30 October 2023

ವಿಶ್ವ ಮಿತವ್ಯಯ ದಿನ

 



ವಿಶ್ವ ಮಿತ ವ್ಯಯ ದಿನ.


ಕೊಳ್ಳುಬಾಕ ಸಂಸ್ಕೃತಿಯ ವಿರುದ್ಧವಾಗಿ ಜಾಗೃತಿ ಮೂಡಿಸಲು ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು, ಉಳಿತಾಯಕ್ಕೆ ಪ್ರೋತ್ಸಾಹ ನೀಡಲು ಜಗತ್ತಿನಾದ್ಯಂತ

ಪ್ರತಿವರ್ಷ ಅಕ್ಟೋಬರ್ 31 ರಂದು ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಒಂದು ದಿನ ಮೊದಲು ಅಂದರೆ, ಅಕ್ಟೋಬರ್ 30ರಂದು ಮಿತವ್ಯಯ ದಿನ ಆಚರಿಸಲಾಗುತ್ತದೆ. ಹೀಗಾಗಿ ಭಾರತದ ಇಂದು ಮತ್ತು ನಾಳೆ ಮಿತವ್ಯಯ ದಿನ ಎನ್ನಬಹುದು. ತಿಂಗಳ ಕೊನೆ ದಿನವಾಗಿರುವುದರಿಂದ ಸ್ಯಾಲರಿ ಆಗದೆ ಅನಿವಾರ್ಯವಾಗಿ ಈ ಎರಡು ದಿನ ಬಹುತೇಕರು ಮಿತವ್ಯಯ ಮಾಡಬಹುದು. ಆದರೆ, ಜೀವನಪೂರ್ತಿ ಮಿತವ್ಯಯ ರೀತಿ ಅನುಸರಿಸಿದರೆ ಸುಖವುಂಟು ಎನ್ನಬಹುದು.  

ಅದಕ್ಕೆ ಕವಿವಾಣಿ 

"ತಿಂಗಳ ಮೊದಲ ದಿನ ಸ್ಯಾಲರಿ

ತಿಂಗಳ ಕೊನೆಯಲ್ಲಿ ಸಾಲಾ ರಿ "

ಎಂದಿರುವುದು. 


ಹಣ ಉಳಿತಾಯ ಮಾಡುವುದು ಮತ್ತು ಹಣಕಾಸು ಭದ್ರತೆ ಹೆಚ್ಚಿಸಿಕೊಳ್ಳಲು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಮಿತವ್ಯಯ ದಿನ ಆಚರಿಸಲಾಗುತ್ತದೆ. ಇದು ಕೇವಲ ವೈಯಕ್ತಿಕ ಹಂತದಲ್ಲಿ ಮಾತ್ರವಲ್ಲ ದೇಶಗಳೂ ಹಣ ಮಿತವ್ಯಯ ಮಾಡಬೇಕು ಎನ್ನುವುದನ್ನು ಈ ದಿನ ತಿಳಿಸುತ್ತದೆ. ವಿಶ್ವ ಯುದ್ಧದ ಬಳಿಕ ಇಂತಹ ಮಿತವ್ಯಯಗಳನ್ನು ಸೂಚಿಸಲಾಗಿದೆ. ರಷ್ಯಾ-ಉಕ್ರೇನ್ ಯುದ್ದ, ಇಸ್ರೇಲ್ ಹಮಾಸ್   ಸಂಘರ್ಷದ  ಈ ಸಂದರ್ಭದಲ್ಲಿಯೂ ಹಣದ ತೊಂದರೆಗಳನ್ನು ಜಗತ್ತು ಗಮನಿಸುತ್ತಿದೆ. ಅದಕ್ಕೆ ತಕ್ಕಂತೆ ನಾವೂ ಜಾಗರೂಕತೆಯಿಂದ ಹಣವನ್ನು ಖರ್ಚು ಮಾಡಿ ಉಳಿತಾಯ ಮಾಡಬೇಕಿದೆ.  


1924ರಲ್ಲಿ  ಇಂಟರ್ನ್ಯಾಷನಲ್ ಥ್ರಿಫ್ಟ್ ಕಾಂಗ್ರೆಸ್ ಮೊದಲ ಬಾರಿಗೆ ವಿಶ್ವ ಮಿತವ್ಯಯ ದಿನ ಘೋಷಿಸಿತ್ತು. ಇಟಲಿಯ ಮಿಲನ್ನಲ್ಲಿ ಈ ದಿನವನ್ನು ಮೊದಲ ಬಾರಿಗೆ ಘೋಷಿಸಲಾಯಿತು. ಇಟಲಿಯ ಪ್ರೊಫೆಸರ್ ಫಿಲಿಪ್ಪೊ ರವಿಝಾ ಅವರು ಅಕ್ಟೋಬರ್ 31 ಅನ್ನು ವಿಶ್ವ ಮಿತವ್ಯಯ ದಿನವೆಂದು ಘೋಷಿಸಿದರು. ಜನರು ಹಣ ಉಳಿತಾಯ ಮಾಡುವಂತೆ ಮತ್ತು ಬ್ಯಾಂಕ್ಗಳ ಕುರಿತು ತಮ್ಮ ಭರವಸೆ ಹೆಚ್ಚಿಸಿಕೊಳ್ಳುವಂತೆ ಮಾಡುವ ಉದ್ದೇಶ ಈ ದಿನದ್ದಾಗಿದೆ. ವಿಶ್ವ ಯುದ್ಧದ ಬಳಿಕ ಜನರಲ್ಲಿ ಹಣ ಉಳಿತಾಯದ ಅರಿವು ಹೆಚ್ಚಿಸುವ ಸಲುವಾಗಿ ಈ ದಿನಾಚರಣೆ ಆರಂಭಿಲಾಯಿತು. ಶಾಲೆಗಳಲ್ಲಿ, ಆಫೀಸ್ಗಳಲ್ಲಿ, ಅಸೋಸಿಯೇಷನ್ಗಳಲ್ಲಿ ಜನರು ಹಣ ಉಳಿತಾಯದ ಕುರಿತು ಜಾಗೃತಿ ಮೂಡಿಸಲಾಗುತ್ತದೆ.


1984ರಲ್ಲಿ ಭಾರತದಲ್ಲಿ ಇಂದಿರಾ ಗಾಂಧಿಯವರ ಹತ್ಯೆ ಬಳಿಕ ವಿಶ್ವ ಮಿತವ್ಯಯ ದಿನವನ್ನು ಅಕ್ಟೋಬರ್ 31ರ ಬದಲು ಅಕ್ಟೋಬರ್ 30ಕ್ಕೆ ಆಚರಿಸಲಾಗುತ್ತಿದೆ.  


ವಿಶ್ವ ಮಿತವ್ಯಯ ದಿನದ ಪ್ರಮುಖ ಉದ್ದೇಶ  ಬ್ಯಾಂಕ್ನಲ್ಲಿ ಹಣ ಉಳಿತಾಯ ಮಾಡುವುದು. ಈ ಮೂಲಕ ದೇಶದಲ್ಲಿ ಹಣಕಾಸು ವ್ಯವಸ್ಥೆ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು. ಹಣವನ್ನು ಮನೆಯಲ್ಲಿ ಉಳಿತಾಯ ಮಾಡಿದರೆ ಅದು ಚಲಾವಣೆಗೊಳ್ಳುವುದಿಲ್ಲ. ಬ್ಯಾಂಕ್ನಲ್ಲಿ ಉಳಿತಾಯ ಮಾಡಿದರೆ ಆ ಹಣದ ಸರಿಯಾದ ಬಳಕೆಯಾಗುತ್ತದೆ.ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಗಳಲ್ಲಿ ನಿರಂತರವಾಗಿ ಬಡ್ಡಿಯ ಪ್ರಮಾಣ ಕಡಿಮೆಯಾಗುತ್ತಿರುವುದು ಹಾಗೂ ಬ್ಯಾಂಕುಗಳು ಅನವಶ್ಯಕ ಮತ್ತು ಹೆಚ್ಚು ಶುಲ್ಕಗಳನ್ನು ವಿಧಿಸುವ ಕ್ರಮಗಳಿಂದ ಬೇಸತ್ತು  ಜನರು ಉಳಿತಾಯದ ಕಡೆಗೆ ಮುಖ ಮಾಡದಿರುವುದು ಕಂಡು ಬಂದಿದೆ. ಇದಕ್ಕೊಂದು ಪರಿಹಾರವನ್ನು ತುರ್ತಾಗಿ ಕೈಗೊಳ್ಳಬೇಕಿದೆ. 


2023ರ  ಮಿತ ವ್ಯಯ ದಿನದ ಘೋಷಣೆ 

"ಉಳಿತಾಯದ ಮೂಲಕ ನಿಮ್ಮ ನಾಳೆಗಳನ್ನು  ಜಯಿಸಿ "

 (conquer your tomorrow by savings)  ಭವಿಷ್ಯದಲ್ಲಿ ಏನೇ ಕಷ್ಟ ಬಂದರೂ ನಮ್ಮಲ್ಲಿ ಹಣಕಾಸು ಉಳಿತಾಯವಿದ್ದರೆ ಭಯ ಕಡಿಮೆಯಾಗುತ್ತದೆ. ಭವಿಷ್ಯದಲ್ಲಿ ಕಾಯಿಲೆಗಳು, ಆರ್ಥಿಕ ಸಂಕಷ್ಟಗಳು ಉಂಟಾದರೆ ಬ್ಯಾಂಕ್ನಲ್ಲಿರುವ ನಮ್ಮ ಉಳಿತಾಯದ ಹಣವು ನೆರವಿಗೆ ಬರುತ್ತದೆ. ಹೀಗಾಗಿ, ಉಳಿತಾಯದ ಅಭ್ಯಾಸ ಇಲ್ಲದವರು ಇಂದಿನಿಂದಲೇ ಹಣ ಉಳಿತಾಯ ಆರಂಭಿಸಿ.


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925529

No comments: