ಜನವಸತಿ ರಹಿತ ನೇತಾಜಿ ಸುಭಾಷ್ ಚಂದ್ರ ಬೋಸ್ ಐಲ್ಯಾಂಡ್.
ಈಗ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಹೊಂದಿರುವ ದ್ವೀಪಕ್ಕೆ ಸಮಾನ ಮನಸ್ಕರ ತಂಡದೊಂದಿಗೆ ಅಂಡಮಾನ್ ನ ಸೆಲ್ಯುಲಾರ್ ಜೈಲ್ ನೋಡಿದ ಮರು ದಿನ ಭೇಟಿ ನೀಡಿದೆವು.ಪೋರ್ಟ್ ಬ್ಲೇರ್ ನಿಂದ ಮಹೇಶ್ವರಿ ಎಂಬ ಕ್ರೂಸರ್ ನಲ್ಲಿ ನಮ್ಮ ತಂಡದೊಂದಿಗೆ ನೇತಾಜಿ ದ್ವೀಪದೆಡೆಗೆ ಪಯಣ ಬೆಳೆಸಿದೆವು.ನಮ್ಮ ಟೂರ್ ಗೈಡ್ ಈ ದ್ವೀಪದ ವಿಶೇಷತೆಗಳು ಮತ್ತು ಇತಿಹಾಸದ ಬಗ್ಗೆ ಹೇಳುತ್ತಾ ಹೋದ ನಮ್ಮ ಕಿವಿಗಳು ಅವನ ಮಾಹಿತಿಯನ್ನು ಕೇಳುತ್ತಾ ಕಣ್ಣುಗಳು ನಿಸರ್ಗ ಸೌಂದರ್ಯ ಸವಿಯುತ್ತಿದ್ದವು .ಆಗಾಗ್ಗೆ ನಮ್ಮ ಮೊಬೈಲ್ ನಲ್ಲಿ ಅದ್ಬುತ ಪ್ರಕೃತಿ ಸೌಂದರ್ಯ ಸೆರೆಯಾಗುತ್ತಿತ್ತು.
ಮೊದಲು ರಾಸ್ ಐಲ್ಯಾಂಡ್ ಎಂದು ಕರೆಯಲಾಗುತ್ತಿದ್ದ ಇದು ಅಂಡಮಾನ್ ದ್ವೀಪಸಮೂಹದಲ್ಲಿರುವ ಒಂದು ದ್ವೀಪವಾಗಿದೆ. ಇದು ದಕ್ಷಿಣ ಅಂಡಮಾನ್ ಆಡಳಿತ ಜಿಲ್ಲೆ , ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸೇರಿದೆ. ಈ ದ್ವೀಪವು ಕೇಂದ್ರ ಪೋರ್ಟ್ ಬ್ಲೇರ್ನಿಂದ ಪೂರ್ವಕ್ಕೆ 3 ಕಿಮೀ ದೂರದಲ್ಲಿದೆ.ಇದು ಐತಿಹಾಸಿಕ ಅವಶೇಷಗಳನ್ನು ಒಳಗೊಂಡ ಪ್ರವಾಸಿ ಆಕರ್ಷಣೆಯಾಗಿದೆ.
ರಾಸ್ ದ್ವೀಪಕ್ಕೆ ಸಮುದ್ರ ಸಮೀಕ್ಷಕ ಡೇನಿಯಲ್ ರಾಸ್ ಹೆಸರಿಡಲಾಗಿತ್ತು. ಡಿಸೆಂಬರ್ 2018 ರಲ್ಲಿ ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರಿಗೆ ಗೌರವಾರ್ಥವಾಗಿ ಇದನ್ನು ನೇತಾಜಿ ಸುಭಾಸ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.
ಈ ದ್ವೀಪವನ್ನು ಪ್ರವಾಸಿಗರು ಕಾಲ್ನಡಿಗೆಯಲ್ಲಿ ಸಾಗುತ್ತಾ ಅಲ್ಲಲ್ಲಿ ಸಿಗುವ ಜಿಂಕೆ ಮತ್ತು ನವಿಲುಗಳ ನೋಡುತ್ತಾ ಆನಂದಿಸಬಹುದು. ವೃದ್ಧರು ಮತ್ತು ಮಕ್ಕಳಿಗೆ ಎಲೆಕ್ಟ್ರಿಕ್ ಕಾರ್ ವ್ಯವಸ್ಥೆ ಇದೆ. ಒಬ್ಬರಿಗೆ 80 ರೂಪಾಯಿಗಳನ್ನು ಪಾವತಿಸಿ ಈ ಸೌಲಭ್ಯ ಪಡೆಯಬಹುದು.
ಬಜಾರ್, ಬೇಕರಿ, ಅಂಗಡಿಗಳ ಅವಶೇಷಗಳು,ನೀರಿನ ಸಂಸ್ಕರಣಾ ಘಟಕ , ಚರ್ಚ್ , ಟೆನ್ನಿಸ್ ಕೋರ್ಟ್ , ಪ್ರಿಂಟಿಂಗ್ ಪ್ರೆಸ್ , ಸೆಕ್ರೆಟರಿಯೇಟ್, ಆಸ್ಪತ್ರೆ , ಸ್ಮಶಾನ , ಈಜುಕೊಳ , ಬೃಹತ್ ಉದ್ಯಾನಗಳು ಮತ್ತು ಮುಖ್ಯ ಆಯುಕ್ತರ ನಿವಾಸ , ಸರ್ಕಾರಿ ಭವನ , ಹಳೆಯ ಅಂಡಮಾನೀಸ್ ಹೋಮ್, ಟ್ರೂಪ್ ಬ್ಯಾರಕ್ಗಳು , ಎಲ್ಲಾ ಶಿಥಿಲಾವಸ್ಥೆಯಲ್ಲಿದ್ದು, ಹಳೆಯ ಬ್ರಿಟಿಷ್ ಆಡಳಿತವನ್ನು ನೆನಪಿಸುತ್ತದೆ.
1880 ರ ದಶಕದ ಉತ್ತರಾರ್ಧದಲ್ಲಿ ರಾಸ್ ಐಲ್ಯಾಂಡ್ ಲಿಟರರಿ ಎಂಬ ಸಣ್ಣ ನಿಯತಕಾಲಿಕವನ್ನು ಆರಂಭಿಸಿದ. ಈ ಪ್ರದೇಶದ ಮೊದಲ ವಸಾಹತುಶಾಹಿ ದಿನಗಳ ಕಥೆಗಳು ಮತ್ತು ಆತ್ಮಚರಿತ್ರೆಗಳನ್ನು ಒಳಗೊಂಡ ಪ್ರಕಟಣೆ ಮಾಡಲಾಗುತ್ತಿತ್ತು. ಇವು ಇದೇ ದ್ವೀಪದ ಉತ್ತರದ ತುದಿಯಲ್ಲಿರುವ ಪ್ರಿಂಟಿಂಗ್ ಪ್ರೆಸ್ ನಲ್ಲಿ ಪ್ರಿಂಟ್ ಆಗುತ್ತಿದ್ದವು.ಇಂದು ಅದರ ಶಿಥಿಲವಾದ ಕಟ್ಟಡ ನೋಡಬಹುದು.
ದ್ವೀಪದ ಉತ್ತರದ ತುದಿಯವರೆಗೆ ಒಂದು ಮಾರ್ಗವಿದೆ, ಅಲ್ಲಿ ಹೊಸ ಕಾಂಕ್ರೀಟ್ 10 ಮೀ ಎತ್ತರದ ವೃತ್ತಾಕಾರದ ಲೈಟ್ಹೌಸ್ ಟವರ್ ಅನ್ನು 1977 ರಲ್ಲಿ ನಿರ್ಮಿಸಲಾಗಿದೆ. ತೀರದ ಕಡೆಯಿಂದ ಸುಮಾರು 50 ಮೀಟರ್ ದೂರದಲ್ಲಿರುವ ಬಂಡೆಯ ಮೇಲೆ. ಕಡಿಮೆ ಅಲೆಗಳಿರುವ ಸಂದರ್ಭದಲ್ಲಿ ಗೋಪುರವನ್ನು ತಲುಪಬಹುದು. ನಾವು ಹೋದಾಗ ಕಡಿಮೆ ಅಲೆಗಳಿದ್ದ ಪರಿಣಾಮ ಲೈಟ್ ಹೌಸ್ ತಲುಪಿ ಫೋಟೋಗಳನ್ನು ಕ್ಲಿಕ್ ಮಾಡಿಕೊಂಡೆವು. ಈ ಲೈಟ್ಹೌಸ್ನಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಬ್ಯಾಟರಿಗಳನ್ನು ಚಾರ್ಜ್ ಮಾಡಲು ಫೋಟೋ ವೋಲ್ಟಾಯಿಕ್ ಪ್ಯಾನೆಲ್ಗಳನ್ನು ಪರಿಚಯಿಸಲಾಗಿದೆ ಎಂಬ ಮಾಹಿತಿಯನ್ನು ಗೈಡ್ ನೀಡಿದನು.
ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪವು ದಟ್ಟವಾದ ಕಾಡುಗಳನ್ನು ಹೊಂದಿದೆ. ಪ್ರವಾಸಿಗರ ಹೊರತಾಗಿ ಜನವಸತಿಗೆ ಇಲ್ಲಿ ಅವಕಾಶ ಕೊಟ್ಟಿಲ್ಲ.
ದ್ವೀಪದ ಅದ್ಭುತ ಪ್ರಕೃತಿ ಸೌಂದರ್ಯ ಸವಿಯಲು,ಮಚ್ಚೆಯುಳ್ಳ ಜಿಂಕೆಗಳು ಮತ್ತು ನವಿಲುಗಳನ್ನು ನೋಡಲು ತಾಳೆ ಮತ್ತು ತೆಂಗಿನ ಮರಗಳ ಸೊಬಗು ಸವಿಯಲು ನೀವೂ ಒಮ್ಮೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪಕ್ಕೆ ಬಂದು ಬಿಡಿ.
ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529
No comments:
Post a Comment