08 October 2023

ಸೆಲ್ಯುಲಾರ್ ಜೈಲ್...ಅಂಡಮಾನ್..

 




ಪ್ರವಾಸ ೪.
ಅಂಡಮಾನ್ ನ  ಸೆಲ್ಯುಲಾರ್ ಜೈಲ್ 

"ಇದು ಬರೀ ಜೈಲಲ್ಲ ಸಾವಿರಾರು ದೇಶಭಕ್ತ ಆತ್ಮಗಳಿದ್ದ ಪುಣ್ಯ ತಾಣ. ಇದೊಂದು ದೇವಾಲಯಕ್ಕೂ ಮಿಗಿಲಾದ ಸ್ಥಳ.ಇದರ ಬಗ್ಗೆ ನಿಮಗೆ ಹೇಳುತ್ತಿರುವ ನಾನೇ ಧನ್ಯ. ಇಂತಹ ಸ್ಮಾರಕ ನೋಡಲು ಬಂದ ನೀವುಗಳೂ ಸಹ ಪುಣ್ಯವಂತರು" ಎಂದು ಆಂಗ್ಲ ಭಾಷೆಯಲ್ಲಿ ಗೈಡ್ ಹೇಳುವಾಗ ನಮ್ಮ ಸಹಯಾತ್ರಿಕರು ಭಾವುಕರಾದರು...
ನಿಜಕ್ಕೂ ಇಂತಹ ಸ್ಮಾರಕ ನೋಡಲು ಬಂದ ನಾವೇ  ಧನ್ಯರು ಎಂದರು.ನನ್ನ ಮನಸ್ಸೂ ಅದನ್ನೇ ಹೇಳಿತು.ಬ್ರಿಟಿಷರ ಕ್ರೌರ್ಯ, ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿದ್ದ ಶಿಕ್ಷೆಗಳನ್ನು ಕೇಳಿದರೇನೇ ಭಯವಾಗುತ್ತದೆ. ನಮ್ಮ ದೇಶಭಕ್ತರು ಅದೆಷ್ಟು ಕ್ರೂರವಾದ  ಹಿಂಸೆ ಅನುಭವಿಸಿ ಜೀವ ತ್ಯಜಿಸಿರಬಹುದು ಎಂದು ಬೇಸರವಾಯಿತು.

ಭಾರತದಲ್ಲಿನ ವಸಾಹತುಶಾಹಿ ಆಡಳಿತದ ಕರಾಳ ಕುರುಹುವಾಗಿ ಈ ಸೆಲ್ಯುಲಾರ್ ಜೈಲು   ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. 
  ಏಳು ದಿನಗಳ   ದ್ವೀಪ ಪ್ರವಾಸಕ್ಕೆ ಹೊರಟ ನಾವು ಮೊದಲು ನೋಡಿದ್ದು ಅಂಡಮಾನದ ಸೆಲ್ಯುಲಾರ್ ಜೈಲನ್ನು.ನಮಗೆ ನಿಗದಿತ ಗೈಡ್ ಈ ರಾಷ್ಟ್ರೀಯ ಸ್ಮಾರಕದ ಬಗ್ಗೆ ಮಾಹಿತಿ ನೀಡುತ್ತಾ ಸಾಗಿದರು.ನಾವು ಕೇಳುತ್ತಾ ಅಲ್ಲಲ್ಲಿ ನಿಂತು ಪೋಟೋಗಳ ತೆಗೆಸಿಕೊಳ್ಳುತ್ತಾ ನಡೆದೆವು.
ಈ ಸೆರೆಮನೆ ಸಂಕೀರ್ಣವನ್ನು 1896 ಮತ್ತು 1906 ರ ಮಧ್ಯ ನಿರ್ಮಿಸಲಾಗಿದೆ.ಬ್ರಿಟಿಷರು   ಅಂಡಮಾನ್ ನಿಕೋಬಾರ್   ದ್ವೀಪಗಳ ಜಾಗಯನ್ನು ಭಾರತದ ಪ್ರಥಮ ಸ್ವಾತಂತ್ರ್ಯದ  ನಂತರ ಸೆರೆಮನೆಯಾಗಿ ಉಪಯೋಗಿಸಲಾರಂಭಿಸಿದರು.
ಬ್ರಿಟಿಶರು  ಸಾವಿರಾರು ಜನರನ್ನು ಸಾವಿನ ಬಾಯಿಗೆ ನೂಕಿದರು‌.ಕೆಲವರನ್ನು ಸಿಕ್ಕ ಸಿಕ್ಕಲ್ಲಿ ಮರಗಳಿಗೆ ನೇಣು ಹಾಕಿದರು. ತೋಪುಗಳ ಬಾಯಿಗೆ ಕಟ್ಟಿ ಹಲವರನ್ನು ಉಡಾಯಿಸಿದರು. ಇನ್ನೂ ಕೆಲವರು ಈ  ದ್ವೀಪದಲ್ಲಿರುವ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದವರು ತಮ್ಮ ಕುಟುಂಬದಿಂದ ದೂರಾಗಿ ದೇಶದಿಂದಲೂ ದೂರಾಗಿರುತ್ತಿದ್ದರು. ಸುಮಾರು 200 ದಂಗೆಕೋರರನ್ನು ಜೈಲರ್ ಡೇವಿಡ್ ಬ್ಯಾರಿ ಮತ್ತು ಜೇಮ್ಸ್ ಪ್ಯಾಟಿಸನ್ ವಾಕರ್ ಇವರ ವಶಕ್ಕೆ ನೀಡಿ ಇವರನ್ನೆಲ್ಲಾ ದ್ವೀಪಗಳಿಗೆ ಸಾಗಿಸಲಾಗಿತ್ತು. 
ಅವರನ್ನು ಪ್ರಮುಖ ಕೇಂದ್ರಸ್ಥಾನದಿಂದ ದೂರವಿಡುವುದಲ್ಲದೇ ಅವರನ್ನು ಸರಪಳಿಯಿಂದ ಬಂಧಿಸಿ ಕಟ್ಟಡ ರಚನೆ,ಸೆರೆಮನೆಗಳ ನಿರ್ಮಾಣ ಮತ್ತು ಬಂದರು ಸ್ಥಳದ ಕಾವಲಿಗೆ ಬಳಸಲಾಗುತ್ತಿತ್ತು. ಈ ಕಾರ್ಯಾಚರಣೆ ಅವಧಿಯಲ್ಲಿ ಹಲವರು ಮೃತಪಟ್ಟರು. ಎಂದು ನಮ್ಮ ಗೈಡ್ ಹೇಳುವಾಗ ನಮ್ಮ ಮನಸ್ಸು ಭಾರವಾಯಿತು.ಗೈಡ್ ಮುಂದುವರೆಸಿದನು.
 ಇದರ ಮೂಲ ಕಟ್ಟಡವು ಕಡುಗೆಂಪಿನ ಇಟ್ಟಿಗೆಯದ್ದಾಗಿತ್ತು. ಕಟ್ಟಡ ನಿರ್ಮಾಣಕ್ಕೆ ಬೇಕಾದ ಇಟ್ಟಿಗೆಗಳನ್ನು ಬರ್ಮಾದಿಂದ ತರಲಾಗಿತ್ತು.
ಕಟ್ಟಡಕ್ಕೆ ಏಳು ರೆಕ್ಕೆಗಳಂತೆ ಕಮಾನುಗಳಿವೆ.ಮಧ್ಯದ ಗೋಪುರವು ಅದರ ಸಮತೋಲನ ಮಾಡಿದಂತೆ ಕಾಣಿಸುತ್ತದೆ.ಅಲ್ಲಿನ ಗೃಹರಕ್ಷಕ ದಳದವರು ಕೈದಿಗಳ ಮೇಲೆ ಸದಾ ಕಣ್ಣಿಡಲೂ ಸಹ ಇದು ನೆರವಾಗುತ್ತಿತ್ತು. ಈ ರೆಕ್ಕೆಗಳ ಆಕಾರದ ಅಂಚುಗಳು ಗೋಪುರದ ಮೇಲ್ಭಾಗದಲ್ಲಿ ಸಾಲಿನಂತೆ ಬೈಸಿಕಲ್ ಚಕ್ರಕ್ಕಿರುವ ಸ್ಪೋಕ್ಸ್ ನಂತೆ  ಕಾಣುತ್ತಿದ್ದವು. ದೊಡ್ಡದಾದ ಗಂಟೆಯೊಂದನ್ನು ಗೋಪುರದಲ್ಲಿಡಲಾಗಿತ್ತು,ಯಾವಾಗಲಾದರೂ ತುರ್ತು ಸಂದರ್ಭ ಬಂದಾಗ ಸಂಭಂಧಿಸಿದವರನ್ನು ಎಚ್ಚರಿಸಲು ಅನುಕೂಲವಾಗುತ್ತಿತ್ತು.
ಪ್ರತಿ ರೆಕ್ಕೆಯ ಅಂಚಿನಲ್ಲಿ ಪೂರ್ಣಗೊಂಡ ಭಾಗದಲ್ಲಿ ಮೂರು ಮಹಡಿಯ ಅಂಕಣಗಳಿದ್ದವು. ಒಟ್ಟು 698 ಸೆಲ್ಯುಲಾರ್ ಜೈಲ್ ಕೋಣೆಗಳ ರಚನೆಯಾಗಿದ್ದವು.  ಪ್ರತಿ ಸೆಲ್  15x8 ಅಡಿ ಉದ್ದದ ಈ ಕೊಠಡಿಗಳಿಗೆ ಮೂರು ಮೀಟರ್ ಎತ್ತರದಲ್ಲಿ ಗಾಳಿ ಬೆಳಕಿಗೊಂದು ಕಿಂಡಿಯಿತ್ತು. ಎಂದು ವಿವರಿಸುವಾಗ ನಾವೂ ಆ ಕೋಣೆಯ ಒಳ ಹೊಕ್ಕು ವೀಕ್ಷಿಸಿದೆವು.
 ಯಾವುದೇ ಕೈದಿಯು ಇನ್ನೊಬ್ಬನೊಂದಿಗೆ ಯಾವುದೇ ರೀತಿಯ ಸಂವಹನ ಅಥವಾ ಸಂಪರ್ಕ ಮಾಡಬಾರದೆಂಬ ಉದ್ದೇಶದಿಂದ ಇದನ್ನು ಸೆಲ್  ಮಾದರಿಯಲ್ಲಿ ನಿರ್ಮಿಸಲಾಗಿತ್ತು. ಅವರೆಲ್ಲರನ್ನೂ ಒಂಟಿಯಾಗಿ ಏಕಾಂಗಿತನದಲ್ಲೇ ಇರುವಂತೆ ನೋಡಿಕೊಳ್ಳಲಾಗುತ್ತಿತ್ತು.

ಏಕಾಂಗಿತನದ ಬಂಧನದಿಂದ ಸ್ವಾತಂತ್ರ್ಯ ಹೋರಾಟಗಾರರು  ಮತ್ತು ರಾಜಕೀಯ ನಾಯಕರ ನಡುವೆ ಸಂಪರ್ಕ ಬೆಳೆಯಬಾರದೆಂದು ಈ ವ್ಯವಸ್ಥೆ ಮಾಡಲಾಗಿತ್ತು. ಅಂಡಮಾ ನ್ ದ್ವೀಪವು ಬ್ರಿಟಿಷ್ ಸರ್ಕಾರದ ಉದ್ದೇಶ ಸಾರ್ಥಕಕ್ಕೆ ಅನುಕೂಲಕರ ವಾತಾವರಣ ಕಲ್ಪಿಸಿತ್ತು.
ಸೆಲ್ಯುಲರ್ ಜೈಲಿನಲ್ಲಿದ್ದ ಹೆಸರಾಂತ ಹೋರಾಟಗಾರರೆಂದರೆ ಡಾ. ದಿವಾನ್ ಸಿಂಗ್ ಕಾಲೆಪಾನಿ,ಮೌಲಾನಾ ಫಜ್ಲ್-ಇ-ಹಕ್ ಖೈರಾಬಾದಿ,ಯೋಗೇಂದ್ರ ಶುಕ್ಲಾ, ಬಟುಕೇಶ್ವರ್ ದತ್ತ್,ಮೌಲಾನಾ ಅಹ್ಮದುಲ್ಲಾ, ಮೊವ್ಲಿ ಅಬ್ದುಲ್ ರಹೀಮ್ ಸಾದಿಕ್ ಪುರಿ,ಬಾಬುರಾವ್ ಸಾವರ್ಕರ್,ವಿನಾಯಕ ದಾಮೋದರ ಸಾವರ್ಕರ್, ಭಾಯಿ ಪರ್ಮಾನಂದ,ವಿ.ಒ.ಚಿದಂಬರಮ್ ಪಿಳ್ಳೈ,ಸುಬ್ರಮಣ್ಯಂ ಶಿವ,ಸೋಹನ್ ಸಿಂಗ್,ವಾಮನ್ ರಾವ್ ಜೋಶಿ ಮತ್ತು ನಂದ್ ಗೋಪಾಲ್ ಪ್ರಮುಖರು.
ಎರಡನೇ ಮಹಾಯುದ್ಧದ ಕಾಲದಲ್ಲಿ ಈ ದ್ವೀಪ ಜಪಾನ್ ನ ವಶವಾಯಿತು.
ಸುಭಾಷ್ ಚಂದ್ರ ಬೋಸ್ ಅವರು ಕೂಡಾ ಈ  ದ್ವೀಪಕ್ಕೆ ಭೇಟಿ ನೀಡಿದ್ದರು 
ಜಪಾನಿಯರ ಕಾಲದಲ್ಲಿ  ಸೆಲ್ಯುಲಾರ್ ಜೈಲಿನ  ಏಳು ರೆಕ್ಕೆ ಗೋಪುರಗಳಲ್ಲಿ ಎರಡನ್ನು ನಾಶಗೊಳಿಸಲಾಯಿತು.
ಮತ್ತೆ 1945ರಲ್ಲಿ ಈ ದ್ವೀಪದ  ಬ್ರಿಟಿಷರು  ನಿಯಂತ್ರಣ ಪಡೆದರು.ಸ್ವಾತಂತ್ರಾ ನಂತರ ಎಲ್ಲಾ ಕೈದಿಗಳ ಬಿಡುಗಡೆಯಾಯಿತು. ಅದರೊಂದಿಗೆ ದೇಶಭಕ್ತರ ಹಿಂಸೆಗೆ ಸಾಕ್ಷಿಯಾಗಿದ್ದ  ಪ್ರತಿ ಸೆಲ್ಯುಲಾರ್ ಕೋಣೆಗಳು ನಿಟ್ಟುಸಿರು ಬಿಟ್ಟವು.ನಂತರ
ಗೋಬಿಂದ್ ವಲ್ಲಭ್ ಪಂತ್ ಆಸ್ಪತ್ರೆಯನ್ನು ಸೆಲ್ಯುಲರ್ ಜೈಲು ಆವರಣದಲ್ಲಿ 1963ರಲ್ಲಿ ಆರಂಭಿಸಲಾಯಿತು. ಸದ್ಯ ಇದೀಗ 500ಹಾಸಿಗೆಗಳುಳ್ಳ ಆಸ್ಪತ್ರೆಯಾಗಿದ್ದು ಸುಮಾರು 40 ವೈದ್ಯರು ಸ್ಥಳೀಯ ಜನರ ಆರೋಗ್ಯ ರಕ್ಷಣೆ ಮಾಡುವಲ್ಲಿ ನಿರತರಾಗಿದ್ದಾರೆ. 
 ಸೆಲ್ಯುಲಾರ್ ಜೈಲು ನಿರ್ಮಾಣದ ಶತಮಾನೋತ್ಸವವನ್ನು  2006 ರಲ್ಲಿ ಆಚರಿಸಲಾಯಿತು.ಮತ್ತು  ಸೆಲ್ಯುಲಾರ್ ಜೈಲನ್ನು ರಾಷ್ಟ್ರೀಯ ಸ್ಮಾರಕವಾಗಿ ಸರ್ಕಾರ ಘೋಷಿಸಿತು.ಅಂದು  ಹಲವು ಕೈದಿಗಳನ್ನು ಭಾರತ ಸರ್ಕಾರ ಸನ್ಮಾಸಿತು.ಎಂದು ಹೇಳುತ್ತಾ ಸಂಜೆ ಇಲ್ಲಿ ಸೌಂಡ್ ಅಂಡ್ ಲೈಟ್ ಶೋ ಇದೆ ನೋಡಲು ಮರೆಯದಿರಿ ಎಂದು ಹೇಳುತ್ತಾ ಗೈಡ್ ಹೊರಟರು. ನಾವೆಲ್ಲರೂ ಇಂತಹ ಭವ್ಯ ಸ್ಮಾರಕ ನೋಡಿದ ಸಾರ್ಥಕ ಭಾವದಿಂದ ಸೆಲ್ಯುಲಾರ್ ಜೈಲಿನಿಂದ ಹೊರನಡೆದೆವು.
ಕಾಲಾಪಾನಿ 
ಕರಿನೀರಿನ ಶಿಕ್ಷೆಯ ಜೈಲ್ ಎಂಬ ನಾಮಾಂಕಿತ ಈ ರಾಷ್ಟ್ರೀಯ ಸ್ಮಾರಕವನ್ನು ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕು....


*ಸಿಹಿಜೀವಿ ವೆಂಕಟೇಶ್ವರ*
ತುಮಕೂರು
9900925529

No comments: