19 October 2023

ಅಂಡಮಾನ್ ನ ವೀರ್ ಸಾವರ್ಕರ್ ವಿಮಾನ ನಿಲ್ದಾಣ....

 


ಭಾಗ 7

ವೀರ ಸಾವರ್ಕರ್ ವಿಮಾನ ನಿಲ್ದಾಣ...

ಅಂದು ಬೆಳಿಗ್ಗೆ ನನ್ನ ಜೀವನದ ಎರಡನೇ ವಿಮಾನ ಯಾನಕ್ಕೆ ಸಿದ್ದತೆ ಮಾಡಿಕೊಂಡು ಬೆಳಿಗ್ಗೆ ಏಳಕ್ಕೆ ನಿಲ್ದಾಣ ಪ್ರವೇಶಿಸಿ , ಬೋರ್ಡಿಂಗ್ ಪಾಸ್ ತೆಗೆದುಕೊಂಡು ನಮ್ಮ ಲಗೇಜ್ ಗಳನ್ನು ಲಗೇಜ್ ಕೌಂಟರ್ ನಲ್ಲಿ ನೀಡಿ   ಚೆಕ್ ಇನ್ ಆಗಿ ಇನ್ನೂ ಸಮಯ ಇದ್ದದ್ದರಿಂದ ನಿಲ್ದಾಣದ ಪುಸ್ತಕದ ಅಂಗಡಿ, ಕಾಫಿ ಶಾಪ್, ಇತ್ಯಾದಿ ನೋಡಲು ಒಂದು ರೌಂಡ್ ಹಾಕಿದೆ.
ಚೆನ್ನೈ ನ ಅಣ್ಣ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 8 .10 ಕ್ಕೆ ಹೊರಟ ನಾವು ವಿಮಾನದಲ್ಲಿ ಎರ್ ಇಂಡಿಯಾ ದವರು ನೀಡಿದ ಬೆಳಗಿನ ಉಪಹಾರ  ಸೇವಿಸಿದೆವು. ಉಪ್ಪಿಟ್ಟು ,ಇಡ್ಲಿ,  ಚಟ್ನಿ, ಸಾಂಬಾರ್, ಬನ್, ಬೆಣ್ಣೆ ಎಲ್ಲಾ ರುಚಿಕರವಾಗಿತ್ತು. ವಿಮಾನದಲ್ಲಿ ಅಂಡಮಾನ್ ನ ಟ್ರಾವೆಲ್ ಏಜೆಂಟ್ ಆದ ತಿರುಪತಿ ರವರ ಪರಿಚಯವಾಯಿತು. ಇಂಗ್ಲಿಷ್ ನಲ್ಲಿ ನಮ್ಮ ಸಂಭಾಷಣೆ ಸಾಗಿತ್ತು, ಅವರ ವೃತ್ತಿ, ಪ್ರವಾಸ, ಅಂಡಮಾನ್ ವಿಶೇಷತೆ ,ಕೃಷಿ ರಾಷ್ಟ್ರದ ಮತ್ತು ಅಂತರರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚೆ ಮುಂದುವರೆಯಿತು. ಅಂಡಮಾನ್ ನಲ್ಲಿ ಸಹಾಯ ಬೇಕಾದರೆ ಕರೆ ಮಾಡಲು ಪೋನ್ ನಂಬರ್ ಸಹ ನೀಡಿದರು.
2 ಗಂಟೆಗಳ ವಿಮಾನ ಯಾನದ ಬಳಿಕ ವಿಮಾನ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಯಿತು.
ವಿಮಾನ ಇಳಿಯುವಾಗ 65 ವರ್ಷಗಳ ನನ್ನ ಸಹಯಾನಿ "ಎಲ್ಲಾ ಸರಿ ಈ ಏರ್ ಇಂಡಿಯಾ ದವರು ಗಗನ ಸಖಿ ಯವರ ಬದಲಾಗಿ ಗಗನ ಸಖರನ್ನು ಕಳಿಸಿದ್ದು ಯಾಕೋ ನನಗೆ ಇಷ್ಟ ಆಗಲಿಲ್ಲ " ಎಂದು ಗೊನಗಿದರು!
ವಿಮಾನ ಇಳಿದು ಟರ್ಮಿನಲ್ ತಲುಪುವಾಗ ಆ ವಿಮಾನ ನಿಲ್ದಾಣದ ಬಗ್ಗೆ ತಿರುಪತಿ ರವರು ಮಾಹಿತಿ ನೀಡಿದರು.

 ಪೋರ್ಟ್ ಬ್ಲೇರ್ನ ದಕ್ಷಿಣಕ್ಕೆ 2 ಕಿಮೀ  ದೂರದಲ್ಲಿರುವ ನಿಲ್ದಾಣವೇ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮೊದಲು ಇದು ದೇಶೀಯ ವಿಮಾನ ನಿಲ್ದಾಣವಾಗಿದ್ದು   "ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣ" ಎಂದು ಕರೆಯಲ್ಪಡುತ್ತಿತ್ತು. ಇದನ್ನು 2002 ರಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ 11 ವರ್ಷಗಳ ಕಾಲ ನಗರದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಲಾಗಿದ್ದ ವಿನಾಯಕ ದಾಮೋದರ್ ಸಾವರ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಲಾಯಿತು.  

ಹಳೆಯ ಟರ್ಮಿನಲ್ 400 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ. ಇದು 6,100 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ. ಇದು ಏರೋಬ್ರಿಡ್ಜ್‌ಗಳಿಲ್ಲದ ಎರಡು ಗೇಟ್‌ಗಳನ್ನು ಹೊಂದಿದೆ . ಟರ್ಮಿನಲ್‌ನಿಂದ ಏಪ್ರನ್‌ನಲ್ಲಿ ನಿಲುಗಡೆ ಮಾಡಿರುವ ವಿಮಾನಕ್ಕೆ ಸಾರಿಗೆಯನ್ನು ಒದಗಿಸಲು ಬಸ್‌ಗಳನ್ನು ಬಳಸಲಾಗುತ್ತದೆ.
ಎಡಭಾಗದಲ್ಲಿ ಹಳೆಯ ಟರ್ಮಿನಲ್ ಜೊತೆಗೆ ಟರ್ಮಿನಲ್ 2 ನಿರ್ಮಾಣ ಮಾಡಲಾಗಿದೆ.

ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದಾಗಿ 40,837 ಚ.ಮೀ.  ವ್ಯಾಪ್ತಿಯಲ್ಲಿ   707 ಕೋಟಿ   ರೂಪಾಯಿ ವೆಚ್ಚದಲ್ಲಿ ಪ್ರಯಾಣಿಕರ ಟರ್ಮಿನಲ್ 2019 ರಲ್ಲಿ ನಿರ್ಮಾಣವನ್ನು ಪ್ರಾರಂಭಿಸಿತು. ಇದು ಮೂರು ಮಹಡಿಗಳನ್ನು ಹೊಂದಿದೆ-ಒಂದು ಆಗಮನಕ್ಕೆ, ಎರಡನೆಯದು ನಿರ್ಗಮನಕ್ಕೆ ಮತ್ತು ಮೂರನೆಯದು ಕಾಯಲು. ಟರ್ಮಿನಲ್ ಒಳಗೆ, 28 ಚೆಕ್-ಇನ್ ಕೌಂಟರ್‌ಗಳು, ನಾಲ್ಕು ಕನ್ವೇಯರ್ ಬೆಲ್ಟ್‌ಗಳು ಮತ್ತು ಮೂರು ಏರೋಬ್ರಿಡ್ಜ್‌ಗಳಿವೆ. ಇದು ಪೀಕ್ ಅವರ್‌ಗಳಲ್ಲಿ 1,200  ಪ್ರಯಾಣಿಕರನ್ನು ,600 ದೇಶೀಯ ಮತ್ತು 600 ಅಂತರರಾಷ್ಟ್ರೀಯ  ನಿಭಾಯಿಸಲು ಸಾಧ್ಯವಾಗುತ್ತದೆ ಮತ್ತು ವರ್ಷಕ್ಕೆ 5 ಮಿಲಿಯನ್ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ.  ಇದು ಜೂನ್ 2023 ರಲ್ಲಿ ಪೂರ್ಣಗೊಂಡಿತು ಮತ್ತು 18 ಜುಲೈ 2023 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಉದ್ಘಾಟಿಸಿದರು.
ಉದ್ಘಾಟನೆಯಾದ ಮೂರು ತಿಂಗಳ ಬಳಿಕ ನೋಡಿದ ಈ ನಿಲ್ದಾಣದ ವಿನ್ಯಾಸ ಮತ್ತು ನೋಟ ನಯನ ಮನೋಹರವಾಗಿದೆ. ಪೋಟೋ ತೆಗೆದುಕೊಳ್ಳಲು ಮನಸ್ಸಾದರೂ ಭದ್ರತಾ ಕಾರಣದಿಂದ ಅಧಿಕಾರಿಗಳ ಕಟ್ಟು ನಿಟ್ಟಿನ ನಿರಾಕರಣೆಯಿಂದ ಅವರ ಅಪ್ಪಣೆ ಪಡೆದು ಕೆಲ ಪೋಟೋ ತೆಗೆದುಕೊಂಡು ಹೊರಬಂದ ನಮ್ಮನ್ನು ಸಾವರ್ಕರ್ ರವರ ಕಂಚಿನ ಪುತ್ಥಳಿ ಸ್ವಾಗತಿಸಿತು ಅದರ ಮುಂದೆ ನಿಂತು ಪೋಟೋ ಕ್ಲಕ್ಕಿಸಿಕೊಂಡ ನಮ್ಮನ್ನು ನಮ್ಮ ಟ್ರಾವೆಲ್ ಏಜೆನ್ಸಿಯ ಪ್ರಕಾಶ್ ರವರು ಸ್ವಾಗತಿಸಿ ಎನ್ ಕೆ ಲಾಡ್ಜ್ ಗೆ ಕರೆದುಕೊಂಡುಹೋದರು...

ಮುಂದುವರೆಯುತ್ತದೆ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529





No comments: