ಭಾಗ ೨
ಕೆಂಪೇಗೌಡ ಏರ್ಪೋರ್ಟ್ ನಲ್ಲಿ..
ತುಮಕೂರಿನಿಂದ ಬಸ್ ನ ಮೂಲಕ ಹೊರಟ ನಾವು ದೇವನಹಳ್ಳಿ ತಲುಪಿದಾಗ ಕೆಂಪೇಗೌಡರ ಬೃಹತ್ ಕಂಚಿನ ವಿಗ್ರಹ ನಮ್ಮ ಎಡಭಾಗದಲ್ಲಿ ಗೋಚರಿಸಿತು.ಅದರ ಮುಂದೆ ಸಾಗಿದಾಗ ಸಿಕ್ಕಿದ್ದೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ನಾವು ಅಂಡಮಾನ್ ತಲುಪಲು ಬೆಂಗಳೂರಿನಿಂದ ಚೆನ್ನೈ ಗೆ ವಿಮಾನದ ಮೂಲಕ ತೆರಳಿ ಅಲ್ಲಿಂದ ಪೋರ್ಟ್ ಬ್ಲೇರ್ ಗೆ ಪಯಣ ಮಾಡಲು ಟಿಕೆಟ್ ಬುಕ್ ಆಗಿತ್ತು.
ಬೋರ್ಡಿಂಗ್ ಪಾಸ್ ಪಡೆದು ಚೆಕ್ ಇನ್ ಆಗಲು ತೆರಳಿದ ನಮ್ಮ ಪ್ರವಾಸಿ ತಂಡಕ್ಕೆ ಇಂಡಿಗೋ ಏರ್ಲೈನ್ಸ್ ಸಿಬ್ಬಂದಿ ಡಿಜಿ ಯಾತ್ರಾ ಎಂಬ ಉಪಕ್ರಮದ ಮೂಲಕ ಸುಲಭವಾಗಿ ಚೆಕ್ ಇನ್ ಆಗಲು ಸಹಾಯ ಮಾಡಿದರು. ಲಗೇಜ್ ಕೌಂಟರ್ ನಲ್ಲಿ ನಮ್ಮ ಲಗೇಜ್ ನೀಡಿ ವಿಮಾನ ಏರಲು 12 ನೇ ಕೌಂಟರ್ ನಲ್ಲಿ ಚೆಕ್ ಇನ್ ಆಗಿ ನಮ್ಮ ವಿಮಾನದತ್ತ ತರಳಿದೆವು. ಆಗ ನಮ್ಮ ಕಣ್ಣಿಗೆ ಕೆಂಪೇಗೌಡ ವಿಮಾನ ನಿಲ್ದಾಣದ ಕೆಲ ಸಂಗತಿಗಳು ಅಚ್ಚರಿ ಮತ್ತು ಹೆಮ್ಮೆ ಮೂಡಿಸಿದವು.
ಈ ನಿಲ್ದಾಣವು 4700 ಎಕರೆಗಳಷ್ಟು ವಿಸ್ತಾರ ಹೊಂದಿದೆ. ಇದು ಬೆಂಗಳೂರು ಮಧ್ಯ ಭಾಗದಿಂದ ಸುಮಾರು 4೦ ಕಿ.ಮಿ. ದೂರದಲ್ಲಿ ದೇವನಹಳ್ಳಿಯಲ್ಲಿದೆ. ಹೆಚ್.ಎ.ಎಲ್ ವಿಮಾನ ನಿಲ್ದಾಣದ ಕೊರತೆಯಿಂದ ಹೊಸದಾಗಿ ಜುಲೈ 2005ರಲ್ಲಿ ಇದರ ಕಟ್ಟುವಿಕೆ ಪ್ರಾರಂಭವಾಗಿ, ಮೇ 23, 2008ರಂದು ತನ್ನ ಕಾರ್ಯಾರಂಭ ಮಾಡಿತು. ಇತ್ತೀಚಿಗೆ ಟರ್ಮಿನಲ್ 2 ನಿರ್ಮಾಣವಾಗಿದೆ ಹಾಗೂ ಅದೀಗ ಕಾರ್ಯಾಚರಣೆಯಲ್ಲಿದೆ. ಇದು ಪ್ರಯಾಣಿಕರ ದಟ್ಟಣೆಯ ಆಧಾರದ ಮೇಲೆ ಭಾರತದ ಮೂರನೇ ಅತಿ ದೊಡ್ಡ ವಿಮಾನ ನಿಲ್ದಾಣ ಎಂಬ ಮನ್ನಣೆ ಪಡೆದಿದೆ.ಹಾಗೂ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
'ಎಕ್ಸ್ಪ್ರೆಸ್ ವೇ' ಮತ್ತು 'ಹೈಸ್ಪೀಡ್ ರೈಲ್ವೆ' ಲೈನಿನ ಯೋಜನೆಯ 'ನೀಲನಕ್ಷೆ' ತಯಾರಾಗಿದೆ. ಟ್ಯಾಕ್ಸಿ ಸೇವೆ, ಮತ್ತು ಕೆ. ಎಸ್. ಆರ್. ಟಿ. ಸಿ ಹವಾನಿಯಂತ್ರಿತ ಬಸ್‍ಗಳು ಪ್ರತಿ 15 ನಿಮಿಷಕ್ಕೆ ಒಂದರಂತೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಯಾವ ಮೂಲೆಯಿಂದಲಾದರೂ ಹೊರಟು ವಿಮಾನ ನಿಲ್ದಾಣವನ್ನು ಸುಮಾರು ಒಂದರಿಂದ ಒಂದೂವರೆ ಗಂಟೆಗಳಲ್ಲಿ ತಲುಪುವ ವ್ಯವಸ್ಥೆ ಗಮನಾರ್ಹವಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ 'ಬಿ ಐ ಎ ಎಲ್ ಸಹಾಯವಾಣಿ' ಯ ಸೌಲಭ್ಯವಿದೆ. ವಿಮಾನ ನಿಲ್ದಾಣಕ್ಕೆ ಸಂಪರ್ಕ ಮಾರ್ಗ, ಸಾರಿಗೆ ಸೌಲಭ್ಯಗಳ ವಿವರಗಳು, ಮತ್ತು ಸಾಮಾನ್ಯ ಮಾಹಿತಿಗಳನ್ನು ದೂರವಾಣಿಯ ಮೂಲಕ ಕೂಡಲೆ ಪಡೆಯ ಬಹುದು. ವಿಮಾನವೇರುವ ಮೊದಲು ನಡೆಸುವ 'ಭದ್ರತಾ ತಪಾಸಣೆಯ ವಿಧಿ' ಯಲ್ಲಿ ಪ್ರಯಾಣಿಕರು 'ಹಲವು ಕ್ಯೂ' ಗಳಲ್ಲಿ ಕಾದು ಮುಂದುವರೆಯುವ ಬದಲು, 'ಒಂದೇ ಹಂತದ ತಪಾಸಣಾ ವ್ಯವಸ್ಥೆ 'ಯನ್ನು ನಿರೂಪಿಸಲಾಗಿದೆ. 53 'ಚೆಕ್-ಇನ್ ಕೌಂಟರ್' ಗಳು, ಹಾಗೂ 18 'ಸ್ವಯಂ ತಪಾಸಣಾಯಂತ್ರ' ಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಉಪಚಾರ ಹಾಗೂ ಆರೋಗ್ಯ ಸೇವೆಗೆ ಔಷಧಾಲಯ, ಡಯಾಪರ್ ಬದಲಾವಣೆ, ಹಾಲುಕುಡಿಸುವಿಕೆ ಇತ್ಯಾದಿಗಳಿಗೆ ಪ್ರತ್ಯೇಕ ಜಾಗವಿದೆ.
ನಿಲ್ದಾಣದ ಒಳಗಡೆ ಸ್ವದೇಶಿ ಮತ್ತು ವಿದೇಶಿ ಖಾದ್ಯಗಳನ್ನು ಒಳಗೊಂಡ ಹೋಟೆಲ್ ಗಳಿವೆ. ನಮ್ಮ ಅನುಭವ ಕ್ಕಾಗಿ ಒಂದು ಕಾಫಿ ಕುಡಿದೆವು .ಕಾಫಿ ಸಾದಾರಣಾಗಿತ್ತು ಬೆಲೆ ಮಾತ್ರ ತುಸು ದುಬಾರಿ 200 ರೂಪಾಯಿಗಳು! ಎಷ್ಟೇ ಆದರೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲವೇ?
No comments:
Post a Comment