ಸಾವಿರ ನೆನಪುಗಳು...
ಕೆಲವು ನೆನಪುಗಳೇ ಹಾಗೆ ಪದೇ ಪದೇ ನಮ್ಮನ್ನು ಕಾಡುತ್ತವೆ. ಪುಳಕಗೊಳಿಸುತ್ತವೆ. ಪುನಃ ಪುನಃ ಬಂದು ಮನಕಾನಂದ ನೀಡುತ್ತವೆ. ಮೊನ್ನೆ ಯಾರೋ ಗೆಳೆಯರು ಅವರ ಬಾಲ್ಯ ಮತ್ತು ಯೌವನದ ಹೈಲೈಟ್ ಇರುವ ಮುನ್ನಾಯಿಸಿದ ಸಂದೇಶ ಕಳಿಸಿದ್ದರು. ಅದೇ ಸಮಯಕ್ಕೆ ಮಾರ್ನಾಮಿ ಹಬ್ಬಕ್ಕೆ ನಮ್ಮ ಊರಿಗೆ ಹೋಗಿದ್ದೆ. ಆಗ ನನ್ನ ಬಾಲ್ಯದ ನೆನಪುಗಳು ಒತ್ತರಿಸಿ ಬಂದವು.ಈ ಲೇಖನ ಓದಿ ನಿಮ್ಮ ಬಾಲ್ಯ ನೆನಪಾಗಬಹುದು.
ಆಗ ನಮ್ಮ ಊರ ಕೇರಿಯಲ್ಲಿ ಜುಂಜಪ್ಪಯ್ಯನವರ ಮನೆಯಲ್ಲಿ ಮಾತ್ರ ರೇಡಿಯೋ ಇತ್ತು ಮಧ್ಯಾಹ್ನ ಒಂದೂವರೆಗೆ "ನಿಮ್ಮ ಮೆಚ್ಚಿನ ಚಿತ್ರಗೀತೆ "ಕೇಳಲು ನಾವು ಹಾಜರಾಗುತ್ತಿದ್ದೆವು.
ಒಂದು ಸಲ ರೇಡಿಯೋನಲ್ಲಿ ಕೇಳಿದರೆ ಸಾಕು ಸಿನಿಮಾ ಹಾಡು ಬಾಯಿಪಾಠ ಆಗ್ತಿತ್ತು. ಗೌರಿ ಮೊಗವು ಚಂದಿರನಂತೆ.... ನನ್ನ ನಿನ್ನ ಆಸೆ ನನ್ನ ಪ್ರೇಮು ಭಾಷೆ... ಹಸಿರು ಗಾಜಿನ ಬಳೆಗಳೆ... ಮುಂತಾದ ಹಾಡುಗಳು ಈಗಲೂ ನೆನಪಾಗುತ್ತವೆ.
ಪರ ಊರುಗಳಿಗೆ ಪಯಣಿಸಲು ಬಸ್ ಗಳಲ್ಲಿ ಕುಳಿತಿದ್ದರೆ ನಿಂಬಿಹುಳಿ ಪೇಪರ್ ಮೆಂಟ್ , ಬಿಸ್ಕೆಟ್ ಮಾರಲು ಬಂದು ನಮಗೆ ಮಾರಿ ಹೋಗುತ್ತಿದ್ದರು.
ಸೈಕಲ್ ಎಲ್ಲರ ಮನೆಯಲ್ಲಿ ಇರಲಿಲ್ಲ .ನಮ್ಮ ಬೀದಿಯ ಬಸವರಾಜನ ಮನೆಯಲ್ಲಿ ಮಾತ್ರ ಸೈಕಲ್ ಇತ್ತು ಅವನನ್ನು ಕಾಡಿ ಬೇಡಿ ಒಂದು ರೌಂಡ್ ಸೈಕಲ್ ಪಡೆದು ಓಡಿಸುತ್ತಿದ್ದೆ.
ಆಗ ನಮ್ಮೂರಲಿ ಯಾರ ಮನೆಯಲ್ಲಿ ಮದುವೆಯಾದರೂ ನಮ್ಮ ಮದುವೆಯಂತೆ ಸಂಭ್ರಮಿಸುತ್ತಿದ್ದೆವು.ಮದುವೆ ಅಡುಗೆಗೆ ಕಾಡಿನಿಂದ ಎತ್ತಿನಗಾಡಿಯಲ್ಲಿ ಸೌದೆ ತರುವುದು, ಅಕ್ಕಿ, ದವಸ ಹಸನು ಮಾಡುವುದು, ಹಪ್ಪಳ ಸಂಡಿಗೆ ಮಾಡುವುದು ಚಪ್ಪರ ಹಾಕುವುದು ಊಟ ಬಡಿಸುವುದು ಮುಂತಾದ ಕೆಲಸಗಳನ್ನು ಹಂಚಿಕೊಂಡು ಮಾಡಿ ಸಂತಸ ಪಡುತ್ತಿದ್ದೆವು.
ಆಗ ತಾನೆ ಬಂದ ಟೇಪ್ ರೆಕಾರ್ಡರ್ ನ್ನು ನಮ್ಮ ದೊಡ್ಡಮ್ಮನ ಮಗ ಹೊರಕೇರಣ್ಣ ತಂದಿದ್ದರು. ಕರೆಂಟ್ ಇಲ್ಲದಿದ್ದರೂ ಸೆಲ್ ಹಾಕಿಕೊಂಡು ಒಂದಾಗಿ ಬಾಳು ಚಿತ್ರದ ಬಳೆಗಳು ಹಾಡುತಿವೆ...ಘಲ್ ಘಲ್ ಎನ್ನುತಿವೆ...ಎಂಬ ಹಾಡನ್ನು ತಿರುಗಿ ತಿರುಗಿಸಿ ಕೇಳಿ ಪುಳಕಗೊಂಡಿದ್ದೆ.
ಸಿನಿಮಾ ನೋಡಲು ಹೊರಕೇದೇಪುರ ಟೆಂಟ್ ಗೆ ನಮ್ಮೂರಿಂದ ಏಳು ಕಿಲೋಮೀಟರ್ ನಮ್ಮ ಗೆಳೆಯರ ಜೊತೆಯಲ್ಲಿ ನಡೆದುಕೊಂಡೇ ಹೋಗುತ್ತಿದ್ದೆವು. ಟೆಂಟ್ ನಲ್ಲಿ ಬೆಂಚ್ ಮತ್ತು ನೆಲದ ಮೇಲೆ ಕುಳಿತು ಸಿನಿಮಾ ನೋಡುವ ಅವಕಾಶದಲ್ಲಿ ನಾವು ನೆಲವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆವು. ಪಸ್ಟ್ ಶೋ ಸಿನಿಮಾ ಬಿಟ್ಟ ಮೇಲೆ 50 ಪೈಸೆ ಕೊಟ್ಟು ಕಾರ ಮಂಡಕ್ಕಿ ಮೆಣಸಿನ ಕಾಯಿ ಬೊಂಡ ತಿಂದು ಕತ್ತಲಲ್ಲಿ ಮತ್ತೆ ಏಳು ಕಿಲೋಮೀಟರ್ ನಡೆದೇ ಮನೆ ಸೇರುತ್ತಿದ್ದೆವು.
ಇನ್ನೂ ಇಂತಹ ಸಾವಿರ ನೆನಪುಗಳಿವೆ ಮುಂದೆ ಹಂಚಿಕೊಂಡು ಸಂತಸಪಡುವೆ.ನಿಮಗೂ ಇಂತಹ ನೆನಪುಗಳು ಮರುಕಳಿಸುತ್ತಿರಬಹುದಲ್ಲವೆ?
ಸಿಹಿಜೀವಿ ವೆಂಕಟೇಶ್ವರ
ಚೌಡಗೊಂಡನಹಳ್ಳಿ
9900925529
No comments:
Post a Comment