಿತ್ರೀಕರಿಸಲಾಗಿದೆ.
ವೀಕೆಂಡ್ ನಲ್ಲಿ ಟೆಕ್ಕಿಗಳು ಮತ್ತು ಪ್ರೇಮಿಗಳನ್ನು ಸಾವನ ದುರ್ಗ ಕೈ ಬೀಸಿ ಕರೆಯುತ್ತದೆ.
ಆಸ್ತಿಕರು ಮತ್ತು ಭಕ್ತಾದಿಗಳು
ಸಾವಂದಿ ವೀರಭದ್ರ ದೇವಾಲಯ ಹಾಗು ಲಕ್ಷ್ಮಿ ನರಸಿಂಹ ದೇವರ ದೇವಾಲಯ ಸಂದರ್ಶಿಸಿ ಪುನೀತರಾಗಲು ಸಾವನ ದುರ್ಗದ ಕಡೆ ಪಯಣ ಬೆಳೆಸುತ್ತಾರೆ. ನೀವು ಇದುವರೆಗೂ ಸಾವನದುರ್ಗ ನೋಡಿಲ್ಲವಾದರೆ ಈ ವಾರವೇ ಸಾವನದುರ್ಗಕ್ಕೆ ಹೊರಡಲು ಪ್ಲಾನ್ ಮಾಡಿ...
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
ಸಾವಿರ ನೆನಪುಗಳು...
ಸಾವಿರ ನೆನಪುಗಳು...
ಕೆಲವು ನೆನಪುಗಳೇ ಹಾಗೆ ಪದೇ ಪದೇ ನಮ್ಮನ್ನು ಕಾಡುತ್ತವೆ. ಪುಳಕಗೊಳಿಸುತ್ತವೆ. ಪುನಃ ಪುನಃ ಬಂದು ಮನಕಾನಂದ ನೀಡುತ್ತವೆ. ಮೊನ್ನೆ ಯಾರೋ ಗೆಳೆಯರು ಅವರ ಬಾಲ್ಯ ಮತ್ತು ಯೌವನದ ಹೈಲೈಟ್ ಇರುವ ಮುನ್ನಾಯಿಸಿದ ಸಂದೇಶ ಕಳಿಸಿದ್ದರು. ಅದೇ ಸಮಯಕ್ಕೆ ಮಾರ್ನಾಮಿ ಹಬ್ಬಕ್ಕೆ ನಮ್ಮ ಊರಿಗೆ ಹೋಗಿದ್ದೆ. ಆಗ ನನ್ನ ಬಾಲ್ಯದ ನೆನಪುಗಳು ಒತ್ತರಿಸಿ ಬಂದವು.ಈ ಲೇಖನ ಓದಿ ನಿಮ್ಮ ಬಾಲ್ಯ ನೆನಪಾಗಬಹುದು.
ಆಗ ನಮ್ಮ ಊರ ಕೇರಿಯಲ್ಲಿ ಜುಂಜಪ್ಪಯ್ಯನವರ ಮನೆಯಲ್ಲಿ ಮಾತ್ರ ರೇಡಿಯೋ ಇತ್ತು ಮಧ್ಯಾಹ್ನ ಒಂದೂವರೆಗೆ "ನಿಮ್ಮ ಮೆಚ್ಚಿನ ಚಿತ್ರಗೀತೆ "ಕೇಳಲು ನಾವು ಹಾಜರಾಗುತ್ತಿದ್ದೆವು.
ಒಂದು ಸಲ ರೇಡಿಯೋನಲ್ಲಿ ಕೇಳಿದರೆ ಸಾಕು ಸಿನಿಮಾ ಹಾಡು ಬಾಯಿಪಾಠ ಆಗ್ತಿತ್ತು. ಗೌರಿ ಮೊಗವು ಚಂದಿರನಂತೆ.... ನನ್ನ ನಿನ್ನ ಆಸೆ ನನ್ನ ಪ್ರೇಮು ಭಾಷೆ... ಹಸಿರು ಗಾಜಿನ ಬಳೆಗಳೆ... ಮುಂತಾದ ಹಾಡುಗಳು ಈಗಲೂ ನೆನಪಾಗುತ್ತವೆ.
ಪರ ಊರುಗಳಿಗೆ ಪಯಣಿಸಲು ಬಸ್ ಗಳಲ್ಲಿ ಕುಳಿತಿದ್ದರೆ ನಿಂಬಿಹುಳಿ ಪೇಪರ್ ಮೆಂಟ್ , ಬಿಸ್ಕೆಟ್ ಮಾರಲು ಬಂದು ನಮಗೆ ಮಾರಿ ಹೋಗುತ್ತಿದ್ದರು.
ಸೈಕಲ್ ಎಲ್ಲರ ಮನೆಯಲ್ಲಿ ಇರಲಿಲ್ಲ .ನಮ್ಮ ಬೀದಿಯ ಬಸವರಾಜನ ಮನೆಯಲ್ಲಿ ಮಾತ್ರ ಸೈಕಲ್ ಇತ್ತು ಅವನನ್ನು ಕಾಡಿ ಬೇಡಿ ಒಂದು ರೌಂಡ್ ಸೈಕಲ್ ಪಡೆದು ಓಡಿಸುತ್ತಿದ್ದೆ.
ಆಗ ನಮ್ಮೂರಲಿ ಯಾರ ಮನೆಯಲ್ಲಿ ಮದುವೆಯಾದರೂ ನಮ್ಮ ಮದುವೆಯಂತೆ ಸಂಭ್ರಮಿಸುತ್ತಿದ್ದೆವು.ಮದುವೆ ಅಡುಗೆಗೆ ಕಾಡಿನಿಂದ ಎತ್ತಿನಗಾಡಿಯಲ್ಲಿ ಸೌದೆ ತರುವುದು, ಅಕ್ಕಿ, ದವಸ ಹಸನು ಮಾಡುವುದು, ಹಪ್ಪಳ ಸಂಡಿಗೆ ಮಾಡುವುದು ಚಪ್ಪರ ಹಾಕುವುದು ಊಟ ಬಡಿಸುವುದು ಮುಂತಾದ ಕೆಲಸಗಳನ್ನು ಹಂಚಿಕೊಂಡು ಮಾಡಿ ಸಂತಸ ಪಡುತ್ತಿದ್ದೆವು.
ಆಗ ತಾನೆ ಬಂದ ಟೇಪ್ ರೆಕಾರ್ಡರ್ ನ್ನು ನಮ್ಮ ದೊಡ್ಡಮ್ಮನ ಮಗ ಹೊರಕೇರಣ್ಣ ತಂದಿದ್ದರು. ಕರೆಂಟ್ ಇಲ್ಲದಿದ್ದರೂ ಸೆಲ್ ಹಾಕಿಕೊಂಡು ಒಂದಾಗಿ ಬಾಳು ಚಿತ್ರದ ಬಳೆಗಳು ಹಾಡುತಿವೆ...ಘಲ್ ಘಲ್ ಎನ್ನುತಿವೆ...ಎಂಬ ಹಾಡನ್ನು ತಿರುಗಿ ತಿರುಗಿಸಿ ಕೇಳಿ ಪುಳಕಗೊಂಡಿದ್ದೆ.
ಸಿನಿಮಾ ನೋಡಲು ಹೊರಕೇದೇಪುರ ಟೆಂಟ್ ಗೆ ನಮ್ಮೂರಿಂದ ಏಳು ಕಿಲೋಮೀಟರ್ ನಮ್ಮ ಗೆಳೆಯರ ಜೊತೆಯಲ್ಲಿ ನಡೆದುಕೊಂಡೇ ಹೋಗುತ್ತಿದ್ದೆವು. ಟೆಂಟ್ ನಲ್ಲಿ ಬೆಂಚ್ ಮತ್ತು ನೆಲದ ಮೇಲೆ ಕುಳಿತು ಸಿನಿಮಾ ನೋಡುವ ಅವಕಾಶದಲ್ಲಿ ನಾವು ನೆಲವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಪಸ್ಟ್ ಶೋ ಸಿನಿಮಾ ಬಿಟ್ಟ ಮೇಲೆ 50 ಪೈಸೆ ಕೊಟ್ಟು ಕಾರ ಮಂಡಕ್ಕಿ ಮೆಣಸಿನ ಕಾಯಿ ಬೊಂಡ ತಿಂದು ಕತ್ತಲಲ್ಲಿ ಮತ್ತೆ ಏಳು ಕಿಲೋಮೀಟರ್ ನಡೆದೇ ಮನೆ ಸೇರುತ್ತಿದ್ದೆವು.
ಇನ್ನೂ ಇಂತಹ ಸಾವಿರ ನೆನಪುಗಳಿವೆ ಮುಂದೆ ಹಂಚಿಕೊಂಡು ಸಂತಸಪಡುವೆ.ನಿಮಗೂ ಇಂತಹ ನೆನಪುಗಳು ಮರುಕಳಿಸುತ್ತಿರಬಹುದಲ್ಲವೆ?
ಸಿಹಿಜೀವಿ ವೆಂಕಟೇಶ್ವರ
ಚೌಡಗೊಂಡನಹಳ್ಳಿ
9900925529
23 October 2023
ಕ್ರಿಕೆಟ್ ಹನಿಗಳು...
ಕ್ರಿಕೆಟ್ ಹನಿಗಳು ...
೧
ಕರಾರುವಾಕ್ ಚೆಂಡೆಸತದಿಂದ
ನ್ಯೂಜಿಲೆಂಡ್ ದಾಂಡಿಗರ
ಬೆವರಿಳಿಸಿದರು ನಮ್ಮ ಶಮಿ|
ಒಂದು ದಿನ ಮೊದಲೇ ಭಾರತೀಯರು ಹೆಮ್ಮೆಯಿಂದ
ಅಚರಿಸಿದೆವು ವಿಜಯದಶಮಿ ||
೨
ಐದು ಓಟಗಳ ಕೊರತೆಯಿಂದ
ವಿರಾಟ್ ಗೆ ದೇವರ ದಾಖಲೆ
ಮುರಿಯುವ ಅವಕಾಶ ಮಿಸ್ಸಾಯ್ತು|
ಬೇಸರವಿಲ್ಲ.ದಾಖಲೆಯಾಗಲಿದೆ.
ಈಗ ಭಾರತವು ಅಂಕ ಪಟ್ಟಿಯಲ್ಲಿ
ಮೊದಲ ಸ್ಥಾನ ಪಡೆದಾಯ್ತು||
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
22 October 2023
ಬಿಲ್ಗವನ .
*ಅಂಬೆ*
(ಬಿಲ್ಗವನ)
ಓಂ
ದೇವಿ
ನಮನ
ನಿನ್ನಡಿಗೆ
ಹರಸೆಮ್ಮನು
ಕರುಣದಿಂದಲಿ
ಭಜಿಸುವೆವು ನಿನ್ನ
ಸಹಸ್ರ ನಾಮದಿಂದಲಿ
ಮನ್ನಿಸೆಮ್ಮ ತಪ್ಪನು
ಸದ್ಬುದ್ದಿಯ ನೀಡು
ಒಳಿತು ಮಾಡಿಸು
ಸ್ವಾರ್ಥ ಬಿಡಿಸು
ಕೈಹಿಡಿದು
ಕಾಪಾಡು
ಅಂಬೆ
ನೀ
*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
19 October 2023
ಅಂಡಮಾನ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣ....
ಭಾಗ 7
ವೀರ ಸಾವರ್ಕರ್ ವಿಮಾನ ನಿಲ್ದಾಣ...
ಅಂದು ಬೆಳಿಗ್ಗೆ ನನ್ನ ಜೀವನದ ಎರಡನೇ ವಿಮಾನ ಯಾನಕ್ಕೆ ಸಿದ್ದತೆ ಮಾಡಿಕೊಂಡು ಬೆಳಿಗ್ಗೆ ಏಳಕ್ಕೆ ನಿಲ್ದಾಣ ಪ್ರವೇಶಿಸಿ , ಬೋರ್ಡಿಂಗ್ ಪಾಸ್ ತೆಗೆದುಕೊಂಡು ನಮ್ಮ ಲಗೇಜ್ ಗಳನ್ನು ಲಗೇಜ್ ಕೌಂಟರ್ ನಲ್ಲಿ ನೀಡಿ ಚೆಕ್ ಇನ್ ಆಗಿ ಇನ್ನೂ ಸಮಯ ಇದ್ದದ್ದರಿಂದ ನಿಲ್ದಾಣದ ಪುಸ್ತಕದ ಅಂಗಡಿ, ಕಾಫಿ ಶಾಪ್, ಇತ್ಯಾದಿ ನೋಡಲು ಒಂದು ರೌಂಡ್ ಹಾಕಿದೆ.
ಚೆನ್ನೈ ನ ಅಣ್ಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8 .10 ಕ್ಕೆ ಹೊರಟ ನಾವು ವಿಮಾನದಲ್ಲಿ ಎರ್ ಇಂಡಿಯಾ ದವರು ನೀಡಿದ ಬೆಳಗಿನ ಉಪಹಾರ ಸೇವಿಸಿದೆವು. ಉಪ್ಪಿಟ್ಟು ,ಇಡ್ಲಿ, ಚಟ್ನಿ, ಸಾಂಬಾರ್, ಬನ್, ಬೆಣ್ಣೆ ಎಲ್ಲಾ ರುಚಿಕರವಾಗಿತ್ತು. ವಿಮಾನದಲ್ಲಿ ಅಂಡಮಾನ್ ನ ಟ್ರಾವೆಲ್ ಏಜೆಂಟ್ ಆದ ತಿರುಪತಿ ರವರ ಪರಿಚಯವಾಯಿತು. ಇಂಗ್ಲಿಷ್ ನಲ್ಲಿ ನಮ್ಮ ಸಂಭಾಷಣೆ ಸಾಗಿತ್ತು, ಅವರ ವೃತ್ತಿ, ಪ್ರವಾಸ, ಅಂಡಮಾನ್ ವಿಶೇಷತೆ ,ಕೃಷಿ ರಾಷ್ಟ್ರದ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ಮುಂದುವರೆಯಿತು. ಅಂಡಮಾನ್ ನಲ್ಲಿ ಸಹಾಯ ಬೇಕಾದರೆ ಕರೆ ಮಾಡಲು ಪೋನ್ ನಂಬರ್ ಸಹ ನೀಡಿದರು.
2 ಗಂಟೆಗಳ ವಿಮಾನ ಯಾನದ ಬಳಿಕ ವಿಮಾನ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ವಿಮಾನ ಇಳಿಯುವಾಗ 65 ವರ್ಷಗಳ ನನ್ನ ಸಹಯಾನಿ "ಎಲ್ಲಾ ಸರಿ ಈ ಏರ್ ಇಂಡಿಯಾ ದವರು ಗಗನ ಸಖಿ ಯವರ ಬದಲಾಗಿ ಗಗನ ಸಖರನ್ನು ಕಳಿಸಿದ್ದು ಯಾಕೋ ನನಗೆ ಇಷ್ಟ ಆಗಲಿಲ್ಲ " ಎಂದು ಗೊನಗಿದರು!
ವಿಮಾನ ಇಳಿದು ಟರ್ಮಿನಲ್ ತಲುಪುವಾಗ ಆ ವಿಮಾನ ನಿಲ್ದಾಣದ ಬಗ್ಗೆ ತಿರುಪತಿ ರವರು ಮಾಹಿತಿ ನೀಡಿದರು.
ಪೋರ್ಟ್ ಬ್ಲೇರ್ನ ದಕ್ಷಿಣಕ್ಕೆ 2 ಕಿಮೀ ದೂರದಲ್ಲಿರುವ ನಿಲ್ದಾಣವೇ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲು ಇದು ದೇಶೀಯ ವಿಮಾನ ನಿಲ್ದಾಣವಾಗಿದ್ದು "ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣ" ಎಂದು ಕರೆಯಲ್ಪಡುತ್ತಿತ್ತು. ಇದನ್ನು 2002 ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 11 ವರ್ಷಗಳ ಕಾಲ ನಗರದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಲಾಗಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಲಾಯಿತು.
ಹಳೆಯ ಟರ್ಮಿನಲ್ 400 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಇದು 6,100 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಏರೋಬ್ರಿಡ್ಜ್‌ಗಳಿಲ್ಲದ ಎರಡು ಗೇಟ್‌ಗಳನ್ನು ಹೊಂದಿದೆ . ಟರ್ಮಿನಲ್‌ನಿಂದ ಏಪ್ರನ್‌ನಲ್ಲಿ ನಿಲುಗಡೆ ಮಾಡಿರುವ ವಿಮಾನಕ್ಕೆ ಸಾರಿಗೆಯನ್ನು ಒದಗಿಸಲು ಬಸ್‌ಗಳನ್ನು ಬಳಸಲಾಗುತ್ತದೆ.
ಎಡಭಾಗದಲ್ಲಿ ಹಳೆಯ ಟರ್ಮಿನಲ್ ಜೊತೆಗೆ ಟರ್ಮಿನಲ್ 2 ನಿರ್ಮಾಣ ಮಾಡಲಾಗಿದೆ.
ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ 40,837 ಚ.ಮೀ. ವ್ಯಾಪ್ತಿಯಲ್ಲಿ 707 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಯಾಣಿಕರ ಟರ್ಮಿನಲ್ 2019 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿತು. ಇದು ಮೂರು ಮಹಡಿಗಳನ್ನು ಹೊಂದಿದೆ-ಒಂದು ಆಗಮನಕ್ಕೆ, ಎರಡನೆಯದು ನಿರ್ಗಮನಕ್ಕೆ ಮತ್ತು ಮೂರನೆಯದು ಕಾಯಲು. ಟರ್ಮಿನಲ್ ಒಳಗೆ, 28 ಚೆಕ್-ಇನ್ ಕೌಂಟರ್‌ಗಳು, ನಾಲ್ಕು ಕನ್ವೇಯರ್ ಬೆಲ್ಟ್‌ಗಳು ಮತ್ತು ಮೂರು ಏರೋಬ್ರಿಡ್ಜ್‌ಗಳಿವೆ. ಇದು ಪೀಕ್ ಅವರ್‌ಗಳಲ್ಲಿ 1,200 ಪ್ರಯಾಣಿಕರನ್ನು ,600 ದೇಶೀಯ ಮತ್ತು 600 ಅಂತರರಾಷ್ಟ್ರೀಯ ನಿಭಾಯಿಸಲು ಸಾಧ್ಯವಾಗುತ್ತದೆ ಮತ್ತು ವರ್ಷಕ್ಕೆ 5 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಇದು ಜೂನ್ 2023 ರಲ್ಲಿ ಪೂರ್ಣಗೊಂಡಿತು ಮತ್ತು 18 ಜುಲೈ 2023 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.
ಉದ್ಘಾಟನೆಯಾದ ಮೂರು ತಿಂಗಳ ಬಳಿಕ ನೋಡಿದ ಈ ನಿಲ್ದಾಣದ ವಿನ್ಯಾಸ ಮತ್ತು ನೋಟ ನಯನ ಮನೋಹರವಾಗಿದೆ. ಪೋಟೋ ತೆಗೆದುಕೊಳ್ಳಲು ಮನಸ್ಸಾದರೂ ಭದ್ರತಾ ಕಾರಣದಿಂದ ಅಧಿಕಾರಿಗಳ ಕಟ್ಟು ನಿಟ್ಟಿನ ನಿರಾಕರಣೆಯಿಂದ ಅವರ ಅಪ್ಪಣೆ ಪಡೆದು ಕೆಲ ಪೋಟೋ ತೆಗೆದುಕೊಂಡು ಹೊರಬಂದ ನಮ್ಮನ್ನು ಸಾವರ್ಕರ್ ರವರ ಕಂಚಿನ ಪುತ್ಥಳಿ ಸ್ವಾಗತಿಸಿತು ಅದರ ಮುಂದೆ ನಿಂತು ಪೋಟೋ ಕ್ಲಕ್ಕಿಸಿಕೊಂಡ ನಮ್ಮನ್ನು ನಮ್ಮ ಟ್ರಾವೆಲ್ ಏಜೆನ್ಸಿಯ ಪ್ರಕಾಶ್ ರವರು ಸ್ವಾಗತಿಸಿ ಎನ್ ಕೆ ಲಾಡ್ಜ್ ಗೆ ಕರೆದುಕೊಂಡುಹೋದರು...
ಮುಂದುವರೆಯುತ್ತದೆ...
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
18 October 2023
10 October 2023
ನೇತಾಜಿ ಐಲ್ಯಾಂಡ್
ಜನವಸತಿ ರಹಿತ ನೇತಾಜಿ ಸುಭಾಷ್ ಚಂದ್ರ ಬೋಸ್ ಐಲ್ಯಾಂಡ್.
ಈಗ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಹೊಂದಿರುವ ದ್ವೀಪಕ್ಕೆ ಸಮಾನ ಮನಸ್ಕರ ತಂಡದೊಂದಿಗೆ ಅಂಡಮಾನ್ ನ ಸೆಲ್ಯುಲಾರ್ ಜೈಲ್ ನೋಡಿದ ಮರು ದಿನ ಭೇಟಿ ನೀಡಿದೆವು.ಪೋರ್ಟ್ ಬ್ಲೇರ್ ನಿಂದ ಮಹೇಶ್ವರಿ ಎಂಬ ಕ್ರೂಸರ್ ನಲ್ಲಿ ನಮ್ಮ ತಂಡದೊಂದಿಗೆ ನೇತಾಜಿ ದ್ವೀಪದೆಡೆಗೆ ಪಯಣ ಬೆಳೆಸಿದೆವು.ನಮ್ಮ ಟೂರ್ ಗೈಡ್ ಈ ದ್ವೀಪದ ವಿಶೇಷತೆಗಳು ಮತ್ತು ಇತಿಹಾಸದ ಬಗ್ಗೆ ಹೇಳುತ್ತಾ ಹೋದ ನಮ್ಮ ಕಿವಿಗಳು ಅವನ ಮಾಹಿತಿಯನ್ನು ಕೇಳುತ್ತಾ ಕಣ್ಣುಗಳು ನಿಸರ್ಗ ಸೌಂದರ್ಯ ಸವಿಯುತ್ತಿದ್ದವು .ಆಗಾಗ್ಗೆ ನಮ್ಮ ಮೊಬೈಲ್ ನಲ್ಲಿ ಅದ್ಬುತ ಪ್ರಕೃತಿ ಸೌಂದರ್ಯ ಸೆರೆಯಾಗುತ್ತಿತ್ತು.
ಮೊದಲು ರಾಸ್ ಐಲ್ಯಾಂಡ್ ಎಂದು ಕರೆಯಲಾಗುತ್ತಿದ್ದ ಇದು ಅಂಡಮಾನ್ ದ್ವೀಪಸಮೂಹದಲ್ಲಿರುವ ಒಂದು ದ್ವೀಪವಾಗಿದೆ. ಇದು ದಕ್ಷಿಣ ಅಂಡಮಾನ್ ಆಡಳಿತ ಜಿಲ್ಲೆ , ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸೇರಿದೆ. ಈ ದ್ವೀಪವು ಕೇಂದ್ರ ಪೋರ್ಟ್ ಬ್ಲೇರ್ನಿಂದ ಪೂರ್ವಕ್ಕೆ 3 ಕಿಮೀ ದೂರದಲ್ಲಿದೆ.ಇದು ಐತಿಹಾಸಿಕ ಅವಶೇಷಗಳನ್ನು ಒಳಗೊಂಡ ಪ್ರವಾಸಿ ಆಕರ್ಷಣೆಯಾಗಿದೆ.
ರಾಸ್ ದ್ವೀಪಕ್ಕೆ ಸಮುದ್ರ ಸಮೀಕ್ಷಕ ಡೇನಿಯಲ್ ರಾಸ್ ಹೆಸರಿಡಲಾಗಿತ್ತು. ಡಿಸೆಂಬರ್ 2018 ರಲ್ಲಿ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವಾರ್ಥವಾಗಿ ಇದನ್ನು ನೇತಾಜಿ ಸುಭಾಸ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.
ಈ ದ್ವೀಪವನ್ನು ಪ್ರವಾಸಿಗರು ಕಾಲ್ನಡಿಗೆಯಲ್ಲಿ ಸಾಗುತ್ತಾ ಅಲ್ಲಲ್ಲಿ ಸಿಗುವ ಜಿಂಕೆ ಮತ್ತು ನವಿಲುಗಳ ನೋಡುತ್ತಾ ಆನಂದಿಸಬಹುದು. ವೃದ್ಧರು ಮತ್ತು ಮಕ್ಕಳಿಗೆ ಎಲೆಕ್ಟ್ರಿಕ್ ಕಾರ್ ವ್ಯವಸ್ಥೆ ಇದೆ. ಒಬ್ಬರಿಗೆ 80 ರೂಪಾಯಿಗಳನ್ನು ಪಾವತಿಸಿ ಈ ಸೌಲಭ್ಯ ಪಡೆಯಬಹುದು.
ಬಜಾರ್, ಬೇಕರಿ, ಅಂಗಡಿಗಳ ಅವಶೇಷಗಳು,ನೀರಿನ ಸಂಸ್ಕರಣಾ ಘಟಕ , ಚರ್ಚ್ , ಟೆನ್ನಿಸ್ ಕೋರ್ಟ್ , ಪ್ರಿಂಟಿಂಗ್ ಪ್ರೆಸ್ , ಸೆಕ್ರೆಟರಿಯೇಟ್, ಆಸ್ಪತ್ರೆ , ಸ್ಮಶಾನ , ಈಜುಕೊಳ , ಬೃಹತ್ ಉದ್ಯಾನಗಳು ಮತ್ತು ಮುಖ್ಯ ಆಯುಕ್ತರ ನಿವಾಸ , ಸರ್ಕಾರಿ ಭವನ , ಹಳೆಯ ಅಂಡಮಾನೀಸ್ ಹೋಮ್, ಟ್ರೂಪ್ ಬ್ಯಾರಕ್ಗಳು , ಎಲ್ಲಾ ಶಿಥಿಲಾವಸ್ಥೆಯಲ್ಲಿದ್ದು, ಹಳೆಯ ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತದೆ.
1880 ರ ದಶಕದ ಉತ್ತರಾರ್ಧದಲ್ಲಿ ರಾಸ್ ಐಲ್ಯಾಂಡ್ ಲಿಟರರಿ ಎಂಬ ಸಣ್ಣ ನಿಯತಕಾಲಿಕವನ್ನು ಆರಂಭಿಸಿದ. ಈ ಪ್ರದೇಶದ ಮೊದಲ ವಸಾಹತುಶಾಹಿ ದಿನಗಳ ಕಥೆಗಳು ಮತ್ತು ಆತ್ಮಚರಿತ್ರೆಗಳನ್ನು ಒಳಗೊಂಡ ಪ್ರಕಟಣೆ ಮಾಡಲಾಗುತ್ತಿತ್ತು. ಇವು ಇದೇ ದ್ವೀಪದ ಉತ್ತರದ ತುದಿಯಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಪ್ರಿಂಟ್ ಆಗುತ್ತಿದ್ದವು.ಇಂದು ಅದರ ಶಿಥಿಲವಾದ ಕಟ್ಟಡ ನೋಡಬಹುದು.
ದ್ವೀಪದ ಉತ್ತರದ ತುದಿಯವರೆಗೆ ಒಂದು ಮಾರ್ಗವಿದೆ, ಅಲ್ಲಿ ಹೊಸ ಕಾಂಕ್ರೀಟ್ 10 ಮೀ ಎತ್ತರದ ವೃತ್ತಾಕಾರದ ಲೈಟ್ಹೌಸ್ ಟವರ್ ಅನ್ನು 1977 ರಲ್ಲಿ ನಿರ್ಮಿಸಲಾಗಿದೆ. ತೀರದ ಕಡೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಬಂಡೆಯ ಮೇಲೆ. ಕಡಿಮೆ ಅಲೆಗಳಿರುವ ಸಂದರ್ಭದಲ್ಲಿ ಗೋಪುರವನ್ನು ತಲುಪಬಹುದು. ನಾವು ಹೋದಾಗ ಕಡಿಮೆ ಅಲೆಗಳಿದ್ದ ಪರಿಣಾಮ ಲೈಟ್ ಹೌಸ್ ತಲುಪಿ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡೆವು. ಈ ಲೈಟ್ಹೌಸ್ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಫೋಟೋ ವೋಲ್ಟಾಯಿಕ್ ಪ್ಯಾನೆಲ್ಗಳನ್ನು ಪರಿಚಯಿಸಲಾಗಿದೆ ಎಂಬ ಮಾಹಿತಿಯನ್ನು ಗೈಡ್ ನೀಡಿದನು.
ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪವು ದಟ್ಟವಾದ ಕಾಡುಗಳನ್ನು ಹೊಂದಿದೆ. ಪ್ರವಾಸಿಗರ ಹೊರತಾಗಿ ಜನವಸತಿಗೆ ಇಲ್ಲಿ ಅವಕಾಶ ಕೊಟ್ಟಿಲ್ಲ.
ದ್ವೀಪದ ಅದ್ಭುತ ಪ್ರಕೃತಿ ಸೌಂದರ್ಯ ಸವಿಯಲು,ಮಚ್ಚೆಯುಳ್ಳ ಜಿಂಕೆಗಳು ಮತ್ತು ನವಿಲುಗಳನ್ನು ನೋಡಲು ತಾಳೆ ಮತ್ತು ತೆಂಗಿನ ಮರಗಳ ಸೊಬಗು ಸವಿಯಲು ನೀವೂ ಒಮ್ಮೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪಕ್ಕೆ ಬಂದು ಬಿಡಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
ಅಂಡಮಾನ್.ಬಗ್ಗೆ ಒಂದು ಪರಿಚಯ...
ಭಾಗ ೫ ಅಂಡಮಾನ್.. ಒಂದು ಪರಿಚಯ..
ಅಂಡಮಾನ್ ದ್ವೀಪಗಳು ಬಂಗಾಳ ಕೊಲ್ಲಿಯಲ್ಲಿರುವ ಭಾರತದ ಆಧೀನಕ್ಕೆ ಒಳಪಟ್ಟ ದ್ವೀಪ ಸಮೂಹ. ಈ ಸಮೂಹದಲ್ಲಿರುವ ಹೆಚ್ಚಿನ ದ್ವೀಪಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹ ಎಂಬ ಹೆಸರಿನಲ್ಲಿ ಕೇಂದ್ರಾಧೀನ ಪ್ರದೇಶವಾಗಿ ಭಾರತಕ್ಕೆ ಸೇರಿದ್ದರೂ ಕೆಲವು ಸಣ್ಣ ದ್ವೀಪಗಳು ಮ್ಯಾನ್ಮಾರ್ ದೇಶಕ್ಕೆ ಸೇರಿವೆ.
ಪುರಾತತ್ವ ಶಾಸ್ತ್ರದ ಅನುಸಾರ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಜನವಸತಿ ಸಾವಿರಾರು ವರ್ಷಗಳಿಂದಲೂ ಕಂಡುಬರುತ್ತದೆ.ಮಧ್ಯ ಶಿಲಾಯುಗದಿಂದ ದೇಶೀಯ ಅಂಡಮಾನ್ ಜನಾಂಗ 18ನೆಯ ಶತಮಾನದವರೆಗೆ ಅಲ್ಲಲ್ಲಿ ಚದುರಿದಂತೆ ಬದುಕಿದ್ದರು.ಪ್ರಸಿದ್ಧ ಭೂಗೋಳ ಶಾಸ್ತ್ರಜ್ಞ ಟಾಲೆಮಿ ಈ ದ್ವೀಪ ಸಮೂಹಗಳ ಅರಿತಿದ್ದು ತನ್ನ ಬರಹಗಳಲ್ಲಿ ಬೇರೊಂದು ಹೆಸರಿನಲ್ಲಿ ಉಲ್ಲೇಖಿಸಿದ್ದಾನೆ.20ನೆಯ ಶತಮಾನದ ಪರ್ಷಿಯನ್ ನಾವಿಕ ಬುಜುರ್ಗ್ ಇಬಿನ್ ಶೆಹ್ರಿಯಾರ್ ತನ್ನ ಪ್ರವಾಸ ಕಥನ ಐಜಾಬ್ ಅಲ್ ಹಿಂದ್ ಅಂದರೆ ಭಾರತದ ಅದ್ಭುತಗಳು ಎಂಬ ಪುಸ್ತ್ರಕದಲ್ಲಿ ಈ ದ್ವೀಪ ಸಮೂಹಗಳಿಗೆ ಅಂಡಮಾನ್ ಎಂದೇ ಉಲ್ಲೇಖಿಸಿ ಇಲ್ಲಿ ನರಭಕ್ಷಕ ಜನಾಂಗದವರು ವಾಸಿಸುತ್ತಿದ್ದಾರೆ ಎಂದು ಬರೆದಿದ್ದಾನೆ.ಸಾ ಶ . 8೦೦ ರಿಂದ 1200ರ ವರೆಗೆ ತಮಿಳು ಚೋಳರು ತಮ್ಮ ಸಾಮ್ರಾಜ್ಯವನ್ನು ಸಮುದ್ರಾಚೆಗೆ ಈಗಿನ ಮಲೇಷ್ಯಾದವರೆಗೆ ವಿಸ್ತರಿಸಿದರು. ರಾಜೇಂದ್ರ ಚೋಳ ಈ ದ್ವೀಪ ಸಮೂಹಗಳನ್ನು ಸುಮಾತ್ರದ ಶ್ರೀವಿಜಯ ಸಾಮ್ರಾಜ್ಯದ ಮೇಲೆ ದಂಡೆತ್ತಲು ಆಯಕಟ್ಟಿನ ನೌಕಾನೆಲೆಗಳನ್ನಾಗಿ ಮಾಡಿಕೊಂಡಿದ್ದನು.1798ರಲ್ಲಿ ಬ್ರಿಟಿಷರು ಇಲ್ಲಿ ತಮ್ಮ ನೌಕಾ ನೆಲೆ ಮತ್ತು ಕೈದಿಗಳಿಗಾಗಿ ವಸಾಹತನ್ನು ಸ್ಥಾಪಿಸಿದರು.1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೆರೆಸಿಕ್ಕ ಕೈದಿಗಳನ್ನು ಬಂಧಿಸಲು ಪೋರ್ಟ್ ಬ್ಲೇರ್ ನಲ್ಲಿ ಬ್ರಿಟಿಷರು ದೊಡ್ಡ ಬಂಧೀಖಾನೆಯನ್ನು ನಿರ್ಮಿಸಿದರು.ಎರಡನೆಯ ಮಹಾಯುದ್ಧ ದಲ್ಲಿ ಈ ದ್ವೀಪ ಸಮೂಹಗಳು ಜಪಾನ್ ದೇಶದ ಸೇನೆಯ ವಶವಾಯಿತು. ಇಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ನೇತೃತ್ವದಲ್ಲಿ ಸ್ವತಂತ್ರ ನಮ್ಮ ತ್ರಿವರ್ಣ ಧ್ವಜ ಹಾರಿಸಿ ಭಾರತದ ಮೊದಲ ಸರಕಾರವನ್ನು ರಚಿಸಲಾಯಿತು.
ಬೌಗೋಳಿಕ ಲಕ್ಷಣಗಳು
ಉತ್ತರ ದಕ್ಷಿಣವಾಗಿ ಹಬ್ಬಿದ 300ರಿಂದ 700 ಮೀಟರ್ ಎತ್ತರದ ಬೆಟ್ಟಗಳು ಮತ್ತು ಅದರಿಂದಾದ ಕಣಿವೆಗಳು ಇಲ್ಲಿಯ ಮೇಲ್ಮೈ ಲಕ್ಷಣ.ಕರಾವಳಿಯಲ್ಲಿ ಅನೇಕ ಕೊಲ್ಲಿಗಳಿವೆ.ನದಿಗಳೆಲ್ಲವೂ ಸಣ್ಣವು.ಸಾಗರಿಕ ಉಷ್ಣವಲಯದ ಹವಾಮಾನ ಇಲ್ಲಿಯದು.ನಿತ್ಯಹರಿದ್ವರ್ಣದ ಕಾಡು ಗಳು, ಮ್ಯಾನ್‍ಗ್ರೋವ್ ಸಸ್ಯಗಳು ಇಲ್ಲಿಯ ಸಸ್ಯ ವೈವಿಧ್ಯಗಳು.ಇಲ್ಲಿ ನಾಟಾ ಮಾಡಬಹುದಾದ ಸುಮಾರು 200ಕ್ಕೂ ಹೆಚ್ಚಿನ ಸಸ್ಯ ಪ್ರಭೇದಗಳು ಕಂಡು ಬರುತ್ತವೆ.ವಾಣಿಜ್ಯಿಕ ಬಳಕೆಯಲ್ಲಿರುವ ಪ್ರಭೇದಗಳಲ್ಲಿ ಗರ್ಜನ್, ಪಡೋಕ್ ಮುಖ್ಯವಾದರೆ ಇತರೆ ಮರಗಳಲ್ಲಿ ರುದ್ರಾಕ್ಷ, ಧೂಪ ಮರ ಗಳು ಹೆಚ್ಚಿನ ಸಂಖ್ಯೆಯಲ್ಲಿವೆ.
2011 ಜನಗಣತಿಯಂತೆ ಇಲ್ಲಿಯ ಜನಸಂಖ್ಯೆ 3,43,125. ಈ ಜನಸಂಖ್ಯೆಯಲ್ಲಿ ಇಲ್ಲಿಯ ಮೂಲವಾಸಿಗಳಾದ ಅಂಡಮಾನೀ ಅದಿವಾಸಿಗಳ ಸಂಖ್ಯೆ ಅತ್ಯಲ್ಪ..ಇದು ಐದು ಮುಖ್ಯ ಪಂಗಡಗಳಾದ ಗ್ರೇಟ್ ಅಂಡಮಾನೀಸ್, ಜರವಾ,ಜಂಗಿಲ್,ಒಂಗೇಸ್ ಮತ್ತು ಸೆಂಟನಲೀಸ್ ಗಳಲ್ಲಿ ಹರಡಿಕೊಂಡಿದೆ.ಹಲವಾರು ಜನಾಂಗಗಳು ನಶಿಸಿ ಹೋಗಿವೆ.ಇವುಗಳು ಪ್ರಪಂಚದ ಪ್ರಾಚೀನ ಜನಾಂಗಗಳಿಗೆ ಸೇರಿದವರು.
08 October 2023
ಸೆಲ್ಯುಲಾರ್ ಜೈಲ್...ಅಂಡಮಾನ್..
06 October 2023
ಸಿಹಿಜೀವಿ ಕಂಡ ಅಂಡಮಾನ್ ಭಾಗ ೨
ಭಾಗ ೨
ಕೆಂಪೇಗೌಡ ಏರ್ಪೋರ್ಟ್ ನಲ್ಲಿ..
ತುಮಕೂರಿನಿಂದ ಬಸ್ ನ ಮೂಲಕ ಹೊರಟ ನಾವು ದೇವನಹಳ್ಳಿ ತಲುಪಿದಾಗ ಕೆಂಪೇಗೌಡರ ಬೃಹತ್ ಕಂಚಿನ ವಿಗ್ರಹ ನಮ್ಮ ಎಡಭಾಗದಲ್ಲಿ ಗೋಚರಿಸಿತು.ಅದರ ಮುಂದೆ ಸಾಗಿದಾಗ ಸಿಕ್ಕಿದ್ದೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನಾವು ಅಂಡಮಾನ್ ತಲುಪಲು ಬೆಂಗಳೂರಿನಿಂದ ಚೆನ್ನೈ ಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಪೋರ್ಟ್ ಬ್ಲೇರ್ ಗೆ ಪಯಣ ಮಾಡಲು ಟಿಕೆಟ್ ಬುಕ್ ಆಗಿತ್ತು.
ಬೋರ್ಡಿಂಗ್ ಪಾಸ್ ಪಡೆದು ಚೆಕ್ ಇನ್ ಆಗಲು ತೆರಳಿದ ನಮ್ಮ ಪ್ರವಾಸಿ ತಂಡಕ್ಕೆ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಡಿಜಿ ಯಾತ್ರಾ ಎಂಬ ಉಪಕ್ರಮದ ಮೂಲಕ ಸುಲಭವಾಗಿ ಚೆಕ್ ಇನ್ ಆಗಲು ಸಹಾಯ ಮಾಡಿದರು. ಲಗೇಜ್ ಕೌಂಟರ್ ನಲ್ಲಿ ನಮ್ಮ ಲಗೇಜ್ ನೀಡಿ ವಿಮಾನ ಏರಲು 12 ನೇ ಕೌಂಟರ್ ನಲ್ಲಿ ಚೆಕ್ ಇನ್ ಆಗಿ ನಮ್ಮ ವಿಮಾನದತ್ತ ತರಳಿದೆವು. ಆಗ ನಮ್ಮ ಕಣ್ಣಿಗೆ ಕೆಂಪೇಗೌಡ ವಿಮಾನ ನಿಲ್ದಾಣದ ಕೆಲ ಸಂಗತಿಗಳು ಅಚ್ಚರಿ ಮತ್ತು ಹೆಮ್ಮೆ ಮೂಡಿಸಿದವು.
ಈ ನಿಲ್ದಾಣವು 4700 ಎಕರೆಗಳಷ್ಟು ವಿಸ್ತಾರ ಹೊಂದಿದೆ. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು 4೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ 2005ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ 23, 2008ರಂದು ತನ್ನ ಕಾರ್ಯಾರಂಭ ಮಾಡಿತು. ಇತ್ತೀಚಿಗೆ ಟರ್ಮಿನಲ್ 2 ನಿರ್ಮಾಣವಾಗಿದೆ ಹಾಗೂ ಅದೀಗ ಕಾರ್ಯಾಚರಣೆಯಲ್ಲಿದೆ. ಇದು ಪ್ರಯಾಣಿಕರ ದಟ್ಟಣೆಯ ಆಧಾರದ ಮೇಲೆ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಮನ್ನಣೆ ಪಡೆದಿದೆ.ಹಾಗೂ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್‍ಗಳು ಪ್ರತಿ 15 ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಯಾವ ಮೂಲೆಯಿಂದಲಾದರೂ ಹೊರಟು ವಿಮಾನ ನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಗಮನಾರ್ಹವಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ 'ಬಿ ಐ ಎ ಎಲ್ ಸಹಾಯವಾಣಿ' ಯ ಸೌಲಭ್ಯವಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗ, ಸಾರಿಗೆ ಸೌಲಭ್ಯಗಳ ವಿವರಗಳು, ಮತ್ತು ಸಾಮಾನ್ಯ ಮಾಹಿತಿಗಳನ್ನು ದೂರವಾಣಿಯ ಮೂಲಕ ಕೂಡಲೆ ಪಡೆಯ ಬಹುದು. ವಿಮಾನವೇರುವ ಮೊದಲು ನಡೆಸುವ 'ಭದ್ರತಾ ತಪಾಸಣೆಯ ವಿಧಿ' ಯಲ್ಲಿ ಪ್ರಯಾಣಿಕರು 'ಹಲವು ಕ್ಯೂ' ಗಳಲ್ಲಿ ಕಾದು ಮುಂದುವರೆಯುವ ಬದಲು, 'ಒಂದೇ ಹಂತದ ತಪಾಸಣಾ ವ್ಯವಸ್ಥೆ 'ಯನ್ನು ನಿರೂಪಿಸಲಾಗಿದೆ. 53 'ಚೆಕ್-ಇನ್ ಕೌಂಟರ್' ಗಳು, ಹಾಗೂ 18 'ಸ್ವಯಂ ತಪಾಸಣಾಯಂತ್ರ' ಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಉಪಚಾರ ಹಾಗೂ ಆರೋಗ್ಯ ಸೇವೆಗೆ ಔಷಧಾಲಯ, ಡಯಾಪರ್ ಬದಲಾವಣೆ, ಹಾಲುಕುಡಿಸುವಿಕೆ ಇತ್ಯಾದಿಗಳಿಗೆ ಪ್ರತ್ಯೇಕ ಜಾಗವಿದೆ.
ನಿಲ್ದಾಣದ ಒಳಗಡೆ ಸ್ವದೇಶಿ ಮತ್ತು ವಿದೇಶಿ ಖಾದ್ಯಗಳನ್ನು ಒಳಗೊಂಡ ಹೋಟೆಲ್ ಗಳಿವೆ. ನಮ್ಮ ಅನುಭವ ಕ್ಕಾಗಿ ಒಂದು ಕಾಫಿ ಕುಡಿದೆವು .ಕಾಫಿ ಸಾದಾರಣಾಗಿತ್ತು ಬೆಲೆ ಮಾತ್ರ ತುಸು ದುಬಾರಿ 200 ರೂಪಾಯಿಗಳು! ಎಷ್ಟೇ ಆದರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲವೇ?
ಸಿಹಿಜೀವಿ ಕಂಡ ಅಂಡಮಾನ್
ಭಾಗ ೧
ಸಿಹಿಜೀವಿ ಕಂಡ ಅಂಡಮಾನ್
ಅಂಡಮಾನ್ ನಲ್ಲಿ ಸಿಹಿಜೀವಿಯ ಸಿಹಿ ನೆನಪುಗಳು..
ಅಂಡಮಾನ್ ನಲ್ಲಿ ಸಿಹಿಜೀವಿ
ಏನಿವು ಒಂದೇ ವಾಕ್ಯವನ್ನು ಬೇರೆ ಬೇರೆ ರೀತಿಯಲ್ಲಿ ಬರೆದಿರುವಿರಲ್ಲ ಎಂಬ ನಿಮ್ಮ ಪ್ರಶ್ನೆ ಅಹಜ. ಈ ವಾಕ್ಯಗಳು ನನ್ನ ಸಹೋದ್ಯೋಗಿ ಬಂಧುಗಳು ನಾನು ಅಂಡಮಾನ್ ಪ್ರವಾಸ ಹೊರಟು ನಿಂತಾಗ ನನ್ನ ಮುಂಬರುವ ಪ್ರವಾಸ ಕುರಿತಾಗಿ ನಾನು ಪ್ರವಾಸ ಕಥನ ಬರೆಯಲೇಬೇಕೆಂದು ಆಗ್ರಹಪೂರ್ವಕವಾಗಿ ನೀಡಿದ ಆಕರ್ಷಕ ಶೀರ್ಷಿಕೆಗಳು! ನನ್ನೆಲ್ಲಾ ಸಹೋದ್ಯೋಗಿ ಬಂಧುಗಳಿಗೆ ನಮನಗಳು
ಖಂಡಿತವಾಗಿಯೂ ಅವರ ನಿರೀಕ್ಷೆ ಹುಸಿಗೊಳಿಸುವುದಿಲ್ಲ.
ನನ್ನ ವಿದ್ಯಾರ್ಥಿಗಳಿಗೆ ಭಾರತದ ಭೂಪಟ ಬರೆಯಲು ಹೇಳಿದರೆ ಅಂಡಮಾನ್ ನಿಕೋಬಾರ್ ಲಕ್ಷ್ಯ ದ್ವೀಪಗಳನ್ನು ಬರೆಯದೇ ನಕ್ಷೆ ಬಿಡಿಸುತ್ತಿದ್ದರು. ಎಷ್ಟು ಬಾರಿ ಹೇಳಿದರೂ ಆ ದ್ವೀಪಗಳನ್ನು ಬರೆಯುತ್ತಿರಲಿಲ್ಲ.ನಾನು ಪದೇ ಪದೇ ದ್ವೀಪಗಳ ಬರೆಯಲು ತಾಕೀತು ಮಾಡಿದಾಗ ಒಬ್ಬ ವಿದ್ಯಾರ್ಥಿ ಕೇಳಿಯೇ ಬಿಟ್ಟ ಸಾರ್ ನೀವು ಅಂಡಮಾನ್ ದ್ವೀಪಗಳ ನೋಡಿದ್ದೀರಾ? ಇಲ್ಲ ಎಂದೆ. ಅಂದೆ ಅಂಡಮಾನ್ ನೋಡುವ ನನ್ನ ಬಯಕೆ ಚಿಗುರೊಡೆಯಿತು.
ಮೈಸೂರಿನ ಸಿ ಟಿ ಇ ನಲ್ಲಿ ಬಿ ಎಡ್ ಓದುವಾಗ ನನ್ನ ಸಹಪಾಠಿಗಳೊಂದಿಗೆ ಪ್ರವಾಸ ಹೋದಾಗ
ನಮ್ಮ ಕರ್ನಾಟಕ ಸೇಂಟ್ ಮೇರೀಸ್ ಐಲ್ಯಾಂಡ್ ನೋಡಿ ಪುಳಕಗೊಂಡಿದ್ದೆ. ಈಗ ಮೂರು ಲಕ್ಷ ಜನಸಂಖ್ಯೆಯಿರುವ ತುಮಕೂರಿನಿಂದ ಮೂರುವರೆ ಚಿಲ್ರೆ ಲಕ್ಷ ಜನಸಂಖ್ಯೆ ಇರುವ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಹೊರಟಿರುವೆ..
ಹೆಚ್ಚಿನ ವಿವರಗಳನ್ನು ನಂತರ ನೀಡುವೆ.
05 October 2023
ವಿಶ್ವ ಕ್ರಿಕೆಟ್ ಹಬ್ಬ
ವಿಶ್ವ ಕ್ರಿಕೆಟ್ ಹಬ್ಬ
ವಿಶ್ವ ಕ್ರಿಕೆಟ್ ಹಬ್ಬ ಶುರುವಾಗಿದೆ
ಕಾದು ಕುಳಿತಿಹೆವು ಕಣ್ತುಂಬಿಕೊಳ್ಳಲು
ದಾಂಡಿಗರ, ಎಸೆತಗಾರರ ,ಕ್ಷೇತ್ರ ರಕ್ಷಕರ ಚಮತ್ಕಾರ|
ಯಾರು ಗೆದ್ದರೂ ಸಂತೋಷ
ಪ್ರತಿ ಮನೆ ಮನದಲ್ಲೂ ಮನರಂಜನೆಯ ಸಡಗರ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು.
01 October 2023
ದಿಟ್ಟ ನೀರೆ ನೀರಾ ಆರ್ಯ...
ದಿಟ್ಟ ನೀರೆ ನೀರಾ ಆರ್ಯ.
ಸ್ವಾತಂತ್ರ್ಯ ಹೋರಾಟದಲ್ಲಿ ತಾಯ್ನಾಡಿನ ಸೇವೆಗೆ ಅಡ್ಡಿಯಾದ ಗಂಡನನ್ನೇ ಕೊಂದು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಅಂಡಮಾನ್ ನ ಸೆಲ್ಯುಲಾರ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆಗೆ ಗುರಿಯಾದ ಮಹಾನ್ ಹೋರಾಟಗಾರ್ತಿ ನೀರಾ ಆರ್ಯ!
ನೀರಾ ಆರ್ಯ ಅವರು ಮಾರ್ಚ್ 5 1902 ರಂದು ಖೇಕ್ರಾ ನಗರದಲ್ಲಿ ಜನಿಸಿದರು. ಅವರ ತಂದೆ ಶ್ರೀಮಂತ ಉದ್ಯಮಿಯಾಗಿದ್ದರು. ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಕಲ್ಕತ್ತಾದಲ್ಲಿ ಮುಗಿಸಿದರು.ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದ ನೀರಾ ಸುಭಾಷ್ ಚಂದ್ರ ಬೋಸರ ಕಟ್ಟಾ ಅಭಿಮಾನಿ. ಅವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಸೇರಿ. INA ಯ ರಾಣಿ ಆಫ್ ಝಾನ್ಸಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದರು.
ನೀರಾ ಆರ್ಯ ಅವರು ಬ್ರಿಟಿಷ್ ಸಿಐಡಿ ಅಧಿಕಾರಿಯಾಗಿದ್ದ ಶ್ರೀಕಾಂತ್ ಜೈರಂಜನ್ ದಾಸ್ ಅವರನ್ನು ವಿವಾಹವಾಗಿದ್ದರು. ನೀರಾರವರು ಭಾರತೀಯ ರಾಷ್ಟ್ರೀಯ ಸೇನೆಗೆ ಸೇರಿದ್ದಾರೆ ಎಂದು ಅರಿತ ಶ್ರೀಕಾಂತ್, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ನೀರಾ ಅವರು ಹತ್ಯೆ ಮಾಡಬೇಕೆಂದು ಬಯಸಿದ್ದರು. ನೀರಾರವರು ನಿರಾಕರಿಸಿದಾಗ, ನೇತಾಜಿಯನ್ನೇ ಹತ್ಯೆ ಮಾಡಲು ನೇತಾಜಿ ಇರುವ ಸ್ಥಳವನ್ನು ಬಹಿರಂಗಪಡಿಸಬೇಕೆಂದು ಶ್ರೀಕಾಂತ್ ಬಯಸಿದ್ದರು. ವಿಫಲವಾದ ಹತ್ಯೆಯ ಪ್ರಯತ್ನದ ಸಂದರ್ಭದಲ್ಲಿ, ಶ್ರೀಕಾಂತ್ ನೇತಾಜಿ ಕಡೆಗೆ ಗುಂಡು ಹಾರಿಸಿದ್ದರು. ನೇತಾಜಿ ಗುಂಡಿನ ದಾಳಿಯಿಂದ ಬದುಕುಳಿದರು. ಆದರೆ ಅವರ ಚಾಲಕ ಕೊಲ್ಲಲ್ಪಟ್ಟರು. ಇದನ್ನು ಕೇಳಿದ ನೀರಾರವರು ಶ್ರೀಕಾಂತ್ ನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದರು.
ಶ್ರೀಕಾಂತ್‌ನನ್ನು ಕೊಂದಿದ್ದಕ್ಕಾಗಿ ನೀರಾರವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಯಾಗಿದ್ದರು ಮತ್ತು ಅಮಾನುಷವಾಗಿ ಚಿತ್ರಹಿಂಸೆ ನೀಡಲಾಯಿತು ನೇತಾಜಿ ಇರುವ ತಾಣವನ್ನು ಬಹಿರಂಗಪಡಿಸಲು ಅಧಿಕಾರಿಗಳು ನೇತಾಜಿ ಎಲ್ಲಿರುವರು ಹೇಳು ಎಂದು ಕೇಳಿದಾಗ ಮೀರಾರವರು ಬ್ರಿಟೀಷರ ಮೇಲಿನ ಸಿಟ್ಟು ಮತ್ತು ಸುಭಾಷ್ ರವರ ಮೇಲಿನ ಹೆಮ್ಮೆಯಿಂದ ನೇತಾಜಿ ನನ್ನ ಹೃದಯದಲ್ಲಿ ಇರುವರು ಎಂದಾಗ ದುರುಳ ಬ್ರಿಟಿಷ್ ಅಧಿಕಾರಿಗಳು ನಿರ್ದಯವಾಗಿ ಅವರ ಸ್ತನಗಳನ್ನು ಕತ್ತರಿಸಿದರು.
ಸ್ವಾತಂತ್ರ್ಯಾನಂತರ ನೀರಾರವರ ಬಿಡುಗಡೆಯಾಯಿತು. ತಮ್ಮ ಕೊನೆಯ ದಿನಗಳನ್ನು ಹೈದರಾಬಾದ್ ನಲ್ಲಿ ಕಳೆದರು. ಜುಲೈ 26 1998 ರಂದು ಕೊನೆಯುಸಿರೆಳೆದರು.
ನಮ್ಮ ಇಂದಿನ ಸ್ವಾತಂತ್ರ್ಯದ ಹಿಂದೆ ಇಂತಹ ಮಹಾನ್ ಹೋರಾಟಗಾರರ ತ್ಯಾಗವಿದೆ ಅಂತಹ ಮಹಾನ್ ಆತ್ಮಗಳಿಗೆ ಗೌರವಪೂರ್ವಕವಾಗಿ ನಮಿಸೋಣ...
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
ಲಾಲ್ ಬಹದ್ದೂರ್ ಶಾಸ್ತ್ರೀಜಿ..
ಲಾಲ್ ಬಹದ್ದೂರ್ ಶಾಸ್ತ್ರೀಜಿ...
ರೂಪ ವಾಮನ. ಆಡಳಿತ, ಮೌಲ್ಯಗಳು, ಮನಸ್ಸು ಚಿಂತನೆಗಳೆಲ್ಲವೂ ಮುಗಿಲೆತ್ತರ ಅವರೇ ನಮ್ಮ ಪ್ರೀತಿಯ ಶಾಸ್ತ್ರೀಜಿ.
ಇವರು ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು. ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿ ಅನ್ನದಾತ ಮತ್ತು ದೇಶರಕ್ಷಕರನ್ನು ಗೌರವಿಸಿದ ಶಾಸ್ತ್ರೀಜಿಯವರ ಗುಣ ಮನನೀಯ.
ಲಾಲ್ ಬಹಾದ್ದೂರ್ ಶಾಸ್ತ್ರೀಜಿ ರವರು 1904 ರ ಅಕ್ಟೋಬರ್ ಎರಡರಂದು ಮೊಘಲ್ ಸಾರಾಯ್ನಲ್ಲಿ ಜನಿಸಿದರು. 1921ರಲ್ಲಿ ಮಹಾತ್ಮ ಗಾಂಧಿಯವರಿಂದ ಪ್ರೇರಣೆ ಪಡೆದು ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. 1926 ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಅಂದಿನಿಂದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಆದರು. ಒಟ್ಟು 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946 ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.
ಸ್ವಾತಂತ್ರ ದೊರಕಿದ ಬಳಿಕ ಇವರು ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. 1951ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು. ರೈಲ್ವೆ ಖಾತೆಯನ್ನು ವಹಿಸಿಕೊಂಡರು.
ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ 1951ರಲ್ಲಿ ಗೃಹ ಮಂತ್ರಿಯಾಗಿದ್ದರು. ಜವಾಹರ್ಲಾಲ್ ನೆಹರುರವರ ಮರಣದ ನಂತರ
ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ ಭಾರತದ ಪ್ರಧಾನಿಯಾದರು.
ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು.
ಜನವರಿ 1966 ರಲ್ಲಿ ಶಾಸ್ತ್ರಿಜಿ ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ 10 ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್.
ಮರುದಿನವೇ ಅವರು ಅನುಮಾನಾಸ್ಪದವಾಗಿ ಹೃದಯಾಘಾತದಿಂದ ಸಾವನ್ನಪ್ಪಿದರು ಎಂಬ ಸುದ್ದಿ ಭಾರತೀಯರ ಪಾಲಿಗೆ ಆಘಾತವೇ ಆಯಿತು.
ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ದುರಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.
ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು. ಸಾಲದ ಭಾರ ಅಧಿಕವಾಯಿತು.
ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.
ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ. ಶಾಸ್ತ್ರೀಜಿಯವರ ಮೌಲ್ಯಗಳನ್ನು ನಾವು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ನಮ್ಮ ದೇಶದ ಏಳಿಗೆಗೆ ನಮ್ಮ ನಮ್ಮ ಕೆಲಸವನ್ನು ಪ್ರಮಾಣಿಕವಾಗಿ ಮಾಡೋಣ ಆ ಮೂಲಕ ಮಹಾತ್ಮರಿಗೆ ನಮನ ಸಲ್ಲಿಸೋಣ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
ಗೀತೆ..
ಗೀತೆ...
ಅವನ ಕೈಯಿಡಿದು ಪ್ರೀತಿಸುತಾ
ನಡೆದಳು ಶುರುವಾದಂತೆ ಐಟಂ ಸಾಂಗ್, ಅದೇ ಶಾಖ ಗೀತೆ|
ವಾರದಲ್ಲೇ ಅವನ ತೊರೆದು ಹೋದಳವಳು ಅವನ ಜೀವನದಲ್ಲಿ
ಶುರುವಾಗಿದೆ ಶೋಕಗೀತೆ||
ಸಿಹಿಜೀವಿ ವೆಂಕಟೇಶ್ವರ
ತುಮಕೂರು