01 October 2023

ಲಾಲ್ ಬಹದ್ದೂರ್ ಶಾಸ್ತ್ರೀಜಿ..


ಲಾಲ್ ಬಹದ್ದೂರ್ ಶಾಸ್ತ್ರೀಜಿ...

ರೂಪ ವಾಮನ. ಆಡಳಿತ, ಮೌಲ್ಯಗಳು, ಮನಸ್ಸು ಚಿಂತನೆಗಳೆಲ್ಲವೂ ಮುಗಿಲೆತ್ತರ ಅವರೇ ನಮ್ಮ ಪ್ರೀತಿಯ ಶಾಸ್ತ್ರೀಜಿ.
ಇವರು  ಭಾರತ ಕಂಡ ಅತ್ಯಂತ ಪ್ರಾಮಾಣಿಕ, ದಕ್ಷ ಪ್ರಧಾನಿಯಾಗಿದ್ದಾರೆ. ಇವರ ಪ್ರಾಮಾಣಿಕತೆಗೆ ಹಲವರು ತಲೆದೂಗಿದ್ದುಂಟು. ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು. ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿ ಅನ್ನದಾತ ಮತ್ತು ದೇಶರಕ್ಷಕರನ್ನು ಗೌರವಿಸಿದ ಶಾಸ್ತ್ರೀಜಿಯವರ ಗುಣ ಮನನೀಯ.

ಲಾಲ್ ಬಹಾದ್ದೂರ್ ಶಾಸ್ತ್ರೀಜಿ   ರವರು 1904 ರ ಅಕ್ಟೋಬರ್ ಎರಡರಂದು   ಮೊಘಲ್ ಸಾರಾಯ್ನಲ್ಲಿ ಜನಿಸಿದರು. 1921ರಲ್ಲಿ ಮಹಾತ್ಮ ಗಾಂಧಿಯವರಿಂದ ಪ್ರೇರಣೆ ಪಡೆದು  ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ಇವರು ತಮ್ಮ ಓದನ್ನು ಅರ್ಧದಲ್ಲೇ ಬಿಟ್ಟರು. 1926 ರಲ್ಲಿ ಇವರಿಗೆ ಶಾಸ್ತ್ರಿ ಎಂಬ ಬಿರುದು ಕಾಶಿ ವಿದ್ಯಾ ಪೀಠದಿಂದ ಕೊಡಲ್ಪಟ್ಟಿತು. ಅಂದಿನಿಂದ ಲಾಲ್ ಬಹದ್ದೂರ್ ಶಾಸ್ತ್ರೀಜಿ ಆದರು. ಒಟ್ಟು 9 ವರ್ಷಗಳ ಕಾಲ ಸ್ವಾತಂತ್ರ್ಯಕ್ಕಾಗಿ ಕಾರಾಗೃಹವಾಸ ಅನುಭವಿಸಿದ ಇವರು ಸತ್ಯಾಗ್ರಹ ಚಳುವಳಿ ಪ್ರಾರಂಭವಾದ ನಂತರ 1946  ರವರೆಗೂ ಜೈಲು ಶಿಕ್ಷೆ ಅನುಭವಿಸಿದರು.

ಸ್ವಾತಂತ್ರ ದೊರಕಿದ ಬಳಿಕ ಇವರು  ಪೋಲಿಸ್ ಖಾತೆಯನ್ನು ವಹಿಸಿಕೊಂಡಿದ್ದರು. 1951ರಲ್ಲಿ ಇವರು ಲೋಕ ಸಭೆಗೆ ಜನರಲ್ ಸೆಕ್ರೆಟರಿ ಆಗಿ ಆಯ್ಕೆಯಾದರು.   ರೈಲ್ವೆ ಖಾತೆಯನ್ನು ವಹಿಸಿಕೊಂಡರು.
ಅರಿಯಳೂರು ಬಳಿ ಆದ ರೈಲ್ವೆ ದುರಂತದ ತರುವಾಯ ಇವರು ತಮ್ಮ ಖಾತೆಗೆ ರಾಜೀನಾಮೆ ನೀಡಿದರು. ಮತ್ತೊಮ್ಮೆ ಇವರು ಕ್ಯಾಬಿನೆಟ್ಗೆ ಮರಳಿದರು. ಮೊದಲು ಸಾರಿಗೆ ಮಂತ್ರಿ ಯಾಗಿ, ಬಳಿಕ 1951ರಲ್ಲಿ ಗೃಹ ಮಂತ್ರಿಯಾಗಿದ್ದರು. ಜವಾಹರ್ಲಾಲ್ ನೆಹರುರವರ ಮರಣದ ನಂತರ
ಶಾಸ್ತ್ರಿಗಳಿಗೆ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಇವರು ಅದೇ ವರ್ಷ  ಭಾರತದ ಪ್ರಧಾನಿಯಾದರು.

ಆಗಿನ ಪ್ರಮುಖ ಸಮಸ್ಯೆ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎನ್ ಮಧ್ಯಸ್ಥಿಕೆಯಿಂದ ನಿಂತು ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಪ್ರಾರಂಭವಾಯಿತು. ಎರಡನೇ ಭಾರತ-ಪಾಕ್ ಯುದ್ಧ ಪ್ರಾರಂಭವಾಗಿ ಭಾರತದ ಪಡೆ ಲಾಹೋರ್ ತಲುಪುತ್ತಲೇ ಶಾಂತಿ ಒಪ್ಪಂದ ಮಾಡಿ ಕೊಳ್ಳಲಾಯಿತು. 

ಜನವರಿ 1966 ರಲ್ಲಿ ಶಾಸ್ತ್ರಿಜಿ  ಮತ್ತು ಮಹಮ್ಮದ್ ಆಯೂಬ್ ಖಾನ್ ಅಲೆಕ್ಸೈ ನಿಕೊಲಯೆವಿಚ್ ಕೊಸಿಜಿನ್ ಅವರಿಂದ ಆಯೋಜಿಸಲಾದ ಟಾಷ್ಕೆಂಟ್ನಲ್ಲಿ ನಡೆದ ಮಾತುಕತೆಯಲ್ಲಿ ಭಾಗವಹಿಸಿದರು. ಶಾಸ್ತ್ರಿಗಳು ಭಾರತದೊಂದಿಗೆ ಜನವರಿ 10 ರಂದು ಒಂದು ಒಪ್ಪಂದಕ್ಕೆ ಸಹಿ ಹಾಕಿದರು. ಅದೇ ಟಾಶ್ಕೆಂಟ್ ಡಿಕ್ಲೆರೇಶನ್.
ಮರುದಿನವೇ ಅವರು ಅನುಮಾನಾಸ್ಪದವಾಗಿ  ಹೃದಯಾಘಾತದಿಂದ ಸಾವನ್ನಪ್ಪಿದರು ಎಂಬ ಸುದ್ದಿ  ಭಾರತೀಯರ ಪಾಲಿಗೆ ಆಘಾತವೇ ಆಯಿತು.

ಇವರು ಕಾರ್ಯಕಾಲದಲ್ಲಿ ದೇಶದಾಚೆ ಸಾವನ್ನಪ್ಪಿದ ಏಕೈಕ ಭಾರತದ ಪ್ರಧಾನ ಮಂತ್ರಿ ಹಾಗು ಈ ತರಹದ ದುರಂತಕ್ಕೆ ತುತ್ತಾದ ಇತಿಹಾಸದ ಬಹುಶಃ ಕೆಲವೇ ಕೆಲವು ಸರಕಾರದ ಮುಖ್ಯಸ್ಥರಲ್ಲಿ ಒಬ್ಬರು.
ಇವರು ಭಾರತವನ್ನು ಸ್ವಾಭಿಮಾನಿ ದೇಶವಾಗಿ ಮಾಡುವಲ್ಲಿ ಶ್ರಮವಹಿಸಿದ್ದಾರೆ. ಅವರು ಪ್ರಧಾನಿಯಾದ ಸಂದರ್ಭದಲ್ಲಿ ದೇಶದಲ್ಲಿ ಬರಗಾಲ ಬಂದೊದಗಿತು. ಆಗ ಹೊರ ದೇಶದಿಂದ ಆಹಾರವನ್ನು ಆಮದು ಮಾಡಿಕೊಳ್ಳಬೇಕಾಯಿತು.  ಸಾಲದ ಭಾರ ಅಧಿಕವಾಯಿತು.

ಅದನ್ನರಿತ ಶಾಸ್ತ್ರಿ ವಾರದಲ್ಲಿ ಒಂದು ದಿನ ಊಟವನ್ನು ಬಿಟ್ಟರೆ ಎಷ್ಟು ಆಹಾರ ಸಂಗ್ರಹ ವಾಗುವುದೆಂದು ಲೆಕ್ಕಾಚಾರಹಾಕಿ, ಸೋಮವಾರ ರಾತ್ರಿ ಊಟವನ್ನು ಬಿಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಾವೂ ಸಹ ಸೋಮವಾರದ ಊಟವನ್ನು ತ್ಯಜಿಸಿದರು. ಇನ್ನೂ ಸಹ ಶಾಸ್ತ್ರಿಯವರ ಸೋಮವಾರವು ಪ್ರಚಲಿತದಲ್ಲಿದೆ. ಈ ನಿರ್ಣಯವು ಅವರ ಸ್ವಾಭಿಮಾನ ಯಾತ್ರೆಗೆ ಮುಕುಟ ಪ್ರಾಯದಂತಿದೆ.

ಇವರಿಗೆ ಮರಣಾನಂತರ ಭಾರತ ರತ್ನವನ್ನು ಪ್ರಧಾನ ಮಾಡಲಾಯಿತು. ಇವರ ಸ್ಮರಣೆಗೆ ದೆಹಲಿಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲಾಗಿದೆ. ಇವರ ಜನಪ್ರಿಯ ವಾಕ್ಯ ಜೈ ಜವಾನ್, ಜೈ ಕಿಸಾನ್ ಇಂದಿಗೂ ಚಿರವಾಗಿ ಉಳಿದಿದೆ. ಶಾಸ್ತ್ರೀಜಿಯವರ ಮೌಲ್ಯಗಳನ್ನು ನಾವು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ನಮ್ಮ ದೇಶದ ಏಳಿಗೆಗೆ ನಮ್ಮ ನಮ್ಮ ಕೆಲಸವನ್ನು ಪ್ರಮಾಣಿಕವಾಗಿ ಮಾಡೋಣ ಆ ಮೂಲಕ ಮಹಾತ್ಮರಿಗೆ ನಮನ ಸಲ್ಲಿಸೋಣ.

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529


No comments: