29 October 2023

ಆತ್ಮ ವಿಶ್ವಾಸ ಮೂಡಿಸೋಣ...

 




ಆತ್ಮವಿಶ್ವಾಸ ಮೂಡಿಸೋಣ 


ಒಬ್ಬ ವಿದ್ಯಾರ್ಥಿ ಒಂದು ಟೆಸ್ಟ್ ನಲ್ಲಿ ಕಡಿಮೆ ಅಂಕ ಪಡೆದರೆ, ಒಬ್ಬ ನೌಕರ ಒಂದು ಟಾಸ್ಕ್ ನಲ್ಲಿ ಕಡಿಮೆ ದಕ್ಷತೆ ತೋರಿದರೆ ಸಾಮಾನ್ಯವಾಗಿ ಅವನು ಅಷ್ಟೇ ಎಂದು ಷರಾ ಬರೆದು  ಅವನ ಕೆಳಮಟ್ಟದ  ಪರ್ಪಾರ್ಮೆನ್ಸ್  ಮಾಡುವವನೆಂದು ಷರಾ ಬರೆದು ಅವನ ಹಣೆಗೆ ಕಟ್ಟಿಬಿಡುತ್ತೇವೆ.

ಎಲ್ಲಾ ವ್ಯಕ್ತಿಗಳು ಎಲ್ಲಾ ಕಾಲದಲ್ಲೂ ಒಂದೇ ರೀತಿಯ ಕೆಲಸ ಮಾಡುತ್ತಾರೆ ಎಂದರೆ ಮೂರ್ಖತನವಾದೀತು.

ಸಮಯ, ಸಂದರ್ಭ, ಒತ್ತಡ, ಪರಿಸರ, ಪ್ರೇರಣೆ ಹೀಗೆ ನಾನಾ ಅಂಶಗಳು ನಮ್ಮ ಕಾರ್ಯ ವೈಖರಿಯನ್ನು ನಿರ್ಧಾರ ಮಾಡುತ್ತವೆ.


ವರ್ಷಗಟ್ಟಲೆ ಶ್ರಮಿಸಿ ಬಲ್ಬ್ ಕಂಡುಹಿಡಿದಿದ್ದ ಥಾಮಸ್ ಅಲ್ವಾ ಎಡಿಸನ್. ಅದನ್ನು ಹೋಲ್ಡರ್ ಗೆ ಸಿಕ್ಕಿಸಬೇಕಿತ್ತು. ಹೋಲ್ಡರ್ ಇದ್ದುದು ಮಹಡಿಯ ಮೇಲೆ. "ಹೋಗಿ ಅದಕ್ಕೆ ಸಿಕ್ಕಿಸಿ ಬಾ" ಎಂದು ತನ್ನ ಸಹಾಯಕನೊಬ್ಬನಿಗೆ ಹೇಳಿದ ಎಡಿಸನ್. ಹುಡುಗ ಎಷ್ಟು ನರ್ವಸ್ ಆಗಿದ್ದನೆಂದರೆ ಮೆಟ್ಟಿಲು ಹತ್ತುವುದರೊಳಗಾಗಿ ಅವನ ಕೈ ನಡುಗಿ ಆಗಷ್ಟೇ ಕಷ್ಟಪಟ್ಟು ತಯಾರಿಸಿದ ಬಲ್ಬ್ ಬಿದ್ದು ಒಡೆದುಹೋಯಿತು.

ಎಡಿಸನ್ ಸಿಟ್ಟಾಗಲಿಲ್ಲ. ಮತ್ತೊಂದು ಬಲ್ಬ್ ತಯಾರಿಸಿದ. ಅದಕ್ಕೆ ಪೂರ್ತಿ ಇಪ್ಪತ್ನಾಲ್ಕು ತಾಸು ಹಿಡಿದವು. ಅವನ ಟೀಮಿನ ಅಷ್ಟೂ ಸಹಾಯಕರು ಅದಕ್ಕಾಗಿ ದುಡಿದಿದ್ದರು. ಎಲ್ಲಾ ಆದ ಮೇಲೆ ಮತ್ತೆ ಅದೇ ಹುಡುಗನನ್ನು ಕರೆದು "ಈ ಸಲವೂ ನೀನೇ ಸಿಕ್ಕಿಸಿ ಬಾ" ಎಂದ. ಉಳಿದ ಸಹಾಯಕರು ಇರಸು ಮುರಿಸಿಗೆ ಒಳಗಾದರು. ಈ ಹುಡುಗ ಮತ್ತೆ ಬಲ್ಬ್ ಒಡೆದರೆ, ಅದನ್ನು ತಯಾರಿಸಲು ಮತ್ತೆ ಇಪ್ಪತ್ನಾಲ್ಕು ಗಂಟೆ ಬೇಕು. ಎಡಿಸನ್ ಯಾಕಿಂತ ರಿಸ್ಕು ತೆಗೆದುಕೊಳ್ಳುತ್ತಿದ್ದಾನೆ?

ಅದಕ್ಕೆ ಎಡಿಸನ್ ಹೇಳಿದ " ನೋಡ್ರೋ, ಅಂಥ ಸಾವಿರ ಬಲ್ಬ್ ಗಳನ್ನು ಸಾವಿರ ದಿನ ಕೆಲಸ ಮಾಡಿ ತಯಾರಿಸಿ ಬಿಡಬಹುದು. ಆದರೆ ಆ ಹುಡುಗನ ಆತ್ಮವಿಶ್ವಾಸ ನಾಶವಾಗಿ ಬಿಟ್ಟರೆ ಅದನ್ನು ಮತ್ತೆ ತುಂಬಿ ಕೊಡುವುದು ಸುಲಭವಲ್ಲ!"

ನಾವೂ ಕೂಡಾ ದಿನನಿತ್ಯದ ಜೀವನದಲ್ಲಿ ಎಡಿಸನ್ ಶಿಷ್ಯ ನಂತಹ ಸಾವಿರಾರು ಜನರನ್ನು ನೋಡುತ್ತೇವೆ.ತಪ್ಪೆಸಗಿದರೆ ಮುಗಿಯಿತು ಆಳಿಗೊಂದು ಕಲ್ಲು ಬೀಸಿ ಸಹಸ್ರ ನಾಮಾರ್ಚನೆ ಮಾಡಿ ಮುಂದೆ ಆ ವ್ಯಕ್ತಿ ಆ ಕೆಲಸಕ್ಕೆ ಕೈ ಹಾಕದಂತೆ ಮಾಡಿಬಿಡುತ್ತೇವೆ. ಯಾರಿಗೆ ಆಗಲಿ ಯಶಸ್ಸಿನಲ್ಲಿ ಅವರ ಜೊತೆಗಿರದಿದ್ದರೂ  ತಪ್ಪು ಮಾಡಿದಾಗ ಮತ್ತು ಜೀವನದಲ್ಲಿ ಸೋತಾಗ ಅವರ ಬೆನ್ನಿಗೆ ನಿಲ್ಲೋಣ ನಾಲ್ಕು ಆತ್ಮವಿಶ್ವಾಸವನ್ನು ವೃದ್ಧಿಸುವ ಮಾತುಗಳನ್ನಾಡೋಣ ಯಾರಿಗೆ ಗೊತ್ತು ಆ ವ್ಯಕ್ತಿ ಮುಂದೆ ಅದ್ಭುತವಾದ ಸಾಧನೆ ಮಾಡಬಹುದು! 


ಸಿಹಿಜೀವಿ ವೆಂಕಟೇಶ್ವರ

ತುಮಕೂರು

9900925429


No comments: