24 October 2023

ಚಾರಣ ಪ್ರಿಯರ ಸ್ವರ್ಗ ಸಾವನದುರ್ಗ...

 


ಚಾರಣ ಪ್ರಿಯರ ಸ್ವರ್ಗ  ಸಾವನದುರ್ಗ

ಪರಿಸರ ಪ್ರಿಯರನ್ನು ಮತ್ತು ಚಾರಣ ಪ್ರಿಯರನ್ನು ಕೈ ಬೀಸಿ ಕರೆವ ತಾಣವಾದ ಸಾವನದುರ್ಗಕ್ಕೆ ಸಹೋದ್ಯೋಗಿಗಳ ಜೊತೆಗೂಡಿ ಕಳೆದ ತಿಂಗಳು ಭೇಟಿ ನೀಡಿದ್ದೆವು. ಮಾಗಡಿ ದಾಟಿದ ಕೂಡಲೇ ಕಾಡಿನ ಮರಗಳು ನಮ್ಮನ್ನು ಸ್ವಾಗತಿಸಿ ತಂಪಾದ ಗಾಳಿಯನ್ನು ಸೂಸುತ್ತವೆ. ಮರಗಿಡಗಳ ಸೌಂದರ್ಯವನ್ನು  ಸವಿಯುತ್ತಾ ದಾರಿ ಸಾಗಿದ್ದೇ ಗೊತ್ತಾಗುವುದಿಲ್ಲ. "ಅಗೋ ನೋಡಿ ಅದೇ ಸಾವನ ದುರ್ಗ" ಎಂಬ ಸಹೋದ್ಯೋಗಿಗಳ ಉದ್ಘಾರ ಕೇಳಿದಾಗ ಕಾರ್ ಸ್ಲೋ ಮಾಡುತ್ತಾ ಎಡಕ್ಕೆ ನೋಡಿದಾಗ ಕಂಡ ಅದ್ಭುತ ದೃಶ್ಯ ಕಾವ್ಯ! ಬೃಹತ್ ಬಂಡೆಯ ದುರ್ಗ ಅದೇ ಸಾವನ ದುರ್ಗ.
ಏಷ್ಯಾ ಖಂಡದಲ್ಲೇ ಸಾವನ ದುರ್ಗದ ಬೆಟ್ಟ ಅತೀ ದೊಡ್ಡ ನೈಸರ್ಗಿಕ ಏಕಶಿಲಾ ರಚನೆಯಾಗಿದ್ದರೆ, ಮಧುಗಿರಿಯ ಬೆಟ್ಟ ಏಷ್ಯಾದ ಎರಡನೇ ಅತೀ ದೊಡ್ಡ ಏಕಶಿಲಾ ಬೆಟ್ಟವೆಂದು ಖ್ಯಾತವಾಗಿದೆ. ಸಾವನ ದುರ್ಗ ಬೆಟ್ಟ 1226 ಮೀಟರ್ ಎತ್ತರವಿದೆ. ಇಷ್ಟೇ ಅಲ್ಲದೆ ವೈಜ್ಞಾನಿಕವಾಗಿ ದಖನ್ ಪ್ರಸ್ಥ ಭೂಮಿಯಲ್ಲಿ ಮುಖ್ಯ ಭಾಗವಾಗಿದೆ. ಬೆಟ್ಟದ ಮೇಲೆ ಸುರಿದ ಮಳೆಯೆಲ್ಲ ಅರ್ಕಾವತಿ ನದಿಗೆ ಸೇರಲಿದ್ದು ಅರ್ಕಾವತಿಗೆ ಕಟ್ಟಲಾಗಿರುವ ಮಂಚನಬೆಲೆ ಜಲಾಶಯ ಕೂಡ ಸಾವನದುರ್ಗಕ್ಕೆ ಸನಿಹದಲ್ಲಿದ್ದು ಬೆಟ್ಟ ಹತ್ತಿದರೆ ಕಾಣುತ್ತದೆ. ಸಾವನದುರ್ಗದ ಬೆಟ್ಟ ಸಾಹಸಿ ಚಾರಣಿಗರಿಗೆ ಹೇಳಿ ಮಾಡಿಸಿದಂತಿದ್ದು ಕೊಂಚ ಅಪಾಯಕಾರಿ ಸ್ಥಳವೂ ಕೂಡ. ಸಾವನ ದುರ್ಗದ ಬೆಟ್ಟದ ಪಾತ್ರದಲ್ಲಿ ಎರಡು ದೊಡ್ಡ ಬೆಟ್ಟಗಳಿದ್ದು ಒಂದನ್ನು ಕರಿ ಗುಡ್ಡ ಹಾಗು ಮತ್ತೊಂದನ್ನು ಬಿಳಿಗುಡ್ಡ ಎಂದು ಕರೆಯಲಾಗುತ್ತದೆ. ಕ್ರಿ.ಶ 1340ರ 3 ನೇ ಹೊಯ್ಸಳ ಬಲ್ಲಾಳನ ಮಾಡಬಾಳ್ ನಲ್ಲಿ ದೊರಕಿರುವ ದಾಖಲೆಯ ಪ್ರಕಾರ ಈ ಬೆಟ್ಟವನ್ನು ಸಾವಂದಿ ಎಂದು ಕರೆಯಲಾಗಿದೆ.  ಸಾವನ ದುರ್ಗಾ ಎಂಬ ಹೆಸರು ಬರಲು ಇದನ್ನು ಮುಖ್ಯ ಕಾರಣವಾಗಿ ಪರಿಗಣಿಸಿದರೂ ಮತ್ತೊಂದು ವಾದವಾಗಿ ಸಮಂತರಾಯ ಎಂಬ ಹೆಸರಿನಿಂದ ಸಾವನದುರ್ಗ ಹೆಸರು ಬಂದಿದೆ ಎನ್ನಲಾಗುತ್ತಿದೆ. ಸಾಮಂತರಾಯನು ವಿಜಯನಗರ ಸಾಮ್ರಾಜ್ಯದ ಅಚ್ಯುತರಾಯನಲ್ಲಿ ಸಾಮಂತ ರಾಜನಾಗಿದ್ದವನು. ಆತನಿದ್ದ ಸ್ಥಳ ಮಾಗಡಿ ಪ್ರದೇಶವೇ ಆಗಿದ್ದ ಕಾರಣ ಅವನ ಹೆಸರೇ ಬಂದಿದೆ ಎನ್ನುವ ಊಹೆಗಳಿವೆ.  1638 ರಿಂದ 1728 ರ ವರೆವಿಗೂ ಕೆಂಪೇಗೌಡರ ಎರಡನೇ ರಾಜಧಾನಿಯಾಗಿತ್ತು ಸಾವನದುರ್ಗ. ವಿಜಯನಗರ ಸಾಮ್ರಾಜ್ಯ ಪತನಾನಂತರ ಕೆಲ ಕಾಲದಲ್ಲೇ ಕೆಂಪೇಗೌಡರು ಮಡಿದಾಗ ಮೈಸೂರಿನ ದಳವಾಯಿ ಮಾಗಡಿ ಪ್ರದೇಶವನ್ನು ಆಕ್ರಮಿಸಿಕೊಂಡರು. ಅಲ್ಲಿಂದ ಮುಂದೆ ಮೈಸೂರಿನ ಟಿಪ್ಪುಸುಲ್ತಾನ್ ಆಡಳಿತಕ್ಕೆ ಒಳಪಟ್ಟ ಸಾವನ ದುರ್ಗವನ್ನು ಟಿಪ್ಪು ಸುಲ್ತಾನ್ ಶಿಕ್ಷಿಸುವ ತಾಣವಾಗಿಸಿಕೊಳ್ಳುತ್ತಾನೆ. ತನ್ನ ಸಾಮ್ರಾಜ್ಯದಲ್ಲಿ ಯಾರಾದರೂ ಘೋರ ಅಪರಾಧ ಮಾಡಿದರೆ ಅವರನ್ನು ಬೆಟ್ಟದ ಮೇಲಿನಿಂದ ತಳ್ಳುವ ಶಿಕ್ಷೆಗೆ ಗುರಿಪಡಿಸುತ್ತಿದ್ದನಂತೆ. ಈ ಕಾರಣದಿಂದ ಈ ಸ್ಥಳಕ್ಕೆ ಸಾವಿನ ದುರ್ಗ ಎಂಬ ಹೆಸರು ಬಂದಿದ್ದು, ಮುಂದೆ ಸಾವನ ದುರ್ಗ ಎಂದಾಗಿದೆ ಎಂದು ಕೆಲವರು ತಮ್ಮ ಅಭಿಪ್ರಾಯ ಮಂಡಿಸುತ್ತಾರೆ.ಮುಂದೆ ಟಿಪ್ಪು ಸುಲ್ತಾನನಿಂದ ಮೂರನೇ ಆಂಗ್ಲೋಮೈಸೂರು ಯುದ್ಧದಲ್ಲಿ ಮಾಗಡಿ ಪ್ರದೇಶವನ್ನು ಲಾರ್ಡ್ ಕಾರ್ನ್ ವಾಲಿಸ್ ವಶಪಡಿಸಿಕೊಂಡನು. ಬೆಟ್ಟದ ಬುಡದಲ್ಲಿ ಸಾವಂದಿ ವೀರಭದ್ರ ದೇವರ ಗುಡಿ ಹಾಗು ಲಕ್ಷ್ಮಿ ನರಸಿಂಹ ದೇವರ ಗುಡಿಗಳಿವೆ. ಕರ್ನಾಟಕ ಸರ್ಕಾರ ನಿಭಾಯಿಸುತ್ತಿರುವ ಸಣ್ಣ ಅರಣ್ಯ ಪ್ರದೇಶವು ಇಲ್ಲಿದೆ. 'ಎ ಪ್ಯಾಸೇಜ್ ಟು ಇಂಡಿಯಾ' ಎನ್ನುವ ಹಾಲಿವುಡ್ ಚಿತ್ರವೂ ಸೇರಿದಂತೆ ಬಹಳಷ್ಟು ಚಲನಚಿತ್ರ ಮತ್ತು ಧಾರಾವಾಹಿಗಳ ಚಿತ್ರೀಕರಣ ಸಾವನದುರ್ಗದ ಬೆಟ್ಟ ಪ್ರದೇಶಗಳ ಸುತ್ತ ಮುತ್ತ ಚಿತ್ರೀಕರಿಸಲಾಗಿದೆ.
ವೀಕೆಂಡ್ ನಲ್ಲಿ ಟೆಕ್ಕಿಗಳು ಮತ್ತು ಪ್ರೇಮಿಗಳನ್ನು ಸಾವನ ದುರ್ಗ ಕೈ ಬೀಸಿ ಕರೆಯುತ್ತದೆ.
ಆಸ್ತಿಕರು ಮತ್ತು ಭಕ್ತಾದಿಗಳು
ಸಾವಂದಿ ವೀರಭದ್ರ ದೇವಾಲಯ ಹಾಗು ಲಕ್ಷ್ಮಿ ನರಸಿಂಹ ದೇವರ ದೇವಾಲಯ ಸಂದರ್ಶಿಸಿ ಪುನೀತರಾಗಲು ಸಾವನ ದುರ್ಗದ ಕಡೆ ಪಯಣ ಬೆಳೆಸುತ್ತಾರೆ. ನೀವು ಇದುವರೆಗೂ ಸಾವನದುರ್ಗ ನೋಡಿಲ್ಲವಾದರೆ ಈ ವಾರವೇ ಸಾವನದುರ್ಗಕ್ಕೆ ಹೊರಡಲು ಪ್ಲಾನ್ ಮಾಡಿ...

ಸಿಹಿಜೀವಿ ವೆಂಕಟೇಶ್ವರ
ತುಮಕೂರು
9900925529

No comments: