#ರಾಷ್ಟ್ರೀಯ ಏಕತಾ ದಿನ ..
ಭಾರತದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉಕ್ಕಿನ ಮನುಷ್ಯ ಸರಪಟೇಲರು
ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು2014 ರಿಂದ ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲಾಗುತ್ತಿದೆ.
ಏಕತೆ, ಸಮಗ್ರತೆ ಮತ್ತು ನೈಜ ಮತ್ತು ಸಂಭಾವ್ಯ ಬೆದರಿಕೆಗಳನ್ನು ತಡೆದುಕೊಳ್ಳಲು ನಮ್ಮ ರಾಷ್ಟ್ರದ ಅಂತರ್ಗತ ಶಕ್ತಿಯನ್ನು ಮರುದೃಢೀಕರಿಸಲು ಇಂತಹ ದಿನಾಚರಣೆಗಳ ಅಗತ್ಯವಿದೆ.
ಭಾರತದ ಏಕೀಕರಣದ ಕಥೆಯೇ ಒಂದು ರೋಚಕ ಬಹುತೇಕ ಅಸಾಧ್ಯ ಎನ್ನಬಹುದಾದ ಕೆಲಸವನ್ನು ಇದು ಸಾಧ್ಯ ಎಂದು ಮಾಡಿ ತೋರಿಸಿದವರು ನಮ್ಮ ಪಟೇಲ್ ರವರು.
ಭಾರತ ಸ್ವಾತಂತ್ರ್ಯ ನಂತರ
ಪಟೇಲರು ಉಪಪ್ರಧಾನಿಯಾಗಿ ಗೃಹಖಾತೆಯನ್ನು ವಹಿಸಿಕೊಂಡರು. ತಮ್ಮ ಎಪ್ಪತ್ತೆರಡನೆಯ ವಯಸ್ಸಿನಲ್ಲಿ 565 ರಾಜ ಸಂಸ್ಥಾನಗಳನ್ನು ಭಾರತದಲ್ಲಿ ವಿಲೀನಗೊಳಿಸಿ, ಅಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸುವ ದೇಶದ ರಕ್ಷಣೆಯ ವ್ಯವಸ್ಥೆಯನ್ನು ರೂಪಿಸುವ ಹಾಗೂ ಭಾರತವನ್ನು ಒಗ್ಗಟ್ಟಾದ ದೇಶವನ್ನಾಗಿ ಕಟ್ಟುವ ಮಹತ್ತರ ಜವಾಬ್ದಾರಿಯನ್ನು ಪಟೇಲರು ಹೊತ್ತುಕೊಂಡರು.
ಅಧಿಕಾರದ ವಿಕೇಂದ್ರೀಕರಣ, ಧಾರ್ಮಿಕ ಸಮಾನತೆ ಮತ್ತು ಸ್ವಾತಂತ್ರ್ಯ , ಆಸ್ತಿ ಹಕ್ಕು ಇತ್ಯಾದಿ ವಿಷಯಗಳನ್ನು ವಿಷದೀಕರಿಸಿ, ಭಾರತದ ಸಂವಿಧಾನದ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದರು. ರಾಜ ಮಹಾರಾಜ ಸಾಮಂತರುಗಳಿಂದ ತುಂಬಿದ್ದ ಬ್ರಿಟಿಷ್ ಇಂಡಿಯವನ್ನು ನೈಜ ಭಾರತವನ್ನಾಗಿಸಲು ಸಾಮ ಭೇದ ದಾನ ದಂಡ ಇವುಗಳನ್ನು ಸಂದರ್ಭಕ್ಕೆ ಸರಿಯಾಗಿ ಬಳಸಿದ ಹಿರಿಮೆ ಪಟೇಲರದ್ದು.
ಪ್ರಜೆಗಳ ಆಶೋತ್ತರಗಳಿಗೆ ಹೊಂದಿಕೊಂಡಿದ್ದ ಮೈಸೂರು, ಇಂದೋರ್ ಮುಂತಾದ ಪ್ರಾಂತ್ಯಗಳ ಜೊತೆ ಗೌರವದಿಂದ ವರ್ತಿಸಿದರು. ಸೂಕ್ಷ್ಮ ವಾದ ಜಾಗಗಳಾದ ತಿರುವಾಂಕೂರು ಮತ್ತಿತರೆಡೆಗೆ ವಿ. ಪಿ. ಮೆನನ್ ರಂತಹ ಪ್ರತಿನಿಧಿಗಳನ್ನು ಕಳಿಸಿ ಭಾರತದಲ್ಲಿ ತಮ್ಮ ಸಂಸ್ಥಾನವನ್ನು ಸೇರಿಸುವಂತೆ ಆಯಾ ರಾಜರ ಮನ ಒಲಿಸಿದರು.
ಯುದ್ಧ ಮಾಡಲು ಹಿಂಜರಿಯದ, ಆದರೆ ನೇರಯುದ್ಧಕ್ಕೆ ಸಿದ್ಧರಿಲ್ಲದ ರಾಜರ ಜೊತೆ ಮಾತನಾಡುವಾಗ ಮಿಲಿಟರಿ ವ್ಯವಹಾರಗಳ ಡೈರೆಕ್ಟರ್ ಜನರಲ್ ಸ್ಯಾಮ್ ಮಾಣಿಕ್ ಶಾರನ್ನು ಜೊತೆಯಾಗಿಟ್ಟುಕೊಂಡು ಹೋಗುತ್ತಿದ್ದರು. ಜುನಾಗಢ್, ಜಮ್ಮು-ಕಾಶ್ಮೀರ, ಹೈದರಾಬಾದ್ ಈ ಮೂರು ರಾಜ್ಯಗಳ ರಾಜರು ಮಾತ್ರ ಪಟೇಲರ ಚಾಕಚಕ್ಯತೆಗೆ ಮತ್ತು ಭಾರತದ ಒಗ್ಗಟ್ಟಿಗೆ ಸವಾಲು ಹಾಕಿದಾಗ ಸೈನ್ಯವನ್ನು ಕಳಿಸಿ, ರಾಜ್ಯಗಳನ್ನು ಆಕ್ರಮಿಸಿ, ಆಯಾ ರಾಜ್ಯಗಳು ಮತ್ತು ಪ್ರಜೆಗಳನ್ನು ಭಾರತದ ಭಾಗವಾಗಿಸಿದರು.
565 ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಭಾರತವನ್ನು ಒಗ್ಗೂಡಿಸುವ ಮಹತ್ಕಾರ್ಯಕ್ಕೆ ಪಟೇಲರೇ ಸೂಕ್ತ ವ್ಯಕ್ತಿ ಎಂದು ಕಾಂಗ್ರೆಸ್ ಪಕ್ಷದ ,ಮೌಂಟ್ ಬ್ಯಾಟನ್ನರ ಹಾಗೂ ಹಿರಿಯ ಬ್ರಿಟಿಷ್ ಅಧಿಕಾರಿಗಳ ಒಮ್ಮತದ ಅಭಿಪ್ರಾಯವಾಗಿತ್ತು. “ರಾಜ್ಯಗಳ ಈ ಸಮಸ್ಯೆ ಎಷ್ಟು ಸಂಕೀರ್ಣವಾಗಿದೆಯೆಂದರೆ ನೀವೊಬ್ಬರೇ ಅದನ್ನು ಬಗೆಹರಿಸಲು ಸಮರ್ಥರು” ಎಂದು ಗಾಂಧೀಜಿ ಕೂಡಾ ಪಟೇಲರಿಗೆ ಹೇಳಿದ್ದರು.
ಈ ಗುರುತರ ಕಾರ್ಯವನ್ನು ಯಶಸ್ವಿಯಾಗಿ ಕೈಗೂಡಿಸುವ ಮನಃ ಸ್ಥೈರ್ಯ , ಚಾಣಾಕ್ಷತನ ಹಾಗೂ ಅಚಲತೆ ಇದ್ದವರಾದ ಪಟೇಲರು, ರಾಷ್ಟ್ರಹಿತಕ್ಕಾಗಿ ಮುಂದೆ ನಿಂತು ಸರ್ಕಾರದ ನಿರ್ಧಾರಗಳನ್ನು ಜಾರಿಮಾಡುವುದಕ್ಕೆ ತಯಾರಿದ್ದರೂ, ಸಂಸ್ಥಾನಿಕರೊಂದಿಗೆ ಸಂಧಾನ ನಡೆಸಲು ಬೇಕಾದ ಅನುಭವವನ್ನೂ, ಮುತ್ಸದ್ದಿತನವನ್ನೂ ಪಡೆದುಕೊಂಡಿದ್ದರು.
ಸ್ವಾತಂತ್ರ್ಯ ಪೂರ್ವದಲ್ಲೇ ಈ ಕಾರ್ಯಕ್ಕೆ ಕೈ ಹಾಕಿದ್ದ ಪಟೇಲರು
1947ರ ಮೇ 6 ರಂದು ರಾಜರುಗಳ ಜೊತೆ ವಿಲೀನದ ಮಾತುಕತೆ ಪ್ರಾರಂಭಿಸಿದರು. ಈ ಮಾತುಕತೆಯ ಉದ್ದೇಶ ಈ ರಾಜರು ಭವಿಷ್ಯದ ಭಾರತ ಸರ್ಕಾರದೊಂದಿಗೆ ಸಹಕಾರ ಕೊಡುವುದಕ್ಕೂ ಹಾಗೂ ಮುಂದೆ ಉಂಟಾಗಬಹುದಾದ ಘರ್ಷಣೆಗಳನ್ನು ಆರಂಭದಲ್ಲಿಯೇ ಚಿವುಟಿಹಾಕುವುದಾಗಿತ್ತು.
ಬಹಳಷ್ಟು ಸಂಸ್ಥಾನಿಕ ರಾಜರುಗಳನ್ನು ತಮ್ಮ ಮನೆಗೆ ಆಹ್ವಾನಿಸಿ ಭೋಜನ ಅಥವಾ ಚಹಾ ಸತ್ಕಾರ ಏರ್ಪಡಿಸಿದ ಪಟೇಲರು ಈ ಸಾಮಾಜಿಕ ಹಾಗೂ ಅನಧಿಕೃತ ಭೇಟಿಗಳ ಮೂಲಕ ಅವರನ್ನು ವಿಲೀನದ ಪ್ರಕ್ರಿಯೆಯಲ್ಲಿ ತೊಡಗಿಸಿದರು.ಹಾಗೂ 1947 ಆಗಸ್ಟ್ 15ರ ಒಳಗಾಗಿ ಭಾರತದಲ್ಲಿ ವಿಲೀನವಾಗುವಂತೆ ಅವರನ್ನು ಆಗ್ರಹಿಸಿದರು.
ತಮ್ಮ ಪ್ರಜೆಗಳ ಭವಿಷ್ಯದ ಹಿತಕ್ಕಾಗಿ ರಾಜ್ಯವನ್ನು ಭಾರತಕ್ಕೆ ಬಿಟ್ಟುಕೊಡುವಂತೆಯೂ, ಭಾರತದಿಂದ ಸ್ವತಂತ್ರವಾಗಿ ರಾಜ್ಯಭಾರ ಮಾಡುವುದರ , ಬಗ್ಗೆ ಎಲ್ಲಾ 565 ರಾಜರುಗಳಿಗೆ ಮನದಟ್ಟು ಮಾಡಿಕೊಟ್ಟರು. ವಿಲೀನವಾದವರ ಪೀಳಿಗೆಯವರಿಗೆ ರಾಜಧನದ ಆಶ್ವಾಸನೆಯನ್ನೂ ಅವರು ನೀಡಿದರು. ಕಾಶ್ಮೀರ, ಹೈದರಾಬಾದು ಹಾಗೂ ಜುನಾಘಢ, ರಾಜ್ಯಗಳನ್ನು ಹೊರತುಪಡಿಸಿ, ಬಾಕಿ ಎಲ್ಲಾ ಸಂಸ್ಥಾನಗಳೂ ವಿಲೀನಕ್ಕೆ ಒಪ್ಪಿದವು.
ತಮ್ಮ ಸ್ವಂತ ರಾಜ್ಯ ಗುಜರಾತಿನಲ್ಲಿದ್ದ ಜುನಾಘಡ ಸಂಸ್ಥಾನ ಪಟೇಲರಿಗೆ ಸಹಜವಾಗಿಯೇ ಮಹತ್ವದ್ದಾಗಿತ್ತು. ಅಲ್ಲಿಯ ನವಾಬರ ಮೇಲೆ ಪಾಕಿಸ್ತಾನ ಸೇರುವಂತೆ ಸರ್ ಶಾ ನವಾಜ್ ಭುಟ್ಟೋ ಒತ್ತಡ ಹೇರಿದ್ದರು. ಜುನಾಗಡ ಪಾಕಿಸ್ತಾನದಿಂದ ಸಾಕಷ್ಟು ದೂರವಿದ್ದದ್ದಷ್ಟೇ ಅಲ್ಲ ಅಲ್ಲಿಯ ಜನಸಂಖ್ಯೆಯ ಶೇಕಡಾ 80 ಹಿಂದೂಗಳಾಗಿದ್ದರು. ಪಟೇಲರು ಮುತ್ಸದ್ದಿತನದೊಡನೆ ಬಲಪ್ರದರ್ಶನವನ್ನೂ ಮಾಡಿ ಪಾಕಿಸ್ತಾನ ಜುನಾಘಡದಿಂದ ದೂರವಿರುವಂತೆಯೂ ಹಾಗೂ ಜುನಾಘಡವು ಭಾರತದೊಂದಿಗೆ ವಿಲೀನವಾಗಬೇಕೆಂದೂ ಒತ್ತಡ ಹಾಕಿದರು. ಇದರೊಂದಿಗೆ ಸೇನೆಯ ತುಕಡಿಗಳನ್ನು ಜುನಾಘಡದ ಮೂರು ಪ್ರದೇಶಗಳಿಗೆ ಕಳುಹಿಸಿ ತಮ್ಮ ಧೃಢನಿರ್ಧಾರವನ್ನು ಪ್ರಕಟಪಡಿಸಿದರು. ವ್ಯಾಪಕ ಪ್ರತಿಭಟನೆಯ ನಂತರ ಜನಪರ ಸರ್ಕಾರ ರಚನೆಯಾದ ಮೇಲೆ ಭುಟ್ಟೋ ಮತ್ತು ನವಾಬ ಇಬ್ಬರೂ ಪಾಕಿಸ್ತಾನಕ್ಕೆ ಪಲಾಯನ ಮಾಡಿದರು. ಪಟೇಲರ ಆದೇಶದ ಮೇರೆ ಭಾರತೀಯ ಸೇನೆ ಹಾಗೂ ಪೋಲೀಸ್ ಪಡೆಗಳು ಜುನಾಘಡವನ್ನು ಪ್ರವೇಶಿಸಿದವು.
ಮುಂದೆ ನಡೆದ ಜನಮತಗಣನೆಯಲ್ಲಿ ಶೇಕಡಾ 99.5 ಮಂದಿ ಭಾರತದೊಂದಿಗೆ ವಿಲೀನದ ಪರವಾಗಿ ಮತವಿತ್ತರು. ಇಂದಿನ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರದ ಭಾಗಗಳನ್ನೊಳಗೊಂಡ ಹೈದರಾಬಾದ್ ಭಾರತದ ಸಂಸ್ಥಾನಗಳಲ್ಲಿಯೇ ಅತಿ ದೊಡ್ಡದಾಗಿತ್ತು. ಅಲ್ಲಿನ ನಿಜಾಮ ಮುಸ್ಲಿಮರಾಗಿದ್ದರೂ ಜನಸಂಖ್ಯೆಯ ಶೇಕಡಾ 80 ಹಿಂದೂಗಳಾಗಿದ್ದರು.
ಜಿನ್ನಾ ಮೊದಲಾದ ಪಾಕಿಸ್ತಾನ ನಾಯಕರು ಹಾಗೂ ಬ್ರಿಟೀಷ್ ರ ಬೆಂಬಲದಿಂದ ಹೈದರಾಬಾದ್ ಸಂಸ್ಥಾನವನ್ನು ಸ್ವತಂತ್ರ ರಾಷ್ಟ್ರವೆಂದು ನಿಜಾಮ ಘೋಷಿಸಿದ. ಆತನ ಸೇನೆಗೆ ಅತ್ಯಾಧುನಿಕ ಸಿಡ್ನಿ ಕಾಟನ್ ಬಂದೂಕುಗಳು, ಮದ್ದುಗುಂಡುಗಳನ್ನು ಮತ್ತು ತರಬೇತಿಯನ್ನು ಬ್ರಿಟೀಷ್ ರು ನೀಡಿದರು.ಕಾಸೀಂ ರಜ್ವಿಯಂಬ ಮತಾಂಧ ಮತ್ತು ಉಗ್ರವಾದಿಯ ಮುಂದಾಳತ್ವದಲ್ಲಿ ಸಾವಿರಾರು ಜನ ರಜಾಕಾರರು ಹೈದರಾಬಾದ್ ಸಂಸ್ಥಾನದಲ್ಲಿ ಜನಸಾಮಾನ್ಯರ ಮೇಲೆ ಆಕ್ರಮಣ ನೆಡೆಸಿದರು.
ಮಹಿಳೆಯರ ಮಾನಭಂಗ, ಮಕ್ಕಳ ಹತ್ಯೆ, ಜನರ ಹತ್ಯೆ ಇವು ಸಾವಿರಾರು ಕಡೆ ನೆಡೆದವು. ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ ಹೈದರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟ ನೆಡೆಯಿತು. ಕರ್ನಾಟಕದ ಮುಂಡರಗಿಯ ಶಿಬಿರಕ್ಕೆ ಕೇಂದ್ರ ಮಂತ್ರಿ ಗಾಡ್ಗೀಳರನ್ನು ಕಳುಹಿಸಿದ ಪಟೇಲ್ ರು ಈ ಹೋರಾಟಕ್ಕೆ ಬೆಂಬಲ ನೀಡಿ ಪ್ರೋತ್ಸಾಹಿಸಿದರು.
ಯುದ್ಧ ಭೀತಿಯಿಂದ ಹತಾಶರಾಗಿದ್ದ ಮೌಂಟ್ ಬ್ಯಾಟನ್ನರ ಪ್ರಯತ್ನದಿಂದ ತಟಸ್ಥ ಒಪ್ಪಂದವಾದರೂ, ನಿಜಾಮ ತನ್ನ ನಿಲುವನ್ನು ಬದಲಾಯಿಸಿ ಈ ಒಪ್ಪಂದವನ್ನು ತಿರಸ್ಕರಿಸಿದ. ವಿಶ್ವಸಂಸ್ಥೆಗೆ ಈ ವಿವಾದವನ್ನು ಒಪ್ಪಿಸುವ ಕುತಂತ್ರ ಅವನದಾಗಿತ್ತು. 1948ರ ಸೆಪ್ಟೆಂಬರಿನಲ್ಲಿ ಪಟೇಲರು ಭಾರತ ಇನ್ನು ಕಾಯಲಾಗದು ಎಂದು ರಾಜಾಜಿಯವರನ್ನು ಒಪ್ಪಿಸಿ, ಹೈದರಾಬಾದನ್ನು ವಶಕ್ಕೆ ತೆಗೆದುಕೊಳ್ಳಲು ಭಾರತದ ಸೇನೆಯನ್ನು ಕಳುಹಿಸಿದರು.
ಆಪರೇಷನ್ ಪೋಲೋ ಎಂಬ ಈ ಕಾರ್ಯಾಚರಣೆಯಲ್ಲಿ ಸಾವಿರಾರು ರಜಾಕಾರರು ಕೊಲ್ಲಲ್ಪಟ್ಟರು. 1948 ಸೆಪ್ಟೆ೦ಬರ್ 17 ರಂದು ಈಗಿನ ಬೀದರ್ ಜಿಲ್ಲೆಯ ಹುಮುನಾಬಾದಿನಲ್ಲಿ ನಿಜಾಮರ ಸೈನ್ಯ ಶರಣಾಯಿತು. ಹೈದರಾಬಾದು ಪ್ರಾ೦ತ್ಯ ಸುರಕ್ಷಿತವಾಗಿ ಭಾರತದ ಭಾಗವಾಯಿತು. ಕೇವಲ ಎರಡುದಿನವಷ್ಟೇ ನಡೆದ ಕಾರ್ಯಚರಣೆಯನ್ನು ಭಾರತ ಸರಕಾರದ ದಾಖಲೆಗಳಲ್ಲಿ ಪೋಲೀಸ್ ಕಾರ್ಯಚರಣೆಯೆ೦ದು ಕರೆಯಲಾಗಿದೆ.
ನಿಜಾಮರ ಸೈನ್ಯದ ಸೈನ್ಯಾಧಿಕಾರಿ ಒಬ್ಬ ಬ್ರಿಟಿಷ್ ಆಗಿದ್ದನೆ೦ಬುವುದು ಇಲ್ಲಿ ಗಮನಾರ್ಹ. ಬಲಪ್ರಯೋಗದಿಂದ ಹೈದರಾಬಾದನ್ನು ವಶಪಡಿಸಿಕೊಂಡಲ್ಲಿ ಅದು ಹಿಂದೂ-ಮುಸ್ಲಿಮ್ ದಂಗೆಗಳಿಗೆ ಅವಕಾಶ ಕೊಡಬಹುದು ಎಂದು ಮೌಂಟ್ ಬ್ಯಾಟನ್ ಮತ್ತು ನೆಹರೂ ಶಂಕಿಸಿ ಹಿಂಜರಿದರೂ ಪಟೇಲರು ಹೈದರಾಬಾದನ್ನು ಹಾಗೆಯೇ ಬಿಟ್ಟಲ್ಲಿ ಅದು ಭಾರತದ ಪ್ರತಿಷ್ಟೆಗೇ ಸವಾಲಾಗುವುದಷ್ಟೇ ಅಲ್ಲ, ಅದರಿಂದಾಗಿ ಹಿಂದೂಗಳಾಗಲೀ, ಮಸಲ್ಮಾನರಾಗಲೀ ಆ ರಾಜ್ಯದಲ್ಲಿ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಯಾವುದೇ ನಾಗರೀಕ ಪ್ರತಿಭಟನೆಯಿಲ್ಲದೇ ಯಶಸ್ವಿಯಾದ ಹೈದರಾಬಾದಿನ ವಿಲೀನವನ್ನು ಅನೇಕ ಭಾರತೀಯ ಮುಸ್ಲಿಮರು ಕೊಂಡಾಡಿದರು. ನಿಜಾಮರ ಮೇಲೆ ಸಂತಾಪವಿದ್ದರೂ, ಪಟೇಲರು ಅವರನ್ನು ರಾಜ್ಯದ ಅಲಂಕಾರಿಕ ಮುಖ್ಯಸ್ಥನನ್ನಾಗಿ ನೇಮಿಸಿದರು. ಮುಂದೆ ನಡೆದ ಮಾತುಕತೆಯಲ್ಲಿ ನಿಜಾಮರು ಪಟೇಲರನ್ನು ಕ್ಷಮಾಪಣೆ ಕೇಳಿದ್ದರಿಂದ ಪಟೇಲರು ದೊಡ್ಡ ಮನಸ್ಸಿನಿಂದ ವೈರವನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಿದರು.
ಕಾಶ್ಮೀರ ದ ಏಕೀಕರಣವೂ ಪಟೇಲರ ಚಾಣಾಕ್ಷತನದಿಂದ ಆದ ಕಾರ್ಯವಾಗಿದೆ.
ಭಾರತವನ್ನು ಒಟ್ಟುಗೂಡಿಸುವುದು ಸುಲಭದ ಕೆಲಸವೇನಾಗಿರಲಿಲ್ಲ. ಪಟೇಲರ ಗಣನೀಯ ಸೇವೆಯನ್ನು ಗಮನದಲ್ಲಿಟ್ಟು ಅವರನ್ನು ಭಾರತದ ಬಿಸ್ಮಾರ್ಕ್ ಎಂದು ಕರೆಯಲಾಗುತ್ತದೆ. ಪಟೇಲರು ಭಾರತದ ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ ಹಿರಿಯ ಸದಸ್ಯರಾಗಿದ್ದರು.
ಭಾರತದ ಸಂವಿಧಾನದಲ್ಲಿ ನಾಗರಿಕ ಸ್ವಾತಂತ್ರ್ಯದ ರೂಪರೇಷೆಗಳನ್ನು ನಿರ್ಧರಿಸುವುದಕ್ಕಾಗಿ ರಚಿಸಲಾಗಿದ್ದ ಅನೇಕ ಮಹತ್ವದ ಸಮಿತಿಗಳ ನಾಯಕರಾಗಿದ್ದರು. ಸರಕಾರದ ರಕ್ಷಣಾತ್ಮಕ ಅಧಿಕಾರವಿರುವ, ವ್ಯಾಪಕ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅವರು ಬೆಂಬಲ ನೀಡಿದರು. ರಾಷ್ಟ್ರೀಕೃತ ಸಿವಿಲ್ ಸರ್ವೀಸನ್ನು ಅವರು ಬಲವಾಗಿ ಬೆಂಬಲಿಸಿದ್ದಲ್ಲದೇ , ಆಸ್ತಿ ಹಕ್ಕು ಮತ್ತು ರಾಜಧನದ ಕಲಮುಗಳನ್ನೂ ಸೇರಿಸಿದರು. ಇಂತಹ ಮಹಾನ್ ಸಾಧನೆ ಮಾಡಿದ ಪಟೇಲರ ಜನ್ಮ ದಿನವನ್ನು ಏಕತಾ ದಿನವನ್ನಾಗಿ ಆಚರಿಸುವುದು ಅರ್ಥಪೂರ್ಣ. ನಮ್ಮ ದೇಶದ ಸಮಗ್ರತೆ ಮತ್ತು ಏಕತೆಗೆ ಈ ದಿನ ನಾವೆಲ್ಲರೂ ಪ್ರತಿಜ್ಞೆ ಸ್ವೀಕರಿಸಿ ಕಾರ್ಯ ಪ್ರವೃತ್ತರಾದರೆ ಈ ದಿನಕ್ಕೆ ಇನ್ನೂ ಅರ್ಥ ಬರುವುದು.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529.
No comments:
Post a Comment